ಸಮತೆಯ ಚಿತ್ತ ಸಮವಸ್ತ್ರದತ್ತ.-ಮಂಜುನಾಥ್ ಎ.ಆರ್

೨೦೧೪ರ ಶೈಕ್ಷಣಿಕ ವರ್ಷದವರೆಗೆ ಕರ್ನಾಟಕ ಪಠ್ಯ ಪುಸ್ತಕ ಸಮಿತಿ ಕನ್ನಡ ಕಸ್ತೂರಿ ಎಂಬ ಪಠ್ಯಪುಸ್ತಕದ ೯ನೇತರಗತಿಯಲ್ಲಿ ಪರಿಚಯಿಸಿದ ಮೊದಲ ಪಾಠ ಮನಃ ಪರಿವರ್ತನೆ ಇದನ್ನು ಸದಾಶಿವ ಜಂಬಯ್ಯ ನಾಗಲೋಟಿಮಠರವರು ಬರೆದಿದ್ದರು. ಈ ಪಾಠವು ’ಒಬ್ಬ ಶಿಕ್ಷಕರು, ತಡವಾಗಿ ಶಾಲೆಗೆ ಬರುವ ಮಗುವನ್ನು ಬಡಿದು ಬುದ್ಧಿ ಹೇಳುವ ಶಿಕ್ಷಕ ಒಂದು ಕಡೆ, ಮಗು ತನ್ನ ಸಮವಸ್ತ್ರವನ್ನು ಬಿಚ್ಚಿಟ್ಟು ತನ್ನ ಬೆತ್ತಲೆ ಮೈಗೆ ಶಿಕ್ಷಕರಿಂದ ಹೊಡೆಸಿಕೊಳ್ಳುವ ಪ್ರಸಂಗ ಮತ್ತೊಂದು ಕಡೆ. ಇವುಗಳ ಮಧ್ಯೆ ಶಿಕ್ಷಕನಿಗೆ ಬಡತನದ ಪಾಠ ಕಲಿಸುವ ಮಗು, ಆ ಮಗುವಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಶಿಕ್ಷಕ ಮುಂದೆ ತಾನೇ ಸ್ವ-ಇಚ್ಚೆಯಿಂದ ಆ ಮಗುವಿಗೆ ಶಿಕ್ಷಣವನ್ನು ಕೊಡಿಸುತ್ತಾನೆ. ಆ ಹುಡುಗ ಇಂದು ದೊಡ್ಡ ಅಧಿಕಾರಿಯಾಗಿದ್ದಾನೆ’. ಎಂದು ಹೇಳುತ್ತದೆ. ಈ ಘಟನೆಯನ್ನು ಪ್ರಾಯಶಃ ಎಲ್ಲರೂ ಕೇಳಿರಬಹುದು, ನಾನು ಈ ಸಂದರ್ಭವನ್ನು ಮಕ್ಕಳ ಮುಂದೆ ಬಿಡಿಸಿಡುವಾಗ, ಆ ಮಗುವಿನ ಕರುಣಾಜನ್ಯ ಸ್ಥಿತಿಯನ್ನು ಹೇಳುವಾಗ ಕರುಳು ಹಿಂಡಿದ ಅನುಭವವಾಗುತ್ತಿತ್ತು. ಈ ಘಟನೆಯೇ ನಾನು ಸಮವಸ್ತ್ರದ ಬಗ್ಗೆ ಆಳವಾಗಿ ಚಿಂತಿಸುವ ಹಾಗೇ ಮಾಡಿದ್ದು, ನಾನಿಂದು ಸರ್ಕಾರಿ ಶಾಲೆಗಳನ್ನು ಭೇಟಿ ಮಾಡಿ, ಶಾಲೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ, ನಾನು ಭೇಟಿ ನೀಡುವ ಪ್ರತಿ ಶಾಲೆಗಳಲ್ಲಿ ನಾನು ನೋಡೊ ಮೊದಲ ಅಂಶವಿದು, ಇದು ಮಕ್ಕಳ ನಡುವಿನ ಸಾಮಾಜಿಕ ಅಂತರವನ್ನು ಕಡಿಮೆ ಮಾಡುತ್ತದೆ. ಆದರೆ ಇಂದು ಮಕ್ಕಳು ಆ ಸಮವಸ್ತ್ರಗಳಲ್ಲೇ ಹೆಚ್ಚು ಕಮ್ಮಿಗಳ ತಾಳವನ್ನು ಗುರುತಿಸುತ್ತಿದ್ದಾರೆ. ಶಾಲೆಗಳೇ ಕಲಿಕಾ ಸಮುದಾಯದ ಆರಂಭ/ ಮೂಲವಾದ್ದರಿಂದ ನಾವು ಇಲ್ಲೇ ಈ ಸಮತೆಯ ಬೀಜವನ್ನು ಊರಬೇಕೆಂದೆನಿಸಿತು.

ನಾವು ಸಂವಿಧಾನದ ಹಿನ್ನಲೆಯಲ್ಲಿ ಹಾಗೂ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನ ನೆಲೆಯಲ್ಲಿ ಶಾಲಾ ಪರಿಸರವನ್ನು ನೋಡುತ್ತಿದ್ದೇವೆ ಮತ್ತು ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಈ ಸಂದರ್ಭದಲ್ಲಿ ನಾವು ಮಗುವಿನ ಸ್ವೇಚ್ಚೆಗೆ / ಸ್ವತಂತ್ರ್ಯತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು. ನಮ್ಮ ಆದ್ಯ ಕರ್ತವ್ಯ ಅವರಿ?ಕ್ಕೆ ಬೇಕಾದ್ದನ್ನು ಕೊಟ್ಟು ಕಲಿಕೆಯಲ್ಲಿ ತೊಡಗಿಸುವ ಬಗ್ಗೆ ಸಾಕಷ್ಟು ಆಲೋಚನೆ ಮಾಡಿತ್ತೇವೆ. ಹೀಗಿರುವಾಗ ಸಮವಸ್ತ್ರದಲ್ಲಿ ನಾವ್ಯಾಕೆ ಎಡವುತ್ತಿದೇವೆ. ಮಕ್ಕಳ ಮನಸ್ಸಿನಲ್ಲಿ

ಏನಿದೆ?
ಹೆಚ್ಚಿನ ಮಕ್ಕಳು ಸಮವಸ್ತ್ರವನ್ನು ಇಷ್ಟಪಡುವುದಿಲ್ಲ ಯಾಕೆ?
ನಾವು ಮಕ್ಕಳಿಷ್ಟದ ಬಟ್ಟೆಗಳನ್ನೇ ಯಾಕೆ ಸಮವಸ್ತ್ರವನ್ನಾಗಿ ಮಾಡುವುದಿಲ್ಲ?
ಸಮವಸ್ತ್ರದ ವಿಷಯದಲ್ಯಾಕೆ ಮಕ್ಕಳಿಗೆ ಆಯ್ಕೆಗಳನ್ನು ಕೊಡುವುದಿಲ್ಲ?

ಇತರೆಲ್ಲಾ ವಿಷಯಗಳಲ್ಲೂ ಅವರು ಬಯಸಿದ, ಅವರಿಷ್ಟದ ಬದುಕು ನೀಡುವುದು ಪ್ರಸ್ತುತ. ಮತ್ತು ಅಪ್ಪ-ಅಮ್ಮ, ಸುಗಮಕಾರನ, ಸರ್ಕಾರ /ಪ್ರಜಾಪ್ರಭುತ್ವದ ಆದ್ಯ ಕರ್ತವ್ಯವಾಗಿದೆ ಎಂದು ಉಸಿರುವಾಗ. ಇಂದು ಮಕ್ಕಳ ಉಡುಗೆ ತೊಡುಗೆಗಳ (ಸಮವಸ್ತ್ರ) ಬಗ್ಗೆ ಯಾಕೆ-ಯಾವುದೇ ನೀತಿ-ನಿಯಮಗಳು, ಆಯೋಗದ ವರದಿಗಳು ಮೌನವಹಿಸಿವೆ. ನಮ್ಮ ಸಂಶೋಧನೆಗಳು ಕೆವಲ ಕಲಿಕೆಯ ವಿಚಾರಗಳಲ್ಲಿ ಮಾತ್ರನಾ? ಎಂಬಂತ ಪ್ರಶ್ನೆಯನ್ನು ಹುಡುಕುತ್ತಾ ಹೋದಂತೆ ನಮ್ಮ ಸಂಶೋಧನೆಗಳು ಕೆವಲ ಕಲಿಕೆಗೆ ಮಾತ್ರವಲ್ಲದೆ, ಈ ಸಮವಸ್ತ್ರಗಳ ಮೇಲೂ ಅಗಾಧವಾಗಿ ನಡೆದಿದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಅದರಲ್ಲಿ ’ಪರಿಶಿಷ್ಟ; ೨೦೦೭ರ ರಾಷ್ಟ್ರೀಯ ಅನುಲಂಬ ಅಧ್ಯಯನದ ದತ್ತಾಂಶಗಳು’ ಮತ್ತು ’೧೯೯೮ರ ಡೇವಿಡ್ ಬ್ರನ್ಸ್ಮಾ ಮತ್ತು ಕೆರ್ರಿ ರಾಕೆಮೋರ್’ ಈ ಕುರಿತಾಗಿ ನೀಡಿದ ವರದಿಗಳಲ್ಲಿ ಗೈರು ಹಾಜರಾತಿ, ವರ್ತನೆ ಮತ್ತು ಡ್ರಗ್ಸ್ ಬಳಕೆಯಂತಹ ಚಟುವಟಿಕೆಯಲ್ಲಿ ತೊಡಗಿದ ಮಕ್ಕಳ ಬದಲಾವಣೆಗಳನ್ನು ಸಾಧಿಸಬಹುದು ಆದರೆ ಹೇಳಿಕೊಳ್ಳುವಂತಹ ಪ್ರಮಾಣದಲ್ಲೇನೂ ಉಪಯುಕ್ತವಾಗಿಲ್ಲ ಎಂದಿರುವುದು ನಿಜವೆನಿಸುತ್ತದೆ. ಹಾಗೂ ಬ್ರನ್ಸ್ಮಾ ಅವರು ’ಯಾವ ನಿಯಂತ್ರಿತ ಅಧ್ಯಯನಗಳು ಸಮವಸ್ತ್ರದ ಉಪಯೋಗವನ್ನು ಸಮರ್ಥಿಸುವುದಿಲ್ಲ’ ಎಂದಿದ್ದಾರೆ. ಅಂದರೆ ಈ ಅಧ್ಯಯನಗಳು ಹೇಳುವುದು ಸಮವಸ್ತ್ರಗಳಿಂದ ಯಾವ ಶೈಕ್ಷಣಿಕ ಉಪಯುಕ್ತತೆಯಿಲ್ಲ ಎಂದಿರುವಾಗ ಸಮವಸ್ತ್ರ ಬೇಕಾ? ಬೇಕಾದರೆ ಯಾಕೆ ಬೇಕು? ಎಂದು ಸಹಜವಾಗಿ ಅನಿಸುತ್ತದೆ.

ಸಮವಸ್ತ್ರಗಳು ಬೇಕು ಏಕೆಂದರೆ ಅದು ಶಾಲೆಗಳಲ್ಲಿ ಅಥವಾ ಸಮಾಜದಲ್ಲಿ ಬೇಕಾಗಿರುವ ಸಮಾನತೆಯನ್ನು ಕಾಣಲು, ಸಾಮಾಜಿಕ ಅಂತರವನ್ನು ಕಡಿಮೆ ಮಾಡಲು ಎಂದು ಸಾಮಾನ್ಯರಿಗೂ ಅರ್ಥವಾಗುವಂತಹ ಉತ್ತರ. ಆದರೆ ಸಮವಸ್ತ್ರಗಳು ಇಂದು ಅಸಮತೆಯನ್ನು ಸಾರುತ್ತಿವೆ ಎಂಬುದು ಅಷ್ಟೇ ಸತ್ಯ. ಉದಾಹರಣೆ; ವೈಟ್ ಡ್ರೆಸ್ ’ಡಿ’ ಗ್ರೂಪ್ ನೌಕರರ ಸಮವಸ್ತ್ರವಾದರೇ, ಸಿವಿಲ್ ಡ್ರೆಸ್ ಅಧಿಕಾರಿ ವರ್ಗದವರು ಧರಸಬೇಕು ಎಂಬಂತಹ ಸೂಕ್ಷ್ಮಗಳನ್ನು ಇದೇ ಜಾಣ ಸಮಾಜ ಹೇಳಿಕೊಟ್ಟದ್ದು ನಿಜ ತಾನೇ?
ಇಂದಿನ ಸಮವಸ್ತ್ರಗಳೇ ಅಂದಿನ ಸಂಪ್ರದಾಯಿಕ ಉಡುಗೆಗಳು ಇವುಗಳಿಗೆ ಅನಾದಿಕಾಲದ ಇತಿಹಾಸವಿದೆ. ಅದು ಮನುಷ್ಯನ ನಾಗರೀಕತೆಯ ಬದುಕು ಆರಂಭವಾದ ಕಾಲದಿಂದಲೂ ಪ್ರಾದೇಶಿಕ ವಿಭಿನ್ನತೆಯನ್ನು ಸಾರುವ ಉಡುಗೆಗಳನ್ನು ಕಾಣಬಹುದು. ಭಾರತ ಬೇರೆ ಬೇರೆ ಸಂಸ್ಕೃತಿ ಅನಾವರಣಗೊಳ್ಳುವ ಆವರಣ ಹೀಗಿರುವಾಗ ಒಂದು ಸಂಸ್ಕೃತಿಯ ಉಡುಗೆ-ತೊಡುಗೆ ಒಂದೊಂದು ಬಗೆಯದ್ದು, ಅಷ್ಟೇ ಅಲ್ಲ! ಹಿಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಹಾಗೇ ಇತ್ತು. ಆದರೆ ಇಂದು ಕಾಲ ಬದಲಾಗಿದೆ. ನಾವು ಸಂವಿಧಾನವನ್ನು ಒಪ್ಪಿಕೊಂಡಿದ್ದೇವೆ, ಅದು ನೀಡಿರುವ ಸಮಾನತೆ, ವೈಚಾರಿಕ ವೈಶಾಲತೆಗಳನ್ನು ಅರ್ಪಿಸಿಕೊಂಡಿದ್ದೇವೆ. ಇದು ವಸ್ತ್ರ ವಿನ್ಯಾಸಗಳ ವಿಶಾಲತೆಗೆ ಕಾರಣವಾಗಿರಬಹುದು.

ಸರ್ಕಾರದ ಸೇವಕರಿಗೆ ಮಾತ್ರವಲ್ಲ ಈ ಸಮವಸ್ತ್ರ, ಖಾಸಗಿ ಸಂಸ್ಥೆಗಳಿಗೂ ಇದು ಅನಿವಾರ್ಯವಾಗಿದೆ. ವಾಹನ ಚಾಲಕ-ಕಂಡಕ್ಟರ್, ಪೋಲೀಸ್ ಅಧಿಕಾರಿಗಳು, ಗೃಹದಳ, ಅಂಚೆ ಕಛೇರಿ, ಆರೋಗ್ಯ ಇಲಾಖೆ, ಕಲ್ಯಾಣ ಇಲಾಖೆ, ವಿವಿಧ ಶಿಕ್ಷಣ ಇಲಾಖೆಗಳು ಹೀಗೆ ಹೇಳುತ್ತಾ ಹೋದರೆ ಸಾಕಷ್ಟುಅಂಶಗಳು ಬಿಚ್ಚಿಕೊಳ್ಳುತ್ತವೆ. ಈ ಸಮವಸ್ತ್ರ ಆಯಾ ಸಾಮಾಜಿಕ ಸಂಸ್ಕೃತಿಯನ್ನು ಪ್ರಸಾರ ಮಾಡುವ ನೆಲೆಯೆನ್ನಬಹುದು. ಒಂದು ಕಾಲದಲ್ಲಿ ಪುರು?ರಿಗೆ ಒಂದು, ಮಹಿಳೆಯರಿಗೆ ಒಂದು ರೀತಿಯ ವಸ್ತ್ರಗಳಿದ್ದವು. ಆದ್ದರಿಂದ ಮಹಿಳೆ ಮತ್ತು ಪುರುಷರ ಉಡುಗೆ / ವಸ್ತ್ರ ವಿನ್ಯಾಸದ ಬಗೆಗಳಲ್ಲಿ ವ್ಯತ್ಯಾಸಗಳು ಕಡಿಮೆಯಾಗುತ್ತಲಿವೆ. ಇದೇ ಸಾಮಾಜಿಕರಣ ಕ್ರಿಯೆಯ ಸಮಾನತೆ ಎನಿಸಿತ್ತದೆ. ಬಹುಶಃ ಇದನ್ನು ನಾವು ಗಂಭೀರವಾಗಿ ಇಂದು ನೋಡಿದಾಗ ಮಹಿಳೆ ಮತ್ತು ಪುರುಷರ ನಡುವೆ ಉಡುಗೆಗಳಲ್ಲಿ ವಸ್ತ್ರ ವಿನ್ಯಾಸದ ಬಗೆಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎನ್ನುವಾಗ ನಾವು ಶಾಲೆಗಳಲ್ಲಿ ಬೆಳೆಯುವ ಮಕ್ಕಳಲ್ಲಿ ಅದರಲ್ಲೂ ಒಂದು ಕಲಿಕಾ ಸಮುದಾಯದೊಳಗೆ ನೀನು ಹುಡುಗ, ನೀನು ಹುಡುಗಿ ಎಂದು ಭೌತಿಕವಾಗಿ ಬೇರೆ ಮಾಡಿ, ತರಗತಿ ಕೋಣೆಯಲ್ಲಿ ಲಿಂಗ ಸಮಾನತೆಯ ಬಗ್ಗೆ ಮಾತನಾಡುವುದಾದರೂ ಹೇಗೆ? ಎನಿಸಿತು. ಆ ನೈತಿಕ ಮೌಲ್ಯ ಬರುವುದಾದರೂ ಹೇಗೆ?

ಈ ನೆಲೆಯಲ್ಲಿ ನಾವು ಇಡೀ ಶಾಲೆಯನ್ನೇ ಸಂವಿಧಾನವನ್ನಾಗಿಸಬೇಕು, ಶಾಲೆಯ ಆಗು ಹೋಗುಗಳು, ತರಗತಿ ಪ್ರಕ್ರಿಯೆಗಳು, ಮಕ್ಕಳ-ಪಾಲಕ-ಶಿಕ್ಷಕರ ಸಂಬಂಧಗಳು, ಶಿಕ್ಷಕ-ಶಿಕ್ಷಕರ ಸಂಬಂಧಗಳು, ಶಿಕ್ಷಕ ಮತ್ತು ಸಮುದಾಯ, ಆಡಳಿತ ವರ್ಗ ಹೀಗೆ ಈ ಕಲಿಕಾ ಸಮುದಾಯದ ಹಲವು ಮಜಲುಗಳಲ್ಲಿ ಸಮಾನತೆಯ ರೂಪ ಮಕ್ಕಳಿಗೆ ಮನವರಿಕೆಯಾಗಬೇಕು, ಆಗ ಮಾತ್ರ ಸಮತೆಯ ವಾಸ್ತವಾಂಶಗಳು ಮಗುವಿನ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿ ನಮ್ಮ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಬಯಸುವ ಶಿಕ್ಷಣವನ್ನು, ಅವರ ಬಯಕೆಯ ಸೌಲಭ್ಯಗಳನ್ನು, ಅವರಿಷ್ಟದ ಅನುಕೂಲಗಳನ್ನು ಸರ್ಕಾರ ಮಾಡುತ್ತಿದೆ ಎನ್ನುವಾಗ ಮಕ್ಕಳ ಇಷ್ಟವನ್ನೇ ಕೇಳಿ ಸಮವಸ್ತ್ರವನ್ನು ಆಯ್ಕೆ ಮಾಡುವುದು, ಸಮವಸ್ತ್ರವನ್ನು ನಿರ್ಧರಿಸುವುದು ಉತ್ತಮವೆನಿಸಿತು. ಇದು ನಾವು ಶಾಲಾ ಪರಿಸರದಲ್ಲಿ ನೋಡಬಹುದಾದ ಮತ್ತೊಂದು ಪ್ರಜಾಪ್ರಭುತ್ವದ ಮಹತ್ವದಹೆಜ್ಜೆ, ಮಗುವನ್ನು ವ್ಯಕ್ತಿಯನ್ನಾಗಿ ಗೌರವಿಸುವ ದಿರಿಸು ಎನಿಸುತ್ತದೆ. ಎಂತಹ ಮಹತ್ವದ ಆಯ್ಕೆಗಳಲ್ಲೂ ಮಕ್ಕಳು ಸಶಕ್ತರೆಂಬುದು ನನ್ನ ಭಾವನೆ ಹಾಗಾಗಿ ಅವರನ್ನು ಗೌರವಿಸುವ ನಾವು, ಅವರ ಕಲಿಕೆಯನ್ನು ಉತ್ತೇಜಿಸುವ ನಾವು ಅವರ ಹಿತಾಸಕ್ತಿಗಳನ್ನು ಗುರುತಿಸಿ, ಗೌರವಿಸಿದಾಗ ನಾವು ಕಾಣಬಯಸುವ ಸುಸ್ಥಿರ, ನ್ಯಾಯೋಚಿತ, ಸಂವಿಧಾನ ಬದ್ಧ ಮೌಲ್ಯಗಳನ್ನು ಎಳವೆಯಿಂದಲೇ ರೂಢಿಗತಗೊಳಿಸಬಹುದಲ್ಲ. ಮಗುವಿನ ಈ ಆಯ್ಕೆಗಳನ್ನು ಪ್ರತಿಯೊಬ್ಬರು ಇಡೇರಿಸುವಂತಾಗಬೇಕು ಅದಕ್ಕಾಗಿ ನಾವೆಲ್ಲರು ಪ್ರಯತ್ನಿಸಬೇಕು, ಸರ್ಕಾರವೂ ಅದರತ್ತ ಗಮನಹರಿಸಬೇಕು.
 

19654 ನೊಂದಾಯಿತ ಬಳಕೆದಾರರು
7777 ಸಂಪನ್ಮೂಲಗಳು