ಶಿಕ್ಷಣ - ಪ್ರತಿಭಾನ್ವಿತ ಮಗುವಿನ ಶಿಕ್ಷಣದ ಹಕ್ಕು -ಅನಿತಾ ಕುರುಪ್

 
ನಮ್ಮ ಭಾರತ ದೇಶವು ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀಡುವುದಕ್ಕೆ ಬದ್ಧವಾಗಿದೆ ಎಂಬ ಆಂಶವು ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ (ಆರ್‌ಟಿಇ ೨೦೦೯) ಜಾರಿಗೆ ಬಂದ ನಂತರ ಕಾರ್ಯರೂಪದಲ್ಲಿ ಪ್ರಕಟವಾಗುತ್ತಿದೆ. ಇಂದು ಪ್ರತಿಯೊಂದು ಮಗುವೂ ಗುಣಮಟ್ಟದ ಪ್ರಾಥಮಿಕ ಶಿಕ್ಷಣಕ್ಕೆ ಹಕ್ಕನ್ನು ಹೊಂದಿದೆ. ಯಾವುದೇ ಇಬ್ಬರು ವ್ಯಕ್ತಿಗಳು ಒಂದೇ ರೀತಿ ಇರಲು ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಂಡ ಭಾರತದ ಮೂಲಭೂತ ಶಿಕ್ಷಣ ಪದ್ಧತಿ ಬೇರೆ ಬೇರೆ ಹಿನ್ನೆಲೆಗಳಿಂದ ಬರುವಂತಹ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಅವರ ಅಗತ್ಯಗಳನ್ನು ಪೂರೈಸುವತ್ತ ಸಿದ್ಧತೆಯನ್ನು ನಡೆಸಬೇಕು. ಕಡ್ಡಾಯ ಶಿಕ್ಷಣ ಕಾಯಿದೆ, ೨೦೦೯ ರಿಂದಾಗಿ ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯು ಸಮಾವೇಶಿ ಶಿಕ್ಷಣವನ್ನು ಅಂಗೀಕೃತ ತತ್ವವಾಗಿ ಅಳವಡಿಸಿಕೊಳ್ಳಲೇಬೇಕಾಗಿದೆ ಮತ್ತು ಆ ಬಗ್ಗೆ ಕ್ರಮ ಕೈಗೊಂಡು ಕಾರ‍್ಯತಃ ತೋರಿಸಲೇ ಬೇಕಾಗಿದೆ. ಸಮಾವೇಶಿ ಶಿಕ್ಷಣದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳು, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟಿನ ಮಕ್ಕಳು, ಧಾರ್ಮಿಕ ಅಲ್ಪ ಸಂಖ್ಯಾತರು, ದೈಹಿಕವಾಗಿ ಮತ್ತು ಕಲಿಕೆಯಲ್ಲಿ ಅಸಮರ್ಥರಾದ ಮಕ್ಕಳು ಮತ್ತು ಬುದ್ದಿವಂತ ಹಾಗು ಪ್ರತಿಭಾವಂತ ಮಕ್ಕಳು ಎಲ್ಲ ಒಂದೆಡೆ ಒಟ್ಟಿಗೆ ಓದುತ್ತಾರೆ.  
ಹದಿನಾಲ್ಕು ವರ್ಷದ ಒಳಗಿನ ಇಂಥ ಎಲ್ಲಾ ಮಕ್ಕಳಿಗೂ ಮೂಲಭೂತ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವುದು ನಿಜಕ್ಕೂ ಪ್ರಯಾಸದ ವಿಷಯ. ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿರುವ ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಪ್ರತಿಭಾನ್ವಿತ ಮಕ್ಕಳ ಶಿಕ್ಷಣಕ್ಕೆ ಸಂಪನ್ಮೂಲ ಬೇಕೆಂದು ವಾದಿಸುವುದು ಸ್ವಲ್ಪ ಕಷ್ಟ ಎನಿಸಬಹುದು. ಎಲ್ಲರಿಗೂ ಸಮಾನ ಶಿಕ್ಷಣ ಅವಕಾಶವನ್ನು ನೀಡುವುದು ತುಂಬಾ ಮುಖ್ಯ ಎಂದು ಒಪ್ಪಿಕೊಂಡರೂ ಪ್ರತಿಭಾನ್ವಿತ ಮಕ್ಕಳ ಶಿಕ್ಷಣದ ಪರ ಮಾತನಾಡುವವರ ಪ್ರಕಾರ ಪ್ರತಿಭಾನ್ವಿತ ಮಕ್ಕಳಿಗೆ ಈ ನಿಬಂಧನೆಗಳು ಅಥವಾ ಕಟ್ಟುಪಾಡುಗಳು ಅವರ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ. ಆದ್ದರಿಂದ ಸರ್ಕಾರವು ಪ್ರತಿಭಾನ್ವಿತ ಮಕ್ಕಳ ಅಗತ್ಯದ ಬಗ್ಗೆ ಕರ್ತವ್ಯ ವಿಮುಖವಾಗದೇ ಅದನ್ನು ಕಡ್ಡಾಯವಾಗಿ ಪೂರೈಸಬೇಕು ಏಕೆಂದರೆ ಅದರಿಂದ  ಪ್ರತಿಭಾನ್ವಿತ ಮಕ್ಕಳಿಗೆ ಅದರಲ್ಲೂ ಬಡ ಕುಟುಂಬದ ಪ್ರತಿಭಾನ್ವಿತ ಮಕ್ಕಳಿಗೆ ಹೆಚ್ಚು ತೊಂದರೆ ಆಗುತ್ತದೆ.  
ಶಿಕ್ಷಣದ ಮೇಲೆ ಪರಿಣಾಮ ಬೀರುವ ಹಲವು ಅಂಶಗಳಾದ ಬುದ್ಧಿವಂತಿಕೆ, ಸೃಜನಶೀಲತೆ, ಸಾಮರ್ಥ್ಯ, ಪರಿಸರ, ಆನುವಂಶೀಯ ಗುಣಗಳು, ಪೋಷಣೆ, ಸಾಮಾಜಿಕ , ಸಾಂಸ್ಕೃತಿಕ ಮತ್ತು ಇನ್ನಿತರ ಅಂಶಗಳು ವ್ಯಕ್ತಿ ವ್ಯಕ್ತಿಗಳ ನಡುವೆ ವ್ಯತ್ಯಾಸ ಉಂಟುಮಾಡುತ್ತದೆ. ಪ್ರತಿಯೊಂದು ಮಗುವಿಗೂ ಸೂಕ್ತ ಶಿಕ್ಷಣ ಪಡೆಯುವ ಹಕ್ಕಿದೆ. ಆದರೆ, ಸೂಕ್ತ  ಶಿಕ್ಷಣವೆಂಬುದು ಒಂದು ಕ್ಯಾಲೆಂಡರ್ ವರ್ಷದಲ್ಲಿ ಜನಿಸಿರುವ ಎಲ್ಲಾ ಮಕ್ಕಳಿಗೂ ಒಂದೇ ಆಗಿರಲು ಸಾಧ್ಯವಿಲ್ಲ. ಒಬ್ಬ ಉತ್ತಮ ಶಿಕ್ಷಕ/ ಶಿಕ್ಷಕಿ ಎಲ್ಲರಿಗೂ ಒಂದೇ ಪಠ್ಯ ಕ್ರಮಕ್ಕೆ ಅಂಟಿಕೊಳ್ಳದೇ ಅದನ್ನೂ ಮೀರಿ, ಪ್ರತಿ ಮಗುವಿನ ವೈಯಕ್ತಿಕ ವ್ಯತ್ಯಾಸಗಳನ್ನು ಗುರುತಿಸಿ ಅವರು ಚೆನ್ನಾಗಿ  ಕಲಿಯುವಂತೆ  ನೋಡಿಕೊಳ್ಳಬೇಕು. ಇನ್ನೊಂದರ್ಥದಲ್ಲಿ ಹೇಳುವುದಾದರೆ ಪಠ್ಯಕ್ರಮ ಮತ್ತು ಪಾಠ ಹೇಳಿಕೊಡುವುದು ಹೀಗೆ ಬೇರೆ ಬೇರೆ ಆಗಿರದಿದ್ದರೆ ಶಿಕ್ಷಣದ ಲಾಭ ದೊರೆಯದೇ ಹೋಗುವುದು ಬುದ್ಧಿವಂತ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೇ. 
ಹಾಬ್ ಮತ್ತು ಶರ್ಮ (೨೦೦೬, ಪುಟ ೩) ರಲ್ಲಿ ಭಾರತವನ್ನು ಒಂದೇ ಭವಿತವ್ಯ ಮತ್ತು ಯಶಸ್ವಿ ಪ್ರಜಾಪ್ರಭುತ್ವದ ಮೂಲಕ ಒಂದಾಗಿ ಹಿಡಿದಿಟ್ಟಿರುವ ವಿವಿಧ ದೇಶಗಳ ಸಮೂಹ ಎಂದು ವರ್ಣಿಸಿದ್ದಾರೆ. ಶಾಲೆಗೆ ಹೋಗುವ ೬ ರಿಂದ ೧೪ ವರ್ಷ ವಯಸ್ಸಿನ ೧೯೩ ಮಿಲಿಯನ್ ಮಕ್ಕಳಿದ್ದಾರೆ (ಮೆಹತಾ, ೨೦೦೭). ಸಾಮಾನ್ಯ ಸಂಭಾವ್ಯತೆ ಪ್ರಕಾರ ಜನಸಂಖ್ಯೆಯಲ್ಲಿ ಕೇವಲ ಶೇ ೩ ರಷ್ಟು ಅಂದರೆ ಸುಮಾರು ೬ ಮಿಲಿಯನ್  ಮಾತ್ರ ಪ್ರತಿಭಾವಂತ ಮಕ್ಕಳಿರುತ್ತಾರೆ. ಒಂದು ಸಮಗ್ರ ರಾಷ್ಟ್ರೀಯ ಕಾರ್ಯಕ್ರಮವನ್ನು ರೂಪಿಸಲು ಈ ಅಂಕಿ ಸಂಖ್ಯೆಗಳೇ ಅತಿ ದೊಡ್ಡ ಸವಾಲಾಗಬಹುದು. ಜೊತೆಗೆ, ಭಾರತದ ಜನಸಂಖ್ಯೆಯ ಸುಮಾರು ಶೇ ೭೦ ರಷ್ಟು  ಜನ ಹಳ್ಳಿಗಳಲ್ಲಿ ವಾಸಿಸುತ್ತಾರೆ. ಹೆಚ್ಚಾಗಿ ಈ ಜನ ಕಡಿಮೆ ಶೈಕ್ಷಣಿಕ ಮಟ್ಟ, ಕಡು ಬಡತನವನ್ನು ಅನುಭವಿಸುತ್ತಿದ್ದು ಆಧುನಿಕ ಸೌಲಭ್ಯಗಳಿಂದ ದೂರ ಉಳಿದಿರುತ್ತಾರೆ (ಹಾಬ್ ಮತ್ತು ಶರ್ಮ, ೨೦೦೬). ಸಂಪನ್ಮೂಲಗಳ ಲಭ್ಯತೆಯಲ್ಲಿನ ಭಿನ್ನತೆ ಮತ್ತು ವಿವಿಧ ಗುಂಪುಗಳು ಎದುರಿಸುವ ಸಮಸ್ಯೆಯ ಅರಿವು ಲಭ್ಯವಿಲ್ಲದಿರುವುದು ಇವೆರಡೂ ದೇಶದಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ಅನುಕೂಲವಾಗುವಂತೆ ಸಕ್ರಿಯವಾಗಿ ಸಂದರ್ಭಗಳನ್ನು ಬದಲಾಯಿಸಲು ಸಹಾಯ ಮಾಡುವಂಥ ಸಂಬಂಧಗಳ ಅಭಿವೃದ್ಧಿಗೆ ತಡೆಯುಂಟು ಮಾಡುತ್ತವೆ. 
ಭಾರತವು ಈ ಹಿಂದೆ ಗಣಿತ ಮತ್ತು ವಿಜ್ಞಾನದಲ್ಲಿ ಹೆಚ್ಚು ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಅಲ್ಲೊಂದು ಇಲ್ಲೊಂದು ಪ್ರಯತ್ನ ಮಾಡಿದೆ. ೧೯೮೬ ರಲ್ಲಿ ಭಾರvವು ಒಟ್ಟಾರೆ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು, ಅದರಲ್ಲೂ ಗ್ರಾಮೀಣ ವರ್ಗ ಮತ್ತು ಇನ್ನಿತರ ಅಲ್ಪಸಂಖ್ಯಾತರಿಗಾಗಿ ನವೋದಯ ವಿದ್ಯಾಲಯ ಯೋಜನೆಯನ್ನು ಪ್ರಾರಂಭಿಸಿತು (ರೈಟ್, ೨೦೦೮). ಇದರ ಜೊತೆ ಜೊತೆಗೆ ಪ್ರತಿ ವರ್ಷ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಾದ ರಾಷ್ಟ್ರೀಯ ಪ್ರತಿಭಾ ಶೋಧ, ಗಣಿತ ಮತ್ತು ವಿಜ್ಞಾನದಲ್ಲಿ ಒಲಿಂಪಿಯಾಡ್, ಕಿಶೋರ ವೈಜ್ಞಾನಿಕ ಪ್ರೋತ್ಸಾಹ ಯೋಜನೆಯ ವಿದ್ಯಾರ್ಥಿವೇತನ ಮತ್ತು ಇನ್ನಿತರ ಪ್ರತಿಭಾ ಶೋಧನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಈ ಪರೀಕ್ಷೆಗಳು ವಿದ್ಯಾರ್ಥಿಯು ಎಷ್ಟರ ಮಟ್ಟಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಗಳಿಸಿದ್ದಾನೆ ಎಂದು ತೀರ್ಮಾನಿಸುತ್ತದೆ. ಅನೇಕ ವೇಳೆ ಪ್ರತಿಭಾನ್ವಿತ ಮತ್ತು ಕುಶಲ ವಿದ್ಯಾರ್ಥಿಗಳು ಈ ಆಯ್ಕೆ ಪ್ರಕ್ರಿಯೆಯಿಂದ ಹೊರಗೆ ಉಳಿದುಬಿಡುತ್ತಾರೆ ಏಕೆಂದರೆ ಅವರು ......ಸೊಗಸಾದ, ರೂಢಿಬದ್ಧವಾದ ರೀತಿಯ ಪರೀಕ್ಷೆಗಳಲ್ಲಿ ಚೆನ್ನಾಗಿ ಉತ್ತರ ಬರೆಯುವಯುವವರ ಮತ್ತು ಪಾಠ ಕಲಿಯುವವರ ಗುಂಪಿಗೆ ಸೇರುವುದಿಲ್ಲ (ರೆಂಜುಲಿ, ೨೦೦೫ ಪುಟ-೮೦). 
ತಮ್ಮ ವಯೋಮಾನದ ಗುಂಪಿನ ಇತರೆ ಮಕ್ಕಳಿಗೆ ಹೋಲಿಸಿದಾಗ ಹೆಚ್ಚು ಸಾಮರ್ಥ್ಯವಿರುವ ಅಥವಾ ಹೆಚ್ಚು ಸಾಮರ್ಥ್ಯ ಹೊಂದಬಲ್ಲ ಮಕ್ಕಳನ್ನು ಪ್ರತಿಭಾನ್ವಿತ ಮಕ್ಕಳು ಎನ್ನಬಹುದು. ಈ ಸಾಮರ್ಥ್ಯ ಬಹು ಮುಖ್ಯವಾಗಿ ಒಂದು ಅಗತ್ಯವನ್ನು ಬಿಂಬಿಸುತ್ತದೆ: ಈ ಪ್ರತಿಭಾನ್ವಿತ ಮಕ್ಕಳ ಮುಂದುವರೆದ ಶೈಕ್ಷಣಿಕ ಅವಶ್ಯಕತೆಗಳನ್ನು ಪೂರೈಸಲು ಮುಂದುವರೆದ ಶೈಕ್ಷಣಿಕ ಸಾಮಗ್ರಿಗಳ ಅಗತ್ಯವಿದೆ. 
ಪ್ರತಿಭಾನ್ವಿvರ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭೆ ಎನ್ನುವ ಪರಿಕಲ್ಪನೆಯ ಬಗ್ಗೆ ಈಗಲೂ ಸಂಶೋಧಕರ ನಡುವೆ ವಾದ-ವಿವಾದಗಳು ಏಳುತ್ತಲೇ ಇರುತ್ತವೆ. ಪ್ರತಿಭೆ ಎಂಬ ಪದಕ್ಕೆ ಸಾರ್ವತ್ರಿಕವಾಗಿ ಯಾವುದೇ ಒಂದು ಸ್ಪಷ್ಟ ವ್ಯಾಖ್ಯಾನವಿಲ್ಲದಿದ್ದರೂ, ಫ್ರಾಂಕೋಇಸ್ ಗಾಗ್ನೆ, ಜೋಸೆಫ್ ಸ್ಟರ್ನ್‌ಬರ್ಗ್ ಮತ್ತು ಹೋವಾರ್ಡ್ ಗಾರ್ಡ್‌ನರ್ ಇವರುಗಳು ಸಾಕಷ್ಟು ವ್ಯಾಖ್ಯಾನಗಳನ್ನು ಪ್ರತಿಪಾದಿಸಿದ್ದಾರೆ. ಇವುಗಳಲ್ಲಿ ರೆಂಜುಲಿಯ ತ್ರೀ ರಿಂಗ್ ಮಾದರಿ ಅತ್ಯಂತ ಜನಪ್ರಿಯವಾಗಿದೆ. ಇದರಲ್ಲಿ ಕಾಣಬರುವ ಅಂಶಗಳು ಹೀಗಿವೆ:
೧. ಸರಾಸರಿಗಿಂತ (ಸಾಮಾನ್ಯಕ್ಕಿಂತ) ಹೆಚ್ಚಿನ ಸಾಮರ್ಥ್ಯ: ಸಾಮಾನ್ಯರಿಗಿಂತ ಹೆಚ್ಚು ಸಾಮರ್ಥ್ಯ (ಬುದ್ಧಿವಂತಿಕೆ) ಇರಬೇಕು, ಆದರೆ, ಅಸಾಧಾರಣವಾಗಿ ಇರಬೇಕೆಂದೇನಿಲ್ಲ. ಸಾಮರ್ಥ್ಯವನ್ನು ಹೆಚ್ಚಾಗಿ ಐಕ್ಯೂ ಗಳಿಕೆಯಲ್ಲಿ ಮಾನಕ ಭಿನ್ನತೆಯಿಂದ ಅಳೆಯಲಾಗುತ್ತದೆ. 
೨. ಸೃಜನಶೀಲತೆ: ಅಸಹಜ ಎನಿಸುವ ಕಲ್ಪನೆಗಳನ್ನು ಸಂಯೋಜಿಸುವ ಸಾಮರ್ಥ್ಯ, ಹೆಚ್ಚು ವಿಶ್ಲೇಷಣೆ ಮತ್ತು ವಿಭಿನ್ನತೆಯಿಂದ  ಕೂಡಿದ ಆಲೋಚನೆ. ಸರಿಹೊಂದುವ ಆದರೆ ಅಸಾಮಾನ್ಯ ಪರಿಹಾರಗಳನ್ನು  ಸೂಚಿಸುವುದು. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸೃಜನಶೀಲತೆ ಅತ್ಯವಶ್ಯ. ತಾವು ಕಲಿತದ್ದನ್ನು ಕೇವಲ ಉರೂ ಹೊಡೆಯದೆ ಆ ಜ್ಞಾನದಿಂದ ಹೊಸತೊಂದು ಆಲೋಚನೆ ಅಥವಾ ಹೊಸ ಉತ್ಪನ್ನವನ್ನು  ಅಭಿವೃದ್ಧಿಮಾಡುವುದೇ ಸಾಧನೆ.
೩. ಕೊಟ್ಟ ಕೆಲಸಕ್ಕೆ ಬದ್ಧತೆ : ಎಂದರೆ ತಮಗೆ ಆಸಕ್ತಿಯಿರುವ ಯಾವುದಾದರೂ ಕ್ಷೇತ್ರದಲ್ಲಿ ಜ್ಞಾನ ಮತ್ತು ನೈಪುಣ್ಯತೆಯನ್ನು ಹೊಂದಲು ಹೆಚ್ಚು ಶ್ರಮದಿಂದ ದುಡಿಯುವ ಸಾಮರ್ಥ್ಯ sಸತತಪ್ರಯತ್ನ, ಪುನಶ್ಚೇತನ ಶಕ್ತಿ, ವಿಷಯದ ಬಗ್ಗೆ ತೀವ್ರಾಸಕ್ತಿ, ಕಾಣ್ಕೆ, ಮಾನವೀಯ ಮೌಲ್ಯಗಳಿಗೆ ಸ್ಪಂದನಶೀಲತೆ ಇವು ಉತ್ತಮ ಕಾರ್ಯಕ್ಷಮತೆಗೆ ಬೇಕಾದ ಗುಣವಿಶೇಷಗಳು ಮತ್ತು ಮನೋವೈಜ್ಞಾನಿಕ ಅಂಶಗಳೆಂದು ರೆಂಜುಲಿ ಹೇಳುತ್ತಾರೆ.  
ಪ್ರತಿಭೆ ಎಂಬುದಕ್ಕೆ ಇದೇ ಸರಿ ಎಂಬ ಒಂದೇ ವ್ಯಾಖ್ಯಾನ ಇಲ್ಲದ ಕಾರಣ ಸಂಶೋಧಕರು ಪ್ರತಿಭಾನ್ವಿತ ವಿದಾರ್ಥಿ ಎಂದರೆ ಈ ಸಾಮಾನ್ಯ ಗುಣಗಳನ್ನು ಹೊದಿರುವವನು ಎಂದು ಒಪ್ಪುತ್ತಾರೆ: 
೧. ಬಲುಬೇಗನೆ ಕಲಿತುಕೊಳ್ಳುತ್ತಾನೆ. 
೨. ಅಪೂರ್ವ, ಜಟಿಲ ಮತ್ತು ಸವಾಲು ಒಡ್ಡುವ ಸಮಸ್ಯೆಗಳನ್ನು ಎದುರಿಸುವಲ್ಲಿ ಆಸಕ್ತಿ.
೩. ಉತ್ತಮ ಭಾಷಾ ಸಾಮರ್ಥ್ಯ ಮತ್ತು ಉತ್ತಮ ಪದಸಂಪತ್ತು; ತೀವ್ರಾಸಕ್ತ ಓದುಗ
೪. ಬಲು ಉತ್ಸಾಹಿ: ಚಡಪಡಿಕೆ ಇರಬಹುದು. ಅದೇಕೆಲಸ iತ್ತೆ ಮತ್ತೆ ಮಾಡಲು ಬೇಸರವನ್ನೂ ಹೊಂದಬಲ್ಲನು 
೫. ಕುತೂಹಲಿ: ಅಸಾಧಾರಣಾ ಪ್ರಶ್ನೆಗಳನ್ನು ಕೇಳುವವ (’ಯಾಕೆ’ ಮತ್ತು ’ಹೀಗಾದರೆ ಹೇಗೆ ’) ಮತ್ತು ಸ್ವತಂತ್ರವಾಗಿ ಹುಡುಕಿ ಶೋಧಿಸಬಲ್ಲ.
೬. ಎಲ್ಲೆಲ್ಲಿ ಯಾವ ತಂತ್ರ ಬಳಸಿ ಕಲಿಯ ಬಹುದೆಂಬ ಅರಿವು/ ಸಂಬಂಧಕಲ್ಪಿಸುವ ಚಿಂತನೆ: ಹಲವು ವಿಷಯಗಳ ನಡುವೆ ಸಂಪರ್ಕವನ್ನು ಗುರುತಿಸಬಲ್ಲ ಸಾಮರ್ಥ್ಯ ; ಉದಾಹರಣೆ: ತರಗತಿಗಳಲ್ಲಿ ಓದಿದ ಯಾವುದಾದರೂ ಪರಿಕಲ್ಪನೆಯನ್ನು ಅವನು/ ಅವಳು ತನ್ನ ನಿಜ ಜೀವನದಲ್ಲಿ ನೋಡಿದ ಘಟನೆಗೆ ಹೊಂದಿಸಿ ಹೇಳಬಲ್ಲ ಕೌಶಲ್ಯ. 
೭. ಸೃಜನಶೀಲತೆ: ಗಣಿತದ ಲೆಕ್ಕಗಳನ್ನು ಬಿಡಿಸಲು ಹೊಸ ಸೂತ್ರಗಳ ರಚನೆ, ಅಸಾಮಾನ್ಯ ರೀತಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುವುದು
೮. ಸತತ ಪ್ರಯತ್ನ ಮತ್ತು ಪ್ರೇರಣೆಯಿಂದ ತನಗೆ ಆಸಕ್ತಿಯಿರುವ ವಿಷಯದಲ್ಲಿ ಉತ್ಕೃಷ್ಟತೆ ಸಾಧಿಸಲು ಪ್ರಯತ್ನ. (ಅಂಕ ಗಳಿಕೆ/ ಸ್ಪರ್ಧೆಗಳು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಎಂದಿಗೂ ಪ್ರೇರೇಪಿಸುವುದಿಲ್ಲ)
೯. ಉನ್ನತ ಪರಿಕಲ್ಪನೆಗಳನ್ನು ಗ್ರಹಿಸಬಲ್ಲ ಸಾಮರ್ಥ್ಯ
೧೦. ಪೂರ್ವಸಿದ್ಧಾಂತ ಚಿಂತನೆ, ತಾತ್ವಿಕತೆ ಮತ್ತು ನೈತಿಕ ಕಾಳಜಿ
 
ಒಬ್ಬ ಪ್ರತಿಭಾನ್ವಿತ ಮಗ ಇವುಗಳಲ್ಲಿ ಕೆಲವು ಗುಣಗಳನ್ನು ಮಾತ್ರ ಹೊಂದಿರಬಹುದು. ನ್ಯಾಷನಲ್ ಅಸೋಸಿಯೇಷನ್ ಫಾರ್ ಗಿಫ್ಟೆಡ್ ಚಿಲ್ಡ್ರನ್ (ಎನ್‌ಎಜಿಸಿ, ಯುಎಸ್) ಪ್ರತಿಭೆಯನ್ನು ಈ ಸ್ಥೂಲ ಕ್ಷೇತ್ರಗಳಲ್ಲಿ ಗುರುತಿಸುತ್ತಾರೆ: ಶೈಕ್ಷಣಿಕ, ಸಾಮಾನ್ಯ ಅಥವಾ ನಿರ್ದಿಷ್ಟ ಬೌದ್ಧಿಕ ಸಾಮರ್ಥ್ಯ, ಸೃಜನಶೀಲತೆ, ನಾಯಕತ್ವ, ದೃಶ್ಯ/ ಪ್ರದರ್ಶನ ಕಲೆ ಅಥವಾ ಸಂಗೀತ ಮತ್ತು ಮಾನ- ದೈಹಿಕ ಚಾಲನೆಯ ಸಾಮರ್ಥ್ಯ.
 
ದುರದೃಷ್ಟವಶಾತ್ ನಮ್ಮ ಭಾರತೀಯ ಪಠ್ಯಕ್ರಮ ಮತ್ತು ಶಾಲಾ ಶಿಕ್ಷಣ ಪದ್ಧತಿ ಒಬ್ಬ ಸಾಧಾರಣ ವಿದ್ಯಾರ್ಥಿಯನ್ನು ಗುರಿಯಲ್ಲಿಟ್ಟು ತಯಾರಾಗಿವೆ. ಕೇವಲ ಉಪನ್ಯಾಸ ಆಧಾರಿತ ಬೋಧನೆ ಮತ್ತು ಉರು ಹೊಡೆಯುವುದನ್ನು ಪ್ರೋತ್ಸಾಹಿಸುವ ಲಿಖಿತ ಪರೀಕ್ಷೆUಳನ್ನು ಹೊಂದಿವೆ. ಇಂತಹ ಪದ್ಧತಿಯಲ್ಲಿ ಪ್ರತಿಭಾವಂತ ಮಕ್ಕಳನ್ನು ಗುರುತಿಸುವುದು ನಿಜಕ್ಕೂ ಸೀಮಿತ. ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆಯುವವರನ್ನು ಶಿಕ್ಷಕರು ಪ್ರತಿಭಾನ್ವಿತರೆಂದು ತಪ್ಪಾಗಿ ಗುರುತಿಸುತ್ತಾರೆ. 
 
ಪ್ರತಿಭಾನ್ವಿತರ ಕ್ಷೇತ್ರದಲ್ಲಿ ನಡೆದಿರುವ ಹತ್ತು ಹಲವಾರು ಸಂಶೋಧನೆಗಳಲ್ಲಿ ಪ್ರತಿಭೆಯುಳ್ಳ ಸಾಕಷ್ಟು ವಿದ್ಯಾರ್ಥಿಗಳು ಈ ರಚಿತ ತರಗತಿಗಳಲ್ಲಿ ಕಳಪೆಯಾಗಿರುತ್ತಾರೆ, ಬರೆಯುವುದನ್ನು ಇಷ್ಟಪಡುವುದಿಲ್ಲ, ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸುವುದಿಲ್ಲ ಅಸಾಧಾರಣ ಪ್ರಶ್ನೆಗಳನ್ನು ಕೇಳುತ್ತಾರೆ, ಅಥವಾ ಸಮಸ್ಯೆಗಳನ್ನು ಪರಿಹರಿಸಲು ಅಸಾಮಾನ್ಯ ಸಲಹೆಗಳನ್ನು ನೀಡುತ್ತಾ ಇಡೀ ತರಗತಿಗೆ ತೊಂದರೆ ಕೊಡುತ್ತಾರೆ. ಸಾಮಾನ್ಯವಾಗಿ ಇಂತಹ ಮಕ್ಕಳನ್ನು ಶಿಕ್ಷಕರು ತೊಂದರೆ ಮಾಡುವವರು ಎಂದೇ ಗುರುತಿಸುತ್ತಾರೆ. ಎಷ್ಟೋಬಾರಿ ಇಂತಹ ಪ್ರತಿಭಾನ್ವಿತ ಮಕ್ಕಳನ್ನು (ಪ್ರತಿಭಾನ್ವಿತ ಅಂಥ ಅಲ್ಲ ಬೇಗ ಕಲಿಯುತ್ತಾನೆ ಎಂದು) ಗುರುತು ಹಿಡಿದರೂ ಸಹ ಶಿಕ್ಷಕರು ಅವರನ್ನು ಅವರ ಪಾಡಿಗೆ ಅವರು ಕಲಿಯಲು ಬಿಟ್ಟುಬಿಡುತ್ತಾರೆ ಅಥವಾ ಕಲಿಯುವುದರಲ್ಲಿ ಹಿಂದುಳಿದ ವಿದ್ಯಾರ್ಥಿಗೆ ಸಹಾಯ ಮಾಡುವಂತೆ ಸೂಚಿಸುತ್ತಾರೆ. 
 
ಪ್ರತಿಭಾನ್ವಿತ ಮಕ್ಕಳನ್ನು ಕುರಿತಾದ ’ತಮ್ಮ ಪಾಡಿಗೆ ತಾವೇ ಕಲಿಯುತ್ತಾರೆ’ ಎನ್ನುವ ನಂಬಿಕೆಗೆ ವ್ಯತಿರಿಕ್ತವಾಗಿ ಉಳಿದ ಎಲ್ಲ ಮಕ್ಕಳಂತೆಯೇ ಪ್ರತಿಭಾನ್ವಿತ ಮಕ್ಕಳಿಗೂ ಸಹ ಅವರ ಸಾಮರ್ಥ್ಯ ಬೆಳೆಯಲು ಸರಿಯಾದ ಉತ್ತೇಜನ, ಸವಾಲುಗಳು ಮತ್ತು ಸೂಕ್ತ ಬೆಂಬಲದ ಅವಶ್ಯಕತೆಯಿದೆ ಎಂದು ಸಂಶೋಧನೆಗಳು ತಿಳಿಸುತ್ತವೆ. 
 
ನಮ್ಮ ಈ ಶಾಲಾ ಪಠ್ಯಕ್ರಮ ಪ್ರತಿಭಾನ್ವಿತ ಮಕ್ಕಳ ಉನ್ನತ ಶಿಕ್ಷಣದ ಅವಶ್ಯಕತೆಗಳನ್ನು ಪೂರೈಸದೇ ಹೋದರೆ ಅವರು ಕೆಳಕಂಡ ಸಮಸ್ಯೆಗಳನ್ನು ತೋರಿಸಲಾರಂಭಿಸುತ್ತಾರೆ:
೧. ಶಾಲಾ ನಡವಳಿಕೆಯಲ್ಲಿ ತೊಂದರೆ: ಬೇಸರ, ಚಡಪಡಿಕೆ, ಶಿಸ್ತಿನ ಸಮಸ್ಯೆ, ಆಗಾಗ್ಗೆ ಶಾಲೆಗೆ ಗೈರುಹಾಜರಿ.
೨. ಸಾಮಾಜಿಕ ಮತ್ತು ಭಾವನಾತ್ಮಕ ಹೊಂದಾಣಿಕೆಯಲ್ಲಿ ತೊಂದರೆ: ಗೆಳೆಯರೊಂದಿಗೆ ಹೊಂದಿಕೊಳ್ಳಲಾಗದೆ ತಮ್ಮ ಸಾಮರ್ಥ್ಯವನ್ನು ಮರೆಮಾಚಿ ದೂರ ಉಳಿದು ಬಿಡುತ್ತಾರೆ. ದಾದಾಗಿರಿಗೆ ಒಳಗಾಗುತ್ತಾರೆ ಮತ್ತು ಪ್ರತ್ಯೇಕವಾಗಿದ್ದು ’ನನ್ನಲ್ಲಿರುವ ತೊಂದರೆಯಾದರೂ ಏನು?’ ಎಂದು ಚಿಂತಿಸುತ್ತಾ ಬೇರೆಯವರಿಂದ ದೂರ ಉಳಿಯುತ್ತಾರೆ.
೩. ಕಾರ್ಯವಿಧಾನದಲ್ಲಿ ಕೊರತೆ: ಪ್ರತಿಭಾನ್ವಿತ ಮಕ್ಕಳಿಗೆ ಶಾಲೆಯಲ್ಲಿ ಚಿಕ್ಕ ವಯಸ್ಸಿನಿಂದಲೂ ಸಮರ್ಪಕವಾದ ಸವಾಲುಗಳು ಎದುರಾಗದಿದ್ದರೆ ಅವರಲ್ಲಿ ಕಾರ್ಯವೈಖರಿಯಲ್ಲಿ ಕೊರತೆ ಎದ್ದು ಕಾಣುತ್ತದೆ. ಈ ಪ್ರತಿಭಾವಂತ ಮಕ್ಕಳಿಗೆ ಸವಾಲೆನಿಸುವ ಪಠ್ಯಕ್ರಮವು ಅಥವಾ ಅವರಷ್ಟೇ ಸಾಮರ್ಥ್ಯ ಹೊಂದಿರುವ ಗೆಳೆಯರು ಮೊದಲಬಾರಿಗೆ ಪ್ರೌಢಶಾಲೆ ಅಥವಾ ಕಾಲೇಜಿನಲ್ಲಿ ಮಾತ್ರ ಸಿಗುತ್ತಾರೆ. ಆದರೆ ಇಂತಹ ಸಂದರ್ಭ ಎದುರಾದಾಗ ಅವರಿಗೆ ತಮ್ಮ ಬುದ್ಧಿವಂತಿಕೆಯ ಬಗ್ಗೆ ಸಂದೇಹ ಉಂಟಾಗಿ ತಾವು ತಮ್ಮ ಗುರಿಯನ್ನು ಎಂದಿಗೂ ಮುಟ್ಟಲು ಸಾಧ್ಯವಿಲ್ಲವೆಂಬ ಅಭಿಪ್ರಾಯಕ್ಕೆ ಬರುತ್ತಾರೆ (ನಾನು ಬಹಳ ಜಾಣನೆಂದು ತಿಳಿದುಕೊಂಡಿದ್ದೆ, ಆದರೆ ಈ ಪಠ್ಯಕ್ರಮವನ್ನು ನಿಭಾಯಿಸಲು ನನ್ನಿಂದ ಸಾಧ್ಯವಿಲ್ಲ, ಆದ್ದರಿಂದ ಇದನ್ನು ನನ್ನಿಂದ ಎಂದಿಗೂ ಮಾಡಲು ಸಾಧ್ಯವಿಲ್ಲ, ಆದ್ದರಿಂದ ನನ್ನ ಈ ಪ್ರಯತ್ನ ಖಂಡಿತ ವ್ಯರ್ಥವಾಗುತ್ತದೆ’).ಮತ್ತು ತಮ್ಮ ಸಾಮರ್ಥ್ಯದ ಪೂರ್ಣಮಟ್ಟಕ್ಕೆ ಬೆಳೆಯುವುದಿಲ್ಲ.
 
ಪ್ರತಿಭಾವಂತ ಮಕ್ಕಳಿಗೆ ಈ ಸಮಸ್ಯೆಗಳು ಅಂತರ್ಗತವಾಗಿ ಬರುವುದಿಲ್ಲ; ಬದಲಾಗಿ ಆ ಮಗುವಿನ ಜ್ಞಾನದಾಹ ನಿತ್ಯ ತರಗತಿಗಳಲ್ಲಿ ಪೂರೈಕೆಯಾಗದಾದಾಗ ಮಾತ್ರ ಇಂತಹ ಸಮಸ್ಯೆಗಳು ಎದುರಾಗುತ್ತವೆ.
 
 ಮುಕ್ತಾಯ
ಪ್ರತಿಭಾವಂತ ಮಕ್ಕಳಿಗೋಸ್ಕರ ಯಾವುದೇ ರಾಷ್ಟ್ರೀಯ ಕಾರ್ಯಕ್ರಮ ಇರದ ಕಾರಣ ಭಾರತ ದೇಶ ತನ್ನ ಉನ್ನತಿ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಬಲ್ಲ ಹಲವು ಪ್ರತಿಭಾನ್ವಿತ ಯುವ ಚಿಂತಕರನ್ನು ಬಳಸಿಕೊಳ್ಳಲು ಅಸಮರ್ಥವಾಗುತ್ತಿದೆ. ಈ ಸಮಸ್ಯೆಯನ್ನು ಅರಿತ ನಮ್ಮ ದೇಶ, ಗಣಿತ ಮತ್ತು ವಿಜ್ಞಾನದಲ್ಲಿ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಲು ೨೦೧೦ರಲ್ಲಿ ರಾಷ್ಟ್ರೀಯ ಕಾರ್ಯಕ್ರಮವೊಂದನ್ನು (೩-೫ ವರ್ಷಗಳು) ರೂಪಿಸಿತು. ಆಫೀಸ್ ಆಫ್ ದಿ ಪ್ರಿನ್ಸಿಪಲ್ ಸೈಂಟಿಫಿಕ್ ಅಡ್ವೈಸರ್ ಟು ಗವರ್ನಮೆಂಟ್ ಆಫ್ ಇಂಡಿಯಾ ಇವರು ಈ ಕಾರ್ಯಕ್ರಮವನ್ನು ಪ್ರಾರಂಭಿಸಿದರು: ಓIಂS ಈ ಕಾರ್ಯಕ್ರಮವನ್ನು ದೆಹಲಿ ವಿಶ್ವವಿದ್ಯಾನಿಲಯ ಮತ್ತು ಅಗಸ್ತ್ಯ ಫೌಂಡೇಶನ್ ಎಂಬ ಇನ್ನಿಬ್ಬರ ಸಹಯೋಗದೊಂದಿಗೆ ನಿರ್ವಹಿಸುತ್ತದೆ. ಗುಣಾತ್ಮಕ ಮತ್ತು ಪರಿಮಾಣಾತ್ಮಕ ವಿಧಾನಗಳ ಉಪಯೋಗದಿಂದ ಹಲವು ಸಾಧನಗಳ ಅಭಿವೃದ್ಧಿಯನ್ನು ಮಾಡಲಾಗಿದೆ ಮತ್ತು ಅದರ ಮೌಲ್ಯಾಂಕನವನ್ನು ಮಾಡಲಾಗುತ್ತಿದೆ. ಸಂಶೋಧನಾ ಗುಂಪುಗಳು ಗುರುತಿಸುವಿಕೆಯ ವಿಧಾನವನ್ನು ಮತ್ತಷ್ಟು ಊರ್ಜಿತಗೊಳಿಸುವುದರ ಜೊತೆಗೆ, ಪ್ರತಿಭಾನ್ವಿತ ಮಕ್ಕಳಿಗೆ ಮಾರ್ಗದರ್ಶನ ಕೊಡುವ ಪ್ರಯತ್ನಗಳು ನಡೆಯುತ್ತಿವೆ. 
 
ಈ ಕಾರ್ಯ ನಿಜಕ್ಕೂ ಅಗಾಧ ಮತ್ತು ಈ ರಾಷ್ಟ್ರೀಯ ಪ್ರಯತ್ನಕ್ಕೆ ಇನ್ನಷ್ಟು ಗುಂಪುಗಳು ಸೇರಬೇಕಾಗಿದೆ. ಪ್ರಾಂತೀಯ ಹಂತದಲ್ಲೂ ಸಾಕಷ್ಟು ಕಾರ್ಯಗಳು ನಡೆಯುತ್ತಲಿವೆ. ಇವುಗಳಲ್ಲಿ ಕೆಲವು- ಜಗದೀಶ್ ಬೋಸ್ ನ್ಯಾಷನಲ್ ಟ್ಯಾಲೆಂಟ್ ಸರ್ಚ್, ಕೋಲ್ಕತ್ತಾ ; ಪುಣೆಯ ಜ್ಙಾನ ಪ್ರಬೋಧಿನಿ; ದೆಹಲಿ ವಿಶ್ವವಿದ್ಯಾನಿಲಯದ ಪ್ರೊ. ಕೃಷ್ಣ ಮೈತ್ರ ಮುಂದಾಳತ್ವದ ರಿಸರ್ಚ್ ಇನ್ ಗಿಫ್ಟೆಡ್ ಎಜುಕೇಶನ್. ಆದರೂ ದೇಶದ ಇನ್ನೂ ಹೆಚ್ಚಿನ ಭಾಗಗಳಿಗೆ ಈ ಪ್ರಯತ್ನವನ್ನು ವಿಸ್ತರಿಸಿ ಹೆಚ್ಚು ಹೆಚ್ಚು ಗುಂಪುಗಳನ್ನು ರಚಿಸಿ ಈ ಪ್ರತಿಭಾನ್ವಿತ ಮಕ್ಕಳ ಶಿಕ್ಷಣವನ್ನು ರಾಷ್ಟ್ರೀಯ ಚಳುವಳಿಯನ್ನಾಗಿಸ ಬೇಕಾದ ಅಗತ್ಯವಿದೆ.   
 
 
ಅನಿತ (ಪಿ ಎಚ್ ಡಿ., ಶಿಕ್ಷಣ) ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ , ಬೆಂಗಳೂರು, ಭಾರತ, ಇಲ್ಲಿ ಪ್ರೊಫೆಸರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಅವರು ನ್ಯಾಷನಲ್ ಪ್ರೋಗ್ರಾಂ ಆಫ್ ಗಿಫ್ಟೆಡ್ ಚಿಲ್ಡ್ರನ್,  ಮತ್ತು ಶಿಕ್ಷಣ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದಾರೆ. ಈಗ ಅವರು ಶಿಕ್ಷಣ ಮತ್ತು ಲಿಂಗ ತಾರತಮ್ಯ ಈ ವಿಷಯದಲ್ಲಿ ಸಂಶೊಧನೆಯಲ್ಲಿ ನಿರತರಾಗಿದ್ದಾರೆ. ಅವರನ್ನು bkanitha@gmail.comಮೂಲಕ ಸಂಪರ್ಕಿಸಬಹುದು.
 
  
19178 ನೊಂದಾಯಿತ ಬಳಕೆದಾರರು
7446 ಸಂಪನ್ಮೂಲಗಳು