ಹೆಣ್ಣುಮಕ್ಕಳ ವಿದ್ಯಾಭ್ಯಾಸ - ಹದಿಹರೆಯದಲ್ಲಿ ಹೆಣ್ಣುಮಕ್ಕಳು ಶಾಲೆಯನ್ನು ತೊರೆಯಲು ಕಾರಣಗಳು ಸಿಂಥಿಯ ಸ್ಟೀಫನ್

ಭಾರತದ ಅನೇಕ ರಾಜ್ಯಗಳು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ  ಗಮನಾರ್ಹ ಕ್ರಮಗಳನ್ನು ಕೈಗೊಂಡಿವೆ . ಅದರಲ್ಲೂ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಹಾಗೂ ಆದಷ್ಟು ಸಮಯ ಅವರನ್ನು ಶಾಲೆಯಲ್ಲೇ ಉಳಿಸಿಕೊಳ್ಳಲು ಪ್ರಶಂಸನೀಯ ಹೆಜ್ಜೆಗಳನ್ನು ಇಟ್ಟಿವೆ .  ಕರ್ನಾಟಕ ರಾಜ್ಯದ ೭೦ ತಾಲ್ಲೂಕುಗಳಲ್ಲಿ, ಸಾಮಾಜಿಕವಾಗಿ ದುರ್ಬಲವಾಗಿರುವ ಸಾವಿರಾರು ಕುಟುಂಬದ ಹೆಣ್ಣುಮಕ್ಕಳು ಕಸ್ತೂರಿಬಾ ಗಾಂಧಿ ಬಾಲಿಕಾವಿದ್ಯಾಲಯ (KGBV) ಎಂಬ ವಸತಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ.  ಈ ಹೆಣ್ಣುಮಕ್ಕಳು ಎಂಟನೇ ತರಗತಿಯವರೆಗೆ ಇಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿ, ಸಾಮಾನ್ಯ ಶಾಲೆಗಳಿಗೆ ಅಥವಾ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ(RMSA) ವಸತಿ ಶಾಲೆಗಳಿಗೆ ಸಾಗುತ್ತಾರೆ.  ಇವೆಲ್ಲವೂ ಸರ್ವ ಶಿಕ್ಷಣ ಅಭಿಯಾನ ಎಂಬ ಬೃಹತ್ ಸಾಮಾಜಿಕ ವಲಯದ ಕಾರ್ಯಕ್ರಮದ  ಅಡಿಯಲ್ಲಿ ನಡೆಯುತ್ತಿವೆ.  ಆದರೆ ಇವಿಷ್ಟೇ ಸಾಕಾಗುತ್ತದೆಯೇ?  ಇವೆಲ್ಲದರ ನಡುವೆಯೂ ಹೆಣ್ಣುಮಕ್ಕಳು ಏಕೆ ಶಾಲೆಯನ್ನು ಮಧ್ಯದಲ್ಲೇತೊರೆಯುತ್ತಾರೆ?

ಇತ್ತೀಚಿಗಿನ ಸಂಶೋಧನೆಯ ಪ್ರಕಾರ, ಕರ್ನಾಟಕದಲ್ಲಿ ಸುಮಾರು ೩೦%ಗಿಂತ ಹೆಚ್ಚಿನ ಹೆಣ್ಣುಮಕ್ಕಳಿಗೆ ೧೮ನೇ ವಯಸ್ಸಿಗಿಂತ ಮೊದಲೇ ವಿವಾಹ ಮಾಡಲಾಗುತ್ತದೆ. ಸರ್ಕಾರ ಮತ್ತು ನಾಗರಿಕ ಸಮಾಜವು ವಿವಾಹದ ವಯಸ್ಸನ್ನು ಹೆಚ್ಚಿಸಲು, ವ್ಯಕ್ತಿಗೆ ,ಕುಟುಂಬಕ್ಕೆ ಮತ್ತು ಸಮಾಜದ ಮೇಲೆ ಬಾಲ್ಯ ವಿವಾಹದಿಂದ ಆಗುವ ಬೃಹತ್ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸುತ್ತಿದೆ. ಬಾಲ್ಯ ವಿವಾಹವನ್ನು ತಡೆಯಲು ಮತ್ತು ಮಕ್ಕಳ ರಕ್ಷಣಾ ಸಂಸ್ಥೆಗಳಿಗೆ ಶಕ್ತಿಯನ್ನು ತುಂಬಲು, ಮಕ್ಕಳ ರಕ್ಷಣಾ ಅಧಿಕಾರಿಗಳನ್ನು ಹಾಗೂ ಸ್ಥಳೀಯ ಸರ್ಕಾರೀ ಸಂಸ್ಥೆಗಳನ್ನು ನೇಮಿಸಿ, ತರಬೇತಿಗೊಳಿಸಿ, ಸಜ್ಜುಗೊಳಿಸಿ ಹಾಗೂ ಅವರಿಗೆ ಅಧಿಕಾರ ಮತ್ತು ಕಾನೂನುಗಳನ್ನು ನೀಡಿದ ಅನಂತರವೂ ಹೀಗೆ ಬಾಲ್ಯ ವಿವಾಹವು ಕರ್ನಾಟಕ ರಾಜ್ಯ ದಲ್ಲಿ ನಡೆಯುತ್ತಿವೆ.¨

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಒಂದು ಪ್ರಕರಣಾಧ್ಯಯನವು ಹೆಣ್ಣು ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವ ಒತ್ತಡಗಳು ಅವರ ಶಿಕ್ಷಣ, ವಿದ್ಯಾಭ್ಯಾಸ, ಹದಿಹರಯ ಮತ್ತು ಆರಂಭಿಕ ಪ್ರೌಢಾವಸ್ಥೆಯ ಮೇಲೆ ಹೇಗೆ ವರ್ತಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೇ, ಲಿಂಗಾಧಾರಿತ ಸಮಸ್ಯೆಗಳು, ಲೈಂಗಿಕತೆ, ಸುರಕ್ಷೆ ಮತ್ತು ಸಂತಾನೋತ್ಪತ್ತಿಯಲ್ಲಿ ಹಾಗೂ ಗೃಹಕೃತ್ಯದಲ್ಲಿ ಅವಳ ಪಾತ್ರದ ಬಗ್ಗೆ ಸಮಾಜಿಕ ಶಿಷ್ಟಾಚಾರಗಳು, ಇವೆಲ್ಲವುಗಳ ಬಗ್ಗೆ ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆಯ ಧೋರಣೆಗಳನ್ನೂ ಅರಿಯಲು ಸಹಾಯ ಮಾಡುತ್ತದೆ.

ಪ್ರಕರಣಾಧ್ಯಯನ

 ಮೂರು ವರ್ಷದ ಹಿಂದೆ, ೧೩ನೇ ವಯಸ್ಸಿನ ಗೀತಾ ೮ನೇ ತರಗತಿಗೆ ತೇರ್ಗಡೆ ಹೊಂದಿದ್ದಳು. ಇದರಿಂದಾಗಿ ಅವಳು, ತಾನು ವಾಸಿಸುತ್ತಿದ್ದ ಕೊಳಗೇರಿಯ ಮನೆಯಿಂದ ಅರ್ಧ ಕಿ.ಮೀ. ದೂರದಲ್ಲಿರುವ ಪ್ರೌಢಶಾಲೆಯನ್ನು ಸೇರುವಂತಾಯಿತು.  ಅವಳ ವಯಸ್ಸಿನ ಇತರ ಹೆಣ್ಣುಮಕ್ಕಳಿಗೆ ಹೋಲಿಸಿದರೆ, ಗೀತಾ ತೆಳ್ಳಗೆ, ಎತ್ತರವಾಗಿ, ಸುಂದರವಾಗಿ ಇದ್ದಳು.  ಅವಳ ಈ ರೂಪವು ಪಕ್ಕದ ಮನೆಯ ರಾಜು ಎಂಬ ಹುಡುಗನ ಕಣ್ಣನ್ನು ಅವನು ೧೯ ವರ್ಷದವನಿದ್ದಾಗಲೇ ಸೆಳೆದಿತ್ತು.  ಈಗ, ರಾಜು ೨೧ ವರ್ಷದವನಾಗಿದ್ದ, ತನ್ನ ಆರನೆಯ ವಯಸ್ಸಿನಲ್ಲಿ ಶಾಲೆಗೆ ಸೇರಿದ್ದ ರಾಜು, ಶಾಲೆಯಲ್ಲಿ ನೀಡಿದ  ಹೋಂ ವಕ್  ಮಾಡಲೇ ಬೇಕು ಎಂದು ಒತ್ತಾಯಿಸಿ ಶಿಕ್ಷಕರು ನೀಡುತ್ತಿದ್ದ ದೈಹಿಕ ದಂಡನೆಯಿಂದ ಶಾಲೆ ಬಿಟ್ಟನು. ಕಾರಣ ಒಂದು ವರ್ಷ ಮಾತ್ರ ಶಾಲೆಗೆ ಹೋಗಿದ್ದ.  ಇದಾಗಿ ಕೆಲ ವರ್ಷಗಳ ಕಾಲ ನೆರೆ-ಹೊರೆಯ ಮಕ್ಕಳೊಂದಿಗೆ ಆಟವಾಡುತ್ತಾ ಕಾಲ ಕಳೆಯುತ್ತಿದ್ದ ರಾಜು, ೧೨ನೇ ವಯಸ್ಸಿನಲ್ಲಿ ತನ್ನ ನೆರೆಹೊರೆಯ  ಇತರ ಗಂಡಸರೊಡನೆ ಕೂಡಿ, ಸಮೀಪದಲ್ಲಿ ನಡೆಯುತ್ತಿದ್ದ ಕಟ್ಟಡ ನಿರ್ಮಾಣದ ಕೆಲಸಕ್ಕೆ ಸೇರಿಕೊಂಡ.  ಯಾವಾಗ ಗೀತ ತನ್ನ ಚೀಲ ಮತ್ತು ಬುತ್ತಿಯನ್ನು ಹಿಡಿದುಕೊಂಡು ಶಾಲೆಗೆ ನಡೆದು ಹೋಗಲು ಆರಂಭಿಸಿದಳೋ, ರಾಜು ಅವಳನ್ನು ಹಿಂಬಾಲಿಸಿ ಮಾತನಾಡಿಸಲು ಪ್ರಯತ್ನಿಸುತ್ತಿದ್ದ . ಮೊದಲಿಗೆ ಗೀತಾ, ಎಲ್ಲಿ ಇದನ್ನು ತನ್ನ ಮನೆಯವರು ನೋಡುವರೋ ಎಂಬ ಭಯದಿಂದ ಅವನೊಡನೆ ಮಾತನಾಡದಿದ್ದರೂ, ಒಬ್ಬ ಚೆನ್ಣಾಗಿ ಕಾಣುವ  ಹುಡುಗ ತನ್ನನ್ನು ಹಿಂಬಾಲಿಸಿ ಬಂದು ಮಾತನಾಡಿಸುವುದನ್ನು ತನ್ನ ಜೊತೆ ನಡೆದು ಬರುತ್ತಿದ್ದ ಇತರ ಹುಡುಗರಜೊತೆ ಮಾತನಾಡುವುದನ್ನು  ಕಂಡು ಅಸೂಯೆ ಪಡುವುದನ್ನು ಮನಸ್ಸಿನಲ್ಲಿ ಆನಂದಿಸುತ್ತಿದ್ದಳು.  ಅಷ್ಟರಲ್ಲಿ ಯಾರೋ ಹಿರಿಯರು  ಇದನ್ನು ಗಮನಿಸಿ ರಾಜುವಿನ ಮನೆಯವರಿಗೆ ತಿಳಿಸಿದರು. ನಿಮ್ಮ ಹುಡುಗ ಗೀತಾಳನ್ನು ಇಷ್ಟಪಡುತ್ತಿದ್ದಾನೆ ಎನಿಸುತ್ತದೆ. ಅವರಿಬ್ಬರೂ ಶಾಲೆಯ ಹತ್ತಿರ ಮಾತನಾಡುವುದನ್ನು ನಾವು ನೋಡುತ್ತಿರುತ್ತೇವೆ ಎಂದು ಹೇಳಿದರು

ಇನ್ನು ಈ ವಿಷಯ ಗೀತಾಳ ಮನೆಯವರ ಕಿವಿಗೆ ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ.  ನಿರೀಕ್ಷಿಸ ಬಹುದಾದ ಪರಿಣಾಮಗಳೇ ಆದವು . ಗೀತಾಳನ್ನು ಮನೆಯವರು ಚೆನ್ನಾಗಿ ಹೊಡೆದರು. ನೆರೆ-ಹೆರೆಯವರು ಮಧ್ಯಸ್ಥಿಕೆಗೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು.  ಇದಾಗಿ ಕೆಲ ದಿನಗಳ ಅನಂತರ ಅವಳು ಪುನಃ ಶಾಲೆಗೆ ಹೋಗಲು ಪ್ರಾರಂಭಿಸುತ್ತಾಳೆ.  ಆದರೆ ಈ ಬಾರಿ ಅವಳ ತಾಯಿ ಅವಳೊಡನೆ ಶಾಲೆಯವರೆಗೂ ಹೋಗಿ ಬಿಡುವುದು ಮತ್ತು ಮನೆಗೆ ಪುನಃ ತನ್ನ ಜೊತೆಯಲ್ಲಿಯೇ ಕರೆದುಕೊಂಡು ಬರುವುದನ್ನು ಪ್ರಾರಂಭಿಸುತ್ತಾಳೆ. ಆದರೆ ಇದು ಹೆಚ್ಚು ದಿನ ಡೆಯಲಿಲ್ಲ.  ಗೀತಾಳ ತಾಯಿ ಅವರಿವರ ಮನೆಯಲ್ಲಿ ಕೆಲಸ ಮಾಡಿ ಬರುವ ಹಣದಿಂದ ಸಂಸಾರ ಸಾಗಿಸುತ್ತಿದ್ದಳು. ಅವಳು ಬೆಳೆಗ್ಗೆ ಬೇಗ ಎದ್ದು ಕೆಲಸಕ್ಕೆ ಹೋಗಬೇಕಿತ್ತು. ಹೀಗಾಗಿ, ಗೀತಾ ಮತ್ತೆ ಒಂಟಿಯಾಗಿ ಶಾಲೆಗೆ ಹೋಗುವಂತಾಯಿತು.  ಇದನ್ನು ಕಂಡ ಕೆಲ ಹಿರಿಯ ಹೆಂಗಸರು, ಇವಳನ್ನು ಯಾಕೆ ಶಾಲೆಗೆ ಕಳುಹಿಸುತ್ತಿಯಾ? ಇವಳೂ ವಯಸ್ಸಿಗೆ ಮೀರಿ ಬೆಳೆದಿದ್ದಾಳೆ, ಆ ಹುಡುಗನೂ ಇವಳನ್ನು ಮೆಚ್ಚಿಕೊಂಡಿರುವಂತೆ ಕಾಣುತ್ತದೆ.  ಯಾಕೆ ಇಬ್ಬರಿಗೂ ಮದುವೆ ಮಾಡಬಾರದು ಎಂದು ಸಲಹೆ ನೀಡುತ್ತಾರೆ.  ಆದರೆ ಗೀತಾಳ ತಾಯಿಯ ಆಲೋಚನೆಯು ಭಿನ್ನವಾಗಿತ್ತು.  ತಾನಂತೂ ಶಾಲೆಯ ಮೆಟ್ಟಿಲು ಹತ್ತಲು ಸಾಧ್ಯವಾಗಲಿಲ್ಲ, ೧೩ನೇ ವಯಸ್ಸಿನಲ್ಲಿಯೇ ಮದುವೆಯಾಗುವಂತಾಯಿತು, ಆದರೆ ಗೀತಾಳನ್ನಾದರೂ ಚೆನ್ನಾಗಿ ಓದಿಸಿ ಶಿಕ್ಷಕಿಯನ್ನಾಗಿ ಮಾಡಬೇಕು ಎಂಬ ಹಂಬಲವನ್ನು ಹೊಂದಿದ್ದಳು.  ಆದರೆ ಕುಡುಕ ಗಂಡನನ್ನು ಕಟ್ಟಿಕೊಂಡು ಜೀವನ ಸಾಗಿಸುವುದು ಅವಳಿಗೆ ಕಷ್ಟವಾಗಿತ್ತು.  ಅವನು ಹಣಕ್ಕಾಗಿ ದಿನಾ ಪೀಡಿಸುತ್ತಿದ್ದ. ಇದಲ್ಲದೇ ಗೀತಾಳಿಗೆ ಒಬ್ಬ ತಮ್ಮನಿದ್ದು ಅವನೂ ಓದಿನಲ್ಲಿ ಚುರುಕಾಗಿದ್ದ ಮತ್ತು ಶಾಲೆಯನ್ನು ಎಂದೂ ತಪ್ಪಿಸುತ್ತಿರಲಿಲ್ಲ.  ಅವನ ವಿದ್ಯಾಭ್ಯಾಸದ ವೆಚ್ಚವನ್ನೂ ಗೀತಾಳ ತಾಯಿಯೇ ಭರಿಸಬೇಕಾಗಿತ್ತು.  ಹೀಗಾಗಿ ಅವಳು ನಿತ್ಯ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿತ್ತು.  ಗೀತಾಳ ಮನೆಯ ಈ ಪರಿಸ್ಥಿತಿಯಿಂದ ಧೈರ್ಯಗೊಂಡ ರಾಜು ಪುನಃ ನಿತ್ಯ ಅವಳೊಂದಿಗೆ ಶಾಲೆಯವರೆಗೆ ಹೋಗಲು ಪ್ರಾರಂಭಿಸಿದ.  ಆದರೆ ರಜಾ ದಿನಗಳಲ್ಲಿ ಅವರಿಗೆ ಭೇಟಿಯಾಗಲು ಸಾಧ್ಯವಾಗುತ್ತಿರಲಿಲ್ಲ.  ಇದರಿಂದ ಬೇಸರಗೊಂಡು, ನಾವಿಬ್ಬರೂ ಎಲ್ಲಿಗಾದರೂ ಓಡಿ ಹೋಗೋಣ ಎಂಬ ಸಲಹೆಯನ್ನು ಅವನು ಗೀತಾಳಿಗೆ ನೀಡಿದ.  ಅಷ್ಟರಲ್ಲಾಗಲೇ ಸಂಪೂರ್ಣವಾಗಿ ರಾಜುವಿನ ಹಿಡಿತದಲ್ಲಿದ್ದ ಗೀತಾ ಇದನ್ನು ಒಪ್ಪಿಕೊಂಡು ಗುಟ್ಟಾಗಿ ತನ್ನ ಬಟ್ಟೆಗಳನ್ನೆಲ್ಲಾ ಚೀಲಕ್ಕೆ ತುಂಬಿಸಲು ಪ್ರಾರಂಭಿಸುತ್ತಾಳೆ.  ಇದು ಹೇಗೋ ಗೀತಾಳ ತಾಯಿಗೆ ತಿಳಿದು ಆಕಾಶ ಕಳಚಿ ಬಿದ್ದಂತಾಯಿತು.  ಗೀತಾಳ ತಂದೆ ಇಬ್ಬರನ್ನೂ ಹಿಡಿದು ಹಿಗ್ಗಾ-ಮುಗ್ಗಾ ಹೊಡೆದು ಬಾರಿಸಿದ.  ಇದನ್ನೆಲ್ಲಾ ಗಮನಿಸುತ್ತಿದ್ದ  ಸ್ಥಳೀಯರು, ’ಹೇಗೂ ಹುಡುಗಿಯ ಹೆಸರು ಕೆಟ್ಟಂತಾಯಿತು. ಈಗಾಗಲೇ ಊರವರಿಗೆಲ್ಲಾ ಇವರ ವಿಷಯ ತಿಳಿದಾಗಿದೆ, ಇಬ್ಬರೂ ಒಬ್ಬರನ್ನು ಒಬ್ಬರು ಇಷ್ಟಪಡುತ್ತಿದ್ದಾರೆ, ಇವರಿಗೆ ಮದುವೆ ಮಾಡಿದರೆ, ಓಡಿಹೋದವರೆಂಬ ಅಪಮಾನದಿಂದಾದರೂ ಪಾರಾಗಬಹುದು’ ಎಂಬ ಸಲಹೆಯನ್ನು ನೀಡಿದರು.  ಇದಕ್ಕೆ ಒಪ್ಪಿಕೊಂಡ ಅವರ ಮನೆಯವರು ಶೀಘ್ರವಾಗಿ ಒಂದು ಸಣ್ಣ ಸಮಾರಂಭವನ್ನು ಏರ್ಪಡಿಸಿ ಗೀತ ಹಾಗೂ ರಾಜುವಿನ ವಿವಾಹವನ್ನು ಮಾಡಿ ಮುಗಿಸಿದರು.  ಗೀತಾಳಿಗೆ ಆಗ ಕೇವಲ ಹದಿಮೂರುವರೆ ವರ್ಷವಾಗಿತ್ತು.  ಕೆಲವೇ ವಾರಗಳಲ್ಲಿ ಅವಳು ಗರ್ಭವತಿಯಾದಳು, ಮತ್ತು ಒಂಭತ್ತು ತಿಂಗಳಿಗೆ ಆರೋಗ್ಯವಂತ ಮಗುವಿಗೆ ಸರ್ಕಾರೀ ಆಸ್ಪತ್ರೆಯಲ್ಲಿ ಜನ್ಮ ನೀಡಿದಳು.  ಇದು ಅವಳ ಸಂಪೂರ್ಣ ಪರಿವಾರದವರಿಗೆ ಸಂತೋಷವನ್ನು ನೀಡಿತು.  ಆದರೆ, ಗೀತಾಳ ಪಾಲಿಗೆ ಇದೊಂದು ಅತ್ಯಂತ ಅಪಾಯಕಾರಿ ಹೆರಿಗೆಯಾಗಿತ್ತು.

ರಾಜುವಿಗೆ ಆಗಾಗ ಕಟ್ಟಡ ನಿರ್ಮಾಣದ ಕೆಲಸ ಸಿಗುತ್ತಿತ್ತು.  ಮಗು ಬೆಳೆಯುತ್ತಿದ್ದಂತೆಲ್ಲಾ ತಾಯ್ತನದ ಜವಾಬ್ದಾರಿಯ ಒತ್ತಡವು ಗೀತಾಳನ್ನು ತಾಳ್ಮೆ ಕಳೆದುಕೊಳ್ಳುವಂತೆ ಮಾಡುತ್ತಿತ್ತು ಮತ್ತು ಅವಳು ಬಹು ಬೇಗನೇ ಅಳಲು ಪ್ರಾರಂಭಿಸುತ್ತಿದ್ದಳು.  ಅವಳು ಮಗುವಿನ ಪಾಲನೆಯಲ್ಲಿ ಸಂಪೂರ್ಣವಾಗಿ ಬಳಲಿ ಹೋದಳು.  ಹೀಗಾಗಿ, ಮನೆಯ ಇತರ ಯಾವುದೇ ಕೆಲಸಗಳನ್ನು ಅವಳಿಗೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆ ಸಮಯದಲ್ಲಿ ಅವಳ ತಾಯಿ ಸಹಾಯ ಮಾಡಲು ಶಕ್ತಿ ಮೀರಿ ಪ್ರಯತ್ನಿಸಿದರೂ, ಪರಿಸ್ಥಿತಿಯನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಾಗಲಿಲ್ಲ.  ಒತ್ತಡವು ದಿನೇ-ದಿನೇ ಹೆಚ್ಚುತ್ತಿತ್ತು.  ಮಗುವಿಗೆ ಒಂದು ವರ್ಷವಾಗುವ ಹೊತ್ತಿಗೆ ಗೀತಾಳಿಗೆ ಇನ್ನೂ ಹದಿನಾರು ವರ್ಷವೂ ತುಂಬಿರಲಿಲ್ಲ, ಗೀತಾ ಮತ್ತು ರಾಜುವಿನ ಸಂಬಂಧ ಕೆಡಲು ಪ್ರಾರಂಭವಾಗಿತ್ತು.  ರಾಜು ಗೀತಾಳನ್ನು ಹೊಡೆಯಲು ಪ್ರಾರಂಭಿಸಿದ್ದ.  ಇಂದಿನ ಪರಿಸ್ಥಿತಿಗೆ ತಕ್ಕಂತೆ ಗೀತಾಳೂ ಇದಕ್ಕೆ ಪ್ರತಿಯಾಗಿ ತಿರುಗೇಟು ನೀಡಲು ಪ್ರಾರಂಭಿಸಿದಳು.

 ನಾನು ಗೀತಾಳ ತಾಯಿಯೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ ಅವಳು, ’ನಾನು ಮಗಳೊಂದಿಗೆ ಮಾತನಾಡುವುದಿಲ್ಲ, ಅವಳು ಗಂಡನಿಗೆ ಬಾಯಿಗೆ ಬಂದಂತೆ ಬೈಯುತ್ತಾಳೆ  , ಅವನು ಹೊಡೆದರೆ ತಿರುಗಿ ಇವಳೂ ಅವನನ್ನು ಹೊಡೆಯುತ್ತಾಳಂತೆ.  ಅವಳ ಒರಟು ತನಕ್ಕೆ ಏಟು ತಿನ್ನಬೇಕಾಗಿದ್ದೆ, ತಿನ್ನಲಿ ಎಂದಳು.  ನಾನು ಅವಳಿಗೆ ಪ್ರಸ್ತುತ ಆಗು-ಹೋಗುಗಳನ್ನು ವಿವರಿಸಿ, ಇಂದಿನ ಹದಿಹರೆಯದವರು ವಿಭಿನ್ನ ರೀತಿಯ ಆದರ್ಶ ವ್ಯಕ್ತಿಗಳನ್ನು ಹೊಂದಿರುತ್ತಾರೆ ಮತ್ತು ಗೀತಾ ಪರಿಸ್ಥಿತಿಯನ್ನು ನಿಭಾಯಿಸಲು ಪರದಾಡುತ್ತಿದ್ದಾಳೆಂದು ತಿಳಿ ಹೇಳಿದೆ.  ಹಾಗೇ ಅವಳನ್ನು ರಾಜುವಿನ ಪೋಷಕರೊಂದಿಗೆ ಮಾತನಾಡಲು ಪ್ರೇರೇಪಿಸಿ, ಗೀತಾಳನ್ನು ಏಉಃಗಿಗೆ ಅಥವಾ ಕನಿಷ್ಠ ಪಕ್ಷ ಮಹಿಳಾ ಶಿಕ್ಷಣ ಕೇಂದ್ರಕ್ಕೆ ಸೇರಿಸಲು ಅವಳ ಗಂಡನ ಮನೆಯವರ ಮನವೊಲಿಸುವಂತೆ ಕೇಳಿಕೊಂಡೆ.  ಮಹಿಳಾ ಸಮಾಖ್ಯ ,ಕರ್ನಾಟಕ ಎಂಬ ಸಂಸ್ಥೆಯು   ತೊಂದರೆಯಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಮಹಿಳಾ ಶಿಕ್ಷಣ ಕೇಂದ್ರವನ್ನು ನಡೆಸುತ್ತದೆ.  ಇಲ್ಲಿ ಅನೌಪಚಾರಿಕವಾಗಿ ವಸತಿ ಸೌಲಭ್ಯದ ಜೊತೆಗೆ ವಿದ್ಯಾಭ್ಯಾಸವನ್ನು ನೀಡಲಾಗುತ್ತದೆ. ಅಲ್ಲಿಗೆ ಗೀತಾಳನ್ನು ಸೇರಿಸಬೇಕೆಂದು ನಾನು ಹೇಳಿದ್ದನ್ನು ಕೇಳಿ ಅವಳ ತಾಯಿ ಅಘಾತಕ್ಕೆ ಒಳಗಾದಂತೆ ಕಂಡರು. ’ಈಗ ಅವಳಿಗೆ ಮದುವೆಯಾಗಿದೆ, ಅವಳನ್ನು ಶಾಲೆಗೆ ಕಳುಹಿಸುವುದು ಹೇಗೆ?’ ಎಂದು ಕೇಳಿ, ನನ್ನ ಸಲಹೆಯನ್ನು ತಿರಸ್ಕರಿಸಿದರು.  ತಿಂಗಳುಗಳು ಉರುಳಿದವು, ರಾಜು ಅನೇಕ ದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿ ತಿನ್ನಲು ಏನೂ ಇಲ್ಲದಂತಾದರೂ, ಗೀತಾಳನ್ನು ಮನೆ ಬಿಟ್ಟು ಹೊರಗೆ ಹೋಗದಂತೆ ನಿಯಂತ್ರಿಸಲು ತೊಡಗಿದ. ಇದಕ್ಕೆಲ್ಲಾ ಅವನ ಅಸೂಯೆ ಮತ್ತು ಗೀತಾ ತನಗೆ ಮಾತ್ರ ಸೇರಿದವಳು ಎಂಬ ಭಾವನೆಯೇ ಕಾರಣವಾಗಿತ್ತು.  ಮತ್ತೊಂದು ದೊಡ್ಡ ಜಗಳದ ಅನಂತರ, ಪೊಲೀಸರು ಪ್ರವೇಶಿಸಿದರೂ, ಪ್ರಕರಣವನ್ನು ಠಾಣೆಯಲ್ಲಿ ದಾಖಲಿಸಲು ಇಷ್ಟಪಡದ ಕುಟುಂಬ ವರ್ಗದವರು ಗೀತಾಳಿಗೆ ದಿನ ನಿತ್ಯದ ವೆಚ್ಚಕ್ಕಾಗಿ ಹಣವನ್ನು ನೀಡಲು ಒಪ್ಪಿಕೊಂಡರು.  ಗೀತಾ ದುಂದು ವೆಚ್ಚಗಾತಿ ಎಂದು ರಾಜುವಿನ ಮನೆಯವರು ದೂರಿ, ಈ ಒಪ್ಪಂದ ಬಹಳ ಬೇಗ ಮುರಿದು ಬಿತ್ತು ಎನ್ನುವುದು ನಿರೀಕ್ಷಿತ ಅಂಶವೇ ಆಗಿದೆ.

ಕೊನೆಗೆ ಗೀತ, ಅಂಬೆಗಾಲಿಡುತ್ತಿದ್ದ ತನ್ನ ಮಗುವನ್ನು ಕಟ್ಟಿಕೊಂಡು ಅವರಿವರ ಮನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಳು.  ಆದರೆ, ಅಮ್ಮನ ಗಮನ ತನ್ನಡೆಗೆ ಸೆಳೆಯಲು ಮಗು ಕೆಲವೊಮ್ಮೆ ಅವಳ ಕೆಲಸಕ್ಕೆ ಅಡ್ಡಿಪಡಿಸುತ್ತಿತ್ತು.  ಹೀಗಾಗಿ ಗೀತಾಳ ತಾಯಿ ಅನೇಕ ಬಾರಿ ಮಗುವನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಬೇಕಾಗುತ್ತಿತ್ತು.  ಇದೇ ರೀತಿಯಲ್ಲಿ ಬಹಳಷ್ಟು ದಿನ ಮುಂದುವರಿಯಿತು.  ಒಂದು ದಿನ ಗೀತಾಳ ತಾಯಿಯು ನನಗೆ ಕರೆ ಮಾಡಿ ಅಕ್ಕಾ ದಯಮಾಡಿ ಗೀತಾಳನ್ನು ನೀವು ಹೇಳಿದ ಶಾಲೆಗೆ ಸೇರಿಸುತ್ತೀರಾ?’ ಎಂದು ಕೇಳಿದಳು.  ಅವಳಿಗೆ ಗಂಡನ ಮನೆಗೆ ಹೋಗಲು ಇಷ್ಟವಿಲ್ಲ, ಅವನಿಗೂ ಅವಳು ಬೇಡವಂತೆ, ಹೀಗಾಗಿ ನಾನು ಅವಳನ್ನು ದೂರ ಕಳುಹಿಸ ಬೇಕು ಅಂತಿದ್ದೇನೆ. ಅವಳು ಅಲ್ಲಿ ಓದು ಮುಂದುವರೆಸಲಿ ಎಂದಳು.

ಕೆಲ ದಿನಗಳಲ್ಲಿ ಅವರು ನನ್ನ ಬಳಿ ಬಂದರು.  ಗೀತಾಳನ್ನು ಹತ್ತಿರದ ಊರಿನಲ್ಲಿದ್ದ ಮಹಿಳಾ ಸಮಾಖ್ಯ ಸಂಸ್ಥೆಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಲಾಯಿತು.  ಅವಳ ಮಗುವನ್ನು ಪೋಷಿಸಲು  ೩೨ ವರ್ಷದ ಮಗುವಿನ ಅಜ್ಜಿಯೊಂದಿಗೆ ಬಿಡಲಾಯಿತು.  ರಾಜು ನೀಡಿದ ದೈಹಿಕ ಮತ್ತು ಬೈಗುಳುಗಳಿಂದ, ಅಸೂಯೆ ಮತ್ತು ಮಾನಸಿಕ ಹಿಂಸೆಯಿಂದ ತಾನು ಬಳಲಿರುವುದಾಗಿ ಗೀತಾ ಹೇಳಿದಳು.  ಹೀಗಿದ್ದರೂ, ಅವನು ಅವಳಿಗಾಗಿ ಎದುರು ನೋಡುತ್ತಿದ್ದಾನೆ ಮತ್ತು ಅವಳೊಂದಿಗೆ ಮತ್ತೆ ಸೇರಿ ಸಂಸಾರನಡೆಸುವಂತೆ ಒತ್ತಾಯಿಸುತ್ತಿದ್ದಾನೆ.  ಅವನೇನಾದರೂ ಗಡುಸಾಗಿ ಅವಳನ್ನು ಪಡಯಲೇ ಬೇಕೆಂದು ನಿರ್ಧರಿಸಿದರೆ, ಅದರಲ್ಲೂ, ಮಗು ಅವನಿಗೆ ಸಮೀಪದಲ್ಲೇ ಇರುವಾಗ, ಪರಿಸ್ಥಿತಿಯು ಕೈ ಮೀರಿ ಹೋಗಬಹುದು.

ಯಾವೆಲ್ಲಾ ವಿಷಯಗಳು ಗೀತಾಳ ನಿರಂತರ ವಿದ್ಯಾಭ್ಯಾಸಕ್ಕೆ ವಿರುದ್ಧವಾಗಿ ನಿಂತವು?

ಅನೇಕ ರಚನಾತ್ಮಕ ಅಂಶಗಳು ಸ್ಪಷ್ಟವಾಗಿ ಇಲ್ಲಿ ತಮ್ಮ ಪಾತ್ರ ವಹಿಸಿದ್ದನ್ನು ಕಾಣಬಹುದು.  ಮೊದಲಿಗೆ, ಶಾಲೆ ಇದ್ದ ಸ್ಥಳ.  ಮನೆಯ ಬಳಿಯೇ ಪ್ರೌಢಶಾಲೆ ಇಲ್ಲದ್ದು, ಅವಳನ್ನು ಶಾಲೆಗೆ ನಡೆದು ಹೋಗುವಂತೆ ಮಾಡಿದ್ದರಿಂದ ಅವಳನ್ನು ದಾರಿಯಲ್ಲಿ ಹಿಂಬಾಲಿಸಿ ಪೀಡಿಸಲು  ಸಾಕಷ್ಟು ಅವಕಾಶವನ್ನು ನೀಡಿತು.  ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಅವರು ಪ್ರೌಢಾವಸ್ಥೆಗೆ ಬಂದ ಕೂಡಲೇ ಶಾಲೆಯನ್ನು ಬಿಡಿಸಿ ಮನೆಯಲ್ಲಿರುವಂತೆ ಹೇಳಲು ಇದೊಂದು ಪ್ರಮುಖವಾದ ಕಾರಣ.

ಸಾಮಾಜೀಕರಣವು ಎರಡನೇ ಪ್ರಮುಖ ಕಾರಣ.  ಸಾಮಾಜಿಕ ಪರಿಸ್ಥಿತಿಯು ಹೆಣ್ಣು ಮಕ್ಕಳನ್ನು  ಅವರು ಚಿಕ್ಕ ಮಗುವಾಗಿನಿಂದಲೂ, ಉನ್ನತ ವಿದ್ಯಾಭ್ಯಾಸಕ್ಕಾಗಲಿ, ವೃತ್ತಿಗಾಗಲೀ ತಯಾರು ಮಾಡದೇ, ಅವರನ್ನು ವಿವಾಹಕ್ಕೆ ತಯಾರು ಮಾಡುತ್ತದೆ. ಹೆಣ್ಣು ಮಗಳನ್ನು ಮದುವೆ ಮಾಡಿ ಕಳುಹಿಸಲು ಹೆತ್ತವರ ಮೇಲಿರುವ ಒತ್ತಡ, ಮದುವೆ ಸಮಯದಲ್ಲಿ ಅವಳ ಕನ್ಯತ್ವಕ್ಕೆ ಇರುವ ಮೌಲ್ಯ ಹಾಗೂ ಅವಳಿರುವ ಪರಿಸರದಲ್ಲಿ ನಡೆಯುವ ಲೈಂಗಿಕ ಶೋಷಣೆಯಿಂದ ರಕ್ಷಣೆ ಇಲ್ಲದಿರುವುದು, ಹೆಣ್ಣು ಮಕ್ಕಳು ಶಾಲೆಯಲ್ಲಿನ ವಿದ್ಯಾಭ್ಯಾಸವನ್ನು ಮಧ್ಯದಲ್ಲಿಯೇ ತೊರೆಯುವುದು ಮತ್ತು ಚಿಕ್ಕ ವಯಸ್ಸಿನಲ್ಲಿಯೇ ವಿವಾಹವಾಗುವುದಕ್ಕೆ ಮತ್ತೊಂದು ಪ್ರಮುಖವಾದ ಕಾರಣ. ಬಡವರು, ಪರಿಶಿಷ್ಟ ಜಾತಿ/ಪಂಗಡ ಇಲ್ಲವೇ ಅಲ್ಪಸಂಖ್ಯಾತ ವರ್ಗದ ಕುಟುಂಬದಿಂದ ಬಂದಿರುವ ಹೆಣ್ಣುಮಕ್ಕಳು ಶೋಷಣೆಗೆ ಒಳಗಾಗುವ ಅಪಾಯ ಹೆಚ್ಚಾಗಿರುತ್ತದೆ.  ಏಕೆಂದರೆ, ಈ ವರ್ಗದವರು ನೀಡುವ ದೂರಿಗೆ ಪ್ರತಿಯಾಗಿ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ಬಹಳಷ್ಟು ಜನ ಶೋಷಕರು ಯಾವುದೇ ಭಯವಿಲ್ಲದೇ ಸುಲಭವಾಗಿ ಕಾನೂನನ್ನು ಉಲ್ಲಂಘಿಸಿ ಶೋಷಣೆಗೆ, ದೌರ್ಜನ್ಯಕ್ಕೆ ಮುಂದಾಗುತ್ತಾರೆ.  ಹೀಗಾಗಿ, ಈ ವರ್ಗದ ಕುಟುಂಬಗಳ ಹೆಣ್ಣುಮಕ್ಕಳಿಗಿರುವ ಇತರ ಆಯ್ಕೆಗಳನ್ನು ಬದಿಗೊತ್ತಿ ಪೋಷಕರು ಅವರನ್ನು ಮನೆಯಲ್ಲಿಯೇ ಉಳಿಸಿಕೊಂಡು ಸಂಸಾರವನ್ನು  ಸಾಗಿಸಲು ಅನುವುಗೊಳಿಸುತ್ತಾರೆ.

ತಮಗೆ ಇಷ್ಟವಾದ ಯಾವುದೇ ಹುಡುಗಿಯನ್ನು ಹಿಂಬಾಲಿಸುವುದು ಮತ್ತು ಅವರನ್ನು ಪಡೆಯುವುದು ತಮಗಿರುವ ವಿಶೇಷ ಅಧಿಕಾರವೆಂದು ಯುವಕರು ಭಾವಿಸುತ್ತಾರೆ.  ಅದರಲ್ಲೂ ಬಡ ವರ್ಗದ ಕುಟುಂಬಗಳು ಈ ಸ್ವಭಾವವನ್ನು ನಿಯಂತ್ರಿಸದೇ ಮೌನವಾಗಿ ಅವರನ್ನು ಬೆಂಬಲಿಸುತ್ತಾರೆ, ಮತ್ತು ಇದನ್ನೇ ಮದುವೆಗೆ ಪ್ರೇರೇಪಿಸುವ ಅಸ್ತ್ರವನ್ನಾಗಿ ಬಳಸುತ್ತಾರೆ.  ಆದರೆ ಇವರಾರಿಗೂ ಹುಡುಗ ಅಥವಾ ಹುಡುಗಿಯ ವಯಸ್ಸು ಗಣನೆಗೆ ಬರುವುದೇ ಇಲ್ಲ.  ಇದಲ್ಲದೇ, ಕನ್ನಡ ಮತ್ತು ತೆಲುಗು ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ನಾಯಕನನ್ನು ಕಾರ್ಮಿಕ ವರ್ಗದವರನ್ನಾಗಿ ಅಥವಾ ಶೈಕ್ಷಣಿಕವಾಗಿ ಹಿಂದುಳಿದಿರುವವರನ್ನಾಗಿ ಬಿಂಬಿಸುವುದರಿಂದ, ಇವು ಉದ್ದೇಶಿತ ಪ್ರೇಕ್ಷಕ ಜನರಾದ ಹದಿಹರೆಯದವರ  ನಿಜ ಜೀವನಕ್ಕೆ ನಿಕಟವೆನಿಸುವುದರಿಂದ, ವಿದ್ಯಾಭ್ಯಾಸದ ವಿಷಯದಲಿ   ಆದರೂ ಸರಿಯೇ ತಮಗಿಂತ ಉತ್ತಮ ಸ್ತರದ  ಹುಡುಗಿಯರನ್ನು, ಹಿಂಬಾಲಿಸಿ, ಓಲೈಸಿ ಅವರನ್ನು ಪಡೆಯುವ ಕನಸುಕಾಣಲು ಪ್ರಾರಂಭಿಸುತ್ತಾರೆ. ಈ ರೀತಿಯ ಅವರ ಅನುಭವಗಳೇ ಸಾಮಾಜಿಕ ಅಭ್ಯಾಸಗಳು ಮತ್ತು ನಿಯಮಗಳಾಗಿ ಬಿಡುತ್ತವೆ.

ಇಲ್ಲಿ ಉಲ್ಲೇಖಿಸಿರುವ ಪ್ರಕರಣಾಧ್ಯಯನವನ್ನು ತೆಗೆದುಕೊಂಡರೆ, ಮದುವೆಯ ಸವಯದಲ್ಲಿ ಹುಡುಗನ ವಯಸ್ಸು ಇನ್ನೂ ೨೦ ದಾಟಿರಲಿಲ್ಲ.  ಬಾಲ್ಯವಿವಾಹವನ್ನು ನಿಷೇಧಿಸುವ ಕಾನೂನು ಇದ್ದರೂ, ಟಿ.ವಿಗಳಲ್ಲಿ, ಶಾಲೆಯಲ್ಲಿ ಎನ್‌ಜಿಓಗಳು, ನಡೆಸಿದ ಪ್ರಚಾರದ ಹೊರತಾಗಿಯೂ, ಈ ಆಚರಣೆಯು ಅವ್ಯಾಹತವಾಗಿ ಮುಂದುವರೆದಿದೆ, ಅದರಲ್ಲೂ ವಿಶೇಷವಾಗಿ, ಉತ್ತರ ಕರ್ನಾಟಕ ಭಾಗದಲ್ಲಿ ಇದಕ್ಕೆ ಪ್ರಬಲವಾದ ಸಾಮಾಜಿಕ ಬೆಂಬಲ ಮತ್ತು ಒಪ್ಪಿಗೆ ಇರುವುದರಿಂದ, ಬಾಲ್ಯವಿವಾಹವು ಇಲ್ಲಿ ಹೆಚ್ಚಾಗಿ ರೂಢಿಯಲ್ಲಿದೆ.  ರಾಜಕೀಯ ಸಂಕಲ್ಪಶಕ್ತಿ  ಇಲ್ಲದ ಕಾರಣ ಈ ಅಭ್ಯಾಸದ ವಿರುದ್ಧ್ಗ ಮಾಹಿತಿ ಕೊಡುವ ವ್ಯವಸ್ಥೆ  ಸಾಕಷ್ಟು ಇಲ್ಲದಿರುವುದು ಮತ್ತು ಇದಕ್ಕಾಗಿ ಇರುವ ಕಾನೂನನ್ನು ಸರಿಯಾಗಿ ಜಾರಿಗೆ ತರದಿರುವುದರಿಂದ ಸರ್ಕಾರವನ್ನು ಅದರ ಜವಾಬ್ದಾರಿನಡೆಸುತ್ತಿಲ್ಲ ಎಂದೇ ಹೇಳ ಬೇಕು.  ಬಾಲ್ಯವಿವಾಹವು ಕಾನೂನು ಬಾಹಿರ ಮತ್ತು ಇದರ ಉಲ್ಲಂಘನೆ ಮಾಡಿದವರಿಗೆ ದಂಡನೆ ನೀಡಲಾಗುವುದು ಎನ್ನುವ ವಿಷಯದ ಬಗ್ಗೆ ಜನರಿಗೆ ಇರುವ ಅರಿವು ಬಹಳ ಕಡಿಮೆ.  ಸಮುದಾಯವು ಎದುರುಬೀಳುವ ಭಯದಿಂದ ಅಥವಾ ಬಾಲ್ಯ ವಿವಾಹವನ್ನು ತಡೆಯಬೇಕು ಎಂದು ಅವರು ನಂಬಿಲ್ಲದಿರುವುದರಿಂದ ಅಧಿಕಾರಿಗಳು ಅನೇಕ ಬಾರಿ ಇದರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ.

ಹೀಗಾಗಿ, ಬಡತನ, ಲಿಂಗ ತಾರತಮ್ಯತೆ, ಜಾರಿಯಾಗದ ಕಾನೂನಿನ ಕಾರ್ಯರಚನೆಗಳು, ಪುರುಷರ ವರ್ತನೆಯೂ ಸೇರಿದಂತೆ (ಲಿಂಗಾಧಾರಿತ) ಸಮುದಾಯದ ರೀತಿಗಳು, ಅಸ್ಥಿರ ಆದಾಯ ಮತ್ತು ಎಲ್ಲಕ್ಕಿಂತಾ ಹೆಚ್ಚಾಗಿ, ಹೆಣ್ಣುಮಕ್ಕಳಿಗೆ/ಮಹಿಳೆಯರಿಗೆ ಮನೆಕೆಲಸವು ಅನಿವಾರ್ಯವಾದದ್ದು ಮತ್ತು ತಪ್ಪಿಸಿಕೊಳ್ಳಲಾಗದ ಹಣೆಬರಹ ಎನ್ನುವ ಪ್ರಚಲಿತವಾದ ಮನೋಧೋರಣೆಯು ಈ ಅಭ್ಯಾಸಗಳಿಗೆ ಎಡೆ ಮಾಡಿಕೊಟ್ಟಿವೆ ಮತ್ತು ಇಂತಹಾ ಮನೋಧೋರಣೆಗಳನ್ನು ಬದಲಾಯಿಸುವ ಪ್ರಗತಿಯೂ ಮಂದಗತಿಯಲ್ಲಿ ನಡೆಯುವಂತೆ ಮಾಡಿವೆ.

ಸಾಮಾಜಿಕವಾಗಿ ದುರ್ಬಲವಾಗಿರುವ ಕುಟುಂಬಗಳು ತಮ್ಮ ಅ ಲ್ಪ ಸ್ವಲ್ಪ   ಆದಾಯವನ್ನು ಮಗುವಿನ ಶಿಕ್ಷಣಕ್ಕಾಗಿ ಉಪಯೋಗಿಸಿದರೂ,  ಮುಂದೆ  ಆ ಮಕ್ಕಳಿಗೆ ಸೂಕ್ತವಾದ ಉದ್ಯೋಗವು ದೊರಕುವ ಖಾತ್ರಿ ಇರುವುದಿಲ್ಲ.  ಬಡತನದ ಕುಟುಂಬದ ಪದವೀಧರರೂ   ಕಟ್ಟಡ ನಿರ್ಮಾಣದಲ್ಲಿ, ಸರಕು ಸಾಗಣೆ ವಲಯದಲ್ಲಿ (ಪುರುಷರು) ಸೇವಾ ವಲಯಗಳಲ್ಲಿ (ಮಹಿಳೆಯರು) ದಿನಗೂಲಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು.  ಉದ್ಯೋಗದಾತರು ಹಿಂದುಳಿದ ಕುಟುಂಬಗಳ ಯುವಕರಿಗೆ ಪ್ರತಿಷ್ಠಿತ ಹುದ್ದೆಗಳನ್ನು ನೀಡಲು ನಕಾರಾತ್ಮಕ ಮನೋಧೋರಣೆ ಹೊಂದಿರುವುದರಿಂದ ಹಾಗೂ ಲಂಚ ಮತ್ತು ಭ್ರಷ್ಟಾಚಾರಗಳು ಸರ್ಕಾರಿ ನೌಕರಿಗಳನ್ನು ಅಲಭ್ಯವಾಗುವಂತೆ ಮಾಡಿರುವುದು ಈ ಪರಿಸ್ಥಿತಿಗೆ ಪ್ರಮುಖವಾದ ಕಾರಣವಾಗಿದೆ.  ಹೀಗಾಗಿ ಕುಟುಂಬಗಳು ಸಾಮಾನ್ಯವಾಗಿ ಶಿಕ್ಷಣಕ್ಕೆ ಹಣ ವಿನಿಯೋಗಿಸಲು, ವಿಶೇಷವಾಗಿ ಉನ್ನತ ಶಿಕ್ಷಣಕ್ಕೆ, ಅದರಲ್ಲೂ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ತೊಡಗಿಸಲು ಹಿಂಜರಿಯುತ್ತವೆ.

ಜಾಗತಿಕ ಮಟ್ಟದಲ್ಲಿ ರುಜುವಾತಾಗಿರುವ ವಾಸ್ತವಾಂಶವನ್ನು ಹೇಳುವುದಾದರೆ, ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುವುದರಿಂದ,  ಕಡಿಮೆ ವಯಸ್ಸಿನಲ್ಲಿ ಗರ್ಭಧರಿಸುವುದರಿಂದ ತಡೆಯುತ್ತದೆ, ತಾಯಿ ಮತ್ತು ಮಗುವಿನ ಆರೋಗ್ಯ ಹಾಗೂ ಅವರ ಜೀವದ ಉಳಿವಿನ ಮೇಲಾಗುವ ಪರಿಣಾಮಗಳು ಮತ್ತು ಸಮಸ್ಯೆಗಳನ್ನು ಇಲ್ಲವಾಗಿಸುತ್ತದೆ ಹೋರಾಡಿ ಬದುಕುವ ಬಗ್ಗೆ  ಅವರಿಗೆ ಅರಿವನ್ನು ಮೂಡಿಸುವುದಲ್ಲದೇ, ಜೀವಿಸಲು ಅಗತ್ಯವಾದ ಕೌಶಲ್ಯಗಳು ಹಾಗೂ ತಿಳುವಳಿಕೆಯನ್ನು ನೀಡುತ್ತದೆ.  ಸಾಕ್ಷರತೆ ಮತ್ತು ನಾಗರೀಕ ಹಕ್ಕುಗಳು ಹಾಗೂ ಜವಾಬ್ದಾರಿಗಳು, ಭಾವನಾತ್ಮಕ ಮತ್ತು ಮಾನಸಿಕ ಪ್ರಬುದ್ಧತೆಗೆ ಅವಕಾಶ, ಅತಿ ಮುಖ್ಯವಾಗಿ, ಬದಲಾಗುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಸನ್ನಿವೇಶದಲ್ಲಿ ಸುಶಿಕ್ಷಿತವಾಗಿ ಮತ್ತು ಬದ್ಧತೆಯಿಂದ ಅವರು ಭಾಗವಹಿಸುವಂತಾಗಿ ಸಾಮಾಜಿಕ ಮಟ್ಟದಲ್ಲಿ ಬೃಹತ್ ಸಮಾಜಿಕ-ಆರ್ಥಿಕ ಲಾಭ ಉಂಟಾಗುತ್ತದೆ. ವಾಸ್ತವತೆಯನ್ನು ಬದಲಾಯಿಸಲು ಇದಕ್ಕಿಂತಾ ಹೆಚ್ಚಾಗಿ ಸಂಸ್ಥೆಗಳಿಗೆ ಮತ್ತು ಕುಟುಂಬಕ್ಕೆ ಮತ್ತೇನು ಬೇಕು? ಯುವ ಜನತೆಗಾಗಿ, ಅದರಲ್ಲೂ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣವನ್ನು ವ್ಯಯಿಸುತ್ತಿರುವ ಸರ್ಕಾರ ಮತ್ತು ಕುಟುಂಬಗಳು ಭವಿಷ್ಯಕ್ಕಾಗಿ ಹಣ ತೊಡಗಿಸುವತ್ತ ಗಮನ ಹರಿಸಿದಂತಾಗುತ್ತದೆ.  ಹೀಗಿರುವಾಗ, ಇದನ್ನು ಸಂಪೂರ್ಣ ಸಾಧಿಸುವುದಕ್ಕೆ ಏಕೆ ಇಷ್ಟೊಂದು ಸಮಸ್ಯೆ ಎನಿಸುತ್ತಿದೆ?  ಭಾರತೀಯ ಸಮಾಜದಲ್ಲಿ ಪ್ರಸ್ತುತವಿರುವ ಪುರುಷ ಪ್ರಧಾನ  ರೂಢಿಗಳು, ಮತ್ತು ಹೆಚ್ಚಾಗುತ್ತಿರುವ ಸ್ತ್ರೀ ವಿರುದ್ಧ ಲಿಂಗತಾರತಮ್ಯತೆಯ ಪ್ರಭಾವವು ಆರ್ಥಿಕತೆಯ ನವ ಉದಾರೀಕರಣ ನೀತಿಗಳೊಂದಿಗೆ ಸೇರಿ ಮಾಧ್ಯಮದ ವ್ಯಾಪಕ ಪ್ರಭಾವವನ್ನು ಉಂಟುಮಾಡಿವೆ. ಇದಲ್ಲದೇ, ಸಾಂಪ್ರದಾಯಿಕ ವರ್ತನೆಗಳ ಪ್ರವೃತ್ತಿಯ ಮುರಿದು ಬಿದ್ದಿರುವುದು, ಹಾಗೂ ಸಾಮಾಜಿಕ ವಲಯದಿಂದ ರಾಜ್ಯ ಸರ್ಕಾರ  ಹಿಂಸರಿದಿರುವುದು ಇವೆಲ್ಲವೂ ಹೆಚ್ಚುತ್ತಿರುವ ಸಮಸ್ಯೆಗಳ ಭಾಗವಾಗಿವೆ.  ೧೪ನೇ ವರ್ಷದವರೆಗೂ ಮಾತ್ರವೇ ಕಡ್ಡಾಯ ಶಿಕ್ಷಣ ಎಂಬ ಮಿತಿಯನ್ನು ಹೊಂದಿರುವ ಶೈಕ್ಷಣಿಕ ನೀತಿಗಳನ್ನು ಕುರಿತು  ಮರು ಆಲೋಚನೆ, ಬಾಲ್ಯವಿವಾಹವನ್ನು ತಡೆಯಲು ಹೆಣ್ಣುಮಕ್ಕಳಿಗೆ ಅನುಕೂಲಕರವಾದ, ರಕ್ಷಣಾತ್ಮಕವಾದ ಕಾನೂನಿನ ಪ್ರಬಲವಾದ ಅನುಷ್ಠಾನ, ಹಾಗೂ ಲಿಂಗ ಸೂಕ್ಷ್ಮತೆಯ ಕೌಟುಂಬಿಕ ರೂಡಿಗಳ ಬಗ್ಗೆ ಹೆಚ್ಚಿನ ಸಾರ್ವಜನಿಕ ಅರಿವು, ಇವೆಲ್ಲವು ಮುಂದೆ ಅನುಸರಿಸತಕ್ಕ ಮಾರ್ಗಗಳಾಗಿವೆ.

ಸಿಂಥಿಯಾ ಸ್ಟೀಫನ್‌ರವರು ಲಿಂಗ, ಬಡತನ, ಸಮಾವೇಶಿತ್ವ ಮತ್ತು ಅಭಿವೃದ್ಧಿ ನೀತಿಗಳ ಬಗ್ಗೆ ಕಾರ್ಯ ನಿರ್ವಹಿಸುತ್ತಿರುವ ಓರ್ವ ಕ್ರಾಂತಿಕಾರೀ ಸಂಶೋಧಕರು. ರಾಜ್ಯ, ಪ್ರಾದೇಶಿಕ ಮತ್ತು ರಾಷ್ಟ್ರಮಟ್ಟದಲ್ಲಿನ ಹಲವಾರು ಸಂಸ್ಥೆಗಳು ಇವರನ್ನು ಈ ವಿಷಯಗಳ ನಾಯಕತ್ವ ಹಾಗೂ ಸಲಹಾ ಪಾತ್ರಗಳಲ್ಲಿ ತೊಡಗಿಸಿಕೊಂಡಿವೆ.  ಇದಲ್ಲದೇ ಇವರು ಈ ವಿಷಯಗಳ ಬಗ್ಗೆ ಬಹಳಷ್ಟು ಲೇಖನಗಳನ್ನು ಬರೆದಿದ್ದಾರೆ. ಇವರನ್ನು cynstepin@gmail.com ಇಲ್ಲಿ ಸಂಪರ್ಕಿಸಬಹುದು.

 

 

 

18484 ನೊಂದಾಯಿತ ಬಳಕೆದಾರರು
7228 ಸಂಪನ್ಮೂಲಗಳು