ಸರಳ ಯಂತ್ರಗಳು

Resource Info

ಮೂಲ ಮಾಹಿತಿ

ಮಕ್ಕಳ ಜ್ಞಾನವನ್ನೇನೋ 'ಪಡೆಯುತ್ತಾರೆ ಆದರೂ ಅವರು ಅನ್ವಯಿಸುವ ಕೌಶಲ್ಯ ಬೆಳೆಸಿಕೊಳ್ಳುವುದಿಲ್ಲ. ಸರಳ ಯಂತ್ರಗಳನ್ನು ಕುರಿತ ಈ ಪಾಠ ಯೋಜನೆಯ ಮೂಲಕ ಇಲ್ಲಿ ವಾಸ್ತವಿಕ ಅನುಭವ ಕಲಿಕಾ ಸಂಪರ್ಕ ಒದಗಿಸುವ ಒಂದು ಪ್ರಯತ್ನಮಾಡಲಾಗಿದೆ.

ಪಾಠ ಯೋಜನೆ ವಿವರಗಳು

ಕಾಲಾವಧಿ: 
03 hours 20 mins
ಪೀಠಿಕೆ: 

ಪ್ರತ್ಯಕ್ಷವಾದ ಹಾಗು ಪರೋಕ್ಷವಾದ ಅವಲೋಕನದ ಮೂಲಕ ಮಾಹಿತಿಯನ್ನು ಸಂಗ್ರಹಿಸಿ, ಈ ಮಾಹಿತಿಯನ್ನು ವಿಭಿನ್ನ ವಿಧಾನಗಳ ಮೂಲಕ ಪರೀಕ್ಷಿಸುವುದು ವಿಜ್ಞಾನದ ಗುಣವಾಗಿದೆ. ಪಠ್ಯಕ್ರಮವನ್ನು ಪೂರ್ಣಗೊಳಿಸಲು ಶಿಕ್ಷಕರಿಗೆ ಸಮಯದ ನಿರ್ಬಂಧವಿರುವುದರಿಂದ, ಅವರು ಸಿದ್ಧತೆಗೆ ಹಾಗು ಬೋಧನೆಗೆ ಸುಲಭವಾಗಿರುವ ಬೋಧನಾ ಶೈಲಿಯನ್ನೇ ಅನುಸರಿಸುತ್ತಾರೆ.  ಮಕ್ಕಳು  "ಜ್ಞಾನವನ್ನು" ಪಡೆಯುತ್ತಾರಾದರೂ, ಅದನ್ನು ಬಳಸುವ ಕೌಶಲ್ಯವನ್ನು ಬೆಳೆಸಿಕೊಳ್ಳುವುದಿಲ್ಲ.  ಕಲಿಕೆಯನ್ನು "ನೈಜ" ಅನುಭವಗಳಿಗೆ ಒಂದುಗೂಡಿಸುವುದೇ  ಈ ಪಾಠ ಯೋಜನೆಯ ಪ್ರಯತ್ನ.

.

ಉದ್ದೇಶ: 
 • ವಿದ್ಯಾರ್ಥಿಗಳು ಯಂತ್ರಗಳನ್ನು ಗುರುತಿಸುತ್ತಾರೆ
 • ಸರಳ ಯಂತ್ರಗಳೊಂದಿಗೆ ವಿದ್ಯಾರ್ಥಿಗಳು  ಪ್ರಯೋಗವನ್ನು ಮಾಡುತ್ತಾರೆ
 • ಯಂತ್ರಗಳ ಉಪಯೋಗಗಳನ್ನು ವಿದ್ಯಾರ್ಥಿಗಳು ಕ್ರೋಢೀಕರಿಸುತ್ತಾರೆ.
 • ಯಂತ್ರಗಳ ಬಗ್ಗೆ ತಮಗಿರುವ ಜ್ಞಾನವನ್ನು ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಜೀವನಕ್ಕೆ ಹೋಲಿಸಿಕೊಳ್ಳುತ್ತಾರೆ.
ಹಂತಗಳು : 

ತರಗತಿ 1: ಯಂತ್ರಗಳು- ಒಂದು ಪರಿಚಯ

ಕಾಲಾವಧಿ- 40 ನಿಮಿಷಗಳು

ಬೋಧನಾ ಸಾಮಗ್ರಿಗಳು

 1. ಸಂಪನ್ಮೂಲ 1 ಎ ನಲ್ಲಿ ನೀಡಿರುವ ವಸ್ತುಗಳನ್ನು  ಅಂದರೆಅಳತೆಪಟ್ಟಿ, ುಗುರಿನ ಕಟ್ಟರ್, ಬಾಟಲ್ ಒಪನರ್, ಕತ್ತರಿಗಳು, ಚಮಚ, ಸ್ಟ್ರಾ, ಕಲ್ಲುಗಳು ಸ್ಕ್ರ್ಯೂ, ಬೋಲ್ಟ್, ನಟ್,ಮೊಳೆ, ಕತ್ತಿ, ಒಂದು ಸಪಾಟಾದ ಮರದ ತುಂಡು, ಸುತ್ತಿಗೆ, ಪೆನ್ಸಿಲ್, ಮರದ ಬೆಣೆಗಳು, ಒಂದು ಹತ್ತಿತುಂಬಿದ ಗೊಂಬೆ,, ಒಂದು ಬುಗುರಿ, ರಬ್ಬರ್, ನಿಂಬೆ ಹಿಂಡುಗತ್ತರಿ  , ಇತ್ಯಾದಿ ಹೊಂದಿರುವ ಮರದ ಅಥವಾ ಪ್ಲಾಸ್ಟಿಕ್ಕಿನ ಒಂದು ಚಿಕ್ಕ ಡಬ್ಬಿ
 2. ಸಂಪನ್ಮೂಲ "1"ನ ಪ್ರತಿಗಳು.

ಗುರಿ ಮತ್ತು ಉದ್ದೇಶಗಳು

 1. ವಿದ್ಯಾರ್ಥಿಗಳು ಯಂತ್ರಗಳನ್ನು ಗುರುತಿಸುತ್ತಾರೆ
 2. ವಿದ್ಯಾರ್ಥಿಗಳು ತಮ್ಮ ಸ್ವಂತ ವಾಕ್ಯಗಳಲ್ಲಿ ಒಂದು ಯಂತ್ರವನ್ನು ಬಣ್ಣಿಸುತ್ತಾರೆ
 3. ಯಂತ್ರಗಳ ಉಪಯೋಗಗಳನ್ನು ವಿದ್ಯಾರ್ಥಿಗಳು ಹೇಳುತ್ತಾರೆ.

ಹಂತಗಳು

ಹಂತ 1: ಆಸಕ್ತಿ ಮೂಡಿಸುವುದು

ಚಟುವಟಿಕೆ 1

 1. ವಿದ್ಯಾರ್ಥಿಗಳಿಗೆ ಒಂದು ವೃತ್ತದ ಆಕಾರದಲ್ಲಿ ಕುಳಿತುಕೊಳ್ಳುವಂತೆ ಹೇಳಿ
 2. ಈ ವೃತ್ತದ ಮಧ್ಯೆಯಿರುವ ಮೇಜಿನ ಮೇಲೆ ಮರದ/ಪ್ಲಾಸ್ಟಿಕ್ ಡಬ್ಬಿಯನ್ನು ಇರಿಸಿ. ವಿದ್ಯಾರ್ಥಿಗಳನ್ನು ನಿಮಗೆ ತೋಚಿದ ಕ್ರಮದಲ್ಲಿ  ಕರೆದು ಅವರು ಒಂದು ಬಾರಿಗೆ ಒಂದು ವಸ್ತುವನ್ನು ಹೊರತೆಗೆಯಲು ಹೇಳಿ. ಅದನ್ನು ಗುರುತಿಸಿ ಅದರ ಉಪಯೋಗದ ಬಗ್ಗೆ ತಿಳಿಸಲು ಹೇಳಿ.

( ಇದಕ್ಕೆ ಬದಲಾಗಿ ಅಲ್ಲಿರುವ ವಸ್ತುಗಳ ಮುದ್ರಿತವಾದ ಕರಪತ್ರಗಳು/ ಮುದ್ರಿತ ಪ್ರತಿಗಳನ್ನು ಶಿಕ್ಷಕರು ಬಳಸಬಹುದು).

 1. ಚರ್ಚೆಯನ್ನು ಆರಂಭಿಸಿ ವಿಷಯವನ್ನು ಪರಿಚಯಿಸಿ.

"ಯಂತ್ರ" ಎಂಬ ಪದವನ್ನು ಕೇಳಿದಾಗ ನಿಮ್ಮ ಮನಸ್ಸಿನಲ್ಲಿ ಬರುವ ಆಲೋಚನೆ ಏನು?

ಯಂತ್ರಗಳನ್ನು ನೀವು ನೋಡಿದ್ದೀರಾ? ಎಲ್ಲಿ?

ನಮ್ಮ ದಿನ ನಿತ್ಯದ ಜೀವನದಲ್ಲಿ ಬಳಸಲಾಗುವ ಕೆಲವು ಯಂತ್ರಗಳನ್ನು ವಿವರಿಸಿ

(ವಿವರಿಸಿ: ಯಂತ್ರಗಳು, ನಮ್ಮ ಕೆಲಸವನ್ನು ಸರಳ ಹಾಗು ಸುಲಭವಾಗುವಂತೆ ಮಾಡುವ ಸರಳ ಸಾಧನಗಳು.)

 

ಹಂತ 2: ವಿವರಣೆ

ಚಟುವಟಿಕೆ 2

 1. ಸಂಪನ್ಮೂಲ 1 ರ  ಯ ಪ್ರತಿಯನ್ನು ವಿದ್ಯಾರ್ಥಿಗಳಿಗೆ ನೀಡಿ.
 2. ಸಂಪನ್ಮೂಲ 1 ರಲ್ಲಿರುವ ಚಟುವಟಿಕೆಯನ್ನು ಪೂರ್ಣಗೊಳಿಸಲು ಹೇಳಿ

( ಸಂಪೂರ್ಣಗೊಂಡ ಮೇಲೆ ಉತ್ತರಗಳನ್ನು ಚರ್ಚಿಸಿ. ವಿವರಿಸಿ- ಕೆಲವು ಕೆಲಸಗಳನ್ನು ನಾವು  ಮಾಡಬಹುದು.  ಇನ್ನೂ ಕೆಲವು ಕೆಲಸಗಳನ್ನು ನಮಗೆ ಮಾಡಲು ಸಾಧ್ಯವಿಲ್ಲ. ಇಂತಹ ಕೆಲಸಗಳಿಗೆ ಉದಾಹರಣೆ: ಭಾರವಾದ ಕಲ್ಲನ್ನು ಎತ್ತುವುದು, ದೊಡ್ಡ ಮರವನ್ನು ಕಡಿಯುವುದು, ಖಂಡಗಳನ್ನು ದಾಟಿ ನಡೆಯುವುದು, ಗಗನಚುಂಬಿ ಕಟ್ಟಡಗಳನ್ನು ಏರುವುದು. ಈ ಕೆಲಸಗನ್ನು ಯಂತ್ರಗಳು ಸುಲಭ ಹಾಗು ಸುರಕ್ಷಿತವಾಗಿಸುತ್ತವೆ)

 

ಹಂತ 3: ಪುನರ್ ಮನನ

ಚಟುವಟಿಕೆ 3

ವಿದ್ಯಾರ್ಥಿಗಳಿಗೆ ಐದು ಗುಂಪುಗಳನ್ನುಮಾಡಿಕೊಳ್ಳುವಂತೆ ಹೇಳಿ.

ಪ್ರತಿ ಗುಂಪನ್ನು ಕರೆದು, ಡಬ್ಬಿಯಿಂದ ಒಂದು ವಸ್ತುವನ್ನು ( ಸಂಪನ್ಮೂಲ 1ರಲ್ಲಿ ನೀಡಲಾಗಿರುವ ಪಟ್ಟಿಯ ಪ್ರಕಾರ ಶಿಕ್ಷಕಿ ಇದನ್ನು ತಯಾರಿಸುತ್ತಾರೆ) ತೆಗೆಯಲು ಹೇಳಿ.

( ವಿದ್ಯಾರ್ಥಿಗಳಿಂದ ನಿಖರವಾದ ಉತ್ತರಗಳನ್ನು ಪಡೆಯಲು, ಈಗ ಡಬ್ಬಿಯಲ್ಲಿರುವ ಯಂತ್ರಗಳಲ್ಲದ ವಸ್ತುಗಳಾದ ಆಟಿಕೆಗಳು ಹಾಗು ಇತರ ವಸ್ತುಗಳನ್ನು ತೆಗೆದುಬಿಡಿ)

ತಾವು ತೆಗೆಯುವ ಪ್ರತಿಯೊಂದು ಯಂತ್ರದ ವಸ್ತುವಿನ ಬಗ್ಗೆ ಇನ್ನೂ ಹೆಚ್ಚಿನ ವಿಷಯಗಳನ್ನು ಹೇಳಲು ವಿದ್ಯಾರ್ಥಿಗಳಿಗೆ ತಿಳಿಸಿ.(ಈ ಯಂತ್ರದ ಹೆಸರೇನು? ಅದನ್ನು ಎಲ್ಲಿ ಬಳಸುವಿರಿ? ಅದನ್ನು ಯಾವಾಗ ಬಳಸುವಿರಿ? ಅದನ್ನು ಈ ಹಿಂದೆ ಎಲ್ಲಿ ನೋಡಿದ್ದಿರಿ? ಸಂಕ್ಷಿಪ್ತವಾದ ವಿವರಣೆ ನೀಡಲು ಹೇಳಿ)

ಪರಾಮರ್ಶನೆಗೆ  

ತರಗತಿ 2: ಭಾರ ಮತ್ತು ಶ್ರಮ

ಕಾಲಾವಧಿ: 40 ನಿಮಿಷ

ಗುರಿ ಮತ್ತು ಉದ್ದೇಶಗಳು

 1.  ವಿದ್ಯಾರ್ಥಿಗಳು"ಭಾರ "ಮತ್ತ್ತು" ಶ್ರಮ" ವನ್ನು ತಮ್ಮ ಸ್ವಂತ ಪದಗಳಲ್ಲಿ ವ್ಯಾಖ್ಯಾನಿಸುತ್ತಾರೆ
 2.  "ಭಾರ" ಮತ್ತು "ಶ್ರಮ"ದ ನಡುವಿನ ಸಂಬಂಧವನ್ನು ಹುಡುಕಲು ವಿದ್ಯಾರ್ಥಿಗಳು ಚಟುವಟಿಕೆಯೊಂದನ್ನು ಮಾಡುತ್ತಾರೆ.
 3.  ನೀಡಿರುವ ಉದಹರಣೆಗಳಲ್ಲಿ ವಿದ್ಯಾರ್ಥಿಗಳು "ಭಾರ" ಹಾಗು "ಶ್ರಮ"ವನ್ನು ಗುರುತಿಸುತ್ತಾರೆ.

ಬೋಧನಾ ಸಾಮಗ್ರಿಗಳು

 1. ಸಂಪನ್ಮೂಲ 2-ಎ ನಲ್ಲಿ ನೀಡಿರುವಂತೆ ( ಚಟುವಟಿಕೆ 2ಕ್ಕೆ) ಎಲ್ಲಾ ಸಾಮಗ್ರಿಗಳನ್ನು ಹೊಂದಿರುವ ಪ್ರಯೋಗದ ಕಿಟ್ಟಿನ 6 ಸೆಟ್ ಗಳು.
 2. ಸಂಪನ್ಮೂಲ 2 -ಬಿ ಯ ಪ್ರತಿಗಳು ( ಪುನರ್ಮನನ)

 

ಹಂತಗಳು

ಹಂತ 1: ಆಸಕ್ತಿ ಮೂಡಿಸುವುದು

 ಚಟುವಟಿಕೆ 1

ವಿದ್ಯಾರ್ಥಿಗಳಿಗೆ ವೃತ್ತಾಕಾರವಾಗಿ ಕುಳಿತುಕೊಳ್ಳಲು ಹೇಳಿ

ಯಾರಾದರು ಒಬ್ಬರನ್ನು ಸ್ವ-ಇಚ್ಛೆಯಿಂದ ಬರುವಂತೆ ಕರೆಯಿರಿ

 1.  ಆ ವಿದ್ಯಾರ್ಥಿಗೆ ತರಗತಿಯ ಬಾಗಿಲಿನ ಹಿಂದೆ ನಿಂತು ಅದನ್ನು ತಳ್ಳಲು ಹೇಳಿ.

(ಬಾಗಿಲು ಇಲ್ಲದಿದ್ದರೆ, ವಿದ್ಯಾರ್ಥಿಗೆ ಏನು ಲಭ್ಯವೋ ಅದನ್ನು-ಒಂದು ಕುರ್ಚಿ ಅಥವಾ ಪುಸ್ತಕ ಅಥವಾ ಮೇಜನ್ನು ಎತ್ತಲು ಹೇಳಿ.)

ಕೆಳಗಿನ ರೀತಿಯ ಪ್ರಶ್ನೆಗಳನ್ನು ಕೇಳಿ-

ಅವನು/ಅವಳು ಏನು ಮಾಡುತ್ತಿದಾನೆ?

ಯಾರಾದರೂ ಈ ಕೆಲಸವನ್ನು ಬೇರೆ ರೀತಿಯಲ್ಲಿ ಮಾಡಲು ಬಯಸುತ್ತೀರಾ?

(ಈಗ ವಿಷಯವನ್ನು ಪರಿಚಯಿಸುತ್ತಾ, ಈ ರೀತಿ ತಳ್ಳುವುದು ಹಾಗು ಎಳೆಯುವುದಕ್ಕೆ ಶಕ್ತಿ/ಬಲ ಅಥವಾ "ಶ್ರಮ" ಎಂದು ಹೆಸರು. ಪುಸ್ತಕ ಅಥವಾ ಬಾಗಿಲು, "ಭಾರ" ಆಗುತ್ತದೆ. ನಾವು ಭಾರವನ್ನು ಎತ್ತ ಬೇಕಾದರೆ, ಅದಕ್ಕೆ ಸಮನಾದ "ಶ್ರಮ"ವನ್ನೂ ಹಾಕಬೇಕು. ಯಂತ್ರಗಳು ಈ ಶ್ರಮವನ್ನು ಇನ್ನೂ ಹೆಚ್ಚಿನ ಅನುಕೂಲಕರವಾದ ರೀತಿಯಲ್ಲಿ ಹಾಕಿ ನಮ್ಮ ಕೆಲಸವನ್ನು ಇನ್ನೂ ಸುಲಭ ಮಾಡುತ್ತವೆ.)

 

ಹಂತ 2

ಚಟುವಟಿಕೆ 2

 1. ವಿದ್ಯಾರ್ಥಿಗಳನ್ನು 5 ಗುಂಪುಗಳಾಗಿ ವಿಂಗಡಿಸಿ
 2.  ಪ್ರತಿ ಗುಂಪಿಗೂ ಪ್ರಾಯೋಗಿಕ ಕಿಟ್ ಅನ್ನು ನೀಡಿ ( ಸಂಪನ್ಮೂಲ 2ಕಿಎಕಿರಲ್ಲಿ ನೀಡಿರುವ ಸಾಮಗ್ರಿಗಳ ಪಟ್ಟಿಯನ್ನು ಬಳಸಿ ಶಿಕ್ಷಕಿ ತಯಾರಿಸಿರುವುದು)
 3.  ಸಂಪನ್ಮೂಲ 2 ಎ ರಲ್ಲಿ ನೀಡಿರುವಂತೆ ಹಂತ ಹಂತವಾಗಿ ಸೂಚನೆಗಳನ್ನು ನೀಡಿ. ( ಚಟುವಟಿಕೆಯಲ್ಲಿ ಹೇಗೆ ಮುಂದುವರೆಯುವುದೆಂದು ತಿಳಿಸುವುದು)
 4. "ಭಾರ" ಮತ್ತು "ಶ್ರಮ" ವನ್ನು ವಿವರಿಸಿ.

ಹಂತ 3

ಚಟುವಟಿಕೆ 3: ಪುನರ್ಮನನ

 1. ಸಂಪನ್ಮೂಲ 2 ಬಿ ಯ ಪ್ರತಿಗಳನ್ನು ವಿತರಿಸಿ
 2. ವಿದ್ಯಾರ್ಥಿಗಳೊಂದಿಗೆ ಉತ್ತರಗಳನ್ನು ಚರ್ಚಿಸಿ

(ಶಿಕ್ಷಕರು  ಸಂಪನ್ಮೂಲ 2 ಬಿ ಯಲ್ಲಿ ನೀಡಿರುವ ಸಂದರ್ಭಗಳನ್ನು ವಿವರಿಸಿ/ಪ್ರದರ್ಶಿಸಿ ಸಹ ವಿದ್ಯಾರ್ಥಿಗಳಿಗೆ "ಭಾರ" ಹಾಗು "ಶ್ರಮ"ವನ್ನು ಹೆಸರಿಸಿ ಎಂದು ಹೇಳಬಹುದು)

 

ತರಗತಿ 3: ಸನ್ನೆಕೋಲು/ಮೀಟುಗೋಲು

ಕಾಲಾವಧಿ: 40 ನಿಮಿಷ

ಗುರಿ ಮತ್ತು ಉದ್ದೇಶಗಳು

 1. ವಿದ್ಯಾರ್ಥಿಗಳು ಒಂದು ಸರಳವಾದ ಸನ್ನೆಕೋಲನ್ನು ವಿವರಿಸುತ್ತಾರೆ
 2. ಒಂದು ಪ್ರಯೋಗದ ಮೂಲಕ ವಿದ್ಯಾರ್ಥಿಗಳು ಸನ್ನೆಕೋಲುಗಳ ಮೂಲತತ್ವವನ್ನು ಸಾಮಾನ್ಯೀಕರಿಸುತ್ತಾರೆ
 3. ಅನಿಕೆ/ಊರಿಕೆಯ/ ಸನ್ನೆಗೋಲಿನ ಕೇಂದ್ರಬಿಂದುವನ್ನು ವಿದ್ಯಾರ್ಥಿಗಳು ಅಂದಾಜು ಮಾಡುತ್ತಾರೆ.

ಬೋಧನಾ ಸಾಮಗ್ರಿಗಳು

 1. ಬಿಗಿಯಾಗಿ ಮುಚ್ಚಿದ ಒಂದು ಡಬ್ಬಿ ಹಾಗು ಒಂದು ಚಮಚ ( ಹಂತ 1ಕ್ಕೆ)
 2. ಸಂಪನ್ಮೂಲ 3 -ಎ ಯಲ್ಲಿ ನೀಡಿದ ಹಾಗೆ ಸಾಮಗ್ರಿಗಳ 6 ಸೆಟ್ಗಳು

 

ಹಂತಗಳು

ಹಂತ 1; ಆಸಕ್ತಿ ಮೂಡಿಸುವುದು.

 1. ವಿದ್ಯಾರ್ಥಿಗಳನ್ನು 5-6 ಗುಂಪುಗಳಾಗಿ ವಿಂಗಡಿಸಿ ( ಅವರ ಸಂಖ್ಯೆಗೆ ಅನುಗುಣವಾಗಿ)
 2. ಗಟ್ಟಿಯಾಗಿ ಮುಚ್ಚಿದ ಡಬ್ಬವನ್ನು ತೆಗೆದುಕೊಂಡು ಮುಚ್ಚಳವನ್ನು ತೆಗೆಯಲು ಪ್ರಯತ್ನಿಸಿ ( ನಿಮ್ಮ ಕೈಯಿಂದ)
 3. ನಂತರ ಮುಚ್ಚಳವನ್ನು ತೆಗೆಯಲು ಚಮಚವನ್ನು ಬಳಸಿ.

( ಚರ್ಚೆಯನ್ನು ಆರಂಭಿಸಿ. ಎಲ್ಲಾ ರೀತಿಯ ಉತ್ತರಗಳನ್ನು ಸ್ವೀಕರಿಸಿ.

ಸಾಮಾನ್ಯವಾಗಿ ಮುಚ್ಚಳವನ್ನು ಹೇಗೆ ತೆಗೆಯುತ್ತೀರಿ?

ಮುಚ್ಚಳ ಬಿಗಿಯಾಗಿದ್ದರೆ ಏನು ಮಾಡುತ್ತೀರಿ?

ಚಮಚದಿಂದ ಮುಚ್ಚಳವನ್ನು ತೆಗೆಯುವುದು ಸುಲಭವೇ?

ನಮ್ಮ ಕೆಲಸವನ್ನು ಸುಲಭವಾಗಿಸುವ ವಸ್ತುವನ್ನು ಏನೆಂದು ಕರೆಯುತ್ತೇವೆ?

ಆದ್ದರಿಂದ ಈ ಚಮಚ ಒಂದು ಯಂತ್ರ. ನೀವೆಲ್ಲಾ ಒಪ್ಪುತ್ತೀರಾ? ಈ ಯಂತ್ರದ ಹೆಸರೇನೆಂದು ಗೊತ್ತಾ?

"ಸನ್ನೆಕೋಲು" ವಿಷಯವನ್ನು ಪರಿಚಯಿಸಿ. ಸನ್ನೇಕೋಲು ನಮ್ಮ ಕೆಲಸವನ್ನು ಸುಲಭವಾಗಿಸುವ ಒಂದು ಸರಳ ಯಂತ್ರ.  ಒಂದು ನಿಗದಿತ ಬಿಂದುವಿನ ಮೇಲಿಂದ ಸುತ್ತಬಲ್ಲ ಗಡುಸಾದ ಸರಳು. ಸನ್ನೆಕೋಲು ನಿಗದಿತ ಬಿಂದುವನ್ನು ಅನಿಕೆ/ ಊರಿಕೆ/ ಸನ್ನೆಕೋಲಿನ ಕೇಂದ್ರಬಿಂದು ಎಂದು ಕರೆಯಲಾಗುತ್ತದೆ. ಜರುಗಿಸಬೇಕಾದ ಅಥವಾ ಎತ್ತಬೇಕಾದ ವಸ್ತು "ಭಾರ". ಈ ಭಾರವನ್ನು ಎತ್ತಲು/ ಜರುಗಿಸಲು ಹಾಕುವ ಶಕ್ತಿಯೇ "ಶ್ರಮ".

ಹಂತ 2: ವಿವರಣೆ

 1. ಸಂಪನ್ಮೂಲ 3  -ಎ ರಲ್ಲಿ ನಮೂದಿಸಿರುವಂತೆ ಪ್ರತಿ ಗುಂಪಿಗೂ ಸಾಮಗ್ರಿಗಳ ಒಂದು ಸೆಟ್ ನೀಡಿ.
 2. ಸಂಪನ್ಮೂಲ 3 -ಎ  ರಲ್ಲಿ ನೀಡಿರುವಂತೆ ಹಂತ ಹಂತವಾದ ಸೂಚನೆಗಳನ್ನು ನೀಡಿ.
 3. ಸಂಪನ್ಮೂಲ 3 -ಎ ರಲ್ಲಿರುವ ಕೋಷ್ಟಕವನ್ನು ಪೂರ್ತಿ ಮಾಡಲು ಹೇಳಿ.

( ಕಪ್ಪು ಹಲಗೆಯ ಮೇಲೆ ಕೋಷ್ಟಕವನ್ನು ಬರೆಯಿರಿ, ವಿದ್ಯಾಗಳಿಗೆ ತಮ್ಮ ತೀರ್ಮಾನಗಳನ್ನು ತಿಳಿಸಲು ಹೇಳಿ ಉದಾ: ಈ ಪ್ರಯೋಗದ ಕೊನೆಯಲ್ಲಿ ಅವರು ಏನನ್ನು ನಿಶ್ಚಯಿಸುತ್ತಾರೆ. ಪ್ರಯೋಗದ ಉದ್ದೇಶದೊಂದಿಗೆ ಇದನ್ನು ಹೊಂದಿಸಿ. ನಮ್ಮ ಕೆಲಸವನ್ನು ಸರಳಗೊಳಿಸುವ ಸರಳ ಯಂತ್ರ ಸನ್ನೆಕೋಲೆಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಿ)

ಹಂತ 3: ಮೌಲ್ಯಾಂಕನ. ಪುನರ್ಮನನ

 1. ಸಂಪನ್ಮೂಲ 3 ಕಬಿಕಿಯಲ್ಲಿ ನೀಡಿರುವ ಕಾರ್ಯ ಹಾಳೆಯನ್ನು ನೀಡಿ
 2. ಅದನ್ನು ಬರೆದು ಪೂರ್ಣಗೊಂಡ ಮೇಲೆ ತರಗತಿಯಲ್ಲಿ ಉತ್ತರಗಳನ್ನು ಚರ್ಚಿಸಿ.

ತರಗತಿ 4: ಸನ್ನೆಕೋಲಿನ ಮಾದರಿಗಳು

ಕಾಲಾವಧಿ: 40 ನಿಮಿಷ

ಗುರಿ ಮತ್ತು ಉದ್ದೇಶಗಳು

 1. ಸನ್ನೆಕೋಲಿನ ಸರಳವಾದ ವ್ಯಾಖ್ಯಾನವನ್ನು ವಿದ್ಯಾರ್ಥಿಗಳು ನೆನಪಿಸಿಕೊಳ್ಳುತ್ತಾರೆ.
 2. ವಿವಿಧ ಮಾದರಿಯ ಸನ್ನೆಕೋಲುಗಳನ್ನು ವಿದ್ಯಾರ್ಥಿಗಳು ವರ್ಗೀಕರಿಸುತ್ತಾರೆ.
 3. ವಿದ್ಯಾರ್ಥಿಗಳು 3 ಮಾದರಿಯ ಸನ್ನೆಕೋಲುಗಳನ್ನು ಗುರುತಿಸುತ್ತಾರೆ.

ಬೋಧನಾ ಸಾಮಗ್ರಿಗಳು

ಹಂತಗಳು

ಹಂತ 1: ಆಸಕ್ತಿ ಮೂಡಿಸುವುದು.

ಚಟುವಟಿಕೆ 1

 1. ಮೇಜಿನ ಮೇಲೆ ಒಂದು ಪುಸ್ತಕವನಿಟ್ಟು ಸ್ವಯಿಚ್ಚೆಯಿಂದ ಬರುವ ಯಾವುದೇ ವಿದ್ಯಾರ್ಥಿಯನ್ನು ಕರೆಯಿರಿ.
 2. ಎರಡು ಸಂಪನ್ಮೂಲಗಳ ನೆರವಿನಿಂದ ಆ ಪುಸ್ತಕವನ್ನು ಜರುಗಿಸಲು ವಿದ್ಯಾರ್ಥಿಗೆ ಹೇಳಿ

( ಲಭ್ಯವಿರುವ ಯಾವುದೇ ಸಂಪನ್ಮೂಲ- ಅಳತೆ ಪಟ್ಟಿ ಅಥವಾ ಪೆನ್ಸಿಲ್ ಅಥವಾ ಕೋಲು, ಯಾವುದಿದೆಯೋ ಅದನ್ನು ಬಳಸಿ. ಇತರ ವಿದ್ಯಾರ್ಥಿಗಳಿಗೆ ಚಟುವಟಿಕೆಯನ್ನು ಗಮನಿಸಲು ಹೇಳಿ. ಆ ಕೆಲಸವನ್ನು ಮಾಡುತ್ತಿರುವ ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಲು ಹೇಳಿ. ಅಷ್ಟರಲ್ಲಿ ಸನ್ನೆಕೋಲಿನ ಬಗ್ಗೆ ನೆನಪಿಸಿಕೊಳ್ಳಲು ತರಗತಿಗೆ ಹೇಳಿ. ವಿದ್ಯಾರ್ಥಿ ಬಳಸುತ್ತಿರುವ ಅಳತೆ ಪಟ್ಟಿ ಅಥವಾ ಕೋಲು ಸಹ ಒಂದು ಸನ್ನೆಕೋಲೆಂದು ತಿಳಿಸಿ)

ಹಂತ 2 ವಿವರಣೆ

ಚಟುವಟಿಕೆ 2: ವಿದ್ಯಾರ್ಥಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ.

 1. ಪ್ರಯೋಗದ ಕಿಟ್ಟಿನ 6 ಸೆಟ್ಗಳನ್ನು ತಯಾರಿಸಿ(ಸಂಪನ್ಮೂಲ 4 ಎ ರಲ್ಲಿ ನೀಡಿರುವಂತೆ) ಎಲ್ಲಾ ಗುಂಪುಗಳಿಗೂ ನೀಡಿ.
 2. ಸಂಪನ್ಮೂಲ 4 -ಎ ನಲ್ಲಿ ನೀಡಿರುವಂತೆ ಹಂತ ಹಂತವಾಗಿ ಸೂಚನೆಗಳನ್ನು ನೀಡಿ.
 3. ಒಂದು ಕೋಷ್ಟಕದಲ್ಲಿ ಅವರು ಗಮನಿಸಿದ್ದನ್ನು ಬರೆದಿಡಲು ವಿದ್ಯಾರ್ಥಿಗಳಿಗೆ ಹೇಳಿ.( ಕೋಷ್ಟಕವನ್ನು ಕಪ್ಪು ಹಲಗೆಯ ಮೇಲೆ ಬರೆಯಿರಿ)

( ವಿವರಿಸಿ: ಮೂರು ತರಹದ ಸನ್ನೆಕೋಲುಗಳಿವೆ. ಅವೆಂದರೆ: ಮೊದಲನೆ ಕ್ರಮ, ಎರಡನೆ ಕ್ರಮ ಹಾಗು ಮೂರನೆ ಕ್ರಮ. ಮೊದಲನೆ ಕ್ರಮದಲ್ಲಿ ಅನಿಕೆಯು, ಭಾರ ಮತ್ತು ಶ್ರಮದ ನಡುವೆ ಇರುತ್ತದೆ. ಎರಡನೆ ಕ್ರಮದಲ್ಲಿ ಭಾರ, ಅನಿಕೆ ಮತ್ತು ಶ್ರಮದ ನಡುವೆ ಇರುತ್ತದೆ. ಮೂರನೆ ಕ್ರಮದಲ್ಲಿ ಶ್ರಮವು ಭಾರ ಮತ್ತು ಅನಿಕೆಯ ಮಧ್ಯೆ ಇರುತ್ತದೆ.)

ಹಂತ 3: ಕಾರ್ಯನಿಯೋಜನೆ

 1. ಮೂರು ಮಾದರಿಯ ಸನ್ನೆಕೋಲಿನ ಸ್ಥೂಲ ಚಿತ್ರರೂಪದ ಒಂದು ರೇಖಾ ಚಿತ್ರವನ್ನು ಬರೆದು ಅದರಲ್ಲಿ ಭಾರ, ಶ್ರಮ ಹಾಗು ಅನಿಕೆಯನ್ನು ಗುರುತಿಸಿ.

 

ತರಗತಿ 5: ರಾಟೆ

 ಕಾಲಾವಧಿ: 40 ನಿಮಿಷ

ಗುರಿ ಮತ್ತು ಉದ್ದೇಶಗಳು

 1. ವಿದ್ಯಾರ್ಥಿಗಳು ರಾಟೆಯನ್ನು ಒಂದು ಯಂತ್ರವಾಗಿ ಗುರುತಿಸುತ್ತಾರೆ.
 2. ರಾಟೆಯನ್ನು ವಿದ್ಯಾರ್ಥಿಗಳು ವಿವರಿಸುತ್ತಾರೆ
 3. ರಾಟೆ ಏಕೆ ಯಂತ್ರವೆಂದು ವಿದ್ಯಾರ್ಥಿಗಳು ಗಮನಿಸುತ್ತಾರೆ
 4. ರಾಟೆಯನ್ನು ಬಳಸಿ ವಿದ್ಯಾರ್ಥಿಗಳು ಸಮಸ್ಯೆಯನ್ನು ಬಗೆಪರಿಹರಿಸುತ್ತಾರೆ.

ಬೋಧನಾ ಸಾಮಗ್ರಿಗಳು

ಸಂಪನ್ಮೂಲ 5ಎ ಯ ಪ್ರತಿ ಹಾಗು ಅಲ್ಲಿ ಬರೆದಿರುವ ಸಾಮಗ್ರಿಗಳು ಹಾಗು 5 ಸೆಟ್ಗಳು

ಹಂತಗಳು

ಹಂತ 1: ಆಸಕ್ತಿ ಮೂಡಿಸುವುದು

 1. ವಿದ್ಯಾರ್ಥಿಗಳನ್ನು 5 ಗುಂಪುಗಳಾಗಿ ವಿಂಗಡಿಸಿ
 2.  ಒಂದು ಸ್ವಾರಸ್ಯಕರ ವಿಷಯವನ್ನು ಹೇಳಿ

(ಅ. ಒಂದು ಮಗು ಭಾವಿಯಲ್ಲಿ ಬಿದ್ದಿದೆ.ಅದನ್ನು ಹೇಗೆ ಕಾಪಾಡುತ್ತೀರಿ?

ಆ. ನೀವು ರಸ್ತೆಯಲ್ಲಿ ಹೋಗುತ್ತಿದ್ದೀರಿ  ತುಂಬಾ ಬಾಯಾರಿಕೆಯಾಗುತ್ತದೆ. ಅಲ್ಲೇ ಹತ್ತಿರದಲ್ಲಿ ಬಾವಿಯಿದೆ, ಅದರಿಂದ ನೀರನ್ನು ಹೇಗೆ ತೆಗೆದುಕೊಳ್ಳುತ್ತೀರಾ?

ವಿದ್ಯಾರ್ಥಿಗಳು ನೀಡುವ ಎಲ್ಲಾ ಉತ್ತರಗಳನ್ನು ಸ್ವೀಕರಿಸಿ, ಅಲ್ಲಿಗೆ ಚರ್ಚೆಯನ್ನು ನಿಲ್ಲಿಸಿ, ತರಗತಿಯ ಕೊನೆಯಲ್ಲಿ ಅದನ್ನು ಚರ್ಚಿಸುವುದಾಗಿ ತಿಳಿಸಿ)

 1. ಅವರಿಗೆ ರಾಟೆಯನ್ನು ತೋರಿಸಿ

( ಇದನ್ನು ನೀವು ಎಲ್ಲಾದರೂ ನೋಡಿದ್ದೀರಾ?

ನಿಮ್ಮ ಕೆಲಸವನ್ನು ಇದು ಸುಲಭವಾಗಿಸಲು ನೆರವಾಗುವುದಾ?

ಇದನ್ನು ನಾವು ಯಂತ್ರವೆಂದು ಕರೆಯಬಹುದೇ?

ಅದನ್ನು ವಿವರಿಸಿ. ಎಲ್ಲಾ ರೀತಿಯ ಉತ್ತರಗಳನ್ನು ಸ್ವೀಕರಿಸಿ.)

 ಹಂತ 2: ವಿವರಣೆ

ಚಟುವಟಿಕೆ 1

 

 1. ಸಂಪನ್ಮೂಲ 5 -ಎ ರಲ್ಲಿ ನೀಡಿರುವ ಸಾಮಗ್ರಿಗಳ ಪಟ್ಟಿಯನ್ನು ಬಳಸಿ ಪ್ರಾಯೋಗಿಕ ಕಿಟ್ಟಿನ 6 ಸೆಟ್ಗಳನ್ನು ಸಿದ್ಧಪಡಿಸಿ.
 2. ಕಿಟ್ ಅನ್ನು ವಿತರಿಸಿ ಸಂಪನ್ಮೂಲ 5 -ಎ ರಲ್ಲಿ ನೀಡಿರುವ ಸೂಚನೆಗಳನ್ನು ಹಂತ ಹಂತವಾಗಿ ನೀಡಿ.

( ನೀವು ಭಾರವನ್ನು ವಿವಿಧ ರೀತಿಯಲಿ ಎತ್ತಲು ಪ್ರಯತ್ನಿಸಿದ್ದೀರಿ. ಎತ್ತುವುದು ಯಾವಾಗ ಸುಲಭವಾಗಿತ್ತು? ದಾರದ ಸುರಳಿ, ಶ್ರಮವನ್ನು ಹೆಚ್ಚು ಸೌಕರ್ಯಕರವಾದ ನಿಟ್ಟಿನಲ್ಲಿ ಶ್ರಮವನ್ನು ಹಾಕುವಂತೆ ಮಾಡಿ ನಿಮ್ಮ ಕೆಲಸವನ್ನು ಸುಲಭವಾಗಿಸಿತು. ರಾಟೆ ಶ್ರಮವನ್ನು ಅನುಕೂಲಕರ ದಿಕ್ಕಿನಲ್ಲಿ ಹಾಕುವುದರಿಂದ, ಕೆಲಸವನ್ನು ಸುಲಭಗೊಳಿಸುವ ಒಂದು ಯಂತ್ರ.)

ಹಂತ 3: ಪುನರ್ಮನನ

 1. ಹಂತ 1ರಲ್ಲಿ ನೀವು ನೀಡಿದ್ದ ಸಂದರ್ಭವನ್ನು ನೆನೆಪಿಸಿಕೊಳ್ಳಿ.
 2. ಸಮಸ್ಯೆಗೆ ಪರಿಹಾರವನ್ನು ಹುಡುಕಲು ಹೇಳಿ.

ಪರಾಮರ್ಶನ ಸಾಮಗ್ರಿಗಳು

http://dickinsonn.ism-online.org/category/g10-int-sci/page/2/

http://explore.ecb.org/videos/VLC_media?P1=VLC136&REFERER=OTHER

http://www.the-office.com/summerlift/pulleybasics.htm

http://www.mikids.com/SMachinesWheels.htm;

http://learn.uci.edu/oo/getOCWPage.php?course=OC0811004&lesson=006&topic=011&page=24

http://www.wmich.edu/engineer/ceee/edcsl/pdf/Simple%20Machine%20STEM%20guide.pdf- about machine lesson plan with work sheet

http://www.learnnc.org/lp/pages/2870

http://www.youtube.com/watch?v=WR4L_t6IAfc

ಮೂಲ:ಚಿತ್ರಾ ವೆಂಕಟರಾಮನ್,

ಚಿತ್ರಾ ವೆಂಕಟರಾಮನ್, ಅಜೀಂ ಪ್ರೇಮ್ಜಿ ಫೌಂಡೇಷನ್, ಬೆಂಗಳೂರು, ಇಲ್ಲಿ ಶೈಕ್ಷಣಿಕ ಹಾಗು ಅಧ್ಯಾಪನ ಶಾಸ್ತ್ರ ತಜ್ಞರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಇವರಿಗೆ 15 ವರ್ಷಗಳ ಅನುಭವವಿದ್ದು, ವಿವಿಧ ಸಂಸ್ಥೆಗಳಲ್ಲಿ ಅನೇಕ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆಅವುಗಳೆಂದರೆಹಿರಿಯ ಶಿಕ್ಷಣ ತಜ್ಞರು, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗು ಸಲಹೆಗಾರ ಉಪ-ಮುಖ್ಯೋಪಾಧ್ಯಾಯರಾಗಿ ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ ಕ್ಷೇತ್ರದ ಇವರ ವೃತ್ತಿಯಲ್ಲಿಇವರು ಕಾರ್ಯಮಾದರಿಗಳನ್ನು ಹಾಗು ಪ್ರಮುಖ ಶಿಕ್ಷಣ ವಿಧಾನಗಳಲ್ಲಿ ದೂರಗಾಮಿ ಮಾರ್ಪಾಡುಗಳನ್ನು ತಂದಿದ್ದಾರೆ. ಇವರನ್ನು chitra@azimpremjifoundation.org ರ ಮೂಲಕ ಸಂರ್ಕಿಸಬಹುದು.

ಕನ್ನಡಾನುವಾದ ಮತ್ತು ಸಂಪಾದನೆ: ಜೈಕುಮಾರ್ ಮರಿಯಪ್ಪ

 

19198 ನೊಂದಾಯಿತ ಬಳಕೆದಾರರು
7451 ಸಂಪನ್ಮೂಲಗಳು