ವಿಭಿನ್ನ ಸಮರ್ಥರ ಸಮಾವೇಶನ-ರೇಮಾದೇವಿ. ಟಿ

ಮುನ್ನುಡಿ
ಅಸಮರ್ಥತೆಯನ್ನು ಧರ್ಮದ ಆಯಾಮ ನೀಡಿ ಹಿಂದಿನ ಜನ್ಮದ ಅಥವಾ ಇಂದಿನ ಯಾವುದೋ ಪಾಪಕ್ಕೆ ದೇವರು ಕೊಟ್ಟ ಶಿಕ್ಷೆಯೆಂದು ಭಾವಿಸುವ ಒಂದು ಸಮಾಜದಲ್ಲಿ ಅಸಮರ್ಥರನ್ನು ಮುಖ್ಯವಾಹಿನಿಯಲ್ಲಿ   ಸೇರಿಸಿಕೊಳ್ಳುವುದು ನಿಜಕ್ಕೂ ಒಂದು ದೊಡ್ಡ ಪ್ರಕ್ರಿಯೆಯೇ ಸರಿ. ಸಾಮಾನ್ಯವಾಗಿ ಅಸಮರ್ಥರಿಗೂ ಹಕ್ಕುಗಳಿವೆ ಎಂಬ ದೃಷ್ಟಿಕೋನಕ್ಕೆ ಬದಲಾಗಿ ಸಹಾನುಭೂತಿ ಅಥವಾ ಅನುಕಂಪ ಇವರ ಬಗ್ಗೆ ಹೆಚ್ಚು ಕೆಲಸ ಮಾಡುತ್ತದೆ . ಹೀಗಾಗಿ ಕೇವಲ ಇವರ ಆರೈಕೆ , ಚಿಕಿತ್ಸೆ ಮತ್ತು ಪುನರ್ವಸತಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. (ಪುನರ್ವಸತಿಯೆಂದರೆ ದಾನ ಧರ್ಮದ ಆಧಾರದ ಮೇಲೆ ಅವರ ಮೂಲಭೂತ ಅಗತ್ಯಗಳನ್ನು ಪೂರೈಸುವಂತಹ ಯಾವುದಾದರೂ ಸೇವಾಸಂಸ್ಥೆಗೆ ದಾಖಲಿಸುವುದಕ್ಕಷ್ಟೇ ಸೀಮಿತವಾಗಿದೆ) ಮತ್ತು ಅಸಮರ್ಥತೆಯನ್ನು ವ್ಯಕ್ತಿ ಮತ್ತು ಅವನ ಕುಟುಂಬಕ್ಕೆ ಸೀಮಿತ   ಸಮಸ್ಯೆ ಯಂತೆ ನೋಡಲಾಗುತ್ತಿದೆ.

ನನ್ನಿಂದ ನನ್ನ ಮಗನಿಗಾಗಿರುವ ದುರ್ದೆಸೆಗೆ ಎಂದಿಗೂ ನನ್ನನ್ನು ನಾನು ಕ್ಷಮಿಸಲಾರೆ. ಎಲ್ಲರೂ ಬೇಡವೆಂದರೂ ಗರ್ಭಿಣಿಯಾಗಿದ್ದ ನಾನು ನನ್ನ ಚಿಕ್ಕಪ್ಪನ  ಶವಸಂಸ್ಕಾರಕ್ಕೆ ಏಕೆ ಹೋದೆ? ಅವರೆಲ್ಲರ  ಮಾತು ಕೇಳದೇ ಹೋಗಿದ್ದರಿಂದ ನನ್ನ ಮಗು ಬಳಲುತ್ತಿದೆ. ನಾನು ಅವನನ್ನು ಅಂಗವಿಕಲನಾಗಿಸಿದೆ-ಪದವೀಧರ ತಾಯಿ

ಭಾರತ ಸಂವಿಧಾನದ ೮೬ನೆಯ ತಿದ್ದುಪಡಿಯು ಸಾರ್ವತ್ರಿಕ ಶಿಕ್ಷಣಕ್ಕೆ ಒತ್ತುಕೊಡುವುದರ ಜೊತೆಗೆ ಶಿಕ್ಷಣ ಪಡೆಯುವುದು ಎಲ್ಲಾ ಮಕ್ಕಳ ಮೂಲಭೂತ ಹಕ್ಕು ಎಂದು ಹೇಳಿದೆ. ಆದರೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳೆರಡೂ ಇದರ ಅರ್ಥ, ಪ್ರಸಕ್ತತೆ ಮತ್ತು ಸ್ಪಷ್ಟ ವ್ಯಾಖ್ಯಾನವನ್ನು ಸರಿಯಾಗಿ ಗ್ರಹಿಸಿಲ್ಲ೧.

ಭಾರತದಲ್ಲಿ ವರ್ಗ, ಲಿಂಗ, ಧರ್ಮ, ಬಣ್ಣದ ತಾರತಮ್ಯ ನಿವಾರಿಸುವುದಕ್ಕೆ  ಹೋಲಿಸಿದರೆ      ಅಸಮರ್ಥತೆಗೆ ಸಮಾನ ಹಕ್ಕು ದೊರಕಿಸಲು ಕನಿಷ್ಠ ಆದ್ಯತೆ ನೀಡಲಾಗುತ್ತಿದೆ. ಶೇಕಡ ೫ಕ್ಕಿಂತ ಕಡಿಮೆ ಅಸಮರ್ಥ ಮಕ್ಕಳು ಮಾತ್ರ ಶಾಲೆಗೆ ಸೇರಿದ್ದಾರೆ. (ಯುನೆಸ್ಕೋ,೨೦೦೦) ಮತ್ತು ೨೦೦೪ರ ಸರ್ಕಾರಿ ಅಧ್ಯಯನದ ಪ್ರಕಾರ (ಯುನಿಸೆಫ್, ೨೦೦೬) ಶಾಲಾ ಹಂತದಲ್ಲಿ ಶೇಕಡ ೦.೫೧ರಷ್ಟು ಅಂಗವಿಕಲ ವಿದ್ಯಾರ್ಥಿಗಳು ಮಾತ್ರ ಮುಖ್ಯವಾಹಿನಿಯ ಶೈಕ್ಷಣಿಕ ಸಂಸ್ಥೆಗಳಿಗೆ ಸೇರಿಕೊಂಡಿದ್ದಾರೆ. ಉಳಿದ ದೇಶಗಳಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಲ್ಲ.  

ಅವರ ಜೀವನೋಪಾಯದ ಜೊತೆ ಜೊತೆಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪ್ರಕ್ರಿಯೆಗಳಲ್ಲಿ ಅಸಮರ್ಥ ವ್ಯಕ್ತಿಗಳ ಸಮಾವೇಶನದ ಬಗ್ಗೆ ಹೆಚ್ಚ್ಚು ದತ್ತಾಂಶವೇನೂ ದೊರೆಯುವುದಿಲ್ಲ.

ಈ ಲೇಖನದಲ್ಲಿ ಸಮಾವೇಶನಕ್ಕಾಗಿ ನಾವು ಪರಿಗಣಿಸ ಬೇಕಾದ   ಮುಖ್ಯ ಕ್ಷೇತ್ರಗಳು, ಸಮಾವೇಶನದ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕು  ಮತ್ತು ಅದರಲ್ಲಿ ಎದುರಾಗುವ  ಪ್ರಮುಖ ಸವಾಲುಗಳು ಯಾವುವು ಎಂಬುದರ ಬಗ್ಗೆ  ಚರ್ಚಿಸಲಾಗಿದೆ.

ಸಮಾವೇಶನದತ್ತ
ಅಸಮರ್ಥರ ಸಮಾವೇಶನವೆಂದರೆ ಕುಟುಂಬ, ಸಮುದಾಯ/ಸಮಾಜ, ಶೈಕ್ಷಣಿಕ ಸಂಸ್ಥೆಗಳು, ಕೆಲಸ ಮತ್ತು ಉಳಿದೆಲ್ಲೆಡೆ ಅವರ ಸೇರ್ಪಡೆಯನ್ನು ಅಸಮರ್ಥತೆಯ ಜೊvಗೆ ಅವರ ವೈಯಕ್ತಿಕ ಮತ್ತು ಲಿಂಗಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕೆ  ಕಾರ್ಯತಂತ್ರವನ್ನು ರಚಿಸುವುದೂ ಸೇರುತ್ತದೆ.

ವೈಯಕ್ತಿಕ
ಅಸಮರ್ಥತೆಯೆಂಬ ಕಾರಣವೇ, ಅವರ ಆತ್ಮ ವಿಶ್ವಾಸವನ್ನು  ಕಗ್ಗಿಸುತ್ತದೆ, ತಮ್ಮ ಗೆಳೆಯರೊಂದಿಗೆ ಹೋಲಿಸಿದಾಗ  ಪ್ರಯೋಗಶೀಲತೆಗೆ ಮತ್ತು ಅನ್ವೇಷಣೆಗೆ ಅವಕಾಶವಿಲ್ಲದಂತೆ ಮಾಡುತ್ತದೆ. ತಮ್ಮಸಹಪಾಠಿಗಳು   ಮತ್ತು ಹಿರಿಯರಿಂದಲೂ ಸಹ ಅವರ ಅಂತರ್ಗತ ಸಾಮರ್ಥ್ಯದ ಪ್ರಕಾಶಕ್ಕೆ ಪ್ರೋತ್ಸಾಹ ದೊರಕುವುದಿಲ್ಲ. ಪರಾವಲಂಬನೆ ಮತ್ತು ತಾರತಮ್ಯ  ಅವರಲಿ  ತಾವು ನಿಷ್ಪ್ರಯೋಜಕರು ಎಂಬ ಭಾವನೆ , ಹತಾಶೆ, ಅವಮಾನ ಮುಂತಾದ ಭಾವನೆಗಳು ಮೈಗೂಡಿ ಅವರ ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ.

ನನಗೆ ಉಯ್ಯಾಲೆಯೆಂದರೆ ಬಹಳ ಇಷ್ಟ. ನಾನು ಚಿಕ್ಕವಳಿದ್ದಾಗ ನನ್ನ ಅಮ್ಮ ಹತ್ತಿರವೇ ಇದ್ದ ಪಾರ್ಕ್‌ಗೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದಳು. ಆದರೆ ನಾನು ದೊಡ್ಡವಳಾಗುತ್ತಿದ್ದಂತೆ ಅಮ್ಮ ಮತ್ತು ಉಳಿದ ಹೆಂಗಸರಿಗೆ ನನ್ನನ್ನು ವೀಲ್ ಛೇರ್‌ನಿಂದ ಉಯ್ಯಾಲೆ ತನಕ ಕರೆದುಕೊಂಡು ಹೋಗುವುದು ಕಷ್ಟವಾಗುತ್ತಿತ್ತು. ಆಗ ಕೆಲವು ಹತ್ತಿರದಲ್ಲಿದ್ದ  ಗಂಡಸರ ಸಹಾಯ ಪಡೆಯ ಬೇಕಾಗಿತ್ತು.  ಬರುಬರುತ್ತಾ ನನಗೆ ಕೆಲವೊಂದು ಜನರು ಸಹಾಯಮಾಡುವ ನೆಪದಲ್ಲಿ ಬಂದು  ನನ್ನನ್ನು ಕೆಟ್ಟದಾಗಿ ಮುಟ್ಟುತ್ತಿದ್ದುದು ಅರಿವಿಗೆ ಬಂತು . ಅವರು ನನಗೆ ಸಹಾಯ ಮಾಡುತ್ತಿದ್ದ ಕಾರಣ ಇದು ಗೊತ್ತಿದ್ದರೂ ನನಗೇನೂ ಮಾಡಲು ಆಗುತ್ತಿರಲಿಲ್ಲ. ಆಮೇಲೆ ನಾನು ತುಂಬ ಇಷ್ಟವಿದ್ದರೂ ಸಹ ಉಯ್ಯಾಲೆ ಆಡುವುದನ್ನು ಬಿಟ್ಟುಬಿಟ್ಟೆ- ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ೧೪ ವರ್ಷದ ಹುಡುಗಿ

ಲಿಂಗ ಸಂಬಂಧಿತ
ನಮ್ಮ ಮಾಮೂಲು ಜಗತ್ತಿನಲ್ಲಾಗುವ ಹಲವು ಕೆಟ್ಟ ಅನುಭವಗಳು ಹೆಚ್ಚಾಗಿ ಹೆಣ್ಣುಮಕ್ಕಳು ದುಷ್ಟರನ್ನು ಕಂಡರೆ ದೂರ ಉಳಿಯುವ ವರ್ತನೆಗೆ ಕಾರಣವಾಗುತ್ತದೆ. ಒಬ್ಬ ಅಸಮರ್ಥ ಹುಡುಗಿ  ಅವಳಿಗೆ ಸಹಾಯ ಮಾಡಲು ಬರುವ ಜನರಿಗೆ ಲೈಂಗಿಕ ಶೋಷಣೆ ಮಾಡಲು ಬಲು ಸುಲಭದ ಗುರಿಯಾಗುತ್ತಾಳೆ.

ಕುಟುಂಬಕ್ಕೆ ಸಂಬಂಧಿತ
ಅಸಮರ್ಥ ಮಗುವಿನ ಬಗ್ಗೆ   ಕುಟುಂಬದವರ ಭಾವನೆಗಳು ಹೆಚ್ಚಾಗಿ ತಿರಸ್ಕಾರ ಮತ್ತು ಸ್ವಯಂಕರುಣೆಯಿಂದ ಹಿಡಿದು ಡೋಂಗಿ ವೈದ್ಯರು ಮತ್ತು ಪವಾಡಗಳನ್ನು  ನಂಬುವ ವರೆಗೆ ಇದೆ  , ಹೀಗಾಗಿ ಈ ಮಗುವಿಗೆ ಸಂಬಂಧಿಸಿದ ವಾಸ್ತವ ಸತ್ಯಗಳನ್ನು ಸ್ವೀಕರಿಸಲು ಬಹಳ ಸಮಯ ತೆಗೆದುಕೊಳ್ಳಬಹುದು. ಈ ಕುಟುಂಬಗಳಲ್ಲಿ ಮಗುವಿನ ಅಗತ್ಯಗಳನ್ನು ಪೂರೈಸಲು ಬೇಕಾದ  ಜ್ಞಾನ, ಕೌಶಲ್ಯ ಮತ್ತು ಸಮಯದ ಅಭಾವವಿರುತ್ತದೆ. ಅದರ ಭವಿಷ್ಯದ ಬಗ್ಗೆಯೂ ಯಾವುದೇ ಅಗತ್ಯ ಒಳನೋಟ ಇರುವುದಿಲ್ಲ. ಇದು ಅತಿಯಾದ ರಕ್ಷಣೆ ಮತ್ತು ತಮ್ಮ ಮಗು ಅಸಮರ್ಥ ಮಗುವನ್ನು   ಸ್ವೀಕರಿಸದ ಮನೋಭಾವದಲ್ಲಿ ಕೊನೆಗೊಳ್ಳುತ್ತದೆ. ಈ ಎರಡೂ ಆಲೋಚನೆಗಳು ವಿನಾಶಕಾರಿಯಾಗಿದ್ದು   ಸೂಕ್ತ ರಕ್ಷಣೆ ಮತ್ತು ಬೆಂಬಲದ ಸಾಧ್ಯತೆಗಳನ್ನು ಕುಂಠಿತಗೊಳಿಸುತ್ತವೆ. ಇಂತಹ ಸನ್ನಿವೇಶಗಳು ಕುಟುಂಬ ಸದಸ್ಯರ ಅದರಲ್ಲೂ ಹೆಚ್ಚಾಗಿ ತಾಯಂದಿರ ಮೇಲೆ ಆರ್ಥಿಕ ಸಮಸ್ಯೆಯೊಂದಿಗೆ ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಹೆಚ್ಚುವರಿ ಹೊರೆಯಾಗುತ್ತದೆ.

ಶಿಕ್ಷಣ ಸಂಬಂಧಿತ

ಶಿಕ್ಷಣ ಮತ್ತು ಬಡತನವೆರಡೂ ಪರಸ್ಪರ ಸಂಬಂಧಿಸಿವೆ ಮತ್ತು ಬಡತನಕ್ಕೆ   ಅಸಮರ್ಥತೆಯೇ ಕಾರಣ ಮತ್ತು ಅಸಮರ್ಥತೆ ಬಡತನದ ಪರಿಣಾಮವೂ ಆದಂತೆ ಕಾಣುತ್ತಿದೆ. ಅಸಮರ್ಥರಿಗೆ   ಶಿಕ್ಷಣದ ಅವಕಾಶಗಳು ತೀರ   ಕಡಿಮೆಯಾಗಿದ್ದು  ಅದು ಈ ಸಂಬಂಧವು ಶಾಶ್ವತವಾಗಿ ಮುಂದುವರಿಯಲು  ಪ್ರಮುಖ ಕಾರಣವಾಗಿದೆ ಗುಡ್‌ಲಾಡ್ (೨೦೦೫).

ನಮ್ಮ ಭಾರತದ ಹಲವಾರು ನಗರ ಮತ್ತು ಗ್ರಾಮೀಣ ಶಾಲೆಗಳೆರಡರಲ್ಲೂ ಸಂಪನ್ಮೂಲಗಳ ಕೊರತೆಯಿದೆ- ತರಬೇತಿ ಪಡೆದ ಶಿಕ್ಷಕರ ಕೊರತೆ ಮತ್ತು ಅಂಗವಿಕಲ ಮಕ್ಕಳ ಅಗತ್ಯಗಳಿಗೆ ತಕ್ಕಂತಹ ಮೂಲಸೌಕರ್ಯದ ಕೊರತೆ. ಇವೆರಡೂ ಕಳಪೆ ಗುಣಮಟ್ಟದ ಶಿಕ್ಷಣ ಮತ್ತು/ ಅಥವಾ ಮಕ್ಕಳು ಮಧ್ಯದಲ್ಲಿಯೇ ಶಾಲೆ ಬಿಡುವ   ಹೆಚ್ಚು ಪ್ರಕರಣಗಳಿಗೆ ಕಾರಣವಾಗಿದೆ.

ಸಮರ್ಥ ಮಕ್ಕಳಿಗಾಗಿಯೇ ವಿನ್ಯಾಸಗೊಳಿಸಲಾದ   ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳಿಗೆ ಅಸಮರ್ಥ ಮಕ್ಕಳು ಹೊಂದಿಕೊಳ್ಳುವಂತೆ ಮಾಡುವುದೇ ಅವರ ಶಿಕ್ಷಣದ ಹಿಂದಿನ ಉದ್ದೇಶವಾಗಿದೆ. (ಶರ್ಮ, ೨೦೦೨, ಪುಟ ೪೦೭)

ಶೇಕಡ ೩ರಷ್ಟು ಮೀಸಲಾತಿಯಿದ್ದರೂ ಆರೋಗ್ಯವಂತ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಬೇಕಾದ ಒತ್ತಡವಿರುವುದರಿಂದ, ಉನ್ನತ ಶಿಕ್ಷಣದಲ್ಲಿ ಅಸಮರ್ಥ ಯುವಕರ ದಾಖಲಾತಿಯ ಸಂಖ್ಯೆ ಕಡಿಮೆಯಾಗುತ್ತಲೇ ಬರುತ್ತಿದೆ.  ಅವರ ವಿಶೇಷ ಶಿಕ್ಷಣ ಶಾಲೆಯಲ್ಲಿನ ಪರಿಸರಕ್ಕೆ ಹೋಲಿಸಿದಾಗ ಇಲ್ಲಿನ ಪರಿಸರ ಕೀಳರಿಮೆಯ ಭಾವನೆ ಮತ್ತು ಹೊಂದಾಣಿಕೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿವಿಧ ಕೋರ್ಸುಗಳ
ಅಗತ್ಯತೆಗಳನ್ನು ಪೂರೈಸಲು ಅಗತ್ಯವಿರುವ ದೈಹಿಕ ಮತ್ತು ಮಾನಸಿಕ ಮಿತಿಯ ಜೊತೆಗೆ ಶಾಲೆಯ ದೂರ, ಅಂಗವಿಕಲರಿಗೆ ಸಹಾಯಕವಾಗಿರುವ ಸಾರಿಗೆ ವ್ಯವಸ್ಥೆ ಮತ್ತು ಮೂಲಸೌಕರ್ಯದ ಕೊರತೆಗಳು ಇದರೊಂದಿಗೆ ಸೇರ್ಪಡೆಯಾಗುತ್ತವೆ.

ಸಮುದಾಯ /ಸಮಾಜ ಸಂಬಂಧಿತ
ನ್ಯೂನತೆಯು  ನಿಜಕ್ಕೂ ಅಸಮರ್ಥತೆಯನ್ನು  ಉಂಟು ಮಾಡಬೇಕಾಗಿಲ್ಲ ಎನ್ನುವುದು ಅಸಮರ್ಥತೆ ಕುರಿತ ಸಾಮಾಜಿಕ ಮಾದರಿ (ಆಲಿವರ್, ೧೯೯೦). ವ್ಯಕ್ತಿಯೊಬ್ಬನ ಕೆಲವೊಂದು ನ್ಯೂನತೆ ಆತನ ದಿನನಿತ್ಯ ಜೀವನದಲ್ಲಿ ಖಂಡಿತ ಪ್ರಭಾವ ಬಿರುತ್ತವೆ. ಉದಾಹರಣೆಗೆ, ದೃಷ್ಟಿಹೀನತೆ, ರೋಗ ಉಲ್ಬಣತೆ, ಕಲಿಯುವಿಕೆ ಸಮಸ್ಯೆ ಅಥವಾ ಮಾನಸಿಕ ಆರೋಗ್ಯ ತೊಂದರೆ, ಸಮಾಜದಲ್ಲಿ ವ್ಯಾವಹಾರಿಕವಾಗಿ ಮತ್ತು ಆರ್ಥಿಕವಾಗಿ ತೊಂದರೆಯನ್ನುಂಟು ಮಾಡುತ್ತವೆ. ಆದರೆ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ದೈಹಿಕ ಪರಿಸರದ ಅಂಶಗಳು ನ್ಯೂನತೆ ಕಾರಣದಿಂದ ಸಮಾಜ ವ್ಯಕ್ತಿಯನ್ನು ಎಷ್ಟು ದೂರ ಇರಿಸುತ್ತದೆ ಎನ್ನುವುದನ್ನು ನಿರ್ಧರಿಸುತ್ತವೆ.೨

ಮನೋ-  ಸಾಮಾಜಿಕ ಸಂಬಂಧಿತ
ತಾವು ಅಸಮರ್ಥರು ಎಂಬ  ಮುಖ್ಯ ಕಾರಣದಿಂದ ಅಸಮರ್ಥ ಮಕ್ಕಳಲ್ಲಿ  ಆತ್ಮವಿಶ್ವಾಸ ಸಾಮಾನ್ಯವಾಗಿ ಕಡಿಮೆಯಿರುತ್ತದೆ. ತಮ್ಮ ಗೆಳೆಯರಿಗೆ ಸಮ ಸಮನಾಗಿ ಕಾರ್ಯ ನಿರ್ವಹಿಸಲು ಅಸಾಮರ್ಥ್ಯ, ಸಮಾಜದಿಂದ ದೂರವಿರಿಸಲ್ಪಟ್ಟದ್ದು , ಸಮಾಜ ಮತ್ತು ತಮ್ಮ ಕುಟುಂಬದವರು ನಡೆಸಿಕೊಳ್ಳುವ ರೀತಿಯಲ್ಲಿ  ವ್ಯತ್ಯಾಸ, ಒಂಟಿತನ, ಪ್ರೋತ್ಸಾಹದ ಕೊರತೆ, ಪ್ರೇರೇಪಣೆ, ಸ್ಫೂರ್ತಿ, ಮಹತ್ವಾಕಾಂಕ್ಷೆಯ ಕೊರತೆ ಮುಂತಾದವು ಇಂತಹ ಪರಿಸ್ಥಿತಿಗೆ ಕಾರಣವಾಗಿವೆ. ಅಸಮರ್ಥತೆ  ಅವರನ್ನು ತಮ್ಮ ಗೆಳೆಯರಿಗೆ ಸಿಗುವಂತಹ ಅವಕಾಶಗಳನ್ನು ಪಡೆಯದಂತೆ  ನಿರ್ಭಂಧಿಸುತ್ತದೆ.

ಜೀವನೋಪಾಯ ಸಂಬಂಧಿತ
ಅಸಮರ್ಥರನ್ನು  ಕುರಿತು ದಯೆ ಮತ್ತು ಕರುಣೆಯನ್ನು  ತೋರಿಸುವ  ಕಾರಣದಿಂದ ಈ ಅಂಶವನ್ನು ನಾವು ಸಾಕಷ್ಟು ನಿರ್ಲಕ್ಷಿಸಿದ್ದೇವೆ. ತಮ್ಮ ಸಾಮರ್ಥ್ಯ ಮತ್ತು ಕುಶಲತೆಯ ಬಗ್ಗೆ ಸರಿಯಾದ ಅರಿವು ಇಲ್ಲದ ಕಾರಣ ಒಂದೆಡೆಯಾದರೆ,  ಇನ್ನೊಂದೆಡೆ ಸಮಾಜವೂ ದಯೆ, ಕರುಣೆಯಿಂದ ಅವರು ತಾವಾಗಿಯೇ ಕೆಲಸ ಮಾಡಿಕೊಳ್ಳಲು ಬಿಡದೆ  ಅಥವಾ ಹಾಗೆ ಮಾಡಿಕೊಳ್ಳಲು ಸಹಾಯ ಮಾಡದೆ  ’ ತಾನೆ ಅವರಿಗೋಸ್ಕರ’ ಸಹಾಯ ಮಾಡಲು ಇಚ್ಛಿಸುತ್ತದೆ.

ಈ ನಿಟ್ಟಿನಲ್ಲಿ ಆಗಬೇಕಾದ ಸಂಶೋಧನೆಯ ಮತ್ತು ಕೆಲಸ ಗಳೆರಡೂ ಆಗದೇ ಇರುವುದು ಅಸಮರ್ಥರ ಸಮಸ್ಯೆಗಳನ್ನು ದ್ವಿಗುಣಗೊಳಿಸುತ್ತವೆ. ಮಾಲೀಕರಿಗೆ ಪ್ರೋತ್ಸಾಹ ಧನವನ್ನು ಕೊಡುವುದಾಗಿ ಹೇಳಿದರೂ ಸಹ ಅವರು ಅಂಗವಿಕಲರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ. ಸರ್ವೈವಲ್ ಆಫ್ ದ ಫಿಟ್ಟೆಸ್ಟ್  ಮಾರ್ಗವನ್ನು ಅನುಸರಿಸುವ ಕಾರ್ಮಿಕರ ಮಾರುಕಟ್ಟೆಯಲ್ಲಿ ಅನ್‌ಫಿಟ್(ನಿರುಪಯೋಗಿ) ಗಳನ್ನು ಎಲ್ಲರೂ ಕಡೆಗಣಿಸುತ್ತಾರೆ. ಮಾಲೀಕರರು ಸಮಾವೇಶಿ/ಸೇರ್ಪಡೆಯನ್ನು ಒಪ್ಪಿಕೊಂಡರೂ, ಅದನ್ನು ಅನುಷ್ಠಾನಗೊಳಿಸುವಾಗ ಸಾಕಷ್ಟು ನೆಪಗಳನ್ನು ಹುಡುಕುತ್ತಾರೆ. ಅಂಗವಿಕಲರನ್ನು ಅಗ್ಗದ ಕಾರ್ಮಿಕರನ್ನಾಗಿ ಬಳಸಿಕೊಳ್ಳುವ ಪ್ರವೃತ್ತಿಯೂ ಇದೆ.

ಮಾಲೀಕರ ನಿರೀಕ್ಷೆ ಮತ್ತು ಅಸಮರ್ಥ ಕಾರ್ಮಿಕರ ನಿಪುಣತೆ ಮತ್ತು ಸಾಮರ್ಥ್ಯದ ನಡುವೆ ಇರುವ ಅಂತರವನ್ನು   ಅರ್ಥಮಾಡಿಕೊಳ್ಳಲು ಮತ್ತು ತುಂಬಲು ಯಾರೂ ಹೆಚ್ಚು ಗಮನ ಹರಿಸುತ್ತಿಲ್ಲ.

ಸಮಾವೇಶಿಯನ್ನಾಗಿಸಲು ಹೇಗೆ ಸಾಧ್ಯ
ಅಭಿವೃದ್ಧಿಶೀಲ ದೇಶಗಳಲ್ಲಿ ಅಸಮರ್ಥರ ಕಲ್ಯಾಣಕ್ಕೆ ಉಪಕ್ರಮಗಳನ್ನು ಅಸಮರ್ಥರ ಕಲ್ಯಾಣಕ್ಕೆ ದೀರ್ಘಾವಧಿ ನೆರವು ನೀಡುವುದಕ್ಕೆ  ಮೊದಲ ಆದ್ಯತೆನೀಡಬೇಕೆಂಬ ಪರಿಕಲ್ಪನೆಯನ್ನು ಆಧರಿಸಿ ರೂಪಿಸಲಾಘುತ್ತದೆ (ಲ್ಯಾಂಗ್ ಮತ್ತು ಉಪಾಹ್, ೨೦೦೮). ಅಸಮರ್ಥರನ್ನು ಸದಾ  ಯಾರಾದರೊಬ್ಬರು ನೋಡಿಕೊಳ್ಳುತ್ತಲೇ ಇರಬೇಕು ಮತ್ತು ಅವರು ಯಾವುದೇ ಉತ್ಪಾದಕ ಕೆಲಸ ಮಾಡಲಾರರು ಎಂಬ ಆಲೋಚನೆಯೇ ಇದಕ್ಕೆ ಕಾರಣವಾಗಿದೆ. ಅಸಮರ್ಥತೆಯನ್ನು ಸಮಾಜದ ಒಂದು ಅವಿಭಾಜ್ಯ ಮತ್ತು ಸಹಜ ಭಾಗ ಎಂದು ತಿಳಿದಿರುವ ಒಂದು ಸಾಮಾಜಿಕ ಪದ್ಧತಿ ದಾಂಗುಡಿಯಿಟ್ಟು ಬೆಳೆಯ ಬೇಕು , ಇನ್ನೂ ಬಹಳ ಜನರನ್ನು ತಲುಪಬೇಕು. ಜನಗಳ ಮನೋಭಾವ, ನಂಬಿಕೆ ಮತ್ತು ಆಚರಣೆಗಳು ಸಾಮಾಜಿಕ ಬದಲಾವಣೆಯಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆಯೋ ಅಸಮರ್ಥರ ವಿಷಯದಲ್ಲೂ ಹಾಗೆಯೇ ಪ್ರಮುಖ ಪಾತ್ರ ವಹಿಸ ಬೇಕು.. ಆದ್ದರಿಂದ ಜನರ ಮನೋಭಾವ, ನಂಬಿಕೆ, ಆಚರಣೆ ಮತ್ತು ಪೂರ್ವಗ್ರಹಗಳನ್ನು ಅರಿತುಕೊಂಡು, ಸೂಕ್ತವಾಗಿ ಅದನ್ನು ಬಗೆಹರಿಸುವುದೇ ಸಮಾವೇಶನ ಪ್ರಕ್ರಿಯೆಯ ಕಡೆಗೆ ಮೊದಲ ಹೆಜ್ಜೆ ಆಗಬೇಕು .

ಅಸಮರ್ಥರು  ತಾವಾಗಿಯೇ ಸಮಾಜದಿಂದ ದೂರ ಉಳಿಯುವ ಮತ್ತು ಅವರ ಲಿಂಗ ಸಂಬಂಧಿ ಸಮಸ್ಯೆಗಳತ್ತ ವಿಶೇಷ ಗಮನ ಹರಿಸಬೇಕಾಗಿದೆ. ಅವರ ಕುಂದಿದ ಆತ್ಮ ವಿಶ್ವಾಸದ ಸಮಸ್ಯೆಯನ್ನು   ಬಗೆಹರಿಸುವ ಚಟುವಟಿಕೆಗಳು  , ಅವರ ಹಕ್ಕುಗಳನ್ನು ಕುರಿತ ಅರಿವು ಮತ್ತು ಉಳಿz  ಆರೋಗ್ಯವಂತ ಜನರಲ್ಲಿ ಅವರ ಕರ್ತವ್ಯ ಪ್ರಜ್ಞೆ  ಮೂಡಿಸುವುದು  ಈಗ ತುರ್ತು ಅಗತ್ಯವಾಗಿದೆ.

 ಅಸಮರ್ಥರ ಪೋಷಕರು ಮತ್ತು ಕುಟುಂಬದವರು ಸಮಾವೇಶನ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಬಹುದು ಆದರೆ ಅವರಲ್ಲಿ  ಅದಕ್ಕಾಗಿ ಸಮಯ, ನಿಪುಣತೆ ಮತ್ತು ಜ್ಞಾನದ ಕೊರತೆಯಿದೆ. ಕೆಲವು ಎನ್‌ಜಿಒಗಳು ತಮ್ಮ ಮಕ್ಕಳನ್ನು ಸಮಾವೇಶನ ಗೊಳಿಸುವತ್ತ ಪೋಷಕರ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಆರಂಭಿಸಿದ್ದರೂ, ಈ ಎನ್‌ಜಿಓಗಳು ಹಣಕಾಸಿಗಾಗಿ ಬೇರೆ ಸಂಸ್ಥೆಗಳನ್ನು ಆಶ್ರಯಿಸುವುದರಿಂದ ಈ ಕಾರ್ಯಕ್ರಮವನ್ನು ಸುಸ್ಥಿರವಾಗಿ ನಡೆಸಿಕೊಂಡು ಬರುತ್ತಾರೆ ಎಂದು ಖಾತರಿಯಾಗಿ ಹೇಳಲಾಗುವುದಿಲ್ಲ. ಸ್ಥಳೀಯ ಆಡಳಿತ ಸಂಸ್ಥೆಗಳು ತಮ್ಮ ವಾಡಿಕೆಯ ಕಾರ್ಯಕ್ರಮ ಪಟ್ಟಿಯಲ್ಲಿ  ಇದನ್ನು ಸೇರಿಸಿಕೊಳ್ಳುವಂತೆ  ಮಾಡಬೇಕು ಎಂದು ಇದಕ್ಕೆ ಪರಿಹಾರೋಪಾಯ ಹೇಳಬಹುದು .

ಅಸಮರ್ಥತಾ ಕಾನೂನಿನ   ಮತ್ತು ೧೨ನೆಯ ಪಂಚವಾರ್ಷಿಕ ಯೋಜನೆಯಲ್ಲಿ ಪಟ್ಟಿಮಾಡಲಾದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ,ಸೂಕ್ತ ಉದ್ಯೋಗಗಳ ಆಯ್ಕೆ, ಅಂಗವಿಕಲರ ನೈಪುಣ್ಯತೆ ಮತ್ತು ಮಾರುಕಟ್ಟೆ ನಿರೀಕ್ಷೆಗಳ ನಡುವಿನ ಅಂತರಗಳನ್ನು ಕಡಿಮೆ ಮಾಡುವುದು, ಉದ್ಯೋಗ ನೀಡಬಲ್ಲ ಮಾಲೀಕರನ್ನು ಸಂವೇದನಾಶೀಲರನ್ನಾಗಿ ಮಾಡುವುದು  ಗಮನ ಹರಿಸಬೇಕಾಗಿರುವ ಇತರ ಕ್ಷೇತ್ರಗಳಾಗಿವೆ.

ಸವಾಲುಗಳು
ಪ್ರವೇಶಾವಕಾಶ ಲಭ್ಯತೆ, ಮೂಲಭೂತ ಸೌಕರ್ಯಲಭ್ಯತೆ , ಅಸಮರ್ಥರನ್ನು ತಮ್ಮಲ್ಲಿ ಒಬ್ಬರನ್ನಾಗಿ ಸ್ವೀಕರಿಸುವ ಮನೋಭಾವದ ಕೊರತೆ ಸಮಾವೇಶನಕ್ಕೆ   ದೊಡ್ಡ ನಿರ್ಬಂಧಗಳು ಇದರ ಜೊತೆಗೆ  ಸರಿಯಾದ ಸಂಶೋಧನೆಗಳ ಕೊರತೆಯೂ ಇದನ್ನು  ಇನ್ನೂ ಹೆಚ್ಚಿಸುತ್ತದೆ. ಅಸಮರ್ಥರ ಏಳ್ಗೆಗಾಗಿ  ಕಾರ್ಯ ನಿರ್ವಹಿಸುತ್ತಿರುವ ಸಂಘ, ಸಂಸ್ಥೆಗಳಲ್ಲೂ  ಅವರಿಗಾಗಿ ಒಂದು ಪರಿಪೂರ್ಣ ವಿಧಾನದ ಕೊರತೆಯಿದೆ. ಇವರ ಕೆಲಸವೆಲ್ಲಾ  ತಮ್ಮ ಫಲಾನುಭವಿಗಳನ್ನು ಅರೆ ಕುಶಲ ಕೆಲಸಗಳಾದ ಮೊಬೈಲ್ ಅಥವಾ ಆಟೋಮೊಬೈಲ್ ಮೆಕ್ಯಾನಿಕ್, ಹೋಟೆಲ್ ಸಪ್ಲೈಯರ್, ಟೆಲಿಫೋನ್ ಅಥವಾ ಲಿಫ್ಟ್ ಸಂಚಾಲಕರಾಗಿ ತಯಾರು ಮಾಡುವುದಕ್ಕಷ್ಟೇ ಸೀಮಿತವಾಗಿರುತ್ತದೆ .  ಶಾಲೆಗಳಲ್ಲಿ ಮತ್ತು ಕಾರ್ಯಕ್ಷೇತ್ರದಲ್ಲಿ  ಸುಪ್ರೇರಿತ ತರಬೇತಿ ಹೊಂದಿದ  ಮತ್ತು ಕುಶಲ   ಉಪಾದ್ಯಾಯರು  ,  ಮತ್ತು ಕೆಲಸದ ಸ್ಥಳಗಳಲ್ಲಿ ಸುಪ್ರೇರಿತ ತರಬೇತಿ ಹೊಂದಿದ  ಮತ್ತು ಕುಶಲ  ಉದ್ಯೋಗ ದಾತರು ಮತ್ತು ಕೆಲಸಗಾರರು ಇಲ್ಲದೇ ಇರುವುದು ಮತ್ತೊಂದು ಸವಾಲಾಗಿದೆ.

ರೇಮಾದೇವಿಯವರು ಸಮಾಜ ಸೇವೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಪ್ರಸ್ತುತ ಅಜೀಂ ಪ್ರೇಂಜೀ ವಿಶ್ವವಿದ್ಯಾನಿಲಯದ ಎಮ್.ಎ (ಅಭಿವೃದ್ಧಿ)ಯಲ್ಲಿ ಕ್ಷೇತ್ರ ಇಂಟರ್ನ್ಯಿಷಿಪ್ ಮತ್ತು ಕಾರ್ಯ ಸಂಯೋಜನೆಯಲ್ಲಿ ತೊಡಗಿದ್ದಾರೆ. ಇದಕ್ಕೂ ಮುನ್ನ ಅವರು ಕೆಲವು ಕಾಲ ಅಸಮರ್ಥರ ಮತ್ತು ವಿಶೇಷ ಮಕ್ಕಳಿಗಾಗಿ  ಇರುವ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಜೊತೆಗೆ, ಹಲವಾರು ರಾಜ್ಯಗಳ ಸಾರ್ವಜನಿಕ ಸಂಸ್ಥೆಗಳಲ್ಲಿಯೂ ಕೆಲಸ ಮಾಡಿದ್ದರು. ಅವರನ್ನು ನೀವು remadevi.t@azimpremjifoundation.orgನಲ್ಲಿ ಸಂಪರ್ಕಿಸಬಹುದು.
 

19204 ನೊಂದಾಯಿತ ಬಳಕೆದಾರರು
7451 ಸಂಪನ್ಮೂಲಗಳು