ಈ ಅಂಕಣಕ್ಕೆ ಕುಡುಗೆ ನೀಡಿ ವಲಸೆ ಕಾರ್ಮಿಕರ ಮಕ್ಕಳ ಸಾಮರ್ಥ್ಯವರ್ಧನೆ

ಬಡತನದ ಬೇಗೆಯಿಂದ ತಪ್ಪಿಸಿಕೊಳ್ಳಲು ಅನೇಕ ಅಕುಶಲ ಮತ್ತು ಅರೆ-ಕುಶಲ ಕಾರ್ಮಿಕರು ತಮ್ಮ ಹುಟ್ಟೂರು ತೊರೆದು ನಗರಗಳಿಗೆ ಕೆಲಸವನ್ನು ಹುಡುಕುತ್ತಾ ಬರುತ್ತಾರೆ. ಈ ಕಾರ್ಮಿಕರು ತಮ್ಮ ಸಂಸಾರಗಳೊಂದಿಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುತ್ತಾರೆ. ಸಣ್ಣ ಸಣ್ಣ ಶೆಡ್‍ಗಳಲ್ಲಿ ಅವರ ವಾಸ.  ಎಷ್ಟೋ ಬಾರಿ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ನಿರ್ಮಾಣ ಕಂಪನಿಯವರೇ ಈ ಶೆಡ್‍ಗಳನ್ನು ಆ ಕಾಮಗಾರಿ ನಡೆಯುವವರೆಗೆ ಒದಗಿಸಿರುತ್ತಾರೆ. ಅವರೇನೂ ಈ ಕಾರ್ಮಿಕರಿಗೆ ವಿದ್ಯುತ್ ಅಥವಾ ನೈರ್ಮಲ್ಯ ಸೌಕರ್ಯಗಳನ್ನು ಒದಗಿಸುವುದಿಲ್ಲ. ಇಲ್ಲಿ ಕಾಮಗಾರಿ ಮುಗಿದ ನಂತರ  ಮತ್ತೊಂದು ಸ್ಥಳಕ್ಕೆ ವಲಸೆ.ಇದು ಇವರ ಪರಿಪಾಟು.

ಊರಿಂದೂರಿಗೆ ವಲಸೆ ಹೋಗುವುದರಿಂದ ಮತ್ತು ಕಾಮಗಾರಿ ಸ್ಥಳಕ್ಕೆ ಹತ್ತಿರದಲ್ಲಿ ಒಳ್ಳೆಯ ಗುಣಮಟ್ಟದ ಶಾಲೆಗಳು ದೊರಕದಿರುವುದರಿಂದ ವಲಸೆ ಕಾರ್ಮಿಕರ ಬಹಳಷ್ಟು ಮಕ್ಕಳು ಶಾಲೆಗಳಿಗೇ ಹೋಗುವುದಿಲ್ಲ. ಇದರ ಜೊತೆಗೆ, ತಮ್ಮ ತಂದೆತಾಯಿಗಳು ಕೆಲಸಕ್ಕೆ ಹೋದ ಸಮಯದಲ್ಲಿ ತಮ್ಮ ಕೈಕೂಸು ತಂಗಿ ತಮ್ಮಂದಿರ  ಮತ್ತು ಮನೆಯ ನಿಗಾವಣೆಯನ್ನೂ ಇವರು ಮಾಡಬೇಕಾಗಿರುತ್ತದೆ. ಹೀಗಾಗಿ ಮನೆಗೆಲಸ ಮತ್ತು ಮಕ್ಕಳ ಪಾಲನೆಯಲ್ಲಿ  ಈ ಮಕ್ಕಳು ತಮ್ಮ ವಯಸ್ಸಿಗೆ ಮೀರಿ ಪ್ರಬುದ್ಧರಾಗಿರುತ್ತಾರೆ. ತಮ್ಮ ದೈನಂದಿನದ ಹೊಟ್ಟೆಪಾಡಿಗೆ ಹೆಣಗಾಡುವುದೇ ಈ ಜನರ ದುಕಿನ ಮುಖ್ಯ ಜಂಜಾಟವಾಗಿರುವಾಗ  ಮತ್ತು ಬಹಳಷ್ಟು ಸಲ ಕುಟುಂಬದಲ್ಲಿ ಈ ಮಕ್ಕಳೆ ಮೊದಲ ಬಾರಿಗೆ ಶಾಲೆ ಮೆಟ್ಟಲು ಹತ್ತುವವರಾದ್ದರಿಂದ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವುದು ವಲಸೆ ಕಾರ್ಮಿಕರ ತಲೆಗೆ ಹೊಳೆದಿರುವುದೇ ಇಲ್ಲ.

ಈ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದಕ್ಕೆ, ಪಠ್ಯಕ್ರಮ ಹೇಗಿರಬೇಕು ಮತ್ತು ಯಾವ ಯಾವ ವಿಷಯದಲ್ಲಿ ಇವರಿಗೆ ಸಾಮರ್ಥ್ಯ ಒದಗಿಸಬೇಕು ಎಂಬುದನ್ನು ಮನಗಾಣಲು, ಅಜೀಂ ಪ್ರೇಂಜೀ ಫೌಂಡೇಷನ್ ಈ ಮಕ್ಕಳಿಗಾಗಿ ಶಾಲೆಯನ್ನು ಪ್ರಾರಂಭಿಸುವುದಕ್ಕೆ ನಿರ್ಧರಿಸಿತು. ಇಬ್ಬರು ಬಿಲ್ಡರ್ ಗಳ ಸಹಭಾಗಿತ್ವದೊಂದಿಗೆ ನಾವು 2007 ರಲ್ಲಿ ಬೆಂಗಳೂರಿನಲ್ಲಿ ವಲಸೆ ಕಾರ್ಮಿಕರ ಮಕ್ಕಳಿಗಾಗಿ ಎರಡು ಶಾಲೆಗಳನ್ನು ಪ್ರಾರಂಭಿಸಿದೆವು. ಶಾಲೆಯನ್ನು ಪ್ರಾರಂಭಿಸುವುದರಿಂದ ಹಿಡಿದು ಅದನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗುವುದು, ಇತರ ಸೌಕರ್ಯಗಳನ್ನು ಒದಗಿಸುವುದು, ಶಿಕ್ಷಕರಿಗೆ ತರಬೇತಿಯನ್ನು ನೀಡುವುದು ಮತ್ತು ಪಠ್ಯಕ್ರಮವನ್ನು ಇಲ್ಲಿನ ಅವಶ್ಯಕತೆಗೆ ತಕ್ಕಂತೆ ಆಮೂಲಾಗ್ರವಾಗಿ ಬದಲಾಯಿಸುವುದು ಈ ಹಾದಿಯಲ್ಲಿನ ಈ ವರೆಗಿನ ನಮ್ಮ ಪಯಣ ನಮಗೆ ಈ ಮಕ್ಕಳ  ಅವಶ್ಯಕತೆಗಳನ್ನು  ಅರಿಯುವುದಕ್ಕೆ ಸಹಾಯ ಮಾಡಿವೆ ಮತ್ತು ಈ ಸಂಗತಿಗಳು ಆ ಮಕ್ಕಳ ಬಗ್ಗೆ ಹೆಚ್ಚಿನ ತಿಳಿವಳಿಕೆಯನ್ನು ಪಡೆಯಲು ನೆರವಾಗಿವೆ.   

ಕೇವಲ 6 ರಿಂದ 12 ವರ್ಷದವರೆಗಿನ ಮಕ್ಕಳನ್ನು ಮಾತ್ರ ನಾವು ಶಾಲೆಗೆ ತೆಗೆದುಕೊಳ್ಳುವುದಕ್ಕೆ ನಿರ್ಧರಿಸಿದರೆ ನಾವು ತರಗತಿಗೆ ಮಕ್ಕಳನ್ನು ಸೇರಿಸಿಕೊಳ್ಳುವುದು ಆಗುವುದೇ ಇಲ್ಲ  ಎಂಬುದು ನಮಗೆ ಮನವರಿಕೆಯಾದ ಸತ್ಯ. ಏಕೆಂದರೆ ಈ ವಯಸ್ಸಿನ ಎಲ್ಲಾ ಮಕ್ಕಳು ತಮಗಿಂತ ಸಣ್ಣ ಮಕ್ಕಳ ಪಾಲನೆಯಲ್ಲಿ ಅಥವಾ ಪ್ರತಿ ತಿಂಗಳಿಗೆ 400/- ರಿಂದ 500/- ವರೆಗಿನ ಹಣಕ್ಕಾಗಿ ನೆರೆಹೊರೆಯ ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಆದ್ದರಿಂದ ಎಳೆಯ ಮಕ್ಕಳಿಗಾಗಿ ಶಾಲೆಯಲ್ಲಿಯೇ ಒಂದು ಶಿಶುಧಾಮವನ್ನು ನಿರ್ಮಿಸಲು ಮತ್ತು ಪುಟ್ಟ ಮಕ್ಕಳಿಗಾಗಿ ಒಂದು ಶಿಶುವಿಹಾರವನ್ನು ನಿರ್ಮಿಸಲು ನಿರ್ಧರಿಸಿದೆವು. ಮಕ್ಕಳಲ್ಲಿ ಶಾಲೆಯಲ್ಲಿ ತಾವು ಸುರಕ್ಷಿತವಾಗಿದ್ದೇವೆ ಎಂಬ ಭಾವನೆಯನ್ನು ಮೂಡಿಸುವುದಕ್ಕೆ ಮತ್ತು ಅವರು ತಮ್ಮ ಸಣ್ಣ ಟೆಂಟ್‍ಗಳು ಹಾಗು ತಮಗೆ ಸೇರಿದ ವಸ್ತುಗಳ ಮೇಲೆ ನಿಗಾ ಇರಿಸುವುದಕ್ಕೆ ಸಾಧ್ಯವಾಗುವಂತೆ ಮಾಡಲು ಶಾಲೆಯನ್ನು ಕಾಮಗಾರಿಯ ಕ್ಯಾಂಪ್‍ನಲ್ಲಿ ಅಥವಾ ಕ್ಯಾಂಪ್‍ನ ಸಮೀಪದಲ್ಲಿ ಪ್ರಾರಂಭಿಸಲು ನಾವು ನಿರ್ಧರಿಸಿದೆವು. ಈ ಮಕ್ಕಳು ಶಾಲೆಗೆ ಹೋಗದಿರುವುದಕ್ಕೆ ಈ ಸಂಗತಿಗಳೇ ಮುಖ್ಯ ಕಾರಣವಾಗಿದ್ದವು. ಈ ಒಂದು ಏರ್ಪಾಟಿನಿಂದಾಗಿ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುವುದಕ್ಕೆ ಸಹಾಯವಾಯಿತು ಮತ್ತು ತಂದೆತಾಯಿಗಳೂ ತಮ್ಮ ಮಕ್ಕಳು ಮತ್ತು ತಮ್ಮ ವಸ್ತುಗಳು ಸುರಕ್ಷಿತವಾಗಿವೆ ಎಂಬ ನೆಮ್ಮದಿ ಹೊಂದಿದರು.   

ಶಾಲೆಗೆ ಮಕ್ಕಳನ್ನು ಸೇರಿಸಿಕೊಂಡ ನಂತರ ಅವರಲ್ಲಿ ಅನೇಕರು ಪೌಷ್ಟಿಕಾಹಾರ ಕೊರತೆಯಿಂದ ಬಳಲುತ್ತಿದ್ದಾರೆ ಎಂಬ ಸಂಗತಿ ನಮಗೆ ತಿಳಿದು ಬಂದಿತು. ಆದ್ದರಿಂದ ಎಲ್ಲಾ ಮಕ್ಕಳಿಗೂ ಮೂರು ಹೊತ್ತಿನ ಊಟವನ್ನು ನೀಡಲು  ನಿರ್ಧರಿಸಿದೆವು. ಪೌಷ್ಟಿಕಾಹಾರ ತಜ್ಞರ ಸಲಹೆ ಮೇರೆಗೆ ಆಧಾರದ ಮೇಲೆ ಮೂರು ಊಟಗಳ ವಿವರಗಳನ್ನು ನಿರ್ಧರಿಸಲಾಯಿತು. ಈಗ ಮಕ್ಕಳಿಗೆ ಪ್ರತಿದಿನ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಮತ್ತು ಸಂಜೆಯ ಸಮಯದಲ್ಲಿ ಉಪಾಹಾರ ದೊರೆಯುತ್ತದೆ. ನಿಯತವಾದ (ದಂತ,ಇಡೀ ಶರೀರ ಮತ್ತು ಕಣ್ಣುಗಳ) ಆರೋಗ್ಯ ತಪಾಸಣೆ, ಅವಶ್ಯಬಿದ್ದ ಚಿಕಿತ್ಸೆಗಳನ್ನು ಎಲ್ಲಾ ಮಕ್ಕಳಿಗೂ ನೀಡಲಾಗುತ್ತಿದೆ. ಇದಲ್ಲದೆ, ಪ್ರತಿ ತಿಂಗಳೂ ಎಲ್ಲಾ ಮಕ್ಕಳ ಎತ್ತರ ಮತ್ತು ತೂಕಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ದಾಖಲಿಸಲಾಗುತ್ತದೆ ಮತ್ತು ನಮ್ಮ ಈ ಪ್ರಯತ್ನದ ಕಾರಣದಿಂದಾಗಿ ಆದ ಬದಲಾವಣೆಗಳನ್ನು ಪರಿಶೀಲಿಸಲಾಗುತ್ತದೆ.  ಈ ಕಾರ್ಯಕ್ರಮದಿಂದ ಅವರ ಆರೋಗ್ಯ ಖಂಡಿತವಾಗಿ ಸುಧಾರಿಸಿತು. ವೈದ್ಯಕೀಯ ಸೇವೆ ಜೊತೆಗೆ ಶುಚಿತ್ವ ಮತ್ತು ಆರೋಗ್ಯಕರ ಅಭ್ಯಾಸಗಳ ಬಗ್ಗೆ ಮಕ್ಕಳಲ್ಲಿ ತಿಳುವಳಿಕೆ ಉಂಟುಮಾಡಲೂ  ಪ್ರಯತ್ನ ನಡೆಸಿದೆವು. ಇಷ್ಟೇಅಲ್ಲ, ಮಕ್ಕಳು ಹಂಚಿ ಬಾಳುವುದು, ಜವಾಬ್ದಾರಿ ತೆಗೆದುಕೊಳ್ಳುವುದು, ಆಹಾರವನ್ನು ಬಡಿಸುವುದು, ಒಟ್ಟ್ಟಾಗಿ ಕುಳಿತು ತಿನ್ನುವುದು, ತಮ್ಮ ಬಟ್ಟಲುಗಳನ್ನು ತೊಳೆದಿಡುವುದು,  ಸ್ಥಳವನ್ನು ಸ್ವಚ್ಛಗೊಳಿಸುವುದು. ಒಂದಾಗಿ ಕಾರ್ಯನಿರ್ವಹಿಸುವುದು ಇತ್ಯಾದಿ ಗುಣಗಳನ್ನೂ ಕಲಿಯುತ್ತಾರೆ

.  
ಹಂಚಿ ತಿಂದರೆ ಸ್ವರ್ಗ ಸುಖ.
ಈಗ ಚಾಲ್ತಿಯಲ್ಲಿರುವ  ರಾಜ್ಯ ಪಠ್ಯಕ್ರಮವು ಈ ಮಕ್ಕಳ ವಿಷಯದಲ್ಲಿ ಸಮಂಜಸವಲ್ಲ ಎಂಬುದನ್ನು ಮನಗಂಡೆವು. ಅದಕ್ಕೆ ಈ ಎರಡು ಕಾರಣಗಳಿವೆ; ಮೊದಲನೆಯದಾಗಿ ಮಕ್ಕಳು ಶಾಲೆಯಲ್ಲಿ ಕಳೆಯುವ ಅವಧಿಯು ಅನಿಶ್ಚಿತ ಮತ್ತು ತೀರ ಕಡಿಮೆ ಅವಧಿ ಯಾಗಿರುತ್ತದೆ. ಆದ್ದರಿಂದ ಅವಶ್ಯಕ ಶೈಕ್ಷಣಿಕ ಕೌಶಲ್ಯಗಳನ್ನು ಕಲಿಸಿಕೊಡುವುದಕ್ಕೆ ನಮಗೆ ಹಲವಾರು ವರ್ಷಗಳು ಲಭ್ಯವಿಲ್ಲ; ಎರಡನೆಯದು ಈ ಮಕ್ಕಳು ಭಾರತದ ವಿವಿಧ ಭಾಗದಿಂದ ಬಂದಿರುತ್ತಾರೆ ಮತ್ತು ವಿಭಿನ್ನ ಭಾಷೆಗಳು, ಸಂಸ್ಕೃತಿಗಳು ಮತ್ತು ವಿಭಿನ್ನ ಕಲಿಕೆಯ ಮಟ್ಟವನ್ನು ಹೊಂದಿರುತ್ತಾರೆ.

ಅಜೀಂ ಪ್ರೇಂಜೀ ಫೌಂಡೇಷನ್  ಈ ವೈವಿಧ್ಯ ಪೂರ್ಣ ಮಕ್ಕಳಿಗೆ ಸೂಕ್ತವಾದ ಬೇರೆಯದೇ ಆದ ಪಠ್ಯಕ್ರಮವನ್ನು ತಯಾರಿಸುವುದಕ್ಕೆ ಮತ್ತು ಸಮಂಜಸ  ಬೋಧನಾ ವ್ಯವಸ್ಥೆಯನ್ನು ರೂಪಿಸುವುದಕ್ಕೆ ನಿರ್ಧರಿಸಿತು. ವಿಭಿನ್ನ ಭಾಷೆ, ವಿಭಿನ್ನ ಸಂಸ್ಕೃತಿ ಮತ್ತು ವಿಭಿನ್ನ ಸಮಾಜದ ಈ ಮಕ್ಕಳ ಅಗತ್ಯತೆಗಳನ್ನು ಈಡೇರಿಸುವಂಥ ಒಂದು ಪ್ಯಾಕೇಜನ್ನು ಸಿದ್ಧಪಡಿಸುವುದು ಅನಿವಾರ್ಯವಾಯಿತು. ನಾವು ಮಾಡ್ಯೂಲ್ ಆಧಾರಿತ ವಿಧಾನವನ್ನು ಅಳವಡಿಸಿಕೊಂಡೆವು. ಮಕ್ಕಳು ಮಧ್ಯಂತರದಲ್ಲಿ ಈ ಶಾಲೆಯನ್ನು ಬಿಟ್ಟ ಸಂದರ್ಭದಲ್ಲಿ ಅವರು ಇತರ ಮುಖ್ಯವಾಹಿನಿಯ ಶಾಲೆಯನ್ನು ಸೇರಿಕೊಳ್ಳುವುದಕ್ಕೆ ಅನುಕೂಲವಾಗುವಂತೆ ಪ್ರತಿ ಮಾಡ್ಯೂಲ್ ಕೂಡ ಮೂಲಭೂತ ಸಾಮರ್ಥ್ಯಗಳು ಮತ್ತು ಕೌಶಲ್ಯಗಳನ್ನು ಒಳಗೊಂಡಿರುವಂತೆ ರೂಪಿಸಲಾಗಿತ್ತು. ಮಕ್ಕಳು ವಿವಿಧ ಕಲಿಕಾ ಮಟ್ಟಗಳ ಆವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಒಂದೇ ಸಮಯದಲ್ಲಿ ಎರಡರಿಂದ ಮೂರು ಮಾಡ್ಯೂಲ್‍ಗಳನ್ನು ಬಳಸಿ ಪಾಠ  ಹೇಳಿಕೊಡಲಾಗುತ್ತಿತ್ತು. ಮಕ್ಕಳು ಸ್ವತಂತ್ರವಾಗಿ ಕಲಿಯುವುದನ್ನು ಪ್ರೋತ್ಸಾಹಿಸುವುದೇ ಈ ಮಾಡ್ಯೂಲ್ ಪ್ರಕಾರ ಬೋಧನೆಯ ಮುಖ್ಯ ಪ್ರಯತ್ನವಾಗಿತ್ತು.   

ಬಾಲಸ್ನೇಹಿ ತರಗತಿಗಳು

ಶಾಲೆಗೆ ಪ್ರವೇಶ ಮಾಡಿಸಿಕೊಳ್ಳುವಾಗ ವಿವಿಧ ವಿಷಯಗಳಲ್ಲಿ ಅವರ ಕಲಿಕೆಯ ಮಟ್ಟ ಎಷ್ಟಿದೆ ಮತ್ತು ಅವರ ಆರೋಗ್ಯ ಹೇಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ, ನಾವು ಪ್ರವೇಶಕಾಲೀನ ಮೌಲ್ಯಮಾಪನ ಫಾರ್ಮ್‍ಗಳನ್ನು ವಿನ್ಯಾಸಗೊಳಿಸಿ ಬಳಸುತ್ತಿದ್ದೇವೆ. ಇದನ್ನು ಆಧರಿಸಿ, ಅವರನ್ನು ವಿಭಿನ್ನ ಮಾಡ್ಯೂಲ್‍ಗಳಲ್ಲಿ ಸೇರಿಸಲಾಗುತ್ತದೆ. ಈ ಕ್ಯಾಂಪ್‍ನಿಂದ ಹೊರಹೋಗುವುದಕ್ಕೆ ಬಯಸುವ ಮಕ್ಕಳಿಗೆ ಮತ್ತು ಪಾಲಕರಿಗೆ ಮಗುವಿನ ವಿವರಗಳನ್ನು ಒಳಗೊಂಡ ಅಂದರೆ ಶಾಲೆಯಲ್ಲಿ ಅವನ/ಅವಳ ಕಲಿಕೆಯ ಅವಧಿ, ಕಲಿಸಲ್ಪಟ್ಟ ವಿಷಯಗಳು ಮತ್ತು ಈಗಿನ ಕಲಿಕೆಯ ಮಟ್ಟ ಇತ್ಯಾದಿ ವಿವರಗಳನ್ನು ಒಳಗೊಂಡ “ಎಕ್ಸಿಟ್ ಸರ್ಟಿಫಿಕೇಟ್” (ನಿರ್ಗಮನ ಪತ್ರ) ಅನ್ನು ನೀಡಲಾಗುತ್ತದೆ. ಈ ಸರ್ಟಿಫಿಕೇಟ್‍ನ ಆಧಾರದ ಮೇಲೆ ಮಗುವು ಇತರ ಶಾಲೆಗಳಲ್ಲಿ ನೊಂದಣಿಯನ್ನು ಪಡೆಯುವುದು ಸಾಧ್ಯವಾಗುತ್ತದೆ.    

ಮಕ್ಕಳು  ಶಾಲೆಗೆ  ಪ್ರವೇಶ ಪಡೆದ ಆರಂಭದಲ್ಲಿ ಮೊದಲ ಕೆಲವು ದಿನಗಳನ್ನು ಅವರು ಶಾಲೆಯಲ್ಲಿ ತಿರುಗಾಡುತ್ತಾ ಕಾಲಕಳೆಯುತ್ತಾರೆ, ಬಹಳಷ್ಟು ಸಲ  ದೊಡ್ಡ ಮಕ್ಕಳು ಚಿಕ್ಕಮಕ್ಕಳನ್ನು ಸೊಂಟದ ಮೇಲೆ ಎತ್ತಿಕೊಂಡು ಶಾಲೆಯ ಸುತ್ತ ತಿರುಗಾಡುವ ದೃಶ್ಯ ಕಂಡುಬರುತ್ತದ್ತೆವರಿಗೆ ಇಷ್ಟಬಂದಂತೆ ಶಾಲೆಗೆ ಬರುತ್ತಾರೆ ಮತ್ತು ಮನೆಗೆ ಹೋಗುತ್ತಾರೆ ಯಾವ ನಿರ್ಬಂಧವೂ ಇರುವುದಿಲ್ಲ. ನಿಧಾನವಾಗಿ ಮತ್ತು ಸುಗಮವಾಗಿ ಚಿಕ್ಕವರೇ ಒಂದು ಗುಂಪು ದೊಡ್ಡವರೇ ಒಂದು ಗುಂಪಾಗಿ ಶಾಲೆಯಲ್ಲಿ ಕಳೆಯಲು  ಮನಮಾಡುವುದಕ್ಕೆ  ಆ ಮಕ್ಕಳಿಗೆ ಸಾಕಷ್ಟು ಸಮಯವನ್ನು ನೀಡಲಾಗುತ್ತದೆ.  

ನಮ್ಮ ಪುಟ್ಟ ಪ್ರಬುದ್ಧರು
 
ಶಾಲೆಯಲ್ಲಿ ಮಕ್ಕಳ ಕಲಿಕಾ ಅವಧಿಯು ಅನಿಶ್ಚಿತ ಮತ್ತು ತುಂಬಾ ಕಡಿಮೆ ಅವಧಿಯದ್ದಾಗಿರುವುದರಿಂದ, ಈ ಎರಡು ಶಾಲೆಗಳು ವರ್ಷಪೂರ್ತಿ ತೆರೆದಿರುತ್ತವೆ. ಈ ಶಾಲೆಯಲ್ಲಿ ಮಕ್ಕಳಿಗೆ ಹಾಗೆಯೇ ಶಿಕ್ಷಕರಿಗೂ ಯಾವುದೇ ರೀತಿಯ ವಿಧ್ಯುಕ್ತ ರಜಾ ಅವಧಿಯನ್ನು ನೀಡಲಾಗುವುದಿಲ್ಲ. ಆದರೆ, ಬೆಳೆ ಕಟಾವಿನ ಸಮಯದಲ್ಲಿ ಮಕ್ಕಳು ಒಂದು ಅಥವಾ ಎರಡು ತಿಂಗಳ ಕಾಲ ತಮ್ಮ ತಂದೆತಾಯಿಗಳ ಜೊತೆಗೆ ತಮ್ಮ ಹಳ್ಳಿಗಳಿಗೆ ಹೋಗುತ್ತಾರೆ.ಆರಂಭದಲ್ಲಿ ಮಕ್ಕಳು ಶಾಲೆಯನ್ನು ತಪ್ಪಿಸದಂತೆ ನಾವು ಪಾಲಕರ ಮನವೊಲಿಸುವುದಕ್ಕೆ ಪ್ರಯತ್ನಿಸಿದೆವು ಈಗ ಶಿಕ್ಷಕ ಅಭಿವೃದ್ಧಿ ಕಾರ್ಯಾಗಾರಗಳಿಗಾಗಿ ಮತ್ತು ವಾರಾಂತ್ಯದಲ್ಲೂ ಶಾಲೆಯನ್ನು ಬಂದ್ ಮಾಡದಂತೆ ಮಕ್ಕಳು ಶಿಕ್ಷಕರಿಗೆ ತಾಕೀತು ಮಾಡುತ್ತಾರೆ.   

ಮಕ್ಕಳಿಗೆ ಚಿಕ್ಕಚಿಕ್ಕ ಸಂಗತಿಗಳೂ ದೊಡ್ಡ ವ್ಯತ್ಯಾಸವನ್ನುಂಟುಮಾಡುತ್ತವೆ. ಮಕ್ಕಳಿಗೆ ಒಂದು ದೊಡ್ಡ ಕನ್ನಡಿ, ಬಾಚಣಿಗೆ, ಕೇಶತೈಲ, ಟಾಲ್ಕಮ್ ಪೌಡರ್ ಮತ್ತು ಪೆಟ್ರೋಲಿಯಮ್ ಜೆಲ್ಲಿಯನ್ನು ನೀಡಲಾಗುತ್ತದೆ. ಪ್ರತಿದಿನ ಕನ್ನಡಿಯ ಮುಂದೆ ನಿಂತುಕೊಂಡು ತಮ್ಮನ್ನು ಮತ್ತು ತಮ್ಮ ತಮ್ಮ ತಂಗಿಯರನ್ನು ತಯಾರು ಮಾಡುವುದು ಅವರಿಗೆ ಅತ್ಯಂತ ಪ್ರಿಯವಾದ ಕಾರ್ಯವಾಗಿದೆ – ಇದು ಅವರ ಅತ್ಮವಿಶ್ವಾಸವನ್ನುಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ. ಇದಲ್ಲದೆ, ಸುರಕ್ಷಿತ ಕುಡಿಯುವ ನೀರು, ನಲ್ಲಿ ನೀರು, ವಿದ್ಯುತ್, ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳು ಇತ್ಯಾದಿಗಳು ನಾವು ಶಾಲೆಯಲ್ಲಿ ಮಕ್ಕಳಿಗೆ ಒದಗಿಸುತ್ತಿರುವ ಮೂಲಭೂತ ಸೌಕರ್ಯಗಳಾಗಿವೆ ಮತ್ತು ಈಗ ಅದನ್ನು ಬಳಸುವುದು ಅವರಿಗೆ ಅಭ್ಯಾಸವಾಗಿಹೋಗಿದೆ .    

ಅತ್ತಿತ್ತ ಜರುಗಿಸಿಡಬಲ್ಲ್ಲ ಪೀಠೋಪಕರಣಗಳನ್ನು ಬಳಸಿ ತರಗತಿ ಸ್ಥಳಾವಕಾಶವನ್ನು ದೊಡ್ಡದು ಚಿಕ್ಕದು ಮಾಡಬಹುದಾಗಿದೆ. ಶಾಲೆಯ ತಂಡ ಮತ್ತು ಮಕ್ಕಳು ಇಬ್ಬರೂ ಶಾಲಾ ಪರಿಸರವನ್ನು (ಮೂಲಭೂತ ಸೌಕರ್ಯಗಳನ್ನು) ಒಪ್ಪ ಓರಣವಾಗಿ ಇಟ್ಟು ಚೆನ್ನಾಗಿ ಕಾಳಜಿಯಿಂದ ನಿರ್ವಹಿಸಿಕೊಂಡು ಬರುತ್ತಾರೆ.

ತರಗತಿಗಳಲ್ಲಿ ಮಕ್ಕಳೇ ನಿಯಮಗಳನ್ನು ರೂಪಿಸಿಕೊಳ್ಳುತ್ತಾರೆ ಮತ್ತು ಒಬ್ಬರಿಗೊಬ್ಬರು ಆ ನಿಯಮಗಳ ಬಗ್ಗೆ ನೆನಪಿಸುತ್ತಿರುತ್ತಾರೆ. ಶಾಲಾ ಪರಿಸರದಲ್ಲಿ ಸುರಕ್ಷತೆ ಬಹು ಮುಖ್ಯ ಅಂಶ. ಶಾಲಾ ವಾತಾವರಣವನ್ನು ಸುರಕ್ಷಿತ, ಸ್ನೇಹಮಯಿ ಮತ್ತು ಸರಳವಾಗಿರಿಸುವುದಕ್ಕೆ ನಾವು ಹೆಚ್ಚಿನ ಪ್ರಯತ್ನವನ್ನು ನಡೆಸಿದ್ದೇವೆ. ಈ ರೀತಿಯಾಗಿ ಶಾಲೆಯು ಮಗುವಿನ ಮನೆಯ ಒಂದು ಭಾಗ ಎಂಬ ಭಾವನೆಯೇ ಮೂಡುತ್ತದೆ. ಈ ಭಾವನೆಗೆ ಇಂಬು ನೀಡುವುದಕ್ಕೆ ಅದೇ ಸಮುದಾಯದ ಒಬ್ಬ ಸಹಾಯಕರನ್ನು ಹಾಗೆಯೇ ಅವರ ಹುಟ್ಟೂರುಗಳ ಕಡೆಯಿಂದ ಬಂದ ಶಿಕ್ಷಕರನ್ನೇ ನೇಮಕ ಮಾಡಿಕೊಂಡಿದ್ದೇವೆ.

ಐದು ಮಾಡ್ಯೂಲ್‍ಗಳನ್ನು ಹಾಗೆಯೇ ಅದರ ಜೊತೆಗೆ ಟ್ರಾನ್ಸಿಷನ್ ಮಾಡ್ಯೂಲ್ ಅನ್ನೂ ಅಭ್ಯಾಸಮಾಡಿ ಮುಗಿಸಿದ ಮಕ್ಕಳಿಗೆ (ಮಕ್ಕಳನ್ನು ಮುಖ್ಯವಾಹಿನಿಯ ನಿಯಮಿತ ಶಾಲೆಗಳಿಗೆ ಸೇರುವುದಕ್ಕೆ ಸಹಾಯ ಮಾಡುವುದಕ್ಕೆ) ಎಲ್ಲಾ ಅವಕಾಶಗಳನ್ನೂ ಒದಗಿಸಲಾಗುತ್ತದೆ ಮತ್ತು ಆ ಮಕ್ಕಳನ್ನು ಮುಖ್ಯವಾಹಿನಿಯ ಶಾಲೆಗೆ ಸೇರಿಸುವುದಕ್ಕೆ ಅವಶ್ಯಕವಾದ ಪ್ರೋತ್ಸಾಹ ಮತ್ತು ಸಹಾಯವನ್ನು ಒದಗಿಸಲಾಗುತ್ತದೆ. ನಮ್ಮ ತಂಡವು ನಿಯಮಿತವಾಗಿ ಆ ಶಾಲೆಗೆ ಭೇಟಿ ನೀಡಿ ಆ ಶಾಲೆಗಳಲ್ಲಿನ ಶಿಕ್ಷಕರ ಜೊತೆ ಮಾತನಾಡಿ ಅಲ್ಲಿ ಈ ಮಕ್ಕಳ ಪ್ರಗತಿಯ ಬಗ್ಗೆ ವಿಚಾರಿಸಿಕೊಂಡು ಬರುತ್ತಾರೆ.

ನಮ್ಮ ಶಾಲೆಯಲ್ಲಿ ಐದೂ ಮಾಡ್ಯೂಲ್‍ಗಳು ಮತ್ತು ಟ್ರಾನ್ಸಿಷನ್ ಮಾಡ್ಯೂಲ್ ಅನ್ನು ಅಭ್ಯಾಸಮಾಡಿ ಮುಗಿಸಿದ ಮಕ್ಕಳಿಗೆ (ನಿಯಮಿತವಾದ ಶಾಲಾ ಪಠ್ಯಕ್ರಮದ ಬಗ್ಗೆ ತಿಳಿಯುವುದಕ್ಕೆ ಮಕ್ಕಳನ್ನು ತರಬೇತು ಮಾಡುವುದಕ್ಕೆ) ಮುಖ್ಯವಾಹಿನಿಯ ಶಾಲೆಗೆ ಸೇರಿಸುವುದಕ್ಕೆ ಪಾಲಕರಿಗೆ ಅವಶ್ಯಕವಾದ ಎಲ್ಲಾ ರೀತಿಯ ಪ್ರೋತ್ಸಾಹ ಮತ್ತು ಬೆಂಬಲವನ್ನು ನಮ್ಮ ಶಾಲೆಯು ನೀಡುತ್ತದೆ. ಸ್ವಾರಸ್ಯದ ಸಂಗತಿಯೆಂದರೆ, ಹೀಗೆ ಮುಖ್ಯವಾಹಿನಿ ಶಾಲೆಗಳಿಗೆ ಹೋಗುತ್ತಿರುವ ಮಕ್ಕಳು ಪ್ರತಿದಿನ ತಪ್ಪದೆ ನಮ್ಮ ಶಾಲೆಗೆ (ವಲಸೆ ಕಾರ್ಮಿಕರ ಶಾಲೆ) ಬಂದು, ಅಲ್ಲಿ ತಮ್ಮ ಶಾಲೆಯಲ್ಲಿ ಆ ದಿನ ಏನಾಯಿತು ಹೇಳಿ, ಇಲ್ಲೇ ಸಂಜೆಯ ತಿಂಡಿ ತಿಂದು, ಶಾಲೆಯಲ್ಲಿ ಕುಳಿತು ಹೋಮ್‍ವರ್ಕ್‍ಗಳನ್ನು ಮುಗಿಸಿ ಆಮೇಲೆ ತಮ್ಮ ಮನೆಗೆ ಹೋಗುತ್ತಾರೆ. ನಮ್ಮ ಶಾಲೆಯಿಂದ ಹೊರಹೋದ ಮಕ್ಕಳ ವಿದ್ಯಾ ಪ್ರಗತಿಯನ್ನು ಗಮನಿಸಲು ಮೂರು ತಿಂಗಳಿಗೆ ಒಮ್ಮೆ ಅವರನ್ನು ಭೇಟಿಮಾಡಿ ಪರಿಶೀಲಿಸಲಾಗುತ್ತದೆ.