ಸಹಭಾಗಿಗಳು

ದೇಶದ ವಿವಿಧ ಭಾಗದ ಶಿಕ್ಷಕರ ಅನುಭವದಿಂದ ಸಮೃದ್ಧರಾದ ಮತ್ತು ಶಿಕ್ಷಣಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಂಘ ಸಂಸ್ಥೆಗಳ ಸದೃಢಜಾಲವು ನಮ್ಮ ಪೋರ್ಟಲ್ಲಿನ ಜೊತೆಗಿದೆ. ಶಿಕ್ಷಕರ ಸಾಮರ್ಥ್ಯವರ್ಧನೆಯ ಕ್ಷೇತ್ರದಲ್ಲಿ ಮತ್ತು ಭಾರತೀಯ ನೆಲೆಗಟ್ಟಿನಲ್ಲಿ ಉಪಾಧ್ಯಾಯರುಗಳು ಮತ್ತು ಶಿಕ್ಷಕರ ಶಿಕ್ಷಕರುಗಳಿಗೆ ಉಪಯುಕ್ತವಾದ ಸಂಪನ್ಮೂಲಗಳನ್ನು ಸಿದ್ಧಪಡಿಸುವಲ್ಲಿ ವರ್ಷಾನುಗಟ್ಟಳೆ ಅನುಭವವನ್ನು ನಮ್ಮ ಸಹಭಾಗಿಗಳು ಹೊಂದಿರುತ್ತಾರೆ. ನಿಮ್ಮ ಸಂಸ್ಥೆಗೆ ನಮ್ಮ ಸಹಭಾಗಿ ಆಗುವ ಉದ್ದೇಶವಿದೆಯೇ? teachers@azimpremjifoundation.org ಗೆ ದಯವಿಟ್ಟು ಪತ್ರ ಬರೆಯಿರಿ.

19824 ನೊಂದಾಯಿತ ಬಳಕೆದಾರರು
7791 ಸಂಪನ್ಮೂಲಗಳು

ಸಂಪಾದಕ ಸಹಭಾಗಿಗಳು

1989ರಲ್ಲಿ ಆರಂಭವಾದ ಟೀಚರ್ ಪ್ಲಸ್ ಮೂಲತ: ಶಾಲಾ ಉಪಾದ್ಯಾಯರುಗಳನ್ನೇ ಗಮನದಲ್ಲಿಟ್ಟು ಕೊಂಡಿರುವ ಪುರವಣಿ(ಜರ್ನಲ್) ಆಗಿದೆ.  ಇದು ಉಪಾದ್ಯಾಯರು ತಮ್ಮ ಆತಂಕಗಳನ್ನು ವ್ಯಕ್ತಪಡಿಸಿ, ವಿಚಾರಗಳನ್ನು ಕುರಿತು ಚರ್ಚಿಸಿ ತಮ್ಮ ಜ್ಞಾನ ಬಂಢಾರವನ್ನು ಹಂಚಿಕೊಂಡು ಕಾಲಕ್ಕೆ ತಕ್ಕಂತೆ ನವೀಕರಿಸಿಕೊಳ್ಳಲು ಒಂದು ಉತ್ತಮ ವೇದಿಕೆಯಾಗಿದೆ.  ಟೀಚರ್ ಪ್ಲಸ್, ಬಹಳಷ್ಟು ಶಿಕ್ಷಕರು ದೈನಂದಿನವಾಗಿ ಎದುರಿಸುವ ಅಡೆತಡೆಗಳನ್ನು ಗುರುತಿಸುತ್ತಾ ಭಾರತೀಯ ಶಾಲಾ ಪರಿಸರದಲ್ಲಿ ಪರ್ಯಾಯ ರೀತಿಯಲ್ಲಿ ಯೋಚಿಸುವ ಮತ್ತು ಕೆಲಸ ಮಾಡುವ ವಿಧಾನಗಳ ಬಗ್ಗೆ ಚರ್ಚಿಸುತ್ತದೆ.  ಇದರ ಜೊತೆಗೆ ಶಿಕ್ಷಕರು ಬಹು ಮುಖ್ಯವಾದ ಬದಲಾವಣೆಯ ಹರಿಕಾರರು ಎಂಬುದನ್ನು ಮನಗಂಡು ತಮ್ಮ ನಡುವೆ ತಾವೆಲ್ಲರೂ ಒಂದೇ ಎಂಬ ಸಮುದಾಯ ಭಾವನೆಯನ್ನು ಬೆಳಸ ಬೇಕೆಂಬ ಗುರಿಯನ್ನು ಹೊಂದಿದೆ.

ಟೀಚರ್ ಪ್ಲಸ್ ಮಾಸಿಕವಾಗಿ  ಹೈದರಾಬಾದ್ ನಿಂದ ಪ್ರಕಟವಾಗುತ್ತದೆ.  ಪ್ರಾಥಮಿಕ ಶಾಲಾ ಬೋಧನೆಯಿಂದ ಹಿಡಿದು ಮಂಡಳಿ ಪರೀಕ್ಷೆಗಳನ್ನು ನಿಭಾಯಿಸುವವರೆಗೆ, ಕಲಿಕೆಯಲ್ಲಿ ಕಲೆ ಮತ್ತು ಕರಕುಶಲತೆಯ ಸ್ಥಾನದವರೆಗೆ, ಶಿಶು ಅಭಿವೃದ್ಧಿ ಮತ್ತು ತರಗತಿ ನಿರ್ವಹಣೆಯವರೆಗೆ, ಭಾರತದುದ್ದಗಲಕ್ಕೂ ಇರುವ ಶಿಕ್ಷಣದ ವಿವಿಧ ಮುಖಗಳಲ್ಲಿ ಅನುಭವವುಳ್ಳ ವ್ಯಕ್ತಿಗಳಿಂದ ಲೇಖನಗಳನ್ನು ಸಂಗ್ರಹಿಸುತ್ತಿದೆ.  ಪ್ರತಿ ತಿಂಗಳೂ ಇದು ಓದುಗರಿಗೆ ವೈವಿಧ್ಯಮಯ ವಿಚಾರ ಪ್ರಚೋದಕ ಲೇಖನಗಳ ರಸದೌತಣ ನೀಡುವುದೇ ಅಲ್ಲದೆ ಬಹಳಷ್ಟು ತರಗತಿಗಳಲ್ಲಿ ಬೋಧನೆಗೆ ಅಳವಡಿಸಿಕೊಳ್ಳಬಹುದಾದ, ಕೈಯಾರೆ ಮಾಡುವ ಚಟುವಟಿಕೆಗಳನ್ನು ಒದಗಿಸುತ್ತದೆ.

ಟೀಚರ್ ಪ್ಲಸ್ ಪಂಡಿತರ ಜರ್ನಲ್ ಅಲ್ಲ.  ಇದು ಕಾರ್ಯ ನಿರತವಾದ ಮತ್ತು ಶಿಕ್ಷಣದಲ್ಲಿ ಹೊಸ ಹೊಸ ಪ್ರವೃತ್ತಿಗಳನ್ನು ಮೈಗೂಡಿಸಿಕೊಳ್ಳಲು ಇಚ್ಛಿಸುವ ಹಾಗೆಯೇ ಹೊಸ ವಿಚಾರಗಳು ಮತ್ತು ವಿಧಾನಗಳ ಮೂಲಕ ತನ್ನ ತರಗತಿಯಲ್ಲಿ ಉತ್ಸಾಹ ತುಂಬಿ ತುಳುಕುವಂತೆ ಮಾಡಲು ಇಚ್ಛಿಸುವ ಕಾರ್ಯನಿರತ ಉಪಾಧ್ಯಾಯರಿಗಾಗಿ ಮುಡಿಪಾದ ಮ್ಯಾಗಜೈನು.

http://www.teacherplus.org/

ವಿಷಯ ಸಹಭಾಗಿಗಳು

ಏಕಲವ್ಯ ಸಂಸ್ಥೆಯು ನವೀನ ಮತ್ತು ಪ್ರಯೋಗ ಶೀಲ ಕಾರ್ಯಕ್ರಮಗಳನ್ನು ಸಿದ್ಧ ಪಡಿಸಿ ಕ್ಷೇತ್ರ ಪರೀಕ್ಷೆಯನ್ನು ಮಾಡುತ್ತಿರುವ ಒಂದು ಲಾಭ ನಿರೀಕ್ಷೆ ಇಲ್ಲದ, ಸರ್ಕಾರೇತರ ಸಂಸ್ಥೆಯಾಗಿದೆ ಮತ್ತು ಸದರಿ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ  ನೀಡುತ್ತದೆ.  ಇದು ಮಧ್ಯ ಪ್ರದೇಶ ರಾಜ್ಯದಲ್ಲಿರುವ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಜಾಲದ ಮೂಲಕ ಕೆಲಸ ಮಾಡುತ್ತದೆ.

ಏಕಲವ್ಯ ಸಂಸ್ಥೆಯು ಸುಮಾರು ಎರಡು ದಶಕಗಳ ಕಾಲ ಪದ್ಧತಿ ಶಿಕ್ಷಣ ಮತ್ತು ಪದ್ಧತಿಯೇತರ ಶಿಕ್ಷಣ ಪಠ್ಯವಸ್ತು ಹಾಗೂ ಬೋಧನಾಶಾಸ್ತ್ರಗಳೆರಡನ್ನೂ ಸಾಮಾಜಿಕ ಸುಧಾರಣೆ ಹಾಗೂ ಕಲಿಯುವ ಮಕ್ಕಳ ಸರ್ವಾಂಗೀಣ ಬದಲಾವಣೆಗೆ ಸಾಧನವಾಗುವಂತೆ ಮಾಡಲು ಪ್ರಯತ್ನಿಸುತ್ತಿದೆ.

ಏಕಲವ್ಯವು ನವ ಪ್ರಯೋಗಗಳನ್ನು ಪೂರ್ಣ ದೃಷ್ಟಿಯಿಂದ ನೋಡುತ್ತದೆ.  ಅಂದರೆ ಬೋಧನಾ ಅಭ್ಯಾಸಗಳಲ್ಲಿನ ಸುಧಾರಣೆಯ ಜೊತೆ ಜೊತೆಯಲ್ಲೇ, ಪರೀಕ್ಷಾ ವ್ಯವಸ್ಥೆಯ ಸುಧಾರಣೆ, ಶಿಕ್ಷಕ ತರಬೇತಿ ವಿಧಾನಗಳಲ್ಲಿ ಸುಧಾರಣೆ ಮತ್ತು ಶಾಲೆಗಳ ವ್ಯವಸ್ಥಾಪನೆಯಲ್ಲಿ ಸುಧಾರಣೆಯನ್ನು ತರಬೇಕೆಂಬ ನಿಟ್ಟಿನಲ್ಲಿ ಶ್ರಮಿಸುತ್ತಿದೆ.  ಅಷ್ಟೇ ಅಲ್ಲದೆ ಕಲಿಕೆಯು ಶಾಲಾ ಆವರಣಕ್ಕೇ ಸೀಮಿತವಾಗದೆ ಸಮುದಾಯಕ್ಕೂ ವಿಸ್ತರಿಸ ಬೇಕೆಂಬುದು ಇದರ ಆಶಯ.  ಏಕಲವ್ಯವು ಒಂದು ವಿಶಾಲ ಪರಿಧಿಯ ಸಂಪನ್ಮೂಲ ವಿಷಯಗಳನ್ನು ರಚಿಸಿ ಬೆಳಸಿದ್ದು ಇದರಲ್ಲಿ ಶೈಕ್ಷಣಿಕ ಸಾಹಿತ್ಯ, ಮಕ್ಕಳ ಸಾಹಿತ್ಯ, ಮ್ಯಾಗಜೈನುಗಳು, ಪಠ್ಯಪುಸ್ತಕಗಳು ಮತ್ತು ಇತರೆ ಕಲಿಕೆ ನೆರವು ಸಾಧನಗಳಿವೆ.

http://www.eklavya.in

ತಮಿಳುನಾಡು ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯ ವಲಯಗಳಲ್ಲಿ ಸುಧಾರಣೆಗಳನ್ನು ತರುವ ಉದ್ಧೇಶದಿಂದ ಏಯ್ಡ್ ಇಂಡಿಯಾ ಎಂಬ ಸಂಸ್ಥೆಯು 1996ರಲ್ಲಿ ಪ್ರಾರಂಭವಾಯಿತು.  ಇದರ ಕಾರ್ಯ ಪರಿಧಿ ತಮಿಳು ನಾಡಿನುದ್ದಗಲಕ್ಕೂ ಇರುವ 1000ಕ್ಕೂ ಹೆಚ್ಚು ಗ್ರಾಮಗಳಿಗೆ ವಿಸ್ತಾರವಾಗಿರುವ ಏಯ್ಡ್ ಇಂಡಿಯಾ ಸಂಸ್ಥೆ ಶಿಕ್ಷಣಕ್ಕೆ ಮೊತ್ತಮೊದಲ ಆದ್ಯತೆ ನೀಡಿದೆ.  ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕು ಎಂಬ ತನ್ನ ಧ್ಯೇಯದ ಸಾಧನೆಗಾಗಿ ಪ್ರತಿಯೊಂದು ಹಳ್ಳಿಯ ಪ್ರತಿಯೊಂದು ಮಗುವಿಗೂ ಅತ್ಯುತ್ತಮ ಶಿಕ್ಷಣ ದೊರಕಿಸಿಕೊಡಲು ಇದು ಶ್ರಮಿಸುತ್ತಿದೆ.  ಭಾರಿ ಪ್ರಮಾಣದಲ್ಲಿ ನೇರ ಕಾರ್ಯಾಚರಣೆ ನಡೆಸುತ್ತಿರುವ ಏಯ್ಡ್ ಇಂಡಿಯಾ ತನ್ನ ಗುರಿ ಸಾಧನೆಗಾಗಿ ಇತರ ಸರ್ಕಾರೇತರ ಸಂಸ್ಥೆಗೂ, ಸರ್ಕಾರ ಮತ್ತು ಜನ ಸಮುದಾಯದ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಿದೆ.  ವಾಚನ ಕೌಶಲ, ವಿಜ್ಞಾನ ಶಿಕ್ಷಣ ಮತ್ತು ಗ್ರಾಮೀಣ ಗ್ರಂಥಾಲಯಗಳ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಏಯ್ಡ್ ಇಂಡಿಯಾ ನಡೆಸಿರುವ ಉತ್ತಮ ಪ್ರಯತ್ನಗಳಿಗೆ ಅಪಾರ ಮನ್ನಣೆ ದೊರೆತು  ಅನೇಕ ಪ್ರಶಸ್ತ್ತಿಗಳು ದೊರೆತಿವೆ.  ಇದರ ದರ್ಶನ ಮತ್ತು ಯೋಜನೆಗಳ ಬಗ್ಗೆ ಇನ್ನಷ್ಟು ತಿಳಿಯಲು ಭೇಟಿ ನೀಡಿ:

http://www.eurekachild.org

ಕೃಷ್ಣಮೂರ್ತಿ ಶಾಲೆಗಳ ಜರ್ನಲ್ 1995 ರಿಂದಲೂ ಅಸ್ತಿತ್ವದಲ್ಲಿದೆ.  ವಿಶ್ವಾದ್ಯಾಂತ ಇರುವ ಕೃಷ್ಣಮೂರ್ತಿ ಶಾಲೆಗಳ ಉಪಾಧ್ಯಾಯರಿಗೆ ತಮ್ಮ ಶೈಕ್ಷಣಿಕ ಅನುಭವಗಳು ಮತ್ತು ಒಳ ನೋಟಗಳನ್ನು ಹಂಚಿಕೊಳ್ಳಲು ಒಂದು ವೇದಿಕೆಯನ್ನು ನಿರ್ಮಿಸಿ ಕೊಡುವ ಉದ್ದೇಶದಿಂದ ಇದು ಆರಂಭವಾಯಿತು.  ವರ್ಷಗಳು ಕಳೆದಂತೆ ಇದೇ ಮೂಲೋದ್ದೇಶ ವನ್ನು ಮುಂದುವರಿಸಿಕೊಂಡು ಈ ಜರ್ನಲ್ ಅದರ ಲೇಖಕವರ್ಗ ಹಾಗೂ ಓದುಗ ಸಮುದಾಯವನ್ನು ಬಹಳ ವಿಸ್ತರಿಸಿಕೊಂಡಿದೆ.  ಶಾಲಾ ಶಿಕ್ಷಣದ ಬಗ್ಗೆ ಶಿಕ್ಷಕರು ಬರೆಯ ಬೇಕಾದ ಆವಶ್ಯಕತೆಗೆ ಕೃಷ್ಣಮೂರ್ತಿ ಶಾಲೆಗಳ ಜರ್ನಲ್ ಒಂದು ಅನನ್ಯ ಪ್ರತಿಕ್ರಿಯೆ ಯಾಗಿದೆ.

ಈ ಜರ್ನಲ್ ನಲ್ಲಿ ಬರುವ ಲೇಖನಗಳು ಸ್ಥೂಲವಾಗಿ ಶಿಕ್ಷಣದಲ್ಲಿ ತತ್ವಜ್ಞಾನ ಮತ್ತು ಅಭ್ಯಾಸಗಳನ್ನು ಕುರಿತದ್ದಾಗಿರುತ್ತದೆ.  ಇಲ್ಲಿನ ಲೇಖನಗಳ ಬಹಳಷ್ಟು ಲೇಖಕರು ತತ್ವಜ್ಞಾನಿ ಶ್ರೀ ಜಿದ್ದು ಕೃಷ್ಣಮೂರ್ತಿಯವರು ಜೀವನ ಮತ್ತು ಶಿಕ್ಷಣವನ್ನು ಕುರಿತು ಎತ್ತಿದ ಅನೇಕ ಪ್ರಶ್ನೆಗಳಿಂದ ಗಾಢವಾಗಿ ಪ್ರಭಾವಿತರಾಗಿರುತ್ತಾರೆ.  ಆಂಥ ಪ್ರಶ್ನೆಗಳನ್ನು ಕುರಿತ ಅವರ ನಿರಂತರ ಶೋಧವು ಅವರ ಬೋಧನೆ ಮತ್ತು ಬರಹಗಳಲ್ಲಿ ಬಿಂಬಿತವಾಗಿರುತ್ತವೆ.  ಜರ್ನಲ್ ನಲ್ಲಿ ಈ ಮುಖವು ಅದರ ವೈಶಿಷ್ಟ್ಯ ಹಾಗೂ ಪ್ರಸ್ತುತತೆ ಯನ್ನು ಶಾಲಾ ಆವರಣವನ್ನೂ ದಾಟಿ ಕಲಿಕೆ ಮತ್ತು ಜೀವನದ ಹೃದಯ ಭಾಗವನ್ನೇ ಆವರಿಸುವಂತೆ ಮಾಡಿದೆ.

http://www.journal.kfionline.org

ಖಾನ್ ಅಕಾಡೆಮಿಯು "ವಿಶ್ವದ ಜನರಿಗೆ ಅವರು ಯಾರೇ ಇರಲಿ ಎಲ್ಲೇ ಇರಲಿ ಉಚಿತವಾಗಿ ವಿಶ್ವ-ದರ್ಜೆಯ ಶಿಕ್ಷಣವನ್ನು ಒದಗಿಸಿ ಶಿಕ್ಷಣದ ಗುಣಮಟ್ಟವನ್ನು ಉತ್ತಮವಾಗಿಸುವ ಗುರಿ " ಯಿಂದ 2008  ರಲ್ಲಿ ಸ್ಥಾಪಿಸಲಾದ ಒಂದು ಲಾಭ ನಿರೀಕ್ಷೆಯಿಲ್ಲದೆ ಶ್ರಮಿಸುತ್ತಿರುವ ಸಂಸ್ಥೆ. ಚರಿತ್ರೆಯಿಂದ ಗಣಿತದವರೆಗೆ,ಹಣಕಾಸಿನಿಂದ ಖಗೋಳ ವಿಜ್ಞಾನದ ವರೆಗೆ ವಿವಿಧ ಬಗೆಯ ವಿಷಯಗಳನ್ನು ಕುರಿತ ಸುಮಾರು 3300 ಕ್ಕೂ ಹೆಚ್ಚು ವಿಡಿಯೋಗಳ ಒಂದು ಗ್ರಂಥಾಲಯವೇ ಖಾನ್ ಅಕಾಡೆಮಿ ವೆಬ್ ಸೈಟು ಮತ್ತು ಯೂಟ್ಯೂಬ್ ಮೂಲಕ ಉಚಿತವಾಗಿ ಲಭ್ಯವಿವೆ ಮತ್ತು ಇತರೆ ಅಂತರಜಾಲ ಸಾಮಗ್ರಿಗಳಾಗಿ ಶೈಕ್ಷಣಿಕ ವಿಷಯಗಳನ್ನು ಜನರ ವೈಯಕ್ತಿಕ ಅಗತ್ಯತೆಗಳಿಗೆ ತಕ್ಕಂತೆ ವಿಶ್ವದ ಎಲ್ಲಾ ಜನರಿಗೆ ಒದಗಿಸುವ ಆಶಯವನ್ನು ಖಾನ್ ಅಕಾಡೆಮಿಯು ಹೊಂದಿರುತ್ತದೆ.

ಅಜೀಂಪ್ರೇಂಜಿ ಪ್ರತಿಷ್ಠಾನದ ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ನ ತಂಡವು  ಪ್ರಸ್ತುತ ಕೆಲವೊಂದು ಪ್ರಾಥಮಿಕ ಮಟ್ಟದ ಗಣಿತದ ವಿಡಿಯೋಗಳಿಗೆ ಪ್ರಾದೇಶಿಕ ಭಾಷೆಗಳಾದ ಕನ್ನಡ, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಧ್ವನಿನಿರೂಪಣೆ/ಅಕ್ಷರ ನಿರೂಪಣೆಗಳನ್ನು ಸೇರಿಸುವ ಕಾರ್ಯವನ್ನು ಕೈಗೆತ್ತಿ ಕೊಂಡಿದೆ.

ಶಾಲಾ ಬೋಧನಾಭ್ಯಾಸಗಳಲ್ಲಿ ಉದ್ಭವಿಸುವ ಅನೇಕ ಸಮಸ್ಯೆಗಳಿಗೆ ಕಾರ್ಯಸಾಧ್ಯ ಪರಿಹಾರವನ್ನು ಕಂಡು ಹಿಡಿಯಲು ಶ್ರಮಿಸುತ್ತಿರುವ ಸಂಸ್ಥೆ ಜೋಡೋ ಗ್ಯಾನ್.  ಮಕ್ಕಳು ತಮಗೆ ಹೇಳಿ ಕೊಟ್ಟ ಪಾಠವನ್ನು ಅರಿತು ಆನಂದ ಪಡುವಂತೆ ಮಾಡಬಲ್ಲ ಅತ್ಯಂತ ನವೀನ ವಿಧಾನಗಳನ್ನು ಅನುಷ್ಠಾನಕ್ಕೆ ತರುವುದಕ್ಕಾಗಿ 1998ರಿಂದಲೂ ಅವರು ವಿದ್ಯಾರ್ಥಿಗಳು, ಉಪಾಧ್ಯಾಯರು, ಉಪಾಧ್ಯಾಯರಿಗೆ ಶಿಕ್ಷಕರು ಮತ್ತು ತಂದೆ ತಾಯಿಗಳ ಜೊತೆ ಅದರಲ್ಲೂ ಗಣಿತ ಹಾಗೂ ವಿಜ್ಞಾನ ಶಿಕ್ಷಣದಲ್ಲಿ ಬಹಳ ನಿಕಟವಾಗಿ ದುಡಿಯುತ್ತಿದ್ದಾರೆ.  ಕಾರ್ಯ ಶಿಬಿರಗಳನ್ನು ನಡೆಸುವುದು ಅದರಲ್ಲೂ ವೃತ್ತಿನಿರತ ಹಾಗೂ ತರಬೇತಿ ಶಿಕ್ಷಕರಿಗೆ ಕಾರ್ಯ ಶಿಬಿರಗಳನ್ನು ಚಟುವಟಿಕೆ ಆಧಾರಿತ ಶಿಕ್ಷಣಕ್ಕೆ ಉತ್ತೇಜನ ನೀಡುವುದಕ್ಕಾಗಿ ನಡೆಸುವುದು ಕಡಿಮೆ ಖರ್ಚಿನ ಬೋಧನಾ ಮತ್ತು ಕಲಿಕೆ ಸಾಮಾಗ್ರಿಗಳನ್ನು ವಿನ್ಯಾಸಗೊಳಿಸುವುದು, ತಯಾರಿಸುವುದು, ದೊರಕಿಸಿಕೊಳ್ಳುವುದು ಮತ್ತು ವಿತರಿಸುವುದು-ಇವೆಲ್ಲಾ ಅವರ ಪ್ರಯತ್ನಗಳ ಭಾಗಗಳಾಗಿವೆ.  ಇವರು ಅನೇಕ ಶಾಲೆಗಳಲ್ಲಿ ಗಣಿತದ ಲ್ಯಾನ್ ಗಳನ್ನು ಸ್ಥಾಪಿಸಿದ್ದಾರೆ.  ಹಾಗೆಯೇ ಸೈನ್ಸ್ ಡಿಸ್ಕವರಿ (ವಿಜ್ಞಾನ ಶೋಧನಾ) ರೂಂ ಗಳನ್ನು ವಿನ್ಯಾಸ ಗೊಳಿಸಿದ್ದಾರೆ.  ಪ್ರಸ್ತುತ ಅವರು ಎನ್.ಸಿ.ಆರ್.ನ  ನಾಲ್ಕು ಪ್ರಗತಿಪರ ಶಾಲೆಗಳಲ್ಲಿ ಪ್ರಾಥಮಿಕ ಶಾಲಾ ಗಣಿತದ ನವೀನ ವ್ಯಾಸಂಗ ಕ್ರಮವನ್ನು ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸುವ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ.  ಇದರಲ್ಲಿ ವ್ಯಾಸಂಗ ಕ್ರಮ ವಿನ್ಯಾಸ ರಚನೆ, ಮಾಡ್ಯೂಲ್ ತಯಾರಿಕೆ, ತರಗತಿ ವ್ಯವಹರಣೆಗಳು, ಮೌಲ್ಯಮಾಪನಗಳ ಮಾದರಿ ತಯಾರಿಕೆ ಮುಂತಾದವು ಸೇರಿವೆ.  ಅವರು ತಾವಿರುವ ಪಶ್ಚಿಮ ದೆಹಲಿಯ ಶಾಕುರ್ಪುರ್ಗಳಲ್ಲಿ ಪ್ರಾಥಮಿಕ ಪೂರ್ವ ಮತ್ತು ಪ್ರಾಥಮಿಕ ಮಟ್ಟದ ಪ್ರಥಮ ಪೀಳಿಗೆ ವಿದ್ಯಾರ್ಥಿಗಳನ್ನುಳ್ಳ ಪ್ರಾಯೋಗಿಕ ಶಾಲೆಗಳನ್ನು ನಡೆಸುತ್ತಿದ್ದಾರೆ.  ಈ ಶಾಲೆಯು ಗಣಿತದಲ್ಲಿ ನವೀನ ವಿಧಾನಗಳನ್ನು ಹೊಂದಿರುವುದೇ ಅಲ್ಲದೆ ಶ್ರೇಣಿ ರಹಿತ ಬೋಧನಾ ಕ್ರಮವನ್ನುಳ್ಳ ಒಂದು ಸಮಗ್ರ ಯೋಜನಾ ವಿಧಾನವನ್ನು ಅನುಸರಿಸುತ್ತದೆ.  ಜೋಡೋ ಗ್ಯಾನ್ ಯಾರಿಂದಲೂ ನಿಧಿ ಪಡೆಯದ, ಲಾಭ ನಿರೀಕ್ಷೆ ಇಲ್ಲದ ಸಾಮಾಜಿಕ ಸಂಸ್ಥೆಯಾಗಿದೆ.  ಮಕ್ಕಳು ವಿಚಾರಣಾ ಆಧರಿತ ಕಲಿಕೆಯ ಹಾದಿಯಲ್ಲಿ ಸಾಗುವಂತೆ ಮಾಡುವುದಕ್ಕಾಗಿ ಗುಣಮಟ್ಟದ ಶಿಕ್ಷಣ ನೀಡಲು ತಮ್ಮನ್ನು ತೊಡಗಿಸಿಕೊಂಡ ಎಲ್ಲಾ ಸಂಸ್ಥೆಗಳು ಮತ್ತು ವ್ಯಕ್ತಿಗಳ ನಡುವೆ ಸಂಪರ್ಕ ಏರ್ಪಡಿಸಿ ಈ ಕಾರ್ಯವನ್ನು ಸಫಲಗೊಳಿಸುವ ಉದ್ದೇಶ ಉಳ್ಳವರಾಗಿದ್ದಾರೆ.

http://www.jodogyan.org

ಡಿ.ಆರ್.ಸಿ.ಎಸ್.ಸಿ. ಎಂಬುದು ಸರ್ಕಾರೇತರ ಅಭಿವೃದ್ಧಿ ಸಂಸ್ಥೆ ಮತ್ತು ಇದು ಪಶ್ಚಿಮ ಬಂಗಾಲದ 12 ಜಿಲ್ಲೆಗಳಲ್ಲಿ ಮತ್ತು ಇತರೆ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.  ಪರಿಸರಮಿತ್ರ, ಆರ್ಥಿಕವಾಗಿ ಸಮಂಜಸ, ಸಾಮಾಜಿಕವಾಗಿ ನ್ಯಾಯಪರವಾದ ಮತ್ತು ಪರಸ್ಪರ ಸಹಕಾರದಿಂದ ಅಭಿವೃದ್ಧಿ ಪಡಿಸಲಾದ ತತ್ವಗಳು ಮತ್ತು ಸಕ್ರಿಯ ಶ್ರಮದಿಂದ ನೈಸರ್ಗಿಕ ಸಂಪನ್ಮೂಲಗಳನ್ನು ಸುಸ್ಥಿರ ರೀತಿಯಲ್ಲಿ ನಿರ್ವಹಿಸಿಕೊಂಡು ಬರುವ ಮೂಲಕ ಗ್ರಾಮೀಣ ಬಡವರ ಆಹಾರ ಮತ್ತು ಜೀವನೋಪಾಯ ಭದ್ರತೆ ಒದಗಿಸುವುದು ಇದರ ಪ್ರಮುಖ ಉದ್ದೇಶ.  ಎಲ್ಲರಿಗೂ ಅದರಲ್ಲೂ ಅಸಂಘಟಿತ ವಲಯದ ಕೆಲಸಗಾರರು, ದೇಶೀ ಸಮುದಾಯಗಳು ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರು/ಭೂರಹಿತ ಕಾರ್ಮಿಕರು ಮುಂತಾದವರಿಗೆ ನ್ಯಾಯ ದೊರಕಿಸಿ ಕೊಡುವುದಕ್ಕಾಗಿ ವಿವಿಧ ಸರ್ಕಾರೇತರ ಸಂಸ್ಥೆಗಳು, ಸಿಬಿಓಗಳು ಮತ್ತು ವ್ಯಕ್ತಿಗಳ ಹೋರಾಟವನ್ನು ಎತ್ತಿ ತೋರಿಸಲು ಮತ್ತು ಅನೇಕ ಸಾಮಾಜಿಕ ಆರ್ಥಿಕ ಸಮಸ್ಯೆಗಳನ್ನು ಕುರಿತು ಮಾಹಿತಿಯನ್ನು ಸಂಗ್ರಹಿಸಿ ಸಂಕಲಿಸಿ ಪ್ರಸಾರ ಮಾಡುವುದಕ್ಕಾಗಿ ಒಂದು ಸಂಪನ್ಮೂಲ ಕೇಂದ್ರವಾಗಿ ಡೆವಲಪ್ಮೆಂಟ್ ರಿಸರ್ಚ್ ಕಮ್ಯುನಿಕೇಷನ್ ಅಂಡ್ ಸರ್ವಿಸ್ ಸೆಂಟರ್ ಅನ್ನು 1982ರಲ್ಲಿ ರಚಿಸಲಾಯಿತು.  1992ರಿಂದ ಗ್ರಾಮೀಣ ಬಡಜನರಿಗಾಗಿ ಆಹಾರ ಮತ್ತು ಜೀವನೋಪಾಯ ಭದ್ರತೆಯ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲದ ಸುಸ್ಥಿರ ನಿರ್ವಹಣೆಗೆ ಈ ಕೇಂದ್ರವು ಹೆಚ್ಚು ಗಮನವನ್ನು ನೀಡುತ್ತಿದೆ.  ಈ ಒಂದು ಪಯಣದಲ್ಲಿ ಡಿ.ಆರ್.ಸಿ.ಎಸ್.ಸಿ. ಯುವ ಜನರ ಸಹಯೋಗದೊಂದಿಗೆ ಕೆಲಸ ಮಾಡಬೇಕಾದ ಅಗತ್ಯವನ್ನು ಮನಗಂಡಿತು ಮತ್ತು ಶಾಲೆಗಳು ಮತ್ತು ಗ್ರಾಮಾಧಾರಿತ ಗುಂಪುಗಳಲ್ಲಿ ನಿಸರ್ಗವನ್ನೇ ಕಲಿಕೆಯ ಸಾಧನವಾಗಿ ಕೇಂದ್ರೀಕರಿಸುತ್ತಾ ಬದುಕು ಮತ್ತು ಜೀವನೋಪಾಯಕ್ಕೆ ಅಭಿಮುಖವಾದ ಸಕ್ರಿಯ ಸಂಶೋಧನೆಯನ್ನು  ಪ್ರಾರಂಭಿಸಿದ್ದಾರೆ.   ಇದು ಮಕ್ಕಳು ಹಾಗೂ ಶಿಕ್ಷಕರ ಪಾಠಯೋಜನೆಗಳು, ಪುಸ್ತಕಗಳು, ವಿಚಾರಗಳು ಮತ್ತು ಸಾಮಾಗ್ರಿ ತಯಾರಿಸುವುದಕ್ಕೆ ನೆರವು ನೀಡುತ್ತಿದೆ.  ಈ ಸಂಪನ್ಮೂಲ ಕೇಂದ್ರವು ಸ್ಥಳೀಯ ಸರ್ಕಾರೇತರ ಸಂಸ್ಥೆಗಳು ಮತ್ತು ಅಭಿವೃದ್ಧಿ ಸಹಕಾರದ ಗುಂಪುಗಳ ಒಂದು ಜಾಲದ ಮೂಲಕ ತನ್ನ ಸೇವೆಯನ್ನು ವಿಸ್ತರಿಸಲು ಪ್ರಾರಂಭಿಸಿದೆ.

http://www.drcsc.org

 ತಮಿಳು ನಾಡು ಸೈನ್ಸ್ ಫೋರಂ (TNSF) ವಿಜ್ಞಾನವನ್ನು ಜನಪ್ರಿಯಗೊಳಿಸುವ ಉದ್ದೇಶವುಳ್ಳ ವಿಜ್ಞಾನಿಗಳ ವೇದಿಕೆಯಾಗಿ ಮದ್ರಾಸು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳ ತಂಡದಿಂದ 1980ರಲ್ಲಿ ಪ್ರಾರಂಭವಾಯಿತು.  ಎಂಬತ್ತನೇ ದಶಕದ ಕೊನೆ ಭಾಗದಲ್ಲಿ TNSF ಈ ದೇಶದ ಪೀಪಲ್ಸ್ ಸೈನ್ಸ್ ಮೂವ್ ಮೆಂಟ್ ಸೇರಿಕೊಂಡಿತು ಮತ್ತು ಪರಿಸರವಾದ, ತಮಿಳಿನಲ್ಲಿ ವಿಜ್ಞಾನ ವಿಷಯಗಳ ಉತ್ಪಾದನೆ ಮತ್ತು ದೈನಂದಿನ ಬದುಕಿಗೂ ವಿಜ್ಞಾನ ಶಿಕ್ಷಣಕ್ಕೂ ಸಂಬಂಧ ಕಲ್ಪಿಸಿ ತನ್ನ ಕಾರ್ಯ ಕ್ಷೇತ್ರವನ್ನು ಪುನಾರೂಪಿಸಿಕೊಂಡಿತು.

90ರ ದಶಕದಲ್ಲ್ಲಿ ತಮಿಳುನಾಡಿನ ಪೂರ್ಣ ಸಾಕ್ಷರತಾ ಆಂದೋಲನವಾದ ಅರಿವೊಳಿಲ್ಯಕ್ಕಮ್ ನಲ್ಲಿ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಂಡು ಇದು ಒಂದು ಜನಾಂದೋಲನವಾಗಿ ಪರಿವರ್ತಿತವಾಯಿತು. ಗ್ರಾಮೀಣ ಸಮಾಜದ ಕಡುಬಡವ ವರ್ಗದ ಅಗತ್ಯಗಳೊಂದಿಗೆ ಗುರುತಿಸಿ ಕೊಂಡಿತು.  ಈ ಕಾರ್ಯಕ್ಷೇತ್ರ ಇನ್ನಷ್ಟು ಬದಲಾಗಿ ವಿಸ್ತೃತ ಕಾರ್ಯಕ್ಷೇತ್ರವುಳ್ಳ ಶಾಲಾ ಶಿಕ್ಷಣ (ಶಿಕ್ಷಣದ ಸಾರ್ವತ್ರೀಕರಣ, ಸಮುದಾಯ ಜಾಗೃತಿ ವ್ಯಾಸಂಗಗಿಮತ್ತು ಬೋಧನಾಶಾಸ್ತ್ರ) ಗ್ರಾಮೀಣ ಮಹಿಳೆಯರ ಆರೋಗ್ಯ (ಅದರಲ್ಲೂ ಅವರ ಸಂತಾನಾಭಿವೃದ್ಧಿ ಆರೋಗ್ಯ) ಕ್ಷೇತ್ರಕ್ಕೆ ವಿಸ್ತಾರವಾಯಿತು.

ಇಂದು TNSF ನಲ್ಲಿ 12,000ಕ್ಕೂ ಹೆಚ್ಚು ಸದಸ್ಯರಿದ್ದಾರೆ.  ಜ್ಞಾನಿಗಳು, ಕಾಲೇಜು ಪ್ರೋಫೆಸರುಗಳು ಮತ್ತು ಶಾಲಾ ಉಪಾಧ್ಯಾಯರುಗಳು ಮಾತ್ರವಲ್ಲದೆ, ರೈತರು, ಸ್ವಸಹಾಯ ಗುಂಪುಗಳ ಮಹಿಳೆಯರು, ಹೇಳಬೇಕೆಂದರೆ ಸಮಾಜದ ಎಲ್ಲ ರಂಗಗಳ ಜನರು ಇದರ ಸದಸ್ಯರಾಗಿದ್ದಾರೆ.  ವಿಜ್ಞಾನವನ್ನು ಜನಪ್ರಿಯಗೊಳಿಸುವುದು, ವಿಜ್ಞಾನ ಸಂಬಂಧಿತ ಸಾಮಾಗ್ರಿಗಳ ಪ್ರಕಟಣೆ, ವಯಸ್ಕರ ಶಿಕ್ಷಣ, ಮತ್ತು ನಿರಂತರ ವಿದ್ಯಾಭ್ಯಾಸ ಆಂದೋಲನ ಪ್ರಾಥಮಿಕ ಶಿಕ್ಷಣ ಪ್ರಯತ್ನಗಳು ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಪ್ರಯತ್ನಗಳು, ಗ್ರಾಮೀಣ ಮಹಿಳಾಭಿವೃದ್ಧಿ ಮತ್ತು ಅವರಿಗೆ ಆದಾಯ ಗಳಿಕೆ ದೊರಕಿಸುವ ಅನೇಕ ಕಾರ್ಯಕ್ರಮಗಳನ್ನು ಈ ಸಂಸ್ಥೆ ಹಮ್ಮಿಕೊಂಡು ನಡೆಸಿಕೊಂಡು ಬರುತ್ತಿದೆ.  ಶಿಕ್ಷಣ ರಂಗಕ್ಕೂ ಈ ಫೋರಂ ಸಮೃದ್ಧಿ ಕೊಡುಗೆ ನೀಡುತ್ತಿದೆ.  ತುಳಿರ್ (ಮಕ್ಕಳಿಗಾಗಿ ಮಾಸಿಕ ವಿಜ್ಞಾನ ಮ್ಯಾಗಜೈನು) ವಿಳುದು (ಶಾಲಾ ಶಿಕ್ಷಕರಿಗಾಗಿ ಒಂದು ತ್ರೈಮಾಸಿಕ) ಸಿರಗು (ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಅಭಿವೃದ್ಧಿ ಕುರಿತ ಕಾರ್ಯನೀತಿ ಸಮಸ್ಯೆಗಳನ್ನು ಕುರಿತು ಚರ್ಚಿಸುವ ಒಂದು ಮಾಸಿಕ ಮತ್ತು ಅರಿವು ತೇನ್ರರ್ (ನವ ಸಾಕ್ಷತರಿಗಾಗಿ ಒಂದು ಬ್ರಾಡ್ ಶೀಟ್) ಮುಂತಾದವನ್ನು ಹೊರತರುತ್ತದೆ.  ಜಂತರ್ ಮಂತರ್ ಬೆಳದ ಮಕ್ಕಳ ಓದುವ ಆಸಕ್ತಿ ಪೂರೈಸುತ್ತದೆ.  ಸಮಾರು 250ಕ್ಕೂ ಹೆಚ್ಚು ಕೃತಿಗಳನ್ನು  TNSF ಪ್ರಕಟಿಸಿದೆ.  ಅವುಗಳಲ್ಲಿ ಬಹುಪಾಲು ಸಾಮಾನ್ಯ ವಿಜ್ಞಾನಕ್ಕೆ ಸಂಬಂಧಪಟ್ಟಿವೆ.

http://www.tnsf.in/

ಮಿ.ಡೇವಿಡ್ ಹಾರ್ಸಬರ್ಗ್, ನೀಲ ಭಾಗ್, ಕರ್ನಾಟಕ ಇವರಿಂದ ತರಬೇತಿ ಹೊಂದಿದ ಇಬ್ಬರು ಶಿಕ್ಷಕರು 1978ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು.  ಅಂದಿನಿಂದ ರಾಜಾಸ್ಥಾನದ ಜಯಪುರ ನಗರದ ಹೊರ ವಲಯದಲ್ಲಿ ಇರುವ ದಿಗಂತರ್ ಶಿಕ್ಷಣ ಏವಂಖೇರ್ ಕುಪ್ ಸಮಿತಿಯಿಂದ ಅತಿ ಬಡವ ಅಲ್ಪ ಸಂಖ್ಯಾತ ಸಮುದಾಯಗಳ ಮಕ್ಕಳಿಗೆ ಪರ್ಯಾಯ ಗುಣ ಮಟ್ಟದ ಶಿಕ್ಷಣವನ್ನು ಒದಗಿಸಲು ಶ್ರಮಿಸುತ್ತದೆ.  ಮಕ್ಕಳು ವಿಮರ್ಶಾತ್ಮಾಕವಾಗಿ ಯೋಚಿಸುವ ಶಕ್ತಿಯ ಜೊತೆಯಲ್ಲಿ ಸ್ವ ಪ್ರೇರಿತವಾಗಿ, ಸ್ವತಂತ್ರವಾಗಿ ಕಲಿಕೆಯಲ್ಲಿ ತೊಡಗುವಂತೆ ಮಾಡುವುದೇ ಶಿಕ್ಷಣದ ಉದ್ದೇಶವಾಗಬೇಕು ಎಂಬುದು ದಿಗಂತರ್ ನ ನಂಬಿಕೆ.  ಈ ವಿಚಾರವನ್ನೇ ಆಧಾರವಾಗಿಟ್ಟು ಕೊಂಡು ಎಲ್ಲ ಮಕ್ಕಳಿಗೂ ಶಿಕ್ಷಣಕ್ಕೆ ಪ್ರವೇಶಾವಕಾಶ ದೊರಕುವಂತೆ ಮಾಡುವುದಕ್ಕೆ ಶ್ರಮಿಸುತ್ತಿದೆ.

ಪ್ರಸ್ತುತ ದಿಗಂತರ್ ಜಯಪುರದ ಹೊರವಲಯದಲ್ಲಿ ತನ್ನದೇ ಶಾಲೆಗಳನ್ನು ನಡೆಸುತ್ತಿದೆ.  ಈಗ ದಿಗಂತರ್ 4 ಯೋಜನೆಗಳನ್ನು ನಡೆಸುತ್ತಿದೆ - ದಿಗಂತರ್ ವಿದ್ಯಾಲಯ (ಡಿ.ವಿ.) ದಿ ಅಕ್ಯಾಡೆಮಿಕ್ ರಿಸೋರ್ಸ್ ಯುನಿಟ್ (ಟಿ.ಎ.ಆರ್.ಯು.) ದಿ ಟೀಂ ಸೋರ್ಸ್ ಸಪೋರ್ಟ್ ಯೂನಿಟ್ (ಟಿ.ಆರ್.ಎಸ್.ಯು.) ಮತ್ತು ಶಿಕ್ಷಾ ಸಮರ್ಥನ್ ಪ್ರಾಜೆಕ್ಟ್ (ಎನ್.ಎನ್.ಪಿ) ಅನ್ನು ಜಯಪುರದ  ಫಾಗಿ ಯಲ್ಲಿ ನಡೆಸುತ್ತಿದೆ.

http://www.digantar.org

ಪ್ರಥಮ್ ಪುಸ್ತಕಗಳು:

ಭಾರತದ ಮಕ್ಕಳಲ್ಲಿ ನವ ಚೇತನ ನಿರ್ಮಾಣ! ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಮೈಗೂಡಿಸುವ ಸಲುವಾಗಿ ಹಮ್ಮಿಕೊಂಡ ರಾಷ್ಟ್ರ ವ್ಯಾಪಿ ಆಂದೊಲನ ವಾದ ರೀಡ್ ಇಂಡಿಯಾ ಮೂವ್ಮೆಂಟಿನ  ಒಂದು ಭಾಗವಾಗಿ ಪ್ರಥಮ್ ಪುಸ್ತಕಗಳು ಸಂಸ್ಥೆಯನ್ನು 2004 ರಲ್ಲಿ ಸ್ಥಾಪಿಸಲಾಯಿತು. ಪ್ರಥಮ್ ಪುಸ್ತಕಗಳು ಒಂದು ಲಾಭ ನಿರೀಕ್ಷೆಯಿಲ್ಲದ ಸಂಸ್ಥೆ. ಇದನ್ನು ಈ ಮುಂದಿನ ಉದ್ದೇಶಗಳಿಗಾಗಿ ಸ್ಥಾಪಿಸಲಾಗಿದೆ:

  • ಸುಲಭ ಲಭ್ಯ ಬೆಲೆಗಳಲ್ಲಿ ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಭಾರತದ ಎಲ್ಲಾ ಮಕ್ಕಳಿಗೂ  ದೊರಕುವಂತೆ ಮಾಡುವುದು.
  • ಮಕ್ಕಳ ಪುಸ್ತಕಗಳನ್ನು ಅವು ಭಾರತದ ಮೂಲೆ ಮೂಲೆಗಳಲ್ಲಿ ಇರುವ ಮಕ್ಕಳಿಗೆ ದೊರಕುವಂತೆ ಮಾಡಲು ಭಾರತದ ವಿವಿಧ ಭಾಷೆಗಳಲ್ಲಿ ಪ್ರಕಟಿಸುವುದು.

"ಪ್ರತಿಮಗುವಿನ ಕೈಯಲ್ಲೂ ಒಂದು ಪುಸ್ತಕ "ಎಂಬುದು  ನಮ್ಮ ಧ್ಯೇಯ ಮತ್ತು ಪ್ರಜಾಸತ್ತಾತ್ಮಕ ನೆಲೆಗಟ್ಟಿನಲ್ಲಿ ಮಕ್ಕಳು ಓದುವ ಆನಂದವನ್ನು ಅನುಭವಿಸುವಂತೆ ಮಾಡುವುದು ನಮ್ಮ ಗುರಿ. ಕಳೆದ  ಏಳು ವರ್ಷಗಳಲ್ಲಿ ಮಿಲಿಯಾಂತರ ಮಕ್ಕಳಿಗೆ ಓದುವ ಆನಂದ ಲಭಿಸುವಂತೆ ಮಾಡುವ ಸಲುವಾಗಿ ನಾವು 11 ಭಾಷೆಗಳಲ್ಲಿ 235 ಕೃತಿಗಳನ್ನು ಪ್ರಕಟಿಸಿರುತ್ತೇವೆ!

ಪುಸ್ತಕಗಳ ವಸ್ತು ವಿಷಯದಲ್ಲಿ ನಾವು ಉದಾರ ಹಾಗು ವ್ಯಾಪಕ ಕಾರ್ಯ ನೀತಿಯನ್ನು ಹೊಂದಿದ್ದು(ವಿವಿಧ ಭಾಷೆಗಳಲ್ಲಿ)  ಕ್ರಿಯೇಟಿವ್ ಕಾಮನ್ಸ್ ಚೌಕಟ್ಟಿನಲ್ಲಿ 50ಕ್ಕೂ ಹೆಚ್ಚು ಪುಸ್ತಕಗಳನ್ನುಪ್ರಕಟಿಸಿರುತ್ತೇವೆ.ಆಸ್ಸಾಮಿ,ಫ್ರೆಂಚ್,ಸ್ಪ್ಯಾನಿಷ್ ಮತ್ತು ಜರ್ಮನ್ ನಂತಹ ಭಾಷೆಗಳಿಗೆ ಅನುವಾದಿಸಲಾಗಿದೆ.ಅಲ್ಲದೆ ಈ ಪುಸ್ತಕಗಳ ನೂರಾರು ಮರುಜನ್ಯ ಆವೃತ್ತಿಗಳನ್ನು ಅಂದರೆ- ಪ್ರಸ್ತುತ ರುವ ಪುಸ್ತಕಗಳಿಂದ ಹೊಚ್ಚ ಹೊಸ ಪುಸ್ತಕಗಳಿಂದ ಹಿಡಿದು ಧ್ವನಿ ಪುಸ್ತಕಗಳ ನಿರ್ಮಾಣವನ್ನು ಸಹ ನಾವು ಮಾಡಿದ್ದೇವೆ!

 

http://prathambooks.org/
ರಿಷಿ ವ್ಯಾಲಿ ಇನ್ಸ್ಟಿಟ್ಯೂಟ್ ಫಾರ್ ಟೀಚರ್ಸ್ ಎಡುಕೇಷನ್, ಕೃಷ್ಣಮೂರ್ತಿ ಫೌಂಡೇಷನ್, ಇಂಡಿಯ:

ಶಿಕ್ಷಕರ ಬೆಳವಣಿಗೆಯನ್ನು ಪೋಷಿಸುವುದು ಪರಿಪೂರ್ಣ ಜ್ಞಾನ ಪ್ರಸಾರಕ್ಕೆ ಒತ್ತನ್ನು ನೀಡಿ ಅವರು ಶಿಕ್ಷಣದ ತಾತ್ವಿಕ ಆಯಾಮ ಮತ್ತು ಬೋಧನಾ ಅಭ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುವಂತೆ ಮಾಡುವುದು ರಿಷಿವ್ಯಾಲಿ ಎಡುಕೇಷನ್ ಸೆಂಟರ್ ನಿರಂತರ ಧ್ಯೇಯೋದ್ದೇಶ. ರಿಷಿವ್ಯಾಲಿ ಇನ್ಸ್ಟಿಟ್ಯೂಟ್ ಫಾರ್ ಟೀಚರ್ಸ್ ಎಡುಕೇಷನ್ (RVITE ) ಅನ್ನು.  ಈ ಧ್ಯೇಯೋದ್ದೇಶದ ಸಾಧನೆಗಾಗಿ ಸ್ಥಾಪಿಸಲಾಯಿತು.

RVITE ವ್ಯಾಸಂಗ ಕ್ರಮಗಳ ಅಭಿವೃದ್ಧಿ ಮಾಡಿದರೆ ,ರಿಷಿ ವ್ಯಾಲಿ ಶಾಲೆಯು ಶಿಕ್ಷಕರಿಗೆ ವೃತ್ತಿ ನಿರತರಾಗಿರುವಾಗಲೇ ಕಲಿಕೆಗೆ ಸೂಕ್ತ ಬೆಂಬಲ ನೀಡುತ್ತಿದೆ.  ಇದಲ್ಲದೆ ಇದು ವಿಶಾಲ ಪರಿಧಿಯ ಶಾಲೆಗಳು, ಶಿಕ್ಷಕರು ಮತ್ತು ಭಾವಿ ಶಿಕ್ಷಕರಿಗೂ ಈ ಸೌಲಭ್ಯ ಒದಗಿಸಲು ಸೂಕ್ತ ಸೌಕರ್ಯಗಳು ಮತ್ತು ಕಾರ್ಯಕ್ರಮಗಳನ್ನು ಅಭಿವೃದ್ಧಿ ಪಡಿಸಲೂ ಯೋಜನೆಯನ್ನು ತಯಾರಿಸುತ್ತಿದೆ.

1. ಪ್ರಸಕ್ತ RVITE ನ ಬೋಧಕವರ್ಗ ಈ ಮುಂದಿನ ಕಾರ್ಯಕ್ರಮಗಳಲ್ಲಿ ನಿರತವಾಗಿದೆ.

  • ರಿಂದ 5 ನೇ ತರಗತಿಗಳಿಗೆ ಎರಡನೇ ಭಾಷೆಯಾಗಿ ಹಿಂದಿಗೆ
  • 6 ರಿಂದ 7 ನೇ ತರಗತಿಗಾಗಿ (ಇಂಗ್ಲಿಷ್ ಮತ್ತು ತೆಲಗು) ವಿಜ್ಞಾನದ ಬಗ್ಗೆ, ವ್ಯಾಸಂಗ ಕ್ರಮಗಳು ಮತ್ತು ವಿಷಯ ಸಾಮಾಗ್ರಿ ಅಭಿವೃದ್ಧಿ.

2. ವಿವಿಧ ಬಗೆಯ ಶಾಲೆಗಳ ಶಿಕ್ಷಕರಿಗಾಗಿ ಕಾರ್ಯ ಶಿಬಿರಗಳು ಮತ್ತು ಮಿನಿ  ಕೋರ್ಸುಗಳು.

3. ಅಜೀಂ ಪ್ರೇಂಜಿ ಪ್ರತಿಷ್ಠಾನದ ಸಹಯೋಗದೊಂದಿಗೆ, ವೃತ್ತಿನಿರತ ಉಪಾಧ್ಯಾಯರುಗಳಿಗಾಗಿ 2 ವರ್ಷದ (ಬಿ.ಎಡ್. ಹಂತದ) ಶಿಕ್ಷಕ ಶಿಕ್ಷಣ ಕಾರ್ಯಕ್ರಮವನ್ನು ಸಿದ್ಧಪಡಿಸುವುದು. 

http://www.rishivalley.org

 

ಕೋಲ್ಕತಾದಲ್ಲಿರುವ ವಿಕ್ರಮಶೀಲ ಶಿಕ್ಷಣ ಸಂಪನ್ಮೂಲ ಸೊಸೈಟಿ,( Vikramshila Education Resource Society) ಪಶ್ಚಿಮ ಬಂಗಾಳ ಮೂಲದ ಸಂಸ್ಥೆ; 1989 ರಿಂದ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರತವಾಗಿದ್ದು ಗುಣಮಟ್ಟದ ಶಿಕ್ಷಣ ಪಡೆಯಬೇಕೆಂಬ ಎಲ್ಲ ಮಕ್ಕಳ ಕನಸನ್ನು ನನಸುಮಾಡುವ ದಿಶೆಯಲ್ಲಿ ವಿಶೇಷವಾಗಿ ಶಿಕ್ಷಕರು, ಮಕ್ಕಳು, ಸಮುದಾಯಗಳು ಮತ್ತು  ಸರ್ಕಾರದ ವ್ಯವಸ್ಥೆಯ ಜೊತೆಯಲ್ಲಿ ಅವಿರತ ಶ್ರಮಿಸುತ್ತಿದೆ.

ವಿಕ್ರಮಶೀಲ  ಸಂಸ್ಥೆಯು ಸಮಾಜದ ಅನುಕೂಲ ರಹಿತ ಮತ್ತು ಕಡಿಮೆ ಸಂಪನ್ಮೂಲವುಳ್ಳ ವರ್ಗಗಳ ಜನರ ನಡುವೆ ಕೆಲಸಮಾಡಿ ಅವರ ಜೀವನದಲ್ಲಿ ಶಿಕ್ಷಣವು ಅರ್ಥಪೂರ್ಣ ಮತ್ತು ಸುಸಂಬಂಧಿತ ಪಾತ್ರವನ್ನು  ವಹಿಸುವಂತೆ ಮಾಡಲು ಶ್ರಮಿಸುತ್ತಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ವಿಕ್ರಮಶೀಲ ಭಾರತದಾದ್ಯಂತ ಕ್ರಿಯಾ ಸಂಶೋಧನೆ ಮತ್ತು ಶಿಕ್ಷಕರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 200ಕ್ಕೂ ಹೆಚ್ಚು ಜನಸಾಮಾನ್ಯ ಮಟ್ಟದ ಸಂಸ್ಥೆಗಳು, 25,000 ಮಂದಿ ಶಿಕ್ಷಕರು ಮತ್ತು 14, 00,000 ಮಕ್ಕಳಿಗೆ ಸೌಲಭ್ಯ ಒದಗಿಸಿದೆ.

ವಿಕ್ರಮಶೀಲ  ಸಂಸ್ಥೆಯು ಶಿಕ್ಷಕ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಮಕ್ಕಳ ಕಲಿಕೆಯ ಬೆಂಬಲ ಕಾರ್ಯಕ್ರಮಗಳ ಮೂಲಕ ಮಕ್ಕಳು, ಶಿಕ್ಷಕರು ಮತ್ತು ಸರ್ಕಾರಿ ವ್ಯವಸ್ಥೆಗಳ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ತನ್ನ ವಿವಿಧ ಕ್ರಿಯಾ ಸಂಶೋಧನೆ ಕಾರ್ಯಕ್ರಮಗಳ ಮೂಲಕ ಈ ಸಂಸ್ಥೆಯು, ತನ್ನ ಕೇಂದ್ರಗಳಲ್ಲಿ ಪೌರತ್ವ ಶಿಕ್ಷಣ ಒದಗಿಸಲು,  ಮದ್ರಸಾ ಶಿಕ್ಷಣದಲ್ಲಿ ಗುಣಮಟ್ಟ ಸುಧಾರಣೆ ಮಾಡಲು ಮತ್ತು ಪದ್ಧತಿ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಉದ್ಯೋಗ ತರಬೇತಿ ಶಿಕ್ಷಣ ಒದಗಿಸಲು ಪ್ರಯತ್ನಿಸುತ್ತಿದೆ. 

ಜೊತೆಗೆ ಸಂಸ್ಥೆಯು ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು,ಸರ್ವಸಮಾನತೆ ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಗಟ್ಟಿ ಧ್ವನಿ ಎತ್ತಿ ಪ್ರಚಾರ ನಡೆಸುತ್ತಿದೆ.. ವಿಕ್ರಮಶೀಲ  ಸಂಸ್ಥೆಯು ತನ್ನ ರಾಜ್ಯದಲ್ಲಿ ರಾಜ್ಯ ಸರ್ಕಾರದ  ವ್ಯವಸ್ಥೆಯ ಜೊತೆಗೂಡಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಮತ್ತು ಹಲವಾರು ರಾಜ್ಯ ಸಂಪನ್ಮೂಲ ಗುಂಪುಗಳ ಸದಸ್ಯ ಸಂಸ್ಥೆಯಾಗಿದೆ.

http://www.vikramshila.org

1931ರಲ್ಲಿ ವಿದ್ಯಾಭವನವು ನಾಲ್ಕು ತರಗತಿಗಳನ್ನುಳ್ಳ ಒಂದು ಚಿಕ್ಕ ಮಾಧ್ಯಮಿಕ ಶಾಲೆಯಾಗಿ ರಾಜಾಸ್ಥಾನದಲ್ಲಿ ಪ್ರಾರಂಭಗೊಂಡಿತು.  ಮಕ್ಕಳಿಗೆ ಪುಸ್ತಕದ ಶಿಕ್ಷಣವನ್ನಷ್ಟೇ ನೀಡದೆ ಅದರಲ್ಲಿ ಚಾರಿತ್ರ್ಯ ವರ್ಧನೆ ಮಾಡುವ ಕಡೆಗೆ ಒತ್ತನ್ನು ನೀಡುತ್ತದೆ. ದೈಹಿಕ, ಸೌಂದರ್ಯಾತ್ಮಕ ಮತ್ತು ನೈತಿಕವಾಗಿ ವಿದ್ಯಾರ್ಥಿಗಳ ಅಭಿವೃಧ್ಧಿಯು ವಿದ್ಯಾಭವನದ ಶೈಕ್ಷಣಿಕ ಕಾರ್ಯಕ್ರಮದ ಅಂಗ ಭಾಗವಾಗಿದೆ.  ವಿದ್ಯಾಭವನವು ಉದಯಪುರದಲ್ಲಿ ಮತ್ತು ಸುತ್ತಮುತ್ತಲೂ 14 ಸಂಸ್ಥೆಗಳನ್ನು ಹೊಂದಿದೆ.  ಈ ಸಂಸ್ಥೆಯ ಪ್ರಸಕ್ತ ಚಟುವಟಿಕೆಗಳಲ್ಲಿ ಶಾಲಾ ಶಿಕ್ಷಣ, ವೃತ್ತೀಯ ಮತ್ತು ತಾಂತ್ರಿಕ ಶಿಕ್ಷಣ, ಶಿಕ್ಷಕ ತರಬೇತಿ, ವಿದ್ಯಾ ಸಂಶೋಧನೆ, ರೈತರ ಬೆಂಬಲ ಮತ್ತು ಕೃಷಿ ಸಂಶೋಧನೆ, ಕೌಶಲ ಹಾಗೂ ಕೆಳ ಮಧ್ಯಮ ವರ್ಗಕ್ಕೆ ತಾಂತ್ರಿಕ ತರಬೇತಿ, ಕೈನಿಂದ ಕಾಗದ ತಯಾರಿಕೆ, ಪಂಚಾಯಿತಿ ರಾಜ್ಯ ಸಿಬ್ಬಂದಿಗೆ ಅಭಿಮುಖ ತರಬೇತಿ, ಅಂಗನವಾಡಿ ಕಾರ್ಯಕರ್ತರಿಗೆ ಅಭಿಮುಖ ತರಬೇತಿ ಇವು ಈ ಸಂಸ್ಥೆಯ ಪ್ರಸಕ್ತ ಚಟುವಟಿಕೆಗಳು.

ವಿದ್ಯಾಭವನದ ಚಟುವಟಿಕೆಗಳ ವಿಸ್ತಾರ ಬಲು ದೊಡ್ಡದು.  ವಿದ್ಯಾಭವನದ ನೆರವು ರಾಜಾಸ್ಥಾನದ ಬೇರೆ ಬೇರೆ ಪಟ್ಟಣಗಳು ಮತ್ತು ಹಳ್ಳಿಗಳ ಮಕ್ಕಳಿಗೆ ವಿಸ್ತರಿಸಿದೆ ಹಾಗೂ ಅದರ ಸಂಸ್ಥೆಗಳು ರಾಜ್ಯದ ಅನೇಕ ಸಂಸ್ಥೆಗಳಿಗೆ ನೆರವು ನೀಡುತ್ತದೆ.  ವಿದ್ಯಾಭವನದ ಬೋಧಿಕ ವರ್ಗದ ಒಂದು ಭಾಗದವರು, ಶಿಕ್ಷಕ ತರಬೇತಿ ಮಾಡ್ಯೂಲ್ ಗಳು ಮತ್ತು ಪಠ್ಯ ಪುಸ್ತಕಗಳೂ ಸೇರಿದಂತೆ ಶಿಕ್ಷಣ ಪ್ಯಾಕೇಜುಗಳನ್ನು ರಚಿಸಲು ಇತರೆ ರಾಜ್ಯ ಸರ್ಕಾರಗಳವರಿಗೆ ಸಹಾಯ ಮಾಡುವುದರಲ್ಲಿ ನಿರತವಾಗಿರುತ್ತಾರೆ.  ಹಾಗೆಯೇ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಅನೇಕ ಶಿಕ್ಷಕರ ಕಾರ್ಯಗಾರಗಳು ಹಾಗೂ ಶಿಕ್ಷಕ ತರಬೇತಿ ಶಿಬಿರಗಳನ್ನು ನಡೆಸಲು ತಾವೇ ಆತಿಥೇಯರಾಗಿರುತ್ತಾರೆ.

ಮಕ್ಕಳನ್ನು ಸಾಮಾಜಿಕ ಜವಾಬ್ದಾರಿಯುಳ್ಳ ಸಮರ್ಥ ಪ್ರಜೆಗಳನ್ನಾಗಿ ಮಾಡಲು ಸಮಾಜದ ಎಲ್ಲಾ ವಿಭಾಗಗಳಿಂದ ಬಂದ ಮಕ್ಕಳಿಗೆ ಪ್ರಜಾಸತ್ತಾತ್ಮಕ ಸರ್ವಧರ್ಮಸಮಭಾವದ ಮತ್ತು ಸಾಮಾಜಿಕವಾಗಿ ಅರ್ಥಪೂರ್ಣವಾದ ಗುಣಮಟ್ಟದ ಶಿಕ್ಷಣಾನುಭವವನ್ನು ಒದಗಿಸಬೇಕೆಂಬ ದರ್ಶನದೃಷ್ಟಿ ವಿದ್ಯಾಭವನದ ನಾಲ್ಕು ಶಾಲೆಗಳದ್ದಾಗಿದೆ.  ವಿದ್ಯಾರ್ಥಿಗಳಿಗೆ ಸಹಕಾರ ಮನೋಭಾವ ತೋರಲು ಮತ್ತು ವೈಯಕ್ತಿಕ ಪೈಪೋಟಿ ಬಿಟ್ಟು ಬಿಡಲು ಪ್ರೋತ್ಸಾಹಿಸಲಾಗುವುದು.  ಈ ಶಾಲೆಗೆ ಬರುವ ಮಕ್ಕಳು ಬಸ್ತಿಗಳಿಂದ ಉದಯಪುರದ ಸುತ್ತ ಮುತ್ತಲ ಗ್ರಾಮೀಣ ಪ್ರದೇಶದಿಂದ, ಸುಖೇರ್ನ ಅನಾಥಾಶ್ರಯದಿಂದ ಮತ್ತು ಕಡಿಮೆ ಆದಾಯದ ಹಾಗೂ ಸಾಮಾಜಿಕವಾಗಿ ಅವಕಾಶ ವಂಚಿತರಾದ ವರ್ಗಗಳಿಂದ ಬಂದವರಾಗಿರುತ್ತಾರೆ.

ವಿದ್ಯಾಭವನ ಎಡುಕೇಶನಲ್ ರಿಸೋರ್ಸ್ ಸೆಂಟರ್ (VBERC) ಅನ್ನು ಬೋಧನಾ ಶಾಸ್ತ್ರದ ವಿಚಾರಗಳ ಕೂಡು ಮಂಥನಕ್ಕಾಗಿ ಮತ್ತು ವಿದ್ಯಾಭವನ ಸಂಸ್ಥೆಗಳವರ ಅನುಭವಗಳನ್ನು ಹಂಚಿಕೊಳ್ಳುವುದಕ್ಕಾಗಿ 1995ರಲ್ಲಿ ಸ್ಥಾಪಿತವಾಯಿತು.  ಅಲ್ಲಿಂದ ಮೊದಲ್ಗೊಂಡು  VBERC ಯು, ಪರಿಕಲ್ಪನೆಗಳು, ವಿಷಯಗಳ ಸ್ವರೂಪ, ಪಠ್ಯ ಪುಸ್ತಕಗಳು ಪಠ್ಯ ಕ್ರಮಗಳು, ಮತ್ತು ವ್ಯಾಸಂಗ ಕ್ರಮಗಳ ಬಗ್ಗೆ ಆಳವಾದ ಅರಿವನ್ನು ಉಳ್ಳ ಸಂಪನ್ಮೂಲ ಗುಂಪುಗಳನ್ನು ಆಶ್ರ್ರಯಿಸುವ ಉದ್ಧೇಶದಿಂದ ಉಪಾಧ್ಯಾಯರ ತರಬೇತಿಯನ್ನು ಏರ್ಪಡಿಸುವುದು ಮುಂತಾದ ವಿವಿಧ ಆಯಾಮಗಳಲ್ಲಿ ರಾಜಾಸ್ಥಾನ, ಛತ್ತೀಸ್ ಘರ್, ಬಿಹಾರ, ಆಂಧ್ರ ಪ್ರದೇಶ ಮತ್ತು ಗುಜರಾತ್ ಸರ್ಕಾರದೊಂದಿಗೆ ಕೆಲಸ ಮಾಡುತ್ತಿದೆ.

http://www.vidyabhavansociety-seminar.org/default.htm

ಶಿಕ್ಷಾಮಿತ್ರ ಮಾಧ್ಯಮಿಕ ಶಾಲೆಗಳಿಗಾಗಿಯೇ ಪ್ರಮುಖವಾಗಿ ಏಪ್ರ್ರಿಲ್ 2005ರಲ್ಲಿ ಸ್ಥಾಪಿತವಾದ ಒಂದು ಪ್ರಾಯೋಗಿಕ ಶಾಲೆ ಮತ್ತು ಸಂಪನ್ಮೂಲ ಕೇಂದ್ರ.  ವಿದ್ಯಾಭ್ಯಾಸ ಒಂದು ಭಾರವೇ ಅಲ್ಲ ಅದೊಂದು ವಿನೋದ ವಿಹಾರ ಎಂದು ಮಾಡುವಲ್ಲಿ ತನ್ಮೂಲಕ ಅದು ಪರಿಣಾಮಕಾರಿಯಾಗುವಂತೆ ಮಾಡುವಲ್ಲಿ ಈ ಶಾಲೆಯು ಪ್ರಯೋಗಗಳನ್ನು ನಡೆಸುತ್ತಿರುವುದೇ ಅಲ್ಲದೆ ಈ ಪ್ರಯೋಗದ ಫಲಗಳು ಎಷ್ಟು ಸಾಧ್ಯವೋ ಅಷ್ಟೂ ವಿದ್ಯಾರ್ಥಿಗಳು ಮತ್ತು ಉಪಾಧ್ಯಾಯರಿಗೆ ತಲುಪುವಂತೆ ಮಾಡಲು ಪ್ರಯತ್ನಿಸುತ್ತಿದೆ.  ಸಂಜೆ ಶಾಲೆಯೊಂದಿದ್ದು ಅದು ಪ್ರಮುಖವಾಗಿ ವೃತ್ತಿಪರ ಶಾಲೆಯಾಗಿದೆ ಮತ್ತು ಆ ಸ್ಥಳದ ಅಷ್ಟೇನು ಅನುಕೂಲಸ್ಥರಲ್ಲದ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸುತ್ತಿದೆ.

ಶಿಕ್ಷಾಮಿತ್ರದ ಶಿಕ್ಷಣ ಸಂಶೋಧನಾ ಕೇಂದ್ರವು (ಇ.ಆರ್.ಸಿ) ವಿಶಾಲ ವೈವಿಧ್ಯದ ಶಿಕ್ಷಣ ಸಂಪನ್ಮೂಲಗಳಿಂದ ಸುಸಜ್ಜಿತವಾಗಿದ್ದು ಶಿಕ್ಷಕರು, ಮೇಲ್ವಿಚಾರಕರು, ಸಂಶೋಧಕರು, ಶಿಕ್ಷಣ ತಜ್ಞರು, ಮಾಧ್ಯಮದವರು, ಸರ್ಕಾರದ ಕಾರ್ಯನೀತಿ ರೂಪಕರು ಸರ್ಕಾರೇತರ ಸಂಸ್ಥೆಗಳು ಮತ್ತು ವಿದ್ವಾಂಸರುಗಳ ಒಂದು ಜಾಲವನ್ನೇ ಹೆಣೆಯುವ ಕಾರ್ಯದಲ್ಲಿ ತನ್ನ ಸೇವೆ ನೀಡಲು ಪ್ರಯತ್ನಿಸುತ್ತಿದೆ. ಈ ಕೇಂದ್ರದಲ್ಲಿ ಒಂದು ಉತ್ತಮ ಶಿಕ್ಷಣ ಗ್ರಂಥಾಲಯವಿದ್ದು ಅನೇಕ ಪುಸ್ತಕಗಳು, ಹಾಡುಗಳು ಮತ್ತು ಚಲನ ಚಿತ್ರಗಳು, ಬೋಧನಾ ಕಲಿಕೆ ಸಾಮಾಗ್ರಿಗಳು, ವರದಿಗಳನ್ನು ಹೊಂದಿದೆ.  ಇವರು ಭಾಷಾ ಕೌಶಲಗಳನ್ನು ಮತ್ತು ನವೀನ ಬೋಧನಾ ವಿಧಾನಗಳನ್ನು ಬೆಳೆಸುವ ಕಡೆಗೆ ಒತ್ತನ್ನು ನೀಡಿ ಶಿಕ್ಷಕರು / ವಿದ್ಯಾರ್ಥಿಗಳ ಕಾರ್ಯಶಿಬಿರಗಳನ್ನು ನಡೆಸುತ್ತಿದ್ದಾರೆ.  ಇವರ ಶಿಕ್ಷಣ ಸಂಪನ್ಮೂಲ ಕೇಂದ್ರವು ಇತರೆ ನವೀನ ವಿಧಾನ ಪ್ರಯೋಗಿಸುವ ಶಿಕ್ಷಕರು, ಶಾಲೆಗಳು, ಶಿಕ್ಷಣ ಸರ್ಕಾರೇತರ ಸಂಸ್ಥೆಗಳಿಗೆ ಸಂಪರ್ಕ ಒದಗಿಸಿ ಕೊಡುತ್ತದೆ.  ಇದು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ  ಶಿಕ್ಷಣ ಸಂಘಗಳು, ಸಂಶೋಧನಾ ಸಂಸ್ಥೆಗಳ ಜೊತೆ ಸಂಪರ್ಕ ಕಲ್ಪಿಸಲು ಆಶಿಸುತ್ತದೆ.

ಈ ಶಾಲೆಯು ಅದರ ಸಂಜೆ ಶಾಲೆಯ ಜೊತೆಗೆ 2010ರ ಡಿಸೆಂಬರ್ನಲ್ಲಿ ಮುಕ್ತಾಯವಾಯಿತು.  ವಿದ್ಯಾರ್ಥಿಗಳು ಶಿಕ್ಷಕರು ಮತ್ತು ತಂದೆ ತಾಯಿಗಳಿಗೆ ಪರಸ್ಪರ ಸಂಪರ್ಕ ಕಲಿಕೆ ಕೇಂದ್ರವಾಗಿ ಕೆಲಸ ಮಾಡುತ್ತಿದೆ.

http://www.shikshamitra-bengal.org

ಸಂಧಾನ್ 1983 ರಲ್ಲಿ ಸ್ಥಾಪಿತವಾದ ಲಾಭ ನಿರೀಕ್ಷೆ ಇಲ್ಲದ, ಸರ್ಕಾರೇತರ ಮತ್ತು ಸರ್ವಧರ್ಮ ಸಮಭಾವದ ಸಂಸ್ಥೆ ವ್ಯಕ್ತಿಗಳು ತಮ್ಮತನವನ್ನು ತಾವೇ ಕಂಡುಕೊಳ್ಳ ಬೇಕೆಂಬ ತತ್ವವನ್ನು ಕಾರ್ಯರೂಪಕ್ಕೆ ತರುವುದನ್ನು ಈ ಸಂಸ್ಥೆ ಹಮ್ಮಿಕೊಂಡಿದೆ.  ವೈವಿಧ್ಯತೆಗೆ  ಬೆಲೆ ನೀಡುವ ಜನರ ಜ್ಞಾನವನ್ನು ಗೌರವಿಸುವ ಮತ್ತು ಕಲಿಯುವ ಬಗ್ಗೆ ಅವರ ಸಾಮರ್ಥ್ಯದಲ್ಲಿ ವಿಶ್ವಾಸ ವಿಡುವ ಮೂಲಭೂತ ಚೌಕಟ್ಟಿನಲ್ಲಿ ಇದರ ಚಟುವಟಿಕೆಗಳು ಬೇರುಬಿಟ್ಟಿವೆ.

ಸಾಮಾಜಿಕ ಆರ್ಥಿಕ ಶಕ್ತಿಗಳು, ಜಾತಿ, ವರ್ಗ ಮತ್ತು ಲಿಂಗಭೇದಗಳು ಸಮಾಜದ ಗಮನಾರ್ಹ ಭಾಗವನ್ನು ಮೂಲೆ ಗುಂಪು ಮಾಡಿದೆ.  ಎರಡು ದಶಕಗಳ ಹಿಂದೆ, ಸಂಧಾನ್ ಹದಿಹರೆಯದವರ ಮತ್ತು ಮಕ್ಕಳ ಸಮಗ್ರ ವಿದ್ಯಾಭ್ಯಾಸಕ್ಕಾಗಿ, ಆರೋಗ್ಯ, ಜೀವನ ಕೌಶಲ ಮತ್ತು ಜೀವನೋಪಾಯಗಳನ್ನು ಶೈಕ್ಷಣಿಕ ಉಪಕ್ರಮಕ್ಕೆ ಬಲು ಹತ್ತಿರ ತಂದು ಒಂದು ರಾಷ್ಟ್ರೀಯ ಸಂಪನ್ಮೂಲ ಕೇಂದ್ರವಾಗಿ ಗಮನೀಯ ಪಾತ್ರವಹಿಸಲು ಮತ್ತು ಮೂಲೆಗುಂಪಾದ ಜನವರ್ಗವನ್ನು ಮುಖ್ಯಧಾರೆಗೆ ತರಲು ಸಹಾಯ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.  ಶೋಧನೆ ಮತ್ತು ಸಹಭಾಗಿತ್ವದ ಮೂಲಕ ಶಾಂತಿ ಮತ್ತು ಪ್ರಗತಿಯ ಸಾಧನೆ ಎಂಬುದನ್ನೇ ಸಂಧಾನ್ ನ ಮುಖ್ಯಧ್ಯೇಯ ಎನ್ನಬಹುದು. 

ಜನತೆ ಘನತೆ ಹಾಗೂ ಸಾಮರಸ್ಯದಿಂದ ಜೀವಿಸ ಬಹುದಾದ ನ್ಯಾಯಪರವಾದ ಮತ್ತು ಸಮಾನತೆಯ ಸಮಾಜ ನಿರ್ಮಾಣವಾಗಬೇಕು ಎಂಬ ಕಾಣ್ಕೆಯಿಂದ ಪ್ರೇರಿತವಾದ ಸಂಧಾನ್, ವ್ಯವಸ್ಥಿತವಾಗಿ ವಿನ್ಯಾಸಗೊಳಿಸಿದ ಶಿಕ್ಷಣದ ಮೂಲಕ ಬಡತನ ಮತ್ತು ಮೂಲೆಗುಂಪು ಮಾಡುವಿಕೆಯ ಒಂದು ಪ್ರಕ್ರಿಯೆಗೆ ತಡೆಒಡ್ಡಲು  ಉದ್ದೇಶಿಸಿದೆ.

http://www.sandhan.org/

ದಿ ಸೊಸೈಟಿ ಫಾರ್ ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಆಫ್ ಹಿಮಾಲಯನ್ (sidh) ಮಧ್ಯಹಿಮಾಲಯದ ಮುಸ್ಸೋವಿಯಿಂದಾಚೆ 12 ಕಿ.ಮೀ.ದೂರದಲ್ಲಿರುವ ಕೆಂಪ್ಪಿ ನಗರದಲ್ಲಿದೆ.  ಉತ್ತರಖಂಡ ರಾಜ್ಯದ ತೆಘರ್ವಾಲ್ ಜಿಲ್ಲೆಯ ಜೌನ್ ಪುರ್ ಬ್ಲಾಕ್ ನಲ್ಲಿರುವ, ಸಿದ್ಧ್ ಸ್ಥಳೀಯ ಮಕ್ಕಳು ಮತ್ತು ಯುವ ಜನತೆಗೆ, ಅರ್ಥಪೂರ್ಣ, ಸಮಂಜಸ ಹಾಗೂ ಪರಿಪೂರ್ಣ ಶಿಕ್ಷಣ ನೀಡಲು ಕಂಕಣಬದ್ಧವಾಗಿದೆ. 

ಶಿಕ್ಷಣವನ್ನು ಸಾಮಾಜಿಕ ಬದಲಾವಣೆಯ ಸಾಧನವಾಗಿ ಬಳಸಿಕೊಳ್ಳಲು ಮತ್ತು ಕೇವಲ ಸಾಮಾಜಿಕ ರಾಜಕೀಯ ರಂಗಗಳಲ್ಲಿ ಅಷ್ಟೇ ಅಲ್ಲದೆ ವ್ಯಕ್ತಿಗಳ ಮನೋ ಭೂಮಿಕೆಗಳಲ್ಲೂ ಹೆಚ್ಚು ಅರ್ಥಪೂರ್ಣವಾದ ಶೋಧನೆ ಹಾಗೂ ಸಂವಾದವನ್ನು ಪ್ರೋತ್ಸಾಹಿಸುವುದನ್ನೇ ತನ್ನ ಮೊತ್ತಮೊದಲ ಗುರಿಯಾಗಿ ಇರಿಸಿಕೊಂಡಿದೆ.  ಪ್ರಸ್ತುತ ಸಿದ್ಧ್ ಪ್ರಾಥಮಿಕ ಪೂರ್ವ ಮಟ್ಟದಿಂದ ಪ್ರೌಢಶಾಲೆಯವರಗೆ 11 ಶಾಲೆಗಳನ್ನು ನಡೆಸುತ್ತಿದೆ ಮತ್ತು ಚೌಗ್ ಪುರನ ಅಗ್ಲಾರ್ ಕಣಿವೆಯಲ್ಲಿನ 40 ಹಳ್ಳಿಗಳ 500 ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ.  ಈಗ ಸಿದ್ಧ್ ಇನ್ನೂ ವಿಸ್ತಾರಗೊಂಡು, ಯುವಜನ ಕೋರ್ಸುಗಳು, ಶಿಕ್ಷಕರ ತರಬೇತಿ, ಶೈಕ್ಷಣಿಕ ಸಂಶೋಧನೆ, ಶಿಕ್ಷಣ ಪ್ರಸಾರ ಮತ್ತು ಪ್ರಕಟಣೆ ಘಟಕಗಳನ್ನು ನಡೆಸುತ್ತಿದೆ.  ಹೀಗೆ ಇದು ಶಿಕ್ಷಣದಲ್ಲಿ ಉತ್ತಮ ಗುಣಮಟ್ಟವನ್ನು ಕುರಿತು ಆಸಕ್ತರಾದ ಎಲ್ಲರನ್ನೂ ತಲುಪುತ್ತಿದೆ.  ಸಮುದಾಯದ ಮುಖಂಡರೆಂದು ಪರಿಗಣಿತರಾದ ಯುವಕರ, ಸ್ಥಳೀಯ ಮತ್ತು ಕಂಕಣ ಬದ್ಧ ಕಾರ್ಯಕರ್ತರ ತಂಡದಿಂದ ಈ ಸಂಸ್ಥೆ ರೂಪುಗೊಂಡಿದೆ.  ಮಹಿಳೆಯರ ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಗ್ರಾಮೀಣ ಅರ್ಥವ್ಯವಸ್ಥೆ ಕುರಿತ ವಿವಿಧ ಸಮಸ್ಯೆಗಳನ್ನು ಎದುರಿಸಲು ಯುವ ಜನರು ಮತ್ತು ಮಹಿಳೆಯರಿಗೆ ಪ್ರೋತ್ಸಾಹ ನೀಡುವಲ್ಲಿ ಸಿದ್ಧ್ ಸಂಸ್ಥೆ ಸಫಲವಾಗಿದೆ.

http://www.sidhsri.info

ಸ್ಕೂಲ್ ವಾಟರ್ ಪೋರ್ಟಲ್ ಎಂಬುದು ಶಿಕ್ಷಕರು, ವಿದ್ಯಾರ್ಥಿಗಳು, ಶಾಲಾ ವ್ಯವಸ್ಥಾಪಕರು ಮತ್ತು ತಂದೆ ತಾಯಿಗಳ ನಡುವೆ ನೀರನ್ನು ಕುರಿತ ಕಲಿಕೆ ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಅಂತರ್ಜಾಲ ಆಧಾರಿತ ವೇದಿಕೆ.  ಇವಿಷ್ಟೇ ಗುಂಪುಗಳಿಗೆ ಇದು ಸೀಮಿತ ಎಂದು ತಿಳಿಯಬೇಕಾಗಿಲ್ಲ.  ಸ್ಕೂಲ್ ವಾಟರ್ ಪೋರ್ಟಲ್ ನೀರನ್ನು ಕುರಿತು ಜ್ಞಾನವನ್ನು ಹಂಚಿಕೊಳ್ಳಲು ಇಚ್ಛಿಸುವಂತಹ ಅಥವಾ ಮೂಲಭೂತವಾದ ನೀರನ್ನು ಕುರಿತ ಸಮಸ್ಯೆಗಳ ಬಗ್ಗೆ ತಿಳಿಯಲಿಚ್ಛಿಸುವ ಎಲ್ಲರಿಗೂ ಈ ವೇದಿಕೆಗೆ ಸ್ವಾಗತವಿದೆ.

ಸ್ಕೂಲ್ ವಾಟರ್ ಪೋರ್ಟಲ್ ಎಂಬುದು, ನೀರನ್ನು ಕುರಿತು ಕಾರ್ಯನಿರತ ವ್ಯಕ್ತಿಗಳು ಮತ್ತು ಸಾರ್ವಜನಿಕರಿಗೆ ನೀರಿನ ನಿರ್ವಹಣೆ ಕುರಿತ ಜ್ಞಾನವನ್ನು ಪ್ರಸರಿಸುವ ಒಂದು ಮುಕ್ತ ಹಾಗೂ ಅಂತರ್ಜಾಲ ತಾಣವಾದ ಇಂಡಿಯಾ ವಾಟರ್ ಪೋರ್ಟಲ್ ನ ಒಂದು ಭಾಗ.  ಅರ್ಘ್ಯಂ ಎಂಬ ಲಾಭ ನಿರೀಕ್ಷೆಯಿಲ್ಲದ ಶ್ರೀಮತಿ ರೋಹಿಣಿ ನೀಲಕಣಿ ಅವರ ಖಾಸಗಿ ದತ್ತಿಯಿಂದ ಸ್ಥಾಪಿತವಾದ ಹಾಗೂ ನೀರು ಮತ್ತು ನೈರ್ಮಲ್ಯ ವ್ಯವಸ್ಥೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಯು ಸಮನ್ವಯ ಗೊಳಿಸುತ್ತಿರುವಂಥ ಸ್ವಯಿಚ್ಛಾ ಪ್ರಯತ್ನವಾಗಿದೆ.

https://washresources.wordpress.com/tag/sch2ools-water-portal/