ಈ ಅಂಕಣಕ್ಕೆ ಕುಡುಗೆ ನೀಡಿ ಶಿಕ್ಷಣದ ಪ್ರಸ್ತುತ ಸನ್ನಿವೇಶದಲ್ಲಿ ಶಿಕ್ಷಕನ ಪಾತ್ರ

 
ಶಿಕ್ಷಕ ಸಮುದಾಯದ ಮತ್ತು ಶಿಕ್ಷಕ ಪ್ರಶಿಕ್ಷಕರ ಸಮುದಾಯದ ಸನ್ಮಾನ್ಯ ಸದಸ್ಯರೇ,
 
ಎಲ್ಲರಿಗೂ ಆತ್ಮೀಯ ಸ್ವಾಗತ, ಈ  ವಿಚಾರಗೋಷ್ಠಿಯ ನಿಗದಿತ ವಿಷಯ ಮತ್ತು ಉದ್ದೇಶವನ್ನು ಕುರಿತು ನನ್ನ ಕೆಲವು ವಿಚಾರ ಹಾಗು ಚಿಂತನೆಗಳನ್ನು ನಿಮ್ಮೊಡನೆ ಇಂದು ಹಂಚಿಕೊಳ್ಳಲು ನನಗೆ ಅತೀವ ಸಂತೋಷವಾಗುತ್ತಿದೆ. ನಾನು ಕನ್ನಡದಲ್ಲಿ ಮಾತನಾಡುವಾಗ ನನ್ನ ಮಾತೃಭಾಷೆಯ ಧ್ವನಿಛಾಯೆ ನುಸುಳಿದರೆ  ನೀವು ಸಹಿಸಿಕೊಳ್ಳುತ್ತೀರಿ ಎಂದು ನಾನು ನಂಬುತ್ತೇನೆ.
 
ಶಿಕ್ಷಣವು ಜನ ಜೀವನದೊಂದಿಗೆ ಎಷ್ಟು ನಿಕಟವಾದ ಸಂಬಂಧ ಹೊಂದಿದೆಯೆಂದರೆ ಅದರ ಬಗ್ಗೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಒಂದು ದೃಷ್ಟಿಕೋನವನ್ನು ಹೊಂದಿರುತ್ತಾರೆ. ಆದರೆ, ಭಾರತದಲ್ಲಿ ಸಾರ್ವಜನಿಕ ಶಿಕ್ಷಣವು ಎದುರಿಸುತ್ತಿರುವ  ನಿರ್ದಿಷ್ಟ ಸಮಸ್ಯೆಗಳನ್ನು ಅಂದರೆ ಶಾಲಾ ಶಿಕ್ಷಣಕ್ಕೆ  ಪ್ರವೇಶಾವಕಾಶಗಳಲ್ಲಿ ವಿಭಿನ್ನತೆ, ಮೂಲಸೌಕರ್ಯದ ಸಮಸ್ಯೆಗಳು, ಗುಣಮಟ್ಟ ಬೋಧನೆಯ ಕೊರತೆ, ಮಕ್ಕಳ ಕಲಿಕೆ ಸಮಸ್ಯೆಗಳು ಇವೇ ಮುಂತಾದವುಗಳನ್ನು ಕುರಿತು ನಾವು ಚರ್ಚಿಸುವಾಗ ಅದರ  ಸಂಕೀರ್ಣತೆಯನ್ನು ಗುರುತಿಸಲು ಪ್ರಾರಂಭಿಸುತ್ತೇವೆ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ವಿಭಿನ್ನ ವಿಷಯಗಳಿಗೆ ಪ್ರಾಧಾನ್ಯ ನೀಡಿ ಹಲವಾರು ಸುಧಾರಣೆಗಳನ್ನು ಮಾಡಲಾಗಿದೆ.
 
ಹೀಗೆ ಪ್ರಾಧಾನ್ಯ ನೀಡಿದ ವಿಷಯಗಳು ಶಾಲಾ ಶಿಕ್ಷಣಕ್ಕೆ ಸಮಾನ ಪ್ರವೇಶಾವಕಾಶದಿಂದ ಹಿಡಿದು, ಶಿಕ್ಷಣದಲ್ಲಿ ಸಮುದಾಯ ಪಾಲ್ಗೊಳ್ಳುವುದು, ಬೋಧನಾ ವಿಧಾನಗಳಲ್ಲಿ ಸುಧಾರಣೆಗಳು, ಪಠ್ಯಕ್ರಮದ ಬದಲಾವಣೆಗಳು, ಶಾಲೆಗಳಲ್ಲಿ ಐಸಿಟಿ, ಪಿಪಿಪಿ, ಶಿಕ್ಷಕಾಭಿವೃದ್ಧಿ ಇವೇ ಮುಂತಾದವುಗಳ ವರೆಗೆ ಹಬ್ಬಿದೆ. ಈ ಸುಧಾರಣೆಗಳ ವಿಶಾಲವಾದ ಉದ್ದೇಶಗಳು ಏನೇ ಇರಲಿ, ಅಲ್ಲೆಲ್ಲ ಶಿಕ್ಷಣದ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ (ಡಿಪಿಐ) ವೆಬ್ ಸೈಟನ್ನು  ನೀವು ನೋಡಿದಾಗ ಪ್ರತಿಯೊಂದು ಮಗುವೂ ಗುಣಮಟ್ಟದ  ಶಿಕ್ಷಣ ಪಡೆಯಬೇಕು ಎಂದು ಸ್ಲೈಡರ್ಗಳು ಹೇಳುತ್ತವೆ. ಇಲ್ಲಿರುವ  ನಾವೆಲ್ಲರೂ ಖಂಡಿತವಾಗಿಯೂ ಅದನ್ನೇ ಬಯಸುತ್ತೇವೆ. ಆದರೆ, ಶಿಕ್ಷಣದ ಗುಣಮಟ್ಟದ ಬಗ್ಗೆ ಯಾವುದೇ ಒಮ್ಮತದ ಅಭಿಪ್ರಾಯವಿಲ್ಲ ಎಂಬುದು ಸತ್ಯ. ಆದಾಗ್ಯೂ, ಇದು ಸ್ಥೂಲವಾಗಿ  ಮಕ್ಕಳ ಕಲಿಕೆಯ ಕಡೆಗೆ  ಬೊಟ್ಟು ಮಾಡಿ ತೋರಿಸುತ್ತದೆ ಎಂಬುದು ನಿರ್ವಿವಾದ. ಅನೇಕ ವರದಿಗಳು ಮತ್ತು ಸಂಶೋಧನಾ ಅನುಭವಗಳಿಂದ ಭಾರತದಲ್ಲಿನ ಅನೇಕಾನೇಕ ಮಕ್ಕಳು ಸರಿಯಾಗಿ ಕಲಿಯುತ್ತಿಲ್ಲ ಎಂಬುದು ನಮಗೆ ತಿಳಿದು ಬಂದಿದೆ. ಮಕ್ಕಳು ಶಾಲೆಗಳಲ್ಲಿ ಸರಿಯಾಗಿ ಕಲಿಯುತ್ತಿಲ್ಲ ಎಂದಾದರೆ ಅದು ರಾಷ್ಟ್ರದ ಮತ್ತು ಸಮಾಜಕ್ಕೆ ಬಲು ಹಾನಿಕಾರಕ ವಿಷಯವಾಗುತ್ತದೆ.
 
ಕೃಷ್ಣ ಕುಮಾರ್  ಅವರು ತಮ್ಮ ಪುಸ್ತಕ ಎ ಪೆಡಾಗೋಗ್’ಸ್ ರೊಮಾನ್ಸ್ (೨೦೦೮) ನಲ್ಲಿ ಹೀಗೆ ಹೇಳುತ್ತಾರೆ.
 
``what must happen in a classroom full of children from morning to afternoon is a question of the highest order of national reconstruction. If we approach this question without focusing our attention on the faces of the children, the state of classroom, the personality and preparedness of the teacher, and the quality of the text books and other materials available to the teacher, then we are likely to do no better in the near feature than we are doing at present''(p.115)
 
,["ಬೆಳಿಗ್ಗೆಯಿಂದ  ಮಧ್ಯಾಹ್ನದ ವರೆಗೆ  ಮಕ್ಕಳು ತುಂಬಿರುವ ತರಗತಿಯಲ್ಲಿ  ಏನೇನು ನಡೆಯಲೇಬೇಕು  ಎನ್ನುವುದು, ರಾಷ್ಟ್ರ ಪುನರ್ನಿರ್ಮಾಣದಲ್ಲಿ ಕೇಳಲೇಬೇಕಾದ  ಅತಿ  ಗಹನವಾದ ಪ್ರಶ್ನೆ. ನಾವು ಈ ಪ್ರಶ್ನೆಗೆ ಉತ್ತರವನ್ನು ಮಕ್ಕಳ  ಮುಖಗಳೆಡೆಗೆ  ತರಗತಿಗಳ ಸ್ಥಿತಿ ಗತಿ, ಶಿಕ್ಷಕನ ವ್ಯಕ್ತಿತ್ವ ಮತ್ತು ಸನ್ನದ್ಧತೆ, ಶಿಕ್ಷಕರಿಗೆ ಲಭ್ಯವಿರುವ ಪಠ್ಯ ಪುಸ್ತಕಗಳು ಮತ್ತು ಇತರ ಸಾಮಾಗ್ರಿಗಳ ಗುಣಮಟ್ಟದ ಕಡೆಗೆ ಗಮನ ಕೇಂದ್ರೀಕರಿಸದೆಯೇ ಕಂಡುಕೊಳ್ಳಲು ಪ್ರಯತ್ನಿಸಿದರೆ,  ಆಗ ನಾವು ಈಗ ಯಾವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆಯೋ  ಅದಕ್ಕಿಂತ ಉತ್ತಮವಾಗಿ ನಿಕಟ ಭವಿಷ್ಯದಲ್ಲಿ  ಕಾರ್ಯ ನಿರ್ವಹಿಸುವ  ಸಂಭವವಿಲ್ಲ" (ಠಿ.೧೧೫).]
 
ಮಕ್ಕಳು ಸರಿಯಾಗಿ ಕಲಿಯುತ್ತಿಲ್ಲವೆಂದಾದರೆ ಮಕ್ಕಳ ಬಾಲ್ಯವು ಅಪಾಯದಲ್ಲಿದೆ ಎಂದು ಮನಗಾಣಬೇಕಾದದ್ದು ಬಹಳ ಮುಖ್ಯ. ಮಕ್ಕಳ ಬಾಲ್ಯ ಆಘಾತಕ್ಕೊಳಗಾದರೆ, ಅದು ಸಮಾಜವು ಛಿದ್ರ ಛಿದ್ರವಾಗುವುದರ  ಮುನ್ಸೂಚನೆ. ಆದ್ದರಿಂದ, ಮಕ್ಕಳು ಚೆನ್ನಾಗಿ ಕಲಿಯುವಂತೆ ನೋಡಿಕೊಳ್ಳುವುದಕ್ಕೆ ಕಂಕಣಬದ್ಧವಾಗುವುದು  ಇಡೀ  ಸಮಾಜದ ಸಾಮೂಹಿಕ ಜವಾಬ್ದಾರಿಯಾಗಿದೆ.
 
ಗುಣಮಟ್ಟದ ಶಿಕ್ಷಣ ಮತ್ತು ಗುಣಮಟ್ಟದ ಕಲಿಕೆ ಆಗುವಂತೆ ಮಾಡುವ ಪ್ರಕ್ರಿಯೆಯ  ಕೇಂದ್ರವ್ಯಕ್ತಿ ಶಿಕ್ಷಕ. ಭಾರತದಲ್ಲಿ ಬೋಧನೆ ಮತ್ತು ಶಿಕ್ಷಕರ ಕೆಲಸವನ್ನು  ನೂರೆಂಟು ವಿಧದಲ್ಲಿ ಗ್ರಹಿಸಿ ವ್ಯಾಖ್ಯಾನಿಸಲಾಗುತ್ತಿದೆ- ಸಂಭ್ರಮದಿಂದ ಹಿಡಿದು ಮೂಗು ಮುರಿಯುವವರೆಗೆ ವ್ಯಾಖ್ಯಾನಗಳು ವಿಭಿನ್ನವಾಗಿವೆ  ( ಒಂದು ಕಡೆ ಗುರು ದೇವೋ ಮಹೇಶ್ವರಃ ಎಂದು ಹಾಡಿ ಹೊಗಳಿದರೆ ಇನ್ನೊಂದು ಕಡೆ - ಇದು ಬಿಡು ಯಾರು ಬೇಕಾದರು ಮಾಡ ಬಹುದಾದ ಕೆಲಸ ಬೇರಾವ ಕೆಲಸ ಸಿಗದಿದ್ದಾಗ ಕೊನೆಯ ಆಯ್ಕೆ ಎಂಬ ತಾತ್ಸಾರದ ಭಾವನೆ ಇದೆ). ಪಾಠ ಬೋಧನೆಯು ಅತ್ಯಂತ ಸಂಕೀರ್ಣ ಕೆಲಸ. ಪಾಠ ಬೋಧನೆ ಯೆಂದರೆ ಮಾನವ ಮನಸ್ಸನ್ನು ಬೆಳೆಸುವುದು. ಬೋಧನೆ ಎಂಬುದು ಮಕ್ಕಳಲ್ಲಿ ಜ್ಞಾನದ ಬೆಳವಣಿಗೆಯನ್ನು , ನಿರ್ಣಾಯಕ ಚಿಂತನೆಯ ಕೌಶಲ್ಯಗಳು ಮತ್ತು ಸೂಕ್ತ ನೈತಿಕ ಮನೋಭಾವಗಳ ಬೆಳವಣಿಗೆಯನ್ನು  ಉಂಟುಮಾಡುವುದನ್ನು  ಒಳಗೊಳ್ಳುತ್ತದೆ. ಬೋಧನೆಯ ಈ ಎಲ್ಲಾ ಮೂರು ಗುರಿಗಳನ್ನು ಸಾಧಿಸಬೇಕಾದರೆ ಶಿಕ್ಷಕರಲ್ಲಿ ಅಗತ್ಯವಿರುವ ಜ್ಞಾನಾಭಿವೃದ್ಧಿ ಮತ್ತು ಕೌಶಲ್ಯಾಭಿವೃದ್ಧಿ ಮಾಡಬೇಕು ಮತ್ತು ಶಿಕ್ಷಕನ ವೃತ್ತಿಗೆ ಅವಶ್ಯಕವಾದ ನೈತಿಕ ಗುಣಗಳನ್ನು ಮೈಗೂಡಿಸ ಬೇಕು . ವೃತ್ತಿಯ ಅರ್ಥವೇನೆಂದರೆ: ಒಂದಷ್ಟು  ಜ್ಞಾನದ ಬಂಡಾರ ಅವರಲ್ಲಿದೆ, ದೀರ್ಘಾವಧಿಯ ಶಿಕ್ಷಣವಿದೆ , ಸೇವೆಯ ಪರಿಕಲ್ಪನೆಯಿದೆ, ಜನರಿಗೆ  ಮತ್ತು ನೈತಿಕವಾಗಿ ಉತ್ತರದಾಯಿತ್ವಗುಣ ಮತ್ತು ಸ್ವಾಯತ್ತತೆ ಇದೆ ಎಂದು ಅರ್ಥ. ೧೯೬೮ ರಿಂದಲೇ ಇರುವ   ಕಾರ್ಯನೀತಿಗಳು ಈ ಬಗ್ಗೆ ಬಹಳಷ್ಟು ಹೇಳಿದ್ದರೂ ವಾಸ್ತವ ನೆಲೆಗಟ್ಟಿನಲ್ಲಿ  ನಡೆಯುತ್ತಿರುವುದೇ  ಬೇರೆ ಆಗಿದೆ. ಪಠ್ಯಕ್ರಮದ ಚೌಕಟ್ಟುಗಳು ಮತ್ತು ೨೦೧೪ ಎನ್ ಸಿ ಟಿ ಇ ನಿಯಮಾವಳಿಗಳು ವೃತ್ತಿಪರತೆ ಮೈಗೂಡಿಸುವ ಅವಶ್ಯಕತೆಯನ್ನು ಮತ್ತು ಅಕ್ಕರೆಯ ಹಾಗು ಚಿಂತನ ಶೀಲ ಶಿಕ್ಷಕರ ಅಗತ್ಯತೆಯನ್ನು ಗುರುತಿಸುವ ಕಡೆಗೆ ಒಂದು ಹೆಜ್ಜೆಯಾಗಿವೆ.
 
ಶಿಕ್ಷಕ ಶಿಕ್ಷಣ ಕಾರ್ಯಕ್ರಮಗಳು ಶಿಕ್ಷಕರ  ಆಲೋಚನಾ ಶಕ್ತಿ, ಓದುವುದು, ಬರೆಯುವುದರಲ್ಲಿ ಆಸಕ್ತಿ ಉಂಟು ಮಾಡುವ  ಮತ್ತು ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಸಾಮರ್ಥ್ಯಗಳನ್ನು ಅವರಲ್ಲಿ ಬೆಳಸುವ ಜವಾಬ್ದಾರಿಯನ್ನು ಹೊಂದಿವೆ. ವಿದ್ಯಾರ್ಥಿ-ಶಿಕ್ಷಕರು ಮತ್ತು ಸೇವಾನಿರತ ಶಿಕ್ಷಕರು ಶಿಕ್ಷಕರಾಗಿ ಕೆಲಸ ನಿರ್ವಹಿಸುವುದರ ಬಗ್ಗೆ ಆಲೋಚಿಸಲು ಮತ್ತು ಇನ್ನಷ್ಟು ಪ್ರಶ್ನೆಗಳನ್ನು ಕೇಳುವಂತೆ ತಮ್ಮ ಮನಸ್ಸಿಗೆ ಸವಾಲು ಎಸೆಯುವಂತೆ ಮತ್ತು ತರಗತಿ ಅಭ್ಯಾಸಗಳ ಬಗ್ಗೆ ಪರ್ಯಾಯ ಕಲ್ಪನೆಗಳನ್ನು ಅಭಿವೃದ್ಧಿಪಡಿಸುವಂತೆ ಸೂಕ್ತ ಚೌಕಟ್ಟನ್ನು ಒದಗಿಸುವ ಪಠ್ಯಗಳು, ವಾಚನಸಾಮಾಗ್ರಿಗಳು ಮತ್ತು ಲೇಖನಗಳನ್ನು ಎಡೆಬಿಡದೆ  ಓದಿ ಅರ್ಥಮಾಡಿಕೊಳ್ಳಬೇಕು.
 
ಶಿಕ್ಷಕ ಶಿಕ್ಷಣವು ಬ್ರಿಟಿಷರ ಬಳುವಳಿ ಎಂಬ ಇತಿಹಾಸದ ಹಿನ್ನೆಲೆಯಲ್ಲಿ ನೋಡಿದಾಗ ಈಗಿರುವ ವಾಚನಸಾಮಗ್ರಿಗಳು ಮತ್ತು ಲೇಖನಗಳನ್ನು ಇಂಗ್ಲಿಷ್ ಭಾಷೆಯ ಮೂಲಗಳಿಂದ ಪಡೆಯಲಾಗುತ್ತಿದೆ. ನಾವು ವಿಶೇಷವಾಗಿ ಶಿಕ್ಷಕ ಶಿಕ್ಷಣದಲ್ಲಿ "ಪಠ್ಯ-ಪುಸ್ತಕ" ಸಂಸ್ಕೃತಿಯ ಬಿಗಿ ಮುಷ್ಟಿಯಲ್ಲಿ ಸಿಕ್ಕಿಕೊಂಡಿದ್ದೇವೆ.  ಈ ಸಂಸ್ಕೃತಿಯಲ್ಲಿ ವಿದ್ಯಾರ್ಥಿಗಳು ಅವರಿಗೆ "ನೀಡಿದ" ಜ್ಞಾನವನ್ನು ತಟಸ್ಥವಾಗಿ ಸ್ವೀಕರಿಸುತ್ತಾರೆ. ಒಂದುರೀತಿ "ಚೊಂಬಿನಿಂದ ಲೋಟಕ್ಕೆ " ವಿಷಯ ವರ್ಗಾವಣೆ ಆದಂತೆ. ಭಾರತೀಯ ಭಾಷೆಗಳಲ್ಲಿ ಶಿಕ್ಷಣ, ಅಭಿವೃದ್ಧಿ, ಆಡಳಿತ ಇತ್ಯಾದಿಗಳ ಅಧ್ಯಯನಕ್ಕೆ ಸಂಬಂಧಿಸಿದ ಪಠ್ಯಗಳು ಮತ್ತು ವಾಚನಸಾಮಾಗ್ರಿಯ ಲಭ್ಯತೆಯ ಕೊರತೆಯಿದೆ. ಭಾಷೆಗೆ ಜನರನ್ನು ಹೊರಗಿರಿಸುವ ಶಕ್ತಿ ಇದೆ. ನಮಗೆ ಒಂದು ನ್ಯಾಯಪರ ಮತ್ತು ಪ್ರಜಾಪ್ರಭುತ್ವದ ಸಮಾಜದ ಅಗತ್ಯವಿದ್ದರೆ, ನಾವು ಅನೇಕ ಜನರನ್ನು ಸಂವಾದ ಸಂಭಾಷಣೆಯಲ್ಲಿ ಸೇರಿಸಿಕೊಳ್ಳಬೇಕಾಗಿದೆ. ವಿಭಿನ್ನ ಸಾಮಾಜಿಕ-ಆರ್ಥಿಕ ಹಿನ್ನೆಲೆಗಳಿಗೆ ಸೇರಿದ ಬಹುಸಂಖ್ಯಾತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣದ ಪ್ರವೇಶವನ್ನು ಒದಗಿಸುವ ಅಜೀಂ  ಪ್ರೇಂಜಿ ವಿಶ್ವವಿದ್ಯಾನಿಲಯದ ದರ್ಶನ ಧ್ಯೇಯವನ್ನೇ ಕಾರ್ಯಗತ ಗೊಳಿಸುವ ನಿಟ್ಟಿನಲ್ಲಿ  ಭಾಷಾಂತರ ಉಪಕ್ರಮವು  ಕಾರ್ಯತತ್ಪರವಾಗಿದೆ. ಭಾರತೀಯ ಭಾಷೆಗಳಲ್ಲಿ ಗುಣಮಟ್ಟದ ವಾಚನ ಸಾಮಾಗ್ರಿಗಳ ಲಭ್ಯತೆ ಮತ್ತು ಇದರ ಜೊತೆಗೆ ಭಾರತೀಯ ಭಾಷೆಗಳಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ವ್ಯಾಸಂಗ ಕ್ರಮಗಳನ್ನು ಹೊಂದಿದರೆ ವಿವಿಧ ಪರಿಕಲ್ಪನೆಗಳು ಮತ್ತು ವಿಚಾರಗಳೊಂದಿಗೆ ಸಂಸರ್ಗ ವಿದ್ಯಾರ್ಥಿಗಳಿಗೆ ಸಮೃದ್ಧವಾಗಿ ಆಗುತ್ತದೆ ಎಂದು ವಿಶ್ವವಿದ್ಯಾನಿಲಯದ ಭಾಷಾಂತರ  ವಿಭಾಗ ನಂಬುತ್ತದೆ. ಹೀಗಾಗಿ ಹಿಂದಿ ಮತ್ತು ಕನ್ನಡದಲ್ಲಿ ಸೋಪಜ್ಞ ಚಿಂತನೆಗಳ ಅಭಿವ್ಯಕ್ತಿ, ವಿಚಾರ ವಿನಿಮಯ, ಚರ್ಚೆ ಮತ್ತು ಸಂವಾದಗಳನ್ನು ಉತ್ತೇಜಿಸುತ್ತದೆ. ಈ ಕಾರ‍್ಯವು ವಿಚಾರ ಸಂಕಿರಣಗಳು, ಚರ್ಚಾವೇದಿಕೆಗಳು, ಪುರವಣಿಗಳ ಪ್ರಕಟಣೆ ಮತ್ತು ಇತರ ವಿಧಾನಗಳ ಮೂಲಕ ಆಗಬಹುದು. ಹೆಚ್ಚು ಹೆಚ್ಚು ಜನರು ಓದುವುದು, ಅನುಭವಿಸುವುದು, ಚಿಂತನೆ ನಡೆಸುವುದು ಮತ್ತು ಬರೆಯುವುದರಲ್ಲಿ ತೊಡಗುವಂತೆ ಪ್ರೋತ್ಸಾಹಿಸುವುದಕ್ಕಾಗಿ ನಮ್ಮ ಈ ಪ್ರಯತ್ನ ಮಾಡುತ್ತಿದ್ದೇವೆ. ಇದೇ ವಿಶಾಲ ಉದ್ದೇಶದಿಂದ ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯವು ಕನ್ನಡದಲ್ಲಿ ಈ ವಿಚಾರಗೋಷ್ಠಿಯನ್ನು ಆಯೋಜಿಸಲು ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗವನ್ನು ಪಡೆದುಕೊಂಡಿದೆ. ತನ್ಮೂಲಕ ಕನ್ನಡದಲ್ಲಿ ಅಂತಹ ವಾಚನ ಸಾಮಾಗ್ರಿ ರಚನೆಗೆ  ಕಾರಣವಾಗುವಂಥ ಶಿಕ್ಷಣದ ವಿಚಾರಗಳ ಶೈಕ್ಷಣಿಕ ವೇದಿಕೆಗಳು ಮತ್ತು ಚರ್ಚೆ ಸಮುದಾಯಗಳನ್ನು ನಿರ್ಮಿಸುವ ಉದ್ದೇಶ ನಮ್ಮದು. ಇವನ್ನೇ ತರುವಾಯ ಕರ್ನಾಟಕದಾದ್ಯಂತ ಶಿಕ್ಷಕ ಶಿಕ್ಷಣ ಕಾರ್ಯಕ್ರಮಗಳಲ್ಲಿ ಬಳಸ ಬಹುದಾಗಿದೆ. ಇದು ಸುದೀರ್ಘ ಪ್ರಯಾಣದ ಕಡೆಗೆ ಮೊದಲ  ಹೆಜ್ಜೆಯಾಗಿದೆ. ಈ ಪ್ರಯಾಣದಲ್ಲಿ ನಮ್ಮ ಜೊತೆಗೂಡಲು ನಾವು ಎಲರನ್ನೂ  ಆಹ್ವಾನಿಸುತ್ತೇವೆ ...
 
ಈ ಪ್ರಕ್ರಿಯೆಯಲ್ಲಿ ವಿಚಾರ ಲೇಖನಗಳನ್ನು ಬರೆಯಲು ಲೇಖಕರಿಗೆ ಆಹ್ವಾನಿಸಲಾಯಿತು. ಅವರಿಗೆ ಮಾರ್ಗದರ್ಶನ ಒದಗಿಸಲಾಯಿತು. ಪರಿಕಲ್ಪನೆಗಳ ಪರಿಷ್ಕರಣೆ ಮತ್ತು ಲೇಖನದ ನಿಲುವು ಮತ್ತು ಸಾರಾಂಶ ಲೇಖನ ಸಲ್ಲಿಸುವುದರಿಂದ ಹಿಡಿದು ಅಂತಿಮ ಲೇಖನದ  ಸಲ್ಲಿಕೆ ವರೆಗೆ  ಈ ಪ್ರಕ್ರಿಯೆಯು ಕ್ರಮೇಣ ವಿಕಸನಗೊಂಡಿತು.ನಮ್ಮ ಪ್ರಯಾಣವು ಈ ಸೆಮಿನಾರ್ ಮೂಲಕ ಮುಂದೆ ಸಾಗುತ್ತದೆ ಮತ್ತು ತರುವಾಯವೂ ಮುಂದುವರಿಯುತ್ತದೆ.
 
ಎಲ್ಲರೂ ಈ ವಿಚಾರಗೋಷ್ಠಿಯ ಕಾಲದ ಈ ಮೂರು ದಿನಗಳನ್ನು ಅರ್ಥಪೂರ್ಣವಾಗಿ ಕಳೆಯುತ್ತಾರೆಂದು ನಾನು ನಂಬುತ್ತೇನೆ. ಮಕ್ಕಳಲ್ಲಿ ಕಲಿಕೆಯು ತಪ್ಪದೇ ಆಗುವಂತೆ  ಮಾಡುವ ಈ ಕಾರ್ಯದಲ್ಲಿ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡೋಣ ಮತ್ತು  ಭಾರತದ ಇಂದಿನ ಮತ್ತು ಭವಿಷ್ಯದ ಲಕ್ಷಾಂತರ ಮಕ್ಕಳಲ್ಲಿ ಮಾನವೀಯ ಮತ್ತು ಶಾಂತಿಯುತ ಬಾಲ್ಯವು ನೆಲೆಗೊಳ್ಳುವಂತೆ ನೋಡಿಕೊಳ್ಳೋಣ.
 
**********
 
ಶಿಕ್ಷಣದ ಪ್ರಸ್ತುತ ಸನ್ನಿವೇಶದಲ್ಲಿ ಶಿಕ್ಷಕನ ಪಾತ್ರ ವಿಚಾರ ಸಂಕಿರಣದ ಪ್ರಾಸ್ತಾವಿಕ ಭಾ಼ಷಣ: ಶ್ರೀಮತಿ ರಾಜಶ್ರೀ ,ಸ್ಕೂಲ್ ಆಫ್ ಎಜುಕೇಷನ್ ,ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ
 
ಶಿಕ್ಷಣದ ಪ್ರಸ್ತುತ ಸನ್ನಿವೇಶದಲ್ಲಿ ಶಿಕ್ಷಕನ ಪಾತ್ರ
19204 ನೊಂದಾಯಿತ ಬಳಕೆದಾರರು
7451 ಸಂಪನ್ಮೂಲಗಳು