ಮಹಾ ದಾರ್ಶನಿಕನಿಗೆ ನುಡಿ ನಮನ

 

 

ಶಿಕ್ಷಕರ ದಿನಾಚರಣೆ ವಿಶೇಷ ಲೇಖನ

 

ಬ್ರಿಟಿಷ್ ಆಳ್ವಿಕೆ ವಿರುದ್ಧ ನಡೆದ ಸ್ವಾತಂತ್ರ್ಯ ಸಂಗ್ರಾಮವು ಅನೇಕ ಮಹಾನ್ ನೇತಾರರು, ಉದ್ದಾಮ ವಿಚಾರವಂತರು ಹಾಗು ಶ್ರೇಷ್ಠ ಸಮಾಜ ಸುಧಾರಕರಿಗೆ ಜನ್ಮ ನೀಡಿತು.  ಭಾರತದ ಶಿಕ್ಷಣ ವ್ಯವಸ್ಥೆಯ ರಚನೆಯಲ್ಲಿ ಮತ್ತು ಧೋರಣೆಯಲ್ಲಿ ಬದಲಾವಣೆಯನ್ನು ತರಬೇಕೆಂಬುದು ಅವರೆಲ್ಲರ ಇಚ್ಛೆ ಆಗಿತ್ತು.  ಉದಾಹರಣೆಗೆ ಗಾಂಧೀಜಿಯವರು ಬ್ರಿಟಿಷ್ ಮಾದರಿಯ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣ ನಿರಾಕರಿಸಿದ್ದರು.  ಸ್ವಾವಲಂಬನೆ ಮತ್ತು ಸಹಕಾರ ಮನೋಭಾವದಂತಹ ಮೌಲ್ಯಗಳು ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡ ಭಾರತೀಯತೆ ಹಾಗೂ ಭಾರತ ಸಂಸ್ಕೃತಿಯ ಜಾಗೃತಿಯನ್ನು ಆಧರಿಸಿದ ಒಂದು ಪರ್ಯಾಯ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಅವರು ಮನಸ್ಸು ಮಾಡಿದ್ದರು.  ಅರವಿಂದೋ ಅವರು ಭಾರತದಲ್ಲಿ ಪುನರುಜ್ಜೀವನದ ಬಗ್ಗೆ ಬರೆದು ಕೇವಲ ವಿಚಾರವಂತಿಕೆಗೇ ಮೀಸಲಾಗಿರದ ಒಂದು ಶಿಕ್ಷಣ ವ್ಯವಸ್ಥೆ ನೆಲೆ ಊರಬೇಕೆಂದು ಬಯಸಿದರು.  ಠಾಗೂರ್ ಅವರು (ಅವರು ಪೂರ್ಣವಾಗಿ ರಾಷ್ಟ್ರೀಯವಾದಿಗಳಾಗಿರದಿದ್ದರೂ ) ಸಂಗೀತಕಾವ್ಯ, ನೃತ್ಯ, ನಾಟಕ ಮತ್ತು ಕಲೆಯ ಬಗ್ಗೆ ತಮಗಿದ್ದ ವೈಯಕ್ತಿಕ ಒಲವಿಗೆ ಪಡಿಮಿಡಿದು ಭಾರತೀಯ ಮೂಲದ ಮತ್ತು ಭಾರತೀಯವಾಗಿ ಬೆಳೆದು ಬಂದ ಸೌಂದರ್ಯ ಪ್ರಜ್ಞೆ ಶಿಕ್ಷಣದಲ್ಲಿ ಇರಬೇಕೆಂಬುದು ಒತ್ತಿ ಹೇಳಿದರು.

   ಚಿರಂತನ ಭಾರತೀಯ ತತ್ತ್ವ ಶಾಸ್ತ್ರವನ್ನು ಅಧ್ಯಯನ ಮಾಡಿ ಆ ಬಗ್ಗೆ ವಿಚಾರ ನಡೆಸಿದ್ದ ಡಾ. ಸರ್ವೆಪಳ್ಳಿ ರಾಧಾಕೃಷ್ಣನ್ ಅವರು ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆ ಹೇಗಿರಬೇಕೆಂಬುದರ ಬಗ್ಗೆ ಚಿಂತನೆ-ಆನ್ವೇಷಣೆ ನಡೆಸಿದರು.  ಶಿಕ್ಷಕರ ದಿನವಾದ ಸೆಪ್ಟೆಂಬರ್ 5 ರಂದು ಪ್ರಕಟವಾಗುತ್ತಿರುವ  ಈ ಲೇಖನವು ಶಿಕ್ಷಣವನ್ನು ಕುರಿತ ಅವರ ದರ್ಶನ ಹೇಗೆ ವಿಕಾಸವಾಗುತ್ತಾ ಬಂತು ಎಂಬುದನ್ನು ನಿರೂಪಿಸಲಿದೆ.  ಇಲ್ಲಿ ಸಮಾಜ ಶಾಸ್ತ್ರೀಯ ದೃಷ್ಟಿಯಿಂದ  ಅವರ ವಿಚಾರ ಧಾರೆಯನ್ನು ಪ್ರಶ್ನಿಸುವುದು ನಮ್ಮ ಉದ್ದೇಶವಲ್ಲ.  ಬದಲಾಗಿ  ಈ ಲೇಖನವು ಅವರ ಜೀವನ ವಿವರದ ಜೊತೆ ಜೊತೆ ಯಲ್ಲಿ  ಆಧುನಿಕ ಭಾರತೀಯ ಶಿಕ್ಷಣದ ಪ್ರಾರಂಭಾವಸ್ಥೆಯಲ್ಲಿ ಅವರು ನೀಡಿದ ಕೊಡುಗೆಗಳನ್ನು ಪರಿಶೀಲಿಸಿ ನೋಡುತ್ತದೆ.

     ರಾಧಾಕೃಷ್ಣನ್ ಅವರು ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಗಡಿಭಾಗದ ಒಂದು ಪಟ್ಟಣವಾದ ತಿರುತ್ತಣಿಯಲ್ಲಿ ಹುಟ್ಟಿ ಬೆಳೆದರು (ಅವರ ಪೂರ್ವಿಕರ ಊರಾದ ಸರ್ವೆಪಳ್ಳಿಯು ಆಂಧ್ರಪ್ರದೇಶದ ತಿರುತ್ತಣಿಯ ಉತ್ತರಕ್ಕೆ 200 ಮೈಲಿ ದೂರದಲ್ಲಿರುವ ಒಂದು ಪಟ್ಟಣ) ಈ ಭೂಭಾಗ ಪ್ರದೇಶದಲ್ಲಿ ಅನೇಕ ದೇಗುಲಗಳ ಊರುಗಳೇ ಜಾಸ್ತಿ. ಅವುಗಳಲ್ಲಿ ತಿರುತ್ತಣಿ ಪಟ್ಟಣವೂ ಒಂದು.  ಶತಶತಮಾನ ಗಳಿಂದ ದೇವಾನುದೇವತೆಗಳು ಮತ್ತು ದೇವಿಯರ ಪುರಾಣ ಪುಣ್ಯಕಥೆಗಳಿಗೂ  ಈ ದೇವಾಲಯ ನಗರಗಳಿಗೂ ಎಡೆಬಿಡದ ನಂಟು ಮತ್ತು ಇವು ಪ್ರಾಚೀನ ತಮಿಳುನಾಡಿನ ಭೂವಿಸ್ತಾರದೊಂದಿಗೆ ಗಾಢವಾದ ಸಂಬಂಧ ಹೊಂದಿವೆ.  ಈ ದೇವಾಲಯಗಳೊಂದಿಗೆ ಬೆಳೆದು ಬಂದ ಸ್ಥಳ ಪುರಾಣಗಳಲ್ಲಿ, ಕಡಲು, ನದಿ, ಗಿರಿ, ಜಲಪಾತ, ಮರಗಳು, ಹೂಗಳು, ಹಕ್ಕಿಗಳು ಮತ್ತು ಪ್ರಾಣಿಗಳು  ಅವಿನಾಭಾವವಾಗಿ ಸೇರಿಕೊಂಡಿರುತ್ತವೆ.  ಈ ನೈಸರ್ಗಿಕ  ಪಂಚಭೂತಗಳಲ್ಲಿ ಒಂದಲ್ಲ ಒಂದರ ಜೊತೆ ದೇವತೆಗಳು ದೇವಿಯರು ಸಂಬಂಧ ಹೊಂದಿರುತ್ತಾರೆ ಎಂಬ ಗಾಢವಾದ ನಂಬಿಕೆ ಅಲ್ಲಿನ ಜನಗಳದ್ದು.  ಇಂಥ ಒಂದು ಪವಿತ್ರ ಮತ್ತು ಆಸ್ತಿಕ ವಾತಾವರಣದಲ್ಲಿ ಸರ್ವಪಳ್ಳಿ ರಾಧಾಕೃಷ್ಣನ್ ಅವರು  ತಮ್ಮ ಬಾಲ್ಯದ ಆರಂಭದ ವರ್ಷಗಳನ್ನು ಕಳೆದರು.  ಬಹುಶ: ತಾವು ಕಳೆದ ಆರಂಭದ ದಿನಗಳ ದಟ್ಟವಾದ ಧಾರ್ಮಿಕ ವಾತಾವರಣದ ಕಾರಣದಿಂದಲೇ  ಏನೋ ಶ್ರೀ ರಾಧಾಕೃಷ್ಣನ್ ಅವರು ಮುಂದೊಂದು ದಿನ ಹೀಗೆ ಬರೆದರು-  "ನನಗೆ ತಿಳಿವಳಿಕೆ ಬಂದಾಗಿನಿಂದ ಎಲ್ಲಾ ಲೋಕ ವಿದ್ಯಮಾನಗಳ ಜಂಜಡದ ನಡುವೆಯೂ ಇಂದ್ರಿಯ ಗ್ರಾಹ್ಯವಲ್ಲದ ಆದರೆ ಮನಸ್ಸಿಗೆ ಗೋಚರವಾದ ಒಂದು ಅದೃಶ್ಯ ಜಗತ್ತು ಇದೆ ಎಂಬ ಬಗ್ಗೆ ನನಗೆ ದೃಢವಾದ ನಂಬಿಕೆ ಇತ್ತು.  ನಾನು ಜೀವನದಲ್ಲಿ ಎಷ್ಟೇ ಗುರುತರವಾದ ಕಷ್ಟ ಕೋಟಳೆಗಳನ್ನು ಅನುಭವಿಸಿದರೂ ಈ ನಂಬಿಕೆ ನನ್ನಲ್ಲಿ ಎಡೆಬಿಡದೆ ಅಚಲವಾಗಿಯೆ ಉಳಿದಿದೆ"

 ತಿರುತ್ತಣಿ ಮತ್ತು ಪಕ್ಕದ ಊರಾದ ತಿರುಪತಿಯಲ್ಲಿ ರಾಧಾಕೃಷ್ಣನ್ ಅವರು ವಿದ್ಯಾಭ್ಯಾಸ ನಡೆಸಿದ ಎಲ್ಲಾ ಶಾಲೆಗಳು ಕ್ರೈಸ್ತ ಮಿಶಿನರಿಗಳು ನಡೆಸುತ್ತಿದ್ದ  ಶಾಲೆಗಳಾಗಿದ್ದವು .  ಕಾಲೇಜು ಶಿಕ್ಷಣವು ಇದೇ ರೀತಿ ರಿಫಾರ್ಮ್ಡ್ (ಡಚ್) ಚರ್ಚ್ ಆಫ್ ಅಮೇರಿಕಾ ಸಂಸ್ಥೆಯವರು ನಡೆಸುತ್ತಿದ್ದ ವೊರ್ಹೀನ್ ಕಾಲೇಜಿನಲ್ಲಿ ನಡೆಯಿತು.  ಇಲ್ಲಿ ಅವರಿಗೆ ಕ್ರೈಸ್ತ ಧಾರ್ಮಿಕ ಪರಿಸರದಲ್ಲಿ ವ್ಯಕ್ತವಾಗಿದ್ದ ಪಾಶ್ಚಾತ್ಯ ತತ್ವ ಶಾಸ್ತ್ರದ ಪರಿಚಯ ವಾಯಿತು.  ಈ ವಯಸ್ಸಿನಲ್ಲಿ ಪಾಶ್ಚಾತ್ಯ ತತ್ವ ಶಾಸ್ತ್ರದ ತರ್ಕಬದ್ಧ ವಿಧಾನದ ಪರಿಚಯವು, ರಾಧಾಕೃಷ್ಣನ್ ಅವರು ತನ್ನದೆ ಧರ್ಮವಾದ ಹಿಂದೂಧರ್ಮದ ಅಧ್ಯಯನವನ್ನು ಯಾವ ವಿಧಾನದಲ್ಲಿ ಮಾಡಬಹುದೆಂಬ ವಿಚಾರಧಾರೆಯನ್ನು ಮನದಲ್ಲಿ ರೂಪಿಸಿಕೊಳ್ಳ್ಳಲು ಅನುವುಮಾಡಿಕೊಟ್ಟಿತ್ತು.  (ರಾಧಾಕೃಷ್ಣನ್ ಅವರು ಹಿಂದೂಧರ್ಮ ಶಾಸ್ತ್ರವನ್ನು ಶಾಸ್ತ್ರೀಯವಾಗಿ ಓದಿದವರಲ್ಲ.  ಆದರೆ ತತ್ವ ಶಾಸ್ತ್ರದ ಎರಡು ವಿಭಿನ್ನ ಮಾರ್ಗಗಳ ಪರಿಚಯವುಳ್ಳ ಒಂದು ವಿಶಿಷ್ಟ ಪರಿಸ್ಥಿತಿಯಿಂದ "ಪಾಶ್ಚಾತ್ಯ ಶಿಕ್ಷಣದ"  ಮೂಲಕ ಸಜ್ಜಾಗಿ ತನ್ನದೇ ಧರ್ಮದ ವಿಶಿಷ್ಟ ವ್ಯಾಖ್ಯಾನಕಾರರಾದರು.)

     ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗೆ ಓದುತ್ತಿರುವಾಗ ಅದರ ಒಂದು ಭಾಗವಾಗಿ ರಾಧಾಕೃಷ್ಣನ್ ಸಂಸ್ಕೃತ ಭಾಷೆಯನ್ನು ಕಲಿತಿದ್ದರು.  ಹೀಗಾಗಿ ಸಂಸ್ಕೃತ ಭಾಷಾಜ್ಞಾನ ಹಾಗೂ ಹಿಂದೂಧರ್ಮದ ವಿಶಿಷ್ಟ ಲಕ್ಷಣಗಳ ಉತ್ತಮ ಜ್ಞಾನವನ್ನು ಪಡೆದು ಇವರು ತಮ್ಮ ಸಂಸ್ಕೃತಿ ಹಾಗೂ ಧರ್ಮವನ್ನು ಪರಕೀಯರಾದ ಪಾಶ್ಚಾತ್ಯ ಶ್ರೋತೃಗಳಿಗೆ ವ್ಯಾಖ್ಯಾನಿಸತೊಡಗಿದರು.  ಅವರ ಕೃತಿಗಳು  ಬೋರ್ಜನ್  ಹೇಳುವಂತಹ  "ಭ್ರಮಾ ನಿಕಟತೆ"ಯ (illusory closeness) ( ಅಂದರೆ ಲೇಖಕನು ತನ್ನ ಪರಂಪರೆ ಹಾಗೂ ಭಾಷೆಯ ಬಗ್ಗೆ ತನಗೆ ನಿಜವಾಗಿ ಇರುವ ಸಾಮಿಪ್ಯಕ್ಕಿಂತಲೂ ಜಾಸ್ತಿ ಸಾಮಿಪ್ಯ ಇದೆ ಎಂದು ಭಾವಿಸುವುದು) ಲೋಪದಿಂದ ಬಳಲಬೇಕಾಗಿರಲಿಲ್ಲ.  ಇದೇ ರೀತಿ ವಿದೇಶಿ ಭಾಷೆಯ ಭಾಷಾಂತರಕಾರರು ಸಾಮಾನ್ಯವಾಗಿ ಒಳಗಾಗುವ "ಐಹಿಕ ದೂರದ" "temporal distance" ಬಾಧೆಯೂ ಈ ಕೃತಿಗಳಿಗಿಲ್ಲ.  ತಾವು ಯಾವ ಪರಂಪರೆ ಹಾಗೂ ಭಾಷೆಯ ಬಗ್ಗೆ  ಬರೆಯುತ್ತಿದ್ದರೋ ಅದರ ನಿಕಟ ಜ್ಞಾನವೂ ಅವರಿಗಿತ್ತು.  ಅಲ್ಲದೆ ಹಿಂದೂಧರ್ಮದ  ಜೀವನ ಪರಿಸರದ ಬಹಳ ಹತ್ತಿರದ ಅರಿವು ಅವರಿಗಿತ್ತು.  ಹೀಗಾಗಿ ಅವರ ಕೃತಿಗಳು ಉತ್ಕೃಷ್ಟ ಕೃತಿಗಳಾಗಿದ್ದವು.  ಇನ್ನೊಂದು  ಅಂಶವೆಂದರೆ ಗ್ರೀಕ್ ಅಥವಾ ಲ್ಯಾಟಿನ್ ನಂತಹ ಇತರ ಪ್ರಾಚೀನ ಭಾಷೆಗಳಿಗೆ ಹೋಲಿಸಿದರೆ ಸಂಸ್ಕೃತ ಭಾಷೆ ಸಂಪೂರ್ಣವಾಗಿ ಲಿಖಿತ ಹಾಗೂ ಬಾಯಿಮಾತಿನ ಬಳಕೆಯಿಂದ ದೂರವಾಗಿರಲಿಲ್ಲ ಮತ್ತು ಅನೇಕ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಗಳಿಗೆ ಸುಲಭ ಲಭ್ಯವಾಗಿತ್ತು.

     ಭಗವದ್ಗೀತೆ, ಉಪನಿಷತ್ ಗಳ ಇಂಗ್ಲೀಷ್ ಅನುವಾದಕರಾಗಿದ್ದ ಕಾಲದಲ್ಲಿ ಅವರ ಜೀವನದಲ್ಲಿ ನಡೆದ ಒಂದು ಗಮನಾರ್ಹ ಘಟನೆ ಎಂದರೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಪ್ಟಾನ್ ಉಪನ್ಯಾಸಗಳನ್ನು ನೀಡಲು ಅವರಿಗೆ ಬಂದ ಒಂದು ಆಹ್ವಾನ.  ಈ ಉಪನ್ಯಾಸಗಳೇ ಮುಂದೆ ದಿ ಹಿಂದೂ ವ್ಯು ಆಫ್ ಲೈಫ್ ಎಂದು ಪ್ರಕಟವಾದವು. ಇವರು  ಹಿಬ್ಬರ್ಟ್ ಉಪನ್ಯಾಸಗಳನ್ನೂ ನೀಡಿದ್ದಾರೆ. ಮುಂದೆ ಇದು "ದಿ ಐಡಿಯಲಿಸ್ಟ್ ವ್ಯೂ ಆಫ್ ಲೈಫ್" ಎಂದು ಪ್ರಕಟವಾಗಿದೆ. ಇದನ್ನು ಅವರ ಅತ್ಯಂತ ಪ್ರಬುದ್ಧ ಕೃತಿ ಎಂದು ಪರಿಗಣಿಸುತ್ತಾರೆ  ಇವರಿಗೆ ವಿದೇಶವೊಂದರಿಂದ ದೊರೆತ ಬಲು ದೊಡ್ಡ ಪ್ರಶಸ್ತಿ ಎಂದರೆ 1931 ರಲ್ಲಿ ಬ್ರಿಟನ್ ದೊರೆ ಐದನೇ ಜಾರ್ಜ್  ಪ್ರಧಾನ ಮಾಡಿದ ನೈಟ್ ಪ್ರಶಸ್ತಿ.    ಮುಂದೆ ಅವರ ಲೇಖನಿಯಿಂದ ಸರಸ್ವತಿಯ ಪ್ರವಾಹವೇ ಹರಿಯಿತು.   ಧರ್ಮ, ಸಮಾಜ, ಶಿಕ್ಷಣ ಮತ್ತು ತತ್ವಶಾಸ್ತ್ರದ ಬಗ್ಗೆ ವಿಪುಲ ಸಾಹಿತ್ಯ ರಚಿಸಿದರು.  ಬರವಣಿಗೆ ಮತ್ತು ಭಾಷಾಂತರದ ಬಗ್ಗೆ ಅವರಿಗಿದ್ದ ಅಮಿತ ಪ್ರೀತಿಯೇ ಅವರ ವೈವಿಧ್ಯಪೂರ್ಣ ಹಾಗೂ ಚೈತನ್ಯಶೀಲ ಜೀವನ ಪಥಕ್ಕೆ ಚಾಲಕ ಶಕ್ತಿಯಾಯಿತು.  ಡಾ.ರಾಧಾಕೃಷ್ಣನ್ ರವರು 1921 ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಮನಃಶಾಸ್ತ್ರ ಮತ್ತು ನೈತಿಕ ತತ್ವಶಾಸ್ತ್ರಗಳಿಗೆ ಸಂಬಂಧಿಸಿದ ಐದನೆಯ ಜಾರ್ಜ್ ಪೀಠಕ್ಕೆ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅದು ದೇಶದಲ್ಲಿಯೇ ಬಹು ದೊಡ್ಡ ತತ್ವಶಾಸ್ತ್ರದ ಪೀಠವಾಗಿತ್ತು.

 ಭಾರತದ ರಾಷ್ಟ್ರೀಯ ಜೀವನದಲ್ಲಿ ಇವರು ಅಲಂಕರಿಸಿದ ಸ್ಥಾನಗಳು ಅನೇಕ.  ಅವುಗಳಲ್ಲಿ ಪ್ರಮುಖವಾದವೆಂದರೆ  ಭಾರತದ ವಿಶ್ವವಿದ್ಯಾಲಯ ಆಯೋಗದ ಅಧ್ಯಕ್ಷ ಸ್ಥಾನ (ಇದೇ ಆಯೋಗವು ಧರ್ಮದ ಶಿಕ್ಷಣವು ದೇಶದಲ್ಲಿ ಪಂಥಾಭಿಮಾನಕ್ಕೆ ಕಾರಣವಾಗುತ್ತದೆ ಎಂದು ಅದಕ್ಕೆ ಸ್ಥಾನ ನೀಡಲು ನಿರಾಕರಿಸಿತು.)  ಭಾರತದ ಉಪ ರಾಷ್ಟ್ರಪತಿ ಸ್ಥಾನ, ಮುಂದೆ 1962 ರಲ್ಲಿ ಭಾರತದ ರಾಷ್ಟ್ರಪತಿಯ ಸ್ಥಾನ.

    ಇದಕ್ಕೂ ಹಿಂದೆ ಭಾಷಾಂತರಕಾರರಾಗಿದ್ದ ಕಾಲದಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣವನ್ನು ಕುರಿತು ಬಲು ಗಂಭೀರವಾಗಿ ಚಿಂತನೆ ನಡೆಸಿದ್ದರು (ಈ ಅವಧಿಯಲ್ಲೇ ರಾಧಾಕೃಷ್ಣನ್ ಅವರು "ಇಂಡಿಯನ್ ಫಿಲಾಸಫಿ" ಎಂಬ ಗ್ರಂಥದ ಎರಡು ಸಂಪುಟಗಳನ್ನು ರಚಿಸಿದರು.  ಭಾರತೀಯ ತತ್ವಜ್ಞಾನವನ್ನು ಕುರಿತು ಇದಕ್ಕಿಂತ ಉತ್ತಮವಾದ ಪರಿಚಯಾತ್ಮಕ ಕೃತಿ ಇಲ್ಲ).   ಸಹಜವಾಗಿಯೇ ರಾಧಾಕೃಷ್ಣನ್ ಅವರು ಶಿಕ್ಷಣದ ಉದ್ದೇಶವನ್ನು ಸಾಂಪ್ರದಾಯಿಕ ಪರಿಭಾಷೆಯಲ್ಲಿಯೇ ಹೇಳಿದ್ದಾರೆ.  ವ್ಯಕ್ತಿಯ "ಆತ್ಮ ಜ್ಞಾನ" ಎಂಬ ಪದವನ್ನು ಬೇರೆ ಬೇರೆ ತತ್ವಜ್ಞಾನಿಗಳು ತಮ್ಮ ತಮ್ಮ ಕಲ್ಪನೆ ಹಾಗೂ ತಿಳಿವಳಿಕೆಗೆ ಅನುಸಾರ ವ್ಯಾಖ್ಯಾನಿಸುತ್ತಾರೆ.  ರಾಧಾಕೃಷ್ಣನ್ ಈ ಪದವನ್ನು ಉಪನಿಷತ್ ಮತ್ತು ಗೀತೆಗಳಲ್ಲಿ ತಾವು ಅಧ್ಯಯನ ಮಾಡಿ ಕಂಡುಕೊಂಡಿದ್ದ ಅರ್ಥದಲ್ಲಿ ಬಳಸುತ್ತಾರೆ.  ಇದೇ ರೀತಿ ಸತ್ಯ ಮತ್ತು ಸಹಾನುಭೂತಿ ( ಧಮ್ಮಪದ ಗ್ರಂಥದಿಂದ) ಎಂಬ ಪದಗಳ ಅರ್ಥವೂ ಇಂಥ ಶ್ರೇಷ್ಠ ಗ್ರಂಥಗಳ ಅಧ್ಯಯನದಿಂದಲೇ ಬಂದಂತಹುದು.   ಸ್ವಂತ ಹಿತಾಸಕ್ತಿಯನ್ನೂ ಮೀರಿದ ಸತ್ಯದ ಆನ್ವೇಷಣೆ, ದುರ್ಬಲರ ಬಗ್ಗೆ ಸಹಾನುಭೂತಿ- ಈ ಸದ್ಗುಣಗಳನ್ನು ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕೆಂದು ಇವರು ಹೇಳುತ್ತಾರೆ.  ಇಂಥ ವೈಚಾರಿಕ ಪರಿಭಾಷೆ ನೀಡುವುದಷ್ಟೇ ಅಲ್ಲದೆ ರಾಧಾಕೃಷ್ಣನ್ ಅವರು ಶಿಕಕ್ಷರು ಮತ್ತು ವಿದ್ಯಾರ್ಥಿಗಳಿಗೆ ಬಹಳ ಸ್ಪಷ್ಟವಾದ ಮಾರ್ಗದರ್ಶನ ನೀಡುತ್ತಾರೆ. "ವಿದ್ಯಾರ್ಥಿಯಾದವರು  ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಅಧ್ಯಯನ ಮಾಡಬೇಕು.  ಬಹಳ ಕಷ್ಟಪಟ್ಟು ಕಲಿಯಬೇಕು.  ಜ್ಞಾನ ಮತ್ತು ಕೌಶಲ ಎಂಬುದು ಮನುಷ್ಯನಾದವನು ವೈಯುಕ್ತಿಕ ಸಂಪತ್ತಾಗಿ ಗಳಿಸಬಹುದು ಆದರೆ ಅದನ್ನು ಆತ ಸಮಾಜಕ್ಕೆ ಒಂದು ಸೇವೆಯಾಗಿ ವಾಪಸು ನೀಡಬೇಕು.  ವಿದ್ಯಾರ್ಥಿಯಾದವನು ವಿನಯಶೀಲನೂ, ಧೈರ್ಯವಂತನೂ ಮತ್ತು ಸಹಕಾರ ಮನೋಭಾವ ಉಳ್ಳವನೂ ಆಗಿರಬೇಕು."

     ರಾಧಾಕೃಷ್ಣನ್ ಅವರು ಇದರಲ್ಲಿ ಶಿಕ್ಷಕನ ಪಾತ್ರಕ್ಕೆ ಬಹಳ ಮಹತ್ವ ನೀಡುತ್ತಾರೆ.  ಉತ್ತಮ ಶಿಕ್ಷಕನಾದವನು ತನ್ನ  ಬೋಧನಾ ವಿಷಯವನ್ನು ಕೂಲಂಕಷವಾಗಿ ತಿಳಿದು ಕೊಂಡಿರಬೇಕಲ್ಲದೆ ವಿದ್ಯಾರ್ಥಿಗೆ ಸ್ಪೂರ್ತಿಯಸೆಲೆಯಾಗಿ ಕಾರ್ಯನಿರ್ವಹಿಸಲು ಕಂಕಣಬದ್ಧನಾಗಿರಬೇಕು.  ಎಲ್ಲಕ್ಕೂ ಮಿಗಿಲಾಗಿ ಆತ ಕೀರ್ತಿಗಾಗಿಯಾಗಲೀ, ಅಧಿಕಾರಕ್ಕಾಗಿ ಆಗಲೀ ಕಾರ್ಯ ಪ್ರವೃತ್ತನಾಗಬಾರದು.  ಉತ್ತಮ ಗುರುವಾದವನು ತನ್ನನ್ನು ತಾನು ತಿದ್ದಿಕೊಳ್ಳಲು ಸದಾ ಸಿದ್ಧನಿರಬೇಕು.  ತನ್ನ ಸಲಹೆಗಾರರು ಮತ್ತು ಸಹೋದ್ಯೋಗಿಗಳ ಜೊತೆ  ವಸ್ತುನಿಷ್ಠ  ಸಂಬಂಧ ವನ್ನು ಹೊಂದಿರಬೇಕು.

 "ಜ್ಞಾನ ಸಂಪಾದಿಸಿದ ವ್ಯಕ್ತಿಯು ತನಗೆ ಎಷ್ಟೊಂದು ವಿಷಯ ಗೊತ್ತಿದೆ ಎಂದು ಬೀಗುತ್ತಾನೆ ಆದರೆ ಬುದ್ಧಿವಂತನಾದ ವ್ಯಕ್ತಿ ತನಗೆ ತಿಳಿಯಬೇಕಾದದ್ದು ಇನ್ನೂ ಎಷ್ಟೊಂದಿದೆ ಎಂದು ನಮ್ರತೆಯನ್ನು ಮೆರೆಯುತ್ತಾನೆ." ಇದು ರಾಧಾಕೃಷ್ಣನ್ ಅವರ ಸೂಕ್ತಿ.

     ಈ ತರಹದ ಪರಿಭಾಷೆಗಳನ್ನು ನೀಡುವಾಗ ರಾಧಾಕೃಷ್ಣನ್ ಅವರು ವಿಶ್ವವಿದ್ಯಾನಿಲಯದಲ್ಲಿದ್ದಾಗ ತಾವು ಗಮನಿಸಿದ ಅಂಶಗಳನ್ನು ಆಧಾರವಾಗಿ ಇಟ್ಟುಕೊಂಡಿರಬಹುದು.  ಸಮಾಜವೆಂಬುದು  ಹೇಗಿರಬೇಕು ಮತ್ತು ಜನತೆಯನ್ನು ಹೇಗೆ ರೂಪಿಸಬಹುದು ಎಂಬ ಸ್ಥಾಪಿತ ಆದರ್ಶಗಳನ್ನು ಆಧರಿಸಿ ವಿದ್ಯಾಕೇಂದ್ರಗಳನ್ನು ನಿರ್ಮಿಸಲಾಗಿರುತ್ತದೆ.  ರಾಧಾಕೃಷ್ಣನ್ ಅವರ ಪಾಲಿಗೆ  ವಿಶ್ವವಿದ್ಯಾಲಯ  ಎಂಬುದು ಕೇವಲ ವಿದ್ವತ್ತು ಪದವಿಗಳನ್ನು ನೀಡುವಂತಹ ಅಥವಾ ವಿದ್ಯೆಯನ್ನು ಕಲಿಸುವ ಕೇಂದ್ರ  ಮಾತ್ರವಾಗಿರಲಿಲ್ಲ. ಅದಕ್ಕೂ ಮಿಗಿಲಾಗಿ ವ್ಯಕ್ತಿಯಲ್ಲಿ ನೀತಿ ಪ್ರಜ್ಞೆ ಮತ್ತು ಸಂವೇದನಾಶೀಲತೆಗಳನ್ನು ಬೆಳಸುವ ಮತ್ತು ಅವನ್ನು ಮೈಗೂಡಿಸುವ ಸ್ಥಾನವಾಗಿತ್ತು.  ವಿಶ್ವವಿದ್ಯಾನಿಲಯವನ್ನು ಕುರಿತು ಅವರು "ಅದು ಕಲಿಯುವ ಮತ್ತು ವಿದ್ವತ್ತುಗಳಿಸುವ ಸ್ಥಾನವಾಗಿರುವುದರ ಜೊತೆಗೆ ಒಂದು ರಾಷ್ಟ್ರೀಯ ಐಕಮತ್ಯ ಮತ್ತು ಕೋಮುಸೌಹಾರ್ದ ಪ್ರಜ್ಞೆಯನ್ನು ಮೈಗೂಡಿಸುವ ಸ್ಥಾನವೂ ಆಗಿರತಕ್ಕದ್ದು" ಎಂದು ಅದರ ಕರ್ತವ್ಯವನ್ನು ವಿಷದಪಡಿಸುತ್ತಾರೆ. ಶಿಕ್ಷಕನಾದವನ ಆಲೋಚನಾ ರೀತಿಯು ವಿವಿಧ ದಿಕ್ಕುಗಳಿಗೆ ಹರಡಿ ಹೋದರೆ ಅವನ ಎಲ್ಲ ಯೋಚನೆಗಳ ಹಿಂದಿನ ಜೀವನಾಡಿಯಾದ ಪ್ರಮುಖ ವಿಚಾರಧಾರೆಯನ್ನು ಸುಲಭವಾಗಿ ಗುರುತಿಸುವುದು ಸಾಧ್ಯವಾಗುವುದಿಲ್ಲ.  ಶಿಕ್ಷಣವನ್ನು ಕುರಿತು ರಾಷ್ಟ್ರೀಯ ಗುರಿಗಳನ್ನೂ ಮೀರಿದ ಮತ್ತು ತಮ್ಮ ಸಾಹಿತ್ಯಕ, ತತ್ವಜ್ಞಾನದ ಮತ್ತು ಶೈಕ್ಷಣಿಕ ಕೊಡುಗೆಯ ಹಿಂದಿನ ಜೀವ ಸೆಲೆಯಾದ ಅವರ ಉನ್ನತ ಪ್ರಜ್ಞೆ ಯನ್ನು  Religion and Society  (ಧರ್ಮ ಮತ್ತು ಸಮಾಜ) ಎಂಬ ಇವರ ಗ್ರಂಥದಲ್ಲಿ ಕಾಣಬಹುದು. ಅದರಲ್ಲಿ ಸತ್ಯಾನ್ವೇಷಣೆ ಬಗ್ಗೆ ಈ ಡಾ|| ರಾಧಾಕೃಷ್ಣನ್ ಈ ರೀತಿ ಹೇಳಿದ್ದಾರೆ:

 " ಹೃದಯಪರಿವರ್ತನೆ, ಮೌಲ್ಯ ಸಂವರ್ಧನೆ ಮತ್ತು ಅನಂತ ಶಕ್ತಿಗೆ ನಮ್ಮ ಚೈತನ್ಯದ ಸಮರ್ಪಣೆ ಮಾಡಬೇಕಾದದ್ದು ಇಂದು ಅಗತ್ಯ. ನಾವೆಲ್ಲರೂ ಕನಸುಕಾಣುತ್ತಿರುವುದು ಒಂದೇ ಆಗಸದ ಅಡಿಯಲ್ಲಿ. ನಾವೆಲ್ಲರೂ ನೋಡುತ್ತಿರುವುದು ಅವೇ ತಾರೆಗಳನ್ನು.  ಆದ್ದರಿಂದ ಒಂದೇ ಸತ್ಯಾನ್ವೇಷಣೆಯನ್ನು ಬೇರೆ ಬೇರೆ ದಾರಿಗಳ ಮೂಲಕ ನಡೆಸಿದರೆ ತಪ್ಪೇನೂ ಇಲ್ಲ.  ಬದುಕಿನ ಒಗಟು ಎಷ್ಟು ಸಂಕೀರ್ಣವೆಂದರೆ ಒಂದೇ ಉತ್ತರದೆಡೆಗೆ ಕರೆದೊಯ್ಯುವ ಕೇವಲ ಒಂದೇ ಮಾರ್ಗವು ಇದರಲ್ಲಿ ಇರಲು ಖಂಡಿತಾ ಸಾಧ್ಯವಿಲ್ಲ"

 

ಲೇಖನವು ಟೀಚರ್ ಪ್ಲಸ್ ನ ಸೆಪ್ಟಂಬರ್ 2007 ರ ಸಂಪುಟ 1 ಸಂಚಿಕೆ 4ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗಿದೆ ಅದರ ಕನ್ನಡಾನುವಾದವನ್ನು ಇಲ್ಲಿ ಕೊಡಲಾಗಿದೆ.

ಟೀಚರ್ ಪ್ಲಸ್  |  ಕನ್ನಡಕ್ಕೆ: ಜೈಕುಮಾರ್ ಮರಿಯಪ್ಪ

ಕಿರುಚಿತ್ರಕೃಪೆ: ಸಿಎನ್ಎನ್ .ಐಬಿಎನ್.

 

 

ಪ್ರತಿಕ್ರಿಯೆಗಳು

editor_kn's picture

ಡಾ.ರಾಧಾಕೃಷ್ಣನ್ ಅವರಿಗೆ ಮೈಸೂರು ಅಚ್ಚುಮೆಚ್ಚಿನ ಸ್ಥಳವಾಗಿತ್ತು. ಅವರು ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿ ಇದ್ದಷ್ಟೂ ದಿನವು ಭಾರತೀಯ ತತ್ವಶಾಸ್ತ್ರ ವ್ಯಾಸಂಗವನ್ನು ಪ್ರಸಿದ್ಧ ಸಂಸ್ಕೃತ ವಿದ್ವಾಂಸರಾದ ಲಕ್ಷ್ಮೀಪುರಂ ಶ್ರೀನಿವಾಸಾಚಾರ್ಯರಲ್ಲಿ ಕ್ರಮವಾಗಿ ಮಾಡಿದರು. ಇಲ್ಲಿ ಡಾ.ರಾಧಾಕೃಷ್ಣನ್ ರವರ ವಿಶೇಷ ಗೌರವಕ್ಕೆ ಪಾತ್ರರಾದವರು ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಎಂ. ಹಿರಿಯಣ್ಣನವರು. ಮೂಲಸೂತ್ರ ಅಥವಾ ಶಬ್ದಕ್ಕೆ ಇದೇಅರ್ಥ, ಇಷ್ಟೇ ವ್ಯಾಪ್ತಿ ಎಂದು ಹೇಳಬಲ್ಲ ನಿಶಿತವಾದ ಬುದ್ಧಿ ಹಿರಣ್ಣಯ್ಯನವರದು. ಡಾ.ರಾಧಾಕೃಷ್ಣನ್ ರವರ ಪಾಠ ಪ್ರವಚನಗಳ ಬಗ್ಗೆ, ಅವರಿಗೆ ವಿದ್ಯಾರ್ಥಿಗಳ ಬಗ್ಗೆ ಇದ್ದ ವಾತ್ಸಲ್ಯವನ್ನು ವಿ.ಸೀ. ಅವರು ಹೀಗೆ ಹೇಳಿದ್ದಾರೆ. "ವಿದ್ಯಾರ್ಥಿಗಳಿಗೆ ಅವರ ತರಗತಿಗಳೆಂದರೆ ಹಬ್ಬ. ವಿದ್ಯಾರ್ಥಿಗಳನ್ನು ಬೈದು - ಗದರುವ ಅಥವ ದರ್ಪ ತೋರುವ ಮನೋಭಾವ ಅವರದಲ್ಲ. ಅವರು ಹೇಳಿದ್ದನ್ನು ಕೇಳಿ, ಬರೆಸಿದ್ದನ್ನು ಬರೆದವರಿಗೆ ತರಗತಿ ಎಷ್ಟು ದೊಡ್ಡದಾದರೂ ಸರಿಯೇ ತೇರ್ಗಡೆಯನ್ನು ಹೊಂದಬಹುದಾಗಿತ್ತು. ಅವರು ಬೋಧಿಸುವ ವಿಷಯ ಮನದಟ್ಟಾಗುತ್ತಿತ್ತು. ಅವರ ವಾಙ್ಮಯತೆಯ ವಿಲಾಸ ಹಾಗು ಸ್ಫುಟತೆ ಸ್ಮರಣೀಯ. ಅವರದು ನಿಸ್ಸಂಶಯವಾದ ತೀರ್ಮಾನ. ಗುರುವಿನಲ್ಲಿ ಕೇವಲ ವಿದ್ಯಾಬೋಧನೆಯ ಚಾತುರ್ಯವಿದ್ದರೆ ಸಾಲದು; ಮಾನವತೆ - ಔದಾರ್ಯ - ವಾತ್ಸಲ್ಯ ಅದರ ಜೊತೆಗೆ ಇದ್ದರೆ ಅದು ಇನ್ನೂ ಹೆಚ್ಚು ಫಲಕಾರಿ. ಡಾ.ರಾಧಾಕೃಷ್ಣನ್ ಅವರ ಗುರುಧರ್ಮದ ರಹಸ್ಯವೆಂದರೆ ನಾನಾ ಕಾರಣಗಳಿಂದ ದುಃಖಕ್ಕೆ ಈಡಾದ ತೊಂದರೆಗೊಳಗಾದ ವಿದ್ಯಾರ್ಥಿಗಳನ್ನು ಸಾಂತ್ವನಗೈಯುತ್ತಿದ್ದುದು."

18922 ನೊಂದಾಯಿತ ಬಳಕೆದಾರರು
7393 ಸಂಪನ್ಮೂಲಗಳು