ಹಾಂಗ್‌ಕಾಂಗ್‌ನಲ್ಲಿ ಕಂಡ ಒಂದು ಮೀನಿನ ಕಥೆ ಅನುರಾಧ ನಾಯ್ಡು

ಹಾಂಗ್‌ಕಾಂಗ್‌ನಲ್ಲಿ ಕಂಡ ಒಂದು ಮೀನಿನ ಕಥೆ
ಅನುರಾಧ ನಾಯ್ಡು
ನಾನು ಬಾಗಿಲ ಬಳಿ ನಿಂತು ಪ್ರಾಥಮಿಕ ಪೂರ್ವ ತರಗತಿಯ ಮಕ್ಕಳ ಒಂದು ಸಣ್ಣ ಗುಂಪು ತಮ್ಮ ಕಲಾ ತರಗತಿಯ ಒಳಗೆ ಹೋಗುವುದನ್ನು ಗಮನಿಸುತ್ತಿದ್ದೆ. ಅವರ ಮುಖದಲ್ಲಿ ಕುತೂಹಲ ಮತ್ತು   ನಿರೀಕ್ಷೆ ಮನೆ ಮಾಡಿದ್ದವು. ಈ ತರಗತಿಯ ಅಧ್ಯಾಪಕಿ ರೋಸ್ಲಿನ್ ನನಗಿಂತ ವಯಸ್ಸಿನಲ್ಲಿ ಚಿಕ್ಕವಳು. ತನ್ನ ತರಗತಿಯಲ್ಲಿರುವ ಒಂದೊಂದು ಮಗುವೂ ಯಾವ ರೀತಿಯಾಗಿ ಕಲಿಯುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಆಕೆ ಕಲಿಕಾ ಚಟುವಟಿಕೆಗಳನ್ನು ಎರ್ಪಡಿಸುತ್ತಿದ್ದಳು. ಅವಳು ಮಕ್ಕಳೊಂದಿಗೆ ಕೆಲಸ ಮಾಡುತ್ತಿದ್ದ ರೀತಿ ನನ್ನಲ್ಲಿ ಪುಳಕವನ್ನುಂಟುಮಾಡುತ್ತಿತ್ತು. ತಾವು ಏನು ಕಲಿಯಬೇಕು ಎಂಬುದನ್ನು ಮಕ್ಕಳೇ ಆಯ್ಕೆ ಮಾಡಿಕೊಳ್ಳುವುದು ಅತಿ ಅಗತ್ಯ ಎಂಬುದು ರೋಸ್ಲಿನ್  ಅವರ ಅಭಿಪ್ರಾಯವಾಗಿತ್ತು. ಪ್ರತಿ ಮಗುವು ಕೂಡ ಸೃಜನಶೀಲವಾಗಿದ್ದು, ತನ್ನದೇ ಆದ ವಿಶಿಷ್ಟ ಕಲಿಕಾ ಶೈಲಿಯನ್ನು ಹೊಂದಿರುತ್ತದೆ. ಅವರ ದೃಷ್ಟಿಕೋನಗಳು ಕೂಡ ಬೇರೆ ಬೇರೆಯಾಗಿರುತ್ತವೆ. ಕೆಲವರು ಮೂರು ಅಥವ ನಾಲ್ಕು ಮಕ್ಕಳ ಗುಂಪಿನಲ್ಲಿ ಕೆಲಸ ಮಾಡುವುದನ್ನು ಇಷ್ಟಪಟ್ಟರೆ, ಇನ್ನು ಕೆಲವರು ಒಬ್ಬರೇ ಕುಳಿತು ತಮ್ಮ ಕೈಯಲ್ಲಿರುವ ಕುಂಚದ ಮೇಲೆ ಹತೋಟಿ ಸಾಧಿಸಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ಸ್ವಚ್ಛಂದವಾಗಿ ತಮ್ಮ ಸುತ್ತಲಿನ ಜಗತ್ತನ್ನು ಅನ್ವೇಷಿಸುತ್ತಿರುತ್ತಾರೆ.   
ರೋಸ್ಲಿನ್ ಯಾವಾಗಲೂ ತನ್ನ ಪ್ರಾಥಮಿಕ ಪೂರ್ವ ತರಗತಿಯಲ್ಲಿ ವಿಶೇಷ ಅವಶ್ಯಕತೆಯುಳ್ಳ ಮಕ್ಕಳನ್ನು ಸೇರಿಸಿಕೊಳ್ಳಲು ಇಷ್ಟಪಡುತ್ತಿದ್ದಳು. ಮಕ್ಕಳಿಗೆ ದಯೆ ಮತ್ತು ಪ್ರೀತಿಯಿಂದ ಇರುವುದನ್ನು ಹೇಳಿಕೊಡುವುದರಿಂದ ಅವರ ಜೀವನಕ್ಕೆ ಗಟ್ಟಿ ಬುನಾದಿ ಹಾಕಿದಂತಾಗುತ್ತದೆ ಎಂಬುದು ಆಕೆಯ ನಂಬಿಕೆಯಾಗಿತ್ತು. ಆಕೆ ತುಂಬ ಸೃಜನಶೀಲ ಶಿಕ್ಷಕಿ. ಹಾಗಾಗಿ ನಾನು ಆಕೆಯೊಂದಿಗೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೆ. ತರಗತಿಯ ಎಲ್ಲ ಮಕ್ಕಳನ್ನು ಒಳಗೊಳ್ಳುವಂತೆ ನಾವು ಯಾವಾಗಲೂ ಒಟ್ಟಾಗಿ ಚಟುವಟಿಕೆಗಳನ್ನು ಏರ್ಪಡಿಸುತ್ತಿದ್ದೆವು. ರೋಸ್ಲಿನ್ ಹೊಸ ಕಾರ್ಯತಂತ್ರಗಳನ್ನು ಬಳಸುವುದರಲ್ಲಿ ಯಾವತ್ತೂ ತಡಮಾಡುತ್ತಿರಲಿಲ್ಲ. ಒಂದೆರಡು ವಾರಗಳಲ್ಲಿಯೇ ನಾವು ಬಳಸಿದ ಕಾರ್ಯತಂತ್ರ ಎಷ್ಟು ಪರಿಣಾಮಕಾರಿಯಾಗಿತ್ತು ಎಂಬ ಬಗ್ಗೆ ಆಕೆಯಿಂದ ಹಿಮ್ಮಾಹಿತಿ ಕೂಡ ಸಿಗುತ್ತಿತ್ತು. ನಾವು ಬಹುಬೇಗನೆ ಒಬ್ಬರನ್ನೊಬ್ಬರು ಅರಿತುಕೊಂಡೆವು. ನಮ್ಮ ತರಗತಿಯಲ್ಲಿ ಜಾನ್ (ಹೆಸರು ಬದಲಿಸಾಗಿದೆ) ಎಂಬ ವಿಶೇಷ ಕಲಿಕಾ ಅವಶ್ಯಕತೆಯುಳ್ಳ ಮಗು ಇತ್ತು. ಅವನು ಆಟಿಸಂ ಸ್ಪೆಕ್ಟ್ರಂನಲ್ಲಿ ಇದ್ದ ಮಗು. ತರಗತಿಯ ಇತರ ಮಕ್ಕಳು ಸಂತೋಷದಿಂದ ಹಾಡು ಹಾಡುತ್ತಿದ್ದರೆ ಅಥವ ಆಟವಾಡುತ್ತಿದ್ದರೆ ಜಾನ್ ತನ್ನ ಪಾಡಿಗೆ ತಾನು ಪಕ್ಕಕ್ಕೆ ಸರಿದು ಹೋಗುತ್ತಿದ್ದ. ಇದನ್ನು ಗಮನದಲ್ಲಿಟ್ಟುಕೊಂಡು ಇತರ ಮಕ್ಕಳ ಜೊತೆ ಜಾನ್ ಒಳಗೊಳ್ಳುವಂತೆ ನಾವು ಕಲಿಕಾ ಚಟುವಟಿಕೆಯನ್ನು ಸಾಕಷ್ಟು ಮುಂಚಿತವಾಗಿಯೇ ರೂಪಿಸಿದ್ದೆವು.   
ಕಲಾ ತರಗತಿ ಆರಂಭವಾಗಿತ್ತು. ಜಾನ್ ಇನ್ನೂ ತರಗತಿಗೆ ಬಂದಿರಲಿಲ್ಲ, ಅವತ್ತು ಮೀನು ಚಟುವಟಿಕೆಯ ಕೇಂದ್ರವಾಗಿತ್ತು. ಹಾಗಾಗಿ ಇತರ ಮಕ್ಕಳೆಲ್ಲರೂ ಬಹಳ ಉತ್ಸಾಹದಿಂದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ರೋಸ್ಲಿನ್ ಹಾಂಗ್‌ಕಾಂಗ್‌ನ ಮೀನು ಮಾರುಕಟ್ಟೆಯಿಂದ ಅವತ್ತು ಬೆಳಿಗ್ಗೆ ಈ ಕಲಾ ತರಗತಿಗಾಗಿ ಹಸಿ ಪಾಂಫ಼್ರೆ  ಮೀನನ್ನು ತಂದಿದ್ದಳು. ತರಗತಿಯಲ್ಲಿ ಅವತ್ತು ಬಣ್ಣದ ವಾಸನೆಯ ಜೊತೆಗೆ ಮೀನಿನ ವಾಸನೆ ಕೂಡ ಸೇರಿಕೊಂಡಿತ್ತು. ಈ ವಿಶೇಷವಾದ ಚಿತ್ರರಚನೆಯ ಚಟುವಟಿಕೆಯ ಮೂಲಕ ಕಡಲಾಳದ ಜಗತ್ತನ್ನು ತರಗತಿಯೊಳಗೆ ತರುವುದು ರೋಸ್ಲಿನ್ ಉದ್ದೇಶವಾಗಿತ್ತು. ಪ್ರತಿ ಮಗುವಿಗೆ ಕೂಡ ಈ ಮೀನಿಗೆ ಬಣ್ಣ ಬಳಿಯುವ, ಆರ್ಟ್ ಪೇಪರನ್ನು ಅದರ ಮೇಲೆ ಉಜ್ಜಿ ಅದರ ಹುರುಪೆಯ ವಿನ್ಯಾಸದ ಅಚ್ಚು ತೆಗೆಯುವ ಅವಕಾಶ ಇತ್ತು. ಸ್ವಲ್ಪ ತಡವಾಗಿ ತರಗತಿಗೆ ಬಂದ ಜಾನ್‌ಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಎಲ್ಲರೂ ಬಣ್ಣ ಬಳಿಯುವುದರಲ್ಲಿ ಮಗ್ನರಾಗಿದ್ದರು. ಜಾನ್ ತುಸು ಹಿಂಜರಿಕೆಯಿಂದಲೇ ತನ್ನ ಸಹಪಾಠಿಗಳು ಮಾಡುತ್ತಿದ್ದ ಚಟುವಟಿಕೆಯನ್ನು ಗಮನಿಸುತ್ತಿದ್ದ. ಆಟಿಸಂ ಇರುವ ಮಗುವಿಗೆ ಹಲವು ರೀತಿಯ ಇಂದ್ರಿಯ ಸಂವೇದನಾ ಸಮಸ್ಯೆಗಳಿರುತ್ತವೆ. ಹೀಗಿರುವಾಗ ಜಾನ್ ಈ ಅನುಭವವನ್ನು ಹೇಗೆ ಸ್ವೀಕರಿಸಬಹುದು ಎಂಬುದನ್ನು ನಾನು ಉಸಿರುಬಿಗಿಹಿಡಿದು ಎದುರು ನೋಡುತ್ತಿದ್ದೆ. ಜಾನ್ ಮೀನು ಮತ್ತು ಬಣ್ಣಗಳನ್ನು ಸ್ಪರ್ಶಿಸಲು ಮುಂದೆ ಬರುವ ಸಾಧ್ಯತೆ ಇದೆಯೇ? ಅದರ ವಾಸನೆ ಅವನನ್ನು ಕಂಗೆಡಿಸಬಹುದೇ? ’ಚಟುವಟಿಕೆಗೆ ಸೇರಿಕೋ’ ಎಂದು ರೋಸ್ಲಿನ್ ಅವನನ್ನು ಕರೆದರೆ ಅವನು ಸಹಕರಿಸುವನೇ? ತಮ್ಮ ಸರತಿ ಬರುವವರೆಗೆ ಕಾಯುತ್ತಾ ಕುಳಿತ ಇತರ ಮಕ್ಕಳೊಂದಿಗೆ ಅವನು ಕುಳಿತುಕೊಳ್ಳುವ ಸಾಧ್ಯತೆ ಇದೆಯೇ? ಈ ಅಪರಿಚಿತವಾದ ಮತ್ಸ್ಯ ಪ್ರವೇಶ ಅವನನ್ನು ಕಂಗೆಡಿಸಿ, ಅವನು ಅಳಲು ಶುರು ಮಾಡಬಹುದೇ? ಹೀಗೆ ಹಲವು ಪ್ರಶ್ನೆಗಳು ನನ್ನ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವು. ನನ್ನ ಎದೆ ಢವಗುಟ್ಟುತ್ತಿತ್ತು.
ಜಾನ್‌ಗೆ ಹೊಸ ಮೇಲ್ಮೈಗಳನ್ನು ಸ್ಪರ್ಶಿಸಲು ಭಯ ಇತ್ತು ಮತ್ತು ಹೊಸ ಸದ್ದುಗಳು ಅವನನ್ನು ಕಂಗೆಡಿಸುತ್ತಿದ್ದವು. ಅವನು ಈ ಭಯಗಳನ್ನು ಮೀರಲು ಹಲವು ತಿಂಗಳುಗಳ ಕಾಲ ನಾನು ಅವನೊಂದಿಗೆ ಕೆಲಸ ಮಾಡಿದ್ದೆ. ಹಾಗಾಗಿ ಈ ಕ್ಷಣ ನಮಗೆ ಅತ್ಯಂತ ಅಮೋಘವಾಗಿತ್ತು. ರೋಸ್ಲಿನ್ ತರಗತಿ ಮುಂದುವರಿದಿತ್ತು. ಆಕೆ ಮಕ್ಕಳಿಗೆ ಮೀನು ಮತ್ತು ಬಣ್ಣವನ್ನು ಹೇಗೆ ಬಳಸಬೇಕು ಎಂಬುದನ್ನು ಸ್ಪಷ್ಟವಾಗಿ, ಹಂತಹಂತವಾಗಿ, ಪ್ರಾತ್ಯಕ್ಷಿಕೆಯ ರೂಪದಲ್ಲಿ ಮಾಡಿತೋರಿಸಿ, ಅವರನ್ನು ಒಬ್ಬೊಬ್ಬರಾಗಿ ಮುಂದೆ ಕರೆದು ಅವರಿಗೆ ಚಟುವಟಿಕೆ ಮಾಡಲು ಅವಕಾಶ ಮಾಡಿಕೊಟ್ಟಳು. ಮಕ್ಕಳಲ್ಲಿ ಕೆಲವರು ಒಬ್ಬೊಬ್ಬರಾಗಿ ಇನ್ನು ಕೆಲವರು ಗುಂಪಿನಲ್ಲಿ ಮೀನಿಗೆ ಬಣ್ಣ ಬಳಿಯುವ ಕೆಲಸ ಮುಂದುವರಿಸಿದರು. ಕೆಲವರ ಮೀನು ಮಳೆಗಾಲದ ಮೋಡದಂತೆ ಕಂಡರೆ, ಇನ್ನು ಕೆಲವರದು ಕಾಮನಬಿಲ್ಲಿನಂತಿತ್ತು. ತರಗತಿಯಲ್ಲಿ ಮೌನ ಮನೆ ಮಾಡಿತ್ತು. ಜಾನ್ ಕುತೂಹಲದಿಂದ ವೀಕ್ಷಿಸುತ್ತಿದ್ದ. ಎಲ್ಲರ ಕೆಲಸ ಮುಗಿದ ನಂತರ ರೋಸ್ಲಿನ್ ಜಾನ್ ಕಡೆ ನೋಡಿ, ’ನೀನೂ ಮಾಡ್ತೀಯಾ ನೋಡು’ ಎಂದು ಹೇಳಿದಳು.

ಜಾನ್ ಹಿಂದುಮುಂದು ನೋಡದೆ ಬಣ್ಣ ಬಳಿಯುವ ಕೆಲಸ ಮಾಡಲು ಓಡಿದ. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಆ ಕ್ಷಣ ನಮಗೆ ಅತ್ಯಂತ ಅಮೋಘವಾಗಿತ್ತು.
ಪ್ರಾಥಮಿಕ ಪೂರ್ವ ಹಂತದ ಸಮಾವೇಶಿ ತರಗತಿಯಲ್ಲಿ ಪಾಠ ಮಾಡುವ ಶಿಕ್ಷಕರಿಗೆ ನಾವು ಯಾವ ರೀತಿಯಾಗಿ ಸಹಾಯ ಮಾಡಬಹುದು ಎಂಬುದನ್ನು ನಾನು ನನ್ನನ್ನೇ ಬಹಳಷ್ಟು ಬಾರಿ ಕೇಳಿಕೊಂಡಿದ್ದೇನೆ. ’ಶೀಘ್ರ ಮದ್ಯಪ್ರವೇಶ’ (Early Intervention) ವನ್ನು ನಂಬುವ ನಾನು ತರಗತಿಯ ಹಿನ್ನೆಲೆಯಲ್ಲಿದ್ದು, ಗಮನಿಸುತ್ತಾ ಸರಿಯಾದ ಹೊತ್ತಿಗೆ ಶಿಕ್ಷಕರು ಮಾಡಿದ ಪ್ರಯತ್ನವನ್ನು ಶ್ಲಾಘಿಸುವುದು ಹೆಚ್ಚು ಪರಿಣಾಮಕಾರಿ ಎಂಬುದನ್ನು ಕಂಡುಕೊಂಡಿದ್ದೇನೆ. ವಿಶ್ಲೇಷಣೆಯ ಕೆಲಸ ಆಮೇಲೆ. ಪರಸ್ಪರ ಗೌರವ ಮತ್ತು ಪ್ರೀತಿ ಸಹಯೋಗದ ಬುನಾದಿ ಕಲ್ಲು. ಅದು ಎಲ್ಲ ಅಡೆತಡೆಗಳನ್ನು ಮೀರಲು ಸಹಾಯ ಮಾಡುತ್ತದೆ.
*****
ಅನುರಾಧ ನಾಯ್ಡು ಅವರು ಇತ್ತೀಚಿನವರೆಗೆ ಹಾಂಗ್‌ಕಾಂಗ್ ನಲ್ಲಿ ೦-೬ ವರ್ಷ ವಯಸ್ಸಿನ ವಿಶೇಷ ಅವಶ್ಯಕತೆಯುಳ್ಳ ಮಕ್ಕಳ ಜೊತೆ early interventionist ಆಗಿ ಕೆಲಸ ಮಾಡಿದ್ದಾರೆ. ಅವರು ಕೆಲಸ ಮಾಡುತ್ತಿದ್ದ ಶಿಕ್ಷಣ ಸಂಸ್ಥೆಯನ್ನು ಚೈನೀಸೇತರ ಭಾಷೆ ಮಾತನಾಡುವ ಜನರಿಗಾಗಿ ಹಾಂಗ್‌ಕಾಂಗ್ ಸರಕಾರವು ನಡೆಸುತ್ತದೆ. ಅನುರಾಧ ಅವರು ವಿಶೇಷ ಶಿಕ್ಷಣ ಶಿಕ್ಷಕಿಯಾಗಿ ತರಬೇತಿ ಪಡೆದಿದ್ದು ೨೦ ವರ್ಷಗಳ ಹಿಂದೆ ಚೆನ್ನೈನ ವಿದ್ಯಾಸಾಗರ ಶಿಕ್ಷಣ ಸಂಸ್ಥೆಯಲ್ಲಿ. ಶಿಕ್ಷಣದಲ್ಲಿ ಅಂತರ್ ವಿದ್ಯಾವಿಷಯ ಪದ್ಧತಿಯ ಪರಿಚಯ ಅವರಿಗೆ ಆಗಿದ್ದು ಕೂಡ ಇಲ್ಲಿಯೇ. ಚಿಕಿತ್ಸೆ, ಶಿಕ್ಷಣ ಮತ್ತು ಪರ್ಯಾಯ ಸಂವಹನ ಕೌಶಲಗಳನ್ನು ಒಳಗೊಂಡ ಅವರ ಬೋಧನಾ ಮಾದರಿಯು, ಮಕ್ಕಳಲ್ಲಿ ಕಲಿಕಾ ಪ್ರಕ್ರಿಯೆಯನ್ನು ಸಂತೋಷದಾಯಕವಾಗಿಸುವ ನಿರಂತರ ಪ್ರಯತ್ನ ಮಾಡುತ್ತದೆ. ಅವರ ಮಿಂಚಂಚೆ:

anuradha.naidu@gmail.com

19653 ನೊಂದಾಯಿತ ಬಳಕೆದಾರರು
7777 ಸಂಪನ್ಮೂಲಗಳು