ಶಿಕ್ಷಣದಲ್ಲಿ ಸಮಾವೇಶಿತ್ವಕ್ಕೆ ಇರುವ ಅಡತಡೆಗಳು - ಅನ್ನಿ ಜಾನ್

ಶಾಲೆ ಪ್ರಾರಂಭವಾಗಿ ಒಂದು ತಿಂಗಳು ಕಳೆದಿತ್ತು, ಎಸ್ ಎನ್ನುವ ವಿದ್ಯಾರ್ಥಿನಿಗೆ ತಾನು ಹೇಳುತ್ತಿರುವ ಯಾವುದೇ ವಿಷಯವೂ ಅರ್ಥವಾಗುತ್ತಿಲ್ಲ, ಅವಳಿಗೆ ಹೇಳಿಕೊಡುವುದು ಹೇಗೆ ಎಂದು ನನಗೆ ತಿಳಿಯುತ್ತಿಲ್ಲ ಎಂದು ಯುಕೆಜಿ ಶಿಕ್ಷಕರಾದ ಶೀಮತಿ ಜಿ, ಬಹಳ ಚಿಂತೆಗೆ ಒಳಗಾಗಿದ್ದರು. ಅವಳು ತನ್ನ ಜೊತೆಗಿರುವ ಇತರ ವಿದ್ಯಾರ್ಥಿಗಳ ಪುಸ್ತಕದಿಂದ ನೋಡಿ ನಕಲು ಮಾಡುತ್ತಾಳೆ.  ಆಟದ ಸಮಯದಲ್ಲಿ ಇತರರೊಡನೆ ಬೆರೆತು ಆಟವಾಡದೆ ಸುಮ್ಮನೆ ನಿಂತು ನೋಡುತ್ತಿರುತ್ತಾಳೆ.  ಇಲ್ಲಿ ಚಿಂತೆಗೆ ಕಾರಣವಾಗಿರುವ ವಿದ್ಯಾರ್ಥಿಯು ಆರ್‌ಟಿಇ ಕಾಯ್ದೆಯ ಅಡಿಯಲ್ಲಿ ಶಾಲೆಯನ್ನು ಸೇರಿದವಳಾಗಿದ್ದು ಅವಳಿಗೆ ಆಂಗ್ಲ ಭಾಷೆ ತಿಳಿಯುತ್ತಿರಲಿಲ್ಲ.(ಈ ಲೇಖನದಲ್ಲಿ ನಾನು ಉಲ್ಲೇಖಿಸಿರುವ ಸುಮಾರು ಎಲ್ಲಾ ಖಾಸಗೀ ಶಾಲೆಗಳಲ್ಲು ಬೋಧನೆಯು ಆಂಗ್ಲ ಭಾಷಾ ಮಾಧ್ಯಮದಲ್ಲಿ ಇರುವಂತಹದ್ದಾಗಿದ್ದು ಆರ್‌ಟಿಇ ಕಾಯ್ದೆಯನ್ನು ಜಾರಿಗೊಳಿಸಿರುವ ಶಾಲೆಗಳಾಗಿವೆ) ಹೀಗಾಗಿ ಈ ಸಮಸ್ಯೆಯನ್ನು ಪರಿಹರಿಸುವುದು ಹೇಗೆ ಎಂದು ತಿಳಿಯದೇ ಅವಳ ಶಿಕ್ಷಕರು ಕಂಗಾಲಾಗಿದ್ದಾರೆ! ೨೦೦೮ರಲ್ಲಿ ಆರ್‌ಟಿಇ ಕಾಯ್ದೆಯು ಜಾರಿಯಾದಾಗಿನಿಂದ ಇದು ಮತ್ತು ಇದರಂತೆ ಇತರ ಸಮಸ್ಯೆಗಳು, ಶಾಲಾ ವ್ಯವಸ್ಥೆಯಲ್ಲಿ ಈ ಸನ್ನಿವೇಶದೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಎಲ್ಲರನ್ನೂ ಹತಾಶೆಗೆ ಒಳಗಾಗುವಂತೆ ಮಾಡಿದೆ. ಇದರಲ್ಲಿ ಯಶಸ್ವಿಯಾಗಲು ಬಯಸುವ ಶಿಕ್ಷಕರು, ಇತರರು ಧರಿಸುವ ಸಮವಸ್ತ್ರವನ್ನು ತಾವೂ ಧರಿಸಿದ್ದರೂ  ವಿಭಿನ್ನವಾಗಿ ಕಾಣುತ್ತಿರುವ ವಿದ್ಯಾರ್ಥಿಗಳ ಗುಂಪಿನೊಡನೆ ಕಾರ್ಯವೆಸಗಲು ತಮ್ಮದೇ ಕ್ರಿಯಾತ್ಮಕತೆ ಮತ್ತು ತಮಗೆ ತೋಚಿದಂತೆ ಸನ್ನಿವೇಶವನ್ನು ನಿಭಾಯಿಸಲು ಹೆಣಗಾಡುತ್ತಿದ್ದಾರೆ.  ಈ ಮಕ್ಕಳು ವಿಭಿನ್ನರೇ?  ಯಾವ ರೀತಿಯ ಭಿನ್ನತೆ ಇದೆ? ಇವರನ್ನು ಹೊಂದಿಕೊಳ್ಳುವಂತೆ ಮಾಡುತ್ತಿದ್ದೇವೆಯೇ ಅಥವಾ ಅವರನ್ನು ಭಿನ್ನವಾಗಿರುವಂತೆಯೇ ಬಿಟ್ಟು ಬಿಡುತ್ತಿದ್ದೇವೆಯೇ?
ಕಲಿಯಲು ಮತ್ತು ಬೆಳೆಯಲು, ಮಕ್ಕಳಿಗೆ ಅವರ ಭಾವನಾತ್ಮಕ ಮತ್ತು ಸಾಮಾಜಿಕ ಅಗತ್ಯತೆಗಳನ್ನು ಪೂರೈಸುವ ಪರಿಸರದ ಅವಶ್ಯಕತೆ ಇದೆ.  ಇಂತಹಾ ಬೆಂಬಲಿಸುವ ಪರಿಸರವನ್ನು ಸೃಷ್ಠಿಸಲು ಸಮಾವೇಶಿತ್ವದಲ್ಲಿ ತೊಡಗಿಸಿಕೊಂಡಿರುವ ಸಮುದಾಯದ ಪ್ರತಿಯೊಬ್ಬ ಸದಸ್ಯರನ್ನೂ ಸಮಾನ ಪ್ರಭಾವ ಹೊಂದಿರುವರೆಂದು ಪರಿಗಣಿಸಬೇಕಾಗುತ್ತದೆ. ಈ ಸಮೀಕರಣದಲ್ಲಿ ಯಾರೂ ಕೊಡುವವರಲ್ಲ, ಯಾರೂ ತೆಗೆದುಕೊಳ್ಳುವವರಲ್ಲ, ಇದು ಧರ್ಮಾರ್ಥ ಕಾರ್ಯವೂ ಅಲ್ಲದೇ ಇದರಲ್ಲಿ ತೊಡಗಿಸಿಕೊಂಡಿರುವ ಎಲ್ಲರಿಗೂ ಪ್ರಯೋಜವಿರುವಂತಹದ್ದು. ಭಾಗಿದಾರರು/ಪಾಲುದಾರರಲ್ಲಿ ಯಾರೊಬ್ಬರನ್ನು ಹೆಚ್ಚಿನವರು/ಉತ್ತಮರು ಎಂದು ಪರಿಗಣಿಸಿದ್ದೇ ಆದರೆ, ಸಮಾವೇಶಿತ್ವ ಎನ್ನುವ ವ್ಯಾಖ್ಯಾನದ ಗುರಿಯೇ ತಪ್ಪಿದಂತಾಗುತ್ತದೆ.

ಸಮಾವೇಶಿತ್ವಕ್ಕೆ ಪರಿಗಣಿಸಿರುವ ಮಗುವಿಗೆ ಶಾಲಾ ಪರಿಸರವು ನಿರ್ಣಾಯಕ ಪರಿಸರ ಗಿದ್ದು ಇಲ್ಲಿ ಸಮಾವೇಶಿತ್ವದ ಪ್ರಕ್ರಿಯೆಯನ್ನು ಹೆಚ್ಚಾಗಿ ಪ್ರಭಾವಿಸುವ ವ್ಯಕ್ತಿಗಳೆಂದರೆ - ಮಗು, ತಂದೆತಾಯಿಯರು (ಮಗುವಿನ ತಂದೆತಾಯಿಯರು ಮತ್ತು ಇತರ ವಿದ್ಯಾರ್ಥಿಗಳ ತಂದೆತಾಯಿಯರು), ಶಾಲಾ ಆಡಳಿತ ವರ್ಗ, ಶಿಕ್ಷಕರು ಮತ್ತು ಇನ್ನಿತರ ಸಹಾಯಕ ವರ್ಗದವರು.  ಸಮಾವೇಶಿತ್ವವು ಸಾಧ್ಯವಾದಷ್ಟೂ ಸುಲಲಿತವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಲು, ಈ ಸಮುದಾಯವು ಸಮಾವೇಶಿತ್ವದ ತತ್ವವನ್ನು ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ಅಗತ್ಯವನ್ನು ಅರ್ಥಮಾಡಿಕೊಳ್ಳಬೇಕಾದದ್ದು ಅವಶ್ಯಕ.

ಮನೋಧೋರಣಾತ್ಮಕ ಅಂಶಗಳು, ಭೌತಿಕ ಅಡೆತಡೆಗಳು, ಪಠ್ಯಕ್ರಮ, ಶಿಕ್ಷಕರ ಮನೋಧೋರಣೆಗಳು ಮತ್ತು  ಸಾಮರ್ಥ್ಯಗಳು, ಭಾಷೆ ಮತ್ತು ಸಂವಹನ, ಸಾಮಾಜಿಕ-ಆರ್ಥಿಕ ಅಂಶಗಳು, ಅನುದಾನ, ಶೈಕ್ಷಣಿಕ ವ್ಯವಸ್ಥೆ ಮತ್ತು ಕಾರ‍್ಯನೀತಿಗಳ ಸಂಘಟನೆಗಳನ್ನು, ಸಮಾವೇಶಿತ್ವಕ್ಕೆ ಇರುವ ಅಡೆ-ತಡೆಗಳು ಎಂದು ಯುನೆಸ್ಕೊ (ಯುಎನ್‌ಇಎಸ್‌ಸಿಓ)(೨೦೦೮) ಪಟ್ಟಿ ಮಾಡಿದೆ.  ಇವುಗಳಲ್ಲಿ ಪ್ರತಿಯೊಂದೂ ಮುಖ್ಯವಾದುದು ಆದರೆ, ನನ್ನ ಈ ಲೇಖನವನ್ನು ನಾನು, ಶಾಲೆಯ ಹಾಗೂ ಪೋಷಕರ, ಭಾಷೆ ಮತ್ತು ಸಂವಹನದಂತಹ ಮನೋಧೋರಣಾತ್ಮಕ ಅಂಶಗಳಿಗೆ ಹಾಗೂ ಸಾಮಾಜಿಕ-ಆರ್ಥಿಕ ಅಂಶಗಳಿಗೆ ಸೀಮಿತಗೊಳಿಸುತ್ತೇನೆ.  ಅಲ್ಲದೇ, ಇವು ಭಾರತದಲ್ಲಿ ಆರ್‌ಟಿಇ ಕಾಯ್ದೆಯನ್ನು ಜಾರಿಗೊಳಿಸಲು ಹೇಗೆ ಅಡ-ತಡೆಗಳಾಗಿವೆ ಎಂಬ ವಿಷಯ ರ್ಚಿಸುತ್ತೇನೆ

ಸಮಾವೇಶಿತ್ವದ ಪ್ರಕ್ರಿಯೆಗೆ ಮತ್ತು ಸಮಾವೇಶಿತ್ವಕ್ಕೆ ಗುರಿಯಾಗುತ್ತಿರುವ ಮಗುವಿನೆಡೆಗೆ ಶಿಕ್ಷಕರು ಹೊಂದಿರುವ ಮನೋಧೋರಣೆಯು ಸಮಾವೇಶಿ ಶಿಕ್ಷಣದ ಯಶಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತದೆ.  ಇದಕ್ಕೆ ಶಿಕ್ಷಕರ ಪ್ರತಿರೋಧವು ವಿಭಿನ್ನ ಕಾರಣಗಳಿಂದ ಉಂಟಾಗುತ್ತದೆ.  ಉದಾಹರಣೆಗೆ, ಭಿನ್ನರೀತಿಯ ಬೋಧನೆಗೆ ತಕ್ಕಂತೆ ಪಠ್ಯಗಳನ್ನು ವಿನ್ಯಾಸಗೊಳಿಸಿಲ್ಲದೇ ಇರುವುದರಿಂದ ಶೈಕ್ಷಣಿಕ ಸಮಸ್ಯೆಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಬೋಧಿಸಲು ತಮಗೆ ಅಗತ್ಯವಾದ ಕೌಶಲ್ಯವಿಲ್ಲ ಎಂದು ಮುಖ್ಯವಾಹಿನಿಯ ಶಿಕ್ಷಕರು ಭಾವಿಸುತ್ತಾರೆ. ಹೀಗಾಗಿ ಯಾವುದೋ ಒಬ್ಬ ವಿದ್ಯಾರ್ಥಿ, ಅಥವಾ ಒಂದು ಸಣ್ಣ ಗುಂಪಿನ ವಿದ್ಯಾರ್ಥಿಗಳಿಗೆ ವೈಯಕ್ತಿಕ ಗಮನವನ್ನು ನೀಡುವುದರಿಂದ ಇತರ ವಿದ್ಯಾರ್ಥಿಗಳಿಗೆ ಬೋಧಿಸುವ ಸಮಯವನ್ನೂ ಇದು ತೆಗೆದುಕೊಳ್ಳುತ್ತದೆ ಎನಿಸಿ ಅವರಿಗೆ ತಪ್ಪಿತಸ್ಥ ಭಾವನೆ ಮೂಡಿ ಈ ಸಮಸ್ಯೆಯನ್ನು ಇನ್ನೂ ಜಟಿಲಗೊಳಿಸುತ್ತದೆ.  ಸಮಾವೇಶಿತ್ವಕ್ಕೆ ಶಿಕ್ಷಕರ ಪ್ರತಿರೋಧಕ್ಕೆ ಇಂತಹದ್ದೇ ಮತ್ತೊಂದು ಕಾರಣವೆಂದರೆ, ಸಮಾವೇಶಿತ್ವ ಎಂದರೇನು ಎಂಬುದನ್ನು ಅವರು ತಪ್ಪಾಗಿ ಅರ್ಥಮಾಡಿಕೊಂಡಿರುವುದಾಗಿದೆ ಮತ್ತು ಅದರೆಡೆಗೆ ಅವರ ಮನದಲ್ಲಿರುವ ’ತತ್ವಗಳು; ಕೆಲವು ಶಿಕ್ಷಕರು, ಸಮಾವೇಶಿತ್ವವನ್ನು ’ಮಗುವನ್ನು ಇತರಮಕ್ಕಳಂತೆ ಮಾಡುವುದು,’ ಎನ್ನುವ ದೃಷ್ಟಿಯಲ್ಲಿ ಕಂಡರೆ, ಉಳಿದವರು, ವಿಭಿನ್ನ ಅಗತ್ಯಗಳನ್ನು ಪೂರೈಸುವ ಪರಿಸರವನ್ನು ನೀಡುವುದೇ ಸಮಾವೇಶಿತ್ವ ಎಂದು ನೋಡುತ್ತಾರೆ.

ಭಾರತದ ಅನೇಕ ಖಾಸಗೀ ಶಾಲೆಗಳಲ್ಲಿ ಸಾಮಾನ್ಯವಾಗಿ ಬೋಧನೆ ಮತ್ತು ಪಠ್ಯ ವಸ್ತುವು ಆಂಗ್ಲ ಭಾಷೆಯಲ್ಲಿ ಇರುವಾಗ, ಆಂಗ್ಲ ಭಾಷೆಯ ಪೂರ್ವ ಜ್ಞಾನವೇ ಇಲ್ಲದಿರುವ ಒಂದು ಮಗುವಿಗೆ ಪಠ್ಯಕ್ರಮವನ್ನು ಅರ್ಥಮಾಡಿಕೊಳ್ಳಲು ಮತ್ತು ಪಠ್ಯಗಳನ್ನು ಮನದಟ್ಟು ಮಾಡಿಕೊಳ್ಳುವುದು ಕಷ್ಟವೆನಿಸುತ್ತದೆ.  ಬಹಳಷ್ಟು ಬಾರಿ, ಈ ಮಕ್ಕಳಿಗೆ ಆಂಗ್ಲ ಭಾಷೆಯ ಪರಿಚಯವಾಗುವುದಕ್ಕೆ ಇರುವ ಅಕರವು ಅವರ ಶಿಕ್ಷಕರು ಮತ್ತು ಶಾಲೆಯಲ್ಲಿನ ಅವರ ಜೊತೆಗಾರರು ಮಾತ್ರವೇ ಆಗಿರುತ್ತದೆ.  ಮಧ್ಯಮ ವರ್ಗದಿಂದ ಬಂದ ತನ್ನ ಇತರ ಜೊತೆಗಾರರಂತೆ ಈ ಮಗುವು - ಕಥೆ ಪುಸ್ತಕಗಳು, ಇತರರು (ತಂದೆತಾಯಿಯರು, ಗೆಳೆಯರು) ಆಂಗ್ಲ ಭಾಷೆಯಲ್ಲಿ ಮಾತನಾಡುವುದನ್ನು ಕೇಳಿಸಿಕೊಳ್ಳುವುದು, ಆಂಗ್ಲ ಭಾಷೆಯ ಟ.ವಿ ವಾಹಿನಿ ಅಥವಾ ಚಲನಚಿತ್ರವನ್ನು ವೀಕ್ಷಿಸುವುದು, ಅಥವಾ ಆಂಗ್ಲ ಭಾಷೆಯಲ್ಲಿ ಮುದ್ರಿತವಾದ ದಿನಪತ್ರಿಕೆಗಳನ್ನಾದರೂ ನೋಡುವಂತೆ, ಆಂಗ್ಲ ಭಾಷೆ ಅರಿವಿನ ಪರಿಸರದಲ್ಲಿರುವುದಿಲ್ಲ.  ಹೀಗಾಗಿ ಈ ಮಗುವು ಆಂಗ್ಲ ಪದಸಂಪತ್ತು ಮೈಗೂಡಿಸಿಕೊಳ್ಳದೇ ಹೋಗಿರುತ್ತದೆ.  ಮಗುವಿಗೆ ಸೂಕ್ತವಾದ ಅವಕಾಶಗಳನ್ನು ಮಾಡಿಕೊಡದಿದ್ದರೆ, ಬೋಧನೆ ಮತ್ತು ಕಲಿಕೆಯಲ್ಲಿನ ಅಂತರವು ಹೆಚ್ಚಾಗುತ್ತಾ ಹೋಗುತ್ತದೆ.  ಇದರ ಪರಿಣಾಮವಾಗಿ, (ಹೆಚ್ಚಿನ ಅವಧಿಯ ಪಾಠಗಳು ಅಥವಾ ಮನೆ ಪಾಠಗಳ ಮೂಲಕ) ಇತರರ ಸಮಕ್ಕೆ ಬರುವಂತೆ ಮಾಡದಿದ್ದರೆ ಮಗು ವಿನ  ಶಾಲಾ ಶಿಕ್ಷಕರಲ್ಲಿ ತಾವು ಅಸಮರ್ಪಕರೆಂಬ ಮತ್ತು ಹತಾಶೆಯ ಭಾವನೆಯನ್ನು ಮೂಡಿಸಿ, ಏಳು ತಾಸುಗಳ ಅವಧಿಯ ಶಾಲಾ ದಿನದಲ್ಲಿ ಪ್ರಮುಖವಾದ ವ್ಯಕ್ತಿಯಾದ ಮಗುವಿನೊಡನೆ ಸಂಪರ್ಕ ಕಡಿದುಕೊಳ್ಳುವಂತೆ ಮಾಡುತ್ತದೆ.

ಆಂಗ್ಲ ಭಾಷೆಯ ಪೂರ್ವ ಜ್ಞಾನವಿಲ್ಲದ ಮಕ್ಕಳಿಗೆ ಭಾಷೆಯನ್ನು ಕಲಿಯಲು ನೆರವು ಬೇಕು ಎನ್ನುವುದು ನಿಜ,ಆದರೆ ಇಲ್ಲಿ ಉತ್ತರಿಸಲು ಕಷ್ಟ ಸಾಧ್ಯವಾದ ಪ್ರಶ್ನೆಯೆಂದರೆ ಈ ಮಕ್ಕಳಿಗೆ ಅಗತ್ಯವಿರುವ ಹೆಚ್ಚಿನ ನೆರವನ್ನು ಯಾವಾಗ ನೀಡಬೇಕು ಎಂಬುದಾಗಿದೆ.  ಶಿಕ್ಷಣೇತರ ಪಾಠಗಳು (ಆಟ ಅಥವಾ ಕಲೆಯ ವಿಷಯಗಳಂತಹವು) ಎಂಬ ಹೆಸರಿನಿಂದ ಕರೆಸಿಕೊಳ್ಳುವ ಸಮಯ, ಅಥವಾ ಅವರ ಊಟದ ವಿರಾಮದ ಸಮಯದಲ್ಲಿ ಹೆಚ್ಚಿನ ನೆರವಿಗಾಗಿ ತರಗತಿಗಳು ಎಂದು ಹೇಳಲು ಶಿಕ್ಷಣ ವ್ಯವಸ್ಥೆಗೆ ಅನುಕೂಲವಾಗಿ ಕಂಡುಬರಬಹುದು.  ಆದಾಗ್ಯೂ, ಮಕ್ಕಳು ತಮ್ಮ ಜೊತೆಗಾರರೊಂದಿಗೆ ಸಹಜವಾಗಿ ಬೆರೆಯುವುದು ಶಿಕ್ಷಣೇತರ ಸನ್ನಿವೇಶಗಳಲ್ಲಿ, ಮತ್ತು ಇಂತಹಾ ಸಮಯದಲ್ಲಿ ಈ ಮಕ್ಕಳು ಆಟದ ಮೈದಾನದಲ್ಲಿ ಇತರರೊಂದಿಗೆ ತಾವು ಸಮ ಎಂದು ಭಾವಿಸುವ ಅವಕಾಶವಿದೆ ಎಂದು ತಿಳಿದಿದ್ದರೂ, ಈ ಸಮಯವನ್ನು ನಾವು ಅವರಿಂದ ಕಸಿದುಕೊಳ್ಳಬಹುದೇ?
ಮಕ್ಕಳು ತರುವ ಪೆನ್ಸಿಲ್ ಡಬ್ಬ, ಅವರ ತಲೆಗೂದಲಿನ ವೈಖರಿ, ಅವರು ಧರಿಸುವ ಶೂ, ಮನೆಯಿಂದ ತರುವ ತಿಂಡಿ ಅಥವಾ ಊಟದ ವಿಧ ಇವುಗಳೆಲ್ಲವೂ ಮಗುವಿನ ಸಂಸ್ಕೃತಿ ಮತ್ತು ಸಾಮಾಜಿಕ-ಆರ್ಥಿಕ ಹಿನ್ನಲೆಯನ್ನು ಸೂಚಿಸುತ್ತವೆ.  ಅಲ್ಲದೇ, ಇವು ಆ ಮಕ್ಕಳಿರುವ ತರಗತಿಯಲ್ಲಿ ತೋರಿಸುವ ತಾರತಮ್ಯಕ್ಕೂ ಕಾರಣವಾಗುತ್ತವೆ.  ಮಕ್ಕಳು ಇಂತಹಾ ಭಿನ್ನತೆಗಳನ್ನು ಗಮನಿಸುತ್ತಾರೆ ಮತ್ತು ಇವುಗಳನ್ನು ಅರ್ಥಮಾಡಿಕೊಂಡು ಇವು ’ಸಹಜವಾದ ಭಿನ್ನತೆಗಳು’ ಎಂದು ಒಪ್ಪಿಕೊಳ್ಳದಿದ್ದಲ್ಲಿ, ಇವುಗಳೇ ತಾರತಮ್ಯಕ್ಕೆ ಮತ್ತು ದಾದಾಗಿರಿಗೆ ಕಾರಣವಾಗುತ್ತವೆ.

ಶಾಲೆಯಲ್ಲಿ ಒದಗಿಸಿರುವ ವಿವಿಧ ಅನುಕೂಲಗಳನ್ನು ಬಳಸಲು ಇರುವ (ಇಲ್ಲದಿರುವ) ತಿಳುವಳಿಕೆಯೇ ಒಂದು ಅಡ್ಡಿಯಾಗುತ್ತದೆ, ಅದನ್ನು ಸುಲಭವಾಗಿ ಗುರುತಿಸಲು ಅಸಾಧ್ಯ.  ಮನೆಯಲ್ಲಿರುವ ಶೌಚಾಲಯದಲ್ಲಿ ಕಮೋಡನ್ನು ಬಳಸಿರದ ಮಗುವಿಗೆ, ಶಾಲೆಯಲ್ಲಿ ಅದನ್ನು ಬಳಸಲು ತಿಳಿದಿರುವುದಿಲ್ಲ. ಇದರಿಂದಾಗಿ ಉಂಟಾದ ಚೆಲ್ಲುವಿಕೆ ಅಥವಾ ಕರೆಯು ಅವನ/ಅವಳ ಜೊತೆಗಾರರಿಗೆ ಎದ್ದು ಕಾಣುತ್ತದೆ. ಇದು ಅವರಿಗೆ ಹೊಸದೊಂದು ಹೆಸರು ಕಟ್ಟಿ ಕರೆಯಲು, ಅವರನ್ನು ಗೇಲಿ ಮಾಡಲು ಅಥವಾ ಹಣೆಪಟ್ಟಿ ಕಟ್ಟಲು , ನಂತರದ ಸಾಮಾಜಿಕವಾಗಿ ಒಂಟಿತನಕ್ಕೆ ಈಡು ಮಾಡಲು ಕಾರಣವಾಗುತ್ತವೆ.  ಇದರೊಟ್ಟಿಗೆ, ವಯಸ್ಕರಲ್ಲಿ ಏನೋ ದಯೆತೋರಿ ಒಪ್ಪಿಕೊಂಡಂತೆ ಮತ್ತು ಹೇವರಿಕೆ ತೋರುವ  ಮನೋಧೋರಣೆಗಳನ್ನು ವ್ಯಕ್ತ ಪಡಿಸುತ್ತಾರೆ.  ಜೊತೆಗಾರರಿಂದ ಪ್ರತ್ಯೇಕತೆಗೆ ಒಳಗಾಗಿ ಏಕಾಂಗಿಯಾದ ಮಕ್ಕಳಿಗೆ, ಸಾಮಾಜಿಕ ಸಮಸ್ಯೆಗಳು ಉಂಟಾಗುತ್ತವೆ ಹಾಗೂ ಅವರ ಆತ್ಮಗೌರವವನ್ನು ಇದು ಬಾಧಿಸುತ್ತದೆ.  ಸಮಾವೇಶಿತ್ವಕ್ಕೆ ಇರುವ ಇಂತಹಾ ಅಡ್ಡಿಗಳನ್ನು ಗುರುತಿಸಿ ಪರಿಹರಿಸುವುದು ಸಂವೇದನಾ ಶೀಲ ಶಾಲೆಯ ಕೆಲಸಗಾರರಿಗೆ ಇರಬೇಕಾದ ಜವಾಬ್ದಾರಿಯಾಗುತ್ತದೆ.

ಹಿಂದುಳಿದಿರುವ (ಹುಟ್ಟಿನಿಂದ, ಅಥವಾ ಸಾಮಾಜಿಕ-ಆರ್ಥಿಕ ಸ್ತರದಿಂದ) ಗುಂಪುಗಳ ವಿರುದ್ಧ ಭಾರತೀಯ ಸಮಾಜದಲ್ಲಿರುವ ವರ್ಗ ಮತ್ತು ಜಾತಿ ಆಧಾರಿತ ಪೂರ್ವಗ್ರಹಗಳು,  ತಾರತಮ್ಯಕ್ಕೆ ಮತ್ತು ಹಣೆಪಟ್ಟಿ ಹಚ್ಚುವಿಕೆಯಂತಹಾ ಮನೋಧೋರಣೆಗಳಿಗೆ ಎಡೆ ಮಾಡಿಕೊಡುತ್ತವೆ. ಅನಾನುಕೂಲವಿರುವ ಕುಟುಂಬದಿಂದ ಬಂದಿರುವ ಮಕ್ಕಳು ಭಿನ್ನವಾಗಿರುತ್ತಾರೆ; ಅವರಿಗೆ ಬೇಕಾದ್ದನ್ನು ಪಡೆಯಲು ಅವರದಲ್ಲದ ವಸ್ತುಗಳನ್ನು ತೆಗೆದುಕೊಳ್ಳುತ್ತಾರೆ, ಅವರಿಗೆ ಮೌಲ್ಯಗಳು ಮತ್ತು ಸರಿ-ತಪ್ಪುಗಳ ಬಗ್ಗೆ ಮನೆಯಲ್ಲಿ ಶಿಕ್ಷಣ ದೊರೆತಿರುವುದಿಲ್ಲ, ಅವರಿಗೆ ರೋಗಗಳಿರುತ್ತದೆ, ಅವರಿಗೆ ಕನಿಷ್ಠ ಶುಚಿತ್ವವೂ ತಿಳಿದಿರುವುದಿಲ್ಲ ಎಂದು ಹೆಚ್ಚಿನ ಮಧ್ಯಮ ವರ್ಗದ ಪೋಷಕರು ಮತ್ತು ಮಕ್ಕಳು ನಂಬಿದ್ದಾರೆ. ತಮ್ಮ ಮಕ್ಕಳನ್ನು ಖಾಸಗೀ ಶಾಲೆಗೆ ಕಳುಹಿಸುವ ಪೋಷಕರು, (ಎಲ್ಲರೂ ಅಲ್ಲ) ತಮ್ಮ ಮಕ್ಕಳು (’ನೈತಿಕವಾಗಿ ಪರಿಪೂರ್ಣರು, ಮತ್ತು ಉತ್ತಮ ನಡತೆಯವರು - ಶುಚಿರ್ಭೂತರು, ಆರೋಗ್ಯವಂತರು, ಸುಳ್ಳು ಹೇಳುವುದಿಲ್ಲ,ಕದಿಯುವುದಿಲ್ಲ, ಕೆಟ್ಟ ಪದಗಳ ಬಳಕೆ ಇಲ್ಲ, ಆಕ್ರಮಣಕಾರಿತ್ವ ಇಲ್ಲ) ಪ್ರತಿ ನಿತ್ಯ ಈ ಎಲ್ಲವನ್ನೂ ಇಲ್ಲದವರೊಂದಿಗೆ ಒಡನಾಡುವುದರ ಬಗ್ಗೆ ನಿರೀಕ್ಷಿತ ಗಾಭರಿಯಿಂದ ಪ್ರತಿಕ್ರಿಯಿಸುತ್ತಾರೆ. ಇದು ಅವರ ಮಗುವಿನಲ್ಲಿ, ಆರ್‌ಟಿಇ ಕಾಯ್ದೆಯ ಮೂಲಕ ಬಂದಿರುವ ಮಕ್ಕಳೆಡೆಗೆ ಮನೋಧೋರಣಾತ್ಮಕ ಪೂರ್ವಗ್ರಹವಾಗಿ ಪರಿವರ್ತಿತವಾಗುವಂತೆ ಮಾಡುತ್ತದೆ.  ಈ ರೀತಿಯ ಪೂರ್ವಗ್ರಹವು ಇದೇ ಸಂಸ್ಕೃತಿಯ ಭಾಗವಾದ ನಮ್ಮ ಶಿಕ್ಷಕರಲ್ಲೂ ಇರುತ್ತದೆ.


ಸಮಾವೇಶಿತ್ವದಲ್ಲಿ ತೊಡಗಿಸಿಕೊಂಡಿರುವ ಎಲ್ಲರಿಗೂ ಮುಕ್ತ ಮತ್ತು ನಿರಂತರ ಮಾತುಕತೆ ಅವಕಾಶ ಲಭ್ಯವಾಗಬೇಕು.  ಓದುಬರಹ ಇರದ ತಂದೆತಾಯಿಯರ ಬಗ್ಗೆ ಅಥವಾ ಆಂಗ್ಲ ಭಾಷೆಯಲ್ಲಿ ಓದಲು ಬರೆಯಲು ಬಾರದಿರುವ ತಂದೆತಾಯಿಯರಬಗ್ಗೆ ಸೂಕ್ತ ಸಂವೇದನೆ ಹೊಂದಿರದ ಶಾಲಾ ಮುಖ್ಯಸ್ಥರು, ಈ ತಂದೆತಾಯಿಯರಿಗೆ ಮಾತನಾಡಲು  ಯಾವ ಅವಕಾಶವನ್ನೂ ನೀಡುವುದಿಲ್ಲ ಅಥವಾ ಅವರಿಗೆ ತಾವು ಸಮಾವೇಶಿ ಪ್ರಕ್ರಿಯೆಯಲ್ಲಿನ ಒಂದು ಭಾಗ ಎನ್ನುವ ವಿಶ್ವಾಸವನ್ನೂ ಮೂಡಿಸುವುದಿಲ್ಲ.  ಆಂಗ್ಲ ಭಾಷೆಯನ್ನು ತಿಳಿಯದಿರುವ ತಂದೆತಾಯಿಯರನ್ನ್ಗು ಎಲ್ಲ ರೀತಿಯ ಶಾಲಾ ಕಾರ್ಯಕ್ರಮಗಳಿಂದ (ಶಾಲಾ ವಾರ್ಷಿಕ  ದಿನ, ಮುಂತಾಗಿ) ಹೊರಗಿಟ್ಟಾಗ ಅವರನ್ನು  ತಾವು ಭಿನ್ನರು ಎಂದು ಭಾವಿಸುವಂತೆ ಅವರಿಗೆ ತಾರತಮ್ಯ ಮಾಡಲಾಗುತ್ತದೆ, ಇದು ಅವರಲ್ಲಿ ಮತ್ತು  ಅವರ ಮಗುವಿನಲ್ಲಿ ಪ್ರತ್ಯೇಕತೆಗೆ ಒಳಗಾದ ಭಾನೆಯು  ಹೆಚ್ಚುವಂತೆ ಮಾಡುತ್ತದೆ.  ಆಂಗ್ಲ ಭಾಷೆಯನ್ನು ತಿಳಿದಿರದ ಎಲ್ಲಾ ಪೋಷಕರಿಗೆ ಶಾಲೆಯ ಪ್ರತಿಯೊಂದು ಪತ್ರವೂ ತಪ್ಪದೇ ತಲುಪುವಂತೆ   ನೋಡಿಕೊಳ್ಳಲು ಸ್ಥಳೀಯ ಭಾಷೆಯಲ್ಲಿ ಪರಿಣಿತಿ ಇರುವ ಒಬ್ಬ ಪೋಷಕರನ್ನು (ಆರ್‌ಟಿಇ ಮೂಲಕ ಸೇರಿಕೊಳ್ಳುವ ಮಕ್ಕಳ ಪೋಷಕರಲ್ಲದವರು) ನೇಮಿಸಿಕೊಳ್ಳುವ ಆಲೋಚನೆಯನ್ನು ಒಬ್ಬ ಶಿಕ್ಷಕರು ಹೊಂದಿದ್ದರು.  ಇಂತಹಾ ಸರಳ ಕ್ರಮಗಳು ಈ ಅಂತರವನ್ನು ನೀಗಿಸಲು ಸಹಾಯಕವಾಗಬಹುದು.

 

ತಮ್ಮ ಮಕ್ಕಳನ್ನು ತಾವು ಭಿನ್ನರು ಎಂದು ಭಾವಿಸುವಂತೆ ಶಾಲೆಯು ಮಾಡಬಹುದೇ, ಎಂಬ ತಮ್ಮ ಹಿಂಜರಿಕೆಯನ್ನು ಆರ್‌ಟಿಇ ಕಾಯ್ದೆಯ ಅನ್ವಯ ಶಾಲೆಗೆ ದಾಖಲಾದ ಮಕ್ಕಳ ಕೆಲವು ಪೋಷಕರು ವ್ಯಕ್ತಪಡಿಸಿದರು.  ತಮ್ಮ ಮಕ್ಕಳಿಗೆ ಏನೇನು  ಅವಕಾಶಗಳನ್ನು ಮಾಡಿಕೊಡಲಾಗಿದೆ, ತಮ್ಮ ಮಕ್ಕಳ ಅಗತ್ಯತೆಗಳನ್ನು ಯಾವಾಗ ಮತ್ತು ಹೇಗೆ ಪೂರೈಕೆ ಮಾಡಲಾಗುವುದು, ಎಂಬುದನ್ನು  ತಂದೆತಾಯಿಯರು  ತಿಳಿದುಕೊಳ್ಳಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.  ಇದರ ಜೊತೆಯಲ್ಲಿ ತಮ್ಮ ಮಗುವಿನ ಶಿಕ್ಷಣಕ್ಕೆ ತಾವೂ ಕೊಡುಗೆಯನ್ನು ನೀಡುವುದು ಮುಖ್ಯ ಎಂದು ತಿಳಿದುಕೊಳ್ಳಬೇಕು.  ಮನೆಯಲ್ಲಿ ಓದಲು ಮತ್ತು ಶಾಲೆಯಲ್ಲಿ ನೀಡಿದ ಹೋಂವರ‍್ಕ್ ಗಳನ್ನು ಮಾಡಲು ಮಕ್ಕಳಿಗೆ ಭೌತಿಕ ಸ್ಥಳಗಳನ್ನು ಒದಗಿಸಿದರಷ್ಟೇ ಸಾಲದು, ಶಾಲೆಯ ಪ್ರಕ್ರಿಯೆಗಳಲ್ಲಿ ಮತ್ತು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದೂ ತಿಳಿಯಬೇಕು. ಅನೇಕ ಬಾರಿ ಅವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ, ಇಲ್ಲಿ ದಾಖಲು ಮಾಡಿಕೊಳ್ಳದಿದ್ದರೆ ಅವರಿಗೆ ಇಂತಹಾ ಶಿಕ್ಷಣ ದೊರೆಯುತ್ತಿರಲಿಲ್ಲ ಎಂದು ಕೃತಜ್ಞತೆಯ ಭಾವವನ್ನು ಮಾತ್ರ ಅವರು ಹೊಂದಿರುತ್ತಾರೆ. ಇಂತಹಾ ಕೃತಜ್ಞತೆಯ ಭಾವನೆ ಹಾಗು ತಮ್ಮ ಮಗುವಿನ ವಿದ್ಯಾಭ್ಯಾಸದಲ್ಲಿ ತಾವು ಪೋಷಕರಾಗಿ ಸಮರ್ಥಿಸಿಕೊಳ್ಳಲು ನಿರಾಸಕ್ತಿ ಅವರು ಪ್ರಕ್ರಿಯೆಯಲ್ಲಿ ಸಮಾನವಾದ ಭಾಗೀದಾರರಾಗಿ ಸಶಕ್ತ ರಾಗುವುದಿಲ್ಲ್ಲ.  ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ, ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ವೈಯಕ್ತಿಕವಾಗಿ ತಾವೂ ಭಾಗಿ ಆಗುವ ಹಕ್ಕು ತಂದೆತಾಯಿಯರಿಗಿದೆ.

ನಿಜವಾದ ಸಮಾವೇಶಿತ್ವವೇ ನಾವು ಸಾಧಿಸಲು ಬಯಸಿರುವುದು.  ಆದರೆ, ಇದನ್ನು ಸಾಧಿಸಲು ಮಾರ್ಗದಲ್ಲಿ ನಮಗೆ ಎದುರಾಗುವ ಅಡೆ-ತಡೆಗಳನ್ನು ದಾಟಿ ಬರುವ ಸಾಮರ್ಥ್ಯ ನಮಗಿದೆಯೇ?  ಮನೋಧೋರಣೆಯ ಪೂರ್ವಗ್ರಹಗಳನ್ನು ಬದಲಾಯಿಸಲು ನಮಗೆ ಸಾಧ್ಯವೇ? ಎಲ್ಲಾ ರೀತಿಯ ಭಿನ್ನತೆಗಳಿಗೆ ಸಂವೇದನಾಶೀಲರಾಗಲು ನಮಗೆ ಸಾಧ್ಯವಿದೆಯೇ? ಮತ್ತು ಇಂತಹಾ ಭಿನ್ನತೆಗಳ ಬಗ್ಗೆ ಸರಿತಪ್ಪು ತೀರ‍್ಪು  ನೀಡುವ ಬದಲು ಅದೇ ಸಂಪನ್ಮೂಲವೆಂದು ಸಂಭ್ರಮಿಸಲು ಸಾಧ್ಯವಿದೆಯೇ ?  ಈ ಸೂಕ್ಷ್ಮವಾದ ಮಕ್ಕಳ ಆತ್ಮವಿಶ್ವಾಸವನ್ನು ಘಾಸಿಗೊಳಿಸದೇ, ಅವರಿಗೆ ಮೂಲಭೂತ ಶಿಕ್ಷಣವನ್ನು ನೀಡಲು ಸಮಾವೇಶೀ ಪ್ರಕ್ರಿಯೆಯನ್ನು ಅನುಕೂಲಗೊಳಿಸಲು ನಮಗೆ ಸಾಧ್ಯವಿದೆಯೇ?

ಅನ್ನೀಯವರು, ಕ್ಲಿನಿಕಲ್ ಸೈಕಾಲಜಿಯಲ್ಲಿ ಪಿ.ಎಚ್‌ಡಿ ಪದವಿಯನ್ನು ಪಡೆದಿದ್ದಾರೆ.  ಇವರು ಬೆಂಗಳೂರಿನಲ್ಲಿರುವ ಮಲ್ಯ ಅದಿತಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಎರಡು ದಶಕಗಳ ಕಾಲ ಶಾಲಾ ಮನಃಶಾಸ್ತ್ರಜ್ಞರಾಗಿ ಮತ್ತು ವಿಶೇಷ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ.  ಧನಾತ್ಮಕ ಮನಃಶಾಸ್ತ್ರ ಮತ್ತು ಮಕ್ಕಳಲ್ಲಿ ಪುನಃಶ್ಚೇತನವನ್ನು ಅಭಿವೃದ್ಧಿಗೊಳಿಸುವುದು ಇವರಿಗಿರುವ ಆಸಕ್ತಿಗಳಾಗಿದೆ. ಇವರನ್ನು mais.annie@gmail.com ಇಲ್ಲಿ ಸಂಪರ್ಕಿಸಬಹುದು.

 

 

19654 ನೊಂದಾಯಿತ ಬಳಕೆದಾರರು
7777 ಸಂಪನ್ಮೂಲಗಳು