ಸದಾ ನೆನಪಲ್ಲಿ ಉಳಿಯುವಂತೆ ಬೋಧಿಸುವುದು-ಮೇರಿ ಡೊರೊಥಿ ಫರ್ನಾಂಡೀಸ್

ಯಾವುದನ್ನು  ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೋ ಅದು ಬಹಳಕಾಲ ನೆನಪಿನಲ್ಲಿ ಉಳಿದಿರುತ್ತದೆ. ಇದು ಅನುಭವಿಗಳು ಹೇಳುವ ಮಾತು. ಈ ಲೇಖನದಲ್ಲಿ  'ನೆನಪಿನಲ್ಲಿ ಉಳಿಸಿಟ್ಟುಕೊಳ್ಳುವುದು ಮತ್ತು ಮರೆಯುವುದು' ಮತ್ತು ವಿದ್ಯಾರ್ಥಿಗಳು ಕಲಿಸಿದ ವಿಷಯಗಳನ್ನು ಹೇಗೆ ನೆನಪಿನಲ್ಲಿ ಉಳಿಸಿಟ್ಟುಕೊಳ್ಳಬಹುದು  ಎಂಬುದರ ಬಗ್ಗೆ ಹೇಳಲಾಗಿದೆ.

'ನೆನಪಿನಲ್ಲಿ ಉಳಿಸಿಟ್ಟುಕೊಳ್ಳುವುದು ಮತ್ತು ಮರೆಯುವುದು'  ಒಂದೇ ನಾಣ್ಯದ ಎರಡು ಮುಖಗಳು. ಮೊದಲನೆಯದು ಅಚ್ಚಳಿಯದೇ ಉಳಿಯುವುದನ್ನು ಕುರಿತು ಹೇಳಿದರೆ ಎರಡನೆಯದು  ಶಿಕ್ಷಕ ಮತ್ತು ಶಿಷ್ಯ ಇಬ್ಬರಿಗೂ ಹತಾಶೆ ಉಂಟು ಮಾಡುವುದನ್ನು ಸೂಚಿಸುತ್ತದೆ. ಎರಡೂ ನಮ್ಮ ಆಯ್ಕೆಯಂತೆ ಆಗುವವು. ಒಂದಂತೂ ನಿಜ  ನಾವು ಕಲಿತದ್ದನ್ನೆಲ್ಲಾ ನೆನಪಿನಲ್ಲಿ ಇಟ್ಟುಕೊಳ್ಳಲಾಗುವುದಿಲ್ಲ ಅಥವಾ ಮರೆತು ಬಿಡುವುದೂ ಸಾಧ್ಯವಿಲ್ಲ. ಒಂದು ರೀತಿಯಲ್ಲಿ , ಮರೆಯುವುದೂ ಒಂದು ವರದಾನವೇ! ಏಕೆಂದರೆ  ನಮ್ಮಮೆದುಳು ಸೀಮಿತ ಸಾಮರ್ಥ್ಯವನ್ನು ಹೊಂದಿದೆ ಮತ್ತು ಮನಸ್ಸಿಗೆ ಬಂದಂತೆ ಅದರಲ್ಲಿ ವಿಷಯಗಳನ್ನು ತುಂಬಿಡಲಾಗುವುದಿಲ್ಲ. ಬಾಳಲ್ಲಿ ಬರುವ ಎಲ್ಲಾ ಸಂಗತಿಗಳು ಮತ್ತು ಅಂಕಿ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಿರುವುದಿಲ್ಲ. ನಾವು ಸಂಗತಿಗಳ ಮಹತ್ವ ಗ್ರಹಿಸಿದ ಅನಂತರ  ಅದರಿಂದ ಪಡೆದ ತತ್ವಗಳು, ಸಾಮಾನ್ಯ ಅರಿವು ಮುಂತಾದವು,  ನಮ್ಮ ನೆನಪಿನಲ್ಲಿ ಸುಳಿದಾಡುತ್ತಿರುತ್ತವೆ.  ನಮ್ಮ ಶಿಕ್ಷಣದಲ್ಲಿ ತೀರ ಸೀಮಿತ ಸ್ಥಾನವನ್ನು ಹೊಂದಿರುವ, ಈ ಸಂಗತಿಗಳು ಮತ್ತು ಅಂಕಿ ಅಂಶಗಳು ಒಂದು ಪ್ರವೃತ್ತಿ ಯನ್ನುಅರ್ಥಮಾಡಿಕೊಳ್ಳಲು, ಅಥವಾ ಒಂದು ತತ್ವದ ಸ್ಥೂಲ ಅಂದಾಜು ಪಡೆಯಲು ಸೋಪಾನಗಳಾಗಿ ವರ್ತಿಸುತ್ತವೆ. ಅದೃಷ್ಟವಶಾತ್, ಈ ತತ್ವಗಳೇನೋ ಸುಲಭವಾಗಿ ನಮ್ಮ ನೆನಪಿಗಾಗಿ ಉಳಿದುಬಿಡುತ್ತವೆ.

ಬಹಳ ಕಾಲದಿಂದ ನಮ್ಮನ್ನು ಕಾಡುತ್ತಿರುವ  ಪ್ರಶ್ನೆಯೆಂದರೆ,"ನಾವು ಎನನ್ನಾದರೂ ಏಕೆ ಮರೆಯುತ್ತೇವೆ?" ಅಥವಾ ಬೇರೆ ರೀತಿಯಲ್ಲಿ ಹೇಳೋದಾದರೆ " ಒಂದೇ ತರಗತಿಯಲ್ಲಿ ಅದೇ ಪಾಠವನ್ನು ಕೇಳಿದ ಒಂದು ವಿದ್ಯಾರ್ಥಿತಂಡದಲ್ಲಿ ಕೆಲವರು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಮತ್ತೆ ಕೆಲವರು ಬೇರೇನೋ ನೆನಪಲ್ಲಿಟ್ಟುಕೊಳ್ಳುತ್ತಾರೆ ಕೆಲವರಿಗೆ ಎಲ್ಲವೂ ಜ್ಞಾಪಕದಲ್ಲಿರುತ್ತದೆ ಕೆಲವರಿಗೆ ಎಲ್ಲವೂ ಗೊಂದಲ  ಮತ್ತೆ ಕೆಲವರಿಗೆ ಎಲ್ಲವೂ ಅಳಿಸಿದ ಸ್ಲೇಟಿನಂತೆ ಮರೆತು ಹೋಗಿರುತ್ತದೆ ಇದೇಕೆ?" ಎಬಿಂಗಾಸ್(Ebbinghaus) ತಮ್ಮ ಪ್ರಯೋಗದಲ್ಲಿ  ಮೊದಲಿಗೆ ಅರ್ಥವಿಲ್ಲದ ಶಬ್ದಗಳನ್ನು ಬಳಸಿಕೊಂಡು,  ಕಾಲದ ಒಂದು ಚಟುವಟಿಕೆಯಾಗಿ ನೆನಪಿನ ಪ್ರಕ್ರಿಯೆಯ ಒಂದು ನಕ್ಷೆ ಯನ್ನು ತಯಾರಿಸಿದನು. ವಿಷಯಗಳು ಜರ್ರನೆ ಮರೆತು ಹೋಗುವುದು ಕಡೆವರೆಗೂ ನೆನಪಲ್ಲಿ ಉಳಿಯುವುದು  ಅಂತಹ ವಿಷಯಗಳ ಅರ್ಥಪೂರ್ಣತೆಯನ್ನು ವಿಷಯಗಳ ಸ್ವರೂಪವನ್ನು,ಅದರ ಭಾಗಗಳು ಹೇಗೆ ಪರಸ್ಪರ ಸಂಬಂಧಪಟ್ಟಿವೆ ಎಂಬುದು ಮಾಹಿತಿಯ ಅಂಶಗಳ ಮೇಲೆ ಅವಲಂಬಿತವಾಗಿರುತ್ತವೆ, ಅಷ್ಟೇಅಲ್ಲ, ಜೊತೆಗೆ ವಿಧ್ಯಾರ್ಥಿಯ ಜಾಣ್ಮೆ, ಅನುಭವ, ಮತ್ತು ಪ್ರೇರಣೆ ಹಾಗು ಎಷ್ಟು ಮರು ವಿಮರ್ಶೆ ಮಾಡುತ್ತೇವೆ ಎಂಬುದರ  ಮೇಲೆ ಕೂಡ ಅವಲಂಬಿತವಾಗಿರುತ್ತವೆ. ಇನ್ನು  ಶಿಕ್ಷಕರು ಬೀರುವ ಒಟ್ಟಾರೆ ಪ್ರಭಾವವನ್ನುನಾವು ಮರೆಯುವಂತಿಲ್ಲ.

ದೋಷಪೂರಿತ ಬೋಧನಾತಂತ್ರಗಳಿಂದ ಮಕ್ಕಳಲ್ಲಿ ಮರೆವು ಇನ್ನೂ ಹೆಚ್ಚಾಗಬಹುದು. ಅಂದರೆ ಮರೆವನ್ನು ಜಾಗರೂಕತೆಯಿಂದ ಯೋಜಿಸಲಾದ ಬೋಧನಾತಂತ್ರಗಳನ್ನು ಬಳಸಿಕೊಂಡು ನಿವಾರಿಸಬಹುದು. ಆದ್ದರಿಂದ, ಈ. ವಿಷಯಗಳನ್ನು "ಬಳಸದೇ ಇರುವುದು" ಅಥವಾ ಅಪಾರ್ಥಮಾಡಿಕೊಂಡ ಅಥವಾ ಸರಿಯಾಗಿ ತಿಳಿಯದ ವಿಷಯದ ಸಂದರ್ಭದಲ್ಲಿ ಹೀಗೆ ಮರೆವು ಉಂಟಾಗುತ್ತದೆ. ಇದು ಅಡೆತಡೆ' ಎಂಬ ಸಕ್ರಿಯ ಪ್ರಕ್ರಿಯೆಯ ಕಾರಣದಿಂದಲೂ ನಡೆಯುತ್ತದೆ. ಹಸ್ತಕ್ಷೇಪ ಒಂದೇ ಅಥವಾ ಒಂದೇ ತರಹದ  ಪ್ರಚೋದನೆಗೆ ಬೇರೆ ಬೇರೆ ಪ್ರತಿ ಕ್ರಿಯೆ ಗಳು ಬರುವಂತಿರುವಾಗ ಈ ಅಡೆತಡೆ ಬಹಳ ಹೆಚ್ಚು. ಉದಾಹರಣೆಗೆ, ಪ್ರಚೋದಕ ಪದಗಳ ಒಂದೇ ಪಟ್ಟಿಗೆ ಪ್ರತಿಕ್ರಿಯೆಯಾಗಿ ಎರಡು ವಿಭಿನ್ನ ಪದಗಳ ಪಟ್ಟಿಗಳನ್ನು ಅಧ್ಯಯನ ಮಾಡ ಬೇಕಾದರೆ, ಎರಡನೇ ಪಟ್ಟಿಯಲ್ಲಿನ ಪದಗಳು ಮೊದಲ ಪಟ್ಟಿಯ ಪದಗಳನ್ನು ನೆನಪಲ್ಲಿ ಇಟ್ಟುಕೊಳ್ಳುವುದಕ್ಕೆ ಅತ್ಯಂತ ಅಡ್ಡಿ ಉಂಟುಮಾಡುತ್ತದೆ.

ಕಲಿತ ವಿಷಯಗಳನ್ನು ವಿದ್ಯಾರ್ಥಿ ತನ್ನ ಇತರ ಅನುಭವಗಳ ಜೊತೆ ಸಂಬಂಧ ಕಲ್ಪಿಸಿಕೊಂಡಷ್ಟೂ ಆತ ಕಲಿತಿದ್ದನ್ನು  ಹೆಚ್ಚು ಹೆಚ್ಚು ನೆನಪಿನಲ್ಲಿಟ್ಟುಕೊಳ್ಳುವ ಸಂಭವವಿದೆ. ಕಲಿಯುವ ವಿಷಯಗಳು ಹೆಚ್ಚು ಸಂಘಟಿತ, ಅಡಕವಾಗಿ  ಮತ್ತು ರಚನಾತ್ಮಕ ವಾಗಿದ್ದಷ್ಟೂ ನಂತರ ಕಲಿತದ್ದರಿಂದ ಅದಕ್ಕೆ ಅಡ್ಡಿ ಬಹಳ ಕಡಿಮೆ ಆಗುತ್ತದೆ. ಯಾವುದನ್ನು  ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೋ ಅದು ಬಹಳಕಾಲ ನೆನಪಿನಲ್ಲಿ ಉಳಿದಿರುತ್ತದೆ.ಕಾಲಾಂತರದಲ್ಲಿ  ಮರೆವು ಎಷ್ಟು ಬೇಗ ಆಗುತ್ತದೆ ಮತ್ತು ಎಷ್ಟರಮಟ್ಟಿಗೆ ಆಗುತ್ತದೆ  ಎಂಬುದು ಅತಿ ಕಲಿಕೆ ಮತ್ತು ಕಲಿಕಾ ತರುವಾಯ ಎಷ್ಟುಬಾರಿ ಮರುವಿಮರ್ಶೆ ಮಾಡುತ್ತೀರಿ  ಎಂಬುದಕ್ಕೆ  ಸಂಬಂಧಪಟ್ಟಿವೆ, ವಿಷಯವನ್ನು ಕೇವಲ ಯಥಾವತ್ತಾಗಿ  ಮತ್ತೆ ಬರೆಯುವುದಕ್ಕೆ ಮಾತ್ರ ಕಲಿತಿದ್ದರೆ, ಮತ್ತು  ಅದನ್ನು ಮತ್ತೆ ಮತ್ತೆ ಮೆಲುಕು ಹಾಕದೇ ಹೋದರೆ ಅದು ನೆನಪಿನಿಂದ ಜಾರಿ ಹೋಗುತ್ತದೆ. ಮೂಲ ಕಲಿಕೆಯ ನಂತರ ತಕ್ಷಣವೇ ಅದರ ಪುನರ್ಮನನ ಮಾಡುವುದು ನೆನಪಿನಲ್ಲಿ ಅದನ್ನು ಉಳಿಸಿಕೊಳ್ಳಲು ಅತ್ಯುತ್ತಮ ವಿಧಾನವಾಗಿದೆ. ವಾಚನ ರೂಪದಲ್ಲಿ ಹೇಳುವುದಕ್ಕಾಗಿ ಹೊರತು, ಪುನರ್ಮನನ  ಕೇವಲ ಮರು ಓದುವುದನ್ನು ಮಾಡಬಾರದು; ಬದಲಿಗೆ, ಇದು ಸಂಬಂಧಿತ ಆಕರಗಳ ಕಲಿಕೆ ಹೊಸ ವಿಚಾರ ಇತ್ಯಾದಿ ಗಳನ್ನು, ಹುಡುಕುವುದನ್ನು ಪ್ರೋತ್ಸಾಹಿಸಬೇಕು.

ಒಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಸಿದ ವಿಷಯವನ್ನುಮರೆಯದೆ ನೆನಪಲ್ಲಿ ಉಳಿಸಿಕೊಳ್ಳಲು ಸಹಾಯ ಮಾಡಲು:

1. ತಪ್ಪದೇ ಸಾಕಷ್ಟು ಪ್ರೇರಣೆ ನೀಡಿ.

2  ಎಲ್ಲಾ ವಿದ್ಯಾರ್ಥಿಗಳ ಎಲ್ಲಾ ಅಗತ್ಯವನ್ನೂ ಪೂರೈಸಿರಿ.

3. ಕಲಿಸಿದ್ದನ್ನು ಅವರು ಸರಿಯಾದ ಅರ್ಥದಲ್ಲಿ ಅರ್ಥಮಾಡಿಕೊಳ್ಳುವಂತೆ ನೋಡಿಕೊಳ್ಳಿ.

4. ಕೂಡಲೆ ಮತ್ತು ಆಗಾಗ್ಗೆ ಮರು ವಿಮರ್ಶೆ ನಡೆಸಿರಿ.

5. ಕಲಿಕಾ ವಸ್ತುವಿಗೂ ಇತರ ಅದೇ ರೀತಿಯ ಅನುಭವಗಳಿಗೂ  ಸಂಬಂಧ ಕಲ್ಪಿಸಿ .

6.ಕಲಿಕೆಯ ವಿಷಯವನ್ನು ಉತ್ತಮವಾಗಿ, ರಚನಾತ್ಮಕವಾಗಿ  ಮತ್ತು ಅಡಕವಾಗಿ ಸಂಘಟಿಸಿ,

7. ಮಕ್ಕಳಲ್ಲಿ ನೆನಪಿಟ್ಟುಕೊಳ್ಳಬೇಕೆಂಬ ಉದ್ದೇಶವನ್ನು ಪ್ರೋತ್ಸಾಹಿಸಿ.

8. ನೆನಪಿಗೆ ಅಡ್ಡಿ ಉಂಟುಮಾಡುವ ವಿಷಯಗಳನ್ನು  ಬೇಗ  ಬೇಗನೆ ಒಂದಾದಮೇಲೆ ಒಂದರಂತೆ  ಬೋಧಿಸುವುದನ್ನು ತಪ್ಪಿಸಿ.

9. ಎದ್ದೂ ಬಿದ್ದೂ  ಹೊಸ ವಿಷಯಗಳನ್ನು ಪರಿಚಯಿಸಲು ಹೋಗಬೇಡಿ. ಏಕೆಂದರೆ ಇದು  ಮಕ್ಕಳ ಮನಸ್ಸಿನಲ್ಲಿ ಕೇವಲ ಗೊಂದಲ ಮತ್ತು ಅಸಂಬದ್ಧ ವಿಚಾರಗಳನ್ನು ಹುಟ್ಟಿಸುತ್ತವೆ.

10. ಹೆಚ್ಚಿನ ನೆನಪಿನ ಶಕ್ತಿಯನ್ನು ಉತ್ತೇಜಿಸುವ  ಒಂದು ವಿಧಾನವಾಗಿ ಪರಿಣಾಮಕಾರಿ ಮತ್ತು ಆಸಕ್ತಿದಾಯಕ ಕಲಿಕೆಗೆ ಪ್ರೋತ್ಸಾಹ ನೀಡಿರಿ.

11 ನಿರಂತರವಾಗಿ ನಿಮ್ಮ ಬೋಧನೆಗೂ  ಸ್ಪಷ್ಟ ಉದಾಹರಣೆಗಳು ಮತ್ತು ದೈನಂದಿನ ಸಂದರ್ಭಗಳಿಗೂ ಸಂಬಂಧ ಕಲ್ಪಿಸಿರಿ.

 

ಮೇರಿ ಡೊರೊಥಿ ಫರ್ನಾಂಡೀಸ್, ಅವರ ಈ ಲೇಖನವು,  ಈ ಮೊದಲು ಟೀಚರ್ ಪ್ಲಸ್, ಸಂಚಿಕೆ 19, ಜುಲೈ- ಆಗಸ್ಟ್ 1992 ರಲ್ಲಿ ಪ್ರಕಟವಾಗಿದೆ. ಅದನ್ನು ಇಲ್ಲಿ ಕೆಲವು ಬದಲಾವಣೆಗಳೊಂದಿಗೆ ಕನ್ನಡಕ್ಕೆ ಅನುವಾದಿಸಲಾಗಿದೆ.

ಕನ್ನಡಾನುವಾದ ಮತ್ತು ಸಂಪಾದನೆ: ಜೈಕುಮಾರ್ ಮರಿಯಪ್ಪ

 

 

 

 

 

18938 ನೊಂದಾಯಿತ ಬಳಕೆದಾರರು
7394 ಸಂಪನ್ಮೂಲಗಳು