ಶಿಕ್ಷಣ ಸಂಘಟನೆ ಹೋರಾಟ!

ಶಿಕ್ಷಣ ಸಂಘಟನೆ ಹೋರಾಟ ಇದು ಅಂಬೇಡ್ಕರವರ ಘೋಷಣೆ. ಈ ಘೋಷಣೆ ಪ್ರಪಂಚದ  ಶ್ರೇಷ್ಟ ಘೋಷಣೆಗಳಾದ  Love

Thy Neighbour, ಶಾಂತಿ ನೆಲೆಯೂರಲಿ, ಕಾಯಕವೆ ಕೈಲಾಸ Workers of the World Unite, You Have Nothing

to Lose But Your Chains, ಆಸೆಯೇ ದುಃಖಕ್ಕೆ ಮೂಲ, ಇವುಗಳ ಸರಿ ಸಮವಾಗಿ ನಿಲ್ಲುತ್ತದೆ.

ಈ ಘೋಷಣೆ ಯು ತಾತ್ವಿಕವಾಗಿ ಗಟ್ಟಿಯಾಗಿರುವಷ್ಟೆ ಪ್ರಾಯೋಗಿಕವಾಗಿಯು ಗಟ್ಟಿಯಾಗಿದೆ. ಸಿದ್ಧಾಂತ ಹಾಗೂ ಕ್ರಿಯೆ (Theory and Practice) ಈ ಎರಡನ್ನು ಅತ್ಯಂತ ಪರಿಣಾಮಕಾರಿಯಾಗಿ ಜೊತೆ ಸೇರಿಸಿ ರೂಪುಗೊಂಡ ಈ ಘೋಷಣೆ ಪ್ರಪಂಚದ ಬದಲಾವಣೆಗೆ ದಾರಿದೀಪವಾಗಿದೆ. ಪ್ರಪಂಚವನ್ನು ಬದಲಾಯಿಸುವ ಪ್ರಕ್ರಿಯೆಗೆ ಒಂದು ಕೈಪಿಡಿಯಂತಿದೆ. ನಾವು ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುವಾಗ ಈ ಘೋಷಣೆ ಯ ಪ್ರಾಮುಖ್ಯತೆಯನ್ನು ನೋಡಿದ್ದೇವೆ. ಶಿಕ್ಷಣದಲ್ಲಿ ಕೆಲಸ ಮಾಡುವ ಸಂಸ್ಥೆಗಳು ಬರಿ ಶಿಕ್ಷಣ ನೀಡುತ್ತಾ ಹೋದರೆ ಸ್ವಲ್ಪ ಸಮಯದಲ್ಲಿ ಅವು ಪೇಲವವಾಗಿ ಪ್ರೇರಣೆ ಇಲ್ಲದೆ ಹಾಗೆಯೇ ಕರಗಿ ಹೋಗುತ್ತವೆ. ನಾವು ಸಂಪಾದಿಸಿದ ಶಿಕ್ಷಣ ಪ್ರಾಯೋಗಿಕವಾಗಿ ಕಾರ್ಯಗತವಾಗಲು ಅವಕಾಶಗಳು ಬೇಕಾಗುತ್ತವೆ. ಅವಕಾಶಗಳು ಇಲ್ಲದೆ ಹೋದಲ್ಲಿ ಶಿಕ್ಷಣ ಹಲ್ಲು ಮುರಿದ ಮುದಿ ಹಾವಿನಂತೆ ಬಿದ್ದು ಕೊಂಡಿರುತ್ತದೆ. ಕ್ರಮೇಣ ಆ ಸಂಸ್ಥೆಗಳು ಅಲ್ಲಿಗೆ ನಾಶವಾಗಿ ಹೋಗುತ್ತವೆ. ಇಲ್ಲವಾಗಿ ಬಿಡುತ್ತವೆ. ಶಿಕ್ಷಣದ ಬೆಳವಣಿಗೆಗೆ ಚಿಂತನೆಯಷ್ಟೇ ಪ್ರಮುಖವಾಗಿ ಅಭ್ಯಾಸ ಮತ್ತು ಪ್ರಯೋಗಗಳು ಬೇಕಾಗುತ್ತವೆ. ಅಭ್ಯಾಸ ಎಲ್ಲಕಿಂತಲೂ ಮುಖ್ಯವಾದದ್ದು. ಇನ್ನೊಂದು ಪ್ರಮುಖವಾದ ಅಂಶ ಏನೆಂದರೆ ಶಿಕ್ಷಣದ ಬೆಳವಣಿಗೆ ಬರಿ ತತ್ವದಿಂದ ಚರ್ಚೆಯಿಂದ ಆಗುವುದಿಲ್ಲ. ತತ್ವದ ಆಧಾರದ ಮೇಲೆ ಸಮಗ್ರವಾದ ಅಭ್ಯಾಸಗಳು ಆಗಬೇಕಾಗುತ್ತದೆ. ಈ ಅಭ್ಯಾಸಗಳ ಅನುಭವಗಳ ನ್ನು ಸಂಗ್ರಹಿಸುತ್ತ ಶಿಕ್ಷಣದ ತತ್ವ ಬೆಳೆಯುತ್ತದೆ. ಆದ್ದರಿಂದ ಶಿಕ್ಷಣ ಬೆಳೆಯಲು,ಪ್ರಬುದ್ಧವಾಗಲು ಪ್ರಯೋಗ, ಅಭ್ಯಾಸ ಮತ್ತು ಶ್ರಮ ತುಂಬ ಅನಿವಾರ್ಯವಾ  ಗುತ್ತವೆ. ಹೀಗೆ ಶಿಕ್ಷಣವನ್ನು ಪ್ರಾರಂಭಿಸಿ ಶಿಕ್ಷಣ ಮಾತ್ರ ನೀಡುತ್ತಿದ್ದರೆ ಆ ಸಂಸ್ಥೆಗಳ ಬೆಳವಣಿಗೆ ಆಗುವುದಿಲ್ಲ. ಅದು ಮುಂದೆ ಶಿಕ್ಷಣದ ಮೂಲಕ ಜನ ಸಂಘಟನೆಗೆ ಕೈ ಹಾಕುತ್ತದೆ. ಜನ ಸಂಘಟನೆ ಗಟ್ಟಿಯಾದಾಗ ಆ ಸಂಘಟನೆಯು ಸಮಾಜದಅಂಕುಡೊಂಕುಗಳನ್ನು ಸರಿ ಮಾಡುವುದಕ್ಕೆ ಮನಸ್ಸು ಮಾಡುತ್ತದೆ. ಹಾಗೆಯೆ ಮುಂದುವರೆಯುತ್ತಾ ಸಹಜವಾಗಿ ಹೋರಾಟದ ಹಾದಿಯನ್ನು ಹಿಡಿಯುತ್ತದೆ. ಒಂದು ಉತ್ತಮವಾದ ಸಮಾಜದ ಕನಸನ್ನು ಕಟ್ಟಿಕೊಳ್ಳಲು ಶಿಕ್ಷಣ ಸಹಾಯ ಮಾಡುತ್ತದೆ. ಈ ಕನಸಿನ ಬಗ್ಗೆ ವಿಶ್ವಾಸ ಮೂಡಲು ಸಂಘಟನೆ ಸಹಾಯ ಮಾಡುತ್ತದೆ. ಹೋರಾಟದ ಮೂಲಕ ಹೊಸ ಸಮಾಜವನ್ನು ಕಟ್ಟುವತ್ತ ಈ  ಸಂಘಟನೆ ಮುನ್ನುಗುತ್ತದೆ.

ಕ್ಷೇತ್ರದಲ್ಲಿ ನಾವು ಬರಿ ಜನರನ್ನು ಸಂಘಟಿಸುವ ಸಂಘಗಳನ್ನು ನೋಡಿದ್ದೇವೆ. ಪ್ರಾರಂಭದಲ್ಲಿ ಈ ಸಂಘಟನೆಗಳು ಜಬರದಸ್ತಾಗಿ ಕೆಲಸ ಮಾಡುತ್ತವೆ. ಇಂಥ ಸಂಘಗಳಲ್ಲಿ ಎರಡು ಪ್ರಮುಖ ಅಂಶಗಳು ಗೋಚರಿಸುತ್ತವೆ. ಮೊದಲನೆಯದಾಗಿ ಸಂಘ ಕಟ್ಟೋಣ ಎಂಬ ಪ್ರೇರಣೆ. ತುಂಬ ಸಮಯ ಸಂಘ ಮಾತ್ರ ಕಟ್ಟುತ್ತ ಇರಲು ಆಗುವುದಿಲ್ಲ. ಸಂಘ ಕಟ್ಟಿಕೊಂಡು ತಮಗಿರುವ ಸಮಸ್ಯೆಗಳನ್ನು ಎತ್ತಿಕೊಳ್ಳದಿದ್ದರೆ, ಆ ಸಮಸ್ಯೆಗಳನ್ನು ಬಗೆ ಹರಿಸದಿದ್ದರೆ, ಆ ಸಂಘಗಳು ಹೋರಾಟದ ರಭಸದಲ್ಲಿ ಬಿಚ್ಚಿಕೊಳ್ಳುತ್ತವೆ, ಬಿದ್ದು ಮಣ್ಣುಪಾಲಾಗಿ ಹೋಗುತ್ತವೆ. ಎರಡನೆಯದಾಗಿ ಈ ಸಂಘಗಳು ಏನೇನೋ ಕನಸು ಹೊತ್ತು ಬಂದ ಜನರಿಗೆ ಏನೂ ಮಾಡದಿದ್ದಾಗ ಜನ ಬೇಸತ್ತು ಸಂಘ ಬಿಟ್ಟು ಹೋಗುತ್ತಾರೆ. ಕೆಲವರು ಸಂಘದ ಹೆಸರಲ್ಲಿ ಸಮಾಜಮುಖಿ ಅಲ್ಲದ ಕೆಲಸ ಮಾಡುತ್ತಾರೆ. ಯಾವ ಜನರ ಸೇವೆಗಾಗಿ ಸಂಘಟನೆ ಹುಟ್ಟಿತ್ತೋ ಅದೇ ಜನರನ್ನು ಶೋಷಿಸುವವರು ಸಂಘದ ವಾರೀಸುದಾರರಾಗುತ್ತಾರೆ. ಅವು ಜನರನ್ನು ಹಿಂಸಿಸುವ ಸಂಘಗಳಾಗುತ್ತವೆ. ಬರಿ ಹೋರಾಟಕ್ಕಾಗಿ ಹುಟ್ಟಿದ ಸಂಸ್ಥೆಗಳನ್ನು ನೋಡಿದರೆ ಅಲ್ಲಿ ಹೋರಾಟಕ್ಕೆ ಬದ್ಧತೆ ಕಾಣಬಹುದು, ಹೈ ಎನರ್ಜಿ ಕಾಣಬಹುದು. ಆದರೆ ಉದ್ದೇಶದ ಘೋಷಣೆ ಇಲ್ಲದೆ ಬರಿಹೋರಾಟ ಮಾಡುತ್ತಾ ಹೋಗುವುದಾದರೆ ಜನರಿಗೆ ಅದರಲ್ಲಿ ಅರ್ಥ ಇಲ್ಲದಂತಾಗುತ್ತದೆ. ತಮ್ಮತನ ಕಂಡುಕೊಳ್ಳಲಾಗದಿದ್ದರೆ ಜನರು ಬಹು ಬೇಗ ಆ ಸಂಸ್ಥೆ ಬಿಟ್ಟು ಹೋಗುತ್ತಾರೆ. ಆಗ ಅಂತ ಸಂಘಗಳು ತಮ್ಮ ಅಸ್ತಿತ್ವ ಉಳಿಸಿಕೊಂಡರೂ ಕ್ರಮೇಣ ಹೋರಾಟ ಇಲ್ಲದೆ ನಾಮ್ಕೆವಾಸ್ತೆ ಹೋರಾಟ ಮಾಡುವ ಸಂಸ್ಥೆಗಳಾಗಿ ನಗೆಪಾಟಲಿಗೆ ತುತ್ತಾಗುತ್ತವೆ, ಕೆಲವಂತೂ ದಿಕ್ಕುದೆಸೆ ಇಲ್ಲದೆ ಮಾಯವಾಗಿ ಹೋಗುತ್ತವೆ.

ಏನಿದು? ಸ್ಥಿತಿ ಹೀಗಾಲು ಏನು ಕಾರಣ ಎಂದು ನೋಡಿದಾಗ ನಮಗೆ ಪ್ರಬಲವಾಗಿ ಕಾಣವಂತಾದ್ದು ಎಲ್ಲವನ್ನು ಸಮಗ್ರವಾಗಿ ನೋಡುವ ದೃಷ್ಟಿಕೋನ ಇಲ್ಲದಿರುವುದು. ಒಂದಕ್ಕೊಂದು ಸಂಬಂಧ ಇಲ್ಲದೆ ಪ್ರತ್ಯೇಕ ಮತ್ತು ಬಿಡಿಯಾಗಿ ಸಂಬಂಧವಿಲ್ಲದಂತೆ (ಐಸೋಲೇಟಾಗಿ) ಕೆಲಸ ಮಾಡುವುದರ ದುಷ್ಪರಿಣಾಮವಿದು. ಬರಿ ಶಿಕ್ಷಣವೊಂದನ್ನೇ ಸರಿಯಾಗಿ ವ್ಯಾಪಕವಾದ ಗುರಿ ಇಲ್ಲದೆ ಮಾಡಿದಾಗ ಈ ಸಮಸ್ಯೆ ಎದುರಾಗುತ್ತದೆ. ಶಿಕ್ಷಣ ಪಡೆಯುತ್ತಾ ನಾವು ಸಂಘಟಿತರಾಗಬೇಕಾಗುತ್ತದೆ. ಒಬ್ಬ ಶಿಕ್ಷಿತ ಒಬ್ಬಂಟಿಯಾಗಿ ಏನೂ ಮಾಡಲು ಸಾಧ್ಯವಿಲ್ಲ. ಆದರೆ ಶಿಕ್ಷಿತರ ಒಂದು ಗುಂಪು ಸಂಘಟನೆಯಾಗಿ ಪರಿವರ್ತನೆಯಾದಾಗ ಒಂದು ಮಹಾನ್ ಶಕ್ತಿಯಾಗಿ ಬೆಳೆಯುತ್ತದೆ. ಹೀಗೆ ಸಂಘಟನೆಯಾದ ಗುಂಪು ಒಟ್ಟಿಗೆ ಇನ್ನೂ ಹೆಚ್ಚಿನ ಶಿಕ್ಷಣವನ್ನು ಪಡೆಯುತ್ತದೆ. ಹೀಗೆ ಶಿಕ್ಷಣ ಪಡೆದು ಸಾಕಷ್ಟು ಬೆಳೆಯಬಹುದು. ಆದರೆ ಹೀಗೆ ಬೆಳೆಯುವುದಕ್ಕೂ ಒಂದು ಮಿತಿ ಇದೆ. ಆದರೆ ಆ ಮಿತಿಯನ್ನು ಮೀರುವುದು ಸರಿಯಾದ ಶಿಕ್ಷಣವನ್ನು ಪಡೆದು ಸಂಘಟನೆಯಾಗಿ ಬಲಿಪಶುವಾಗಿ ಬೆಳೆದು ಬದಲಾವಣೆಯತ್ತ ಮುಖ ಮಾಡುವುದರಲ್ಲಿದೆ. ಸಂಘಟನೆ ತನ್ನ ಗುಂಪಿಗೆ ಇರುವ ಒಂದೊಂದು ಸಮಸ್ಯೆಯನ್ನು ಪರಿಹರಿಸಲು ಮುಂದಾಗುತ್ತದೆ. ಸಮಾಜದಲ್ಲಿ ಇರುವ ಕುಂದುಕೊರತೆಗಳನ್ನು ತಿದ್ದಲು ಮುನ್ನುಗ್ಗುತ್ತದೆ. ಸಹಜವಾಗಿ ಹೊರಾಟದ ದಾರಿ ಹಿಡಿಯುತ್ತದೆ. ಹೊರಾಟಕ್ಕೆ, ಅಂದರೆ ಬದಲಾವಣೆಯ ಹೋರಾಟಕ್ಕೆ ಇಳಿಯದ ಸಂಘಟನೆಗಳು ಏನೂ ಮಾಡದೆ ಚದುರಿ ಹೋಗುತ್ತವೆ. ಏನೂ ಮಾಡದ ಸಂಘಟನೆಗಳು ತಮ್ಮ ಘನತೆಯನ್ನು ಕಳೆದುಕೊಳ್ಳುತ್ತವೆ. ಪ್ರಿತಿ ವಿಶ್ವಾಸವನ್ನು ಕಳೆದುಕೊಳ್ಳುತ್ತವೆ.ಸಂಘಟನೆಯನ್ನು ಪ್ರಾರಂಭಿಸಿದ ಗುಂಪುಗಳು ಶಿಕ್ಷಣದ ಮಹತ್ವವನ್ನು ಕಂಡು ತನ್ನ ಸದಸ್ಯರಿಗೆ ಒಳ್ಳೆಯ ಶಿಕ್ಷಣವನ್ನುನೀಡಿದಾಗ ಆ ಸಂಘಟನೆಯು ಸಮೃದ್ಧವಾಗಿ ಬೆಳೆಯುತ್ತದೆ. ಹೀಗೆ ಬೆಳೆದು ನಿಂತ ಸಂಘಟನೆ ಅರ್ಥಪೂರ್ಣ ಕೆಲಸದ ಹುಡುಕಾಟ ಪ್ರಾರಂಭಿಸುತ್ತದೆ. ಅದರ ಸದಸ್ಯರು ಏನಾದರೂ ಅರ್ಥವತ್ತಾದ, ಮೌಲ್ಯಯುತವಾದ ಕೆಲಸ ಮಾಡಬೇಕು ಎಂದು ಹಂಬಲಿಸುತ್ತಾರೆ.ಆಗ ಆ ಸಂಘಟನೆ ಸಮಾಜಮುಖಿಯಾಗುತ್ತದೆ. ಪರಹಿತ ಅದರ ಧ್ಯೇಯವಾಗುತ್ತದೆ. ಸಮಾಜದಲ್ಲಿ ಅದಕ್ಕೆಸುಧಾರಣೆಗೂಳ್ಳಬೇಕಾದ ಅನೇಕ ನ್ಯೂನ್ಯತೆಗಳು ಕಾಣತ್ತವೆ. ಅಂಥ ನ್ಯೂನ್ಯತೆಗಳ ನ್ನು ಸರಿ ಮಾಡಲು ಪ್ರಾರಂಭಿಸುತ್ತದೆ. ಕ್ರಮೇಣ ಅದು ಹೋರಾಟದ ಹಾದಿ ಹಿಡಿಯುತ್ತದೆ. ಹೀಗೆ ಮುಂದುವರೆದರೆ ಆ ಸಂಘಟನೆ ಶಿಕ್ಷಣವನ್ನು ಪಡೆಯುತ್ತಾ ಹೋರಾಟ ಮಾಡುತ್ತಮುಂದುವರೆಯುತ್ತದೆ. ಸಮಾಜದ ಒಳಿತಿಗೆ ಕೆಲಸ ಮಾಡುತ್ತದೆ. ಹೋರಾಟವನ್ನು ಪ್ರಾರಂಭಿಸಿದ ಯಾವುದೇ ಗುಂಪು ಸ್ವಲ್ಪ ಹೊತ್ತಾದ ಮೇಲೆ, ಸ್ವಲ್ಪ ಅನುಭವವಾದ ಮೇಲೆ, ತನ್ನ ಸದಸ್ಯರಿಗೆ ಶಿಕ್ಷಣ ಅಗತ್ಯವಾಗಿ ಬೇಕು ಎಂದು ಮನಗಾಣುತ್ತದೆ. ಶಿಕ್ಷಣದ ಅಡಿಪಾಯವಿಲ್ಲದೆ ಹೋರಾಟ ಮಾಡುವುದು ಅರ್ಥಪೂರ್ಣವೂ ಅಲ್ಲ, ಅಥವಾ ಶಕ್ತಿಪೂರ್ಣವು ಅಲ್ಲ. ಉದ್ದೇಶ ರಹಿತ ಹೋರಾಟಗಳು ಸುಮ್ಮನೆ ದೊಂಬಿ ಎಂದು ಪರಿಗಣಿಸಲ್ಪಡುತ್ತವೆ. ಕ್ರಮೇಣ ಅಲ್ಲಿಗೆ ಚದುರಿ ಹೋಗುತ್ತವೆ. ಒಂದು ಗುಂಪು ಶಿಕ್ಷಣ ಪಡೆಯiಬೇಕು, ಸಂಘಟನೆಯಾಗಬೇಕು,ಹೋರಾಟ ಮಾಡಬೇಕು. ಸಮಾಜದ ಬದಲಾವಣೆಗೆ ಅದು ಸರಿಯಾದ ಹಾದಿ. ಹೇಗೇ ನೋಡಿದರೂ ಈ ಘೋಷಣೆ ಅತ್ಯಂತ ಪ್ರಭಾವಶಾಲಿ ಘೋಷಣೆ. ಇದು ತಾತ್ವಿಕವಾಗಿ ಎಷ್ಟು ಸದೃಢವೋ,ಅಭ್ಯಾಸದಲ್ಲೂ ಅಷ್ಟೇ ಅರ್ಥಪೂರ್ಣ. ಚಿಕ್ಕವರಿರುವಾಗ ಅಂಬೇಡ್ಕರ್ ಅನುಭವಿಸಿದ ಶೋಷಣೆ, ಹಿಂಸೆ, ಅವಮಾನ, ಮುಂದೆ ಜಾನ್ ಡ್ಯೂಯಿ ಅವರಂಥ  ಪ್ರಜಾಪ್ರಬುತ್ವವಾದಿ ಚಿಂತಕರಿಂದ ಪಡೆದ ಸಮಾಜಮುಖಿ ಜನಮುಖಿ ನೆಲೆಗಟ್ಟು , ಕ್ರಮೇಣ ಅವರಲ್ಲಿ ಶಿಕ್ಷಣ ಸಂಘಟನೆ ಹಾಗೂ ನಿರಂತರ ಹೋರಾಟ ತಾತ್ವಿಕ ಪರಿಕಲ್ಪನೆಯನ್ನು ಹುರಿಗಟ್ಟಿಸಿತು. ಈ ನೆಲೆಯಿಂದ ಆ ಸಂದರ್ಭದಭಾರತದ ಮುಂದಾಳುಗಳಲ್ಲಿ ಅಂಬೇಡ್ಕರನ್ನು ಒಬ್ಬ ಅತ್ಯಂತ ಶ್ರೇಷ್ಠ  ಮುಂದಾಳಾಗಿ ನಮ್ಮ ಮುಂದೆ ನಿಲ್ಲಿಸುತ್ತದೆ. ಸಮಾನತೆ ನ್ಯಾಯಯುತ ಮಾನವೀಯ ಸುಸ್ಥಿರ ಭಾರತವನ್ನು ಕಟ್ಟಲು ಇಂದಿನ ದಿನ ಭಾರತಕ್ಕೆ ಬೇರೆಲ್ಲ ಮುಂದಾಳುಗಳಿಗಿಂತ ಅಂಬೇಡ್ಕರರ ಮೇಲಿನ ಚಿಂತನೆ ದಾರಿ ದೀಪವಾಗಲಿ. ೧೨೫ನೇ ವರ್ಷದ ಅವರ ಜಯಂತ್ಯೋತ್ಸವದ ಸಂದರ್ಭದಲ್ಲಿ ಅವರ ಈ ಘೋಷಣೆಯ ಆಶಯವನ್ನು ನಾವೆಲ್ಲರು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.

ಲೇಖಕರು : ಉಮಾಕಾಂತ ಪೆರಿಯೋಡಿ

17921 ನೊಂದಾಯಿತ ಬಳಕೆದಾರರು
6752 ಸಂಪನ್ಮೂಲಗಳು