ವೇದಿಕೆ ವಿಚಾರಮುಖಿಯಾಗಬೇಕು-ರೋಹಿತ್ ಧನಕರ್

ದಿನಾಂಕ 5-9-2012,ಬೆಂಗಳೂರು.

ಇಂದು  ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಜರುಗಿದ ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ ನ ಹೊಸ ವಿನ್ಯಾಸದ ಅನಾವರಣ ಸಮಾರಂಭದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದ ಡಾ. ರೋಹಿತ್ ಧನಕರ್ ಅವರು ಶಿಕ್ಷಕರ ಸಂವಾದ ವೇದಿಕೆಯಾದ ಈ ಪೋರ್ಟಲ್ ವಿಚಾರಮುಖಿಯಾಗಬೇಕು ಎಂದು  ಕರೆ ನೀಡಿದರು.

ಶಿಕ್ಷಕರ ಸಮೃದ್ಧ ವಿಚಾರ ವೇದಿಕೆಯಾಗಿ ಹೊಸ ವಿನ್ಯಾಸದ ಪೋರ್ಟಲ್ ನ ಪುರೋಭಿವೃದ್ಧಿಗೆ ಶುಭಹಾರೈಸಿದ ಶ್ರೀಯುತರು ಅದಕ್ಕಾಗಿ ಶ್ರಮಿಸಿದ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಶಿಕ್ಷಣ,ತಂತ್ರಜ್ಞಾನ ಮತ್ತು ವಿನ್ಯಾಸ ತಂಡವನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು.

ಶಿಕ್ಷಕನಾದವನಲ್ಲಿ ಯಾವ ಗುಣ ವಿಶೇಷಗಳಿರಬೇಕು ಎಂಬ ಬಗ್ಗೆ ಚರಕ ಸಂಹಿತೆಯಿಂದ ಹಿಡಿದು ಆಧುನಿಕ ಚಿಂತನೆವರೆಗಿನ ವಿಚಾರಗಳನ್ನು ತಮ್ಮ ಭಾಷಣದಲ್ಲಿ ಸಾರಸಂಗ್ರಹವಾಗಿ ಧನಕರ್ ಅವರು ಹೇಳಿದ್ದು ಶಿಕ್ಷಕರ ದಿನಾಚರಣೆಗೆ ಸಂದರ್ಭೋಚಿತವಾಗಿತ್ತು ಮತ್ತು ಬೋಧಪ್ರದವಾಗಿತ್ತು.

ಉತ್ತಮ ಶಿಕ್ಷಕನು ತನ್ನದೇ ಅದ ಪಾಠ ವಿಧಾನ ಮತ್ತು ಯೋಜನೆಗಳನ್ನು ತಯಾರಿಸಿಕೊಳ್ಳುತ್ತಾನೆ ಇತರರನ್ನು ಅವಲಂಬಿಸುವುದಿಲ್ಲ. ಆದ್ದರಿಂದ ಪೋರ್ಟಲ್ಲಿನ ವಿಷಯಸಾಮಾಗ್ರಿ ಅದಕ್ಕೆ ಮಾರ್ಗದರ್ಶಕವಾಗಿರಬೇಕು.  ಶಿಕ್ಷಣ, ಬೋಧನಾ ವಿಧಾನಗಳು,  ಗುರಿ ಮತ್ತು ಕಾರ್ಯನೀತಿಗಳ ಬಗ್ಗೆ ಸಕ್ರಿಯ ಚರ್ಚೆಯನ್ನು ಈ ವೇದಿಕೆಯು ಪ್ರಚೋದಿಸಬೇಕು, ಪ್ರೋತ್ಸಾಹಿಸಬೇಕು ಮತ್ತು ಪೋಷಿಸಬೇಕು ಎಂದು ಧನಕರ್ ಅವರು ಅಭಿಪ್ರಾಯಪಟ್ಟರು.

Date: 
ಗುರುವಾರ, September 6, 2012 - 11:30am

ಪ್ರತಿಕ್ರಿಯೆಗಳು

jayadevappa.b@azimpremjifoundation.org's picture

ಶ್ರೀಯುತ ಧನ್ಕರ್ ಇವರ ಅಥವಾ ಈ ಬಗೆಯ ಶಿಕ್ಷಣ ತಜ್ಞರ ಭಾಷಣದ ಸಾರಾಂಶ ಚೆನ್ನಾಗಿ ಬರುತ್ತಿರುವದು ಸಂತೋಷ. ಶ್ರೀಯುತ ಧನಕರ್ ರವರು ನೀಡಿದ ಕರೆ, ಹಾರೈಸಿದ 'ಶುಭ', ಸಲ್ಲಿಸಿದ ಹೃತ್ಪೂರ್ವಕ ಅಭಿನಂದನೆ ಇತ್ಯಾದಿಗಳು ಶಿಕ್ಷಕರ ದಿನಾಚರಣೆಗೆ ಸಂದರ್ಭೋಚಿತವಾಗಿತ್ತು, ಬೋಧಪ್ರದವಾಗಿತ್ತು ಎಂಬುದನ್ನು ಓದಿ ಸಂತೋಷವಾಯಿತು. ಆದರೆ, ಶಿಕ್ಷನಾದವನ ಗುಣ, ವಿಶೇಷಗಳು ಹೇಗಿರುತ್ತವೆ, ಈ ಬಗೆಗಿನ ಚಿಂತನೆಗಳು ಚರಕನಿಂದ ಹಿಡಿದು ಇಲ್ಲಿವರೆಗೆ ಹೇಗೆ ಬೆಳೆದು ಬಂದಿವೆ -ಎಂಬುದರ ಬಗ್ಗೆ ಶ್ರೀಯುತ ಧನ್ಕರ್ ನೀಡಿದ ಮಾಹಿತಿಗಳನ್ನು ಒದಗಿಸಿದರೆ ಅನುಕೂಲವಾಗುತ್ತಿತ್ತು. ಇದರಿಂದ ಪತ್ರಿಕೆಯ ಮೌಲಿಕತೆ ಹೆಚ್ಚಾಗುತ್ತದೆ ಎಂದು ನಾನು ಭಾವಿಸುತ್ತೇನೆ, ನಿಮ್ಮ ಮುಂದಿನ ಸಂಚಿಕೆಗಳು ಹೀಗಿರಲಿ ಎಂದು ಆಶಿಸುತ್ತೇನೆ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಾಕಾಂಕ್ಷಿ ,
ಜಯದೇವಪ್ಪ.ಬಿ.

18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು