ಸಾಮಾಜಿಕ ಸಮಾವೇಶನ ಮತ್ತು ಬಹಿಷ್ಕಾರ - ನನ್ನ ಅನುಭವಗಳು : ದೀಪಿಕಾ ಕೆ ಸಿಂಗ್

ಬಹುತೇಕ ಮಧ್ಯಮ ವರ್ಗದವರೇ ವಾಸವಾಗಿದ್ದ ವಲಯದಲ್ಲಿದ್ದ ನಾನು ಕಲಿಯುತ್ತಿದ್ದಂತಹ ಶಾಲೆಯಲ್ಲಿನ ವಿದ್ಯಾರ್ಥಿಗಳು ನನ್ನ ನೆರೆಹೊರೆಯವರಾಗಿದ್ದು, ಅವರಲ್ಲಿ ಅನೇಕರ ತಂದೆ ಅಥವಾ ತಾಯಿ ಒಂದೇ ಕಾರ್ಖಾನೆಯಲ್ಲಿ ದುಡಿಯುವವರಾಗಿದ್ದು ನಿರ್ದೇಶಕರಿಂದ ನೆಲಗುಡಿಸುವವನವರೆಗೂ ವಿಭಿನ್ನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.  ಈ ಶಾಲೆಯಲ್ಲಿ ಕಲಿಯುತ್ತಿದ್ದಾಗಿನ ನನ್ನ ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ನನಗೆ ನೆನಪಿದೆ, ನಾನಾಗ ಎಂಟನೇ ತರಗತಿಯಲ್ಲಿದ್ದೆ ಮತ್ತು ಆಗ ಗಣಿತದ ತರಗತಿಯಲ್ಲಿ ನಮ್ಮ ಶಿಕ್ಷಕರು ನಮಗೆ ಗಣಿತದ ಪಾಠ ಮಾಡುತ್ತಿದ್ದರು.  ಶಾಲಾ ಕಛೇರಿಯ ಜವಾನನೊಬ್ಬ ಒಂದು ಕಾಗದದ ಹಾಳೆಯನ್ನು ತಂದು ನಮ್ಮ ಶಿಕ್ಷಕರಿಗೆ ನೀಡಿದ.  ನಾನು ಈ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳ ಹೆಸರನ್ನು ಓದುತ್ತೇನೆ, ಅವರು ತಮ್ಮ ವಿದ್ಯಾರ್ಥಿವೇತನವನ್ನು ತೆಗೆದುಕೊಳ್ಳಲು ಹೋಗಬಹುದು ಎಂದು ನಮ್ಮ ಶಿಕ್ಷಕರು ಹೇಳಿದರು.  ಅವರು ಕೆಲವೊಂದು ಹೆಸರುಗಳನ್ನು ಓದಿದ ನಂತರ ಒಬ್ಬ ಬುದ್ಧಿವಂತ ವಿದ್ಯಾರ್ಥಿನಿಯ ಹೆಸರನ್ನು ಓದಿದರು.  ಅವಳು ಯಾವಾಗಲೂ ಮೊದಲ ಮೂರು ರ‍್ಯಾಂಕನ್ನು ಪಡೆಯುತ್ತಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬಳಾಗಿಯೇ ಇರುತ್ತಿದ್ದಳು ಹಾಗೂ ಈ ಶಿಕ್ಷಕರು ಅವಳನ್ನು ಬಹಳಷ್ಟು ಇಷ್ಟಪಡುತ್ತಿದ್ದರು.  ಇದಲ್ಲದೇ ಅವಳು ಟಿ-ಶರ್ಟ ತೊಟ್ಟು ಬಂದಿದ್ದಾಗ ಒಳ್ಳೆಯ ಹುಡುಗಿಯರು ಇಂತಹ ಬಟ್ಟೆ ತೊಡುವುದಿಲ್ಲ ಎಂದೂ ಅವಳಿಗೆ ಟೀಕಿಸಿದ್ದರು.  ಈಗ ಶಿಕ್ಷಕರು ಅವಳ ಹೆಸರನ್ನು ಪಟ್ಟಿಯಿಂದ ಓದಿದಾಗ ಅವಳು ತಾನು ಕುಳಿತಿದ್ದ ಬೆಂಚಿನಿಂದ ಎದ್ದು ನಿಂತಳು.  ಆಗ ಅವಳನ್ನು ನೋಡಿ ಶಿಕ್ಷಕರು ಓಹೋ! ನೀನೊಬ್ಬ ಪರಿಶಿಷ್ಟ ಜಾತಿಯವಳೇ, ಛಿ, ಛಿ. ಎಂದರು.
ಅವರು ಅಂದು ಹೇಳಿದ ಆ ಛಿ, ಛಿ, ಮತ್ತು ಅದರ ಧಾಟಿ ನನಗೆ ಈಗಲೂ ನೆನಪಿದೆ.  ಜಾತಿ ವ್ಯವಸ್ಥೆಯೊಂದಿದೆ ಎಂದು ನನಗೆ ಪರಿಚಯವಾಗಿದ್ದೇ  ಈ ರೀತಿಯಾಗಿ ಮತ್ತು ಶಿಕ್ಷಕರು ಈ ರೀತಿಯಾಗಿ ಟೀಕಿಸಿದ್ದರಿಂದ ಪರಿಶಿಷ್ಠ ಜಾತಿಯಲ್ಲಿ ಏನೋ ಸರಿಯಿಲ್ಲ ಎಂದು ನಾನು ಅರ್ಥಮಾಡಿಕೊಂಡೆ.  ಆದರೆ ಇದರಲಲ್ಲಿ ಏನೋ ವಿಶೇಷತೆ ಇದೆ ಯಾಕೆಂದರೆ ಆ ವಿದ್ಯಾರ್ಥಿನಿಗೆ ವಿದ್ಯಾರ್ಥಿವೇತನ ದೊರೆತಿದೆಯಲ್ಲ, ಎಂದೂ ಅರ್ಥವಾಯಿತು.  ಶಿಕ್ಷಕರಿಂದ ಈ ರೀತಿ ತೇಜೋವಧೆಗೆ ಒಳಗಾದ ನನ್ನ ಸ್ನೇಹಿತೆಗೆ ಅದೊಂದು ಅತ್ಯಂತ ನೋವಿನ ಅನುಭವವಾಗಿದ್ದಿರಬಹುದು.
ನನಗೆ ನೆನಪಿರುವ ಇನ್ನೊಂದು ಅನುಭವವೆಂದರೆ, ನಾವು ಆಗ ಎಂಟು ಅಥವಾ ಒಂಭತ್ತನೇ ತರಗತಿಯಲ್ಲಿ ಇದ್ದೆವು.  ನನ್ನ ಸ್ನೇಹಿತರಲ್ಲಿ ಒಬ್ಬರು ಇನ್ನೊಬ್ಬರೊಂದಿಗೆ ಜಗಳವಾಡಿ, ಒಬ್ಬ, ಇನ್ನೊಬ್ಬನನ್ನು ಎಬಿಸಿ ಎಂದು ಕರೆದ.  ನಾನು ಎಬಿಸಿ ಎಂದರೆ ಏನು ಎಂದು ಕೇಳಿದಾಗ ಅವನು ಅದರರ್ಥ, ಏಯ್, ಬ್ಯಾಕ್‌ವರ್ಡ್ ಕಾಸ್ಟ್’ ಎಂದು, ಅಂತ ವಿವರಿಸಿದ.
ಮೇಲೆ ಹೇಳಿರುವ ನನ್ನ ಅನುಭವಗಳು, ಶಾಲೆಯಲ್ಲಿ ಕಲಿಯುತ್ತಿರುವ ಒಂದು ನಿರ್ದಿಷ್ಟ ಗುಂಪಿನ ಮಕ್ಕಳ ಬಗ್ಗೆ  ತಾರತಮ್ಯ  ತೋರುವುದು  ಮತ್ತು ಅವರಿಗೊಂದು ಕಳಂಕದ ಪಟ್ಟಿ ಹಚ್ಚುವ  ಸಮಸ್ಯೆಯೆಡೆ ಬೆರಳು ಮಾಡಿ ತೋರುತ್ತದೆ .ಅಲ್ಲದೆ ಕೆಲವು ರೂಢಿಗತವಾಗಿ ಬಂದಿರುವ  ತರ್ಕರಹಿತ  ನಿರ್ಧಾರಗಳನ್ನು ಮತ್ತು ಚಿತ್ರಣವನ್ನು sಸರ್ವೆಸಾಮಾನ್ಯ ಮಾಡುವಲ್ಲಿ ಮತ್ತು ಅವು ಇನ್ನಷ್ಟು ಬಲವಾಗಿ ಬೇರೂರುವಂತೆ ಮಾಡುವಲ್ಲಿ ಈ ಮೇಲಿನ ವಿಷಯದಲ್ಲಿ ಒಳ್ಳೆಯ ಹುಡುಗಿಯ ಚಿತ್ರಣದಂತಹ ವಿಷಯಗಳನ್ನು ವಾಡಿಕೆ ವಿಚಾರಮಾಡಿ ಮತ್ತು ಅದನ್ನು ಬಲವಾಗಿ ಬೇರೂರುವಂತೆ ಮಾಡುವಲ್ಲಿ ಶಾಲೆಯ ಪಾತ್ರವನ್ನು ಎತ್ತಿ ಹೇಳುತ್ತದೆ. ಈ ಸನ್ನಿವೇಶಗಳು ಶಾಲೆಯಲ್ಲಿ ದಿನ ನಿತ್ಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ, ಹಾಗೂ ವಿದ್ಯಾರ್ಥಿ - ವಿದ್ಯಾರ್ಥಿಗಳ ನಡುವೆ ತಾರತಮ್ಯದ ಚಕಮಕಿಗಳು ನಡೆಯುವುದನ್ನು  ಎತ್ತಿ ತೋರತ್ತವೆ. ಒಬ್ಬ ಮಧ್ಯಮ ವರ್ಗದ ಬಾಲಕಿಗೆ ಶಿಕ್ಷಣ ಲಭ್ಯವಾದರೂ, ವಿದ್ಯಾಭ್ಯಾಸವನ್ನು ಅವಳು ಮುಂದುವರೆಸಿದರೂ, ಆಕೆ  ಶಾಲೆಯಲ್ಲಿ ರೂಢಿಗತವಾಗಿ ಬಂದಿರುವ ಲಿಂಗ ಕುರಿತ ತರ್ಕರಹಿತ ನಿರ್ಧಾರಗಳು ಮತ್ತು ಜಾತಿ ತಾರತಮ್ಯತೆಯನ್ನು ಎದುರಿಸಬೇಕಾಗುತ್ತದೆ.
ಹೀಗಿದ್ದರೂ, ನಮ್ಮ ಶಾಲೆಯಲ್ಲಿನ ಕೆಲವು ಶಿಕ್ಷಕರು ಮತ್ತು ಹೊಸದಾಗಿ ಬಂದ ಪ್ರಾಂಶುಪಾಲರು ವಿದ್ಯಾರ್ಥಿಗಳ ನಡುವೆ ಸೃಷ್ಟಿಯಾಗಿದ್ದ ಭೇಧಭಾವದ ಗೋಡೆಗಳು ವಿವಿಧ ವಿದ್ಯಾರ್ಥಿಗಳಿಗೆ ಅಂಟಿಕೊಂಡ ಹಣೆಪಟ್ಟಿಗಳನ್ನು ತೊಡೆಯುವ ಪ್ರಯತ್ನ ಮಾಡಿರುವ ನೆನಪೂ ನನಗಿದೆ.  ನಾನು ಮಾಧ್ಯಮಿಕ ಶಾಲೆಯಲ್ಲ್ಲಿದ್ದಾಗ ನಮ್ಮ ತರಗತಿಯಲ್ಲಿ ಎರಡು ಪ್ರಮುಖ ಗುಂಪುಗಳಿದ್ದವು.  ಒಂದು ಗುಂಪಿನ ವಿದ್ಯಾರ್ಥಿಗಳು ದೈಹಿಕವಾಗಿ ಕಟ್ಟುಮಸ್ತಾಗಿದ್ದು ಆಟ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಮುಂದಿದ್ದವರು ಹಾಗೂ ಇನ್ನೊಂದು ಗುಂಪಿನ ವಿದ್ಯಾರ್ಥಿಗಳು ದೈಹಿಕವಾಗಿ ಅಷ್ಟೇನೂ ಬಲಶಾಲಿಗಳಲ್ಲದಿದ್ದರೂ ಓದಿನಲ್ಲಿ ಮುಂದಿದ್ದವರು.  ಇವೆರಡು ಸ್ಪಷ್ಟವಾಗಿ ವಿಭಿನ್ನವಾಗಿದ್ದ ಗುಂಪುಗಳು, ಇದಲ್ಲದೇ ಇನ್ನು ಅನೇಕ ಗುಂಪುಗಳಿದ್ದರೂ ನಾನು ಈ ಎರಡು ಗುಂಪುಗಳ ಬಗ್ಗೆ ಕಥನವನ್ನು ಇಲ್ಲಿ ನೀಡಲು ಬಯಸುತ್ತೇನೆ.
ಈ ರೀತಿಯ ಅಡ್ಡಗೋಡೆಯು ವಿದ್ಯಾರ್ಥಿಗಳ ಸಾಧನೆಗಳಿಂದ ಮತ್ತು ಶಿಕ್ಷಕರು ಅವರುಗಳಿಗೆ ನೀಡುತ್ತಿದ್ದ ಆದ್ಯತೆಗಳಿಂದ ಸೃಷ್ಟಿಯಾದಂತಹವು.  ದೈಹಿಕ ಶಿಕ್ಷಣದ ಶಿಕ್ಷಕರು ದೈಹಿಕವಾಗಿ ಕಟ್ಟುಮಸ್ತಾದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಿ ತಂಡದ ನಾಯಕರನ್ನಾಗಿಸುತ್ತಿದ್ದರು ಅಷ್ಟೇ ಅಲ್ಲ   ಅವರಲ್ಲಿ ಅನೇಕರು ಸ್ಪರ್ಧೆಗಳಲ್ಲಿ ಬಹುಮಾನವನ್ನೂ ಶಾಲೆಗೆ ತರುತ್ತಿದ್ದರು.  ಇನ್ನೊಂದು ಗುಂಪಿನ ವಿದ್ಯಾರ್ಥಿಗಳು ತಮ್ಮನ್ನು ತಂಡದ ಮುಖಂಡರನ್ನಾಗಿಸಲಿಲ್ಲ ಎಂದು ಅಸಮಧಾನಗೊಂಡರು.  ಆದರೆ, ಭಾಷೆ, ಗಣಿತ ಮತ್ತು ವಿಜ್ಞಾನದ ವಿಷಯಕ್ಕೆ ಬಂದಾಗ, ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದವರು, ತಮ್ಮ ಆಲೋಚನೆಗಳನ್ನು ಚೆನ್ನಾಗಿ ವ್ಯಕ್ತಪಡಿಸುವವರು, ಆಂಗ್ಲ ಭಾಷೆಯಲ್ಲಿ ನಿರರ್ಗಳತೆಯನ್ನು ಹೊಂದಿದವರು ಮತ್ತು ಕೆಲವೊಮ್ಮೆ ಪಠ್ಯಪುಸ್ತಕದಲ್ಲಿ ನೀಡದಿರುವ ವಿಷಯದಲ್ಲಿ ಕೇಳಿದ ಪ್ರಶ್ನೆಗಳಿಗೂ ಉತ್ತರವನ್ನು ನೀಡುವ ವಿದ್ಯಾರ್ಥಿಗಳ ಗುಂಪಿಗೆ ತರಗತಿ ಚರ್ಚೆಗಳಲ್ಲಿ ಹೆಚ್ಚಿನ ಅವಕಾಶವನ್ನುಶಿಕ್ಷಕರು ನೀಡುತ್ತಿದ್ದರು.  ನನಗೆ ನೆನಪಿದೆ.  ನಾನು ಒಂಬತ್ತನೆಯ ತರಗತಿಯಲ್ಲಿದ್ದಾಗ ಮೌಖಿಕ ಪರೀಕ್ಷೆಯಲ್ಲಿ ಶಿಕ್ಷಕರು ಹಾಲಿನ ಬಣ್ಣ ಏಕೆ ಬಿಳಿ? ಎಂದು ಕೇಳಿದರು. ’ಅದರಲ್ಲಿರುವ ಪ್ರೋಟೀನ್ ಅಂಶದಿಂದಾಗಿ ಎಂದು ಹೇಳಿದೆ.  ಶಿಕ್ಷಕರು ಗಟ್ಟಿಯಾಗಿ ನಕ್ಕರು, ಹಾಗಾಗಿ ನಾನು ಹೇಳಿದ ಉತ್ತರ ತಪ್ಪಾಗಿದೆ ಎಂದು ನನಗೆ ತಿಳಿಯಿತು. ಆದರೆ ಅವರು ಸರಿ ಉತ್ತರವನ್ನು ನನಗೆ ಹೇಳಲಿಲ್ಲ. ಖಂಡಿತವಾಗಿಯೂ ಈ ಪ್ರಶ್ನೆ-ಉತ್ತರ ವೈಜ್ಞಾನಿಕ ಜ್ಞಾನದ್ದಾಗಿದ್ದು ಇದಕ್ಕೆ ಒಂದೇ ಸರಿಯುತ್ತರವಿರಬಹುದು ಮತ್ತು ಇದರಲ್ಲಿ ಶಿಕ್ಷಕರು ಕೆದಕಿ ಕೇಳುವುದಕ್ಕೆ ಮತ್ತು ಯಾವುದೇ ಸಾಮಾನ್ಯ ಜ್ಞಾನವನ್ನು ವಿದ್ಯಾರ್ಥಿಯು ಅನ್ವಯಿಸುವುದಕ್ಕೆ ಅವಕಾಶವಿರಲಿಲ್ಲ ಹಾಗೂ ಪಡೆದಂತಹಾ ಉತ್ತರಕ್ಕೆ ಏನು ಕಾರಣ ಎಂದು ತಿಳಿದುಕೊಳ್ಳುವ ಆಸಕ್ತಿ ಆ ಶಿಕ್ಷಕರಿಗೆ ಇರಲಿಲ್ಲ.
ಎಲ್ಲರ ಪರೀಕ್ಷೆ ಮುಗಿದ ನಂತರ ಕೊನೆಯಲ್ಲಿ ಶಿಕ್ಷಕರು ಒಬ್ಬ ವಿದ್ಯಾರ್ಥಿಯನ್ನು ಪ್ರಶಂಸಿಸಿದರು.  ಅವನು ವಿಜ್ಞಾನದ ವಿಷಯದಲ್ಲಿ ತನಗಿರುವ ಜ್ಞಾನದಿಂದ ಯಾವಾಗಲೂ ಮೊದಲ ರ‍್ಯಾಂಕನ್ನು ಪಡೆಯುವ ವಿದ್ಯಾರ್ಥಿಯಾಗಿದ್ದು, ಪ್ರಯೋಗಾಲಯದಲ್ಲಿ ಕೆಲವೊಂದು ನಿರ್ದಿಷ್ಠ ಉಪಕರಣಗಳನ್ನು ಹೇಗೆ ಉಪಯೋಗಿಸಬೇಕೆಂದು ತಿಳಿದವನಾಗಿದ್ದ.  ಶಿಕ್ಷಕರು ಆ ಉಪಕರಣಗಳನ್ನು ಬಳಸಲು ನಮ್ಮಲ್ಲಿ ಅನೇಕರಿಗೆ ಅವಕಾಶ ನೀಡದಿದ್ದರೂ ಅದನ್ನು ಒಂದು ನಿರ್ದಿಷ್ಠ ವಿಧಾನದಲ್ಲಿ ಬಳಸುವುದು ಹೇಗೆ ಎಂದು ತಿಳಿದಿರಬೇಕು ಎಂಬ ನಿರೀಕ್ಷೆಯನ್ನು ಏಕೆ ಹೊಂದಿರುತ್ತಿದ್ದರು ಎಂದು ನಾವು ಆಶ್ಚರ್ಯಪಡುತ್ತಿದ್ದೆವು. ವಿದ್ಯಾರ್ಥಿಗಳನ್ನು ಶೋಧಿಸಿ ಪ್ರತ್ಯೇಕಿಸಲು ಸಜ್ಜಾಗಿರುವ ಶಾಲೆಗಳು ಮತ್ತು ಮೌಲ್ಯಮಾಪನದ ಸಂಪೂರ್ಣ ಕಾರ್ಯವಿಧಾನಕ್ಕೆ ನನ್ನ ಈ ಅನುಭವವನ್ನು ತಳಕು ಹಾಕುತ್ತೇನೆ. ಈ ಶಿಕ್ಷಕರು ಮಾಡಿದ್ದೂ ಹೀಗೆಯೇ, ಆಗಷ್ಟೇ ಶಾಲೆಯಲ್ಲಿ ಪ್ರಯೋಗಾಲಯದ ಸಾಮಗ್ರಿಗಳನ್ನು ಹೊಂದಿಸಿ ತರುವುದಕ್ಕೆ ಸಾಧ್ಯವಾಗಿದೆ, ಗ್ರಂಥಾಲಯವನ್ನು ಸ್ಥಾಪಿಸುವ ಕಾರ್ಯದಲ್ಲಿ ಶಾಲೆಯು ನಿರತವಾಗಿದ್ದು ಪಠ್ಯಕ್ಕೆ ಮೀರಿದ ವಿಷಯಗಳನ್ನು ತಿಳಿದುಕೊಳ್ಳಲು ಮಕ್ಕಳಿಗೆ ಇರುವ ಮಾರ್ಗವೆಂದರೆ ಅವರ ಪೋಷಕರು ವಿದ್ಯಾವಂತರಾಗಿದ್ದು ಅವರಿಗೆ ಇದರ ತಿಳಿವಳಿಕೆ ಇದ್ದು, ಅವರು ತಮ್ಮ ಮಕ್ಕಳಿಗೆ ಹೆಚ್ಚಿನ ಜ್ಞಾನವನ್ನು ನೀಡುವಂತಹಾ ಚಟುವಟಿಕೆಗಳಲ್ಲಿ ತೊಡಗಿಸುವವರಾಗಿ ಇರಬೇಕಾಗುತ್ತದೆ, ಅಥವಾ ಮನೆಯಲ್ಲಿ ಮಕ್ಕಳಿಗೆ ಹೆಚ್ಚಿನ ಅರಿವನ್ನು ಮೂಡಿಸುವಂತಹಾ ವಸ್ತುಗಳ ಅಕರವಿರಬೇಕು. ಇಲ್ಲವೇ ಮನೆಪಾಠದಂತಹಾ ಹೆಚ್ಚಿನ ಬೆಂಬಲವಿರಬೇಕು ಎಂಬುದನ್ನು ತಿಳಿದೂ ತರಗತಿಯಲ್ಲಿ ಕೆಲವರಿಗೆ ಮಾತ್ರ ಉತ್ತರಿಸಲು ಸಾಧ್ಯವಾಗುವಂತಹ ರೀತಿಯಲಿ ಈ ಶಿಕ್ಷಕರ‍್ಲು ಪ್ರಶ್ನೆಗಳನ್ನು ಹೊಂದಿಸಿಕೊಂಡಿದ್ದರು.
ಇಂತಹಾ ಸನ್ನಿವೇಶಗಳು ನಮ್ಮನ್ನು ಕಾರ್ಮಿಕರ ಮಕ್ಕಳು ಮತ್ತು ಗಣ್ಯ ಕುಟುಂಬದಿಂದ ಬಂದಿರುವ ಮಕ್ಕಳ ಗುಂಪಿನೆಡೆಗೆ ದೃಷ್ಟಿ ಹರಿಸುವಂತೆ ಮಾಡಿ, ಶಾಲೆಗಳು ಯಾವ ರೀತಿಯಲ್ಲಿ ಗಣ್ಯವರ್ಗದವರಿಗೆ ಅನುಕೂಲಕರವಾಗಿ ವರ್ತಿಸುತ್ತವೆ ಎನ್ನುವತ್ತ ನಮ್ಮ ಗಮನವನ್ನು ಸೆಳೆಯುತ್ತವೆ.  ಇದಕ್ಕೆ ಅನೇಕ ದೃಷ್ಠಾಂತಗಳನ್ನು ನಾನು ಕೊಡಬಲ್ಲೆ. ಒಮ್ಮೆ ಆಂಗ್ಲ ಭಾಷಾ ಶಿಕ್ಷಕರು ತರಗತಿಯಲ್ಲಿ ದೈಹಿಕವಾಗಿ ಬಲವಾಗಿರುವ ವಿದ್ಯಾರ್ಥಿಗಳ ಗುಂಪಿನಿಂದ ಒಬ್ಬ ವಿದ್ಯಾರ್ಥಿಯನ್ನು ಮತ್ತು ಶೈಕ್ಷಣಿಕವಾಗಿ ಬಲವಾಗಿರುವ ವಿದ್ಯಾರ್ಥಿಗಳ ಗುಂಪಿನಿಂದ ಒಬ್ಬ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ, ಮೊದಲಿಗೆ ದೈಹಿಕವಾಗಿ ಬಲವಾಗಿರುವ ವಿದ್ಯಾರ್ಥಿಗೆ ಒಂದು ಪ್ರಶ್ನೆಯನ್ನು ಕೇಳಿದರು.  ಆ ವಿದ್ಯಾರ್ಥಿಯು ಉತ್ತರಿಸಿದ ನಂತರ ಶಿಕ್ಷಕರು ಜೋರಾಗಿ ನಕ್ಕು ನೋಡಿ ಅವನಿಗೆ ತಿಳಿದಿರುವುದು ಇಷ್ಟೇ ಎಂದರು.  ಈ ವಿದ್ಯಾರ್ಥಿಗೆ ಉತ್ತರಿಸಲು ಸಾಧ್ಯವಿಲ್ಲ ಎನ್ನುವುದು ಶಿಕ್ಷಕರಿಗೆ ತಿಳಿದಿತ್ತು.   ಶಿಕ್ಷಕರು ಆ ವಿದ್ಯಾರ್ಥಿಯನ್ನು ಹೀಗಳೆದು ನಗೆಪಾಟಲು ಮಾಡಿ, ನಮ್ಮಲ್ಲಿ ಕೆಲವರು ಸರಿಯುತ್ತರ ತಿಳಿದಿದೆ ಎಂದು ಆಲೋಚಿಸಿಕೊಂಡವರು ಮತ್ತೊಬ್ಬ ವಿದ್ಯಾರ್ಥಿಗೆ ಸುಳಿವುಗಳನ್ನು ನೀಡಿದ ಅನಂತರ ಅವನು ಸರಿಯಾದ ಉತ್ತರವನ್ನು ನೀಡಿದನು. ಈ ಪ್ರಕರಣವನ್ನು ಗಮನಿಸಿದರೆ, ಆಯ್ಕೆ ಮಾಡಿಕೊಂಡಂತಹ ಇಬ್ಬರು ವಿದ್ಯಾರ್ಥಿಗಳಿಗೂ ಉತ್ತರ ತಿಳಿದಿರಲಿಲ್ಲ ಆದರೆ, ಒಬ್ಬ ವಿದ್ಯಾರ್ಥಿಗೆ ಉತ್ತರ ತಿಳಿದಿದ್ದ ಜೊತೆಗಾರನಿದ್ದು, ತನ್ನ ಜೊತೆಗಾರರ ಸಹಾಯವನ್ನು ಪಡೆಯುವ ಅವಕಾಶವಿತ್ತು. ಆದರೆ, ಮತ್ತೊಬ್ಬ ವಿದ್ಯಾರ್ಥಿಗೆ ಈ ಅವಕಾಶ ಇರಲಿಲ್ಲ.  ಈ ಸನ್ನಿವೇಶವು, ಕೆಲವು ವಿದ್ಯಾರ್ಥಿಗಳಿಗೆ ಹಣೆಪಟ್ಟಿಯನ್ನು ಹಚ್ಚುವುದನ್ನು ಮಾತ್ರವಲ್ಲದೇ ಅವರನ್ನು ನಗೆಪಾಟಲು ಮಾಡಿ ಅವರ ಆತ್ಮ ಗೌರವ ಮತ್ತು ಆತ್ಮ ವಿಶ್ವಾಸವನ್ನು ಘಾಸಿಗೊಳಿಸುವಂತಹಾ ಅನೇಕ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ.  ಇದಲ್ಲದೇ ಇಂತಹಾ ಪ್ರಕರಣಗಳು, ಒಂದು ಮಾದರಿಯ ಜ್ಞಾನವನ್ನು ಮಾತ್ರ ಬೆಂಬಲಿಸುವ ಕೆಲವು ಶಾಲೆಗಳಲ್ಲಿ ಇತರರನ್ನು ಅವಹೇಳನ ಮಾಡಲು, ಶ್ರೇಣಿಗಳನ್ನು ಸೃಷ್ಠಿಸಲು ಈ ಜ್ಞಾನವನ್ನು ಹೇಗೆ ಆಯುಧವನ್ನಾಗಿ ಬಳಸಲಾಗುವುದು, ವಿದ್ಯಾರ್ಥಿಗಳು ಸಂಪನ್ಮೂಲಗಳ ಲಭ್ಯತೆಯನ್ನು ಹೇಗೆ ಪಡೆಯುತ್ತಾರೆ ಮತ್ತು ವಿದ್ಯಾರ್ಥಿಗಳು ತಮ್ಮ ಜೊತೆಗಾರರಿಗೆ ಹೇಗೆ ಸಹಾಯ ಮಾಡುತ್ತಾರೆ ಎನ್ನುವ ಅನೇಕ ಸಮಸ್ಯೆಗಳತ್ತಲೂ ಗಮನಹರಿಸುವಂತೆ ಮಾಡುತ್ತದೆ.  ತರಗತಿಯಲ್ಲಿ ಅವಹೇಳನಕ್ಕೆ ಒಳಗಾಗುವ ಭಯದಿಂದ ಕೆಲವು ವಿದ್ಯಾರ್ಥಿಗಳನ್ನು ಇಂತಹಾ ಪ್ರಕರಣಗಳು ಖಂಡಿತವಾಗಿಯೂ ಮೌನವಹಿಸುವಂತೆ ಮಾಡುತ್ತವೆ.  ಹೀಗಾಗಿ, ಶಿಕ್ಷಣದ ಉದ್ದೇಶವು ತುಳಿತಕ್ಕೆ ಒಳಗಾದ ಇಂತಹವರಿಗೆ ಧ್ವನಿಯನ್ನು ನೀಡುವ ಗುರಿಯನ್ನು ಹೊಂದಿದ್ದರೂ, ವಾಸ್ತವವಾಗಿ ಅವರನ್ನು ಮೌನಿಯನ್ನಾಗಿಸುತ್ತದೆ.
ನಮ್ಮ ಶಿಕ್ಷಕರಲ್ಲಿ ಕೆಲವರು ಹಿಂದಿನ ಬೆಂಚಿನ ವಿದ್ಯಾರ್ಥಿಗಳು ಅಥವಾ ದಡ್ಡರು ಎಂದು ಹಣೆಪಟ್ಟಿ ಪಡೆದವರ ಭಾಗವಹಿಸುವಿಕೆಯ ಭರವಸೆಯನ್ನು ಮೂಡಿಸಿದರು.  ಕೆಲವೊಮ್ಮೆ ಈ ಶಿಕ್ಷಕರು ತರಗತಿಯಲ್ಲಿ ನೀಡಿದ ಕಾರ್ಯವನ್ನು ಮಾಡುವ ಸಮಯದಲ್ಲಿ ತಪ್ಪದೇ ಅವರ ಪುಸ್ತಕಗಳನ್ನು ಪರಿಶೀಲಿಸುತಿದ್ದರು ಈ ಮೂಲಕ ಅವರೊಡನೆ  ಕೆಲವು ಸಮಯವನ್ನು ತಪ್ಪದೆ ಕಳೆಯುತ್ತಿದ್ದರು. ನಾವೆಲ್ಲರೂ ಭಾಗವಹಿಸುತ್ತಿದ್ದ ತರಗತಿಗಳೆಂದರೆ ಇವು ಮಾತ್ರ..  ನಮ್ಮ ಶಾಲೆಯ ಹೊಸ ಪ್ರಾಂಶುಪಾಲರು ಹೀಗೆ ಚಾಲ್ತಿಯಲ್ಲಿದ್ದ ಹಣೆಪಟ್ಟಿಗಳನ್ನು ತೊಡೆದುಹಾಕಲು ಪ್ರಯತ್ನಿಸಿದರು.  ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ  ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಮೊದಲ ಬಾರಿಗೆ ನಮ್ಮ ಶಾಲೆಯಲ್ಲಿ ನಿಯಮವನ್ನು ರೂಪಿಸಲಾಯಿತು. ಎಂದೂ ಯಾವ ಚರ್ಚಾಸ್ಪರ್ಧೆಯಲ್ಲಿಯೂ ಭಾಗವಹಿಸದ  ವಿದ್ಯಾರ್ಥಿಗಳು ಶಿಕ್ಷಕರ ಸಹಾಯದಿಂದ ಅದಕ್ಕಾಗಿ ತಯಾರಾಗುವಂತೆ ಇವರು ನೋಡಿಕೊಂಡರು. ಅವರು ತಾವೇ ಇದಕ್ಕಾಗಿ ತಮ್ಮ ಸಮಯವನ್ನು ನೀಡಿದರು ಮತ್ತು ಒಂದು ತಂಡದ ಮುಖಂಡರಾಗಿ ಮೊದಲು ಎಂದೂ ಕಾರ್ಯ ನಿರ್ವಹಿಸದಿದ್ದವರನ್ನು ತಂಡದ ನಾಯಕರನ್ನಾಗಿ ಮಾಡಿದರು.  ಇದರಲ್ಲಿ ಕೆಲವು ಗುಂಪಿನವರು ವಿಜಯಿಯೂ ಆದರು.  ಕೆಲವು ವಿದ್ಯಾರ್ಥಿಗಳ ಬಗ್ಗೆ ನನ್ನ ತಿಳಿವಳಿಕೆ ಇದರಿಂದಾಗಿ ಬದಲಾದದ್ದು ನನಗೆ ನೆನಪಿದೆ.  ಶಿಕ್ಷಕರು ನೀಡುತ್ತಿದ್ದ ಹಣೆಪಟ್ಟಿಗಳಿಗೆ ಇದು ಸವಾಲಾಯಿತೋ ಇಲ್ಲವೋ (ಶಿಕ್ಷಕರ ಮನೋಭಾವದಲ್ಲಿ) ನನಗೆ ತಿಳಿಯಲಿಲ್ಲ. ಈ ಅನುಭವಗಳ ಮೂಲಕ ಶಾಲೆಯು ಮೆಚ್ಚುವ ಭಾಷೆ, ಅನುಭವ, ಪೋಷಕರ ಬೆಂಬಲ, ಜ್ಞಾನಾರ್ಜನೆಯ ಲಭ್ಯತೆ ಮತ್ತು ನಡವಳಿಕೆಯನ್ನು ಹೊಂದಿರುವ ಒಂದು ನಿರ್ದಿಷ್ಟ ವರ್ಗ ಅಥವಾ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಪ್ರಶಂಸಿಸುವುದರಿಂದಾಗಿ ಸಂಸ್ಕೃತಿಯೇ ವಿದ್ಯಾರ್ಥಿಗಳ ಬಂಡವಾಳ ಎನ್ನುವ ಆಲೋಚನೆಗೆ  ಇದು ಗಮನ ನೀಡುವಂತೆ  ಮಾಡುತ್ತದೆ. ಇಂತಹಾ ಆನುಭವಗಳು ಸಮಾವೇಶೀಯ ಸಂಸ್ಕೃತಿಯನ್ನು ಸೃಷ್ಟಿಸುವಲ್ಲಿ ಶಿಕ್ಷಕರ ಮತ್ತು ಪ್ರಾಂಶುಪಾಲರ ಪಾತ್ರ  ಎಷ್ಟು ಮುಖ್ಯ ಎಂಬುದನ್ನು  ತೋರಿಸಿಕೊಡುತ್ತದೆ..
ಮತ್ತೊಂದು ಘಟನೆಯೆಂದರೆ, ನಮ್ಮ ಶಾಲಾ ಪ್ರಾಂಶುಪಾಲರು ನಮಗೆ ವಾಣಿಜ್ಯ ವಿಷಯವನ್ನು ಬೋಧಿಸುತ್ತಿದ್ದಾಗ ನಮ್ಮನ್ನು ಷೇರುಗಳು ಎಂದರೆ ಏನು? ಎಂದು ಕೇಳಿದರು; ಚಿಕ್ಕ ವಯಸ್ಸಿನಿಂದ ನನ್ನನ್ನು ನನ್ನ ತಂದೆ ಅವರೊಡನೆ ಕೆಲಸ ಮಾಡುವಂತೆ ತೊಡಗಿಸುತ್ತಿದ್ದರು.  ಇದರಲ್ಲಿ ಸ್ಕೂಟರ್ ದುರಸ್ತಿ ಮಾಡುವುದೊಂದೇ ಅಲ್ಲದೇ ಷೇರುಗಳ ಅರ್ಜಿ ತುಂಬುವುದಕ್ಕೂ ಹೇಳುತ್ತಿದ್ದರು.  ಹೀಗಾಗಿ ನಾನು ನನಗೆ ಸಿಕ್ಕಿದ್ದ ಈ ಅವಕಾಶವನ್ನು ಉಪಯೋಗಿಸಿಕೊಂಡು ಷೇರುಗಳ ಅರ್ಜಿಯ ಬಗ್ಗೆ ಇದ್ದ ಒಂದು ಸಣ್ಣ ವಿವರಣೆಯ ಲೇಖನವನ್ನು ಓದಿದ್ದೆ. ಪ್ರಶ್ನೆಗೆ ಉತ್ತರಿಸುವಾಗ ನಾನು ಕಂಪನಿಗಳು ಹೇಗೆ ಷೇರುಗಳ ಅರ್ಜಿಗಳನ್ನು ವಿತರಿಸುತ್ತವೆ ಅದನ್ನು ತುಂಬುವುದು ಹೇಗೆ ಮತ್ತು ಕಂಪನಿಗೆ ನಾವು ಣ ನೀಡುತ್ತೇವೆ ಅನಂತರದಲ್ಲಿ ಗಳಿಸಿದ ಲಾವನ್ನು ಹೇಗೆ ಹಂಚಲಾಗುತ್ತದೆ ಎನ್ನುವುದನ್ನು ವಿವರಿಸಿದೆ.  ’ಬುದ್ಧಿವಂತ’ ಎಂದು ಗುರುತಿಸಲ್ಪಟ್ಟದ್ದ ನನ್ನ ಸಹಪಾಠಿಯೊಬ್ಬ, ಇದು ತಪ್ಪು ಉತ್ತರ, ನನಗೆ ಸರಿಯಾದ ಉತ್ತರ ತಿಳಿದಿದೆ ಎಂದು ಕೂಗಿದ.  ಶಿಕ್ಷಕರು (ನಮ್ಮ ಪ್ರಾಂಶುಪಾಲರು) ನಾವಿಬ್ಬರೂ ನೀಡಿದ ಉತ್ತರಗಳನ್ನು ಆಲಿಸಿದ ನಂತರ ಒಬ್ಬರ ಉತ್ತರ ಪಠ್ಯಪುಸ್ತಕದಲ್ಲಿ ನೀಡಿರುವಂತಹದ್ದು ಮತ್ತು ಇನ್ನೊಬ್ಬರದು ಪ್ರತ್ಯಕ್ಷ ಅನುಭವ ಎಂದು ಹೇಳಿದರು.  ನಾನು ನನ್ನ ತಂದೆಯೊಡನೆ ಮಾಡಿದ ಕೆಲಸ ನನ್ನ ಶಾಲಾ ಶಿಕ್ಷಣದೊಂದಿಗೆ ಸ್ವಲ್ಪ ಮಟ್ಟಿಗೆ ಸಂಬಂಧಿಸಿದೆ ಎಂದು ಮೊದಲ ಸಲ ನನಗೆ ಅನಿಸಿತು.  ಈ ಘಟನೆಯಲ್ಲಿ ದೈಹಿಕ ಶ್ರಮದ ಕೆಲಸ ಇರದಿದ್ದರೂ, ಇದನ್ನು ಮಕ್ಕಳು ಮನೆಯಲ್ಲಿ ಮಾಡುತ್ತಿರುವ ಕೆಲಸವನ್ನು ಶಿಕ್ಷಣದೊಂದಿಗೆ ಬೆಸೆಯುವುದು, ವಿದ್ಯಾರ್ಥಿಗಳ ಅನುಭವ ಮತ್ತು ಶಿಕ್ಷಣದೊಂದಿಗಿನ ಅವರ ಶ್ರಮದ ಕೆಲಸಕ್ಕೆ ತಳುಕು ಹಾಕಬೇಕಾದ ಪ್ರಾಮುಖ್ಯತೆ ಕಡೆಗೆ ಗಮನ ಸೆಳೆಯುತ್ತದೆ.  ಈ ಪ್ರಕರಣದಲ್ಲಿ ಇರಡು ಉತ್ತರಗಳೂ ಸರಿಯಾಗಿದ್ದವು, ಶಿಕ್ಷಕರು ಎರಡೂ ಉತ್ತರಗಳನ್ನು ಒಪ್ಪಿಕೊಂಡರು ಮತ್ತು ಅದಕ್ಕೆ ಕಾರಣವನ್ನು ವಿವರಿಸಿದರು, ಅಲ್ಲದೇ ಶಿಕ್ಷಕರು ಯಾವ ಉತ್ತರ ಉತ್ತಮವಾದದ್ದು ಮತ್ತು ಯಾವುದು ಕನಿಷ್ಠವಾದದ್ದು ಎಂದು ಅಳೆಯಲಿಲ್ಲ.
ನಮ್ಮ ಶಾಲೆಯು’ಸಮಾವೇಶಿಯಾಗಿದೆ’ ಎಂದು ಹೇಳಿಕೊಳ್ಳಬಹುದಾದ ಕೆಲವೊಂದು ಅಭ್ಯಾಸಗಳು ಆ ಶಾಲೆಯಲ್ಲಿ ಇದ್ದವು; ಶಾಲೆಯು ರಾಜ್ಯ ಮಂಡಳಿಯ ಶಾಲೆ, ಆದರೆ ವಿದ್ಯಾಧಿದೇವತೆಯನ್ನು ಸ್ತುತಿಸುವ ಸಲುವಾಗಿ ’ಸರಸ್ವತೀವಂದನೆ’ಯ ಬದಲು ನಮ್ಮ ಶಾಲೆಯಲ್ಲಿ ವಿಭಿನ್ನವಾದ ಗೀತೆಯನ್ನು ನಾವು ದಿನದ ಅಂತ್ಯದಲ್ಲಿ ಹಾಡುತ್ತಿದ್ದೆವು ಮತ್ತು ಅದರ ನಂತರ ರಾಷ್ಟ್ರ ಗೀತೆಯನ್ನು ಹಾಡುತ್ತಿದ್ದೆವು.  ಪ್ರತೀ ಶನಿವಾರ ವಿಭಿನ್ನ ಧರ್ಮಗಳಾದ ಜೈನ, ಭೌದ್ಧ, ಸಿಖ್, ಇಸ್ಲಾಂ, ಕ್ರೈಸ್ತ ಮತಕ್ಕೆ ಸಂಬಂಧಿಸಿದ ಪ್ರಾರ್ಥನೆಗಳನ್ನು ಹಾಡುತ್ತಿದ್ದೆವು.  ನಾವೆಲ್ಲರೂ ಈ ಪ್ರಾರ್ಥನೆಯನ್ನು ಮಾಡುವಾಗ ನಾವು ಅಂಗೈ ಮುಚ್ಚಿ ನಮಸ್ಕಾರವನ್ನು ಮಾಡುತ್ತಿದ್ದೆವು ಅಂಗೈ ಬಿಚ್ಚಿ ಮುಂದೆ ಹಿಡಿಯುತ್ತಿದ್ದೆವು ಮತ್ತು ಶಿಲುಬೆಯ ಆಕಾರವನ್ನು ಮಾಡಲು ಕೈಗಳನ್ನು ಬಳಸುತ್ತಿದ್ದೆವು.  ಈ ದಿನಕ್ಕಾಗಿ ನಾನು ಎದುರು ನೋಡುತ್ತಿದ್ದೆ ಮತ್ತು ಈ ಪ್ರಾರ್ಥನೆಗಳನ್ನು ಶಾಲಾ ದಿನಚರಿಯ ಪುಸ್ತಕದಿಂದ ಓದುವುದನ್ನು ನಾನು ಬಹಳವಾಗಿ ಆನಂದಿಸುತ್ತಿದ್ದೆ.
ಪ್ರಸ್ತುತ ಸಂದರ್ಭದಲ್ಲಿ  ಪಠ್ಯಕ್ರಮವನ್ನು ಕೇಸರೀಕರಣಗೊಳಿಸುತ್ತಿರುವ ವಿಚಾರ ಚರ್ಚೆ ವಿವಾದ ನಡೆಯುತ್ತಿದೆ  ಹೀಗಿರುವಾಗ ಶಾಲೆಗಳು sಸರ್ವಧರ್ಮಸಮಭಾವದಿಂದಿದ್ದು  ಅಲ್ಲಿ ಯಾವುದೇ ಧರ್ಮದ ಪ್ರಚಾರವನ್ನು ಮಾಡಬಾರದು ಎಂದು ಭಾರತದ ಸಂವಿಧಾನವು ಹೇಳಿದ್ದರೂ ಅದನ್ನು ಗಣಿಸದೇ  ಸರ್ಕಾರಿ ಶಾಲೆಗಳು ತಾವು ಸಾರ್ವಜನಿಕ ಸಂಸ್ಥೆಗಳಾಗಿದ್ದರೂ, ಅಲ್ಲಿ ಸರಸ್ವತೀ ದೇವಿಯ ವಿಗ್ರಹವನ್ನು ಸ್ಥಾಪಿಸುವುದು ಮತ್ತು ಸರಸ್ವತಿಯ ಪ್ರಾರ್ಥನೆಯನ್ನು ಮಾಡುವುದು ನಡೆಯುತ್ತಲೇ ಇದೆ.  ನಾನು ೯೦ರ ದಶಕದಲ್ಲಿ ಓದುತ್ತಿದ್ದಂತಹಾ ಈ ಶಾಲೆಯು ಆ ಸಮಯದಲ್ಲಿದ್ದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುತಿದ್ದಿರಬೇಕು ಅಥವಾ ಖಾಸಗೀ ಶಾಲೆಯಾಗಿದ್ದು ಸುಲಭವಾಗಿ ’ಬಹುಸಂಖ್ಯಾತರ’ ಸಂಸ್ಕೃತಿಯನ್ನು ಪ್ರಚಾರ ಮಾಡುಬಹುದಾಗಿದ್ದರೂ ವಾಡಿಕೆಯಂತೆ ಮಾಡದೆ ಮತ್ತೊಂದು ಮಾರ್ಗವನ್ನು ಅನುಸರಿಸಿ ಅಪರೂಪದ ಶಾಲೆಯಾಗಿರಬೇಕು.
ನಾವು ವಿದ್ಯಾಭ್ಯಾಸ ಮಾಡುತ್ತಿದ್ದ ಶಾಲೆಯು ಒಂದು ನಿರ್ದಿಷ್ಟ ವರ್ಗದವರಿಗೆ ಸೀಮಿತವಾಗಿದ್ದರೂ ನಮ್ಮಲ್ಲಿ ಪ್ರತಿಯೊಬ್ಬರೂ ಬಹಿಷ್ಕೃತ ಮತ್ತು ತಾರತಮ್ಯಕ್ಕೆ ಒಳಗಾದ ಅನುಭವವನ್ನು ಸ್ಮರಿಸಿಕೊಳ್ಳಬಹುದು.  ಈ ರೀತಿಯ ತಾರತಮ್ಯವು ವರ್ಗದ ಗುರುತಿಸುವಿಕೆ, ಜಾತಿ, ಧರ್ಮ, ಲಿಂಗ, ಗ್ರಾಮ್ಯ-ನಗರ ಇವುಗಳನ್ನು ಆಧರಿಸಿದ ಭಿನ್ನತೆಗಳು ಅಥವಾ ಬುಡಕಟ್ಟು-ಬುಡಕಟ್ಟೇತರ ಸಂಸ್ಕೃತಿಗಳ ಆಧಾರದ ಮೇಲೆ ಮಾಡಿರುವಂತಹದ್ದಾಗಿದ್ದವು.  ವಾಸ್ತವವಾಗಿ ಶೈಕ್ಷಣಿಕ ಭಿನ್ನತೆಗಳು ಎಂದು ತೋರುವ ಘಟನೆಗಳೂ ಒಟ್ಟಾರೆಯಾಗಿ ಒಂದು ನಿರ್ದಿಷ್ಠ ಗುಂಪಿಗೆ ಅನುಕೂಲಕರವಾಗಿರುವಂತೆ ರಚಿಸಿರುವ ಪಠ್ಯಕ್ರಮ ಮತ್ತು ಶಾಲೆಗಳು ಒಪ್ಪಿಕೊಳ್ಳುವಂತಹ ಜ್ಞಾನ ಗ್ರಹಣ, ಬೋಧನಾ ತತ್ವಗಳು ಮತ್ತು ಮೌಲ್ಯಮಾಪನದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದವು.  ಆದರೆ ನಮ್ಮಲ್ಲಿ ಧನಾತ್ಮಕ ಅನುಭವಗಳೂ ಬಹಳಷ್ಟಿದ್ದವು.  ಅಲ್ಲಿ ನಾವು ಶಿಕ್ಷಕರ ಮಮತೆ ಮತ್ತು ಕಾಳಜಿಯನ್ನು ಅನುಭವಿಸಿದ ಸನ್ನಿವೇಶಗಳು, ಪ್ರತಿಯೊಬ್ಬರಿಗೂ ಭಾಗವಹಿಸುವ ಅವಕಾಶವಿದೆ ಎಂಬ ಭಾವನೆಯನ್ನು ಮೂಡಿಸಿದ್ದಂತವು, ಭಾಗವಹಿಸಲು ಪ್ರತಿಯೊಬ್ಬರೂ ಬೆಂಬಲವನ್ನು ಪಡೆದುಕೊಳ್ಳಬಹುದು ಎನ್ನುವಂತಹದ್ದು, ವಿಭಿನ್ನತೆಯನ್ನು ಸಹಿಸಿಕೊಂಡಿದ್ದು ಮಾತ್ರವಲ್ಲದೇ ಅಸಂಖ್ಯಾತ ವಿಧಗಳಲ್ಲಿ ಸಂಭ್ರಮಿಸಿದ್ದು ಮತ್ತು ಉನ್ನತ ಸ್ತರೀಕರಣಗಳಿಗೆ ಸವಾಲು ಹಾಕಿದ್ದು, ತಾರತಮ್ಯತೆಯ ವಿರುದ್ಧ ಧ್ವನಿ ಎತ್ತಿದ್ದು, ಇಂತಹಾ ಅನೇಕ ಅನುಭವಗಳು ಇದ್ದವು.
ಯಾವ ಶಾಲೆಯಲ್ಲಿ ನಾನು ಕೆಲವೊಮ್ಮೆ ನನ್ನನ್ನು ಅವಹೇಳನಕ್ಕೆ ಒಳಪಡಿಸಿದ, ತಾರತಮ್ಯವನ್ನು ತೋರಿದ, ಕೆಲವೊಮ್ಮೆ ನನ್ನನ್ನು ತನ್ನೊಳಗೆ ಒಂದಾಗಿಸಿಕೊಂಡ, ಹಮ್ಮೆ ಪಡುವಂತೆ ಮಾಡಿದ ಮತ್ತು ಕೆಲವೊಮ್ಮೆ ನನ್ನಲ್ಲಿ ಸಾಧನೆಯ ಭಾವನೆಯನ್ನು ಮೂಡಿಸಿದ ಅನುಭವಗಳನ್ನು ಪಡೆದೆನೋ ಅದೇ ಶಾಲೆಯು ನನ್ನನ್ನು ಟಾಟಾ ಸಮಾಜ ವಿಜ್ಞಾನ ಸಂಸ್ಥೆಯಂತಹಾ ಕಡೆಯಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆಯಲು ಸಂಶೋಧನಾತ್ಮಕ ಅಧ್ಯಯನ ಮಾಡುವಂತೆ ಸಜ್ಜುಗೊಳಿಸಿತು.  ಆ ಶಾಲೆಯು ವರ್ಗ, ಜಾತಿ, ಲಿಂಗ, ಮೇಲು ಕೆಳಗು ಭಾವಗಳನ್ನು  ಮತ್ತು ಧಾರ್ಮಿಕ ಭಿನ್ನತೆಗಳನ್ನು ತಾನೂ ಬಿಂಬಿಸುತ್ತಾ ತನ್ನ ಪಾತ್ರವನ್ನು ವಹಿಸಿತೇ ಅಥವಾ ಅಂತಹಾ ಕೆಲವೊಂದು ತರತಮ ಮೇಲು ಕೀಳು ಭಾವಗಳಿಗೆ  ಸವಾಲೆಸೆಯುವಂತೆ ಸಹಾಯ ಮಾಡಿತೆ? ಅಥವಾ, ಶಿಕ್ಷಣದ ವಿಸ್ತರಣೆಯಿಂದ ಪ್ರಯೋಜನವನ್ನು ಪಡೆದ ನಗರದ ಮಧ್ಯಮ ವರ್ಗದ ಸಮುದಾಯಕ್ಕೆ ಸೇರಿದವರು ಎಂದು ನನ್ನನ್ನು ನಾನೇ ಪರಿಗಣಿಸಬಹುದೇ? ಉದ್ದಿಮೆಯಾಧಾರಿತ ತರಬೇತಿಗಳನ್ನು ಸೇರಿದವರು ಮತ್ತು ಉನ್ನತ ಶಿಕ್ಷಣವನ್ನು ಮುಂದುವರೆಸಬಲ್ಲವರು ಎಂದು ನಮಗೆ ಶ್ರೇಯಾಂಕ ನೀಡಿ  ಪ್ರತ್ಯೇಕಿಸಿತು ಮತ್ತು ಇದರಿಂದಾಗಿ ಸಾಮಾಜಿಕ ತರತಮ ಭೇಧಗಳು ಹೋಗಿ ಶೈಕ್ಷಣಿಕ ತರತಮ ಭೇಧಗಳನ್ನು ಸೃಷ್ಟಿಸಿದೆ -ವೆಲಾಸ್ಕರ್ (೨೦೦೫).
ಅನೇಕ ಸಾಮಾಜಿಕ ಗುಂಪುಗಳನ್ನು ಪ್ರಭಾವಿಸುವ ಕೌಟುಂಬಿಕ ಆಕಾಂಕ್ಷೆಗಳ ಕವಲು ಮಾರ್ಗಗಳು, ಶಾಲಾ ಚಲನಶೀಲತೆ ಮತ್ತು ಸಾಮಾಜಿಕ-ರಾಜಕೀಯ ಪರಿಸ್ಥಿತಿಯ ಬೃಹತ್ ಭಾಗದ ಬಗ್ಗೆ ಇಂತ ಅನೇಕ ಪ್ರಶ್ನೆಗಳನ್ನು ನಾವು ಎತ್ತ ಬಹುದು.  ನಾನು ಎಲ್ಲಿಂದ ಪ್ರಾರಂಭಿಸಿದೆನೋ ಅಲ್ಲಿಯೇ ಮುಕ್ತಾಯ ಮಾಡಲು ಬಯಸುತ್ತೇನೆ - ತನ್ನ ಜಾತಿಯ ಗುರುತಿಸುವಿಕೆಯಿಂದ ಅವಹೇಳನಕ್ಕೆ ಒಳಗಾದ ಬಾಲಕಿಯು ಸ್ನಾತಕೋತ್ತರ ಪದವಿಯವರೆಗೂ ಅಧ್ಯಯನ ಮಾಡಿದಳು ಮತ್ತು ಶ್ರಮಿಕೇತರ ಹುದ್ದೆ’ಯನ್ನು ಸೇರಿದಳು.  ಅವಳಿಗೆ ಮತ್ತು ನನ್ನಂತಹ ಇನ್ನೂ ಅನೇಕರಿಗೆ ನಮ್ಮ ಕುಟುಂಬದಲ್ಲಿ ಮೆಟ್ರುಕ್ಯುಲೇಶನ್ ವಿದ್ಯಾಭ್ಯಾಸಕ್ಕಿಂತ ಮುಂದೆ ವಿದ್ಯಾಭ್ಯಾಸವನ್ನು ಮುಂದುವರೆಸಿದವರಲ್ಲಿ ನಾವೇ ಮೊದಲಿಗರಾಗಿದ್ದರೂ, ನಮಗೆ ಉನ್ನತ ಶಿಕ್ಷಣಕ್ಕೆ ಮತ್ತು ಕಾರ್ಮಿಕ ಮಾರುಕಟ್ಟೆಗೆ ಪ್ರವೇಶವನ್ನು ಪಡೆಯಲು ವ್ಯವಸ್ಥೆಯು ಅನೇಕ ಅವಕಾಶಗಳನ್ನು ಸೃಷ್ಟಿಸಿತು.  ನಗರದ ಮಧ್ಯಮ ವರ್ಗದ ಬಾಲಕಿ ಯಾಗಿದ್ದರೂ ಪಿತೃಪ್ರಧಾನತೆ, ಜಾತಿ ಮತ್ತು ವರ್ಗದ ರಚನೆಗಳಿಗೆ ಸವಾಲೆಸೆಯುವ ಮತ್ತು ನನ್ನದೇ ಸ್ಥಾನವನ್ನು ಸೃಷ್ಟಿಸಿಕೊಳ್ಳಲು ಅವಕಾಶ ಪಡೆದುಕೊಳ್ಳುವಲ್ಲಿ ಶಿಕ್ಷಣ ಮತ್ತು ನನ್ನ ಶಾಲೆಯು ವಹಿಸಿದ ಪಾತ್ರವನ್ನು ನಾನು ಕಡೆಗಣಿಸಲಾಗುವುದಿಲ್ಲ.
ನಾನು ಡಾಕ್ಟರೇಟ್ ಪದವಿ ಪಡೆಯುವ ಸಮಯದಲ್ಲಿ ನಡೆಸಿದ ಸಂಶೋಧನಾ ಅಧ್ಯಯನವಾದ  ಶಾಲೆಗಳಲ್ಲಿ ಸಮಾಜಿಕ ಸಮಾವೇಶಿತ್ವ: ವಿದ್ಯಾರ್ಥಿಗಳ, ಶಿಕ್ಷಕರ ಮತ್ತು ಪೋಷಕರ ಅನುಭವಗಳು ಪ್ರಬಂಧವನ್ನು ಬರೆಯುವ ಸಮಯದಲ್ಲಿ ಮೇಲ್ವಿಚಾರಕರಾದ ಪ್ರೊಫೆಸರ್ ನಂದಿನಿ ಮಂಜ್ರೇಕರ್‌ರವರಿಗೆ ನನ್ನ ಧನ್ಯವಾದಗಳು.  ಅವರ ಸಲಹೆಯೆ ಮೇರೆಗೆ ನಾನು ಚಿಂತನೆ ನಡೆಸಿ ನನ್ನ ಶಾಲಾ ಅನುಭವಗಳ ಬಗ್ಗೆ  ಬರೆದಿದ್ದೇನೆ.
ದೀಪಿಕಾರವರು ಸರ್ಕಾರಿ ಶಾಲೆಗಳನ್ನು ಉತ್ತಮಗೊಳಿಸುವ ಮತ್ತು ಶಾಂತಿಯನ್ನು ಹರಡಲು ಹಾಗೂ ಸಂಘರ್ಷಗಳ ಶಮನಕ್ಕೆ  ಶಿಕ್ಷಣವನ್ನು ಸಾಧನವನ್ನಾಗಿ ಬಳಸಿಕೊಳ್ಳುವ ಉದ್ದೇಶದಿಂದ ಸುಮಾರು ಹನ್ನೊಂದು ವರ್ಷಗಳ ಕಾಲ ಪ್ರಾಥಮಿಕ ಶಿಕ್ಷಣದ ಸಮಸ್ಯೆಗಳ ಮೇಲೆ ಕೆಲಸ ಮಾಡಿದ್ದಾರೆ.  ಪ್ರಸ್ತುತ ಇವರು ಮುಂಬೈನ ಟಾಟಾ ಸಮಾಜ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾರೆ.  ಇವರನ್ನು mswdeepik a@gmail.com ಇಲ್ಲಿ ಸಂಪರ್ಕಿಸಬಹುದು. 
 
 
 
 
18934 ನೊಂದಾಯಿತ ಬಳಕೆದಾರರು
7394 ಸಂಪನ್ಮೂಲಗಳು