ಸೃಷ್ಟಿಯ ಚಲನೆ ನಿಶ್ಚಲವಾದರೆ?

ವಿಜ್ಞಾನ ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಸೃಷ್ಟಿಯ ಚಲನ ನಿಶ್ಚಲವಾದರೆ ಆಗುವ ಪರಿಣಾಮಗಳ ಬಗ್ಗೆ ಯೋಚಿಸಿ ಎಂದು ಕಾರ್ಯಾಗಾರದಲ್ಲಿ ಹೇಳಿ ಮನೆಗೆ ಇದೇ ವಿಷಯದ ಬಗೆಗೆ ಯೋಚಿಸುತ್ತಾ ತೆರಳಿದೆ. ರಾತ್ರಿ ಊಟದ ನಂತರ ವಿವಿಧ ಹಣ್ಣುಗಳ ರುಚಿಕರ ಜೇನು ಬೆರತ ಸಲಾಡ್‌ನ್ನು ಭರ್ಜರಿಯಾಗಿ ಸವಿದು ಹಾಗೇ ಹಾಸಿಗೆಗೆ ಜಾರಿದೆ. ನಿದಿರೆ ಆವರಿಸಿದುದೇ ತಿಳಿಯಲಿಲ್ಲ!!!! ಗಾಢವಾದ ನಿದ್ದೆ... ಆಗ ಬೆಳಗಿನ ಜಾವ ಏನೋ? ತಿಳಿಯಲಿಲ್ಲ. ಕಣ್ಣುಜ್ಜುತ್ತಾ ಎದ್ದು ಹೊರಬರುತ್ತಿದ್ದೇನೆ. ಸ್ವಲ್ಪ ಸೂರ್ಯ ರಶ್ಮಿ ಕಂಡಂತಾಯಿತು! ನೋಡು ನೋಡುತ್ತಿದ್ದಂತೆ... ರವಿಕಿರಣ ಭೂಮಿ ತಲುಪಲು ಸಾಧ್ಯವಾಗುತ್ತಿಲ್ಲ! ಅಲ್ಲೇ ಆಕಾಶದಲ್ಲೇ ಸಾಗುವ ದಾರಿಯಲ್ಲೇ ನಿಂತಂತೆ ಗೋಚರಿಸುತ್ತಿದೆ. ಭೂಮಿಯನ್ನೇ ತಲುಪುತ್ತಿಲ್ಲ.

 

ಎಲ್ಲವೂ ಗಾಢಾಂಧಕಾರದಲ್ಲಿ ಮುಳುಗಿಹೋಗುತ್ತಿವೆಯೋ ಎಂದು ಭಾಸವಾಗುತ್ತಿದೆ. ಅತ್ತಿತ್ತ ಕಣ್ಣುಹಾಯಿಸಿದೆ. ಬೀದಿ ದೀಪಗಳು ಉರಿಯುತ್ತಿರುವ ಬೆಳಕು ಕಾಣಿಸಿತು, ಅಬ್ಬಾ ಬೆಳಕಿದೆ ಎಂದು ಅತ್ತ ಧಾವಿಸಿದೆ. ಅದರೆ... ಆದರೆ ಕ್ಷಣಾರ್ಧದಲ್ಲೇ ದೀಪಗಳ ಬೆಳಕು ನಂದಿ ಹೋಗುತ್ತಿರುವಂತೆ ಕಾಣುತ್ತಿದೆ. ಸ್ವಲ್ಪ ಹೊತ್ತಿನಲ್ಲೇ ಅವೂ ಸ್ಥಬ್ಧಗೊಂಡವು!!. ಹೀಗೆಯೇ ಸಮಯ ಜಾರುತ್ತದೆ.. ಆದರೆ ಸಮಯವೇ ತಿಳಿಯುತ್ತಿಲ್ಲ. ಕೈಗೆ ಕಟ್ಟಿದ ಗಡಿಯಾರ ನೋಡಿದರೆ ಅದೂ ಸ್ಥಬ್ಧ! ಜಂಗಮವಾಣಿಯ ಗುಂಡಿಯನ್ನು ಒತ್ತಿದರೆ ಅದು ಸ್ವಲ್ಪ ಆರಂಭದ ಬೆಳಕು ತೋರಿ ಹಾಗೇ ಮಸುಕಾಯಿತು. ಸಮಯವೇ ಏನು? ದಿಕ್ಕೇ ತೋಚದಂತಾಯಿತು!!. ಕೇಳುತ್ತಿದ್ದ ಪಕ್ಷಿಗಳ ಕಲರವ, ಕೋಳಿಯ ಕೂಗು, ನಾಯಿಗಳ ಬೊಗಳುವಿಕೆ ಜೋರಾಗಿದ್ದು ಕ್ರಮೇಣ ಪ್ರಾಣಿಗಳ ಸ್ವರ ನಿಧಾನವಾಗಿ ಅಡಗಿ ಹೋಗುತ್ತ್ತಿರುವುದು ಅನುಭವಕ್ಕೆ ಬರುತ್ತಿದೆ. ಆರಂಭದಲ್ಲಿದ್ದ ಬಿರುಸಿನ ಸುಳಿಗಾಳಿಯು ಸಮಯದ ಜೊತೆ ಕ್ರಮೇಣ ಕಡಿಮೆಯಾಗುತ್ತಾ, ವಿಶ್ರಮಿಸುತ್ತಾ ಸ್ಥಬ್ಧತೆಯ ಕಡೆಗೆ ಜಾರುತ್ತಿರುವ ಅನುಭವವಾಗುತ್ತಿದೆ. ನಲ್ಲಿಯಿಂದ ಸುರಿಯುತ್ತಿದ್ದ ಜೀವಜಲದ ಸಪ್ಪಳ ಸೊರಗುತ್ತಿದೆ. ಬಿಂದಿಗೆ, ಪಾತ್ರೆಗಳಲ್ಲಿ ಜಲ ಸಂಗ್ರಹಿಸುತ್ತಿದ್ದ ನೀರೆಯರು ಕಡೆಮೆಯಾಗುತ್ತಿರುವ ನೀರು ಕಂಡು ಬಸವಳಿದು ನಿಟ್ಟುಸಿರು ಬಿಡುತ್ತಿದ್ದಾರೆ. ಅಯ್ಯೋ ಇದೇನಾಯಿತೆಂದು?? ಜಲಮಂಡಲಿಗೆ ಶಾಪಹಾಕುತ್ತಿದ್ದಾರೆ. ಬೆಳಗಿನ ಸೂರ್ಯೋದಯದ ಕಾಲ್ನಡಿಗೆಯಲ್ಲಿ ಬಿರುಸಿನಿಂದ ಹೆಜ್ಜೆಹಾಕುತ್ತಿದ್ದ ಜನರು ಹೆಜ್ಜೆಗಳನ್ನು ಎತ್ತಲಾರದೆ ಮುಗ್ಗರಿಸುವಂತೆ ಅಡಿಯಿಡುತ್ತಿದ್ದಾರೆ. ಸುತ್ತಲಿನ ಶಬ್ದ ಕ್ಷೀಣವಾಗುತ್ತಿದೆ.. ಪ್ರಾಣಿ, ಪಕ್ಷಿ ಜನರೆಲ್ಲಾ ಏದುಸಿರು ಬಿಡುತ್ತಿದ್ದಾರೆ. ನನಗೂ ಉಸಿರು ಕಟ್ಟಿದಂತಹ ಅನುಭವ. ಯಾರು ಎಷ್ಟು ಜೋರಾಗಿ ಕಿರುಚಿದರೂ ಕೂಗಿದರೂ ಶಬ್ದವೇ ಹೊರಡುತ್ತಿಲ್ಲ!! ಅಳಲು ಪ್ರಯತ್ನಿಸಿದರೆ ಕಣ್ಣೀರೇ ಒಸರುತ್ತಿಲ್ಲ!! ದೇವರೇ ಇದೇನಾಯಿತೆಂದು? ಆಕಾಶದತ್ತ ನೋಡಿದರೆ ಮುಂಗಾರಿನ ಮೋಡ, ಚಂದ್ರ, ಗ್ರಹಗಳು, ನಕ್ಷತ್ರಗಳು ಹಾಗೂ ಆಕಾಶ ಕಾಯಗಳೆಲ್ಲ ಯಾವುದೇ ಚಲನೆ ತೋರುತ್ತಿಲ್ಲ. ಮೇಲೆ ಹಾರುತ್ತಿದ್ದ ಹಕ್ಕಿಗಳ ಹಿಂಡು ರೆಕ್ಕೆ ಬಡಿಯುವುದನ್ನು ನಿಲ್ಲಿಸುತ್ತಿವೆ!! ಕ್ರಮೇಣ ಎಲ್ಲವೂ ಭೂಮಿಯ ಗುರುತ್ವಾಕ?ಣೆಗೆ ಒಳಗಾಗಿ ತಪತಪ ಬೀಳುತ್ತಿರುವ ಶಬ್ದವೂ ಕೇಳಿಸುತ್ತಿಲ್ಲ!!
ಮಾನವ ಸಹಿತ ಪ್ರಾಣಿಪಕ್ಷಿಗಳೆಲ್ಲಾ ನಿಶ್ಚಲಗೊಳ್ಳುತ್ತಾ ಚರಮ ಸ್ಥಿತಿ ತಲುಪುವತ್ತ ಸಾಗುತ್ತಿವೆ. ಕ್ರಮೇಣ ಗಿಡಮರಗಳು ಅಲುಗಾಡದ ಸ್ಥಿತಿ ತಲುಪಿ ಎಲ್ಲವೂ ನಿಶ್ಚಲ!! ನಿಶ್ಚಲ!!!. ಹಿಂದೆ ಓದಿದ್ದು ನೆನಪಾಯಿತು! ಸೂರ್ಯ, ಚಂದ್ರ ಹಾಗೂ ಭೂಮಿ ಸೇರಿದಂತೆ ಬ್ರಹ್ಮಾಂಡವೇ ಚಲನೆಯಲ್ಲಿದೆ. ಇದೆಲ್ಲವೂ ನಿಶ್ಚಲವಾಗುತ್ತಾ ಸಾಗಿದರೆ, ದೈನಂದಿನ ಚಲನೆ ನಿಂತು ಹಗಲು-ರಾತ್ರಿಗಳಾಗುವುದಿಲ್ಲ, ಋತುಮಾನಗಳಾದ ಮಳೆಗಾಲ, ಬೇಸಿಗೆ, ಚಳಿ ಹಾಗು ವಸಂತಕಾಲ ಬರುವುದೇ ಇಲ್ಲ!! ಚಲನೆಯ ನಿಯಮಗಳೇ ಮಂಗಮಾಯ!! ಭೂಮಿಯಲ್ಲಿ ಇರುವ ಜೀವರಾಶಿ, ವಿದ್ಯಮಾನಗಳು ಹಾಗೂ ಬ್ರಹ್ಮಾಂಡದ ವಿಸ್ಮಯ ಎಲ್ಲವೂ ಗೊಂದಲದ ಗೂಡಾಗುತ್ತವೆ. ಅಸ್ತಿತ್ವವೇ ಅಲುಗಾಡುತ್ತದೆ ಅಂದರೆ ಪ್ರಳಯ ಸಮೀಪಿಸಿದೆ ಎನ್ನವಂತಾಗುತ್ತದೆ. ಎಲ್ಲವೂ ಅಯೋಮಯವಾಗಿ ಕಾಡುತ್ತಾ ಬೆಚ್ಚಿಬಿದ್ದು ಎಚ್ಚರವಾದಾಗ ಬೆಳಗ್ಗೆ ದೇವಸ್ಥಾನದ ಸುಪ್ರಭಾತ ಕೇಳಿಸುತ್ತಿತ್ತು. ಹಾಗೂ ಮಧ್ಯೆ, ಮಧ್ಯೆ ಮಸೀದಿಯ ನಮಾಜು ಮತ್ತು ಚರ್ಚಿನ ಘಂಟೆ ನಿನಾದ ಕೇಳಿಸಿದಂತಾಗಿ ನನ್ನನ್ನೇ ನಾನು ಜಿಗಿಟುಕೊಂಡು ನೋಡಿದಾಗ ಇನ್ನೂ ಪ್ರಳಯವಾಗಿಲ್ಲವೆಂದು ಸ್ನಾನದ ಮನೆಗೆ ಓಡಿದೆ.!! ಸ್ನಾನ ಮಾಡುತ್ತಾ ಯೋಚಿಸುತ್ತಿದ್ದೆ. ಪ್ರಳಯವಾಗಲು ಸೃಷ್ಟಿಯ ಚಲನೆ ನಿಲ್ಲಬೇಕೇ??? ಮಾನವ ಈಗ ಎಸಗುತ್ತಿರುವ ಪ್ರಕೃತಿಯ ಮೇಲಿನ ದೌರ್ಜನ್ಯವೇ ಸಾಕು!!! ಅರಣ್ಯ ವಿನಾಶಗೊಳಿಸಿ ಪ್ರಾಣಿ ಸಸ್ಯ ಸಂಕುಲ ನಶಿಸಿ ಹೋಗುತ್ತ್ತಿವೆ. ಋತುಮಾನದ ಏರುಪೇರಾಗಿ ಬರ, ಪ್ರವಾಹಕ್ಕೆ ತತ್ತರಿಸಿರುವ ಮನುಕುಲ, ಪ್ರಾಣಿ, ಸಸ್ಯ ಸಂಕುಲ ಚಡಪಡಿಸುತ್ತಿರುವುದು ಪ್ರಳಯದ ಮುನ್ಸೂಚನೆಯಲ್ಲವೆ?? ಮನುಕುಲ ಪ್ರಕೃತಿಯ ಮಡಿಲಿನ ಮಗು!! ಈಗಲೇ ಎಚ್ಚೆತ್ತು ನಿಸರ್ಗದ ಒಡಗೂಡಿ ಬದುಕುವುದನ್ನು ಕಲಿತರೆ ನಾಳಿನ ಜನಾಂಗಕ್ಕೆ ನಾವು ಬಳುವಳಿಯಾಗಿ ಸ್ವಲ್ಪ ಸ್ವಚ್ಛ ಗಾಳಿ, ಶುದ್ಧನೀರು ಉಳಿಸಬಹುದು.. ಇಲ್ಲದಿದ್ದರೆ!!?? ಯಾರಿಗೂ ಉಳಿಗಾಲವಿಲ್ಲ. ಹಿಂದೆ ಡೈನಾಸರಸ್ ಅಳಿದಂತೆ ಎಲ್ಲವೂ ಆಪೋಶನವಾಗುವುದರಲ್ಲಿ ನಿಸ್ಸಂಶಯ. ಜೂನ್ ೫ ಕ್ಕೇ ಏಕೆ ವಿಶ್ವ ಪರಿಸರ ದಿನ ? ಎಲ್ಲಾ ದಿನಗಳನ್ನು ನಿಸರ್ಗದ ಬಗ್ಗೆ ಚರ್ಚಿಸಲು, ಉಳಿಸಲು ಕಾರ್ಯಕ್ಷೇತ್ರದಲ್ಲಿ ತೊಡಗಿಕೊಳ್ಳೋಣ ಎಂದು ನಿಶ್ಚಯಿಸುತ್ತಾ ಸ್ನಾನ ಮುಗಿಸಿ ಫಲಾಹಾರ ತಿಂದು ಮುಂದಿನ ದಿನದ ಕಾರ್ಯಾಗಾರದಲ್ಲಿ ಭಾಗವಹಿಸಲು ನಡೆದೆ.

ಕೃಷ್ಣಪ್ಪ ಕೆ

 

19653 ನೊಂದಾಯಿತ ಬಳಕೆದಾರರು
7777 ಸಂಪನ್ಮೂಲಗಳು