ಮಕ್ಕಳ ಸಾಹಿತ್ಯದೊಂದಿಗೆ ಇಂದಿಗೂ ಉಳಿದಿರುವ ನಂಟು !!

 ನಾನಾಗ ಮೂರನೇ ತರಗತಿಯಲ್ಲಿ ಓದುತ್ತಿದ್ದೆ. ಅದೊಂದು ಭಾನುವಾರ. ತಲೆಗೂದಲು ದಟ್ಟವಾಗಿ ಬೆಳೆದಿದ್ದರಿಂದ ನಮ್ಮ ಅಣ್ಣಯ್ಯ (ಮನೆಯಲ್ಲಿ ಎಲ್ಲರೂ ತಂದೆಯವರನ್ನು ಹಾಗೇ ಕರೆಯುತ್ತಿದ್ದುದು.) ನನ್ನನ್ನು ಕ್ಷೌರಕ್ಕೆ ಕರೆದುಕೊಂಡು ಹೋಗಲು ಅಣ್ಣನಿಗೆ ತಿಳಿಸಿದರು. ಅವನೂ ನನ್ನೊಂದಿಗೆ ಕ್ಷೌರಕ್ಕೆ ಪೇಟೆಗೆ ಹೊರಟ. ಪೇಟೆಯೆಂದರೆ ಮನೆಯಿಂದ ಒಂದೂವರೆ ಮೈಲಿಯ ಕಾಲು ದಾರಿ. ಆಗ ನಮ್ಮೂರಿಗೆ ಬಸ್ಸುಗಳಿರಲಿಲ್ಲ. ಏನಿದ್ದರೂ ನಟರಾಜ ಸರ್ವಿಸ್. ಹಾಗೆ ಪೇಟೆಗೆ ಬಂದ ನಾವಿಬ್ಬರೂ ಭಂಡಾರಿಯವರ ಕ್ಷೌರದಂಗಡಿಗೆ ಬಂದೆವು. ಭಾನುವಾರವಾದ್ದರಿಂದ ಬಹಳ ಗಿರಾಕಿಗಳಿದ್ದರು. ನಮ್ಮಂತಹ ಮಕ್ಕಳು-ಮರಿಗಳ ಹಿಂಡೇ ಅಲ್ಲಿ ನೆರೆದಿತ್ತು. ಕಡಿಮೆಯೆಂದರೂ ಇನ್ನೂ ಒಂದು ಗಂಟೆ ತಡವಾಗಬಹುದೆಂದೂ, ಅಷ್ಟುಹೊತ್ತಿನವರೆಗೆ ಸಮಯ ಕಳೆಯಲು ಪಕ್ಕದ ಹೋಟೆಲ್ ಗೆ ಹೋಗಿ ಚಹಾ ಕುಡಿದು ಬರಲು ಭಂಡಾರಿಗಳೇ ಅಣ್ಣನ ಬಳಿ ಬಂದು ಹೇಳಿದರು. ಖಾಯಂ ಗಿರಾಕಿಗಳೆಡೆಗೆ ಅವರದು ವಿಶೇಷ ಮುತುವರ್ಜಿ. ನಾವಿಬ್ಬರೂ ಅದನ್ನು ಶಿರಸಾ ವಹಿಸಿ ಪಕ್ಕದ ಪ್ರಭು ಹೋಟೆಲ್ ಗೆ ಬಂದು ಬನ್ಸ್ ತಿಂದು ಚಹಾ ಕುಡಿದೆವು. ಕ್ಷೌರಕ್ಕೆ ಇನ್ನೂ ಮುಕ್ಕಾಲು ಗಂಟೆ ಬಾಕಿ ಇತ್ತು. ಏನು ಮಾಡುವುದೆಂದು ತೋಚದೆ ಅಣ್ಣ ಅಲ್ಲೇ ಪಕ್ಕದಲ್ಲಿದ್ದ ಪೇಪರ್ ಅಂಗಡಿ ಕಾಮತ್ ಅವರ ಬಳಿ ಲೋಕಾಭಿರಾಮ ಮಾತಾಡುತ್ತಾ ನಿಂತ. ನಾನು ಸುಮ್ಮನೆ ರಸ್ತೆ ಮೇಲೆ ಹೋಗುವ ಬಸ್ಸು-ಕಾರುಗಳನ್ನು ನೋಡುತ್ತಾ ನಿಂತೆ. ಎದುರುಗಡೆ ಇರುವ ಕ್ಷೌರದಂಗಡಿಯಲ್ಲಿ ನಮ್ಮ ಸರದಿ ಬರುವುದಕ್ಕೆ ಮುಂಚೆ ಇನ್ನೂ ಮೂರು ತಲೆಗಳು ಹೊರಗೆ ಕಾಯುತ್ತಿದ್ದವು. ನಿಂತು ನಿಂತು ಕಾಲು ನೋಯುತ್ತಿತ್ತು. ಕಣ್ಣು ಸುಮ್ಮನೆ ಪೇಪರ್ ಅಂಗಡಿಯಲ್ಲಿ ನೇತು ಹಾಕಿದ್ದ ಪೇಪರ್ ಮೇಲೆ ಹೋಯಿತು. ಅಲ್ಲಿ ಬೇರೆ ಬೇರೆ ಪೇಪರ್ ಗಳನ್ನು ತೂಗು ಹಾಕಲಾಗಿತ್ತು. ಜೊತೆಗೆ ಬೇರೆ ಬೇರೆ ಬಣ್ಣದ, ಅಗಲವಾದ, ಆಯತಾಕಾರದ, ಅಗಲ ಕಿರಿದಾದ ಅನೇಕ ಪುಸ್ತಕಗಳನ್ನು ಒಂದರ ಮೇಲೊಂದು ಪೇರಿಸಿಡಲಾಗಿತ್ತು. (ನನಗಾಗ ವಾರ ಪತ್ರಿಕೆ, ಮಾಸ ಪತ್ರಿಕೆಗಳ ಕಲ್ಪನೆಯೇ ಇರಲಿಲ್ಲ. ಮನೆಗೆ ಪೇಪರ್ ಬರುತ್ತಿರಲಿಲ್ಲ. ಆದರೂ ಶಾಲೆಯಲ್ಲಿ ಆರು ಮತ್ತು ಏಳನೇ ತರಗತಿಯ ವಾರ್ತಾ ಮಂತ್ರಿಗಳು ಬೆಳಗಿನ ಶಾಲಾ ಅಧಿವೇಶನದಲ್ಲಿ ಉದಯವಾಣಿ ಪತ್ರಿಕೆಯ ಸುದ್ದಿಗಳನ್ನು ಓದುತ್ತಿದ್ದುದನ್ನು ಗಮನಿಸಿದ್ದೆ. ಕೇಳುವ ಕುತೂಹಲವಿರಲಿಲ್ಲ. ಬದಲಿಗೆ ತಪ್ಪು ಓದಿದಾಗ ಎಲ್ಲರೆದುರೇ ಹುಣಸೆ ಅಡರಿನಿಂದ ಬೀಳುವ ಅಧ್ಯಾಪಕರ ಪೆಟ್ಟುಗಳೆಡೆಗೇ ನಮ್ಮ ಗಮನ. ಎಲ್ಲೋ ಅಪರೂಪಕ್ಕೊಮ್ಮೆ ಏನಾದರೂ ವಿಶೇ? ಸುದ್ದಿ ಇದ್ದಾಗ ಮನೆಗೆ ತಂದೆಯವರು ಪೇಪರ್ ತಂದರೆ, ಬೆಂಗಳೂರಿನಿಂದ ಅಣ್ಣಂದಿರು ಬಂದಾಗ ಪೇಪರ್ ತಂದರೆ ಮನೆಯವರೆಲ್ಲರೂ ಅದರ ಒಂದೊಂದು ಪುಟ ಹಿಡಿದು ನೋಡುವುದನ್ನು ಗಮನಿಸಿದ್ದೆ. ಅದರೆಡೆಗೆ ಸ್ವಲ್ಪವೂ ಆಸಕ್ತಿ ಇಲ್ಲದೇ ಇದ್ದುದು ಇಬ್ಬರಿಗೆ. ಒಂದು ಓದು ಬಾರದ ನಮ್ಮಜ್ಜಿಗೆ. ಇನ್ನೊಂದು ಪೇಪರ್ ಓದುವುದು ದೊಡ್ಡವರು ಮಾತ್ರ ಎಂದುಕೊಂಡ ನನಗೆ. ಆದರೆ ಈಗ ಪೇಪರ್ ಅಂಗಡಿ ಮುಂದೆ ನಿಂತವನಿಗೆ ಅಲ್ಲಿನ ರಾಶಿಗಟ್ಟಲೆ ಪುಸ್ತಕ-ಪೇಪರ್ ಗಳನ್ನು ನೋಡಿ ಒಮ್ಮೆಲೆ ಕುತೂಹಲ ಹುಟ್ಟಿತು.)

ಅಣ್ಣ ಮತ್ತು ಕಾಮತ್ ಅವರ ಮಾತು ಇನ್ನೂ ಮುಂದುವರಿದಿತ್ತು. ಅವರಿಂದ ಕೊಂಚ ದೂರದಲ್ಲಿದ್ದ ನಾನು ಸಂಕೋಚ ಬಿಟ್ಟು ಮೆಲ್ಲ ಮೆಲ್ಲನೆ ಪುಸ್ತಕಗಳೆಡೆಗೆ ಬಂದು ಒಂದೊಂದಾಗಿ ಗಮನಿಸತೊಡಗಿದೆ. ಮೊದಮೊದಲು ಬರಿ ಕಣ್ಣಿಂದ ಮಾತ್ರ ನೋಡಿದ ನಾನು ಬಳಿಕ ಒಂದೊಂದೇ ಪುಸ್ತಕ ಕೈಯಲ್ಲಿ ಹಿಡಿದು ನೋಡತೊಡಗಿದೆ. ಅದನ್ನು ಓರೆಗಣ್ಣಿನಲ್ಲಿ ಗಮನಿಸಿದ ಕಾಮತ್ ಅವರು "ಎಂತ ಬೇಕಾ? ಕತಿ ಪುಸ್ತ್ಕ ಓದ್ತ್ಯನಾ" ಎಂದು ಸಲಿಗೆಯಿಂದ ಮಾತಾಡಿದರು. ಕೂಡಲೇ ನನ್ನಣ್ಣ " ಅದೆಲ್ಲಾ ನಿಂಗ್ ಎಂತಕಾ? ಇಲ್ಲೂ ಸುರು ಆಯ್ತಾ ನಿನ್ ಕೈಕೋಚ್? ಸುಮ್ನೆ ಇತ್ಲೈ ಬಾರಾ" ಎಂದು ಗದರಿದ. ಕಾಮತ್ ಅವರು " ಸಣ್ ಮಕ್ಳ್ ಅಲ್ದೆ, ಸುಮ್ನೈಕಣಿ ಮರ್ರೆ" ಎಂದರು. ಅವರು ಹಾಗೆ ಹೇಳಿದ್ದು ನನಗೆ ಇನ್ನೂ ಧೈರ್ಯ ತಂದಿತು. ಅಲ್ಲೇ ಗೋಡೆಗೊರಗಿ ಒಂದು ಪುಸ್ತಕ ಹಿಡಿದು ನಿಂತೆ. ಮೊದಲ ಪುಟದಿಂದ ಕೊನೆಯ ಪುಟದವರೆಗೆ ಅದನ್ನು ಗಮನಿಸುತ್ತಾ ಬಂದೆ. ಕ್ಷೌರಕ್ಕೆ ಭಂಡಾರಿಯರು ಕೊಟ್ಟ ಸಮಯ ಇನ್ನೂ

ಕಾಲು ಗಂಟೆ ಉಳಿದಿತ್ತು. ಹಾಗೆ ಅಂದು ನಾನು ಕೈಗೆತ್ತಿಕೊಂಡ ಪುಸ್ತಕ ’ಚಂದಮಾಮ’. ಅದರೊಳಗಿನ ಒಂದು ದೊಡ್ಡ ಕಥೆಯ ಹೆಸರು ಈಗಲೂ ನನಗೆ ನೆನಪಿದೆ. ’ಮೂವರು ಮಾಂತ್ರಿಕರು’ ಎಂದು ಅದರ ಶೀರ್ಷಿಕೆ. ಹತ್ತಾರು ನಿಮಿ? ನಾನು ಹಾಗೆ ಪುಸ್ತಕ ಹಿಡಿದು ನಿಂತಿದ್ದು, ಅದೂ ದುಡ್ಡು ಕೊಡದೆ ಪುಗಸಟ್ಟೆ ಹಿಡಿದು ನೋಡಿದ್ದು ಅಣ್ಣನಿಗೆ ಮರ್ಯಾದೆ ಹೋಗುವಂತೆ ಮಾಡಿತು. ಆದರೂ ಅದನ್ನು ಅಲ್ಲಿ ತೋರಿಸಿಕೊಳ್ಳದೆ, ಮರ್ಯಾದೆ ಉಳಿಸಿಕೊಳ್ಳುವ ಸಲುವಾಗಿ ಆ ಪುಸ್ತಕವನ್ನು ಕೊಂಡುಕೊಂಡು, ಭಂಡಾರಿಯವರ ಬಳಿ ಕ್ಷೌರ ಮಾಡಿಸಿಕೊಂಡು, ಮನೆಗೆ ಬಂದ ಮೇಲೆ ನನ್ನನ್ನು ತರಾಟೆಗೆ ತೆಗೆದುಕೊಂಡ. ಆದರೆ ನನಗೆ ಆತ ತೆಗೆಸಿಕೊಟ್ಟ ಚಂದಮಾಮದ ಪುಸ್ತಕದ ಗುಂಗಿನಲ್ಲಿ ಅದ್ಯಾವುದೂ ತಲೆಗೇ ಹೋಗಲಿಲ್ಲ. ಅವನ ಪ್ರವರಕ್ಕೆ ಕ್ಯಾರೇ ಅನ್ನಲಿಲ್ಲ. ಅದರಲ್ಲಿರುವ ಚಿತ್ರಗಳು, ಅರ್ಧಂಬರ್ಧ ಓದಿದಾಗ ಚೂರು ಪಾರು ಅರ್ಥವಾಗುತ್ತಿದ್ದ ಕಥೆಗಳಲ್ಲಿ ನಾನು ಕಳೆದು ಹೋಗಿದ್ದೆ. ಪ್ರತಿ ತಿಂಗಳೂ ಆ ರೀತಿಯ ಪುಸ್ತಕ ಬರುತ್ತದೆ ಎಂದು ತಿಳಿದಾಗ ನನ್ನ ಸಂತೋ? ಇನ್ನೂ ಇಮ್ಮಡಿಯಾಯಿತು. ಹೇಗಾದರೂ ಮಾಡಿ ಅದನ್ನು ಓದಬೇಕು ಎಂದು ಮನಸ್ಸು ಬಯಸಿತು. ಆದರೆ ಅದಕ್ಕೆ ದುಡ್ಡು ಯಾರು ಕೊಡುತ್ತಾರೆ ? ಅಂತಹ ಪರಿಪಾಠವೇ ಆಗ ಇರಲಿಲ್ಲ. ಜೊತೆಗೆ ಶಾಲೆಗೆ ಹೋಗುವ ಮಕ್ಕಳು ಕಥೆ ಪುಸ್ತಕ ಓದಿ ಹಾಳಾಗಿ ಹೋಗುತ್ತಾರೆ; ಪಾಠ ಪುಸ್ತಕ ಮಾತ್ರ ಓದಬೇಕು ; ದೊಡ್ಡ ರಜೆಯಲ್ಲಿ ಬೇಕಾದರೆ ಯಾರಾದರೂ ಕೊಟ್ಟರೆ ಆಗ ಬೇಕಾದರೆ ಓದಬಹುದು ಎಂಬ ಕಟ್ಟುನಿಟ್ಟಿನ ಕಾಲವದು. ಶಾಲೆಯಲ್ಲಂತೂ ಮಕ್ಕಳಿಗೆ ಪುಸ್ತಕ ಕೊಡುವ ಮಾತಂತೂ ದೂರವೇ ಉಳಿದಿತ್ತು. ಅಲ್ಲಿ ಎಲ್ಲಾ ಪುಸ್ತಕಗಳನ್ನು ಕಪಾಟಿನಲ್ಲಿಟ್ಟು ಬೀಗ ಹಾಕಲಾಗಿತ್ತು. ಅದು ಹಾಗೇ ಇಡಬೇಕೇನೋ ಎಂದು ತಿಳಿದುಕೊಂಡ ಪಾಂಡಿತ್ಯ ಆಗ ನಮ್ಮದು. ಹಾಗಾಗಿ ಉಪಾಯವಿಲ್ಲದೆ ಅದೇ ಹಳೆಯ ಚಂದಮಾಮದ ಪುಸ್ತಕಕ್ಕೆ ,ಅದು ಹಾಳಾಗಬಾರದೆಂದು ದಟ್ಟಿ ಹಾಕಿ ಪಠ್ಯಪುಸ್ತಕದ ನಡುವೆ ಇಟ್ಟುಕೊಂಡು ಮತ್ತೆ ಮತ್ತೆ ಓದುತ್ತಿದ್ದೆ.

ಹೀಗೆ ಒಂದು ಸಾರಿ ನಾನು ಅದೇ ಹಳೇ ಚಂದಮಾಮ ಓದುತ್ತಾ ಕುಳಿತಿರುವಾಗ ಬೆಂಗಳೂರಿನಿಂದ ನನ್ನ ದೊಡ್ಡಣ್ಣ ಊರಿಗೆ ಬಂದಿದ್ದರು. ಅವರು ನಾನು ಓದುತ್ತಿರುವ ಪುಸ್ತಕ ಪಾಠ ಪುಸ್ತಕ ಎಂದೇ ತಿಳಿದಿದ್ದರು. ಅದು ಯಾವ ಪುಸ್ತಕ ಎಂದು ಕೇಳಿದರು. ನಾನು ಅವರಿಗೆ ಕನ್ನಡ ಪುಸ್ತಕ ಎಂದು ಸುಳ್ಳು ಹೇಳಿದೆ. ಅವರು "ಕಾಂಬೋ, ತಕಂಬಾ’ ಎಂದರು. ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಕಳ್ಳನಂತೆ ಅವರಿಗೆ ಅದನ್ನು ತೆಗೆದುಕೊಟ್ಟೆ. ಅವರು ನನಗೆ ಬಯ್ಯಬಹುದೆಂದು ಎಣಿಸಿದೆ. ಆದರೆ ಅವರು ನನಗೆ ಬಯ್ಯಲಿಲ್ಲ. ಬದಲಿಗೆ " ನಿಂಗೆ ಕತಿ ಪುಸ್ತ್ಕ ಓದುದಂದ್ರ್ ಅ? ಕುಶಿಯಾ" ಎಂದು ಕೇಳಿದರು. ಹೌದೆಂದೆ. ಅದಕ್ಕೆ ಅವರು ಇನ್ನೊಂದು ಸಾರಿ ಬೆಂಗಳೂರಿನಿಂದ ಊರಿಗೆ ಬರುವಾಗ ಚಂದಮಾಮ ಪುಸ್ತಕ ತರುವುದಾಗಿ ಹೇಳಿದರು. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಅವರು ಬೆಂಗಳೂರಿಗ ತೆರಳಿದ ನಂತರ ನಾನು ಚಂದಮಾಮಕ್ಕಾಗಿ ಕಾಯುತ್ತಿದ್ದೆ. ಅವರು ಬೆಂಗಳೂರಿಗೆ ವಾಪಾಸು ಹೋಗಿ ಇನ್ನೂ ಎರಡು ವಾರ ಕಳೆದಿರಲಿಲ್ಲ. ಒಂದು ಮುಂಜಾನೆ ಬೆಂಗಳೂರಿನಲ್ಲೇ ನೆಲಸಿರುವ ನಮ್ಮ ಕೇರಿ ಮನೆಯ ಯಜ್ಞಣ್ಣಯ್ಯ ಮನೆಗೆ ಬಂದರು. ಆಗೆಲ್ಲಾ ಬೆಂಗಳೂರಿನಲ್ಲಿ ನೆಲೆಸಿರುವ ನಮ್ಮ ಕೇರಿ ಮನೆಯ ಜನರು ಊರಿಗೆ ಬಂದಾಗಲೆಲ್ಲಾ ನಮ್ಮ ಮನೆಗೆ ಬಂದು ಅಣ್ಣಯ್ಯನನ್ನು (ತಂದೆಯವರು) ಮಾತಾಡಿಸಿಕೊಂಡು ಹೋಗುವುದು ವಾಡಿಕೆ. ಅದರಲ್ಲೇನೂ ವಿಶೇಷವಿರಲಿಲ್ಲ. ಆದರೆ ಈ ಬಾರಿ ಬಂದ ಯಜ್ಞಣ್ಣಯ್ಯನ ಕೈಯಲ್ಲಿ ಒಂದು ರಟ್ಟಿನ ಬಾಕ್ಸ್ ಇತ್ತು. ಅವರು ನೇರವಾಗಿ ನನ್ನ ಬಳಿ ಬಂದು " ಇಗಾ, ನಿನ್ನಣ್ಣ ಬೆಂಗ್ಳೂರಿಂದ್ ನಿಂಗ್ ಕಳ್ಸಿಕೊಟ್ಟದ್ದ್ ಕಾಣ್" ಎಂದು ಹೇಳಿ ಅದನ್ನು ನನಗೆ ಕೊಟ್ಟರು. ನನಗೆ ಕೂಡಲೆ ಅದು ಚಂದಮಾಮ ಎಂದು ಗೊತ್ತಾಯಿತು. ಗಡಿಬಿಡಿಯಿಂದ ಆ ರಟ್ಟಿನ ಬಾಕ್ಸ್ ನ್ನು ಹರಿದು ತೆಗೆಯಲು ಪ್ರಯತ್ನಿಸಿದೆ. ನನಗದು ಬರಲಿಲ್ಲ. ನನ್ನ ಆತಂಕ ನೋಡಿ ಯಜ್ಞಣ್ಣಯ್ಯನೇ ಅದನ್ನು ಒಡೆದು ಕೊಟ್ಟರು. ಆದರೆ ಅದರೊಳಗಿದ್ದುದು ಡಿಕ್ಷ್‌ನೆರಿ ತರಹದ ದೊಡ್ಡ ಪುಸ್ತಕ. ನನಗೆ ಬಹಳ ನಿರಾಸೆಯಾಯಿತು. ಚಂದಮಾಮದ ಕನಸಿನಲ್ಲಿದ್ದವನಿಗೆ ಆ ದೊಡ್ಡ ಪುಸ್ತಕ ಯಾಕಾದರೂ ಬೇಕು? ನಾನದನ್ನು ಬಿಡಿಸಿಯೂ ನೋಡಲಿಲ್ಲ. ಅಣ್ಣನ ಮೇಲೆ ಸಿಟ್ಟೂ ಬಂದಿತು. ಕಣ್ಣಲ್ಲಿ ನೀರೂ ತುಂಬಿಕೊಂಡಿತು. ನನ್ನ ಅವಸ್ಥೆ ನೋಡಿ ಯಜ್ಞಣ್ಣಯ್ಯ ನಗುತ್ತಾ " ಮರ‍್ಕುದೆಂತಕ್ ಮಣ್ಯ ? ಒಂಚೂರ್ ಬಿಡ್ಸಿ ಕಾಂಬುವಲೆ" ಎಂದರು. ನಾನು ಅರೆ ಮನಸ್ಸಿನಿಂದ ಆ ರಟ್ಟೆಗಾತ್ರದ ಪುಸ್ತಕ ತೆರೆದೆ. ತೆರೆದಾಗ ಏನೆಂದು ಹೇಳುವುದು ? ಅದೊಂದು ಬುಕ್ ಬೈಂಡ್ ಮಾಡಿಸಿದ ಹತ್ತಾರು ಚಂದಮಾಮ ಪುಸ್ತಕಗಳ ಸಂಕಲನ !! ಬೇರೆ ಬೇರೆ ವರ್ಷಗಳ ಚಂದಮಾಮ ಪುಸ್ತಕಗಳು ಅದರಲ್ಲಿದ್ದವು. ದೊಡ್ಡಣ್ಣ ನನಗಾಗಿ ಪುಸ್ತಕದಂಗಡಿಯಲ್ಲಿ ಹುಡುಕಿ ಹಳೆಯ ಸಂಚಿಕೆಗಳನ್ನು ಸಂಗ್ರಹಿಸಿ ಕೊಂಗಾಟದ ಈ ಕಿರಿತಮ್ಮನಿಗೆ ಓದಲು ಕಳುಹಿಸಿದ್ದರು. ಅಂದಿನಿಂದ ನನ್ನ ಪಾಲಿಗದು ಚಿನ್ನವಾಯಿತು. ಯಾರಿಗೂ ಕೊಡದೆ ನನ್ನಷ್ಟಕ್ಕೆ ನಾನು ಉಪ್ಪರಿಗೆಯಲ್ಲಿ ಕುಳಿತು ಅದರ ಒಂದೊಂದೇ ಕಥೆಯನ್ನು ಓದುತ್ತಿದ್ದೆ. ಎಸ್.ಎಸ್. ಎಲ್.ಸಿ. ಮುಗಿಯುವ ತನಕ ಅದು ನನ್ನ ಬಳಿ ಭದ್ರವಾಗಿತ್ತು. ಆಮೇಲೆ ಗೆದ್ದಲು ಹಿಡಿದು ಹಾಳಾಯಿತು. ಆ ದಿನ ನಾನು ಒಬ್ಬನೇ ಉಪ್ಪರಿಗೆಯಲ್ಲಿ ಕುಳಿತು ಅಕ್ಷರಶಃ ಕಣ್ಣೀರಿಟ್ಟದ್ದು ಈಗಲೂ ನನಗೆ ನೆನಪಿದೆ.

ಈ ರೀತಿ ಚಂದಮಾಮದ ಮೂಲಕ ಪ್ರಾರಂಭವಾದ ನನ್ನ ಓದು ಬೊಂಬೆಮನೆ, ಬಾಲಮಿತ್ರ, ದಿನಕ್ಕೊಂದು ಕಥೆ, ಅಮರ ಚಿತ್ರಕಥೆ, ಜಾನಪದ ಕಥೆ, ಪಂಚತಂತ್ರದ ಕಥೆ, ಈಸೋಫನ ಕಥೆ, ಟಾಲ್ ಸ್ಟಾಯ್ ಕಥೆಗಳು, ನೀತಿ ಕಥೆಗಳು, ಎಳೆಯರ ರಾಮಾಯಣ, ಕಿಶೋರ ಭಾರತ, ಮಕ್ಕಳ ಭಾಗವತಗಳ ವರೆಗೆ ಮುಂದುವರಿಯಿತು. ಸುಧಾ ಪತ್ರಿಕೆಯಲ್ಲಿ ಬರುತ್ತಿದ್ದ ಬಾಲ ವಿಹಾರ, ತರಂಗದಲ್ಲಿ ಬರುತ್ತಿದ್ದ ಬಾಲವನ ಕಾಲಂ ಗಳನ್ನು ಓದಲೂ ಇದು ಪ್ರೇರಣೆ ನೀಡಿತು. ರೇಡಿಯೋದಲ್ಲಿ ಬರುತ್ತಿದ್ದ ಬಾಲವೃಂದ, ಚಿಲಿಪಿಲಿ ಕಾರ್ಯಕ್ರಮಗಳನ್ನು ಕೇಳಲೂ ಇದು ಇಂಬು ನೀಡಿತು. ಕ್ರಮೇಣ ಎಳೆಯರ ಗೆಳೆಯ ಮುಳಿಯ, ಶಿಶು ಸಂಗಮೇಶ, ಬೆ.ಗೋ. ರಮೇಶ್, ಪಂಜೆ ಮಂಗೇಶ ರಾವ್, ಜಿ, ಪಿ, ರಾಜತ್ನಂ, ವೈದೇಹಿ ಮೊದಲಾದವರು ಮಕ್ಕಳಿಗಾಗಿ ಬರೆಯುತ್ತಿದ್ದ ಕೃತಿಗಳನ್ನು ಓದುವುದಕ್ಕೆ ಸನ್ನಿವೇಶಗಳನ್ನು ಒದಗಿಸಿತು. ಈ ಮಕ್ಕಳ ಸಾಹಿತ್ಯದ ಬರೆಹಗಳೇ ನನಗೆ ಮುಂದೆ ಪ್ರೌಢ ಸಾಹಿತ್ಯದ ರುಚಿಯನ್ನೂ ಹತ್ತಿಸಿತೆಂದರೆ ತಪ್ಪಾಗಲಾರದು. ಜೊತೆಗೆ ಇಂದು ನಾನು ಏನಾದರೂ ಬರೆದು ಗೀಚಿದ್ದರೆ ಅದರ ಪ್ರೇರಕ ಶಕ್ತಿಯಾಗಿ ಹಿಂದೆ ನಿಂತದ್ದು ಅಂದಿನಿಂದ ಇಂದಿನವರೆಗೂ ಅದೇ ಹಳೆಯ ಕುತೂಹಲ ಉಳಿಸಿಕೊಂಡು ಓದುತ್ತಿರುವ ಮಕ್ಕಳ ಸಾಹಿತ್ಯವೆಂದರೆ ಅತಿಶಯೋಕ್ತಿಯಲ್ಲ. ಈಗಲೂ ನಾನು ಇಂತಹ ಪುಸ್ತಕಗಳನ್ನು ಸಂಗ್ರಹಿಸುತ್ತೇನೆ. ಬಿಡುವಿದ್ದಾಗ ಅವುಗಳನ್ನು ಅದೇ ಹಳೆಯ ಖುಷಿಯಲ್ಲಿಯೇ ಓದುತ್ತೇನೆ. ನನ್ನ ಪಾಲಿಗದೊಂದು ದಿವ್ಯ ಅನುಭೂತಿ. ಮತ್ತೆ ಬಾಲ್ಯಕ್ಕೆ ಮರಳಿದ ಅನುಭವ. ಮನಸ್ಸಿನ ಒತ್ತಡಗಳನ್ನು ತಿಳಿಗೊಳಿಸುವ ಸಂಜೀವನಿ ಸದೃಶ ಸಂಗಾತಿ

17376 ನೊಂದಾಯಿತ ಬಳಕೆದಾರರು
6658 ಸಂಪನ್ಮೂಲಗಳು