ಮರೆಯಲಾಗದ ಆ ದಿನ!

ಒಬ್ಬ ಹೊಸ ಶಿಕ್ಷಕಿಗೆ, ಶಾಲೆಯ ಮೊದಲ ದಿನ ಬಲು ಆತಂಕ ಹಾಗೂ ಅಷ್ಟೇ ಹುರುಪು ಉತ್ಸಾಹದ ದಿನವಾಗಿರುತ್ತದೆ. ಲಲಿತಾ ಜಯರಾಮನ್ ಅವರು ತಮ್ಮ  ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ ...

 ನನಗೆ ಥಟ್ಟನೆ ಎಚ್ಚರವಾಯಿತು, ಎಂಥಾ ದುಸ್ವಪ್ನ! ಎಲ್ಲ ನಿಜವಾಗಿ ನಡೆಯಿತೇನೋ ಅನಿಸುವಂಥ ದುಃಸ್ವಪ್ನ. ನಾನು ವಾಸ್ತವವಾಗಿ  ಅನುಭವಿಸುತ್ತಿದ್ದೇನೇನೋ ಅನ್ನುವಂಥ ಘಟನಾವಳಿಗಳು. ಕಪ್ಪುಹಲಗೆ ಗಳು ಆಯಕಟ್ಟಿನ  ಕ್ಷಣದಲ್ಲಿ ಸುರುಳಿ ಬಿಚ್ಚದೇ ಮೊಂಡೂರುತ್ತಿದ್ದವು. ನಾನು ತರಗತಿಯ ಮಕ್ಕಳಿಗೆ ಹೆಮ್ಮೆಯಿಂದ  ತೋರಿಸಲು ಹೋದಾಗ ಚಾರ್ಟುಗಳು ನನ್ನನ್ನು ಅಣಕಿಸುವಂತೆ ಖಾಲಿ ಖಾಲಿ ಆಗಿಬಿಡುತ್ತಿದ್ದವು.ಮಿಂಚುಪಟ್ಟಿಗಳು(flash cards) ಯದ್ವಾತದ್ವಾ ಗೊಂದಲಮಯವಾಗಿ ಬಿಡುತ್ತಿದ್ದವು.ಎಲ್ಲಕ್ಕೂ ಮಿಗಿಲಾಗಿ ವೇದಿಕೆಯಿಂದ ಇಳಿಯುವಾಗ ಮೆಟ್ಟಲಿಂದ ಜಾರಿ ಹೇಗೆ ಬಿದ್ದೆನೆಂದರೆ ಇಡಿ ತರಗತಿಯು ನಗೆಯ ಸಾಗರದಲ್ಲಿ ಮುಳಗಿ ಹೋಯಿತು…

ನಾನೊಬ್ಬ ಬಿ.ಎಡ್.ಗಾಗಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿ ಮತ್ತು ಇಂದು ನಾನು ಮೊದಲ ಬಾರಿಗೆ ಒಂದು ತರಗತಿಯ ಸಮ್ಮುಖದಲ್ಲಿ ನಿಂತು ಪಾಠ ಮಾಡಬೇಕಾಗಿದೆ. ಕೋವೆಂಟ್ ಗಾರ್ಡನ್ನ ಗಜಿಬಿಜಿಯಲ್ಲಿ ಮೊದಲಬಾರಿಗೆ ಹೋದ ವ್ಯಕ್ತಿ ನನಗಿಂತ ಹೆಚ್ಚು 'ಉಲ್ಲಾಸವುಳ್ಳವನು' ಎಂದು ವರ್ಣಿಸಬಹುದಾಗಿತ್ತು. ನನ್ನ ಮೇಲೆ  ಅರವತ್ತು ಜೋಡಿ ಕಣ್ಣುಗಳು ನೆಟ್ಟಿದ್ದವು. ಈ ತರಗತಿಗೆ ನಾನು ಮೊದಲ ಬಾರಿಗೆ ಪಾಠ ಮಾಡಬೇಕಿತ್ತು.  ನನ್ನ ಮೇಲ್ವಿಚಾರಕರು ಹಿಂದಿನ ಸಾಲಿನಲ್ಲಿ  ಕುಳಿತು ಖುಷಿ ಖುಷಿಯಾಗಿ ನನ್ನ ಪ್ರತಿಯೊಂದು  ತಪ್ಪನ್ನು ಟಿಪ್ಪಣಿ ಮಾಡಿಕೊಳ್ಳಲು ಸಿದ್ಧವಾಗಿದ್ದರು. ಭೂಮಿಯು ಕರುಣೆಯಿಂದ ಬಾಯ್ತೆರೆದು ನನ್ನನ್ನು  ನುಂಗಿಬಿಡಬಾರದೇ ಎಂದು ಬಯಸಿದೆ. ನಾನು ವಿಸ್ತಾರವಾಗಿ ಸಿದ್ಧಪಡಿಸಿಕೊಂಡು ಬಂದಿದ್ದ ಪಾಠಯೋಜನೆಯ ಪ್ರತಿಯೊಂದು ಹಂತವು  ಮರೆತುಹೋದರೆ ಏನು ಕಥೆ? ಕಣ್ಣು ಕತ್ತಲಾಗಿ ಬವಳಿ ಬಂದರೆ ಏನು ಕಥೆ? ಇಡೀ ತರಗತಿ ಮುಂದೆ ತೊದಲುತ್ತಾ ಎಬ್ಬೆಬ್ಬೆ ತಬ್ಬಬ್ಬೆ ಎಂದುಬಿಟ್ಟರೆ ಏನು ಕಥೆ? ಒಂದು ವೇಳೆ ಹೀಗಾದರೆ ...ಅಥವಾ ಹಾಗಾದರೆ…

ಹೇಗೋ ಧೈರ್ಯ ತಂದುಕೊಂಡೆ. ಇಷ್ಟ ಇರಲಿ ಇಲ್ಲದಿರಲಿ ನಾನು ಈ ಫೈರಿಂಗ್ ಸ್ಕ್ವಾಡ್ ಅನ್ನು  ಎದುರಿಸಲೇಬೇಕು.ಬೇರೆ ದಾರಿ ಇಲ್ಲ.  ಭಾರವಾದ  ಹೃದಯದಿಂದ, ನಾನು ವಧೆಗೆ ಸಿದ್ಧಳಾಗಿ ಶಾಲೆಯ ದಿಕ್ಕಿನಲ್ಲಿ ನಡೆದೆ. ಇದೇ ಸಂದರ್ಭಕ್ಕಾಗಿ ನಾನು ಬಲುಶ್ರದ್ಧೆಯಿಂದ ತಯಾರಿಸಿದ ಚಾರ್ಟುಗಳು , ಪ್ರದರ್ಶಕಗಳು, ಫ್ಲ್ಯಾಶ್ ಕಾರ್ಡುಗಳು ಮತ್ತಿತರ ಪಾಠೋಪಕರಣಗಳು ನನ್ನೊಡನೆ ಇದ್ದವು.  ಶಾಲೆಗೆ ಹೋಗುವ ಮಾರ್ಗದಲ್ಲಿ, ಇದೇನಿದು ಬಣ್ಣ ಬಣ್ಣದ,  ಸಂಚಾರಿ ಸ್ಟೇಷನರಿ ಅಂಗಡಿ  ಹೋಗುತ್ತಿದೆ ಎಂದು ಎಲ್ಲರೂ ನನ್ನನ್ನು ಕುತೂಹಲದಿಂದ ನೋಡುವವರೆ.ಇದರಿಂದಂತೂ ನನ್ನ  ಸ್ಥೈರ್ಯ ಮತ್ತು  ಆತ್ಮವಿಶ್ವಾಸ ಇನ್ನಷ್ಟು ಕುಗ್ಗಿ ಹೋದವು. ರಣರಂಗದಲ್ಲಿ ಆ ಫಿರಂಗಿಗಳಿಗೆ ಎದೆಕೊಟ್ಟು ಮುನ್ನಡೆದ ಟೆನ್ನಿಸನ್ ನ ನೋಬಲ್ ಆರು ನೂರು ಯೋಧರಂತೆ ಆದದ್ದಾಗಲಿ ಎಂದು ಮುಂದಡಿ ಇಟ್ಟೆ ಇಲ್ಲಿದ್ದ ವ್ಯತ್ಯಾಸವೇನೆಂದರೆ ಅವರೆಲ್ಲ ವೀರಸ್ವರ್ಗ ಏರಿ ಕೀರ್ತಿಶೇಷರಾದರು.ಖಂಡಿತವಾಗಿ ಆ ಭಾಗ್ಯ ನನ್ನದಾಗಿರಲಿಲ್ಲ.

ಒಂದು ಭಯಂಕರ ಗಂಟೆಯ ಕಾಲವು  ನಾನು ಏನೇನು ತಪ್ಪು ಮಾಡಿ ನಗೆಪಾಟಲಾಗಬಹುದು ಎಂಬ ಕಲ್ಪನೆಯಲ್ಲೇ ಕಳೆಯಿತು.ಆಗ ಗಣ ಗಣ ಗಂಟೆ ಬಡಿದು  ನನ್ನತರಗತಿಯ ಪ್ರಾರಂಭವನ್ನು  ಘೋಷಿಸಿತು. ಕರಾಳ  ಕಲ್ಪನೆಗಳ ರಿಯಲ್ಲಿ ಬೆಂದ ನನ್ನ ಮನಸ್ಸಿಗೆ  ಇದು ಒಂದು ದುರಂತದ ಮುನ್ಸೂಚನೆ ನೀಡುವ ಚರ್ಚ್ ಗಂಟೆಯ ನಾದವೆಂಬಂತೆ ಕೇಳಿಸಿತು.. ಹೊಸ ಶಿಕ್ಷಕಿಯ ನಿರೀಕ್ಷೆಯಲ್ಲಿ ಗಾಢ ಮೌನದಲ್ಲಿದ್ದ ತರಗತಿಯನ್ನು ನಾನು ಪ್ರವೇಶಿಸಿದೆ. ನನ್ನ ಸೀರೆಯ ನಿರಿಯ ಸರಸರ ಸದ್ದೂ ಕೇಳಿಸುವಂಥ ಮೌನ. ಒಮ್ಮೆಲೆ ವೃಂದಗಾನದಂತೆ 'ಗುಡ್ ಮಾರ್ನಿಂಗ್, ಮಿಸ್!' ಎಂದು ಮಕ್ಕಳು ನನ್ನನ್ನು ಸ್ವಾಗತಿಸಿದರು

 ಮುಂದೇನು ನಡೆಯಿತು ಎಂಬುದು ನನಗೆ ಮಸುಕು ಮಸುಕಾಗಿ ನೆನಪಿದೆ. ನಲವತ್ತೈದು ನಿಮಿಷಗಳ ಕಾಲ ನಾನು ನಾನೇ ಅಲ್ಲವೇನೋ ಎನ್ನುವಂತೆ ಹುಡುಗಿಯರಿಗೆ ಸಂಬೋಧಿಸುತ್ತಾ ವಿವಿಧ ಚಾರ್ಟುಗಳನ್ನು ತೋರಿಸುತ್ತಾ , ಕಪ್ಪು ಹಲಗೆಯ ಮೇಲೆ ಬರೆಯುತ್ತಾ ತಪ್ಪೋ ನೆಪ್ಪೋ ಮುಂದುವರೆದೇಬಿಟ್ಟೆ.ನೀರಲ್ಲಿ ಮುಳುಗುವವನಿಗೆ ಚಳಿಯೇನು ಮಳೆಯೇನು ಅಂಥಾ ಭಂಡ ಧೈರ್ಯದಲ್ಲಿ ಯಾವುದೋ ಸುಪ್ತಾವಸ್ಥೆಯಲ್ಲಿ ತರಗತಿ ನಡೆಸಿಬಿಟ್ಟೆ.ತರಗತಿ ಮುಗಿದ ಮೇಲೆ ಸ್ಟಾಫ್ ರೂಂಕಡೆಗೆಹೆಜ್ಜೆ ಇಟ್ಟೆ.ಮಕ್ಕಳು ಉತ್ಸುಕತೆಯಿಂದ ಚಾರ್ಟುಗಳನ್ನು ಕೊಂಡೊಯ್ಯಲು ಸಹಾಯ ಮಾಡಿದ್ದು ಮಸುಕು ಮಸುಕಾಗಿ ನೆನಪು.

ನಾನು ಗಮನವೆಲ್ಲಾ ಇದ್ದದ್ದು ನನ್ನ ಮೇಲ್ವಿಚಾರಕರ ಹಸಿರು ದಿನಚರಿಯ ಮೇಲೆ – ಖಂಡಿತಾ ನನ್ನ ಇತಿಶ್ರೀ ಬರೆದಿರುತ್ತಾರೆ. ನಾನು ವೃತ್ತಿ ಆರಂಭಿಸುವ ಮುಂಚೆಯೇ ನನ್ನ ಬೋಧನೆ ಪರಾಕ್ರಮಗಳ ಬಗ್ಗೆ ಚರಮಗೀತೆ ಬರೆದಿರುತ್ತಾರೆ.ಅದೇನು ನನ್ನ ಕಲ್ಪನೆಯೇ, ಅದ್ಯಾಕೆ ಹಾಗೆ ನನ್ನೆಡೆ ನೋಡಿ ಅವರು ಮುಂದಿನ ತರಗತಿಯ ಕಡೆಗೆ ನಡೆದರು. ಅಯ್ಯೋ ಪಾಪ ಎಂದು ನೋಡಿರಬೇಕು.

ನಾನು ಮತ್ತೆ ಮೊದಲಿನಂತಾಗಲು ಹಲವಾರು  ನಿಮಿಷಗಳೇ ಬೇಕಾದವು.ಡವಡವ ಎನ್ನುತ್ತಿದ್ದ  ಹೃದಯದಿಂದ, ನಾನು ಡೈರಿ ಮೊದಲ ಪುಟ ತೆರೆದೆ ಮತ್ತು ಮೇಲ್ವಿಚಾರಕರ ಅಚ್ಚುಕಟ್ಟಾದ ಕೈಬರಹ ದಲ್ಲಿ ಬರೆದದ್ದು ನಂಬಲು ಕ್ಷಣಗಳೇ ಬೇಕಾದವು... "ಅತ್ಯುತ್ತಮ ತರಗತಿಯ ಉಪಸ್ಥಿತಿ ... ವಿದ್ಯಾರ್ಥಿಗಳೊಡನೆ ಉತ್ತಮ ಬಾಂಧವ್ಯ ... ಸುವ್ಯವಸ್ಥಿತವಾದ ಕಪ್ಪುಹಲಗೆಯ ಕೆಲಸ ... ಆತ್ಮವಿಶ್ವಾಸದ ಆದರೂ ಸ್ನೇಹ ಪೂರ್ಣವಾದ ತರಗತಿಯ  ನಿರ್ವಹಣೆ ,ಭರವಸೆದಾಯಕ ಶಿಕ್ಷಕಿ, ಮತ್ತು ಉತ್ತಮ ಆರಂಭ! "

ಆ ಅಭೂತ ಪೂರ್ವ ದಿನದ ತರುವಾಯ, ನಾನು ಅನೇಕ ತರಗತಿಗಳಿಗೆ ಪಾಠ ಮಾಡಿದ್ದೇನೆ.ಆದರೂ ಭಯ, ತಲ್ಲಣ ,ಹೆದರಿಕೆ ಮತ್ತು ಅಂತಿಮ ಉಲ್ಲಾಸದ ಮಿಶ್ರ ಭಾವನೆಗಳ ನನ್ನ ಮೊದಲ ಪಾಠದ  ದಿನ ನನ್ನ ನೆನಪಲ್ಲಿ ಸದಾಹಸಿರು. ನಾನು ಪುಸ್ತಕಗಳಲ್ಲಿ ಕಲಿತ ವಿಷಯಗಳಿಗಿಂತಲೂ ಧೈರ್ಯ ಮತ್ತು ಆತ್ಮವಿಶ್ವಾಸ, ಮತ್ತು ಸ್ವತಃ ಜೀವನ ಬಗ್ಗೆಯೇ ಒಂದು ನೈಜ ಅನುಭವ ನನಗೆ ಬಹಳಷ್ಟು ಕಲಿಸಿತು. ಅಂದು ನಾನು ನಿಜಕ್ಕೂಬೆಳೆದೆ!

ಲಲಿತಾ ಜಯರಾಮನ್  ಅವರ ಲೇಖನವು ಟೀಚರ್  ಪ್ಲಸ್, ಸಂಚಿಕೆ ನಂ 10, ಜನವರಿ- ಫೆಬ್ರುವರಿ 1991 ರಲ್ಲಿ ಈ ಮೊದಲು ಪ್ರಕಟವಾಗಿದೆ ಮತ್ತು ಅದನ್ನು ಕೆಲವು ಬದಲಾವಣೆಗಳೊಂದಿಗೆ ಇಲ್ಲಿ ಅನುವಾದಿಸಲಾಗಿದೆ.

ಕನ್ನಡಾನುವಾದ ಮತ್ತು ಸಂಪಾದನೆ: ಜೈಕುಮಾರ್ ಮರಿಯಪ್ಪ.

 

ಪ್ರತಿಕ್ರಿಯೆಗಳು

Prakash Angadi's picture

ಮೊದಲ ದಿನ ತರಗತಿ ತೆಗುದುಕೊಂಡಾಗಿನ ತಲ್ಲಣಗಳನ್ನು ಲಲಿತ ಜಯರಾಮನ್ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಅವರು ವ್ಯಕ್ತಪದಿಸಿರುವ ಭಾವನೆಗಳು ಅವರಲ್ಲಿನ ನಿಜವಾದ ಶಿಕ್ಷಕಿಯನ್ನು ತೋರಿಸುತ್ತಿವೆ. ಈ ಲೇಖನ ಶಿಕ್ಷಕರಿಗೆ ಆಪ್ತವೆನಿಸುತ್ತದೆ. ಒಮ್ಮೆ ಓದಿ..... ನಿಮಗೂ ನೆನಪಾಗಬಹುದು ನಿಮ್ಮ ಮೊದಲ ತರಗತಿ.

editor_kn's picture

ಧನ್ಯವಾದ ಪ್ರಕಾಶ್, ನೀವೇಕೆ ಇಂಥ ಆತ್ಮೀಯ ಅನುಭವಗಳನ್ನು ದಾಖಲಿಸಬಾರದು?

19012 ನೊಂದಾಯಿತ ಬಳಕೆದಾರರು
7425 ಸಂಪನ್ಮೂಲಗಳು