ಜಲವೆಂಬ ಜೀವಾಮೃತ-5: ಜಲ ಸಂರಕ್ಷಣೆ

Resource Info

ಮೂಲ ಮಾಹಿತಿ

 ನೀರಿನ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಹಾಗು ನೀರನ್ನು ಉಳಿಸುವ ವಿಧಾನಗಳನ್ನು ಗುರುತಿಸುವ ಉದ್ದೇಶದಿಂದಈ ಪಾಠ ಯೋಜನೆಯಲ್ಲಿ 6ನೇ ವರ್ಗದ ವಿದ್ಯಾರ್ಥಿಗಳು, ಕಥೆಯ ಮೂಲಕ ನೀರಿನ ಅಭಾವದಿಂದ ಪರಿಸರದ ಮೇಲೆ ಉಂಟಾಗುವ ಪ್ರಭಾವವನ್ನು ತಿಳಿದುಕೊಳ್ಳುತ್ತಾರೆ. ನೀರಿನ ಸಂರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಹಾಗು ನೀರನ್ನು ಸಂರಕ್ಷಿಸುವ ವಿವಿಧ ವಿಧಾನಗಳ ಬಗ್ಗೆ ಅವರಿಗೆ ಅರಿವು ಮೂಡಿಸಲಾಗುತ್ತದೆ.


 

ಪಾಠ ಯೋಜನೆ ವಿವರಗಳು

ಕಾಲಾವಧಿ: 
00 hours 40 mins
ಪೀಠಿಕೆ: 

 ಈ ಪಾಠಯೋಜನೆಯಲ್ಲಿ 6ನೇ ವರ್ಗದ ವಿದ್ಯಾರ್ಥಿಗಳು, ಕಥಯ ಮೂಲಕ ನೀರಿನ ಅಭಾವದಿಂದ ಪರಿಸರದ ಮೇಲೆ ಉಂಟಾಗುವ ಪ್ರಭಾವವನ್ನು ತಿಳಿದುಕೊಳ್ಳುತ್ತಾರೆ. ನೀರಿನ ಸಂರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಹಾಗು ನೀರನ್ನು ಸಂರಕ್ಷಿಸುವ ವಿವಿಧ ವಿಧಾನಗಳ ಬಗ್ಗೆ ಅವರಿಗೆ ಅರಿವು ಮೂಡಿಸಲಾಗುತ್ತದೆ.

 

 

ಉದ್ದೇಶ: 

ಉದ್ದೇಶ: ನೀರಿನ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಹಾಗು ನೀರನ್ನು ಉಳಿಸುವ ವಿಧಾನಗಳನ್ನು ಗುರುತಿಸುವುದು.
 

ಹಂತಗಳು : 

ಬೋಧನಾ ಸಾಮಗ್ರಿ
•   ' ಮಂಡೂಕ ಎಂಬ ಕಪ್ಪೆ’ ಕಥೆಯ ಒಂದು ಪ್ರತಿ
•    `ನೀರನ್ನು ಉಳಿಸಲು ಸಲಹೆಗಳು’ ಬಗ್ಗೆ ಶಿಕ್ಷಕರಿಗಾಗಿ ಇರುವ ಸಂಪನ್ಮೂಲ.
ಹಂತಗಳು

ಹಂತ 1:
` ಮಂಡೂಕ ಎಂಬ ಕಪ್ಪೆ’ ಕಥೆಯ ಮೂಲಕ ನೀರಿನ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಮಕ್ಕಳಿಗೆ ಪರಿಚಯಿಸಬಹುದು.
 ‘ಮಂಡೂಕ ಎಂಬ ಕಪ್ಪೆ’ ಕಥೆಯು, ಆಸ್ಟ್ರೇಲಿಯಾದ ಜಾನಪದ ಕಥೆ `ಟಿಡ್ಲಿಕ್ ಎಂಬ ಕಪ್ಪೆ` ಕಥೆಯನ್ನು ಆಧರಿಸಿದೆ( ಇದು ಸ್ಥಳೀಯ ಆಸ್ಟ್ರೇಲಿಯನ್‍ಗಳ ಡ್ರೀಮ್ ಟೈಮ್ ಪುರಾಣ ಸಂಗ್ರಹದಿಂದ ಆಯ್ದ ಒಂದು ಪುರಾಣ ಕತೆ) ಇದನ್ನು ಭಾರತೀಯ ಸನ್ನಿವೇಶಕ್ಕೆ ಸರಿಹೊಂದುವಂತೆ ಮಾರ್ಪಡಿಸಲಾಗಿದೆ.
ಶಿಕ್ಷಕಿ ` ಮಂಡೂಕ ಎಂಬ ಕಪ್ಪೆ’ ಕಥೆಯನ್ನು ಓದಿ ಹೇಳಿ, ಈ ಕೆಳಗಿನ ಅಂಶಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚೆಯನ್ನು ಪ್ರಾರಂಭಿಸುತ್ತಾರೆ:
•    ತಾನು ಕುಡಿದ ನೀರು ಮಂಡೂಕ ಕಪ್ಪೆಗೆ ಎಲ್ಲಿ ದೊರಕಿತು? (ಈ ಚರ್ಚೆ ನೀರಿನ ಮೂಲದತ್ತ ಕೊಂಡೊಯ್ಯುತ್ತದೆ.)
•    ಮಂಡೂಕ ಕಪ್ಪೆ ಎಲ್ಲಾ ನೀರನ್ನು ಕುಡಿದ ಮೇಲೆ ಭಾರತಕ್ಕೆ ಏನಾಗುತ್ತದೆ? (ನೀರಿನ ಅಭಾವದ ಬಗ್ಗೆ ಚರ್ಚೆ)
•    ಮಂಡೂಕ ನಕ್ಕು ಎಲ್ಲಾ ನೀರನ್ನು ಹೊರಹಾಕಿದಾಗ ಏನಾಗುತ್ತದೆ? ( ಪ್ರವಾಹದ ಪರಿಸ್ಥಿಯ ಬಗ್ಗೆ ಚರ್ಚೆ/ ಬರಗಾಲದ ಅನಂತರ ಸಾಮಾನ್ಯ ಸ್ಥಿತಿಗೆ ಮರಳುವುದು)
ಹಂತ 2:
•    ಶಿಕ್ಷಕರು ಕೇಳುವ ಕೆಳಗಿನ ಪ್ರಶ್ನೆಗಳ ಮೂಲಕ, ಪರಿಸರದ ಮೇಲೆ ನೀರಿನ ಅಭಾವದಿಂದ ಉಂಟಾಗುವ ಪರಿಣಾಮದ ಬಗ್ಗೆ ಸಹ ಮಕ್ಕಳು ಚಿಂತಿಸುವಂತಾಗುತ್ತದೆ:
•    ಬರಗಾಲದಂತಹ ನೀರಿನ ಅಭಾವವನ್ನು ನೀವು ಎಂದಾದರೂ ಅನುಭವಿಸಿದ್ದೀರಾ? ಅನುಭವಿಸಿದ್ದರೆ ಅದು ಹೇಗಿತ್ತು?
•    ಈ ಅಭಾವಕ್ಕೆ ಕಾರಣವೇನು?
•    ನೀರನ್ನು ಸಂರಕ್ಷಿಸಲು ನೀವು ಏನು ಮಾಡಿದಿರಿ?
•    ವಿದ್ಯಾರ್ಥಿಗಳು ನೀರಿನ ಅಭಾವವನ್ನು ಅನುಭವಿಸಿರದಿದ್ದರೆ, ಇಂತಹ ಪರಿಸ್ಥಿತಿಯಲ್ಲಿ ಅವರೇನು ಮಾಡುತ್ತಿದ್ದರೆಂದು ಕೇಳಿ?
•    ನೀರನ್ನು ಉಳಿಸುವ/ಸಂರಕ್ಷಿಸುವ ವಿಧಾನಗಳ ಬಗ್ಗೆ ಯೋಚಿಸಿ.

ಶಿಕ್ಷಕಿ ಕಪ್ಪು ಹಲಗೆಯ ಮೇಲೆ ಅವರ ಉತ್ತರಗಳನ್ನು ಬರೆಯುತ್ತಾರೆ ಹಾಗು ಚರ್ಚೆಯ ಸಮಯದಲ್ಲಿ ಯಾವುದಾದರೂ ಅಂಶ ಬರದೇ ಹೋಗಿದ್ದರೆ, ಅದರ ಬಗ್ಗೆ ಸಲಹೆಗಳನ್ನು ಸಹ ನೀಡುತ್ತಾರೆ.

ಶಿಕ್ಷಕರ ಸಂಪನ್ಮೂಲಗಳು
ನೀರಿನ ಸಂರಕ್ಷಣೆ

ಎಲ್ಲರಿಗೂ ಯಾವಾಗಲೂ ನೀರು ದೊರಕುವಂತೆ ಮಾಡಲು ನೀವು ಕೆಲವು ಕೆಲಸಗಳನ್ನು ಮಾಡಬಹುದು:

1.    ಶವರ್ ಬಳಸುವ ಬದಲು ಬಕೆಟ್ಟಿನಲ್ಲಿ ನೀರು ತುಂಬಿಕೊಂಡು ಸ್ನಾನ ಮಾಡಿ
2.    ನಲ್ಲಿಯನ್ನು ತಿರುಗಿಸಿದಾಗ, ಜೋರಾಗಿ ನೀರು ಬಿಡದೆ ನಿಧಾನವಾಗಿ ನೀರು ಹರಿಯಲು ಬಿಡಿ.
3.    ಹಲ್ಲುಜ್ಜುವಾಗ ನಲ್ಲಿಯನ್ನು ನಿಲ್ಲಿಸಿ. ನೀರನ್ನು ಪೋಲಾಗಲು ಬಿಡಬೇಡಿ. ಇದರಿಂದ ನೀರು ಉಳಿಯುತ್ತದೆ. ಪಾತ್ರೆ ತೊಳೆಯುವಾಗ ಹಾಗು ಬಟ್ಟೆ ಒಗೆಯುವಾಗಲೂ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.
4. ತೊಟುಕುವ ನಲ್ಲಿಯಿಂದ ಬಹಳಷ್ಟು ನೀರು ಹಾಳಾಗುತ್ತದೆ. ಸೋರುವ ನಲ್ಲಿಯನ್ನು ಪತ್ತೆ ಮಾಡಿ ಅದನ್ನು ದುರಸ್ತಿ ಮಾಡಿಸಿ.
5. ಒಂದು ಲೋಟ ಕುಡಿಯುವ ನೀರನ್ನು ತುಂಬಿಸಿಕೊಳ್ಳುವಾಗ ನಿಮಗೆ ಎಷ್ಟು ಬೇಕೋ ಅಷ್ಟು ಮಾತ್ರ ತುಂಬಿಸಿಕೊಳ್ಳಿ.
6. ನೀವು ಮನೆಯಲ್ಲಿ ನೀರನ್ನು ಶೇಖರಿಸಿಟ್ಟರೆ, ಬಳಸದೇ ಇದ್ದ ಈ ನೀರನ್ನು ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ಗಿಡಗಳಿಗೆ ಹಾಕಲು ಬಳಸಿ.
7. ತರಕಾರಿ ಹಾಗು ಹಣ್ಣುಗಳನ್ನು , ನಲ್ಲಿಯ ನೀರಿನ ಕೆಳಗೆ ಬದಲಾಗಿ ಒಂದು ಪಾತ್ರೆಯಲ್ಲಿ ನೀರು ತುಂಬಿಸಿ ತೊಳೆಯಿರಿ.
8. ಅಡುಗೆ ಮನೆಯಲ್ಲಿ ಒಂದು ದೊಡ್ಡ ಬಕೇಟ್ ಇಡಿ. ಆಹಾರ ಪದಾರ್ಥಗಳನ್ನು ತೊಳೆಯಲು ಬಳಸುವ ನೀರನ್ನು ಅದರಲ್ಲಿ  ಶೇಖರಿಸಿ ಅದನ್ನು ಗಿಡಗಳಿಗೆ ಹಾಕಿ.
9. ಎಷ್ಟು ಸಾಧ್ಯವೋ ಅಷ್ಟು ಮಳೆ ನೀರನ್ನು ಸಂಗ್ರಹಿಸಿ ಇದಕ್ಕೆ ಮಳೆ ನೀರು ಸಂರಕ್ಷಣೆ ಎಂದು ಹೆಸರು.
10. ಬೆಳಗಿನ ಜಾವ ಹಾಗು ಇಳಿ ಸಂಜೆಯ ವೇಳೆ ಭಾಷ್ಪೀಕರಣದ ಗತಿ ಕಡಿಮೆಯಿರುವುದರಿಂದ, ಗಿಡಗಳಿಗೆ ಈ ಸಮಯದಲ್ಲಿ ನೀರು ಹಾಕುವುದು ಒಳಿತು. ಭಾಷ್ಪೀಕರಣದಿಂದ ನೀರು ನಷ್ಟವಾಗುವುದನ್ನು ಈ ಕ್ರಮದಿಂದ ಕಡಿಮೆಗೊಳಿಸಬಹುದು.
11.ನಿಮ್ಮ ತೋಟದಲ್ಲಿ ಕಳೆಯನ್ನು ಕೀಳಿರಿ. ಅಧಿಕ ನೀರಿನ ಬಳಕೆಯನ್ನು ಇದು ಕಡಿಮೆಮಾಡುತ್ತದೆ.
12.ನಿಮ್ಮ ಮನೆಯ ಬಳಿ ಕೆರೆ ಅಥವ ಹೊಳೆಯಿದ್ದರೆ, ಆ ಪ್ರದೇಶವನ್ನು ಸ್ವಚ್ಚ ಮಾಡಲು ಸಮುದಾಯದ ಸಹಾಯದಿಂದ  ಸ್ವಲ್ಪ ಸಮಯ ಕಳೆಯಿರಿ.
13.ನೀರನ್ನು ಉಳಿಸುವುದು ಎಷ್ಟು ಮುಖ್ಯವೆಂದು ನಿಮ್ಮ ಪರಿವಾರ ಹಾಗು ಸ್ನೇಹಿತರಿಗೆ ಹೇಳಿ. ನೀರನ್ನು ಸಂರಕ್ಷಿಸುವುದೆಂದರೆ ಎಲ್ಲರಿಗೂ ಸಾಕಾಗುವಷ್ಟು ನೀರು ದೊರಕುತ್ತದೆ.

 

ಮೌಲ್ಯಮಾಪನ: 

ಮೌಲ್ಯಾಂಕನ/ಪುನರ್ಮನನ
ಕಾಲಾವಧಿ: ಭಿತ್ತಿ ಪತ್ರ ಮಾಡುವುದು: 3 ದಿನಗಳು
 ಯೋಜನೆ  ಕೆಲಸ: ಒಂದು ತಿಂಗಳು
ಯೋಜನೆ: ಭಾರತದಲ್ಲಿ `ಬರದ ಪರಿಸ್ಥಿತಿ` ಅನುಭವಿಸುತ್ತಿರುವ ಯಾವುದೇ ಸ್ಥಳದ ಬಗ್ಗೆ ಮಾಹಿತಿಯನ್ನು ದಿನಪತ್ರಿಕೆ/ ಮ್ಯಾಗಜೀನ್ ಗಳಿಂದ ಸಂಗ್ರಹಿಸಲು ವಿದ್ಯಾರ್ಥಿಗಳಿಗೆ ಶಿಕ್ಷಕರು ಹೇಳಬಹುದು.  ಜನರು ಏನು ಮಾಡಿದರು? ಸರ್ಕಾರ ಅವರಿಗೆ ಹೇಗೆ ನೆರವು ನೀಡಿತು? ಪರಿಸ್ಥಿಯನ್ನು ಹೇಗೆ ಸಂಭಾಳಿಸಲಾಯಿತು? ಭವಿಷ್ಯದಲ್ಲಿ ಇಂತಹುದೇ ಪರಿಸ್ಥಿತಿ ಉಂಟಾದರೆ ಅದನ್ನು ಎದುರಿಸಲು ಸಮುದಾಯ ಅಥವಾ ಸರ್ಕಾರ ಏನು ಕ್ರಮ ಕೈಗೊಳ್ಳುವುದು?
ಅಥವಾ
ಪೋಸ್ಟರ್/ಭಿತ್ತಿ ಪತ್ರ: ` ನೀರು ಉಳಿಸಿ` ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಭಿತ್ತಿಪತ್ರವನ್ನು ಮಾಡಲು ಹೇಳಬಹುದು.

18077 ನೊಂದಾಯಿತ ಬಳಕೆದಾರರು
6933 ಸಂಪನ್ಮೂಲಗಳು