ಸೂಕ್ತ ಸಮತೋಲನ

ಶಿಕ್ಷಕರು ವಿದ್ಯಾರ್ಥಿಗಳಲ್ಲಿ 'ಸ್ವಾತಂತ್ರ್ಯ' ಮತ್ತು 'ಶಿಸ್ತು'  ಗಳ  ಸಮತೋಲನವನ್ನು ಹೇಗೆ  ಸಾಧಿಸಬಹುದು  ಎಂಬುದನ್ನು ಲೇಖಕರು ಈ ಲೇಖನದಲ್ಲಿ ವಿಚಾರ ಮಾಡಿದ್ದಾರೆ.


ಮಕ್ಕಳ ಮೇಲೆ, ಅದು  ಒಬ್ಬನೇ ಬಾಲಕ ಇರಬಹುದು ಅಥವಾ ಇಡೀ ಶಾಲೆಯೇ ಇರಬಹುದು ಕಟ್ಟು ನಿಟ್ಟಾದ ಶಿಸ್ತನ್ನು ಹೇರಲು ಹೊರಟರೆ ಚಂಚಲ ಮನಸ್ಸಿನ ಮಗುವನ್ನಾಗಲೀ, ತಪ್ಪು ಮಾಡುತ್ತಿರುವ ತರಗತಿಯನ್ನಾಗಲಿ ತಹಬಂದಿಗೆ ತರುವುದು ಬಹಳ ಕಷ್ಟವಾಗುತ್ತದೆ. ಬಹುತೇಕ ಶಿಕ್ಷಕರು ತಮ್ಮಬಗ್ಗೆಯಾಗಲಿ ಅಥವಾ ಮಕ್ಕಳ ಬಗ್ಗೆಯಾಗಲಿ ತೀರ ಅತಿಯಾದ ಅಥವಾ ತೀರ ಕಡಿಮೆಯಾದ  ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಅವರು  ಮಕ್ಕಳ ಮೇಲೆ ಕೂಗಾಡಿ ಹರಿಹಾಯುತ್ತಿರುತ್ತಾರೆ. ಇಲ್ಲವೇ  ತಾಳ್ಮೆ ವಹಿಸಿದರೆ ಏನೂ ಪ್ರಯೋಜನವಾಗದೇ  ಇರುವ ಕಡೆ ತೀರ ತಾಳ್ಮೆಯಿಂದ ವರ್ತಿಸುತ್ತಿರುತ್ತಾರೆ.  ಈ ಎರಡೂ ವಿಧಾನಗಳು ನಿಷ್ಪ್ರಯೋಜಕ . ಏಕೆಂದರೆ ಅದನ್ನು ಉಪಾಧ್ಯಾಯರು ಗಮನಿಸದೇ ಹೋದರೂ ಅಥವಾ ನನ್ನ ಕೈನಲ್ಲಿ ಆಗಲ್ಲ ಎಂದು  ಕೈಚೆಲ್ಲಿ ಕುಳಿತಾಗಲೂ ಮಕ್ಕಳಲ್ಲಿ ತಾವು ತೀರ ಹದ್ದುಮೀರಿ ಹೋಗುತ್ತಿದ್ದೇವೆ,ಒರಟಾಗಿ ನಡೆದು ಕೊಳ್ಳುತ್ತಿದ್ದೇವೆ,ಒಟ್ಟಾರೆ ತಪ್ಪಾಗಿ ನಡೆದು ಕೊಳ್ಳುತ್ತಿದ್ದೇವೆ ಎಂಬ ಕುರುಕುರು ಭಾವನೆ ಕಾಡುತ್ತಲೇ ಇರುತ್ತದೆ. ಮಕ್ಕಳಲ್ಲಿ ತಪ್ಪಿತಸ್ಥ ಭಾವನೆ ಕಾಡುತ್ತಿರುತ್ತದೆ ಯಾರಾದರೂ ಅದನ್ನು ತಡೆದು ತಮ್ಮನ್ನು ತಿದ್ದ ಬೇಕು ಎಂದು ಅವರ ಮನಸ್ಸು ಹಾತೊರೆಯುತ್ತಿರುತ್ತದೆ.  ಆದರೆ - ಮಾನವ ಪ್ರಕೃತಿಯ ವಿಚಿತ್ರತೆ ನೋಡಿ – ಅವರನ್ನುಆಗ ತಿದ್ದದೇ ಹೋದರೆ ಅವರು ಹತೋಟಿ ಮೀರಿ ಹೋಗುತ್ತಾರೆ. ಈ ಕಾರಣಗಳಿಗಾಗಿ, ವಿದ್ಯಾರ್ಥಿಗಳಿಗೆ ಶಿಕ್ಷಕರು ಎಷ್ಟೇ ಸ್ನೇಹಪರರು ಮತ್ತು ಸರಳ ವ್ಯಕ್ತಿ ಆದರೂ  ಅವರಿಗೆ

1. ಅಧಿಕಾರ ಸ್ಥಾನದಿಂದಾಗಿ  ಕೆಲವು ಹಕ್ಕುಗಳು ಬಂದಿರುತ್ತವೆ .

2. ಯಾವಾಗ ಮತ್ತು ಹೇಗೆ  ಅವರು ಕಟ್ಟುನಿಟ್ಟಾಗಿ ಇರಬೇಕು ಎಂಬುದು ಗೊತ್ತಿದೆ

3. ಅವರ ಸಹನೆಗೂ ಮತ್ತು  ತಾಳ್ಮೆಗೂ ಒಂದು ಮಿತಿ ಇದೆ.

-ಎಂಬುದು ಚೆನ್ನಾಗಿ ತಿಳಿದಿರಬೇಕು.

ಯಾವ ಉಪಾಧ್ಯಾಯನು ಮಕ್ಕಳಿಗೆ “ಇಲ್ಲಪ್ಪ ಇವರ ಹತ್ತಿರ ಬಾಲ ಬಿಚ್ಚುವ ಹಾಗಿಲ್ಲ” ಎಂಬ ಸಂದೇಶವನ್ನು ಮನಗಾಣಿಸಿರುತ್ತಾನೋ ಆತನನ್ನು ಎಲ್ಲ ಮಕ್ಕಳು ಇಷ್ಟಪಡುತ್ತಾರೆ ಮತ್ತು ಗೌರವಿಸುತ್ತಾರೆ.  ಮಕ್ಕಳೂ ಸಹ ತಮ್ಮ ಕಡೆಯಿಂದ, ಸ್ವಯಂ ಶಿಸ್ತು ಕಲಿಯುತ್ತಾರೆ ಮತ್ತು  ಶಿಕ್ಷಕರಿಗೆ ಏನು ಬೇಕು ಎಂಬುದನ್ನುನಿಖರವಾಗಿಅರ್ಥಮಾಡಿಕೊಳ್ಳು ತ್ತಾರೆ.ಇಲ್ಲಿ ನಾನು ಮಕ್ಕಳ ತಜ್ಞ  ಡಾ.ಶಾಂತಿ ಘೋಷ್ ಹೇಳಿದ ಮಾತುಗಳನ್ನು ಉದ್ಧರಿಸುತ್ತೇನೆ "ಶಿಸ್ತು ಮತ್ತು ಸ್ವಾತಂತ್ರ್ಯದ ಸಂತುಷ್ಟ ಮಿಶ್ರಣ ಇರಬೇಕು . ಕೇವಲ ಶಿಸ್ತಿಗಾಗಿಯೇ ಶಿಸ್ತು  ಇರಬಾರದು , ಆದರೆ  ಅಲ್ಲಿ ಸಮಂಜಸವಾದ ಕೊಳ್ಕೊಡೆ ಇರಬೇಕು. ತಾನು ಯಾವ ಮಿತಿಯನ್ನು ಮೀರಬಾರದು  ಮತ್ತು  ಮೀರುವಂತಿಲ್ಲ ಎಂಬುದನ್ನು ಮಗುವು ಚೆನ್ನಾಗಿ  ತಿಳಿದಿರಬೇಕು."
ದುರದೃಷ್ಟವಶಾತ್, ನಮ್ಮ ಶಾಲೆಗಳಲ್ಲಿ ದೈಹಿಕ ಹಿಂಸೆ ಮತ್ತು ಮಕ್ಕಳ ದುರುಪಯೋಗ, ಭಾರಿ ಪ್ರಮಾಣದಲ್ಲಿ ನಡೆಯುತ್ತಿವೆ. ಆದರೆ ನನ್ನ ಪ್ರಕಾರ ದಂಡಂ ದಶಗುಣಂ ಎಂದು ನಂಬುವ ಶಿಕ್ಷಕರು ಶಿಸ್ತಿನ ಬಗ್ಗೆ ಮಾತನಾಡಲಿಕ್ಕೇ ಹೋಗಬಾರದು. ಏಕೆಂದರೆ ಅವರೇ ಅಶಿಸ್ತಿನ ಮತ್ತು ಚಂಚಲತೆಯ ಪ್ರತಿರೂಪ ಆಗಿರುತ್ತಾರೆ. ಸ್ವಯಂ ನಿಯಂತ್ರಣವೇ ಎಲ್ಲಾ ಶಿಸ್ತಿನ ಬುನಾದಿ ಅಲ್ಲವೇ? , ಮಕ್ಕಳ ಕಡೆ ಡಸ್ಟರ್ ಎಸೆಯುವುದು ಮೂದಲಿಕೆ ಅಥವಾ ಕೆಟ್ಟ ಮತ್ತು ನಿಂದನೀಯ ಭಾಷೆಯ ಪದಗಳನ್ನು ಬಳಸುವುದು, ಒಂದು ಮಗುವಿನ ಗೆಣ್ಣುಗಳ ಮೇಲೆ ಒಡೆಯುವುದು ಅಥವಾ ಅವನ ಕಪಾಲಕ್ಕೆ ಬಾರಿಸುವುದು – ಮುಂತಾದ ದೈಹಿಕ ಮತ್ತು ಮಾನಸಿಕ ಹಿಂಸೆ ಮಾಡುವುದು ಶಿಕ್ಷಕನಲ್ಲಿ ಒಳ ಶಿಸ್ತು ಇಲ್ಲ ಎಂಬುದನ್ನು ಎತ್ತಿತೋರಿಸುತ್ತದೆ.

ಎಲ್ಲಿ ಪ್ರೀತಿಪೂರ್ವಕ ಮತ್ತು ನಿಜವಾದ ಕಾಳಜಿಯುಳ್ಳ ವಾತಾವರಣ ಇರುತ್ತದೋ ಅಲ್ಲಿ  ಶಿಸ್ತು ತಾನೇ ತಾನಾಗಿ ಇರುತ್ತದೆ. ತಾವು ತಮ್ಮ ಯೋಗಕ್ಷೇಮ ಏಳ್ಗೆ ಬಗ್ಗೆ ಆಸ್ಥೆಯುಳ್ಳಯಾರದ್ಧೊ ಜೊತೆಯಲ್ಲಿದ್ದೇವೆ ಎಂಬ ಭಾವನೆ ಮಕ್ಕಳಲ್ಲಿರಬೇಕು  ಮಕ್ಕಳ ಬಗ್ಗೆ ಪ್ರೀತಿ,ಕಾಳಜಿ ಸದಾಶಯವನ್ನುಶಿಕ್ಷಕರು ತೋರಬೇಕು.. ಶಿಕ್ಷಕನು ನಿರಂತರವಾಗಿ ಮಾರ್ಗದರ್ಶನ ಮಾಡಿ ಮಕ್ಕಳನ್ನು ಸರಿದಾರಿಯಲ್ಲಿ ಕರೆದೊಯ್ಯಬೇಕು ಮತ್ತು ಸುದ್ದಿ ಮಾಡಬೇಕು. ಈ ಮಾರ್ಗದರ್ಶನ  ಸರಿಯಾಗಿ ಕೆಲಸ ಮಾಡುವಂತೆ ನಾವು  ಹೇಗೆ ನೋಡಿಕೊಳ್ಳಬಹುದು?
1. ಯಾವಾಗಲೂ ಒಂದೇ ರೀತಿಇರಬೇಕು: ಒಂದು ದಿನ ಒಂದು ತಪ್ಪುಮಾಡಲು ಅವಕಾಶ ಕೊಟ್ಟು ಒಂದು ತಿಂಗಳ ನಂತರ ಅದೇ ತಪ್ಪಿಗೆ ಕಟುವಾದಶಿಕ್ಷೆ ನೀಡಿದರೆ ಮಕ್ಕಳು ಗೊಂದಲಕ್ಕೀಡಾಗುತ್ತಾರೆ.

2. ನುಡಿದಂತೆ ನಡೆಯಬೇಕು: ಅಂದರೆ ಯಾವುದೇ ಆತುರದ ಪ್ರತಿಕ್ರಿಯೆ ನೀಡಬಾರದು ಮತ್ತು ನಮ್ಮ ಕೈನಲ್ಲಿ ಮಾಡಲು ಆಗದ್ದನ್ನು /ನಾವು ಮಾಡಲುಇಚ್ಛಿಸದೇ ಇರುವುದು ಯಾವುದನ್ನೂಮಾಡುತ್ತೇವೆ ಎಂದು ವಾಗ್ದಾನ ಮಾಡಬಾರದು. ಶಿಕ್ಷಕನು ಹಾಗೇನಾದರೂ ಮಾಡಿದರೆ ಆಗ  ಮಕ್ಕಳು  ಅವನನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.ಇದೇ ಅನೇಕ ಶಿಕ್ಷಕರು ತಮ್ಮ ಮೇಲೆ ತಾವೇ ತಂದುಕೊಳ್ಳುವ ಸಮಸ್ಯೆ ಆಗಿದೆ. ಸಮಸ್ಯೆಯಾಗಿದೆ.

3. ವಿವೇಚನೆಯಿಂದ ನಡೆದುಕೊಳ್ಳಬೇಕು – ನಾವು ಯಾವುದೇ ಕೆಲಸವನ್ನು  ಅನುಮತಿಸ ಬಹುದು ಅಥವಾ ಅನುಮತಿಸದೇ ಇರಬಹುದು ಅವಕಾಶ ಮತ್ತು (ಕೇವಲ ಅಧಿಕಾರದ ಪ್ರದರ್ಶನವಾಗಿಅದನ್ನು ಮಾಡದೇ) ಹಾಗೇಕೆ ಮಾಡಿದಿರಿ ಎಂಬುದಕ್ಕೆನಿಮ್ಮ ಕಾರಣಗಳನ್ನು ವಿವರಿಸಬೇಕು.

ನೀವು ಒಬ್ಬ ಶಿಕ್ಷಕರಾಗಿದ್ದರೆ ,ಶಿಕ್ಷೆ ಕೊಡುವ ಮುನ್ನ ಯಾವಾಗಲೂ ನಿಮ್ಮನ್ನು ನೀವು ಮೊದಲು ಈ ರೀತಿ ಕೇಳಿಕೊಳ್ಳಿ - ನೀವು ಕೊಡುವ ಶಿಕ್ಷೆ ಯಾವುದೇ ಕೆಟ್ಟ ಪರಿಣಾಮ ವಿಲ್ಲದೇ ನೀವು ಬಯಸಿದ ಪರಿಣಾಮವನ್ನು ನೀಡುತ್ತದೆಯೆ? ನೀವು ಕೊಡುವ ಶಿಕ್ಷೆಯಿಂದ ಮಗುವು, ಕೋಪಗೊಂಡರೇ,ಮುನಿಸಿಕೊಂಡರೆ,  ಪ್ರತಿಭಟನೆ ತೋರಿದರೆ, ಹಠಮಾರಿಯಾದರೆ ಮತ್ತು ಇನ್ನಷ್ಟು ಅಶಿಸ್ತಿನವನಾಗುವುದಾದರೆ,  ಆ ಬಗ್ಗೆ ಗಂಭೀರ ಪುನರ್ಪರಿಶೀಲನೆ ಅಗತ್ಯವಿದೆ. ಕೆಲವೊಮ್ಮೆ ಆಮಗುವು ತನ್ನ ತಪ್ಪು ನಡೆವಳಿಕೆಯಿಂದ  ನಿಮ್ಮಷ್ಟೇ ಬೇಸರಪಟ್ಟಿರುವ ಸಾಧ್ಯತೆ ಇದೆ.ಇದೇ ಪಶ್ಚಾತ್ತಾಪ. ಅಂತಹ ಸಂದರ್ಭಗಳಲ್ಲಿ, ಯಾವುದೇ ಶಿಕ್ಷೆ ಅಗತ್ಯವಿಲ್ಲ. ಆ ಪಶ್ಚಾತ್ತಾಪವೇ ಸಾಕಷ್ಟು ಶಿಕ್ಷೆ ಆಗಿರುತ್ತದೆ.

ಅಂತಿಮವಾಗಿ, ಹೇಳುವುದಾದರೆ ಮಕ್ಕಳು ಶಿಸ್ತಿನಿಂದ ಇರುವುದು ಮತ್ತು  ಇಲ್ಲದೇ ಇರುವುದು ಎಲ್ಲಾ ನಿಮ್ಮಕೈಯಲ್ಲೇ ಇದೆ. ನಾವು ಮಕ್ಕಳು ಹೇಗೆ ವಿಧೇಯರಾಗಿ, ಸದ್ವರ್ತನೆಯಿಂದ , ಎಷ್ಟು ಉಪಯುಕ್ತವಾಗಿ ಮತ್ತು ಸೌಜನ್ಯದಿಂದ  ಇರಬೇಕು ಎಂಬುದು  ನಮಗೆ ತಿಳಿದಿದೆ. ನಾವು  ಆ ಗುಣಗಳಿಗೆ ಉತ್ತಮ ಉದಾಹರಣೆ ಆಗಿರಬೇಕು. ಜವಾನರು ಆಯಾಗಳೊಂದಿಗೆ ಅಥವಾ ನಮ್ಮ ನಮ್ಮ ನಡುವೆ ನಾವೇ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರೆ ನಾವು ಅವರಿಂದ ಸೌಜನ್ಯಪೂರಿತ ನಡವಳಿಕೆಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ ಏಕೆಂದರೆ ಮಕ್ಕಳು ಏನು ನಡೆಯುತ್ತಿದೆ ಎಂಬುದನ್ನುಬೇಗ ಕಂಡುಹಿಡಿಯುತ್ತವೆ!  ನಾವು ವಿದ್ಯಾರ್ಥಿಗಳಲ್ಲಿ ನಾವು-ನಮ್ಮದು ಎಂಬ ಭಾವನೆ ಉಂಟುಮಾಡಿದರೆ ಸಾಲದು ನಿರ್ದಿಷ್ಟ ಉದ್ದೇಶದ ಪ್ರಜ್ಞೆಯನ್ನು ಅವರಲ್ಲಿ  ಜಾಗೃತಗೊಳಿಸಬೇಕು. ಮಕ್ಕಳು ನಮ್ಮಿಂದ ಸಹಾಯವಾಗುತ್ತದೆ ನಾವೂ ಸಹಾಯ ಮಾಡಬಲ್ಲೆವು ಎಂದು ಆಲೋಚಿಸಲು ಇಷ್ಟಪಡುತ್ತಾರೆ, ಮತ್ತು ನಾವು ಒಂದಿಷ್ಟು ಸಹಾಯ ಮಾಡಿದರೆ ಪರಿಪಕ್ವತೆ ಮತ್ತು ಸ್ವಯಂ ಶಿಸ್ತಿನಿಂದ ಯಾವುದೇ ಎತ್ತರಕ್ಕೆ ಬೆಳೆದು ಸವಾಲನ್ನು ಎದುರಿಸಬಲ್ಲರು. ನಾವು ನಮ್ಮ ಆದ್ಯತೆಗಳು ಯಾವುವು ಎಂಬುದನ್ನು  ನಾವು ಸರಿಯಾಗಿತಿಳಿದಿದ್ದರೆ. ನಾವು ಅತ್ಯಂತ ಯಶಸ್ವಿಯಾಗುತ್ತೇವೆ. ಶಾಲೆಯಲ್ಲಿ ಅಥವಾ ತರಗತಿಯಲ್ಲಿ ಶಿಸ್ತನ್ನು ತರಬೇಕಾದರೆ ದೃಢಸಂಕಲ್ಪವಿರಬೇಕು ಮತ್ತುತೆರೆದ ಮನಸ್ಸು ಇರಬೇಕು.

 ಗಾರ್ಗಿ ಭಟ್ ಅವರ ಈ ಲೇಖನವು, ಈ ಮೊದಲು ಟೀಚರ್  ಪ್ಲಸ್, ಸಂಚಿಕೆ .5, ಮಾರ್ಚ್, ಏಪ್ರಿಲ್ 1991 ರಲ್ಲಿ ಪ್ರಕಟವಾಗಿದೆ ಮತ್ತು  ಕೆಲವೊಂದು ಬದಲಾವಣೆಗಳೊಂದಿಗೆ ಇಲ್ಲಿ ಅದನ್ನು ಅನುವಾದಿಸಲಾಗಿದೆ.

ಕನ್ನಡಕ್ಕೆ: ಜೈಕುಮಾರ್ ಮರಿಯಪ್ಪ

 

18927 ನೊಂದಾಯಿತ ಬಳಕೆದಾರರು
7393 ಸಂಪನ್ಮೂಲಗಳು