ಕಥಾವನ-2015

ಓದುಗರಾಗಿ ಶಿಕ್ಷಕರ  ಅಭಿವೃದ್ಧಿ

ಮಕ್ಕಳ ಜೀವನದಲ್ಲಿ ಸಾಹಿತ್ಯವು ಅಮೋಘ ಪಾತ್ರವನ್ನು ವಹಿಸುತ್ತದೆ.  ಸಾಹಿತ್ಯವನ್ನು ಓದುವುದರಲ್ಲಿ ಮಕ್ಕಳು ತಲ್ಲೀನರಾದಾಗ, ಅವರ ಕಲ್ಪನೆ ಗರಿಗೆದರುತ್ತದೆ, ನಿರೂಪಣೆಗಳ ಬೆನ್ನೇರಿ ಅವರು ಅದನ್ನು ಅನ್ವೇಷಿಸಲು ಹೊರಡುತ್ತಾರೆ, ಪಾತ್ರಗಳೊಂದಿಗೆ ತಾದಾತ್ಮ್ಯ ಹೊಂದುತ್ತಾರೆ ,ನಿಜ ಜೀವನದ ಸಂದರ್ಭಗಳಲ್ಲಿ ಸಹಾನುಭೂತಿಯನ್ನು ಬೆಳೆಸಿಕೊಳ್ಳುತ್ತಾರೆ ಹಾಗೂ ನೀತಿ-ಅನೀತಿಗಳ ವಿವೇಚನೆಯನ್ನು  ಕಲಿಯುತ್ತಾರೆ. ಎಳೆಯ ವಯಸ್ಸಿನಿಂದಲೇ ಒಳ್ಳೆಯ ಸಾಹಿತ್ಯದ ಸಂಸರ್ಗ ಪಡೆದ ಮಕ್ಕಳು ಜೀವಮಾನವಿಡೀ ಓದುವ ಮತ್ತು ಬರೆಯುವ ಹವ್ಯಾಸ ಮೈಗೂಡಿಸಿಕೊಳ್ಳುತ್ತಾರೆ. ಶಿಕ್ಷಕರು ಪಠ್ಯಕ್ರಮದ ಒಂದು ಸಹಜ ಭಾಗವಾಗಿ ಸಾಹಿತ್ಯವನ್ನು ಬಳಸಿದಾಗ, ಅವರು ಸಾಮಾಜಿಕ ಮತ್ತು ವೈಯಕ್ತಿಕ ಪ್ರಾಮುಖ್ಯತೆಯ ಸಂಕೀರ್ಣ ಸಮಸ್ಯೆಗಳನ್ನು ಕುರಿತು ಓದುವ ,ಬರೆಯುವ, ಚರ್ಚಿಸುವ, ಪ್ರತಿಕ್ರಿಯಿಸುವ ಕೌಶಲ್ಯಗಳನ್ನು  ಮಕ್ಕಳು ಮೈಗೂಡಿಸಿಕೊಳ್ಳುತ್ತಾರೆ.

  

 ದುರದೃಷ್ಟವಶಾತ್, ಬಹುತೇಕ ಭಾರತೀಯ ಶಾಲೆಗಳಲ್ಲಿ ಸಾಹಿತ್ಯವನ್ನು  ಮೇಲಿನ ತರಗತಿಗಳಲ್ಲಿ ಮಾತ್ರ ಪರಿಚಯಿಸಲಾಗುತ್ತಿದೆ, ಮತ್ತು ಪಠ್ಯವಿಷಯಕ್ಕೂ  ಓದುಗರಿಗೂ ಅರ್ಥಪೂರ್ಣ ಸಂಪರ್ಕ ಇಲ್ಲದ ರೀತಿಯಲ್ಲಿ ಅದನ್ನು  ಕಲಿಸಲಾಗುತ್ತದೆ. ಮೌಖಿಕವಾಗಿ  ಮತ್ತು ಅಭಿನಯದ ಮೂಲಕ  ಕಥೆ ಹೇಳುವ ಸಂಪ್ರದಾಯಗಳು ನಿಧಾನವಾಗಿ ನಗರದ ವಿಭಕ್ತ ಕುಟುಂಬಗಳ ದೈನಂದಿನ ಜೀವನದಿಂದ ಕಣ್ಮರೆಯಾಗುತ್ತಿವೆ. ಓದುವ ವ್ಯಾಪಕ ಹವ್ಯಾಸ ಅನೇಕ ಭಾರತೀಯ ಸಂದರ್ಭಗಳಲ್ಲಿ ಇನ್ನೂ ನೆಲೆಯೂರಿರುವುದಿಲ್ಲ. ಎಲ್ಲ ಸಾಮಾಜಿಕ ವರ್ಗಗಳಲ್ಲಿ ಇದೇ ಕಥೆಯಾಗಿದ್ದರೂ,  ಉತ್ತಮ ಸಾಹಿತ್ಯ ದೊರಕಿಸಿಕೊಳ್ಳುವ ಸಾಮರ್ಥ್ಯ ಇಲ್ಲದ ಕಾರಣ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅನುಕೂಲವಂಚಿತ ಹಿನ್ನೆಲೆಯ ಮಕ್ಕಳ ಸಂದರ್ಭವು ಸ್ವಲ್ಪ ಹೆಚ್ಚು ಗಂಭೀರವಾಗಿದೆ. ಆದರ್ಶ ಸನ್ನಿವೇಶವೆಂದರೆ, ಶಾಲೆಗಳು ಮತ್ತು ಶಿಕ್ಷಕರು ಚಿಕ್ಕ ವಯಸ್ಸಿನಲ್ಲೇ  ಮಕ್ಕಳಿಗೆ ಸಾಹಿತ್ಯ ಲಭ್ಯವಾಗುವಂತೆ ಮಾಡುವುದುಮತ್ತು ಅವರು ಅದರ ಓದಿನಲ್ಲಿ ತಲ್ಲೀನವಾಗುವಂತೆ ಮಾಡಲು ಶ್ರಮಿಸುವುದು.

ಆದರೆ ಈ ಜವಾಬ್ದಾರಿ ಹೊರಲು ಶಾಲೆಗಳು ಮತ್ತು ಶಿಕ್ಷಕರು ಎಷ್ಟರಮಟ್ಟಿಗೆ ಸನ್ನದ್ಧರಾಗಿದ್ದಾರೆ?  ತಮ್ಮ ಬದುಕಿನಲ್ಲಿ  ಸಾಹಿತ್ಯದ ಸಂಸರ್ಗವನ್ನೇ ಹೊಂದಿರದ ಶಿಕ್ಷಕರು  ಮಕ್ಕಳ ಜೀವನದಲ್ಲಿ ಅದರ ಸತ್ಪ್ರಭಾವವನ್ನು ತರಲು ಸಾಧ್ಯವಿಲ್ಲ. ಗಮನಿಸಿ ನೋಡಿದರೆ, ನಮ್ಮ ಬಹಳಷ್ಟು ಶಿಕ್ಷಕರು ಸ್ವಯಂ ಸತತ ವಾಚನಾಭಿರುಚಿ ಇರುವವರಲ್ಲ.ಅವರಲ್ಲಿ  ಅನೇಕರಿಗೆ ಸಾಹಿತ್ಯದ ಶಕ್ತಿ, , ಸೌಂದರ್ಯ ಮತ್ತು ಮೋಡಿಯ  ವಿದ್ಯುತ್ಸ್ಪರ್ಶವೇ ಆಗಿರುವುದಿಲ್ಲ. ಇಂದಿನ ಶಾಲಾ ಪರಿಸರದಲ್ಲಿ ಶಿಕ್ಷಕರು ತಮ್ಮ ವಿವಿಧ ಕೆಲಸಗಳ ಹೊರೆಯಿಂದಾಗಿ, ಮನೋಲ್ಲಾಸಕ್ಕಾಗಿ ಮತ್ತು  ತಮ್ಮ  ಕಲ್ಪನೆಯ ಪರಿಧಿಯನ್ನು ವಿಸ್ತರಿಸಿಕೊಳ್ಳುವುದಕ್ಕಾಗಿ  ಓದುವುದನ್ನು ಮಾಡುತ್ತಿಲ್ಲವೆಂದೇ ಹೇಳಬೇಕು.

ಕಥಾವನ 2015  ಅನ್ನು ಪರಿಕಲ್ಪಿಸಿದಾಗ , ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ಮತ್ತು , ಅಜೀಂ ಪ್ರೇಮ್ ಜಿ ಫೌಂಡೇಶನ್  ನವರು “ಓದುಗರಾಗಿ ಶಿಕ್ಷಕರು”  ಎಂಬ ವಿಷಯವನ್ನು   ಈ  ಉತ್ಸವದ  ವಸ್ತು ವಿಷಯವಾಗಿ ಅಳವಡಿಸಿಕೊಂಡಿರುತ್ತಾರೆ.  2012 ರಲ್ಲಿ ಪ್ರಾರಂಭಗೊಂಡ  ಕಥಾವನ -ಮಕ್ಕಳ ವಾರ್ಷಿಕ ಸಾಹಿತ್ಯೋತ್ಸವವಾಗಿದ್ದು, ಇದನ್ನು ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ ಮತ್ತು ಫೌಂಡೇಶನ್ ನ ಕರ್ನಾಟಕ ರಾಜ್ಯ ಸಂಸ್ಥೆಯ ಸಹ-ಯೋಗದಲ್ಲಿ ನಡೆಸಲಾಗುತ್ತಿದೆ. ಈ ದ್ವಿಭಾಷಾ ಸಾಹಿತ್ಯೋತ್ಸವದಲ್ಲಿ  ಪ್ರತಿ ವರ್ಷವೂ ಮಕ್ಕಳ ಸಾಹಿತ್ಯದ ಜಗತ್ತನ್ನು ಅನ್ವೇಷಿಸಲು ಮಕ್ಕಳು, ಕತೆಗಾರರು, ಪ್ರಕಾಶಕರು, ಶಿಕ್ಷಕರು, ಶಿಕ್ಷಣತಜ್ಞರು ಮತ್ತು ಇತರ ಶಿಕ್ಷಣ ಕಾರ್ಯಕರ್ತರು ಒಟ್ಟಿಗೆ ಸೇರುತ್ತಾರೆ. ನಮ್ಮ ದೇಶದಲ್ಲಿ ಪ್ರಸ್ತುತ ಕೇವಲ ಬೆರಳೆಣಿಕೆಯಷ್ಟು ಮಕ್ಕಳ ಸಾಹಿತ್ಯದ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. ಇಂತಹ ಉತ್ಸವಗಳಲ್ಲಿ ಹೆಚ್ಚಿನವುಗಳನ್ನು  ಹೋಲಿಕೆಯಲ್ಲಿ ಸ್ಥಿತಿವಂತರಾದ ಇಂಗ್ಲೀಷ್ ಮಾತನಾಡುವ ಮಕ್ಕಳು ಮತ್ತು ಪೋಷಕರನ್ನು ಆಕರ್ಷಿಸಲು ವಿನ್ಯಾಸಗೊಳಿಸಲಾಗಿರುತ್ತದೆ. ಆದರೆ ಕಥಾವನ-ಮಕ್ಕಳ ಸಾಹಿತ್ಯೋತ್ಸವವು  ಸರ್ಕಾರಿ ಶಾಲೆಗಳ ಅಥವಾ ಕಡಿಮೆ ಶುಲ್ಕದ ಖಾಸಗಿ ಶಾಲೆಗಳ ಮಕ್ಕಳು ಮತ್ತು ಶಿಕ್ಷಕರನ್ನು ತಲುಪುವ ಪ್ರಮುಖ ಉದ್ದೇಶವನ್ನು ಹಿನ್ನೆಲೆಯಾಗಿ ಇರಿಸಿಕೊಂಡು ಇಂಗ್ಲೀಷ್  ನ ಜೊತೆಜೊತೆಗೆ ಕನ್ನಡ ಸಾಹಿತ್ಯದ ವೈಶಿಷ್ಟ್ಯವನ್ನು ಈ ಶಾಲಾ ಮಕ್ಕಳಿಗೆ ಪರಿಚಯಿಸುವುದಕ್ಕೆ  ಹಾಗೂ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪೂರ್ಣಾವಕಾಶ ಕಲ್ಪಿಸುವುದಕ್ಕೆ ಒತ್ತನ್ನು ನೀಡುತ್ತದೆ.

ಕಥಾವನ ತಂಡವು  ತನ್ನ  ಹಿಂದಿನ ವರ್ಷಗಳ ಅನುಭವದಿಂದ  ಶಿಕ್ಷಕರಲ್ಲಿ ವಾಚನಾಭಿರುಚಿ  ಬೆಳಸಬೇಕಾದ ಮಹತ್ವವನ್ನು ಮನಗಂಡಿದೆ. ಹಾಗಾಗಿ ತಂಡದ ಸದಸ್ಯರು ಶಿಕ್ಷಕರೊಂದಿಗೆ 6-8 ತಿಂಗಳ ದೀರ್ಘ ಕಾಲದ ಕಾರ್ಯಕ್ರಮವನ್ನು ರೂಪಿಸಿಕೊಂಡಿದ್ದಾರೆ.ಈ ಕಾರ್ಯಕ್ರಮವು ಈ ಉತ್ಸವದಲ್ಲಿ ವಿಧ್ಯುಕ್ತವಾಗಿ ಆರಂಭವಾಗುತ್ತದೆ. ಅದರಲ್ಲಿ ಮೊದಲೇ ಆಯ್ಕೆಯಾದ ಬದ್ಧ ಶಿಕ್ಷಕರ ಒಂದು ಸಣ್ಣ ಗುಂಪು ಸಾಹಿತ್ಯ ಮತ್ತು ಅದರ ಪಲುಕು-ಪದರಗಳನ್ನು ಅನ್ವೇಷಿಸಲು ಒಡಗೂಡುತ್ತದೆ. ಅವರು ಮುಂದಿನ 6 ತಿಂಗಳಲ್ಲಿ ತಿಂಗಳಿಗೊಮ್ಮೆ ಅರ್ಧ ದಿನ ಕಥಾವನದ ಸುಗಮಕಾರರ ಜೊತೆಗೆ  ಕಲೆತು ಕನ್ನಡ ಅಥವಾ ಇಂಗ್ಲೀಷ್ ಸಾಹಿತ್ಯದ  ಸಣ್ಣ ತುಣುಕುಗಳನ್ನು ಓದಲು ಮತ್ತು ಚರ್ಚಿಸಲು ತೊಡಗುತ್ತಾರೆ. ಈ ತುಣುಕುಗಳು  ಸಣ್ಣಕಥೆಗಳು ಮತ್ತು ಪ್ರೌಢ ಕವಿತೆಗಳು ಕಾವ್ಯವಾಚನ ಹಾಗೂ ಮಕ್ಕಳ ಸಾಹಿತ್ಯದ ಆಯ್ದ ಭಾಗಗಳ ವಾಚನವನ್ನು  ಒಳಗೊಂಡಿರುತ್ತದೆ. ಈ ಕಾರ್ಯಕ್ರಮದ ಉದ್ದೇಶ  ಶಿಕ್ಷಕರು ತಮ್ಮ ಪಠ್ಯಗಳಲ್ಲಿ  ಸಾಹಿತ್ಯವನ್ನು ಹೇಗೆ  ಬಳಸ ಬೇಕೆಂದು  ಕಲಿಸುವುದಲ್ಲ. ಬದಲಿಗೆ ಉದ್ದೇಶವು   ಶಿಕ್ಷಕರಲ್ಲಿ ವಾಚನಾಭಿರುಚಿಯನ್ನು ಅಥವಾ  ಓದುವದರಲ್ಲಿನ  ಆನಂದಾನುಭವವನ್ನು  ಉದ್ದೀಪನಗೊಳಿಸಿ ಅರ್ಥಪೂರ್ಣವಾದ  ಸಾಹಿತ್ಯ ಸಂಸರ್ಗದಿಂದ  ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವಂತೆ ಮಾಡುವುದಾಗಿದೆ.

ಈ ಉತ್ಸವವು  ಸೆಪ್ಟೆಂಬರ್ 9 ರಿಂದ 11ರ  ವರೆಗೆ ನಿಗದಿತ ಸ್ಥಳಗಳಲ್ಲಿ  ನಡೆಯಲಿದ್ದು , ಅವುಗಳಲ್ಲಿ ಸಾಹಿತ್ಯೋತ್ಸವದ ಇತರ ಸಾಮಾನ್ಯ ವೈಶಿಷ್ಟ್ಯಗಳಾದ   ಮಕ್ಕಳ ಪುಸ್ತಕ ಪ್ರದರ್ಶನ, ಮಕ್ಕಳಿಗೆ ಕಥೆ ಹೇಳುವುದು , ಸೂತ್ರ ಗೊಂಬೆ ಯಾಟ ಮತ್ತು ಮಕ್ಕಳು ಹಾಗೂ ಶಿಕ್ಷಕರ ನಡುವೆ  ಪರಸ್ಪರ ಸಂವಾದದ ಕಾರ್ಯಕ್ರಮಗಳು ಇರುತ್ತವೆ. ಹೀಗಿದ್ದರೂ , 'ಓದುಗರಾಗಿ ಶಿಕ್ಷಕರು’ ಉಪಕ್ರಮವು, ಓದುವ ಬಗ್ಗೆ ಶಿಕ್ಷಕರ ನಿಲುವಿನಲ್ಲಿ  ದೀರ್ಘಕಾಲೀನ ಮತ್ತು ಸ್ವಾವಲಂಬಿ ಬದಲಾವಣೆಗಳನ್ನು ಸೃಷ್ಟಿಸುವ ಒಂದು ಮಹದಾಶಯವನ್ನು ಹೊಂದಿದೆ .ತನ್ಮೂಲಕ ಅಸಂಖ್ಯಾತ  ವಿದ್ಯಾರ್ಥಿ ಸಮುದಾಯದಲ್ಲಿ ಓದುವ ಒಲವನ್ನು ಬೆಳಸುವ ಗಹನವಾದ ಸಾಧ್ಯತೆಯನ್ನು ಹೊಂದಿದೆ ಎಂದು ನಾವು ಆಶಿಸುತ್ತೇವೆ.

 

 

Date: 
ಗುರುವಾರ, September 3, 2015 - 8:30am
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು