“ಹೇಗಿತ್ತಪ್ಪ ಸ್ಕೂಲ್ ಇವತ್ತು?" ಎಂಬುದರ ಬದಲಾಗಿ ಕೇಳಬಹುದಾದ 15 ಪ್ರಶ್ನೆಗಳು

ಈ ಪ್ರಶ್ನೆಗಳು ನೀವು ನಿಮ್ಮ ಮಕ್ಕಳಿಂದ ಮುಖ್ಯ ಮಾಹಿತಿ ತಿಳಿದುಕೊಳ್ಳಲು ಸಹಾಯ ಮಾಡುತ್ತವೆ.

 “ಹೇಗಿತ್ತಪ್ಪ  ಸ್ಕೂಲ್ ಇವತ್ತು” ಎಂದು  ಎಷ್ಟು ಬಾರಿ ನೀವು ನಿಮ್ಮ ಮಗುವಿಗೆ  ಕೇಳಿದ್ದೀರಿ ಹಾಗೆಯೇ ಅವರಿಂದ ಉತ್ತರ ಸರಿಯಾಗಿ ಬರದಿದ್ದಾಗ ನೀವೆಷ್ಟು  ನಿರಾಶೆಗೊಂಡಿದ್ದೀರಿ ನೆನೆಸಿಕೊಳ್ಳಿ? ಮಗುವಿನ ತಾಯಿಯಾಗಿ , ನನ್ನ ಮಗ ಈ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದೇ ಹೋದರೂ  ನಾನು ಅನೇಕ ಬಾರಿ ಈ ಪ್ರಶ್ನೆಯನ್ನು ನನ್ನ ಮಗನಿಗೆ ಕೇಳಿದ್ದೇನೆ.

ಪ್ರಾಮಾಣಿಕವಾಗಿ ಹೇಳಬೇಕೆಂದರೆ  ಕೆಲವೊಮ್ಮೆ, ನನಗೆ ಮಗನೊಡನೆ ಸಾವಧಾನವಾಗಿ ಕುಳಿತು ಮಾತನಾಡುವಷ್ಟು  ಶಕ್ತಿ ಇರುತ್ತಿರಲಿಲ್ಲ. ಇನ್ನು ಕೆಲವು ಸಲ , ನಾನು ಏನು ಕೇಳಬೇಕು ಎಂಬುದೇ ಹೊಳೆಯುತ್ತಿರಲಿಲ್ಲ. ಒಬ್ಬ ಶಿಕ್ಷಕಿಯಾಗಿ, ನಾನು ಸಾಮಾನ್ಯವಾಗಿ ಮಕ್ಕಳು ನಾವು ಮಾಡುತ್ತಿದ್ದ ಪಾಠ ಆಟ ಮುಂತಾದವನ್ನೆಲ್ಲ ತಮ್ಮ ಹೆತ್ತವರೊಂದಿಗೆ ಹೇಳಿಕೊಳ್ಳಬೇಕು  ಎಂದು ಬಯಸುತ್ತೇನೆ, ಆದರೆ ಅದು ನಿಜಕ್ಕೂ ಆಗುವಂತೆ ಏನು  ಮಾಡಬೇಕು ಎಂಬುದು ನನಗೆ ಹೊಳೆಯುತ್ತಿಲ್ಲ.

ಈಗ ನನ್ನ ಮಗ ಮಾಧ್ಯಮಿಕ  ಶಾಲೆಯಲ್ಲಿ ಓದುತ್ತಿದ್ದಾನೆ. ಅಲ್ಲಿ ಶಿಕ್ಷಕರು ಪ್ರಾಥಮಿಕ ಶಾಲೆಯ ರೀತಿಯಲ್ಲಿ  ಸಂಭಾಷಣೆ ಮಾಡುವುದು ಕಡಿಮೆ ಆದರೆ ಆ ಶಾಲೆಯಲ್ಲಿ ಹೆಚ್ಚು ಕೆಲಸ ಅಂದರೆ ಪಾಠ ಚಟುವಟಿಕೆ  ನಡೆಯುತ್ತಿರುತ್ತವೆ. ಆ ವಿಷಯವನ್ನು ನಾನು ಅರಿಯುವುದು ಅಗತ್ಯ.  ಪ್ರಮುಖ ಮಾಹಿತಿ ಪಡೆದುಕೊಳ್ಳಲು ಅನುಕೂಲ ಆಗುವಂತಹ  ಪ್ರಶ್ನೆಗಳ ಪಟ್ಟಿಯನ್ನು ನಾನು ಗುರುತಿಸಿದ್ದೇನೆ. ನಾನು ಮಕ್ಕಳ ತಂದೆ ತಾಯಿಯರಿಗೆ ಅವರು ನಮ್ಮ ತರಗತಿಯಲ್ಲಿ ನಾವು ಏನು ಮಾಡುತ್ತಿದ್ದೇವೆ  ಎನ್ನುವುದನ್ನು  ಬಗ್ಗೆ ಕೇಳಿ ತಿಳಿದುಕೊಳ್ಳಲು ಸಹಾಯ ವಾಗುವಂತೆ ಈ ಪಟ್ಟಿಯನ್ನು ನೀಡಲು ಸಾಧ್ಯವಾದರೆ ಚೆನ್ನ  ಎಂದು ನಾನು ಭಾವಿಸುತ್ತೇನೆ.

ಪ್ರಶ್ನೆಗಳು

ಆಯಾ ಮಕ್ಕಳಿಗೆ ತಕ್ಕಂತೆ ಸ್ವಲ್ಪ ಮಾತುಗಳನ್ನು ಮಾರ್ಪಾಡು ಮಾಡಿದರೆ, ಈ ಪ್ರಶ್ನೆಗಳನ್ನು ಎಲ್ಲಾ ವಯಸ್ಸಿನ ಮಕ್ಕಳಿಗೆ ಬಳಸಬಹುದು:

 1. ಇವತ್ತು ನೀನು  ಕಲಿಯುತ್ತಿದ್ದಾಗ ಬಹಳ ಖುಷಿ ಕೊಟ್ಟ ಮತ್ತು ಉತ್ಸಾಹ ತುಂಬಿದ ಒಂದು ಕ್ಷಣದ ಬಗ್ಗೆ ನನಗೆ ಹೇಳು.
 2. ಇಂದು ಶಾಲೆಯಲ್ಲಿ ನಿನಗೆ ವಿಷಯ ಗೊತ್ತಾಗದೇ ಗೊಂದಲವಾದ ಒಂದು ಕ್ಷಣ ಬಗ್ಗೆ ಹೇಳು.
 3. ಇಂದು ಶಾಲೆಯಲ್ಲಿ ನೀನು ಏನೇನು  ಕಲಿತೆ ಎಂಬುದರ ಬಗ್ಗೆ ಯೋಚಿಸು . ಯಾವುದರ ಬಗ್ಗೆ ನಿನಗೆ ಹೆಚ್ಚು ವಿಷಯ ತಿಳಿಯ ಬೇಕು ಅನ್ನಿಸುತ್ತದೆ ? ಇಂದು ನೀನು  ಕಲಿತ ವಿಷಯದಿಂದ ನಿನ್ನ ಮನದಲ್ಲಿ ಏಳುವ ಒಂದು ಪ್ರಶ್ನೆ ಏನು?
 4. ಇವತ್ತು  ನಿನ್ನ ಮನಸ್ಸಿಗೆ ಬೇಸರವಾದ  ಕ್ಷಣಯಾವುದು? ನೀನು  ಭಯಪಟ್ಟ  ಸಂಗತಿ ಯಾವುದು?
 5. ಇಂದು ಯಾರಾದರೂ ನಿನಗೆ  ಅವಮಾನಿಸಿದರು ಎಂದು ಅನಿಸಿತಾ? ಅದೇನು ನಡೆಯಿತು ಎಂದು ನನಗೆ ಹೇಳು.
 6. ನಿನ್ನ ಸ್ನೇಹಿತರಲ್ಲೊಬ್ಬ ನಿನಗೆ  ಬಂದು  ಅಕ್ಕರೆ ತೋರಿಸಿದ ಘಟನೆ ಏನಾದರೂ ನಡೆಯಿತಾ ?
 7. ಇಂದು ನಿನ್ನ ಬಗ್ಗೆ ನಿನಗೆ ಹೆಮ್ಮೆ ಉಂಟಾದ ಘಟನೆ ನಡೆಯಿತಾ?
 8. ನೀನು ಒಬ್ಬ  ಸಹಪಾಠಿ ಅಥವಾ ಸ್ನೇಹಿತನ ಜೊತೆ ಖುಷಿಯಾಗಿ ನಡೆಸಿದ  ಒಂದು ಸಂಭಾಷಣೆ ಬಗ್ಗೆ ಹೇಳಿ.
 9. ಇಂದು ನಿನಗೆ ಸವಾಲು ಎನಿಸಿದ ಘಟನೆ ಯಾವುದು?
 10. ಇವತ್ತು ನಿನಗೆ ಮೆಚ್ಚುಗೆಯಾದ ಅಂಶ ಯಾವುದು?
 11. ಇವತ್ತು ನಿನ್ನ ಬಗ್ಗೆ ನಿನಗೇ ಗೊತ್ತಾದ ಅಂಶ ಯಾವುದು?
 12. ನಿನಗೆ ಗೊತ್ತಾಗದ ಮತ್ತು ನಾನು ಸಹಾಯ ಮಾಡಬಹುದಾದ ಯಾವುದಾದರೂ ವಿಷಯದ ಬಗ್ಗೆ  ಮಾತನಾಡೋಣವೇ ?
 13. ನಿನ್ನಮನಸಲ್ಲೇನಾದರೂ ಚಿಂತೆ ಇದೆಯೇ?
 14. ನೀವು ನಾಳೆ ಏನು ಮಾಡಬೇಕೆಂದಿದ್ದೀಯ?
 15. ಇಂದು ನಡೆದ ಘಟನೆಗಳ ಬಗ್ಗೆ  ನಾನು ನಿನ್ನನ್ನು  ಕೇಳ ಬೇಕೆಂದು ನೀನು ಬಯಸು ಬಯಸುವ ಯಾವುದಾದರೂ ವಿಷಯ ಇದೆಯೇ?

ಪ್ರಶ್ನೆಗಳನ್ನು ಕೇಳುವ ಬಗ್ಗೆ ಕಿವಿಮಾತು

ನಾವು ಹೇಗೆ ಮತ್ತು ಯಾವಾಗ  ಈ ಪ್ರಶ್ನೆಗಳನ್ನು ಕೇಳುತ್ತೇವೆ ಎಂಬುದು ನಾವು ನಮ್ಮ ಮಕ್ಕಳು ನಮಗೆ ಮಾಹಿತಿ ನೀಡುವುದರ ಮೇಲೆ ಬಲು  ದೊಡ್ಡ ವ್ಯತ್ಯಾಸವನ್ನು ಮಾಡುತ್ತದೆ. ಮೊದಲು, ನೀವು ಒಂದೇ ದಿನ ಈ ಎಲ್ಲಾ ಪ್ರಶ್ನೆಗಳನ್ನು ಕೇಳಲು ಹೋಗಬೇಡಿ. ನೀವು ಒಂದು ಅಥವಾ ಎರಡು ಪ್ರಶ್ನೆಯನ್ನು ಮಾತ್ರ ಕೇಳಿರಿ.

ಸ್ವಲ್ಪ ಸಮಯದ  ನಂತರ, ನೀವು ಯಾವ ಪ್ರಶ್ನೆ ಕೇಳಿದರೆ  ಅತ್ಯಂತ ಅರ್ಥಪೂರ್ಣ ಉತ್ತರ ಬರಬಹುದು ಎಂದು ಲೆಕ್ಕಾಚಾರ ಮಾಡಬಲ್ಲಿರಿ. ನಿಮ್ಮ ಮಗು ನೀವು  ಸಂಪೂರ್ಣ ಗಮನ ಕೊಡುತ್ತಿದ್ದೀರಿ ಎಂದು  ಮನಗಾಣುವ  ಹಾಗೆ  ನೀವು ಗಮನ ಕೊಡಬಲ್ಲ ಸಾಮರ್ಥ್ಯವನ್ನು ಹೊಂದಿರುವಾಗ ಈ ಪ್ರಶ್ನೆ ಕೇಳಿರಿ.

ನನ್ನ ಮನೆಯಲ್ಲಿ ಊಟದ ಸಮಯ ಮತ್ತು ಕಾರಿನಲ್ಲಿ ಹೋಗುತ್ತಿರುವ ಸಮಯ  ನನ್ನ ಮಕ್ಕಳ ಜೊತೆ ಈ ಸಂಭಾಷಣೆಗಳನ್ನು ಮಾಡಲು ಉತ್ತಮ ಸಮಯ.

ಈಗ ಈ ಸಂಭಾಷಣೆಗಳು ವಾಡಿಕೆಯಾಗಿ ಹೋಗಿಬಿಟ್ಟಿವೆ ಮಾರ್ಪಟ್ಟಿವೆ. ನನ್ನ ಮಗನಿಗೆ ಅವನಿಗೆ ಏನಾದರೂ ಚಿಂತೆ ಇದ್ದರೆ ನನ್ನೊಂದಿಗೆ ಮಾತನಾಡಲು ಏನಾದರೂ ವಿಷಯ ಇದ್ದರೆ ಅಥವಾ ನಾನು ಅವನಿಗೆ ಅರ್ಥಮಾಡಿಸಿ ಬಗೆ ಹರಿಸ ಬಹುದಾದದ್ದು ಏನಾದರೂ ಇದ್ದರೆ ನಾವು ಶಾಲೆಗೆ ಕಾರಿನಲ್ಲಿ ಹೋಗುವಾಗ ನಾನು ಅವನು ನಿರೀಕ್ಷಿಸುತ್ತಿರುವ ಪ್ರಶ್ನೆಗಳನ್ನು ಕೇಳುತ್ತೇನೆ ಎಂದು ಮನವರಿಕೆಯಾಗಿದೆ.

ಇನ್ನಷ್ಟು ಸಲಹೆಗಳು

ಕೆಳಗಿನ ಅಂಶಗಳು ನಿಮ್ಮ ಸಂಭಾಷಣೆಗಳನ್ನು ಇನ್ನೂ ಉತ್ತಮ  ಮತ್ತು ಶಕ್ತಿಯುತ ಮಾಡಬಹುದು:               

 • ಅಡ್ಡಿಪಡಿಸಲು ಹೋಗಬೇಡಿ. ಇದು ಯಾವುದೇ ಸಂಭಾಷಣೆಗೆ ಅನ್ವಯಿಸುವ ನಿಯಮ, ಅದರಲ್ಲೂ ನೀವು ಒಂದು ಮಗುವಿನಿಂದ ಬಹಳಷ್ಟು ಮಾಹಿತಿ ಪಡೆಯಲು ಬಯಸಿದರೆ ಇದು ಬಲು ಉಪಯುಕ್ತ.
 • ಹೆಚ್ಚು ವಿವರ ಕೇಳಿ. ಸರಳವಾಗಿ  "ನಾನು ಆ ಬಗ್ಗೆ ಇನ್ನೂ ಹೆಚ್ಚು ವಿವರ ಕೇಳಲು ಇಷ್ಟಪಡುತ್ತೇನೆ ..." ಅಥವಾ "ನೀನು ಸ್ವಲ್ಪ ವಿವರಿಸಿ ಹೇಳುತ್ತೀಯಾ?"ಎಂದು ಕೇಳಿರಿ.
 • ಭಾವನೆಗಳನ್ನು ಬಗ್ಗೆ ಕೇಳಿ. ಮಗುವು ಒಂದು ಅನುಭವವನ್ನು  ವಿವರಿಸಿದ ನಂತರ, "ನಿನಗೆ ಆ ಕ್ಷಣದಲ್ಲಿ ಹೇಗೆ ಅನಿಸಿತು? ,ಮತ್ತು ನಿಮ್ಮ ಭಾವನೆಗಳ ಬಗ್ಗೆ ಏನು ಗಮನಿಸಿದೆ? " ಎಂದು ಕೇಳಿ,
 • ಭಾವನೆಗಳನ್ನು ಹೊಂದುವುದು ತಪ್ಪಲ್ಲ.  ನಿಮ್ಮ ಮಗುವಿಗೆ ಭಾಸವಾದ್ದೆಲ್ಲಾ ಸರ್ವೇ ಸಾಮಾನ್ಯ ಮತ್ತು ಅದರಲ್ಲಿ ತಪ್ಪಿಲ್ಲ ಎಂದು ಅವರಗೆ ತಿಳಿಸಿ. ಭಾವನೆಗಳನ್ನು ಹೊಂದುವುದು ತಪ್ಪಲ್ಲ ಅದು ಸಹಜ ಪ್ರತಿಕ್ರಿಯೆ ಎಂದು ತಿಳಿಸಿರಿ
 • ಶಿಕ್ಷಕರು ಅಥವಾ ಮಕ್ಕಳು ಕರುಣಾರಹಿತವಾಗಿರುವುದು ಅಥವಾ ಕೀಳಾಗಿ ವರ್ತಿಸುವುದು ಸರಿ ಅಲ್ಲ ಎಂದು ತಿಳಿಸಿ. ಶಿಕ್ಷಕರು ಜೋರಾಗಿ ಬೈದರು ಅಥವಾ ತಮಗೆ ಅವಮಾನ ಮಾಡಿದರು  (ಅವರು ಏನು ಹೇಳಿದರು ಅಥವಾ ಏನು ಮಾಡಿದರು ಎಂಬುದು ಮುಖ್ಯವಲ್ಲ) ಎಂದು ಮಕ್ಕಳು ತಿಳಿಸಿದರೆ ಅವರಿಗೆ ದೊಡ್ಡವರು ಅವರನ್ನು ಆ ರೀತಿಯಲ್ಲಿ ಕೆಟ್ಟದಾಗಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ತಿಳಿಸಿ. ಅದೇ ರೀತಿಯಲ್ಲಿ ಇತರ ಮಕ್ಕಳು ಆ ರೀತಿಯಲ್ಲಿ ಕೆಟ್ಟದಾಗಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ತಿಳಿಸಿ
 • ಈ ರೀತಿ ವಿಷಯವನ್ನು ಮನಸ್ಸಿನಲ್ಲಿಟ್ಟು ಕೊಂಡು ಕೊರಗದೆ ನಿಮ್ಮೊಡನೆ  ಹಂಚಿಕೊಂಡದ್ದು ತುಂಬಾ ಒಳ್ಳೆಯದಾಯಿತು ಎಂದು  ಅವರಿಗೆ ಧನ್ಯವಾದ ತಿಳಿಸಿ.
 • ಮಕ್ಕಳ ಪ್ರಾಮಾಣಿಕತೆ ಮತ್ತು ಮುಖ್ಯ  ಮತ್ತು ಸಂತಸದ ಕ್ಷಣಗಳನ್ನು ಹಾಗೂ  ನೋವು ಮತ್ತು ಕಷ್ಟದ ಕ್ಷಣಗಳನ್ನು ಹಂಚಿಕೊಳ್ಳುವ ಇಚ್ಛೆಗೆ  ಮೆಚ್ಚುಗೆ ವ್ಯಕ್ತ ಪಡಿಸಿರಿ. ಇದು ಅವರಲ್ಲಿ ವಿಶ್ವಾಸ ಇನ್ನಷ್ಟು ಹೆಚ್ಚಿಸುತ್ತದೆ.ಮತ್ತು ನಿಮ್ಮೊಡನೆ ಮನಬಿಚ್ಚಿ ಮಾತನಾಡುವಂತೆ ಮಾಡುತ್ತದೆ.

ಯಾವ ಪ್ರಶ್ನೆಗಳು ನೀವು ಮತ್ತು ನಿಮ್ಮ ಮಕ್ಕಳ ನಡುವೆ ಬಲು ಒಳ್ಳೆಯ ಸಂಭಾಷಣೆ ಹೊರ ತರುತ್ತದೆ? ಆಲೋಚಿಸಿ ನೋಡಿರಿ.

ಇದು ಎಲೆನಾ ಅಗ್ವಿಲಾರ್ ಅವರ ಲೇಖನದ ಕನ್ನಡ ಅನುವಾದ

ಅನುವಾದಕರು :ಜೈಕುಮಾರ್ ಮರಿಯಪ್ಪ

 

18784 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು