ಅಜೀಂ ಪ್ರೇಂಜಿ ಫೌಂಡೇಷನ್

ಅಜೀಂ ಪ್ರೇಂಜಿ ಫೌಂಡೇಷನ್,  ಭಾರತದಲ್ಲಿ ಒಂದು ನ್ಯಾಯಪರ,ಸರ್ವಸಮಾನ,ಮಾನವೀಯ ಹಾಗು ಸುಸ್ಥಿರ ಸಮಾಜದ ನಿರ್ಮಾಣಕ್ಕೆ ತನ್ನ ಕೊಡುಗೆಯನ್ನು ನೀಡಲು ಸುವ್ಯಾಪಕ ಗುರಿಯನ್ನಿಟ್ಟುಕೊಂಡು  ಲಾಭ ನಿರೀಕ್ಷೆಯಿಲ್ಲದೆ ಅವಿರತ ಶ್ರಮಿಸುತ್ತಿರುವ ಒಂದು ಸಂಸ್ಥೆ. ಭಾರತದಲ್ಲಿ ಶಿಕ್ಷಣ ಮತ್ತು ತತ್ಸಂಬಂಧಿ ಅಭಿವೃದ್ಧಿ ಕ್ಷೇತ್ರಗಳಾದ  ಮಕ್ಕಳ ಆರೋಗ್ಯ,ಪೌಷ್ಟಿಕಾಹಾರ,ಆಡಳಿತ ಮತ್ತು ಜೀವಿಪರಿಸ್ಥಿತಿ ಕ್ಷೇತ್ರಗಳಲ್ಲಿ ಗಾಢವಾದ, ಬೃಹತ್ ಪ್ರಮಾಣದ ಮತ್ತು ದೀರ್ಘಕಾಲೀನ ಪರಿಣಾಮಗಳನ್ನು ಉಂಟುಮಾಡಲು ನಾವು ಶ್ರಮಿಸುತ್ತಿದ್ದೇವೆ. ಶಿಕ್ಷಣವನ್ನೇ ಕೇಂದ್ರ ಬಿಂದುವಾಗಿ ಇರಿಸಿಕೊಂಡು ಈ ಪರಸ್ಪರ ಸಂಬಂಧಿತ ವಲಯಗಳ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಪ್ರಯತ್ನವನ್ನು ಅಜೀಂ ಪ್ರೇಂಜಿ ಫೌಂಡೇಷನ್ ಮಾಡುತ್ತಿದೆ.   ತನ್ನ ಸಮಗ್ರ ಹಾಗು ವ್ಯಾಪಕ ಕಾರ್ಯವಿಧಾನದ ಮೂಲಕ ಸಂಯುಕ್ತ ಶಕ್ತಿಯಾಗಿ ಚೈತನ್ಯಪೂರ್ಣ ಪ್ರತಿಕ್ರಿಯೆಯನ್ನು ಹೊರಹೊಮ್ಮಿಸುವುದು ಅಜೀಂ ಪ್ರೇಂಜಿ ಫೌಂಡೇಷನ್  ಇರಿಸಿಕೊಂಡಿರುವ ಗುರಿಯಾಗಿದೆ. ಇದರ ಕಾರ್ಯಸೂತ್ರದ ನಾಲ್ಕು ಪ್ರಮುಖ ಎಳೆಗಳು ಹೀಗಿವೆ:

  • ಪ್ರತಿಭಾವಂತರ ಸೃಷ್ಟಿ: ಸಾಮಾಜಿಕವಾಗಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ಕಾಣ್ಕೆ,ಕಾರ್ಯಕ್ಷಮತೆ,ಕಂಕಣಬದ್ಧತೆಹಾಗು ಸುಪ್ರೇರಣೆಯಿಂದ ದುಡಿಯುವ ಒಂದು  ಜನಶಕ್ತಿ ಯನ್ನು ಬೆಳಸುವುದು. ಹೊಸ ಹೊಸ ಪ್ರತಿಭೆಗಳ ಅಭಿವೃದ್ದಿ, ಈಗಿರುವ ಪ್ರತಿಭಾವಂತ ಶಿಕ್ಷಕರ, ಶಿಕ್ಷಕರ ಶಿಕ್ಷಕರ ,ಶಿಕ್ಷಣ ಕಾರ್ಯಕರ್ತರ ಹಾಗು ಅಭಿವೃದ್ಧಿ ವೃತ್ತಿಗರ ಸಾಮರ್ಥ್ಯ ವರ್ಧನೆ ಮಾಡುವುದು ಇದರಲ್ಲಿ ಸೇರಿವೆ.
  • ಜ್ಞಾನ ಸೃಷ್ಟಿ: ಜ್ಞಾನ ಸೃಷ್ಟಿಮಾಡುವುದು ಮತ್ತು ಭಾರತೀಯ ಸಂದರ್ಭ ಹಾಗು ಸಂಸ್ಕೃತಿಯಲ್ಲಿ ಶಿಕ್ಷಣ ಮತ್ತು ಅಭಿವೃದ್ದಿ ಕುರಿತು ಉದ್ಭವಿಸುವ ಸವಾಲುಗಳಿಗೆ ಆಳವಾದ ಒಳನೋಟವನ್ನು ಒದಗಿಸುವಂತಹ ಸಾಕ್ಷ್ಯಗಳನ್ನುಸೃಜಿಸುವುದು. ಇದರಿಂದ ಕಾರ್ಯನೀತಿ ಹಾಗೂ ಕಾರ್ಯಕ್ರಮಗಳ ರೂಪಣೆಯಲ್ಲಿ ಸಾಕ್ಷ್ಯಾಧಾರಿತ ನಿರ್ಣಯಗಳನ್ನು ಕೈಗೊಳ್ಳುವ ಒಂದು ಸಂಸ್ಕೃತಿ ನಿರ್ಮಾಣವಾಗುತ್ತದೆ.
  • ಸಂಸ್ಥೆಗಳ ಸಂಪರ್ಕಜಾಲ: ಸುಸ್ಥಿರ ನೆಲೆಗಟ್ಟಿನಲ್ಲಿ ಪ್ರತಿಭಾಪ್ರವರ್ಧನೆ,ಜ್ಞಾನ ಸಂವರ್ಧನೆ ಮತ್ತು ಶಿಕ್ಷಣ ಸುಧಾರಣೆ ಹಾಗು ಅವುಗಳಿಗೆ ಸಂಬಂಧಪಟ್ಟ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸುಧಾರಣೆ ಮಾಡುವಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡ ಮತ್ತು ದೇಶದ ಉದ್ದಗಲಕ್ಕೂ ಹಬ್ಬಿ ಹರಡಿರುವ ಸಂಸ್ಥೆಗಳ ಒಂದು ಸಂಪರ್ಕಜಾಲವನ್ನು ರಚಿಸುವುದು.
  • ಸಾಮಾಜಿಕ ಒತ್ತಡ: ಸಂಸ್ಥೆಗಳ ಪ್ರಬಲ ಸಂಪರ್ಕಜಾಲ,ನಿರಂತರ ಶಿಕ್ಷಣ, ಕ್ಷೇತ್ರ ಮಟ್ಟದಲ್ಲಿ ಉತ್ತಮ ಪರಿಣಾಮ,ಹಾಗು ಜಾಗೃತಿ ಮೂಡಿಸುವುದು ಇವುಗಳ ಮೂಲಕ ಸಮುದಾಯದವರು ಹಾಗು ಕಾರ್ಯಕರ್ತರು ಶಿಕ್ಷಣ ಮತ್ತು ಅಭಿವೃದ್ಧಿ ಸಮಸ್ಯೆಗಳನ್ನು ಕುರಿತು ಆಲೋಚಿಸುವ ರೀತಿಯನ್ನು ಬದಲಾಯಿಸುವುದು. ತನ್ಮೂಲಕ ಗುಣಮಟ್ಟ ಮತ್ತು ಸರ್ವಸಮಾನತೆಯ ನಿಟ್ಟಿನಲ್ಲಿ ಸಾಮಾಜಿಕ ಒತ್ತಡಕ್ಕೆ ಅನುಕೂಲವನ್ನು ಕಲ್ಪಿಸುವುದು.
19833 ನೊಂದಾಯಿತ ಬಳಕೆದಾರರು
7793 ಸಂಪನ್ಮೂಲಗಳು