ಸಂಪನ್ಮೂಲ ಕೊಠಡಿ - ಬಾಹ್ಯ ಆಧಾರ ವ್ಯವಸ್ಥೆ -ರೀನಾ ರ‍್ಯಾಲ್

 
ಈ ಲೇಖನವು ವಿಶೇಷ ಕಲಿಕಾ ಅವಶ್ಯಕತೆ ಇರುವ ಮಕ್ಕಳ ಶಿಕ್ಷಣಕ್ಕೆ ಆಧಾರ ವ್ಯವಸ್ಥೆಯಾಗಿ ಶಾಲೆಗಳಲ್ಲಿ ಸಂಪನ್ಮೂಲ ಕೊಠಡಿಯನ್ನು ಸಂಯೋಜಿಸಿ, ನಿರ್ವಹಿಸುವಲ್ಲಿ ಶಿಕ್ಷಕರು, ಮುಖ್ಯೋಪಾಧ್ಯಾಯರು ಮತ್ತು ಶಾಲಾ ಆಡಳಿತ ಮಂಡಳಿಯ ಪಾತ್ರವನ್ನು ವಿಶ್ಲೇಷಿಸುತ್ತದೆ. 
ವಿಶೇಷ ಕಲಿಕಾ ಅವಶ್ಯಕತೆ ಇರುವ ಮಕ್ಕಳನ್ನು ಸಾಮಾನ್ಯ ತರಗತಿಯಲ್ಲಿ ಸೇರಿಸಿಕೊಂಡು ಕಲಿಸುವ  ಕಾರ್ಯ ನೀತಿಯ ಬಗ್ಗೆ ಶಿಕ್ಷಕರಲ್ಲಿ ಸಾಕಷ್ಟು ನಿರಾಸಕ್ತಿ ಇದೆ. ಈ ಮಕ್ಕಳ ಕಲಿಕೆಗೆ ಹೆಚ್ಚಿನ ಸಮಯ ಮೀಸಲಿಡಬೇಕಾದದ್ದು, ನಿರೀಕ್ಷಿತ ಸಾಧನೆಯು ಆ ಮಕ್ಕಳಲ್ಲಿ ಗೋಚರಿಸದೆ ಇರುವುದು, ಸಮಾವೇಶಿ ಶಿಕ್ಷಣ ಪದ್ಧತಿಯಿಂದ ಇತರ ಮಕ್ಕಳ ಮೇಲೆ ಆಗಬಹುದಾದ ಪರಿಣಾಮದ ಬಗ್ಗೆ ಆತಂಕ, ಜೊತೆಗೆ ಇಂತಹ ಸಂದರ್ಭಗಳನ್ನು ನಿರ್ವಹಿಸಲು ಅಗತ್ಯವಾದ ತರಬೇತಿ ಮತ್ತು ಕೌಶಲ್ಯದ ಕೊರತೆಯಿಂದ ಉಂಟಾಗುವ ಹಿಂಜರಿಕೆ ಇದಕ್ಕೆಲ್ಲ ಕಾರಣವಾಗುತ್ತದೆ. ಶಿಕ್ಷಕರ ಮನೋಧೋರಣೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ ಹಾಗಾಗಿ ಶಿಕ್ಷಕರಲಿ ಒಲ್ಲದ ಮನೋಧೋರಣೆ ಇದ್ದಾಗ ಅದು ನಾವು ಚಿಂತಿಸಬೇಕಾದ ವಿಷಯ. 
 
ಸಂಪನ್ಮೂಲ ಕೊಠಡಿಯಲ್ಲಿ ವಿದ್ಯಾರ್ಥಿಗಳು ವೈಯಕ್ತಿಕ ಶಿಕ್ಷಣ ಕಾರ್ಯಕ್ರಮದ ಪ್ರಕಾರ ಸಾಧಿಸಬೇಕಾಗಿರುವ ಗುರಿಯನ್ನು ಸಾಧಿಸಲು ಸಾಧ್ಯವಾಗುವಂತೆ ವೈಯಕ್ತಿಕವಾಗಿ ಅವರಿಗೆ ಮಾರ್ಗದರ್ಶನ ದೊರಕಿ, ಅವರು ತರಗತಿಯಲ್ಲಿ ತಮ್ಮ ಕಲಿಕೆಯನ್ನು ಉತ್ತಮಗೊಳಿಸಲು ಮತ್ತು ಇತರ ಮಕ್ಕಳ ಜೊತೆ ಸರಿಸಮವಾಗಿ ಕಲಿಯಲು ಸಾಧ್ಯವಾಗುತ್ತದೆ. ಸಂಪನ್ಮೂಲ ಕೊಠಡಿಯು ಡಿಸ್ಲೆಕ್ಸಿಯಾ ಇರುವ ಅಥವ ಇದೇ ರೀತಿಯ ಇತರ ಕಲಿಕಾ ನ್ಯೂನತೆಗಳು ಇರುವ ಮಕ್ಕಳಿಗೆ ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಸಹಾಯ ಮಾಡುತ್ತದೆ, ಏಕೆಂದರೆ ಇಲ್ಲಿ ಶಿಕ್ಷಕರು ಅವರಿಗೆ ವೈಯಕ್ತಿಕ ಗಮನ ಕೊಟ್ಟು ಅವರ ಕಲಿಕೆಯನ್ನು ಮನದಟ್ಟು ಮಾಡಿಸುವ ಅವಕಾಶ ಇರುತ್ತದೆ. ಸಂಪನ್ಮೂಲ ಕೊಠಡಿಯು ಒಂದು   ಉತ್ತಮ ಕಲಿಕಾ ವಾತಾವರಣವನ್ನು ಸೃಷ್ಟಿಸುತ್ತದೆ. 
 
ಭಾರತದಲ್ಲಿ ಸಂಪನ್ಮೂಲ ಕೊಠಡಿಯ ಅಥವ ಕಲಿಕಾ ಆಧಾರ ವ್ಯವಸ್ಥೆಯ ಕಲ್ಪನೆ ಇನ್ನೂ ಹೊಸದು. ಕಳೆದ ಕೆಲವು ವರ್ಷಗಳಲ್ಲಿ ಇದರ ಬಗ್ಗೆ ಹೆಚ್ಚಿನ ಜಾಗೃತಿ ಉಂಟಾಗಿದ್ದರೂ, ಒಂದು ಶೈಕ್ಷಣಿಕ ಕ್ಷೇತ್ರದ ವರ್ತುಲದೊಳಗೆ ಸಂಪನ್ಮೂಲ ಕೊಠಡಿ ಒದಗಿಸಬಹುದಾದ ಮಹತ್ವದ ಕೊಂಡಿಯ ಬಗ್ಗೆ ಮುಖ್ಯೋಪಧ್ಯಾಯರು ಮತ್ತು ಶಾಲಾ ಆಡಳಿತ ಮಂಡಳಿಯು ಇನ್ನೂ ಹೆಚ್ಚಿನ ಅರಿವು ಮತ್ತು ಆಸ್ಥೆಯನ್ನು  ಬೆಳೆಸಿಕೊಂಡಿಲ್ಲ. ಸಂಪನ್ಮೂಲ ಕೊಠಡಿ ಎಂದರೆ ಅದು ಕೇವಲ ವಿಶೇಷ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿರುವುದು ; ಇದರ ಅವಶ್ಯಕತೆ ಇರುವುದು ಕೆಲವೇ ಕೆಲವು ಮಕ್ಕಳಿಗೆ ಮಾತ್ರ, ಹಾಗಾಗಿ ಇದು ಇದ್ದರೂ ಆಯ್ತು, ಇಲ್ಲದಿದ್ದರೂ ಆಯ್ತು; ಇದಕ್ಕಾಗಿ ಹೆಚ್ಚಿನ ಆರ್ಥಿಕ ಹೊರೆ ಏಕೆ ಹೊರಬೇಕು ಎಂಬ ದೃಷ್ಟಿಕೋನದಿಂದ ಶಾಲೆಗಳು ಸಂಪನ್ಮೂಲ ಕೊಠಡಿಯ ಪರಿಕಲ್ಪನೆಯನ್ನು ತಮ್ಮ ವ್ಯಾಪ್ತಿಯಿಂದ ಹೊರಗಿಟ್ಟಿವೆ. ಈ ಧೋರಣೆಯನ್ನು ಇಂಗ್ಲೀಷಿನಲ್ಲಿ ’Penny wise and pound fool’(ಕಾಸಿಗೆ ಜಾಣ ರೂಪಾಯಿಗೆ ದಡ್ಡ) ಎಂದು ಕರೆಯುತ್ತಾರೆ. ಮಕ್ಕಳಲ್ಲಿ ಇರುವ ಕಲಿಕಾ ಸಮಸ್ಯೆಗಳನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಗುರುತಿಸಿ, ವಿಶೇಷ ಅವಶ್ಯಕತೆ ಇರುವ ಮಕ್ಕಳಿಗೆ ಸೂಕ್ತ ತರಬೇತಿ ಕೊಡುವುದರಿಂದ ವಿಶೇಷ ಅವಶ್ಯಕತೆ ಇರುವ ಮಕ್ಕಳಿಗಷ್ಟೇ ಅಲ್ಲದೆ, ತರಗತಿಯ ಇತರ ಮಕ್ಕಳಿಗೂ ಆಗುವ ಲಾಭಗಳ ಬಗ್ಗೆ ನಾವು ಒಂದು ಸೂಕ್ಷ್ಮ ವಿಶ್ಲೇಷಣೆಯನ್ನು  ಮಾಡಬೇಕು. 
 
ಸಂಪನ್ಮೂಲ ಕೊಠಡಿಯ ಉದ್ದೇಶ: 
ತರಗತಿಯಲ್ಲಿ ನಿಭಾಯಿಸಲಾಗದ ಮಕ್ಕಳನ್ನು ಸಂಪನ್ಮೂಲ ಕೊಠಡಿಗೆ ತಳ್ಳಿದರಾಯಿತು ಎಂಬ ತಪ್ಪು ಕಲ್ಪನೆ ನಮ್ಮ ಅನೇಕ ಶಿಕ್ಷಕರಲ್ಲಿದೆ. ಅವರ ಪ್ರಕಾರ ಸಂಪನ್ಮೂಲ ಕೊಠಡಿ ಎಂಬುದು ತರಗತಿಯಲ್ಲಿ ಆಗಬಹುದಾದ ಅನಾಹುತಗಳಿಂದ ತಪ್ಪಿಸಿಕೊಳ್ಳಲು ಇರುವ ಪರ್ಯಾಯ ಸ್ಥಳ. ಆದರೆ ಇದನ್ನು ಮೀರಿ ಸಂಪನ್ಮೂಲ ಕೊಠಡಿಗೆ ಇತರ ಪ್ರಮುಖ ಉದ್ದೇಶಗಳಿವೆ: 
ಸಂಪನ್ಮೂಲ ಕೊಠಡಿಯ ಪ್ರಮುಖ ಉದ್ದೇಶವೆಂದರೆ, ಸಾಮಾನ್ಯ ತರಗತಿಯಲ್ಲಿ ನಡೆಯುವ  ಪರೀಕ್ಷೆಗಳಲ್ಲಿ ತನ್ನ ಸಾಮರ್ಥ್ಯವನ್ನು ಸಂಪೂರ್ಣವಾಗಿ ತೋರ್ಪಡಿಸಲು ಸಾಧ್ಯವಾಗದ ಮಗುವಿಗೆ ವೈಯಕ್ತಿಕವಾಗಿ ಪರಿವರ್ತನಕಾರಿ, ನಾವೀನ್ಯಪೂರ್ಣ ಬೋಧನಾ ವಿಧಾನಗಳ ಮೂಲಕ ಸಾಮರ್ಥ್ಯವರ್ಧನೆ ಮಾಡುವುದು.  
ಮಕ್ಕಳಲ್ಲಿ ಇರಬಹುದಾದ ಕಲಿಕಾ ಸಮಸ್ಯೆಗಳನ್ನು ಪ್ರಾಥಮಿಕ ಪೂರ್ವ ಹಂತದಲ್ಲಿಯೇ ಗುರುತಿಸಿ, ಅದಕ್ಕೆ ಪರಿಹಾರ ರೂಪದಲ್ಲಿ ಸೂಕ್ತ ಮಧ್ಯವರ್ತಿ ಕ್ರಮಗಳನ್ನು ಯೋಜಿಸಬಹುದಾದ ಅಪರೂಪದ ಸಾಮರ್ಥ್ಯ ಸಂಪನ್ಮೂಲ ಕೊಠಡಿಗೆ ಇದೆ. ಹೀಗೆ ಮಾಡುವುದರಿಂದ, ಆನುಷಂಗಿಕ, ಪರೋಕ್ಷ ಕಾರಣಗಳಿಂದಾಗಿ ಕಲಿಕಾ ಸಮಸ್ಯೆಗಳಲ್ಲಿ ಸಿಕ್ಕಿಕೊಳ್ಳುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. 
ಕಾಲಾನುಕ್ರಮದಲ್ಲಿ ಮಕ್ಕಳಲ್ಲಿ ತಲೆದೋರಬಹುದಾದ ಕಲಿಕಾ ಸಮಸ್ಯೆಗಳನ್ನು ಗುರುತಿಸುವ ಸಾಮರ್ಥ್ಯ ಕೂಡ ಸಂಪನ್ಮೂಲ ಕೊಠಡಿಗೆ ಇದೆ.  
 
ತರಗತಿ ಶಿಕ್ಷಕರ ನಿತ್ಯದ ಸಮಸ್ಯೆಗಳಿಗೆ ಅಥವ ಗಣಿತದ ಸಮಸ್ಯೆಯೊಂದನ್ನು ವಿವರಿಸಲು ಕಷ್ಟಪಡುತ್ತಿರುವ ಶಿಕ್ಷಕಿಗೆ ಅಥವ ಇತಿಹಾಸದ ಪಾಠವೊಂದರ ಮನೋನಕ್ಷೆಯನ್ನು ಚಿತ್ರಿಸಲು ಕಷ್ಟಪಡುತ್ತಿರುವ ಶಿಕ್ಷಕರಿಗೆ ಸಂಪನ್ಮೂಲ ಕೊಠಡಿಯು ಒಂದು ವರದಾನವಾಗಿದೆ. 
ಪಠ್ಯ ವಿಷಯಗಳಿಗೆ ಸಂಬಂಧಿಸಿದಂತೆ ಅಗತ್ಯವಾದ ತರಗತಿ ಚಟುವಟಿಕೆಗಳ ಆಗರವಾಗಿ ಸಂಪನ್ಮೂಲ ಕೊಠಡಿಯನ್ನು ರೂಪುಗೊಳಿಸಬಹುದು. ಸಾಮಾನ್ಯ ತರಗತಿ ಶಿಕ್ಷಕರು ಮತ್ತು ವಿಶೇಷ ಸಂಪನ್ಮೂಲ ಶಿಕ್ಷಕರ ನಡುವೆ ಒಂದು ನಿಯಮಿತ, ವ್ಯವಸ್ಥಿತ ಚರ್ಚೆಯನ್ನು ಸಾಧ್ಯಮಾಡಿದರೆ, ಇಲ್ಲಿ ನಡೆಯುವ ಯೋಚನೆಗಳು, ಜ್ಞಾನದ ಸೃಜನಶೀಲ ಯೋಚನೆಗಳನ್ನು ಪರಸ್ಪರ ಹಂಚಿಕೊಳ್ಳುವಿಕೆಯ ಮೂಲಕ ಸಂಪನ್ಮೂಲ ಕೊಠಡಿ ಎಂಬ ವಿಶೇಷ ಪರಿಕಲ್ಪನೆಯೇ ನಗಣ್ಯವಾಗಿ, ಪ್ರತಿಯೊಬ್ಬ ಶಿಕ್ಷಕರು ಕೂಡಾ ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಸಾಮಾನ್ಯ ತರಗತಿಯ ವ್ಯಾಪ್ತಿಯೊಳಗೇ ಅಗತ್ಯ ಮಾರ್ಗದರ್ಶನ ಮಾಡಲು ಸಾಧ್ಯವಿದೆ. 
 
ಸಂಪನ್ಮೂಲ ಕೊಠಡಿಯ ಯಶಸ್ಸಿಗೆ ತೊಡಕಾಗುವ ಮನೋಧೋರಣೆಗಳು
ಸಂಪನ್ಮೂಲ ಕೊಠಡಿಯ ಇರುವಿಕೆಗೆ ಹಲವಾರು ಅಡೆತಡೆಗಳಿವೆ. ಶಾಲಾ ಆಡಳಿತ ಮಂಡಳಿಗಳು ಅದು ಖರ್ಚಿನ ಬಾಬತ್ತು ಎಂದು ನಿರ್ಲಕ್ಷಿಸಿದರೆ, ಸಾಮಾನ್ಯ ಶಿಕ್ಷಕರು ಈ ಸಂಪನ್ಮೂಲ ಕೊಠಡಿಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ತಾವು ಮತ್ತೆಲ್ಲಿ ಇನ್ನೊಂದು ಕಾರ್ಯಾಗಾರಕ್ಕೆ ಹಾಜರಾಗಬೇಕಾಗುತ್ತದೋ ಎಂದು ಭಯಪಡುತ್ತಾರೆ; ತಮ್ಮ ಮಕ್ಕಳಿಗೆ ಎಲ್ಲಿ ’ವಿಶೇಷ ಅವಶ್ಯಕತೆಯುಳ್ಳ ಮಗು’ ಎಂದು ಹಣೆಪಟ್ಟಿ ಕಟ್ತುತ್ತಾರೋ ಎಂದು ಪೋಷಕರು ಅಂಜುತ್ತಾರೆ; ತಮಗೆ ಇಷ್ಟವಾದ ಆಟ, ಸಂಗೀತ, ಕಲಾ ತರಗತಿಯ ಹೊತ್ತಿಗೆ ತಮ್ಮನ್ನು ಸಂಪನ್ಮೂಲ ಕೊಠಡಿಗೆ ಕಳುಹಿಸುವುದನ್ನು, ಮತ್ತು ಇತರ ವಿದ್ಯಾರ್ಥಿಗಳು ತಮ್ಮನ್ನು ಅಪಹಾಸ್ಯ ಮಾಡುವುದನ್ನು ನೆನೆಸಿಕೊಂಡು ವಿದ್ಯಾರ್ಥಿಗಳು ಹಿಂಜರಿಯುತ್ತಾರೆ. ಹೀಗಿರುವಾಗ ಸಂಪನ್ಮೂಲ ಕೊಠಡಿಗೆ ಇರುವ ಪ್ರಮುಖ ಅಡೆತಡೆ ಎಂದರೆ ಜನರ ಮನೋಧೋರಣೆಯೇ ಎಂದರೆ ತಪ್ಪಾಗಲಾರದು. 
 
o ಮುಖ್ಯೋಪಾಧ್ಯಾಯರು ಮತ್ತು ಶಾಲಾ ಆಡಳಿತಮಂಡಳಿ 
 
ಒಂದಿಬ್ಬರು ವಿಶೇಷ ಶಿಕ್ಷಕರನ್ನು ನಿಯೋಜಿಸುವ ಬದಲು, ದೀರ್ಘಕಾಲೀನ ಲಾಭವನ್ನು ಪರಿಗಣಿಸಿ, ಶಾಲೆಯ ಎಲ್ಲಾ ಶಿಕ್ಷಕರಿಗೆ ನಿಯಮಿತವಾಗಿ ತರಬೇತಿ ಕೊಡುವಂತೆ ಒಂದು ವಿಶೇಷ ಶಿಕ್ಷಣ ತರಬೇತುದಾರರ ತಂಡವೊಂದನ್ನು ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯೋಪಧ್ಯಾಯರು ಆಯೋಜಿಸುವುದು ಉತ್ತಮ.  ಇವತ್ತಿನ ಸಂದರ್ಭದಲ್ಲಿ ತರಗತಿಯೊಂದರಲ್ಲಿ ವಿಭಿನ್ನ ರೀತಿಯ ಕಲಿಕಾ ಅವಶ್ಯಕತೆ ಇರುವ ಮಕ್ಕಳು ಇರುತ್ತಾರೆ. ಅವರಿಗೆ ಮಾರ್ಗದರ್ಶನ ಮಾಡುವುದರಲ್ಲಿ ಶಿಕ್ಷಕರಿಗೆ ಇರುವ ಒತ್ತಡವನ್ನು ಈ ಮೂಲಕ ಕಡಿಮೆ ಮಾಡಬಹುದು. ಶಾಲೆಯೊಂದಕ್ಕೆ ತನ್ನ ಫಲಿತಾಂಶವನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವ ನಿರೀಕ್ಷೆ ಇದ್ದರೆ, ಶಿಕ್ಷಣದ ಬಗ್ಗೆ ಅದಕ್ಕೆ ಬದ್ಧತೆ ಇದ್ದರೆ, ತಾನು ಒಂದು ’ಉತ್ತಮ’ ಶಾಲೆ ಎಂದು ಪರಿಗಣಿಸಿಕೊಳ್ಳಬೇಕೆಂದಿದ್ದರೆ, ಅದು ಮಕ್ಕಳಲ್ಲಿ ಇರಬಹುದಾದ ಕಲಿಕಾ ಸಾಧ್ಯತೆ ಅಸಾಧ್ಯತೆಗಳನ್ನು ಆರಂಭದಲ್ಲಿಯೇ ಗುರುತಿಸಿ, ಅದರ ಮಟ್ಟವನ್ನು ಅನೌಪಚಾರಿಕವಾಗಿ ಅಳೆಯುವ ಮತ್ತು ಅದಕ್ಕೆ ತಕ್ಕಂತೆ ಪರಿಹಾರ ವ್ಯವಸ್ಥೆಯನ್ನು ಮಾಡುವ ಅಗತ್ಯ ಇದೆ. ಮುಖ್ಯೋಪಧ್ಯಾಯರು ಮಕ್ಕಳಲ್ಲಿ ಹೆಚ್ಚುತ್ತಿರುವ ಕಲಿಕಾ ಸಮಸ್ಯೆಗಳನ್ನು ಕುರಿತು ಕುರುಡಾಗಿರುವುದು ಸಮಸ್ಯೆಗಳು ಉಲ್ಬಣಗೊಳ್ಳಲು ಕಾರಣವಾಗುತ್ತದೆ. ವಿಶೇಷ ಶಿಕ್ಷಣವನ್ನು ಪರಿಹಾರೋಪಾಯ ಎಂದು ಪರಿಗಣಿಸುವ ಬದಲಾಗಿ, ಅದೇನು ಕಡ್ಡಾಯವಲ್ಲ, ಇದ್ದರಾಯಿತು, ಇಲ್ಲದಿದ್ದರೆ ಇಲ್ಲ; ಅದಕ್ಕೆ ನಮ್ಮ ಸಂಬಳದಲ್ಲಿ ನಾವೇಕೆ ಕಡಿತ ಮಾಡಿಕೊಳ್ಳಬೇಕು ಎಂಬ ಸಣ್ಣತನ ಹೆಚ್ಚಾಗಿ ಮೇಲುಗೈ ಸಾಧಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರ ಬೆಂಬಲ ಇರುವ ಸಂಪನ್ಮೂಲ ಕೊಠಡಿಗಳು ಮುಂದಿನ ಹಂತಕ್ಕೆ ತೇರ್ಗಡೆಯೇ ಸಾಧ್ಯವಿಲ್ಲದ ಎಷ್ಟೋ ಮಕ್ಕಳಿಗೆ ಆಧಾರ ವ್ಯವಸ್ಥೆಗಳಾಗಿ ಸುವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತವೆ. ’ಆರಂಭದಲ್ಲಿಯೇ ಕೊಡುವ ಚಿಕಿತ್ಸೆ ಅತ್ಯುತ್ತಮ ಚಿಕಿತ್ಸೆ’ ಅನ್ನುವ ರೀತಿಯಲ್ಲಿ ಸಂಪನ್ಮೂಲ ಕೊಠಡಿಯು ಒಂದು ಚಿಕಿತ್ಸಾಲಯವಾಗಿ ಕೆಲಸ ಮಾಡುತ್ತದೆ. ಆಡಳಿತ ಮಂಡಳಿಯ ಧೋರಣೆ ಸಂಪನ್ಮೂಲ ಕೊಠಡಿಯ ಯಶಸ್ಸಿಗೆ ಅಥವಾ ವೈಫಲ್ಯಕ್ಕೆ ಸಂಪೂರ್ಣ ಕಾರಣವಾಗುತ್ತದೆ ಎಂಬುದು ನಿಜ. ಮುಖ್ಯೋಪಾಧ್ಯಾಯರ ಬೆಂಬಲವು ಶಿಕ್ಷಕರ ಬೋಧನಾ ವಿಧಾನ ಮತ್ತು ವಿಶೇಷ ಅವಶ್ಯಕತೆ ಇರುವ ಮಕ್ಕಳ ಬಗ್ಗೆ ಅವರ ಮನೋಧೋರಣೆಯನ್ನು ಬಲವಾಗಿ ಪ್ರಚೋದಿಸುತ್ತದೆ. ಶಾಲಾ ಆಡಳಿತ ಮಂಡಳಿಗಳು ತಮ್ಮ ಸಂಪೂರ್ಣ ಬೆಂಬಲ ನೀಡಿದಾಗ ಶಿಕ್ಷಕರು ಈ ಮಕ್ಕಳನ್ನು ಬಲು ಅಕ್ಕರೆಯಿಂದ ತೊಡಗಿಸಿಕೊಳ್ಳುವುದನ್ನು ನಾವು ಕಾಣುತ್ತೇವೆ.
 
o ಸಾಮಾನ್ಯ ಶಿಕ್ಷಕರ ಮನೋಧೋರಣೆಗಳು
 
ಶಿಕ್ಷಕರ ಮನಸಿಲ್ಲದ ಧೋರಣೆಯು ವಿಶೇಷ ಅವಶ್ಯಕತೆಯುಳ್ಳ ಮಕ್ಕಳನ್ನು ಇತರ ಮಕ್ಕಳ ಜೊತೆ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ನಮಗೆ ಎದುರಾಗುವ ಮುಖ್ಯ ತಡೆಗೋಡೆ. ಯಾವುದೇ ಶೈಕ್ಷಣಿಕ ಆಧಾರ ವ್ಯವಸ್ಥೆಯನ್ನು ಇತರೆಲ್ಲ ವ್ಯವಸ್ಥೆಗಳ ಹೊರಗೆ ಪ್ರತ್ಯೇಕವಾಗಿ ರಚಿಸಲು ಸಾಧ್ಯವಿಲ್ಲದ ಕಾರಣಕ್ಕಾಗಿ ಈ ಮನೋಧೋರಣೆ ನಮ್ಮನ್ನು ಕಂಗೆಡಿಸುತ್ತದೆ. ಇಡೀ ಸರಪಳಿಯ ಒಂದು ಕೊಂಡಿ ಕಳಚಿದರೂ ಸರಪಳಿ ಕಳಚಿಕೊಳ್ಳುತ್ತದೆ. ಹಾಗಾಗಿ ಒಂದು ಮಗುವಿಗೆ ಕಲಿಕಾ ಸಮಸ್ಯೆ ಇದೆ ಎಂದು ತಿಳಿದುಬಂದಾಗ ಅದರ ಕಲಿಕಾ ಸಾಮರ್ಥ್ಯವನ್ನು ಉತ್ತಮಗೊಳಿಸಲು ಅಗತ್ಯ ಆಧಾರ ವ್ಯವಸ್ಥೆಯನ್ನು ಕಲ್ಪಿಸುವುದು ನಾವು ಸಹಜವಾಗಿ ಮಾಡಬೇಕಾದ ಕೆಲಸ. ಈ ಬದ್ಧತೆ ಸಾಮಾನ್ಯ ಶಿಕ್ಷಕರಲ್ಲಿ ಇಲ್ಲವಾದಲ್ಲಿ ಸಂಪನ್ಮೂಲ ಕೊಠಡಿಯನ್ನು ಮುನ್ನಡೆಸುವುದು ಕಷ್ಟಸಾಧ್ಯ. ಎಲ್ಲಾ ಶಿಕ್ಷಕರು ಸಂಪನ್ಮೂಲ ಕೊಠಡಿಯ ಬಗ್ಗೆ ಉತ್ಸಾಹಭರಿತ ಮನೋಧೋರಣೆ ಹೊಂದಬೇಕಾದರೆ, ಶಿಕ್ಷಕ ತರಬೇತಿಯ ಸಂದರ್ಭದಲ್ಲಿ ಸಮಾವೇಶಿ ಕಲಿಕಾ ಪದ್ಧತಿಗಳ ಬಗ್ಗೆ ಉತ್ತಮೊತ್ತಮ ಅನುಭವಗಳನ್ನು ಮತ್ತು ಕಲಿಕಾ ಪ್ರಕ್ರಿಯೆಯ ಬಗ್ಗೆ ಅಗತ್ಯ ಒಳನೋಟಗಳನ್ನು ಒದಗಿಸುವುದು ಅಗತ್ಯ. ಶಿಕ್ಷಕರಿಗೆ ಸಮಾವೇಶಿ ತರಗತಿಗಳಲ್ಲಿ ಹಿಂದೆ ಆದ ಅನುಭವಗಳು ಈ ತರಗತಿಗಳ ಬಗ್ಗೆ ಅವರ ಮನೋಧೋರಣೆಯನ್ನು ಪ್ರೇರೇಪಿಸುತ್ತವೆ ಎಂದು ಒಂದು ಪ್ರಮುಖ ಅಧ್ಯಯನವು ಸೂಚಿಸುತ್ತದೆ. ಈ ಅಧ್ಯಯನವು ಸಂಪನ್ಮೂಲ ಕೊಠಡಿ ಮತ್ತು ಅದಕ್ಕೆ ಸಂಬಂಧಿಸಿದ ತರಗತಿ ಚಟುವಟಿಕೆಗಳಿಗೆ ಶಿಕ್ಷಕರನ್ನು ಪರಿಚಯಿಸಬೇಕಾದ ಅಗತ್ಯವನ್ನು ಎತ್ತಿ ಹಿಡಿಯುತ್ತದೆ. 
 
o ಶಿಕ್ಷಕ ತರಬೇತಿ
 
ನಮ್ಮ ದೇಶದಲ್ಲಿ ಇರುವ ಶಿಕ್ಷಕ ತರಬೇತಿ ವ್ಯವಸ್ಥೆಯು ವಿಶೇಷ ಶಿಕ್ಷಣದ ಅವಶ್ಯಕತೆಗಳನ್ನು ತೃಪ್ತಿಕರವಾಗಿ ಈಡೇರಿಸುವಲ್ಲಿ ಯಶಸ್ವಿಯಾಗಿಲ್ಲ. ಸಾಮಾನ್ಯ ಶಿಕ್ಷಕರಿಗೆ ವಿಶೇಷ ಶಿಕ್ಷಣದ ಆವಶ್ಯಕತೆಯ ಅರಿವಿನ ಕೊರತೆ ಇದೆ ಅಥವ ಅರಿವು ಇದ್ದರೂ ಅದನ್ನು ಕುರಿತು ಆಸಕ್ತಿ ಇಲ್ಲ. ಸಂಪನ್ಮೂಲ ಕೊಠಡಿಯು ಯಶಸ್ವಿಯಾಗಬೇಕಾದರೆ ಸಾಮಾನ್ಯ ಶಿಕ್ಷಕರಿಗೆ ಕಲಿಕಾ ನ್ಯೂನತೆಗಳ ಬಗ್ಗೆ ತರಬೇತಿ ಇಲ್ಲದಿದ್ದರೂ, ಅದರ ಬಗ್ಗೆ ಸ್ವಲ್ಪವಾದರೂ ಅರಿವು ಇರುವುದು ಅವಶ್ಯಕ. ಪ್ರಸಕ್ತ ನಡೆಯುತ್ತಿರುವ ಶಿಕ್ಷಕ ತರಬೇತಿಯು ಶಿಕ್ಷಕರನ್ನು ಕಲಿಕಾ ನ್ಯೂನತೆಗಳು ಇರುವ ಮಕ್ಕಳ ಕಡೆಗೆ ಗಮನ ಹರಿಸುವಂತೆ ಮಾಡುತ್ತಿಲ್ಲ. ಹಾಗಾಗಿ ಇಂದು ಸಂಪನ್ಮೂಲ ಕೊಠಡಿ ಎಂಬುದು ತರಗತಿಯಲ್ಲಿ ಎಲ್ಲರೊಂದಿಗೆ ಸರಿಸಮವಾಗಿ ಕಲಿಯಲಾಗದ ವಿದ್ಯಾರ್ಥಿಗಳನ್ನು ವಿಶೇಷ ಶಿಕ್ಷಣ ತರಬೇತಿ ಪಡೆದ ಶಿಕ್ಷಕರು ಇತರರಿಗೆ ತೊಂದರೆಯಾಗದಂತೆ ಕೂರಿಸಿಕೊಳ್ಳುವ ಸ್ಥಳವಾಗಿ ಮಾತ್ರ ಸೀಮಿತವಾಗಿದೆ. ಇಂತಹ ವಿದ್ಯಾರ್ಥಿಗಳಿಗೆ ವರ್ಗ ಶಿಕ್ಷಕರು ಸಾಮಾನ್ಯವಾಗಿ ತಂಟೆಕೋರರು, ನಡವಳಿಕೆ ಸರಿ ಇಲ್ಲದವರು ಎಂದು ಹಣೆಪಟ್ಟಿ ಹಚ್ಚುತ್ತಾರೆ, ಆದರೆ ಈ ಮಕ್ಕಳಿಗೆ ಅಕ್ಷರಗಳನ್ನು ಗುರುತಿಸಿ, ಓದುವಲ್ಲಿ ಮತ್ತು ಬರೆಯುವಲ್ಲಿ ನಿಜವಾದ ಸಮಸ್ಯೆ ಇರುತ್ತದೆ. ಮಕ್ಕಳ ಸಮಸ್ಯೆಗಳನ್ನು ಶಿಕ್ಷಕರು ಸರಿಯಾಗಿ ಗುರುತಿಸಲು ಸಾಧ್ಯವಾಗದ ಕಾರಣಕ್ಕಾಗಿ ಮಕ್ಕಳು ಅನ್ಯಾಯವಾಗಿ ಈ ಹಣೆಪಟ್ಟಿಗಳನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಸಂಪನ್ಮೂಲ ಕೊಠಡಿಯ ಬಗ್ಗೆ ಶಿಕ್ಷಕರು ತಾವೇನೋ ದಯೆ ತೋರಿಸುತ್ತಿದೇವೆ ಅನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಈ ಮನೋಧೋರಣೆಯು ಮಗುವಿನ ಬೆಳವಣಿಗೆಯ ಬಗ್ಗೆ ನಿರಾಸಕ್ತಿಯನ್ನು ತೋರಿಸುತ್ತದೆ. ತರಗತಿಗಳಲ್ಲಿ ವಿಶೇಷ ಅವಶ್ಯಕತೆ ಇರುವ ಮಕ್ಕಳ ಸಂಖ್ಯೆ ಹೆಚ್ಚುಹೆಚ್ಚಾಗಿ ನಮ್ಮ ಗಮನಕ್ಕೆ ಬರುತ್ತಿರುವ ಸಂದರ್ಭದಲ್ಲಿ ಶಿಕ್ಷಕ ತರಬೇತಿ ಸಂಸ್ಥೆಗಳ ಪಠ್ಯಕ್ರಮವನ್ನು ಈ ಅವಶ್ಯಕತೆಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸಬೇಕಾದ ತುರ್ತು ಅಗತ್ಯ ಇದೆ. ವಿಶೇಷ ಅವಶ್ಯಕತೆ ಇರುವ ಮಕ್ಕಳಿಗೆ ಬೋಧಿಸಲು ಆಸಕ್ತಿ ಇರುವ ಶಿಕ್ಷಕರನ್ನು ನೇಮಿಸುವ ಶಾಲೆಗಳಲ್ಲಿ, ಸಂಪನ್ಮೂಲ ಕೊಠಡಿಯ ಬಗೆಗೆ  ಹೆಚ್ಚು ಆಸ್ಥೆಯುಳ್ಳ  ಧೋರಣೆ ಇರುತ್ತದೆ. ಇದು ಸಂಪನ್ಮೂಲ ಕೊಠಡಿ, ತರಗತಿ, ಪೋಷಕರು ಮತ್ತು ಸಂಪನ್ಮೂಲ ಕೊಠಡಿ ಹೀಗೆ ವರ್ತುಲಾಕಾರದ ಸಂವಹನ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸುತ್ತದೆ. ಈ ಆಸ್ಥೆ ತುಂಬಿದ  ಮನೋಧೋರಣೆ ಇರುವ ಶಿಕ್ಷಕರು ಹೆಚ್ಚು ಹೊಂದಿಕೊಳ್ಳುವ ಸ್ವಭಾವದವರು, ಸಹನಶೀಲರು, ನಾವೀನ್ಯತೆಯನ್ನು ಅಳವಡಿಸಿಕೊಳ್ಳುವವರು ಮತ್ತು ಹುರಿದುಂಬಿಸುವ ಗುಣ ಇರುವವರು ಆಗಿರುವ ಕಾರಣಕ್ಕೆ ಇದು ತರಗತಿ ಆಧಾರ ವ್ಯವಸ್ಥೆಯನ್ನು ಕೂಡ ಬಲಗೊಳಿಸುತ್ತದೆ. ಸಹಕಾರ ಮನೋಭಾವ ಇರುವ ಶಿಕ್ಷಕರಿದ್ದಾಗ ಮಗುವಿನ ಕಲಿಕೆಗೆ ಹೆಚ್ಚಿನ ಸಮಯ, ಸಹಾಯ ಮತ್ತು ಆಯ್ಕೆಗಳು ದೊರೆಯುತ್ತವೆ. ಇಂತಹ ಶಿಕ್ಷಕರು ಸಂಪನ್ಮೂಲ ಕೊಠಡಿಯ ನಿರ್ವಾಹಕರೊಂದಿಗೆ ಕೈಜೋಡಿಸಿ ಮಕ್ಕಳ ಕಲಿಕೆಯ ಸಾಮರ್ಥ್ಯ ಮತ್ತು ಅಸಾಮರ್ಥ್ಯವನ್ನು  ಅಳೆಯಲು, ಅವರು ಕಲಿಯಬೇಕಾದ ಅಂಶಗಳನ್ನು ಮತ್ತು ಅದಕ್ಕಾಗಿ ಅಳವಡಿಸಿಕೊಳ್ಳಬಹುದಾದ ಕಲಿಕಾ ಪದ್ಧತಿಗಳನ್ನು ಹಂಚಿಕೊಂಡು ವಿಶೇಷ ಕಲಿಕಾ ಅವಶ್ಯಕತೆ ಇರುವ ಮಗು ಶೈಕ್ಷಣಿಕವಾಗಿ ಬಲಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುತ್ತಾರೆ. 
 
ಕೊನೆಯದಾಗಿ ಹೇಳುವುದೆಂದರೆ, ಕಲಿಕಾ ಆಧಾರ ವ್ಯವಸ್ಥೆ ಎಂಬುದು ನಮ್ಮ ಇಷ್ಟಾನಿಷ್ಟಕ್ಕೆ ಬಿಟ್ಟ ವಿಷಯ ಅಲ್ಲ; ಅದು ಪ್ರತಿ ಮಗುವಿನ ಹಕ್ಕು. ವಿಶೇಷ ಶಿಕ್ಷಣವನ್ನು ಮಾತ್ರ ಕೇಂದ್ರವಾಗಿರಿಸಿಕೊಂಡ ಶಾಲಾ ತರಗತಿಗಳ ಸಂದರ್ಭದಲ್ಲಿ, ಸಂಪನ್ಮೂಲ ಕೊಠಡಿ ಎಂಬುದು ವಿಶೇಷ ಶಿಕ್ಷಣದ ವ್ಯಾಪ್ತಿಗೆ ಮಾತ್ರ ಸೀಮಿತವಾಗದೆ, ಸಾಮಾನ್ಯ ಶಿಕ್ಷಣದ ವ್ಯಾಪ್ತಿಗೂ ಬರುವ ಹಲವಾರು ಸೇವೆಗಳನ್ನು ಒದಗಿಸುವ ಮೂಲಕ ಒಂದು ಸುಭದ್ರ ಆಧಾರ ವ್ಯವಸ್ಥೆಯಾಗುತ್ತದೆ.  
 
 
 
18465 ನೊಂದಾಯಿತ ಬಳಕೆದಾರರು
7225 ಸಂಪನ್ಮೂಲಗಳು