ಶಿಕ್ಷಣದ ಮಹತ್ವ- ಅಜೀಂ ಪ್ರೇಂಜಿ

 1950 ರಲ್ಲಿ ಭಾರತವು ತನ್ನ ಎಲ್ಲ ನಾಗರಿಕರಿಗೂ ನ್ಯಾಯ ,ಸ್ವಾತಂತ್ರ್ಯ. ಮತ್ತು ಸಮಾನತೆಯನ್ನು ಖಾತರಿಯಾಗಿ ದೊರಕಿಸಿಕೊಡಲು ಮತ್ತು ಈ ಆದರ್ಶಗಳನ್ನು ಭಾರತದ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲು ನಿರ್ಣಯವನ್ನು ಕೈಗೊಂಡಿತು.56 ವರ್ಷಗಳ ಬಳಿಕ ನೋಡಿದಾಗ ಅವಕಾಶಗಳಲ್ಲಿ ಸಮಾನತೆ ಮತ್ತು ಸಾಮಾಜಿಕ ಆರ್ಥಿಕ ನ್ಯಾಯವು ನಾಗರಿಕರಿಗೆ ಇನ್ನೂ ದೂರದ ಕನಸಾಗಿದೆ. ಈ ಪರಮಾದರ್ಶ ಗುರಿಯನ್ನು ನನಸಾಗಿಸಲು ನಮ್ಮ ದೇಶಕ್ಕೆ ಅಗತ್ಯವಾಗಿರುವುದಾದರೂ ಏನು? ಈ ಪ್ರಶ್ನೆಗೆ ಉತ್ತರದಲ್ಲೇ ಶಿಕ್ಷಣದ ಮಹತ್ವ ಅಡಗಿದೆ.

ಶಾಲೆಗಳು ನಮ್ಮ ಮಕ್ಕಳಿಗೆ ನಮ್ಮ ಇತಿಹಾಸ ನಮ್ಮ ಸಂಚಯಿತ ಜ್ಞಾನ ನಮ್ಮ ಸಂಸ್ಕೃತಿ ಗಳನ್ನು ತಿಳಿಸಿ ಸಮೃದ್ಧಗೊಳಿಸುತ್ತಾ  ಸಮಾಜಿಕ ನಿರಂತರತೆಯನ್ನು ಸುಗಮಗೊಳಿಸುತ್ತವೆ. ಹಾಗೆಯೇ ಶಾಲೆಗಳು ನಾವು ರಚಿಸಲು ಇಚ್ಛಿಸುವ ಸಮಾಜವನ್ನು ನಿರ್ಮಿಸುವ ಕಾರ್ಯಕ್ಕೆ ನಿರ್ದೇಶನ ನೀಡುವ ಸಾಮಾಜಿಕ ಪ್ರಯೋಗಾಲಯಗಳಾಗಿವೆ .ಈ ದೃಷ್ಟಿಕೋನದಿಂದ ನೋಡಿದಾಗ ಪರಮಸತ್ಯದ ಆನ್ವೇಷಣೆಯ ಪ್ರಯತ್ನದಲ್ಲಿ ಮಾನವ ಸಮುದಾಯಕ್ಕೆ ಶಾಲೆಗಳು ಬಹು ಮುಖ್ಯ ಸಾಧನಗಳಾಗುತ್ತವೆ. ಇಲ್ಲೆ ಸಮಾಜವು ನಿರಂತರವಾಗಿ ತನ್ನನ್ನು ತಾನು ಕಂಡುಕೊಳ್ಳುತ್ತದೆ ಮತ್ತು ಮಾರ್ಪಾಡು ಮಾಡಿಕೊಳ್ಳುತ್ತದೆ.

ಶಾಲೆಗಳು ಮಕ್ಕಳಿಗೆ ಈ ಸುಂದರ ಪ್ರಪಂಚವನ್ನು ತೆರೆದು ತೋರಿಸುತ್ತಾ , ಸರ್ವ ಸಮಾನತೆ ,ಭಾಗವಹಿಸುವಿಕೆ , ಸಾಮಾಜಿಕ ಸಕ್ರಿಯ ಕಾರ್ಯನಿರ್ವಹಣೆ ಹಾಗುಮತ್ತು ಸ್ವಯಂಪ್ರೇರಣೆ ಮೂಲಕ ನೈಜ ದಾರ್ಶನಿಕ ವಾತಾವರಣವನ್ನು ಉಂಟು ಮಾಡುತ್ತವೆ.ಶಾಲೆಗಳು ನಮ್ಮ ಮಕ್ಕಳಲ್ಲಿ ಪ್ರಶ್ನಿಸಿ  ನೋಡುವ ಮತ್ತು ಸುಧಾರಣೆಯನ್ನು ತರುವ ಹುಮ್ಮಸ್ಸನ್ನು ಮಕ್ಕಳಲ್ಲಿ ಮೈಗೂಡಿಸುತ್ತವೆ.ತನ್ಮೂಲಕ ಮಕ್ಕಳು ಭಾರತವನ್ನು ಒಂದು ನ್ಯಾಯಪರ ಮಾನವೀಯ ಮತ್ತು ಸರ್ವಸಮಾನ ಸಮಾಜದತ್ತ ಕೊಂಡೊಯ್ಯುತ್ತಾರೆ.

ಆದರೆ ವಾಸ್ತವವು ನಿಜಕ್ಕೂ ಕಳವಳಕಾರಿಯಾಗಿದೆ.ಕಡುಶಿಸ್ತು ದಬ್ಬಾಳಿಕೆಯ ಶಾಲಾ ಕೊಠಡಿಗಳು, ಯಾಂತ್ರಿಕ ಬೋಧನೆ, ವಾಸ್ತವಕ್ಕೆ ಬಲು ದೂರವಾದ ಕಲಿಕೆ ಇವು ಎಲ್ಲ ಶಾಲೆಗಳಲ್ಲಿ ಅವು ನಗರಶಾಲೆಗಳಿರಲಿ ಗ್ರಾಮೀಣ ಶಾಲೆಗಳಿರಲಿ, ಖಾಸಗಿ ಶಾಲೆಯಾಗಿರಲಿ ಸರ್ಕಾರಿ ಶಾಲೆಯಾಗಿರಲಿ ಶ್ರೀಮಂತರ ಶಾಲೆಯಿರಲಿ ಬಡ ಮಕ್ಕಳ ಶಾಲೆಯಿರಲಿ ಎದ್ದು ಕಾಣುವ ಗುಣ ಲಕ್ಷಣಗಳು. ಇಂದಿನ ಶಾಲೆಗಳು ನಾಳಿನ ಸಮಾಜದ ಪ್ರತಿಬಿಂಬ ಎನ್ನುವುದಾದರೆ ಪರಿಸ್ಥಿತಿ ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ.

ಅದೇ ಸಮಯದಲ್ಲಿ ಕೆಲವೊಂದು ಆಶಾದಾಯಕ ಚಿನ್ಹೆಗಳು ಕಾಣಸಿಗುತ್ತಿವೆ. ಮನೆಮನೆಯ ಹಿತ್ತಿಲಲ್ಲಿ ಉಳಿದಿದ್ದ ಧ್ವನಿಗಳು ಮತ್ತು ಚಟುವಟಿಕೆಗಳು ಈಗ ದಾಗಿ ಸೇರುತ್ತಿವೆ. ಶಾಲಾ ಸುಧಾರಣೆ ಪ್ರಯತ್ನಕ್ಕೆ ಕೈ ಜೊಡಿಸುವ ಎಷ್ಟೋಬಾರಿ ರಾಜ್ಯಸರ್ಕಾರದ ಪ್ರಯತ್ನಗಳಲ್ಲಿ ಸಹ ಭಾಗಿಯಾಗುವ ಸಂಘ ಸಂಸ್ಥೆಗಳ ಸಂಖ್ಯೆ ಹಚ್ಚುತ್ತಿದೆ. ಸಾಮಾನ್ಯ ಶಾಲೆ  ಮತ್ತು ಶಿಕ್ಷಣ ಹಕ್ಕು ಕಾಯಿದೆ ಮುಂತಾದ ಬಲು ನಿರ್ಣಾಯಕ ವಿಷಯಗಳನ್ನು ಕುರಿತು ಸಾಮಾಜಿಕ ಕ್ರಿಯಾಶೀಲತೆ ವೇಗವನ್ನು ಪಡೆದುಕೊಳ್ಳುತ್ತಿದೆ.ತಂದೆ ತಾಯಿಗಳು ಅವರ ಸಾಮಾಜಿಕ ಆರ್ಥಿಕ  ಹಿನ್ನೆಲೆ ಏನೇ ಇರಲಿ ಶಿಕ್ಷಣದ ಮಹತ್ವವನ್ನು ಕಾಣುತ್ತಿದ್ದಾರೆ.ಅವರು ತಮ್ಮ ಹಕ್ಕನ್ನು ಚಲಾಯಿಸಿ ಚೆನ್ನಾಗಿ ಕೆಲಸ ಮಾಡದ ಶಾಲೆಗಳಿಂದ ತಮ್ಮ ಮಕ್ಕಳನ್ನು ಬಿಡಿಸಿ ಉತ್ತಮ ಶಾಲೆಗೆ ಸೇರಿಸಿ ಬದಲಾವಣೆ ಗೆ ಒತ್ತಾಯಿಸುತ್ತಾರೆ. ಕೆಲವೊಂದು ಶಾಲೆಗಳು ಎಷ್ಟೇ ಅಡೆತಡೆ ಎದುರಿಸಿದರೂ ಸರಿಯಾದ ಮಾರ್ಗವನ್ನು ನಮಗೆ ತೋರಿಸಿಕೊಡುತ್ತಿವೆ.

ಭಾರತವು ಮಹತ್ತರ ಬೆಳವಣಿಗೆಯ  ಐತಿಹಾಸಿಕ ಹೊಸ್ತಲಿನಲ್ಲಿದೆ.ಜಾಗತಿಕ ಆರ್ಥಿಕ ಶಕ್ತಿ ಕೇಂದ್ರ ವಾಗಿ ನಾವುಖಂಡಿತಾ ಹೊರಹೊಮ್ಮುತ್ತೇವೆ.ಆದರೆ ಈ ಸದವಕಾಶವನ್ನು ಸರ್ವರ ಮಹತ್ತರ ಒಳಿತಿಗೆ ಬಳಸಿಕೊಳ್ಳಲಾಗುತ್ತದೆಯೇ ಎಂಬುದನ್ನು ನಾವು ಶಿಕ್ಷಣದಲ್ಲಿ ಮಾಡುವ  ಆಯ್ಕೆಗಳು ನಿರ್ಧಾರ ಮಾಡುತ್ತವೆ.ಒಂದು ದೇಶದ  ಅಬಿವೃದ್ಧಿಯ ಅಂತಿಮ ಅಳತೆಯು ಅದರ ಪಗುಂಪು ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಅವಲಂಬಿಸಿರುತ್ತದೆ.ಬಾರತದಲ್ಲಿ ಇಂಥ ಉಪಗುಂಪು ಎಂದರೆ ತೀರ ಅಲ್ಪ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಆಯ್ಕೆಗಳನ್ನು ಹೊಂದಿರುವ ಅಗಾಧ ಜನಸಮುದಾಯವಾಗಿರುತ್ತದೆ.ಬಡತನ ಮತ್ತು ಅಸಮಾನತೆಯ ಕೆಸರಿನಿಂದ  ಡೀ ದೇಶವನ್ನು ಮೇಲೆತ್ತುವ  ಮತ್ತು ವೈವಿಧ್ಯತೆ ತುಂಬಿತುಳುಕುವ ಸಾಮರಸ್ಯದ ಮತ್ತು ಸರ್ವ ಸಮಾನ  ಸಮಾಜ ನಿರ್ಮಾಣ ಮಾಡುವ ಸಾದ್ಯತೆ ಇರುವುದು ಶಿಕ್ಷಣಕ್ಕೆ ಮಾತ್ರ. ನಾವೆಲ್ಲ ಒಂದೇ ದೇಶದ ಬಂಧುಗಳಾಗಿ ಮೇರೆಗಳನ್ನು ಮೀರಿನಿಂತು ನಮ್ಮ ಆದರ್ಶ ಮತ್ತು ಭವ್ಯ ಭವಿತವ್ಯದಲ್ಲಿ ಹೂಡಿಕೆಯನ್ನು ಮಾಡೋಣ.

 

 

 

ಲರ್ನಿಂಗ್ ಕರ್ವ್ ಸಂಚಿಕೆ 7 ನವೆಂಬರ್ 2006

ಕನ್ನಡಾನುವಾದ : ಜೈಕುಮಾರ್ ಮರಿಯಪ್ಪ

 

 

18449 ನೊಂದಾಯಿತ ಬಳಕೆದಾರರು
7204 ಸಂಪನ್ಮೂಲಗಳು