ಶಾಲೆಗಳಲ್ಲಿ ಶಿಕ್ಷೆ ನೀಡದೇ ಬೋಧನೆ ಸಾಧ್ಯವೇ?

ಕೊಡುಗೆ: editor_kn | Aug 30, 2012

ಮೇಲ್ಕಂಡ ಚರ್ಚಾವಿಷಯಕ್ಕೆ ಇಂಧನ ಎಂಬಂತೆ  ಶ್ರೀ ಉಮಾಕಾಂತ ಪೆರಿಯೋಡಿ ಅವರ ಲೇಖನವನ್ನು ಇಲ್ಲಿ ಕೊಡುತ್ತಿದ್ದೇವೆ.(ಸದರಿ ಲೇಖನದ  ಒಂದು ಆವೃತ್ತಿ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ)

ಮುಂದೆ ಬಂದರೆ ಹಾಯಬೇಡಿ. ಹಿಂದೆ ಬಂದರೆ ಒದೆಯಬೇಡಿ...

1983ರ ಸಮಯದಲ್ಲಿ ಬಿಳಿಗಿರಿ ರಂಗನ ಬೆಟ್ಟದಲ್ಲಿ ಶಾಲೆ ನಡೆಸುತ್ತಿದ್ದೆವು.
ಘಟನೆಯೊಂದು ನಮ್ಮನ್ನು ಚಕಿತಗೊಳಿಸಿತು. ಆ ದಿನ ಬೆಳಿಗ್ಗೆ ನಮ್ಮ ಮಕ್ಕಳ ಪೋಷಕರು ಶಾಲೆಗೆ ಬಂದು ನಮಗೆ, ನಮ್ಮ ಶಾಲೆಗೆ, ನಮ್ಮ ಮೇಷ್ಟ್ರುಗಳಿಗೆ ಸಿಕ್ಕಾಪಟ್ಟೆ ಬೈಯ್ಯಲು ಪ್ರಾರಂಭಿಸಿದರು. ಏನಿದು ಎಂದು ಗೊತ್ತಾಗುವಷ್ಟಕ್ಕೆ ಎಲ್ಲರೂ ಸೇರಿ ನಮ್ಮನ್ನು ಮುಗಿಸಿಯೇ ಬಿಡುವ ಹಾಗೆ ಕಾಣುತ್ತಿತ್ತು. ವಿಷಯ ಇವಿಷ್ಟು, ನಮ್ಮ ಶಾಲೆಯಲ್ಲಿ ಮೇಷ್ಟ್ರು ಒಬ್ಬರು ಒಂದು ಮಗುವಿಗೆ ಹೊಡೆದಿದ್ದರು. ಆ ಮಗುವಿಗೆ ಹೊಡೆದ ಬಗ್ಗೆ ಕೇಳಲು ಬಂದುದು ಆ ಊರಿನ ಗಿರಿಜನರು! ಅವರ ರೋಷದ ಸಾರ ಒಂದೇ, ನಾವೇ ಮಕ್ಕಳಿಗೆ ಹೊಡೆಯುವುದಿಲ್ಲ ನೀವು ಯಾರು, ಮಗುವಿಗೆ ಹೊಡೆಯೋದಕ್ಕೆ? ನೀವು ಹೇಗೆ ಹೊಡೆದಿರಿ ನಮ್ಮ ಮಗುವಿಗೆ....? ಈ ವಾತಾವರಣವನ್ನು ತಿಳಿಗೊಳಿಸಲು ನಮಗೆ ಸಾಕೋ ಸಾಕಾಯ್ತು.

2009ರಲ್ಲಿ ನಾನು ಡೆಹರಾಡೂನ್ ಹೋಗಿದ್ದ ಸಂದರ್ಭದಲ್ಲಿ ನಡೆದ ಒಂದು ಘಟನೆ. ನಮ್ಮ ರಾಷ್ಟ್ರದ ಅತ್ಯಂತ ಶ್ರೀಮಂತ ಕುಟುಂಬದಿಂದ ಬರುವ ಯುವಕರು ಡೂನ್ ಶಾಲೆಯಲ್ಲಿ ಕಲಿಯುವ ಬಗ್ಗೆ ತಮಗೆ ಗೊತ್ತೇ ಇದೆ. ಅಂತಹ ಒಂದು ಶಾಲೆಯಲ್ಲಿ ಪೋಷಕರಿಂದ ದಾಂಧಲೆ. ಪೊಲೀಸರು ಬಂದು ಶಾಂತತೆ ಕಾಪಾಡಬೇಕಾದ ಸಂದರ್ಭ. ವಿಷಯವನ್ನು ಏನು ಎಂದು ಕುತೂಹಲದಿಂದ ತಿಳಿಯಹೋದರೆ... ಒಂದು ವಿದ್ಯಾರ್ಥಿಗೆ ಹೊಡೆದ ರೀತಿಗೆ ಬೇಸತ್ತು ಆ ಮಗುವಿನ ತಂದೆ-ತಾಯಿ ಊರಿನವರನ್ನು ಕರೆದುಕೊಂಡು ಪ್ರಶ್ನಿಸಲು ಬಂದಿದ್ದರು. ಇದಕ್ಕೆ ಕಾರಣರಾದ ಶಿಕ್ಷಕರನ್ನು ಅಮಾನತುಗೊಳಿಸುವ ತನಕ ಈ ಗುಂಪು ಬಿಡಲೇ ಇಲ್ಲ.

ಎರಡು ಘಟನೆಗಳಿಗೆ ಇರುವ ಒಂದು ಸಾಮ್ಯತೆಯೆಂದರೆ ಮಗುವಿಗೆ ಶಾಲೆಯಲ್ಲಿ ಹೊಡೆದಾಗ ಪೋಷಕರು ಅದನ್ನು ಪ್ರತಿಭಟಿಸಿ ಅದನ್ನು ನಿಲ್ಲಿಸಲು ಬಂದಿರುವುದು. ಈ ಎರಡು ಘಟನೆಯಲ್ಲಿ ಇರುವ ಗುಂಪುಗಳ ನಡುವೆ ಇರುವ ವ್ಯತ್ಯಾಸ ಅಜಗಜಾಂತರ.
ತನ್ನ ಮಗುವಿಗೆ “ನೀವು ಶಾಲೆಯಲ್ಲಿ ಹೇಗೆ ಹೊಡೆದಿರಿ, ಯಾಕೆ ಹೊಡೆದಿರಿ?” ಎಂಬುದು ಎರಡೂ ಗುಂಪಿನ ಪ್ರಶ್ನೆ.ಎರಡು ಘಟನೆಗಳಲ್ಲಿಯೂ ಮಕ್ಕಳ ಪೋಷಕರು ಮಕ್ಕಳನ್ನು ಹೊಡೆದುದಕ್ಕೆ ಕೇಳಲು ಶಾಲೆಗೆ ಬಂದರು.

ಆದರೆ, ಭಾರತದಲ್ಲಿ ಎಷ್ಟು ಕಡೆ ಶಾಲೆಗಳಲ್ಲಿ ಹೊಡೆದುದನ್ನು ಪ್ರಶ್ನಿಸಲು ಪೋಷಕರು ಬರುತ್ತಾರೆ. ಮಕ್ಕಳಿಗೆ ಹೊಡೆದದ್ದು ಒಳ್ಳೆಯದಾಯಿತು ಎಂದು ಹೇಳುವ ಸಮಾಜದಲ್ಲಿ ಬದುಕುತ್ತಿದ್ದೆವು ನಾವು. ಮಕ್ಕಳಿಗೆ ಹೊಡೆದರೆ ಮಾತ್ರ ಬುದ್ಧಿ ಬರುವುದು ಎಂಬ ಭಾವನೆ ನಮ್ಮ ಸಮಾಜದಲ್ಲಿ ಇತ್ತು. ಲೂಟಿ ಮಾಡಿದಾಗ ಹೊಡೆಯುವುದು ‘ಸಹಜ’ ಎಂಬ ಭಾವನೆಯೂ ಇತ್ತು. ಒಟ್ಟು ಭಾರತದ ಶಾಲೆಗಳನ್ನು ನೋಡುವಾಗ ಎಲ್ಲಾ ದತ್ತಾಂಶಗಳು, ಪತ್ರಿಕೆಯ ವರದಿಗಳು ಒಂದು ವಿಷಯ ಸ್ಪಷ್ಟ ಪಡಿಸುತ್ತವೆ. ನಮ್ಮ ಶಾಲೆಗಳಲ್ಲಿ ಮಕ್ಕಳನ್ನು ಹೊಡೆಯುತ್ತಾರೆ, ಹಿಂಸಿಸುತ್ತಾರೆ. ಹೊಡೆಯುವುದು ಸಹಜವೇ? ಹಾಗಾದರೆ ಶಾಲೆಯಲ್ಲಿ ಮಗುವಿಗೆ ಹೊಡೆಯಬಾರದೇ? “ಬಾರದು.” ಶಾಲೆಯಲ್ಲಿ ಯಾಕೆ? ಎಲ್ಲೂ ಹೊಡೆಯಬಾರದು. ಇದು ಸಾಮಾನ್ಯರ ಹಾಗೂ ತಜ್ಞರ ಅಭಿಪ್ರಾಯ. ಶಿಕ್ಷೆ ವಿಧಿಸುವ ಬಗ್ಗೆ ನಮ್ಮ ಈ ಸಮಾಜದಲ್ಲಿ ಚಿಂತನೆ ನಡೆಯುತ್ತಾ ಬಂದಿದೆ. ಶಿಕ್ಷೆಯಿಂದ ಸರಿ ಆದದ್ದು ಎಂಬುದಕ್ಕೆ ಪುರಾವೆಗಳು ಎಲ್ಲೂ ಇಲ್ಲ. ಯಾವುದಕ್ಕೂ ಶಿಕ್ಷೆ ವಿಧಿಸಿ ಅದು ಕಡಿಮೆ ಆದದ್ದೂ ನಮಗೆ ಕಾಣುವುದಿಲ್ಲ. ಶಿಕ್ಷೆ ಬಗ್ಗೆ ಸುಧಾರಣೆಗೆ ಕಾರ್ಯಗಳು ಪ್ರಾರಂಭವಾಗಿ ಅನೇಕ ಶತಮಾನಗಳೇ ಕಳೆದು ಹೋದವು. ಶಿಕ್ಷೆಯ ರೂಪ ಬದಲಾಗಿರುವುದು ನಮ್ಮ ಕಣ್ಣೆದುರಿಗೇ ಇದೆ. ನಮ್ಮ ಜೈಲುಗಳನ್ನು ನೋಡಿ... ಜೈಲಿನ ಶಿಕ್ಷೆಯಿಂದ ಹೆದರಿಸಿ ಬೆದರಿಸಿ ತಪ್ಪು ಮಾಡದ ಹಾಗೆ ನೋಡುವುದಕ್ಕಿಂತ ಪ್ರೀತಿ ವಿಶ್ವಾಸ ಹಾಗೂ ನಂಬಿಕೆಯಿಂದ ಮಾನವ ಬದಲಾಗುವ ಕಡೆಗೆ ಒತ್ತು ಇದೆ. ಜೈಲಿನ ಸುಧಾರಣೆಗಳು ಪ್ರಾರಂಭವಾಗಿ ಅನೇಕ ದಶಕಗಳೇ ಆದವು ಹಾಗೂ ಅದರ ಫಲಗಳು ನಮಗೆ ಲಭ್ಯ. ಶಿಕ್ಷೆ ಯಾಕೆ ಕೊಡುತ್ತಾರೆ? ಶಿಕ್ಷೆಯ ಹಿಂದೆ ಏನಿದೆ... ಎಂದು ನೋಡೋಣ.

ಶಿಕ್ಷೆಯ ಹಿಂದೆ ಇರುವುದು ಹೆದರಿಕೆ ಹುಟ್ಟಿಸುವ ಪ್ರಕ್ರಿಯೆ. ಬಹುಶ: ಸಮಾಜ ಹೀಗೆಯೇ ಇರಬೇಕು ಎಂದು ಕಾಲಕಾಲಕ್ಕೆ ಆ ಸಮಾಜದ ಬಹುತೇಕ ಬಲಿಷ್ಠರು ನಿರ್ಧರಿಸುತ್ತಾರೆ. ಈ ಪ್ರಕ್ರಿಯೆಗೆ ಭಿನ್ನವಾಗಿ ನಡೆದಾಗ ಈ ಒಟ್ಟು ಸಮಾಜದ ಸ್ಥಿತಿಗೆ ಅಡ್ಡಿ ಆತಂಕಗಳು ಬರುತ್ತವೆ. ಇದನ್ನು ತಪ್ಪಿಸಲು ಶಿಕ್ಷೆ ವಿಧಿಸಲಾಗುವುದು ಎಂದು ಘೋಷಿಸುತ್ತಾರೆ. ಆರೋಗ್ಯಕರ ಸಮಾಜವನ್ನು ಸ್ಥಾಪಿಸಿ, ಹಾಗೆಯೇ ಮುಂದುವರಿಸುವುದಕ್ಕೆ “ತಪ್ಪಿದರೆ ಶಿಕ್ಷೆ” ಇದೆ ಎಂಬ ಭಯ ಹುಟ್ಟಿಸುತ್ತಾರೆ. ಶಿಕ್ಷೆಯ ಮುಖ್ಯ ಉದ್ದೇಶವೇ ಭಯ ಹುಟ್ಟಿಸುವುದು. “ಭಯವೇ ಅಜ್ಞಾನದ ಮೂಲ !” ಈ ಭಯ ನಮ್ಮನ್ನು ಮಾನವ ಸಹಜವಾಗಿ ಬದುಕಲು ಬಿಡುವುದಿಲ್ಲ. ಭಯ ಪಡುವವರು ಕುಬ್ಜರಾದರೆ ಭಯಪಡಿಸುವವರು ಅಮಾನುಷರಾಗುತ್ತಾರೆ. ಒಟ್ಟು ಸಮಾಜದ ವಿಕಾಸವಿರುವುದೇ ನಾವು ಮಾನವರಾಗುವುದರಲ್ಲಿ. ಭಯವಿಲ್ಲದಿದ್ದರೆ ಮಾತ್ರ ನಾವು ಮಾನವರಾಗುವುದು. ಒಟ್ಟು ಸಮಾಜ ವಿಕಾಸ ಆದಾಗ ಒಂದು ಪ್ರಮುಖ ಪಥವೇ ಅಜ್ಞಾನದಿಂದ ಜ್ಞಾನದೆಡೆಗೆ, ಹಿಂಸೆಯಿಂದ ಅಹಿಂಸೆಯ ಕಡೆಗೆ... ವಿಕಾಸಗೊಂಡ ಸಮಾಜದ ಬಗ್ಗೆ ನಮಗಿರುವ ಕಲ್ಪನೆಯೇ ಒಂದು ಭಯರಹಿತ, ಹಿಂಸೆ ರಹಿತ, ನೆಮ್ಮದಿಯ, ಶಾಂತಿಯುತ ಸಮಾಜ. ಈ ಪ್ರಪಂಚದ ಹೋರಾಟಗಳಲ್ಲಿ ಎಲ್ಲಾ ಹೋರಾಟಗಳು ಹಿಂಸೆಯ ವಿರುದ್ಧವಾದ, ಭಯದ ವಿರುದ್ಧವಾದ ಹೋರಾಟಗಳು ಮತ್ತು ಶಾಂತಿಗಾಗಿ ಹೋರಾಟಗಳು.
ಶಿಕ್ಷಣದ ಈ ವ್ಯವಸ್ಥೆ ಒಟ್ಟು ಸಮಾಜದ ಒಂದು ಬಿಂಬವೂ ಹೌದು. ಪ್ರಸ್ತುತ ಸಮಾಜ ಮುಂದಿನ ಪೀಳಿಗೆಗೆ ಸಕಲ ಸಂಸ್ಕೃತಿಯನ್ನು ಧಾರೆ ಎರೆಯುವ ಮುಖ್ಯವಾಹಿನಿಯೂ ಹೌದು! ಆದುದರಿಂದಲೇ “ಶಿಕ್ಷಣದಲ್ಲಿ ಶಿಕ್ಷೆ’ ಅಷ್ಟು ಚರ್ಚೆಗೆ ಈಡಾಗುವುದು.
“ಶಿಕ್ಷಣದಲ್ಲಿ ಶಿಕ್ಷೆ ಇವತ್ತು ಇದೆಯೇ?” ಎನ್ನುವ ಪ್ರಶ್ನೆಗೆ “ಇಲ್ಲ” ಎನ್ನುವವರಿಗೆ 1996ರಲ್ಲಿ ಶಿಕ್ಷಕರಾದ ಎಂ. ವಾಸುದೇವ ರಾವ್ ಮಾಡಿದ ಚಿಕ್ಕ ಅಧ್ಯಯನವು ಸ್ಪಷ್ಟ ಉತ್ತರ ಕೊಡುತ್ತದೆ. ಈ ಅಧ್ಯಯನದಲ್ಲಿ 90% ಶಿಕ್ಷಕರು ಒಂದಲ್ಲಾ ಒಂದು ರೀತಿಯಲ್ಲಿ ಶಿಕ್ಷೆಯನ್ನು ಮಕ್ಕಳಿಗೆ ನೀಡುತ್ತಾರೆ. ಆಶ್ಚರ್ಯ ಇದಲ್ಲ! ಬೆರಗುಗೊಳಿಸುವ ವಿಷಯ ಏನೆಂದರೆ ಈ ಅಧ್ಯಯನವನ್ನು ಶ್ರೀಯುತರು ಕೈಗೊಂಡಿದ್ದು ಪ್ರತಿಷ್ಠಿತ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ. ನಮ್ಮನ್ನು ಬೆರಗುಗೊಳಿಸಿದ ವಿಷಯವೇನೆಂದರೆ ಮಂಗಳೂರಿನಂತಹ ಜಾಗದಲ್ಲೇ ಇಂತಹ ಒಂದು ಸ್ಥಿತಿ ಇದ್ದರೆ, ಬೇರೆ ಉಳಿದ ಸ್ಥಳಗಳಲ್ಲಿ ಸ್ಥಿತಿ ಹೇಗಿರಬಹುದು? ಅವರು ಈ ಅಧ್ಯಯನದಲ್ಲಿ ಇನ್ನೆರಡು ಪ್ರಮುಖ ವಿಷಯವನ್ನು ಕಂಡುಕೊಂಡಿದ್ದಾರೆ.
1.    ತಾವು ಚಿಕ್ಕವರಿರುವಾಗ ಶಿಕ್ಷಕರ ಕೈಯಲ್ಲಿ ಶಿಕ್ಷೆ ಅನುಭವಿಸಿದವರು ಶಿಕ್ಷಿಸದಿರುವುದು.
2.    ಶಿಕ್ಷೆ ನೀಡುತ್ತಿರುವುದು ಪಾಠಕ್ಕೆ ಸಂಬಂಧಿಸಿ ಅಲ್ಲ. ಅದು ಬಹುತೇಕ ವರ್ತನೆಗೆ ಸಂಬಂಧಿಸಿದ್ದು.

ಹಾಗಾದರೆ ನಾವು ಶಿಕ್ಷಿಸುವುದು ಮಗು ಕಲಿಯಲು ಅಲ್ಲ. ತರಗತಿಯಲ್ಲಿ ಶಾಲೆಯಲ್ಲಿ ಸರಿಯಾಗಿ ವರ್ತಿಸಲು ಎಂದಾಯ್ತು. ಹಾಗಾದರೆ ಶಿಕ್ಷೆ ಕೊಟ್ಟರೆ ಮಕ್ಕಳು ಕಲಿಯುತ್ತಾರೆ ಎಂಬುದು ಎಷ್ಟು ಸರಿ?
ಇಲ್ಲಿ ಗಮನಿಸಬೇಕಾದ ಅಂಶ, ರಾವ್ ಅವರು ಶಿಕ್ಷೆಯನ್ನು ವ್ಯಾಖ್ಯಾನಿಸಿರುವುದು. “ಹೊಡೆಯುವುದು, ಚಿವುಟುವುದು, ದೈಹಿಕ ದಂಡನೆ, ಜೊತೆಗೆ ಮಕ್ಕಳ ಹತ್ತಿರ ಮಾತಾಡುವಾಗ ಬೈಯ್ಯುವುದು, ಹಿಯಾಳಿಸುವುದು, ಬೇರೆಯವರ ಮುಂದೆ ಅಪಹಾಸ್ಯ ಮಾಡುವುದು. ಕುಟುಂಬ, ಜಾತಿ, ಸ್ಥಳವನ್ನು ಹಿಯಾಳಿಸುವುದು... ಜೊತೆಗೆ ಬೇರೆ ಮಕ್ಕಳಿಂದ ಹೊಡೆಸುವುದು...” ಇವಿಷ್ಟನ್ನೂ ಪ್ರಸ್ತಾಪಿಸುತ್ತಾರೆ. ಆಸಕ್ತಿಪೂರ್ಣ ವಿಷಯವೆಂದರೆ ತಜ್ಞರ ವ್ಯಾಖ್ಯಾನವು ಇದಕ್ಕೆ ಹೋಲುತ್ತದೆ.
ಇಷ್ಟಿದ್ದರೂ ನಮ್ಮ ಶಾಲೆಯಲ್ಲಿ ಶಿಕ್ಷಕರು ಯಾಕೆ ಮಕ್ಕಳನ್ನು ಹಿಂಸಿಸುತ್ತಾರೆ. “ಶಿಕ್ಷಕರಿಗೆ ಮಕ್ಕಳೊಂದಿಗೆ ವ್ಯವಹರಿಸುವ ಬೇರೆ ಬೇರೆ ವೈವಿಧ್ಯಮಯ ರೀತಿನೀತಿಗಳು ಗೊತ್ತಿಲ್ಲ. ಅವರಿಗೆ ಸುಲಭದಲ್ಲಿ ಕೈಗೆಟುಕುವುದು ಎಂದರೆ ಹೆದರಿಸುವುದು! ದಂಡಿಸುವುದು!... ನಮ್ಮ ಶಿಕ್ಷಕರನ್ನು ನಾವು ತರಬೇತಿಗೊಳಿಸುವ ರೀತಿ ಬದಲಾಯಿಸಬೇಕಾಗಿದೆ” ಎಂದು ಸ್ಪಷ್ಟವಾಗಿ ಸುರುಪುರ ತಾಲೂಕಿನ (BEO) ಶಾಂತಗೌಡ ಪಾಟೀಲು ಹೇಳುತ್ತಾರೆ.
ಹಾಗಾದರೆ ಹಿಂಸೆ ಇಲ್ಲದ ಶಾಲೆಗಳು ಇಲ್ಲವೇ? ಇದೆಯಲ್ಲ!!! ಸಾಕಷ್ಟು ಶಾಲೆಗಳು ಇವೆ. ಶಾಲೆಗಳಲ್ಲಿ ಶಿಕ್ಷಿಸದ ಸಾಕಷ್ಟು ಶಿಕ್ಷಕರು ಇದ್ದಾರೆ. ಹಾಗಾದರೆ ಅವರು ಹೇಗೆ ಮಕ್ಕಳನ್ನು ನಿಭಾಯಿಸುತ್ತಾರೆ, ಮಕ್ಕಳನ್ನು ಹತೋಟಿಯಲ್ಲಿ ಹೇಗೆ ಇಟ್ಟುಕೊಳ್ಳುತ್ತಾರೆ?. ‘ಈ ಪ್ರಶ್ನೆಯೇ ಸರಿ ಇಲ್ಲ” ಎಂದು ತಜ್ಞರಾದ ರೋಹಿತ್ ಧನಕರ್ ಹೇಳುತ್ತಾರೆ. ‘ಹತೋಟಿಯಲ್ಲಿ ಇಡಲು, ಮಕ್ಕಳೇನು ಕೈದಿಗಳೇ? ಶಾಲೆ ಏನು ಜೈಲೇ? ನಾವು ಮಕ್ಕಳಿಗೆ ಜೈಲಲ್ಲಿ ಹಾಕಿದ ಅನುಭವ ನೀಡಿದರೆ ಅವರು ಕೈದಿಗಳಾಗಿ ವರ್ತಿಸುತ್ತಾರೆ. ಇದರಲ್ಲಿ ಅವರ ತಪ್ಪಿಲ್ಲ, ತಪ್ಪಿರುವುದು ನಮ್ಮ ದೃಷ್ಟಿಕೋನದಲ್ಲಿ. ನಾವು ಮಕ್ಕಳನ್ನು ನೋಡುವ ದೃಷ್ಟಿಯಲ್ಲಿ” ಎಂದು ಮುಂದುವರಿಸುವ ಧನಕರ್ ಜೈಪುರದಲ್ಲಿ ತನ್ನ ಸಂಸ್ಥೆ ಆದ ದಿಘÀÀಂತರ್ ನಡೆಸುವ ಶಾಲೆಯಲ್ಲಿ ಹಿಂಸೆ ಇಲ್ಲ, ಬೈಗುಳ ಇಲ್ಲ. ಆದರೆ ಸಮಸ್ಯೆಗಳು ಇಲ್ಲ ಎಂದಲ್ಲ. ಸಮಸ್ಯೆಗಳು ಇದ್ದಾಗ ಅದನ್ನು ಬಗೆಹರಿಸುವ ವಿಧಾನ “ಮಾತುಕತೆ’. ಬಹುಶ: ರೋಹಿತ್ ಧನಕರ್ ತರಹ ಶ್ರೇಷ್ಠ ಶಿಕ್ಷಕ ತರಬೇತುದಾರರಾದ ಡೇವಿಡ್ ಹೊಸಬರ್ಗ್‍ರವರ ಗರಡಿಯಲ್ಲಿ ಪಳಗಿದ ಅನೇಕರು ಈ “ಮಾತುಕತೆ’ಯ ವಿಧಾನವನ್ನು ಅನುಕರಿಸುತ್ತಾರೆ. ತಮ್ಮ ಶಾಲೆಯಲ್ಲಿ ಪ್ರಜಾಪ್ರಭುತ್ವ (Democratic) ವಾತಾವರಣವನ್ನು ಸೃಷ್ಟಿಸುತ್ತಾರೆ. ಅಂದಹಾಗೆ ದಿಗಂತರ್ ಶಾಲೆಗಳು ಶ್ರೀಮಂತರಿಗಾಗಿ ಅಲ್ಲ. ಅದು ಸ್ಲಮ್‍ನ ಬಡಮಕ್ಕಳಿಗಾಗಿ. ಈ ಶಿಕ್ಷೆ ರಹಿತ ಶಾಲೆಗಳನ್ನು ನೋಡಿ ಪ್ರೇರಣೆಗೊಳಗಾಗದ  ಜನರನ್ನು ನಾನು ನೋಡಿದ್ದೆ ತುಂಬಾ ಕಡಿಮೆ. ಇದೇ ತರಹ ಜೆಡ್ಡು ಕೃಷ್ಣಮೂರ್ತಿಯವರ ಮೌಲ್ಯಗಳನ್ನು ಆಧರಿಸಿ ನಡೆಸುವ ಅನೇಕ ಶಾಲೆಗಳು ಹಿಂಸೆಯಿಂದ ದೂರ ನಿಂತಿವೆ. ಈ ಹಿಂಸೆ ರಹಿತ ಶಾಲೆಗಳಿಗೆ ಎರಡು ಅಂಶಗಳು ತುಂಬಾ ಮುಖ್ಯ.
1.    ಶಿಕ್ಷಣದ ಉದ್ದೇಶ ಹಾಗೂ ಶಿಕ್ಷಕರ ಮೌಲ್ಯ.
2.    ಮಕ್ಕಳೊಂದಿಗೆ ವ್ಯವಹರಿಸಲು ಶಿಕ್ಷಕರಲ್ಲಿರಬೇಕಾದ ಕೌಶಲ್ಯ.
ಶಿಕ್ಷಣದ ಉದ್ದೇಶ ಮಗುವಿನ ಸರ್ವತೋಮುಖ ಬೆಳವಣಿಗೆ. ಆದುದರಿಂದ ಮಗುವಿನ ಬೆಳವಣಿಗೆಗೆ ಬೇಕಾದ ವಾತಾವರಣ ಸೃಷ್ಟಿಸುವುದು ಶಿಕ್ಷಕರ-ಪಾಲಕರ ಜವಾಬ್ದಾರಿ. ಬೆಳವಣಿಗೆಗೆ ಪ್ರೋತ್ಸಾಹ, ವಿಶ್ವಾಸ, ನಂಬಿಕೆ ತುಂಬಾ ಇಂಬು ಕೊಡುವ ಮೌಲ್ಯ. ಭಯ, ಅಪನಂಬಿಕೆ, ಹಿಂಸೆ ಬೆಳವಣಿಗೆಗೆ ಮಾರಕ ಎಂದು ಪ್ರಪಂಚದ ಎಲ್ಲ ಅಧ್ಯಯನಗಳು ಸಾರಿ ಹೇಳುತ್ತಿವೆ.

ಸುರುಪುರದಲ್ಲಿ 2005ರಿಂದ ನಾವು 350 ಸರಕಾರಿ ಶಾಲೆಗಳಲ್ಲಿ ಬಾಲಸ್ನೇಹಿ ಶಾಲೆ ಕಾರ್ಯಕ್ರಮದಡಿಯಲ್ಲಿ ಭಯ ರಹಿತ ವಾತಾವರಣದ ಹುಡುಕಾಟದಲ್ಲಿದ್ದೇವೆ. ಈ ಹುಡುಕಾಟದಲ್ಲಿ ನಾವು ಕಂಡುಕೊಂಡದ್ದು ಶಿಕ್ಷಕರ ದೃಷ್ಟಿಕೋನ ಹಾಗೂ ಒಟ್ಟು ಸಮಾಜದ ಸ್ಪಂದನೆ. ಇದರ ಅನುಭವ ನಮಗೆ ಬಂದದ್ದು ನಾವು ನಡೆಸಿದ ಮಕ್ಕಳ ಸೃಜನಾತ್ಮಕ ಕಾರ್ಯಗಾರಗಳಲ್ಲಿ! ಮೂರು ದಿವಸದ ಈ ಸೃಜನಾತ್ಮಕ ಕಾರ್ಯಗಾರದಲ್ಲಿ ಚಿತ್ರಕಲೆ, ನಾಟಕ, ಹಾಡುಗಳು, ಮುಖವಾಡ, ಗೊಂಬೆಯಾಟ ಹೀಗೆ ಅನೇಕ ಚಟುವಟಿಕೆಗಳ ಮೂಲಕ ನಾವು ಸುಮಾರು 250 ಕಾರ್ಯಾಗಾರವನ್ನು ನಡೆಸಿದೆವು. ನಮ್ಮ ಕಾರ್ಯಕರ್ತರು ಎಲ್ಲೂ ಕೋಲು ಹಿಡಿದಿಲ್ಲ. ಒಂದು ಮಗುವಿಗೂ ಬೈದಿಲ್ಲ. ಮೊದಲಿಗೆ ನಮ್ಮ ಕಾರ್ಯಕರ್ತರೇ ನಡೆಸಿದರೂ ಈಗ ಆಸಕ್ತಿ ಇರುವ ಶಿಕ್ಷಕರೇ ಇದನ್ನು ನಡೆಸುತ್ತಾರೆ. ಈ ಕಾರ್ಯಗಾರದಲ್ಲಿ ಭಯದ ವಾತಾವರಣ ಅವರೂ ಸೃಷ್ಟಿಸುವುದಿಲ್ಲ. ಮಕ್ಕಳು ಅವಕಾಶ ಸಿಕ್ಕಾಗ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದ್ಭುತವಾದದನ್ನು ಸೃಷ್ಟಿಸುತ್ತಾ ತಾವು ಬೆಳೆಯುತ್ತಾರೆ. ಅವರನ್ನು ಹತೋಟಿಯಲ್ಲಿ ಇಡುವ ಪ್ರಮೇಯವೇ ಬರುವುದಿಲ್ಲ.

ವಿಷಯ ಸಂಪತ್ತು ಸಮೃದ್ಧವಾಗಿದ್ದು ಪಾಠ ಮಾಡಬಲ್ಲ ಶಿಕ್ಷಕರನ್ನು ಅಗೌರವಿಸುವ ಮಕ್ಕಳು ನಮ್ಮ ಅನುಭವದಲ್ಲಿ ಬಂದಿಲ್ಲ. ವಸ್ತು ವಿಷಯವಿದ್ದು ಮಕ್ಕಳೊಂದಿಗೆ ವ್ಯವಹರಿಸುವ ಕೌಶಲ್ಯವಿದ್ದರೆ ಹೊಡೆಯುವ ಬೈಯ್ಯುವ ಅಗತ್ಯ ಬೀಳುವುದಿಲ್ಲ. ಆದ್ರೆ ಇಲ್ಲಿ ಎಲ್ಲಕ್ಕಿಂತಲೂ ಮುಖ್ಯವಿರುವುದು ಮಗುವನ್ನು ವ್ಯಕ್ತಿಯಾಗಿ ನೋಡಿ ಗೌರವಿಸುವುದು. ಮಕ್ಕಳ ಹಕ್ಕಿಗೆ ಅರ್ಥ ಬರುವುದು, ನ್ಯಾಯ ಸಿಗುವುದು ಆಗಲೇ. ಮಗುವನ್ನೇ ವ್ಯಕ್ತಿಯಾಗಿ ನೋಡದಿದ್ದರೆ ಗೌರವ ಎಲ್ಲಿ ಬಂತು? ಆ ಮಗುವಿನ ಹಕ್ಕಿಗೆ ಜಾಗ ಎಲ್ಲಿದೆ?
ಬರೀ ಶಿಕ್ಷಕರನ್ನೆ ತರಬೇತಿಗೊಳಿಸಿದರೆ ಸಾಕಾಗುವುದಿಲ್ಲ. ನಮ್ಮ ಪೋಷಕರಲ್ಲಿ ಹೊಡೆಯಬಾರದು ಎಂಬ ಅಭಿಪ್ರಾಯ ಸ್ಪಷ್ಟವಾಗಿ ಇರಬೇಕಾಗುತ್ತದೆ. ಮನೆಯಲ್ಲಿ ಹೊಡೆಯುವ ಸಂಸ್ಕೃತಿ ನಾಶವಾಗಬೇಕಾಗುತ್ತದೆ. ಮಗುವನ್ನು ಪ್ರೀತಿಯಿಂದ ನೋಡುವ, ವಿಶ್ವಾಸದಿಂದ ಕಾಣುವ ‘ಮಾತುಕತೆ’ಯಿಂದ ವ್ಯವಹರಿಸುವ ಸಂಸ್ಕೃತಿ ಬೆಳೆಸಬೇಕಾಗುತ್ತದೆ. ಇದೆಲ್ಲಕ್ಕಿಂತಲೂ ಮುಖ್ಯವಾದದ್ದು ಮಗುವಿಗೆ ತನ್ನ ಬಗ್ಗೆ ಇರುವ ಸ್ವ-ಬಿಂಬ. ತನಗೆ ಯಾರೂ ಹೊಡೆಯುವ ಅಧಿಕಾರ ಹೊಂದಿಲ್ಲ. ಏನಿದ್ದರೂ ಮಾತಾಡಿ ಸರಿ ಮಾಡಬೇಕಾಗುತ್ತದೆ ಎಂಬುದು ಮನದಟ್ಟಾದಾಗ ಯಾರಿಗೂ ಮಗುವಿಗೆ ಹೊಡೆಯಲಾಗದು. ಅಂತಹ ಒಂದು ವಾತಾವರಣದಲ್ಲಿ ಹೊಡೆಯುವ ಧೈರ್ಯ ಯಾರಿಗೂ ಬಾರದು.

ಶಾಲೆ ಈ ಸಮಾಜದ ಒಂದು ಪುಟ್ಟ ಪ್ರತಿರೂಪ. ಇವತ್ತು ಸಮಾಜವನ್ನು ನೋಡಿದಾಗ ಹಿಂಸೆ ತುಂಬಿ ತುಳುಕುತ್ತಿದ್ದರೂ ವೈಯಕ್ತಿಕ ನೆಲೆಯಲ್ಲಿ ಮನೆಗಳಲ್ಲಿ ಮಕ್ಕಳಿಗೆ ವಾತಾವರಣ ಸ್ವಲ್ಪ ಚೆನ್ನಾಗಿದೆ. ಕುಟುಂಬದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಾ ಹೋದ ಹಾಗೆ ಮಕ್ಕಳಿಗೆ ಸಿಗುವ ಸ್ಥಾನಮಾನ, ಗೌರವ ಖಂಡಿತ ಹೆಚ್ಚಾಗುತ್ತದೆ. ಆದುದರಿಂದಲೇ ಇವತ್ತು ಹೊಡೆಯುವುದು ಬೈಯುವುದು “ಸಹಜ ಪ್ರಕ್ರಿಯೆ” ಅಲ್ಲ! ನಾವು ಮಕ್ಕಳೊಂದಿಗೆ ಭಯರಹಿತ ವ್ಯವಹಾರದಲ್ಲಿ ತೊಡಗಬೇಕಾಗಿದೆ, ಅವರನ್ನು ಗಮನವಿಟ್ಟು ಕೇಳಬೇಕಾಗಿದೆ. ಅವರು ಹೇಳಿದ್ದನ್ನು ಮಾಡಬೇಕಾಗಿದೆ. ಅದು ಅವರಿಗೆ ಮಾತ್ರ ಒಳ್ಳೆಯದಲ್ಲ, ನಮಗೂ ಅದರಲ್ಲಿ ಒಳ್ಳೆಯದಿದೆ. ಈ ಸಮಾಜದ ವಿಕಾಸಕ್ಕೆ ಇರುವುದೊಂದೇ ಮಾರ್ಗ. ಅದನ್ನು ಅನುಸರಿಸೋಣ.
ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ  ಕಂದ ನಿಮ್ಮವನೆಂದು ಕಾಣಿರಿ... ತನ್ನ ಕರುವನ್ನು ಬಿಟ್ಟುಹೋಗುವಾಗ ಹಾಡಿದ ಪುಣ್ಯಕೋಟಿಯ ಈ ಅಹವಾಲು ತನ್ನವರಿಗೆ ಮಾತ್ರವಲ್ಲ..  ನಮಗೆಲ್ಲ ಕೂಡಾ.

-ಉಮಾಶಂಕರ್ ಪೆರಿಯೋಡಿ
ಅಜೀಂ ಪ್ರೇಮ್‍ಜೀ ಫೌಂಡೇಶನ್, ಯಾದಗಿರಿ.
 

Prakash Angadi's picture

ಡಿಯರ್ ಪೆರಿ ಸರ್,
"ನಾವು ಮಗುವನ್ನು ಶಿಕ್ಷಿಸುತ್ತಿರುವುದು ಕಲಿಯಲು ಅಲ್ಲ, ಬದಲಾಗಿ ಸರಿಯಾಗಿ ವರ್ತಿಸಲು" ಎಂದು ನೀವು ಪ್ರಸ್ತಾಪಿಸಿರುವುದು ನಿಜಕ್ಕೂ ಇಂಟರೆಸ್ಟಿಂಗ್ ಆಗಿದೆ. ಇದು ಪ್ರತಿಯೊಬ್ಬರೂ ಯೋಚಿಸಬೇಕಾದ ವಿಷಯವಾಗಿದೆ. ಮಕ್ಕಳಲ್ಲಿ ಕುತೂಹಲ ಮೂಡಿಸುವುದು, ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು, ನಾವು ವಿಷಯದ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಮತ್ತು ನಮ್ಮ ಕಡೆಗೆ ಅವರು ಯಾವಾಗಲು ಆಕರ್ಷಿತರಾಗಿರುವಂತೆ ಮಾಡುವುದರ ಮೂಲಕ ನಿಜಕ್ಕೂ ಸುಲಭವಾಗಿ, ಶಿಕ್ಷಿಸದೆ ಕಲಿಸಬಹುದು. ಇದರ ಜೊತೆಗೆ ಶಿಕ್ಷಕರಲ್ಲಿ ನಿಷ್ಕಲ್ಮಷ, ಪ್ರೀತಿ ತುಂಬಿದ ಹೃದಯ ಇರಬೇಕಾದುದು ಅಷ್ಟೇ ಮುಖ್ಯವಾಗುತ್ತದೆ.
ನಾನು ಈ ಹಿಂದೆ ಓದಿದ ಅರವಿಂದ ಚೊಕ್ಕಾಡಿಯವರು ಬರೆದ "ಶಿಕ್ಷೆ ಕೊಡದೆ ಶಿಕ್ಷಣ ಕಲಿಸಬಲ್ಲಿರಿ" ಎಂಬ ಪುಸ್ತಕ ಕೂಡ ಈ ನಿಟ್ಟಿನಲ್ಲಿ ಯೋಚಿಸುವವರಿಗೆ ಉಪಯುಕ್ತ ಪುಸ್ತಕವಾಗಬಲ್ಲದೇನೋ? ಒಂದೊಳ್ಳೆಯ ವಿಚಾರ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು......

editor_kn's picture

ನವ ಪೀಳಿಗೆಯ ಶಿಕ್ಷಕರಲ್ಲಿ ಶಿಕ್ಷೆ ಕೊಡದೆ ಶಿಕ್ಷಣ ಕಲಿಸುವ ವಿಚಾರವು ಪ್ರಚಲಿತವಾಗುತ್ತಿರುವುದಕ್ಕೆ ಶ್ರೀ ಪ್ರಕಾಶ ಅಂಗಡಿಯವರ ಪ್ರತಿಕ್ರಿಯೆ ಸಾಕ್ಷಿಯಾಗಿದೆ.ಶಿಕ್ಷಕ ಸಮುದಾಯ ಈ ಕುರಿತು ತಮ್ಮ ಸ್ವಂತ ಅನುಭವದೊಂದಿಗೆ ಸಂವಾದ- ಚರ್ಚೆ ಮುಂದುವರಿಸಬೆಕೇಂಬುದು ಈ ವೇದಿಕೆಯ ಅಭಿಲಾಷೆ.ಚರ್ಚೆಗೆ ಶ್ರೀಕಾರ ಹಾಕಿದ್ದಕ್ಕಾಗಿ ಶ್ರೀ ಪ್ರಕಾಶ ಅಂಗಡಿಯವರಿಗೆ ಧನ್ಯವಾದಗಳು.

thontaradhya's picture

ಇದು ತುಂಬಾ ಕಠಿಣ ವಿಷಯವಾಗಿದೆ.

18624 ನೊಂದಾಯಿತ ಬಳಕೆದಾರರು
7274 ಸಂಪನ್ಮೂಲಗಳು