ವಿಜ್ಞಾನ-ಜೀವನ : ಒಂದು ಜಿಜ್ಞಾಸೆ

ವಿಜ್ಞಾನ-ಜೀವನ : ಒಂದು ಜಿಜ್ಞಾಸೆ 
 
 
ವಿಜ್ಞಾನದ ಬಗ್ಗೆ ಆಸಕ್ತ ಸ್ನೇಹಿತರ ಗುಂಪೊಂದು ಚರ್ಚೆಯಲ್ಲಿ ತೊಡಗಿತ್ತು. ವಿಜ್ಞಾನ-ಜೀವನ ಹೇಗೆ ತಳಕು ಹಾಕಿಕೊಂಡಿದೆ ಎಂದು ಚರ್ಚೆ ಪ್ರಾರಂಭವಾಗಿ, ಒಬ್ಬ ಹುಟ್ಟಿನ ಬಗೆಗೆ ಹೇಳುತ್ತಾ -ಪ್ರತಿಯೊಂದು ಜೀವಿಯೂ ಜೀವಕೋಶದಿಂದ ಉಗಮವಾಗಿ, ಬೆಳೆಯುತ್ತಾ ತಮ್ಮ ಸುತ್ತಮುತ್ತ ಇರುವ ಜೀವ-ನಿರ್ಜೀವ ವಸ್ತುಗಳೊಡನೆ ಸಂವಹಿಸುತ್ತಾ ಸಾಗುತ್ತದೆ, ಪ್ರತಿ ಜೀವಿಯೂ ಆಹಾರ ಸರಪಳಿಯ ಕೊಂಡಿಯಲ್ಲಿ ಒಂದಕ್ಕೊಂದು ಸಂಬಂಧ ಹೊಂದಿವೆ. ಆದರೆ ಮಾನವ ಈ ವಿಷಯದ ಆಳವಾದ ಅಧ್ಯಯನ ಕೈಗೊಂಡು ವೈಜ್ಞಾನಿಕ ಮಾಹಿತಿ ಹೊಂದಿದ್ದರೂ ಸಹ ಮೂರ್ಖ ಭಸ್ಮಾಸುರನ ಸಂತತಿಯಂತೆ ವರ್ತಿಸುತ್ತಿದ್ದಾನೆ. ಈ ಭೂರಮೆಯ ಮೇಲಿನ ಸಂಪನ್ಮೂಲವೆಲ್ಲವನ್ನು ತನಗೆ ತೋಚಿದಂತೆ, ಆಸೆಬುರಕನಂತೆ ಎಲ್ಲವನ್ನು ನಾಶಮಾಡುತ್ತಾ ಸಾಗಿದ್ದಾನೆ. ಇದರಿಂದ ಭಸ್ಮಾಸುರನಂತೆ ತನ್ನ ತಲೆಯ ಮೇಲೆ ತಾನೇ ಕೈಯಿಟ್ಟುಕೊಂಡು ಸುಟ್ಟು ನಿರ್ನಾಮವಾಗುವತ್ತ ಸಾಗಿದ್ದಾನೆ. ಆದ್ದರಿಂದ ಈಗಲೇ ಎಚ್ಚೆತ್ತುಕೊಂಡು ನಡೆಯುವುದು ಒಳಿತು ಎಂದು ವಿಜ್ಞಾನ-ಜೀವನದ ಬಗ್ಗೆ ಮಂಡಿಸಿದನು. ಮತ್ತೊಬ್ಬ- ವಿಜ್ಞಾನದ ಆವಿಷ್ಕಾರಗಳಿಂದ   ನಾವು ಬೇರೆ, ಬೇರೆ ಗ್ರಹಗಳತ್ತ ಸಾಗಬಹುದು, ಅಲ್ಲಿ ವಸಾಹತುಗಳನ್ನು ನಿರ್ಮಿಸಬಹುದು ಹಾಗೂ ಅಲ್ಲಿನ ಸಂಪನ್ಮೂಲಗಳನ್ನು ಬಳಸಬಹುದು. ನಮ್ಮನ್ನು ತಡೆಯುವವರು ಯಾರು? ಎಂಬ ಪ್ರಶ್ನೆಯನ್ನು ಮುಂದಿಟ್ಟನು. ಇನ್ನೊಬ್ಬಳು ಇದನ್ನು ವಿರೋಧಿಸಿ, ಭೂಗ್ರಹವನ್ನೇ ಸರಿಯಾಗಿ ತಿಳಿಯದೆ ಆಸೆ ಬುರುಕರಂತೆ ನಡೆಯುವುದು ಸರಿಯಲ್ಲ. 
ನಮ್ಮ ಪ್ರಕೃತಿಯಲ್ಲಾಗುತ್ತಿರುವ ಬದಲಾವಣೆಗೆ ನಮ್ಮಲ್ಲಿ ಸರಿ ಉತ್ತರವಿಲ್ಲ!!! ಇನ್ನು ಅನ್ಯ ಗ್ರಹದಲ್ಲಿ ವಾಸಿಸಲು ಯೋಚಿಸುವಾಗ ಮೊದಲು ಭೂರಮೆಯನ್ನು ಗೌರವಿಸುವ, ಎಲ್ಲಾ ಜೀವಿಗಳು ಬದುಕುವ ಅವಕಾಶ ಮಾಡುವುದರ ಬಗ್ಗೆ ಮುಂದಡಿ ಇಡಬೇಕಾಗಿದೆ. ನಾವು ಈಗಾಗಲೇ ಸುನಾಮಿ, ಅಕಾಲಿಕ ಮಳೆ, ಪ್ರವಾಹ, ಬರ, ವಿಷಗಾಳಿ, ವಿಷಯುಕ್ತ ನೀರು, ಆಹಾರ ಇವುಗಳಿಂದ ಪರಿತಪಿಸುತ್ತಿದ್ದೇವೆ. ಈ ವಿಷಯಗಳ ಬಗ್ಗೆ ವೈಜ್ಞಾನಿಕವಾಗಿ ಬೆಳಕು ಚೆಲ್ಲಿ ಎಲ್ಲರೂ ಪ್ರಕೃತಿಗೆ ಸ್ಪಂದಿಸಬೇಕಿದೆ ಅಲ್ಲವೆ? ಎಂದು ಪ್ರಶ್ನಿಸಿದರು. ಮತ್ತೊಬ್ಬ ಅಯ್ಯೋ ಮಹರಾಯಿತಿ!!! ಇದು ಜೆಟ್, ಬುಲೆಟ್ ಟ್ರೈನ್‌ಯುಗ. ಕೆಲವೇ ಘಂಟೆಗಳಲ್ಲಿ ಈ ಭೂಮಿಯ ಮೇಲಿನ ಯಾವ ಪ್ರದೇಶವನ್ನಾದರೂ ತಲುಪಬಹುದು, ಯಾರನ್ನಾದರೂ ಸಂಪರ್ಕಿಸಬಹುದು, ಏನು ಬೇಕಾದರೂ, ಎಲ್ಲಿ ಬೇಕಾದರೂ ತರಬಹುದು. ನೀರನ್ನು ಶೋಧಿಸಿ ಕುಡಿಯಬಹುದು, ನಾವೇ ಆಮ್ಲಜನಕವನ್ನು ತಯಾರಿಸಬಹುದು!! ನಮಗೇಕೆ ಭಯ? ಈ ಜಗವೇ ನಮ್ಮದು!! ಈ ಸಂಪನ್ನ್ಮೂಲ ನಮಗೆ ಸೇರಿದ್ದು ಈ ಎಲ್ಲವನ್ನೂ ಅನುಭವಿಸಲು ನಾವು ಮಾನವರಾಗಿ ಜನಿಸಿ ಬಂದಿರುವುದು. ಏನು ಹೇಳುತ್ತೀರ ನೀವೆಲ್ಲರು?! ಎಂದು ಜಂಭದಿಂದ ಕೇಳಿದನು. ಆಗ ಅಲ್ಲಿಯವರೆಗೆ ತಾಳ್ಮೆಯಿಂದ ಕೇಳುತ್ತ ಕುಳಿತ್ತಿದ್ದವನು, ನಿಲ್ಲಿಸಯ್ಯ ನಿನ್ನ ಮೊಂಡುವಾದ... ನೀನು ಹೇಗೆ ಜೀವಿಸಬೇಕೆಂದಿದ್ದೀಯಾ? ಕೆಮ್ಮುತ್ತಾ, ಏಡ್ಸ್ ರೋಗದಿಂದ ಬಳಲುತ್ತಾ, ಕ್ಯಾನ್ಸರ್ ತಗುಲಿಸಿಕೊಡು ಅಸ್ಥಿಪಂಜರದಂತೆ ಬದುಕುತ್ತಾ, ಮಧುಮೇಹ, ಹುಚ್ಚು ಹಸು ರೋಗ, ಅನೇಕ ಹೊಸ, ಹೊಸ ರೋಗಗಳಿಂದ ಕ್ಷಣ, ಕ್ಷಣ ಬಳಲುತ್ತಾ ಸಾಗುವುದೇ ಬದುಕೆ??? ಒಂದು ದೇಶ ಇನ್ನೊಂದು ದೇಶದ ಭಯದಿಂದ ರಕ್ಷಣೆಗಾಗಿ ಅಣು ಬಾಂಬ್ ತಯಾರಿಸಿ ಅದನ್ನು ಕಾಪಿಡುವುದರಲ್ಲೇ ಸಂಪನ್ಮೂಲ ವ್ಯಯಿಸುವುದೇ ಹಲವರ ಜೀವನವಾಗಿದೆ. ದೇಶದ ಅಭಿವೃದ್ಧಿಗಿಂತ ಸೇನೆಗೇ ಮತ್ತು ಸೇನಾಕಾರ್ಯಗಳಿಗೇ ಬೇಕಾದ ತಂತ್ರಜ್ಞಾನ ಅಭಿವೃದ್ಧಿ ಪಡಿಸುವುದರಲ್ಲೇ ಹಲವರ ಜೀವನ ಸಾಗಿದೆ, ’ವಸುಧೈವ ಕುಟುಂಬಕಂ’ ಎಂದು ಯೋಚಿಸಬೇಕಾದರೆ ಮಾನವರ ದುರಾಸೆ ನಿಲ್ಲಬೇಕು, ಎಲ್ಲರಿಗೂ ಹಿತ ನೀಡುವ ವಿಜ್ಞಾನ ತಂತ್ರಜ್ಞಾನಗಳ ಆವಿ?ರಗಳತ್ತ ಸಾಗಬೇಕು, ಮನು? ಮೊದಲು ಮಾನವನಾಗಬೇಕಾದರೆ, ತ್ಯಾಗ, ಸಹನೆ, ಶಾಂತಿ, ಇತರರ ಅಂದರೆ ಪ್ರಾಣಿ ಪಕ್ಷಿ ಹಾಗೂ ಭೂಮಿಯ ಮೇಲಿನ ಸಕಲ ಜೀವಿಗಳ ಬಗ್ಗೆ ಪ್ರೀತಿ ತೋರುವುದನ್ನು ಬೆಳಸಿಕೊಳ್ಳಬೇಕು. ಹಾಗಾದಾಗ ಮಾತ್ರ ಭೂಮಿ ಸಸ್ಯ ಶ್ಯಾಮಲೆಯಾಗಿ ಹಸಿರ ಅರಣ್ಯದೊಡಗೂಡಿ, ಸಮೃದ್ಧ ಸಂಪನ್ಮೂಲವನ್ನು ಮುಂದಿನ ಪೀಳಿಗೆಗೆ ಕಾಯ್ದಿಡಲು, ಹಿತಮಿತವಾಗಿ ಬಳಸುವುದನ್ನು ರೂಢಿಸಕೊಳ್ಳಬೇಕು. ಆದರೆ, ಇಂದು ಮಾನವನ ದುರಾಸೆಯ ಪ್ರವೃತ್ತಿ, ನಾವೇ ಎಲ್ಲವನ್ನೂ ಅನುಭವಿಸಬೇಕೆಂಬ ವಾಂಛೆಯಿಂದ ಜನಜೀವನ ನಿಕೃಷ್ಟತೆಯೆಡೆಗೆ ಸಾಗುತ್ತಿದೆ. ಎಲ್ಲಿ ನೋಡಿದರೂ ವಿಜ್ಞಾನ ಕಲಿತು, ಅಭಯಂತರರಾದವರು ಅತ್ಯಾಸೆಯಿಂದ ಮಾಡಿದ ಕಳಪೆ ಕಟ್ಟಡಗಳು, ಕೊಳಚೆ ತುಂಬಿದ ವಾಹನ ದಟ್ಟಣೆಯ ಉಸಿರುಗಟ್ಟಿಸುವ ಹಾಳಾದ ರಸ್ತೆ, ಸೇತುವೆಗಳು, ಚರಂಡಿ ಅವ್ಯವಸ್ಥೆ, ಕಸದ ರಾಶಿ, ಯೋಜನೆಗಳಿಗಾಗಿ ಪರಿಸರ, ಸಮೃದ್ಧ ಅರಣ್ಯನಾಶ, ವೈದ್ಯನಾದವನು ನಿಸ್ಸಹಾಯಕ ರೋಗಿಗಳನ್ನು ದೋಚುವುದನ್ನು, ಮೂತ್ರಪಿಂಡ ಹಾಗೂ ಇತರ ಅಂಗಾಂಗಗಳ ಕಾಳದಂಧೆಯನ್ನು, ವಿಜ್ಞಾನಿ ತಂತ್ರಜ್ಞರು, ತಿನ್ನುವ ಆಹಾರವನ್ನು ವಿಷಯುಕ್ತಗೊಳಿಸುತ್ತಿರುವ ತಂತ್ರಜ್ಞಾನಗಳನ್ನು, ಭೂಮಿಯನ್ನೇ ಬಗೆಯಲು ಹೊರಟ ರಾಕ್ಷಸಗಾತ್ರ ವಾಹನಗಳನ್ನು, ವಿಷ ಸೇರಿಸುವ ಕಾರ್ಖಾನೆಗಳು, ದೇಶ, ಜನಾಂಗಗಳನ್ನೇ ನಾಶಮಾಡುವ ವಿಷಾನಿಲ ಮತ್ತು ಅಣುಬಾಂಬ್, ಕ್ಷಿಪಣಿ ತಂತ್ರಜ್ಞಾನದಲ್ಲಿ ತೊಡಗಿದ್ದಾರೆ. ಆದ್ದರಿಂದ ವಿಜ್ಞಾನವನ್ನು ಸಕಲ ಜೀವರಾಶಿಯ ಒಳತಿಗಾಗಿ ಹೆಜ್ಜೆ ಇಡುವತ್ತ, ಬೆಳಕಿನತ್ತ ಸಾಗಿಸಬೇಕಿದೆ. ವಿಜ್ಞಾನ ತಿಳಿಸುವುದೇ ಎಲ್ಲಾ ಜೀವಿಗಳೊಡಗೂಡಿ ಬದುಕುವುದನ್ನು, ಪರಿಸರ ಸ್ನೇಹಿಯಾಗಿ ಬದುಕುವ ರೀತಿಯನ್ನು, ಸರಳ ಸಮೃದ್ಧಿ ಜೀವನವನ್ನು ಹಾಗೂ ನೆಮ್ಮದಿಯಾಗಿ ಸಹಬಾಳ್ವೆ ನಡೆಸುವುದನ್ನು. ವಿಜ್ಞಾನ ಬೋಧಿಸುವುದು ನೀನೂ ಬದುಕು, ಇತರ ಜೀವಿಗಳನ್ನು ಬದುಕಲು ಬಿಡು. ಆಗ ಮಾತ್ರ ಮಾನವ ಜನಾಂಗ ಈ ಭೂರಮೆಯಲ್ಲಿ ಉಳಿಯಲು ಸಾಧ್ಯ!! ಎಂದು ಸಾರಿ ಹೇಳಿದನು. ಚರ್ಚೆಯಲ್ಲಿದ್ದವರೆಲ್ಲರೂ ತಲೆಯಾಡಿಸಿ ನಾವು ಎಲ್ಲರೂ ಈ ನಿಟ್ಟಿನಲ್ಲಿ ಯೋಚಿಸಬೇಕಿದೆ ಮತ್ತು ಹೆಜ್ಜೆ ಹಾಕಬೇಕಿದೆ ಎಂದರು.
- ಕೆ. ಕೃ಼ಷ್ಣಪ್ಪ   , ಮಂಡ್ಯ  
19198 ನೊಂದಾಯಿತ ಬಳಕೆದಾರರು
7451 ಸಂಪನ್ಮೂಲಗಳು