ಭರತವಿಳಿತಗಳು

ಚಂದ್ರನು ನಮ್ಮ ಭೂಗ್ರಹದಿಂದ ಸುಮಾರು ೪೦೦,೦೦೦ ಕಿಲೋ ಮೀಟರ್‌ಗಿಂತಲೂ ಸ್ವಲ್ಪ ಹೆಚ್ಚು ದೂರದಲ್ಲಿದ್ದಾನೆ. ಆದರೂ ಬೇರೆ ಆಕಾಶಕಾಯಗಳಿಗೆ ಹೋಲಿಸಿದರೆ ಚಂದ್ರನು ನಮಗೆ ಬಹಳ ಸಮೀಪವೆಂದೇ ಹೇಳಬಹುದು. ನಮಗೆ ಗೊತ್ತಿರುವ ಎಲ್ಲಾ ಆಕಾಶ ಕಾಯಗಳ ಪೈಕಿ ಭೂಮಿಯ ಮೇಲೆ (ಸೂರ್ಯನ ಜೊತೆ) ಹೆಚ್ಚು ಪ್ರಭಾವ ಬೀರುವ ಆಕಾಶ ಕಾಯವೆಂದರೆ ಚಂದ್ರನೇ. ಕರಾವಳಿ ತೀರದಲ್ಲಿ ವಾಸಿಸುವ ಜನರಿಗೆ ದಿನಕ್ಕೆ ಎರಡು ಬಾರಿ ಸಾಗರದಲೆಗಳ ಉಬ್ಬರದ ಅನುಭವಕ್ಕೆ ಬರುತ್ತಿರುತ್ತದೆ. ಇದು ಅಮಾವಾಸ್ಯೆಯ ರಾತ್ರಿಯಂದು ಉಬ್ಬರದ ಅಲೆಗಳು ಇನ್ನೂ ಭೋರ‍್ಗರೆಯುತ್ತವೆ.  ಸ್ವಾರಸ್ಯದ ಅಂಶವೆಂದರೆ ಅಲೆಗಳ ಉಬ್ಬರವಿಳಿತಕ್ಕೂ ಸಾಗರದ ಅಂತರಾಳದಲ್ಲಿರುವ ಯಾವುದಕ್ಕೂ ಸಂಬಂಧವಿರುವುದಿಲ್ಲ. ಚಂದ್ರ ಬಿಂಬದ ಕೆಲವು ಹಂತಗಳಿಗೆ (phases of the moon) ಸರಿಯಾಗಿ ಸಾಗರದ ನಿರ್ದಿಷ್ಟ ಭರತವಿಳಿತಗಳು ಆಗುವುದು ಭೂಮಿಯೊಡನೆ ಚಂದ್ರನ ಪಾರಸ್ಪರಿಕ ಕ್ರಿಯೆಯ ಕಾರಣದಿಂದಾಗಿಯೇ ಎಂಬುದು ಇದರಿಂದ ನಮಗೆ ಗೊತ್ತಾಗುತ್ತದೆ (ಚಿತ್ರ ೧ ನ್ನು ಗಮನಿಸಿ). ಈ ಪಾರಸ್ಪರಿಕ ಕ್ರಿಯೆ ನಡೆಯುವುದು ಗುರುತ್ವಾಕರ್ಷಣ ಶಕ್ತಿಯ ಕಾರಣದಿಂದ.  
 
ಚಂದ್ರನಿಗೆ ಹತ್ತಿರವಾಗಿರುವ ಭೂಮಿಯ ಭಾಗದ  ಮೇಲಿನ ಸಾಗರದ ನೀರು ಚಂದ್ರನ ಗುರುತ್ವಾಕರ್ಷಣೆಯ ಬಲದ ಕಾರಣದಿಂದಾಗಿ ಮೇಲಕ್ಕೆ ಸೆಳೆಯಲ್ಪಡುತ್ತದೆ ಮತ್ತು ಇದರಿಂದಾಗಿ ಸಾಗರದ ನೀರು ಹೊರಕ್ಕೆ ಉಬ್ಬುತ್ತದೆ (tidal bulge). ಆದರೆ ಅದೇ ಸಮಯದಲ್ಲಿ ಭೂಮಿಯ ಗುರುತ್ವಾಕರ್ಷಣ ಬಲವು ಈ ನೀರನ್ನು ಮತ್ತೆ ಹಿಂದಕ್ಕೆ ಸೆಳೆದುಕೊಳ್ಳುತ್ತದೆ ಮತ್ತು ಇದರಿಂದಾಗಿ ಈ ನೀರು ಮತ್ತೆ ಎತ್ತರದ ಅಲೆಗಳ ರೂಪದಲ್ಲಿ ಬಂದು ದಡಕ್ಕೆ ಅಪ್ಪಳಿಸುತ್ತದೆ. 
 
ಇಲ್ಲಿ ಇನ್ನೊಂದು ಆಸಕ್ತಿಕರ ವಿಚಾರವಿದೆ. ಅದೇನೆಂದರೆ, ಇಂತಹುದೇ ಇನ್ನೊಂದು ಉಬ್ಬು ಚಂದ್ರನಿಗೆ ವಿರುದ್ಧ ದಿಕ್ಕಿನಲ್ಲಿ ಇರುವ ಭೂಮಿಯ ಭಾಗದಲ್ಲೂ ಉಂಟಾಗುತ್ತದೆ. ಚಂದ್ರನಿಗೆ ಸಮೀಪವಿರುವ ಬದಿಯಂತಲ್ಲದೆ, ವಿರುದ್ಧ ಬದಿಯಲ್ಲಿ ಉಂಟಾಗುವ ಉಬ್ಬಿಗೆ ಕಾರಣವಾಗುವುದು ಜಡತ್ವ (inertia). ಘನವಸ್ತುಗಳಂತಲ್ಲದೆ, ನೀರಿನ ಚಲನೆ ಮಂದಗತಿಯಲ್ಲಿರುತ್ತದೆ. ನೀರಿನ ಬಟ್ಟಲೊಡನೆ ಆಟ ಆಡಿದ್ದರೆ ಇದು ನಿಮ್ಮ ಗಮನಕ್ಕೆ ಬಂದಿರಬಹುದು. ನೀವು ನೀರು ತುಂಬಿದ ಬಟ್ಟಲನ್ನು ಅಲ್ಲಾಡಿಸುವ ಪ್ರಯತ್ನ ಮಾಡಿದಾಗ ಅದರಲ್ಲಿರುವ ನೀರು ಅಲ್ಲೇ ನಿಲ್ಲುವ ಪೃವೃತ್ತಿ ತೋರಿಸುತ್ತದೆ. ಇದೇ ರೀತಿಯಾಗಿ, ಚಂದ್ರನ ಗುರುತ್ವಾಕರ್ಷಣ ಶಕ್ತಿಯಿಂದ ಭೂಮಿಯು ಚಂದ್ರನೆಡೆಗೆ  ಸೆಳೆತ ಅನುಭವಿಸುತ್ತ್ತಾ ಇರುವಾಗ, ಸಾಗರದ ನೀರು ತಾನು ಇರುವಲ್ಲೆ ನಿಲ್ಲುವ ಪೃವೃತ್ತಿ ತೋರಿಸುತ್ತದೆ. ಇದರ ಪರಿಣಾಮವಾಗಿ ವಿರುದ್ಧ ದಿಕ್ಕಿನಲ್ಲಿ (ಅಂದರೆ ಚಂದ್ರನಿಗೆ ಅಭಿಮುಖವಾಗಿರದ ಭೂಮಿಯ ಭಾಗದಲ್ಲಿ) ನಿಮಗೆ ಉಬ್ಬು ಕಾಣಿಸಿಕೊಳ್ಳುತ್ತದೆ. 
 
19654 ನೊಂದಾಯಿತ ಬಳಕೆದಾರರು
7777 ಸಂಪನ್ಮೂಲಗಳು