ಸಮಾವೇಶಿ ಶಿಕ್ಷಣ : ಮುಂದಿರುವ ದಾರಿ

 
“ಸಮಾವೇಶಿ ಶಿಕ್ಷಣ” (Inclusive Education) ಎಂಬ ಪದಕ್ಕೆ ಹೆಚ್ಚು ಕಡಿಮೆ ಜಾಗತಿಕ ಮಟ್ಟದಲ್ಲಿ ಸರ್ವಸಮ್ಮತಿ ಸಿಕ್ಕಿದ್ದರೂ ‘ಸಮಾವೇಶನ’ ಪ್ರಕ್ರಿಯೆಯನ್ನು ವ್ಯಾಖ್ಯಾನಿಸುವುದು ಹಾಗೂ ರೂಢಿಗೆ ತಂದಿರುವ ಬಗ್ಗೆ ಒಂದಷ್ಟು ಅಭಿಪ್ರಾಯ ಭಿನ್ನತೆ ಇರುವುದು ನಿಜ. ಬೇರೆ ಬೇರೆ ಇರಿಸುವ ನೀತಿಗಳು ಹಾಗೂ ರೂಢಿಗತ ವಿಧಾನಗಳನ್ನು ವಿರೋಧಿಸಿ ಸವಾಲಾಗಿ ಸ್ವೀಕರಿಸುವ  ನಿಟ್ಟಿನಲ್ಲಿ ಸಮಾವೇಶಿ ಶಿಕ್ಷಣ ಪರಿಕಲ್ಪನೆಯು ರೂಪುಗೊಂಡಿದೆ ಹಾಗು  ಮುಖ್ಯವಾಹಿನಿಯ ಶಾಲೆಗಳಲ್ಲಿ ಎಲ್ಲ ವಿದ್ಯಾರ್ಥಿಗಳ ಕಲಿಕಾ ಅಗತ್ಯತೆಗಳನ್ನು ಈಡೇರಿಸಬಹುದಾದ ಪರಿಣಾಮಕಾರಿ ವಿಧಾನವಾಗಿದೆ. ಇನ್ನೂ ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಶಿಕ್ಷಣ, ಉದ್ಯೋಗ, ಗ್ರಾಹಕ, ಮನೋರಂಜನೆ, ಸಮುದಾಯ ಹಾಗೂ ಇನ್ನಾವುದೇ ನಿತ್ಯದ ಸಾಮಾಜಿಕ ರಂಗದ ಚಟುವಟಿಕೆಗಳಲ್ಲಿ ಅಸಮರ್ಥ ವ್ಯಕ್ತಿಗಳು ಪಾಲ್ಗೊಳ್ಳುವ ಅವಕಾಶ ಕಲ್ಪಿಸುವುದೇ ‘ಸಮಾವೇಶನ’.ಇದರಲ್ಲಿ ಬೌದ್ಧಿಕ ಅಸಾಮರ್ಥ್ಯವುಳ್ಳ ವ್ಯಕ್ತಿಗಳೂ ಸೇರುತ್ತಾರೆ.
ಅಸಮರ್ಥ ವ್ಯಕ್ತಿಗಳು ಅದರಲ್ಲೂ ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಗಳಿಗೆ ಹೊಂದಿಕೆಯಾಗುವ ಜೀವನ ಶೈಲಿಗಳನ್ನು ರೂಪಿಸಲು ಮಾಡಿದ ಹುಡುಕಾಟದಲ್ಲಿ ಅನೇಕ ಮೈಲಿಗಲ್ಲುಗಳನ್ನು ಕ್ರಮಿಸಲಾಗಿದೆ. ಹಾಗೂ ಯುಎನ್‍ಸಿಆರ್‍ಪಿಡಿ (ಯುನೈಟೆಡ್ ನೇಷನ್ಸ್ ಕನ್ವೆನ್ಶನ್ ಆನ್ ದಿ ರೈಟ್ಸ್ ಆಫ್ ಪರ್ಸನ್ಸ್ ವಿತ್ ಡಿಸ್‍ಅಬಿಲಿಟೀಸ್)ಇದರಲ್ಲಿ ಒಂದು.
 
ಕಳೆದ ಒಂದು ದಶಕದಲ್ಲಿ ಬೌದ್ಧಿಕ ಅಸಾಮರ್ಥ್ಯವುಳ್ಳ ಮಕ್ಕಳ ಅಗತ್ಯಗಳನ್ನು ಈಡೇರಿಸಲು ನಡೆಯುತ್ತಿರುವ ಒಟ್ಟಾರೆ ಕಾರ್ಯತಂತ್ರಗಳು ತೀವ್ರ ಗತಿಯಲ್ಲಿ ಬದಲಾವಣೆ ಕಾಣುತ್ತಿವೆ ಮತ್ತು ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಬೆಳವಣಿಗೆಗಳ ಜೊತೆಜೊತೆಯಲ್ಲೇ ಹೆಜ್ಜೆ ಹಾಕಲು ಪ್ರಯತ್ನಿಸುತ್ತಿದೆ, ಹಾಗಿದ್ದರೂ, ಪಶ್ಚಿಮ ದೇಶಗಳಲ್ಲಿ ಸಾಫಲ್ಯ ಕಂಡ ಅಂಶಗಳನ್ನೇ ಮುಂದೆ ನಾವು ಸಂಪೂರ್ಣವಾಗಿ ಸ್ವೀಕರಿಸಿ, ಅಳವಡಿಸಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಬೇಕು. ಇಲ್ಲಿಯವರೆಗೆ ಅನುಸರಿಸಿಕೊಂಡು ಬಂದಿರುವ ಅಭ್ಯಾಸವೆಂದರೆ ಒಂದು ಪ್ರತ್ಯೇಕ ಶಿಕ್ಷಣ ವ್ಯವಸ್ಥೆ ವಿಧಾನವನ್ನು ಬಳಸುವುದು.ಆದರೆ ಇದರಿಂದ ಆ ಮಕ್ಕಳು ಸಾಮಾಜಿಕವಾಗಿ ಪ್ರತ್ಯೇಕವಾಗುತ್ತಾರೆ ಹಾಗೂ ಇತರರಿಂದ ದೂರವುಳಿಯುತ್ತಾರೆ. ಒಂದು ಮಗುವು ಶಾಲೆಯನ್ನು ಪ್ರವೇಶಿಸುವ ಮೊದಲ ವರ್ಷವೇ ಆ ಮಗುವಿನ ಮೊತ್ತಮೊದಲ ಸಾಮಾಜಿಕ ಸಂಪರ್ಕ ಮತ್ತು ಮಗುವು ಅದರ ಪರಿಣಾಮಕ್ಕೆ ಒಳಗಾಗುವ ಕಾಲ. ಹೀಗಿರುವಾಗ ಶಿಕ್ಷಣದ ಆರಂಭದಲ್ಲಿಯೇ ಈ ಮಕ್ಕಳಿಗೆ ಪ್ರತ್ಯೇಕ ಜಗತ್ತನ್ನು ಸೃಷ್ಟಿ ಮಾಡಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ “ಸಮಾವೇಶಿ ಶಿಕ್ಷಣವು” ಹೆಚ್ಚು ಸಮ್ಮಿಲಿತ ಸಮುದಾಯದ ನಿರ್ಮಾಣಕ್ಕೆ ಬುನಾದಿ ಹಾಕುತ್ತದೆ. ಇಲ್ಲಿ ‘ಭಿನ್ನವಾಗಿರುವುದನ್ನು’ ಯಥಾವತ್ ಸ್ವೀಕರಿಸಿ, ಮನುಕುಲದ ನೂರಾರು ಬಗೆಯಲ್ಲಿ ಇದೂ ಒಂದು ಎಂದು ಮಾನ್ಯತೆ ನೀಡಲಾಗುತ್ತದೆ. ಹೀಗಾಗಿ ಸಮಾವೇಶಿ ಶಿಕ್ಷಣವು ಬೇಕು ಎಂಬ ವಾದಕ್ಕೆ ಕೇವಲ ಶೈಕ್ಷಣಿಕ ಕಾರಣ ಮಾತ್ರ ಇರುವುದಿಲ್ಲ. ಅದಕ್ಕೆ ಪ್ರಬಲ ಸಾಮಾಜಿಕ ಹಾಗೂ ನೈತಿಕ ವಾದಗಳೂ ಇವೆ. ಈ ಮಕ್ಕಳನ್ನು ದೂರ ಇರಿಸುವುದರಿಂದಾಗುವ ಅಪಾಯಗಳು ಹಾಗೂ ಅದರ ದೂರಗಾಮಿ ಪರಿಣಾಮಗಳ ಬಗ್ಗೆ ಕೂಡ ನಾವು ಅರಿತಿರಬೇಕು.
 
ಹಾಗಾದರೆ, ನಮ್ಮ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಮಾವೇಶನದ ಅಂಶವನ್ನು ಹೇಗೆ ಅನುಷ್ಠಾನ ಮಾಡಬಹುದು? ಈ ಪ್ರಕ್ರಿಯೆಯಲ್ಲಿ ಹಲವು ಬಗೆಯ ಪರಿಸ್ಥಿತಿಗಳು ನಮ್ಮ ಮುಂದಿವೆ, ಅವುಗಳತ್ತ ಗಮನ ಹರಿಸಬೇಕು ಮತ್ತು ಪರಿಹರಿಸಬೇಕು. ಮೊಟ್ಟ ಮೊದಲಿಗೆ ನಾವು ಅರಿತುಕೊಳ್ಳಬೇಕಾದುದು ಏನೆಂದರೆ, ಸಮಾವೇಶಿ ಶಿಕ್ಷಣವು ಶಾಲೆಯ ಗೇಟಿನೊಳಗೆ ಮಾತ್ರ ಸೀಮಿತವಾಗುವುದಿಲ್ಲ್ಲ. ಶಾಲೆಯ ಗೇಟನ್ನೂ ದಾಟಿ ತರಬೇತಿ, ಉದ್ಯೋಗ ಹಾಗೂ ಸೂಕ್ತವಾದ ಜೀವನ ಶೈಲಿ ಆರಿಸಿಕೊಳ್ಳಲು ಬೇಕಾದ ಅಗತ್ಯ ಅವಕಾಶಗಳೆಡೆಗೆ ಮುಂದೆ ಸಾಗುತ್ತದೆ.ಅಂದರೆ ಬೌದ್ಧಿಕ ಅಸಾಮರ್ಥ್ಯ ಇದ್ದವರು ಕೂಡ ತಮ್ಮ ಬದುಕನ್ನು ಪ್ರಭಾವಿಸುವ ಸಂಗತಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಶಕ್ತರಾಗುವಂತೆ ಇದು ಮಾಡಬೇಕು.ಇದರರ್ಥ ಜಾಗೃತ ಸಮಾಜ ನಿರ್ಮಾಣವಾಗಿ, ಮಗುವಿನ ಸ್ವಂತ ಕುಟುಂಬದಿಂದ ಹಿಡಿದು ಇಡಿ ಸಮುದಾಯದಿಂದ ಅದಕ್ಕೆ ಬೆಂಬಲ ಸಿಗಬೇಕು. ಎರಡನೆಯದಾಗಿ, ಬೌದ್ಧಿಕ ಸಾಮರ್ಥ್ಯವುಳ್ಳ ಮಕ್ಕಳ ತಂದೆತಾಯಿಯರಿಂದ ಕೆಲವೊಂದು ಪ್ರತಿಕ್ರಿಯೆಯನ್ನು ನಿರೀಕ್ಷಿಸ ಬೇಕಾಗುತ್ತದೆ. ಈ ಶಿಕ್ಷಣದ ಬಗ್ಗೆ ಅವರಲ್ಲಿ ಸಾಕಷ್ಟು ಆತಂಕ ಹಾಗೂ ತಪ್ಪು ತಿಳಿವಳಿಕೆಗಳು ಇವೆ. ಕೊನೆಯದಾಗಿ, ಭಾರತದಲ್ಲಿ ಪಾಶ್ಚಿಮಾತ್ಯ ಶೈಕ್ಷಣಿಕ ಪದ್ಧತಿಯನ್ನು ಆಧರಿಸಿದ ಸುಸಜ್ಜಿತ ಶಾಲಾ ವ್ಯವಸ್ಥೆ ಇರುವುದರಿಂದ ಬೇರೆಯದೇ ಸ್ವರೂಪದ ಆರಂಭಿಕ ಹಂತವನ್ನು ನಾವು ಹೊಂದಿದ್ದೇವೆ.
ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಲೇಬೇಕಾಗಿದೆ. ಆದರೆ ನಮ್ಮ ಮುಂದಿರುವ ಬಲು ದೊಡ್ಡ ಪ್ರಶ್ನೆಯೆಂದರೆ, ಈಗ ಚಾಲ್ತಿಯಲ್ಲಿ ಇರುವ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಡೆದು ಹಾಕಿ, ಹೊಸದಾದ ಕೆಲಸ ಕಾರ್ಯ ಮತ್ತು ಜವಾಬ್ದಾರಿಗಳನ್ನು ಮೊದಲಿನಿಂದ ಸ್ಥಾಪಿಸಬೇಕೇ? ಎಂಬುದು. ಇದನ್ನಂತೂ ಖಂಡಿತವಾಗಿಯೂ ನಾವು ಮಾಡಲು ಸಾಧ್ಯವಿಲ್ಲ. ಅಸಾಮಥ್ರ್ಯ ಹೊಂದಿರುವ ಮಕ್ಕಳಿಗೆ ವಿಶೇಷ ಶಿಕ್ಷಕರು, ವಿಶೇಷ ಸಂಪನ್ಮೂಲ ಹಾಗೂ ವಿಶೇಷ ಕಾರ್ಯವಿಧಾನದೊಂದಿಗೆ ಕೆಲವೊಮ್ಮೆ ವಿಶೇಷ ವಾತಾವರಣದ ಅಗತ್ಯವಿದೆ. ಈ ‘ವಿಶೇಷ ವಿಧಾನಗಳು’ ಎನ್ನುವ ವಿಧಾನಗಳು ಮಕ್ಕಳನ್ನು ಕೇಂದ್ರೀಕರಿಸಿದ ಉತ್ತಮವಾದ ಕಲಿಕಾ ಪದ್ಧತಿಗಳೇ ಆಗಿದ್ದು, ಅಸಾಮರ್ಥ್ಯ ಹೊಂದಿದ ಮಕ್ಕಳು ಮಾತ್ರವಲ್ಲ ಅನ್ಯಥಾ ಎಲ್ಲಾ ಮಕ್ಕಳು ಕೂಡ ಇದರಿಂದ ಹೆಚ್ಚು ಪ್ರಯೋಜನ ಪಡೆಯಬಲ್ಲರು.ಇಲ್ಲಿ ನಾವು ಗಮನ ಇರಿಸಬೇಕಾದ ಅಂಶವೆಂದರೆ ಭಿನ್ನ ಸ್ವರೂಪದ ಮಕ್ಕಳನ್ನು ಒಳಗೊಂಡು  ಎಲ್ಲಾ ಮಕ್ಕಳೂ ಕಲಿಯುವಂಥ ಜತೆಗೆ ಅಸಾಮರ್ಥ್ಯ ಹೊಂದಿದ ಮಕ್ಕಳು ಕಲಿಯುವಂತಹ ಸೃಜನಶೀಲ ವಾತಾವರಣ ಏರ್ಪಡಿಸಬೇಕು. ಇಲ್ಲಿರುವ ಸವಾಲು ಕೇವಲ ವಿಶೇಷ ಶಿಕ್ಷಣತಜ್ಞರ ಕೌಶಲ್ಯವನ್ನು ಬಳಸಿಕೊಳ್ಳುವುದಷ್ಟೇ ಅಲ್ಲ, ವಾಡಿಕೆಯ ಶಾಲೆಗಳ ಶಿಕ್ಷಕರು ವಿಶೇಷ ಶಿಕ್ಷಣತಜ್ಞರ ಜೊತೆ ಸಂವಾದದ ಮೂಲಕ ಶಾಲಾ ಕೊಠಡಿಯಲ್ಲಿನ ಬೇರೆ ಬೇರೆ ಬಗೆಯ ಮಕ್ಕಳ ಅಗತ್ಯತೆಗೆ ಹೇಗೆ ಸ್ಪಂದಿಸುವುದು ಎಂಬುದನ್ನು ಕಲಿಯುವ ಬಗ್ಗೆ ನೆರವು ನೀಡುವುದೂ ಸೇರಿದೆ.
 
ಮಗುವನ್ನೇ ಕೇಂದ್ರವಾಗಿಟ್ಟು ಕೊಂಡ ಬೋಧನಾ ವಿಧಾನ ಮತ್ತು ಸ್ಫೂರ್ತಿದಾಯಕ ವಾತಾವರಣವನ್ನು  ಕಲ್ಪಿಸುವುದೇ ಉತ್ತಮ ಬೋಧನೆಗೆ ಅಗತ್ಯವಾಗಿ ಬೇಕಾದ ಆಂಶ ಎಂಬುದನ್ನು ಹಲವು ಸಂಶೋಧನೆಗಳ ಮೂಲಕ ಕಂಡುಕೊಳ್ಳಲಾಗಿದೆ. ವಿಶೇಷ ಶಿಕ್ಷಕರು ಮಾತ್ರವೇ ವಿಶೇಷ ಕೌಶಲಗಳನ್ನು ನಿರ್ವಹಿಸಬಲ್ಲರು ಎಂಬುದು ತಪ್ಪು. ಆದ್ದರಿಂದ, ಸಮಾವೇಶಿ ಶಿಕ್ಷಣ ಎಂಬುದು ವಿಶೇಷ ಶಿಕ್ಷಣವನ್ನು ಇನ್ನಷ್ಟು ಸಮಾವೇಶಿಯಾಗಿ ಮಾಡುವುದಲ್ಲ ಅಂತಲ್ಲ, ಬದಲಾಗಿ ಸಾಮಾನ್ಯ ಶಿಕ್ಷಣವನ್ನು ಇನ್ನಷ್ಟು ಸಮಾವೇಶಿಯಾಗಿ ಮಾಡುವುದು. ಇದರ ಬಗ್ಗೆ ಹಲವು ನುರಿತ ಶಿಕ್ಷಕರಿಗೆ ಚೆನ್ನಾಗಿ ಗೊತ್ತಿದೆ. ಇದರ ಆಧಾರದ ಮೇಲೆಯೇ ಹೊಸತನ್ನು ನಿರ್ಮಿಸಲು ಅವರು ತಮ್ಮ ಅನುಭವವನ್ನು  ಬಳಸಿಕೊಳ್ಳುತ್ತಾರೆ. ಮಿಶ್ರ ಸ್ವರೂಪದ ವಿದ್ಯಾರ್ಥಿ ಗುಂಪಿನಲ್ಲಿ ಇದು ಯಶಸ್ವಿಯಾಗುತ್ತದೆ, ಇದೇ ಒಳ್ಳೆಯದು  ಯಾಕೆಂದರೆ ಜೀವ£ದಲ್ಲೂ ನಮ್ಮ ಒಡನಾಟ ಬಗೆ ಬಗೆಯ ಜನರೊಂದಿಗೆ ಆಗುತ್ತದೆ, ಸಮಾವೇಶಿ ಶಿಕ್ಷಣ ವಿಧಾನವನ್ನು ಅನುಸರಿಸುತ್ತಿರುವ ಜಗತ್ತಿನ ಹಲವು ದೇಶಗಳ ಶಾಲೆಗಳಿಂದ ದೊರೆತ ಸಾಕ್ಷ್ಯಗಳ ಪ್ರಕಾರ ಕಂಡುಬಂದ ಅಂಶವೆಂದರೆ, ಅಸಾಮಥ್ರ್ಯ ಹೊಂದಿದ ಮಕ್ಕಳನ್ನು ಸಾಮರ್ಥ್ಯ ಹೊಂದಿದ ಮಕ್ಕಳು ಸಹಪಾಠಿಯಾಗಿ ಯಾವುದೇ ಅಳುಕು ಇಲ್ಲದೇ ಸ್ವೀಕರಿಸುತ್ತಾರೆ.  ಹಾಗೆಂದಾಕ್ಷಣ ವಿಶೇಷ ಶಿಕ್ಷಕರು ಅಲ್ಲಿಂದ ಹೊರ ಕಳುಹಿಸ ಬೇಕಾಗಿಲ್ಲ. ಅವರು ಮುಖ್ಯವಾಹಿನಿಯ ಶಾಲೆಗಳಲ್ಲಿ ಅಸಾಮಥ್ರ್ಯ ಹೊಂದಿದ ಮಕ್ಕಳ ಜೊತೆ ಕೆಲಸ ಮಾಡುವ ಬಗ್ಗೆ ನೆರವು ನೀಡಲು ಹೊಸ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾಗುತ್ತದೆ. ಮುಖ್ಯವಾಹಿನಿ ಶಿಕ್ಷಕರ ಹೊಣೆಗಾರಿಕೆ ಬೇರೆ ಸ್ವರೂಪ ಪಡೆದುಕೊಳ್ಳುತ್ತದೆ ಹಾಗೂ ಅದಕ್ಕೆಲ್ಲ ಶಿಕ್ಷಣ ತಜ್ಞರ ಮಾರ್ಗದರ್ಶನ ಇರುತ್ತದೆ. ಅಸಮರ್ಥತೆಯನ್ನು ನಿಭಾಯಿಸಲು, ಪ್ರತಿಕ್ರಿಯಿಸಲು  ಅದರ ಬಗ್ಗೆಯೇ ಹೆಚ್ಚಿನ ಜ್ಞಾನವನ್ನು ಪಡೆಯಲು ವಿಧಿ ವಿಧಾನಗಳನ್ನು ಕಂಡುಕೊಳ್ಳಬೇಕಾಗುತ್ತದೆ.  ಇದಕ್ಕಾಗಿ ಪಠ್ಯದ ಪರಿಷ್ಕರಣೆ, ಪಾಠಗಳು ಹಾಗೂ ಕಲಿಕಾ ವಿಧಾನಗಳ ಪುನರ್‍ಪರಿಶೀಲನೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ತರಗತಿಯಲ್ಲಿರುವ ಬಗೆ ಬಗೆಯ ಮಕ್ಕಳಿಗೆ ಪ್ರತಿಕ್ರಿಯಿಸಲು ಸೃಜನಶೀಲ ದಾರಿಗಳನ್ನು ಗುರುತಿಸುವುದು ಅಗತ್ಯ. ತರಗತಿಯಲ್ಲಿ ಕಲಿಕಾ ಅವಕಾಶಗಳು ಹೆಚ್ಚಾಗುತ್ತವೆ ಅಷ್ಟೇ ಅಲ್ಲ ಮಕ್ಕಳು ತಮ್ಮ ಸಹಪಾಠಿಗಳನ್ನು ಸ್ವೀಕರಿಸಿ ಒಡನಾಡುವುದಲ್ಲದೆ ಅವರಿಗೆ ಬೆಂಬಲ ಒದಗಿಸುವ ಮೂಲಕ ಹೆಚ್ಚಿನದನ್ನು ಕಲಿಯುತ್ತಾರೆ. ಇಲ್ಲಿಂದಲೇ ಸಮಾವೇಶಿ ಶಿಕ್ಷಣದ ನಾಂದಿಯಾಗುತದೆ.
 
 ಭಾರತದಲ್ಲಿ, ಸಿರಿವಂತ ಶೈಕ್ಷಣಿಕ ಸಂಸ್ಥೆಗಳು ಹಾಗೂ ಬಡವರ್ಗದ ಶಾಲೆಗಳ ನಡುವಿನ ವ್ಯತ್ಯಾಸ ಹೇಳ ತೀರದಷ್ಟು ಎದ್ದು ಕಾಣುತ್ತದೆ. ಈ ಶಾಲೆಗಳಲ್ಲಿ ಪ್ರಸ್ತುತ ಸ್ಥಿತಿಗತಿಯನ್ನು ಸಹ ಪರಿಶೀಲಿಸಬೇಕು. ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಅನುಪಾತ 1:40 ಅಥವಾ ಅದಕ್ಕಿಂತಲೂ ಹೆಚ್ಚಿರುವ ಕಡೆಗಳಲ್ಲಿ ಖಂಡಿತವಾಗಿಯೂ ನಾವು ಸಮಾವೇಶಿ ಶಿಕ್ಷಣವನ್ನು ಅನುಷ್ಠಾನ ಮಾಡುವುದಕ್ಕಿಂತ ಮೊದಲಿಗೆ ಕೂಲಂಕಷ ಅಧ್ಯಯನ ನಡೆಸಬೇಕು. ಇದರ ಮುಖ್ಯ ಭಾಗವು ಶಿಕ್ಷಕ ತರಬೇತಿ ಕಾರ್ಯಕ್ರಮದ ಒಂದು ಅಂಗಭಾಗವಾಗಬೇಕು. ಅದಕ್ಕೂ ಮಿಗಿಲಾಗಿ ಸೇವಾನಿರತ ಶಿಕ್ಷಕರ ತರಬೇತಿಗೆ ಒತ್ತು ಕೊಡಬೇಕು. ಶಾಲಾಧಾರಿತ ಶಿಕ್ಷಕರ ತರಬೇತಿಯನ್ನು ಸತತವಾಗಿ ಕೊಡುವುದು ಹಾಗೂ ಇಡೀ ಶಾಲೆಯನ್ನೇ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಒಂದು ಸಲ ಕೊಡುವ ಅಲ್ಪಾವಧಿ ತರಬೇತಿಗಿಂತಲು ಹೆಚ್ಚು ಪರಿಣಾಮ ಬೀರುತ್ತದೆ ಎಂಬುದು ಹಲವು ದೇಶಗಳಲ್ಲಿ ಕಂಡುಕೊಂಡ ಅನುಭವವಾಗಿದೆ. ಬಹುಹಂತದ ಬೋಧನೆ ಹಾಗೂ ಭಾಗಶಃ ಪಾಲ್ಗೊಳ್ಳುವಿಕೆಯಂಥ ತಂತ್ರಗಳು ಮತ್ತು ಶೈಕ್ಷಣಿಕ ಯೋಜನಾ ವಿಧಾನಗಳು ಹೋವಾರ್ಡ್ ಗಾರ್ಡಿನರ್ಸ್ ಸಿದ್ಧಾಂತದಲ್ಲಿ ಈಗಲೂ ಇವೆ. ಇವನ್ನು ಸಮಾವೇಶಿ ಶಿಕ್ಷಣದ ಯೋಜನೆ ತಯಾರಿಸುವಾಗ ಅಳವಡಿಸಿಕೊಳ್ಳಬೇಕು.
 
ಸಮಾವೇಶಿ ಶಿಕ್ಷಣದ ಬಗ್ಗೆ ಸಮಾಧಾನ ಸಂಸ್ಥೆಯ ವ್ಯಾಖ್ಯಾನವು ತನ್ನ ಪೂರ್ವಾನುಭವದಿಂದ  ಉಂಟಾದದ್ದು ಬಳಿಕ ಸರ್ಕಾರಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ಸಮಾವೇಶಿ ಶಿಕ್ಷಣದ ಬಗ್ಗೆ ಗಮನ ಕೇಂದ್ರೀಕರಿಸಿದಾಗ ಹೆಚ್ಚು ವೇಗ ಪಡೆದುಕೊಂಡಿತು. ವಿಕಲತೆ ಇಲ್ಲದ ಆರೋಗ್ಯವಂತ ಮಗುವನ್ನು ನಮ್ಮ ವಿಶೇಷ ಶಿಕ್ಷಣ ಘಟಕಕ್ಕೆ ಸೇರಿಸಿಕೊಳ್ಳುವುದಕ್ಕೆ   ಏನೂ ತೊಂದರೆ ಇರುತ್ತಿರಲಿಲ್ಲ  ಆದರೆ ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ಮಗುವನ್ನು ಸ್ಥಳೀಯ ಮುಖ್ಯವಾಹಿನಿ  ಶಾಲೆಗೆ ಸೇರಿಸುವುದು ಕಠಿಣವಾಗಿತ್ತು. ಹೀಗಾಗಿ ನಾವು ಸಾಮರ್ಥ್ಯ ಹೊಂದಿದ ಹಾಗೂ ಅಸಾಮರ್ಥ್ಯಬಾಧಿತ ಮಕ್ಕಳನ್ನು ನಮ್ಮ ವಿಶೇಷ ಶಿಕ್ಷಣ ಘಟಕಕ್ಕೆ ಸೇರಿಸಿಕೊಳ್ಳಲು ಆರಂಭಿಸಿದರೂ ಅಸಾಮರ್ಥ್ಯ ಹೊಂದಿದ ಮಗು ಒಂದು ನಿರ್ದಿಷ್ಠ ಶೈಕ್ಷಣಿಕ ಮಟ್ಟ ತಲುಪಿ, ಮುಖ್ಯವಾಹಿನಿ ಶಾಲೆಗೆ ಸೇರಲು ಯೋಗ್ಯ ಆಗುವಂತೆ ಮಾಡಲು ಪ್ರಯತ್ನಿಸಿದೆವು. ಬೌದ್ಧಿಕವಾಗಿ ಸಾಮರ್ಥ್ಯಇಲ್ಲದ ಮಗುವು ಮುಖ್ಯವಾಹಿನಿಯ ಶಾಲೆಗೆ ಪ್ರವೇಶ ಪಡೆಯಲು ನಾವು ಹಾಕಿಕೊಂಡ ಕಾರ್ಯತಂತ್ರವು ಮೂರು ಮುಖ್ಯ ಅಂಶಗಳನ್ನು ಒಳಗೊಂಡಿತ್ತು: ಸಮಾವೇಶಿ ಶಿಕ್ಷಣದ ಕುರಿತಾಗಿ ಸಮುದಾಯದಲ್ಲಿರುವ ನಕಾರಾತ್ಮಕ ಅಭಿಮತ ಕಡಿಮೆ ಮಾಡುವುದು ಹಾಗೂ ತೊಡೆದು ಹಾಕುವುದು; ಮುಖ್ಯವಾಹಿನಿಯ ಶಾಲೆಗಳ ಮುಖ್ಯಸ್ಥರು ಹಾಗೂ ಶಿಕ್ಷಕರಲ್ಲಿ ಜ್ಞಾನದ ಕೊರತೆ ಹಾಗೂ ಮುಖ್ಯವಾಗಿ ಸಾಮರ್ಥ್ಯ ಹೊಂದಿದ ಮಕ್ಕಳ ತಂದೆತಾಯಿಗಳ ಮನೋಭಾವ. ಅವರಂತೂ ತಮ್ಮ ಮಕ್ಕಳು ಅಸಾಮರ್ಥ್ಯವಿರುವ ಮಕ್ಕಳ ಪಕ್ಕದಲ್ಲಿ ಕೂರಬಾರದು ಎಂಬ ಮನೋಭಾವ ಹೊಂದಿದ್ದರು. ಇದಲ್ಲದೇ ಅಸಮರ್ಥ ಮಕ್ಕಳಿಗೆ ಅನುಕೂಲಕರವಾದ ಕಟ್ಟಡಗಳ, ಆಟದ ಮೈದಾನ, ಶೌಚಾಲಯಗಳ ಕೊರತೆ (ವಿಶೇಷವಾಗಿ ಬಾಲಕಿಯರಿಗೆ) ಹಾಗೂ ಒಟ್ಟಾರೆಯಾಗಿ ಬೌಧ್ದಿಕ ಅಸಮರ್ಥ ಅಥವಾ ಇನ್ಯಾವುದೇ ಅಸಮರ್ಥತೆಯುಳ್ಳ ಮಕ್ಕಳಿಗೆ ಮೂಲಸೌಲಭ್ಯಗಳ ನೆರವು ಇಲ್ಲದಿರುವುದು ಹೆಚ್ಚು ಸಮಸ್ಯೆ ಮೂಡಿಸಿತ್ತು.
 
ಸ್ಥಳೀಯ ಶಾಲೆಗಳಲ್ಲಿ ಸಮಾವೇಶಿ ವಿಧಾನಗಳ ಜ್ಞಾನ ಹಾಗೂ ಜಾಗೃತಿ ಎಷ್ಟಿದೆ ಎಂದು ಅಳೆಯಲು ನಾವು ಕೆಳ ಸಾಮಾಜಿಕ-ಆರ್ಥಿಕ ಕಾಲೋನಿಗಳಲ್ಲಿ ನಡೆಸಿದ ಸಮೀಕ್ಷೆಯಿಂದಾಗಿ, ಕೆಲವು ಯೋಜನಾಬದ್ಧ ಕಾರ್ಯತಂತ್ರ ರೂಪಿಸಲು ನೆರವಾಯಿತು. ಸ್ಥಳೀಯ ಮುಖ್ಯವಾಹಿನಿ ಶಾಲೆಯ ಶಿಕ್ಷಕರಿಗೆ ಕಾರ್ಯಾಗಾರ ನಡೆಸಿ, ಸಮಾವೇಶಿ ಶಿಕ್ಷಣದ ಬಗ್ಗೆ ಅವರ ಅಭಿಪ್ರಾಯ, ಅದನ್ನು ತಮ್ಮ ಶಾಲೆಗಳಲ್ಲಿ ಅಳವಡಿಸಿಕೊಳ್ಳಲು ಒಪ್ಪಿಗೆ,ಸರ್ಕಾರವು ಮಾಡಿರುವ ಕಾರ್ಯನೀತಿಗಳು ಮತ್ತು ಕಾನೂನುಗಳ ಬಗ್ಗೆ ತಿಳಿವಳಿಕೆ,ಧೋರಣೆ ಹಾಗೂ ಸಮಾವೇಶಿ ಶಿಕ್ಷಣ ಏನು ಆಗಿರಬೇಕು ಎಂಬ ಕುರಿತು ಅವರ ಅಭಿಪ್ರಾಯಗಳನ್ನು ದಾಖಲಿಸಲಾಯಿತು. ಇದರಿಂದಾಗಿ ದೊರೆತ ಫಲಿತಾಂಶ ಅನೇಕ ವಿಷಯಗಳನ್ನು ತಿಳಿಸಿಕೊಟ್ಟಿತು. ಸಮಾವೇಶಿ ಶಿಕ್ಷಣದ ಪರಿಕಲ್ಪನೆಯನ್ನು ಬಗ್ಗೆ ಸ್ಥಳೀಯ ಮುಖ್ಯವಾಹಿನಿ ಶಾಲೆಗಳಲ್ಲಿ ಅಗತ್ಯಾಧಾರಿತ ಕ್ರಮಬದ್ಧ ಕಾರ್ಯಾಗಾರಗಳನ್ನು ನಡೆಸಲು ನೆರವಾಯಿತು.
 
ಇದರಿಂದ ದೊರೆತ  ಸಕಾರಾತ್ಮಕ ಫಲಿತಾಂಶವೇನೆಂದರೆ  ನಾವು ಭೇಟಿಮಾಡಿ ಚರ್ಚೆ ನಡೆಸಿದ ಶಿಕ್ಷಕರು ಹಾಗೂ ತಂದೆತಾಯಿಗಳನ್ನುಳ್ಳ ಸುಗಮಕಾರರ ನೆರವಿನ ತಂಡವನ್ನು ರಚಿಸಲಾಯಿತು. ಆರಂಭಿಕ ತರಬೇತಿ ಹಾಗೂ ಕಾರ್ಯಾಗಾರಗಳಲ್ಲಿ ಕಡ್ಡಾಯವಾಗಿ ಹಾಜರಾದವರು ಸಮುದಾಯಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು  ಮತ್ತು ಅದರ ಪರ ಮಾತನಾಡಲು ಶುರು ಮಾಡಿದರು. ಇದರ ಜೊತೆಯಲ್ಲಿ ಸಮಾವೇಶಿ ಶಿಕ್ಷಣದ ಆಗುವ ಪ್ರಯೋಜನಗಳನ್ನು ಹಂಚಿಕೊಳ್ಳಲು ಮುಕ್ತ ಸಂವಾದವನ್ನು ಏರ್ಪಡಿಸಲಾಯಿತು. ಸಮಾವೇಶಿ ಶಿಕ್ಷಣದ ಬಗ್ಗೆ ಸೂತ್ರ ಗೊಂಬೆಯಾಟ, ಬೀದಿ ನಾಟಕ, ಅನೌಪಚಾರಿಕ ಮಾತುಕತೆ ಹಾಗೂ ಆರೋಗ್ಯ ಶಿಬಿರಗಳ ಮೂಲಕ ಸಮುದಾಯವನ್ನು ಅದರ ಪರ ಸಂವೇದನೆಗೊಳಿಸುವ ಅವಕಾಶಗಳನ್ನೂ ಕಂಡುಕೊಳ್ಳಲಾಯಿತು.
 
91 ಶಾಲೆಗಳಲ್ಲಿ ಸಮೀಕ್ಷೆಯನ್ನು ನಡೆಸಲಾಯಿತು ಮತ್ತು ನಮ್ಮ ವಿಶೇಷ ಶಿಕ್ಷಣ ಘಟಕದಿಂದ ಉತ್ತೀರ್ಣರಾಗಿ ಹೊರಬರುವ ಬೌದ್ಧಿಕ ಸಾಮರ್ಥ್ಯ ಹೊಂದಿರದ ಮಕ್ಕಳನ್ನು ಸೇರಿಸಿಕೊಳ್ಳುವಂತೆ ಮುಖ್ಯವಾಹಿನಿ ಶಾಲೆಗಳ ಜೊತೆಯಲ್ಲಿ ಉತ್ತಮ ಸಂಬಂಧ ಬೆಸೆಯಲಾಯಿತು. ಐದು ವರ್ಷಗಳಿಂದ 10 ವರ್ಷಗಳ ವಯಸ್ಸಿನ 16 ಮಕ್ಕಳನ್ನು ಮುನ್ಸಿಪಲ್ ಕಾರ್ಪೊರೇಶನ್ ಆಫ್ ದೆಹಲಿ ಶಾಲೆಗಳಲ್ಲಿ ಸೇರಿಸಿದ್ದೇವೆ.
 
ಬೌದ್ಧಿಕ ಅಸಾಮಥ್ರ್ಯ ಹೊಂದಿರುವ ಮಗುವನ್ನು ಶಾಲೆಗೆ ಸೇರಿಸಿಕೊಳ್ಳುವುದಷ್ಟೇ ಸಮಾವೇಶನವಲ್ಲ .ಇದು ಅಂತಿಮ ಗುರಿಯೂ ಅ¯್ಲ. ಇದೊಂದು ನಿರಂತರ ಪ್ರಕ್ರಿಯೆ. ಪರ್ಯಾಯ ಶಿಕ್ಷಣ ಪದ್ಧತಿಯನ್ನು ಸ್ಥಾಪಿಸುವುದು ಅಥವಾ ವೈಯಕ್ತಿಕ ಮಟ್ಟದ ಹಕ್ಕು ಒದಗಿಸುವುದೂ ಇದಲ್ಲ. ಸಮಾವೇಶಿ ಶಿಕ್ಷಣ ವೆಂದರೆ ಈಗಿರುವ ಪದ್ದತಿಯೊಳಗೆ ಇದನ್ನು ಜೋಡಿಸಿಬಿಡುವುದೂ ಅಲ್ಲ. ಸಮಾವೇಶಿ ಶಿಕ್ಷಣವು ಅಗತ್ಯಕ್ಕೆ ತಕ್ಕಂತೆ ಹೊಂದಿಕೊಳ್ಳುವುದು,ಕಲಿಕೆಗೆ ಇದು ಒತ್ತು ಕೊಡುತ್ತದೆಯೇ ಹೊರತೂ ಕಲಿಸುವುದಕ್ಕೆ ಅಲ್ಲ. ನಮ್ಮ ಸಮಾಧಾನ ಸಂಸ್ಥೆಯ ಉಪಕ್ರಮಗಳು, ಸಮಾವೇಶಿ  ಶಿಕ್ಷಣವನ್ನು ಜಾರಿಗೆ ತರಬಹುದು ಎಂಬುದನ್ನು ಸಾಧಿಸಿ ತೋರಿಸಿವೆ. ಎಲ್ಲಕ್ಕಿಂತ ಮಿಗಿಲಾಗಿ, ಇದು ಎಲ್ಲ ಮಕ್ಕಳಿಗೂ ಶೈಕ್ಷಣಿಕ ಅವಕಾಶಗಳನ್ನು ಸಮಾನವಾಗಿ ಕೊಡುವ ಒಂದು ಅವಕಾಶ ಎನ್ನಬಹುದು.
 
 
ಪ್ರಮೀಳಾ-ಇವರು 1981 ರಲ್ಲಿ ಸ್ಥಾಪಿತವಾದ ಸಮಾಧಾನ ಎಂಬ ಸರ್ಕಾರೇತರ ಸಂಸ್ಥೆಯ ಸ್ಥಾಪಕರು ಮತ್ತು ಈಗ ಅದರ ಮಾರ್ಗದರ್ಶಿಗಳಾಗಿದ್ದಾರೆ. ಬೌದ್ಧಿಕ ಅಸಾಮಥ್ರ್ಯ ಹೊಂದಿರುವ ಮತ್ತು ಬಡತನದಿಂದ ಬಳಲುತ್ತಿರುವ ಮಕ್ಕಳ ಏಳಿಗೆಗೆ ಶ್ರಮಿಸುತ್ತಿದ್ದಾರೆ. ನವದೆಹಲಿಯಲ್ಲಿ ಇರುವ ಎರಡು ಕೇಂದ್ರಗಳು ಸಮನ್ವಯ ಶಿಕ್ಷಣ, ಅಸಾಮಥ್ರ್ಯದ ತ್ವರಿತ ಗುರುತಿಸುವಿಕೆ ಹಾಗೂ ಅ ಬಗ್ಗೆ ಕ್ರಮ ಕೈಗೊಳ್ಳುವುದು ಆದಾಯ ಸೃಷ್ಟಿ ಕೌಶಲ್ಯಗಳನ್ನು ಕುರಿತು ಕೆಲಸ ಮಾಡುತ್ತಿವೆ. ಅಸಾಮಥ್ರ್ಯ, ಬಡತನ ಹಾಗೂ ಮಹಿಳೆಯರ ಸಬಲೀಕರಣದ ಕುರಿತು ಮಾಡಿದ ಕೆಲಸಕ್ಕೆ ವಿಶ್ವಬ್ಯಾಂಕಿನಿಂದ ಹಾಗೂ ಸ್ಥಳೀಯ ಸಂಪನ್ಮೂಲ ಬಳಕೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಕುರಿತಂತೆ ಇನ್‍ಕ್ಲೂಶನ್ ಇಂಟರ್‍ನ್ಯಾಷನಲ್‍ನಿಂದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಮೀಳಾ ಅವರ ಇ-ಮೇಲ್: Lila.bala@gmail.com
 
 
18793 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು