ಬಲು ಸುಲಭ ಮೈ ಡಿಯರ್ ವಾಟ್ಸನ್! -ಈಶಾನ್ ಮತ್ತು ಸಂಗೀತಾ ರಾಜ್

ವಿಜ್ಞಾನಕ್ಕೆ ಸಂಬಂಧಿಸಿದಂತೆ ಹೊಸ ದೃಷ್ಟಿಕೋನಗಳನ್ನು ಕೊಡಬಹುದಾದ ಯಾವುದಾದರೂ ರಸವತ್ತಾದ ಪುಸ್ತಕವೊಂದರ ನಿರೀಕ್ಷೆಯಲ್ಲಿ ನೀವಿದ್ದರೆ, ಇದೋ ಇಲ್ಲಿದೆ ನೋಡಿ, ಅಂತಹ ಒಂದು ಪುಸ್ತಕ:The Agenda of the Apprentice Scientist. ಇದನ್ನು ನಾವು ಕನ್ನಡದಲ್ಲಿ ಅರ್ಥಮಾಡಿಕೊಳ್ಳುವ ಸಲುವಾಗಿ ’ಅಭ್ಯಾಸಿ ವಿಜ್ಞಾನಿಯೊಬ್ಬನ ಕಾರ್ಯಸೂಚಿ’ ಎಂದು ಕರೆಯಬಹುದು. ಈ ಲೇಖನದಲ್ಲಿ ಈಶಾನ್ ಮತ್ತು ಸಂಗೀತಾ ರಾಜ್ ಎಂಬ ತಾಯಿ ಮಗನ ಜೋಡಿಯೊಂದು ಈ ಪುಸ್ತಕವನ್ನು ಓದುವಾಗ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ನೀವು ಕೂಡ ಅವರ ಸಂತೋಷದಲ್ಲಿ  ಜೊತೆಗೂಡಿರಿ.  

The Agenda of the Apprentice Scientist. - ಈ ಪುಸ್ತಕದ ಲೇಖಕರು ನಿಕೊಲೆ ಒಸ್ತ್ರೊವ್‌ಸ್ಕಿ (Nicole Ostrowsky) ಮತ್ತು ಈ ಪುಸ್ತಕಕ್ಕೆ ಚಿತ್ರ ಬಿಡಿಸಿದವರು ತೆರೆಸಾ ಬ್ರೋನ್ (Theresa Bronn). ಈ ಪುಸ್ತಕವನ್ನು ’ ೭ ರಿಂದ ೧೦೭ ರ ತನಕ ಎಲ್ಲರಿಗೂ ಅರ್ಥವಾಗುವಂತಹ ಪುಸ್ತಕ’ ಎಂದು ಪರಿಗಣಿಸಲಾಗಿದೆ. ಈ ಪುಸ್ತಕದಲ್ಲಿ ಮನೆಯಲ್ಲಿಯೇ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿ ಮಾಡಬಹುದಾದ ಪ್ರಯೋಗಗಳ ಮೂಲಕ, ಹಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು (೯ ರಿಂದ ೧೩ ವರ್ಷ) ಅರ್ಥಮಾಡಿಕೊಳ್ಳಬಹುದಾದ ಪರಿಕಲ್ಪನೆಗಳನ್ನು ವಿವರಿಸಲಾಗಿದೆ. ಇದು ಕುತೂಹಲ ಮತ್ತು ವಿನೋದವನ್ನು ಮಿಳಿತಗೊಳಿಸಿ ವೈಜ್ಞಾನಿಕ ಅನ್ವೇಷಣೆಯ ಪ್ರಕ್ರಿಯೆಯಲ್ಲಿ ನಮ್ಮ ಆಸಕ್ತಿಯನ್ನು ಪ್ರಚೋದಿಸುತ್ತದೆ. ಹಾಗಾಗಿ ವಿಜ್ಞಾನಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬ ಮನೋಭಾವ ಹೊಂದಿದವರಿಗೆ ಕೂಡ ಈ ಪುಸ್ತಕವು ವಿಜ್ಞಾನವನ್ನು ಕುರಿತಂತೆ ಆಸಕ್ತಿಯನ್ನು ಹುಟ್ಟಿಸುತ್ತದೆ.

ಹಲವಾರು ದಶಕಗಳ ಕಾಲ ಸಂಶೋಧನಾ ವಿಜ್ಞಾನಿಯಾಗಿ ಕೆಲಸ ಮಾಡಿರುವ ಈ ಪುಸ್ತಕದ ಲೇಖಕರಾದ ನಿಕೊಲೆ ಒಸ್ತ್ರೊವ್‌ಸ್ಕಿNicole Ostrowsky ಈಗ ಫ್ರಾನ್ಸ್ ದೇಶದ ನೀಸ್ ವಿಶ್ವವಿದ್ಯಾಲಯದ ಭೌತವಿಜ್ಞಾನ ಮತ್ತು ಘನೀಕೃತ ಭೌತದ್ರವ್ಯಗಳ ಪ್ರಯೋಗಶಾಲೆಯಲ್ಲಿ ನಿವೃತ್ತ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಪುಸ್ತಕವು ಮೊದಲು ಪ್ರಕಟವಾಗಿದ್ದು ಫ಼್ರೆಂಚ್ ಭಾಷೆಯಲ್ಲಿ. ಇದನ್ನು ರಾಧಿಕಾ ವಿಶ್ವನಾಥನ್ ಮತ್ತು ಜಿಲಿಯನ್ ರೋಸ್ನರ್ ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ. ಭಾರತದಲ್ಲಿರುವ ಫ಼್ರೆಂಚ್ ರಾಯಭಾರಿ ಕಚೇರಿ ಸಹಯೋಗದೊಂದಿಗೆ ಯೂನಿವರ್ಸಿಟೀಸ್ ಪ್ರೆಸ್ ಈ ಪುಸ್ತಕವನ್ನು ಪ್ರಕಟಿಸಿವೆ. ಫ್ಲಿಪ್‌ಕಾರ್ಟ್ ಮತ್ತು ಅಮೇಜಾನ್ (ಇಂಡಿಯಾ)ದಲ್ಲಿ ರೂ. ೫೫೩ ಮುಖಬೆಲೆಗೆ ಈ ಪುಸ್ತಕವು ಲಭ್ಯವಿದೆ.

ಈಶಾನ್: The Agenda of the Apprentice Scientist. ಈ ಪುಸ್ತಕ ಮೊದಲು ನನ್ನ ಕೈಸೇರಿದ್ದು ನನ್ನ ಅಮ್ಮನ ಸ್ನೇಹಿತೆಯಾದ ಯಾಸ್ಮಿನ್ ಆಂಟಿ ಮೂಲಕ. ಅವರು ಸೆಂಟರ್ ಫ಼ಾರ್ ಲರ್ನಿಂಗ್‌ನಲ್ಲಿ ರಸಾಯನ ಶಾಸ್ತ್ರ ಕಲಿಸುತ್ತಾರೆ. ಓದಲಿಕ್ಕೆಂದು ಅವರ ಹತ್ತಿರ ಇದ್ದ ಪುಸ್ತಕವನ್ನು ನನಗೆ ಎರವಲಾಗಿ ಕೊಟ್ಟರು. ಈ ಪುಸ್ತಕವನ್ನು ಓದಿ, ಅದರಲ್ಲಿದ್ದ ಕೆಲವು ಪ್ರಯೋಗಗಳನ್ನು ಮಾಡಿ ನೋಡಿಯಾದ ಮೇಲೆ ನನಗೆ ಈ ಪುಸ್ತಕದ ನನ್ನದೇ ಒಂದು ಪ್ರತಿ ಬೇಕು ಎಂದೆನಿಸಿತು.

’ಮನೆಯಲ್ಲಿ ಮಾಡಬಹುದಾದ ಪ್ರಯೋಗಗಳು’ ಎಂಬ ಹೆಸರಿನಲ್ಲಿ ಪ್ರಕಟವಾಗುವ ಇತರ ಎಲ್ಲಾ ಪುಸ್ತಕಗಳಿಗಿಂತ ಭಿನ್ನವಾಗಿ,The Agenda of the Apprentice Scientist. ಪುಸ್ತಕ ತನ್ನ ವಚನಕ್ಕೆ ಬದ್ಧವಾಗಿದೆ. ಇದರಲ್ಲಿರುವ ಪ್ರಯೋಗಗಳನ್ನು ಮಾಡಲು ನಮಗೆ ಪೇಪರ್, ಸ್ಟ್ರಾ, ಬಲೂನ್ ಮತ್ತು ಮಂಜುಗಡ್ಡೆಗಳಂತಹ ಮನೆಯಲ್ಲಿ ಸುಲಭವಾಗಿ ಸಿಗುವ ವಸ್ತುಗಳು ಇದ್ದರೆ ಸಾಕು. ಹಾಗಾಗಿ ಪ್ರಯೋಗಗಳನ್ನು ಮಾಡಲು ಕಷ್ಟ ಆಗುವುದಿಲ್ಲ. ಇತ್ತೀಚೆಗೆ ನಾನು ಒಂದು ಪುಸ್ತಕ ನೋಡಿದೆ. ಅದರಲ್ಲಿ ಮನೆಯಲ್ಲಿ ಐಸ್‌ಕ್ರೀಮ್ ತಯಾರಿಸಲು ಅಗತ್ಯವಾದ ವಸ್ತುಗಳಲ್ಲಿ ಎರಡು ಗ್ಯಾಲನ್ ದ್ರವರೂಪದ ನೈಟ್ರೋಜನ್ ಬೇಕು ಎಂದಿತ್ತು!  

The Agenda of the Apprentice Scientist. ಪ್ರತಿ ಪುಟದಲ್ಲಿ ನಿಮಗೆ ಒಂದು ಪ್ರಯೋಗವನ್ನು , ಆ ಪ್ರಯೋಗದ ಬಗ್ಗೆ ಒಂದು ಉಧೃತವಾಕ್ಯವನ್ನು, ಪ್ರಯೋಗದ ವಿವರಣೆಯನ್ನು ಮತ್ತು ಕೊನೆಯಲ್ಲಿ ಪ್ರಯೋಗಶಾಲೆಯ ಮೇಲಂಗಿಯ ತುಂಬ ಚಂದದ, ಆಸಕ್ತಿದಾಯಕ ಚಿತ್ರವೊಂದನ್ನು ಕೊಡಲಾಗಿದೆ. ಪ್ರತಿ ಪುಟದ ಮೇಲ್ಭಾಗದಲ್ಲಿ ಚಟುವಟಿಕೆಯ ಶೀರ್ಷಿಕೆ ಇದ್ದು, ಅದರ ಕೆಳಗೆ ಅದನ್ನು ಮಾಡುವ ವಿಧಾನವನ್ನು ವಿವರಿಸಲಾಗಿದೆ. ವರ್ಷದ ಪ್ರತಿಯೊಂದು ದಿನ ಕೂಡ ಒಂದೊಂದು ಪ್ರಯೋಗ ಮಾಡುವ ಹಾಗೆ ಈ ಪುಸ್ತಕವನ್ನು ಆಯೋಜಿಸಿರುವ ಕಾರಣ ಈ ಪುಸ್ತಕದಲ್ಲಿ ಪುಟ ಸಂಖ್ಯೆಯ ಬದಲಿಗೆ ನಿಮಗೆ ತಾರೀಖು ಕಾಣಿಸುತ್ತದೆ, ಉದಾಹರಣೆಗೆ ಮಾರ್ಚ್ ೩ ಅಥವಾ ಜೂನ್ ೧೦, ಹೀಗೆ. ಪುಟದ ಮಧ್ಯಭಾಗದಲ್ಲಿ ಓದುಗರು ತಮ್ಮ ಗಮನಕ್ಕೆ ಬಂದ ಅಂಶಗಳನ್ನು ದಾಖಲಿಸಲು ಖಾಲಿ ಜಾಗವನ್ನು ಬಿಡಲಾಗಿದೆ. ಚಟುವಟಿಕೆಯ ಬಗ್ಗೆ ಒಂದು ಉಧೃತವಾಕ್ಯ (quote) ಕೂಡ ಇದೆ. ಕೆಲವೊಮ್ಮೆ ಈ ಉಧೃತವಾಕ್ಯಗಳು ತುಂಬಾ ಹಾಸ್ಯಮಯವಾಗಿದ್ದರೆ, ಇನ್ನು ಕೆಲವೊಮ್ಮೆ ತುಂಬಾ ತಾತ್ವಿಕವಾಗಿಯೂ, ಇನ್ನು ಕೆಲವೊಮ್ಮೆ ಪ್ರೇರಣಾತ್ಮಕವೂ ಆಗಿರುತ್ತವೆ. ಅಗಸ್ಟ್ ೨೨ ಮತ್ತು ೨೩ ನೇ ತಾರೀಖಿಗೆ ಇರುವ ಎರಡೂ ಚಟುವಟಿಕೆಗಳು ಘನೀಕರಣದ ಬಗ್ಗೆ ಇವೆ; ಆದರೆ ಅದಕ್ಕೆ ಕೊಟ್ಟಿರುವ ಉಧೃತವಾಕ್ಯ  ತುಂಬ ಬೇರೆಯಾಗಿದೆ. ೨೨ನೇ ತಾರೀಖಿನ ಉಧೃತವಾಕ್ಯ, ನಿಜವಾದ ಸ್ನೇಹವು ಚಳಿಗಾಲದಲ್ಲಿ (ಕಷ್ಟಬಂದಾಗ) ಮುದುಡಿ ಹೋಗುವುದಿಲ್ಲ ಎಂದಿದ್ದರೆ, ೨೩ನೇ ತಾರೀಖಿಗೆ ಅದು ಹೀಗಿದೆ: ಬಿಸಿಹಾಲು ಕುಡಿದು ನಾಲಗೆ ಸುಟ್ಟುಕೊಂಡವ ಐಸ್‌ಕ್ರೀಮ್ ಅನ್ನು ಉಫ್ ಎಂದು ತಣಿಸಿ ತಿಂದನಂತೆ. ಪುಟದ ಕೊನೆಗೆ ಅಪ್ರೆಂಟಿಸ್ ಪ್ರಯೋಗಾಲಯದ ಮೇಲಂಗಿಗಳು ಸೇರಿ ಪ್ರಯೋಗ ಮಾಡುವ ಮತ್ತು ಬಂದ ಬಂದ ಫಲಿತಾಂಶವನ್ನು ಹೋಲಿಸಿ ನೋಡುವ ಮತ್ತು ಆ ಕುರಿತಾಗಿ ಹಾಸ್ಯ ಚಟಾಕಿ ಹಾರಿಸುವ ಚಿತ್ರ ಇದೆ.

’ಮನೆಯಲ್ಲಿ ಮಾಡಬಹುದಾದ ಪ್ರಯೋಗಗಳು’ ಎಂಬ ಹೆಸರಿನಲ್ಲಿ ಪ್ರಕಟವಾಗುವ ಇತರ ಎಲ್ಲಾ ಪುಸ್ತಕಗಳಿಗಿಂತ ಭಿನ್ನವಾಗಿ, The Agenda of the Apprentice Scientist. ಪುಸ್ತಕ ತನ್ನ ಶೀರ್ಷಿಕೆಗೆ ಬದ್ಧವಾಗಿದೆ. ಇದರಲ್ಲಿರುವ ಪ್ರಯೋಗಗಳನ್ನು ಮಾಡಲು ನಮಗೆ ಪೇಪರ್, ಸ್ಟ್ರಾ, ಬಲೂನ್ ಮತ್ತು ಮಂಜುಗಡ್ಡೆಗಳಂತಹ ಮನೆಯಲ್ಲಿ ಸುಲಭವಾಗಿ ಸಿಗುವ ವಸ್ತುಗಳು ಇದ್ದರೆ ಸಾಕು.

ಈ ಪುಸ್ತಕದಲ್ಲಿ ಪರಿಕಲ್ಪನೆಗಳನ್ನು ವಿವರಿಸಿರುವ ರೀತಿ ಈ ಪುಸ್ತಕ ನನಗೆ ಇಷ್ಟವಾಗಲು ಇನ್ನೊಂದು ಕಾರಣ. ಬೇಕಿಂಗ್ ಪೌಡರನ್ನು ವಿನೆಗರ್ ಜೊತೆ ಬೆರೆಸಿದಾಗ ಏನಾಗುತ್ತದೆ ಎಂದು ಮಾತ್ರ ಹೇಳುವುದಿಲ್ಲ (ಮಾರ್ಚ್ ೮) - ಅಂದರೆ ವಿನೆಗರ್ ಗುಳುಗುಳಿಸುತ್ತದೆ ಮತ್ತು ಬಲೂನ್ ನಿಧಾನಕ್ಕೆ ಉಬ್ಬುತ್ತದೆ ಎಂಬುದನ್ನು ಮಾತ್ರ ಓದುಗನಿಗೆ ಹೇಳದೆ, ಅದು ಹೇಗಾಗುತ್ತದೆ ಮತ್ತು ಏಕೆ ಹೀಗಾಗುತ್ತದೆ (ಬೇಕಿಂಗ್ ಪೌಡರ್‌ನಲ್ಲಿರುವ ಅಂಶವೊಂದು ವಿನೆಗರ್ ಜೊತೆಗೆ ಸಂವರ್ತಿಸಿ ಇಂಗಾಲದ ಡೈ ಆಕ್ಸೈಡ್ ಅನ್ನು ಉತ್ಪಾದಿಸುತ್ತದೆ. ಇದು ಬಾಟಲನ್ನು ತುಂಬಿ ಬಲೂನನ್ನು ಉಬ್ಬಿಸುತ್ತದೆ) ಎಂಬುದನ್ನು ವಿವರಿಸುತ್ತದೆ.  

ಈ ಪುಸ್ತಕದಲ್ಲಿ ಎಲ್ಲಾ ವಯಸ್ಸಿನ ಓದುಗರು ಓದಿ ಖುಶಿಪಡಬಹುದಾದ ಮತ್ತು ಕಲಿಯಬಹುದಾದ ಪ್ರಯೋಗಗಳಿವೆ. ಇಲ್ಲಿರುವ ಹಲವಾರು ಚಟುವಟಿಕೆಗಳು ತುಂಬ ಸರಳವಾಗಿದ್ದರೂ, ಅದರ ಫಲಿತಾಂಶ ತುಂಬಾ ರೋಚಕವಾಗಿವೆ. ಉದಾಹರಣೆಗೆ, ಕಾರ್ಡ್‌ಬೋರ್ಡ್ ನಳಿಗೆ ಬಳಸಿ ಹೊಗೆ ಸುರುಳಿಗಳನ್ನು ಮಾಡುವುದು (ನವೆಂಬರ್ ೨೪) ಅಥವ ಕಾಗದದಲ್ಲಿ ವಿವಿಧ ವಿಮಾನಗಳನ್ನು ತಯಾರಿಸುವುದು (ಮೇ ೨೫) ಮುಂತಾದವು. ಎಷ್ಟೋ ಬಾರಿ ನಾನು ಹಿರಿಯರು ಮತ್ತು ಕಿರಿಯರನ್ನು ಒಟ್ಟು ಸೇರಿಸಿ, ಅವರೆಲ್ಲರೂ ಖುಶಿಯಾಗಿ ಈ ಪ್ರಯೋಗಗಳನ್ನು ಮಾಡುವಂತೆ ಮಾಡಿದ್ದೇನೆ.

ಹೆಚ್ಚಿನ ವಿಜ್ಞಾನ ಪುಸ್ತಕಗಳು ಯಾವುದಾದರೂ ಒಂದು ವಿಷಯದ ಬಗ್ಗೆ, ಅಂದರೆ ರಸಾಯನಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ, ಹೀಗೆ ಯಾವುದಾದರೂ ಒಂದು ವಿಷಯದ ಬಗ್ಗೆ ಬರೆಯಲ್ಪಟ್ಟಿವೆ. ಆದರೆ ಈ ಪುಸ್ತಕದಲ್ಲಿ ಈ ಮೂರೂ ವಿಷಯಗಳ ಮೂಲಭೂತ ಅಂಶಗಳು ಒಳಗೊಂಡಿವೆ. ಈ ಪುಸ್ತಕದ ಇನ್ನೊಂದು ವಿಶೇಷತೆ ಎಂದರೆ, ಇದನ್ನು ವಿಷಯಾಧಾರಿತ ವಿಭಾಗಗಳಾಗಿ ವಿಂಗಡಿಸಿಲ್ಲ, ಬದಲಿಗೆ ಕೆಲವು ವಿಷಯಗಳನ್ನು (ಉದಾಹರಣೆಗೆ, ಉಷ್ಣತೆ, ಶಬ್ದ, ಇತ್ಯಾದಿ) ಒಟ್ಟಾಗಿ ಇಡಲಾಗಿದೆ. ಈ ಪುಸ್ತಕದಲ್ಲಿರುವ ಒಟ್ಟು ೩೬೫ ಪ್ರಯೋಗಗಳನ್ನು ದಿನಕ್ಕೊಂದರಂತೆ ಅನುಕ್ರಮವಾಗಿ ವರ್ಷ ಪೂರ್ತಿ ಮಾಡಬಹುದು ಅಥವ ನಿಮಗೆ ಇಷ್ಟವಾದುವುಗಳನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಿಕೊಂಡು ಮಾಡಬಹುದು. ಕೆಲವು ಚಟುವಟಿಕೆಗಳಿಗೆ ಒಂದಕ್ಕಿಂತ ಹೆಚ್ಚಿನ ಪುಟಗಳಲ್ಲಿ ವಿವರಣೆ ಕೊಟ್ಟಿದ್ದರೆ, ಇನ್ನು ಕೆಲವು ಪ್ರಯೋಗಗಳನ್ನು ಮಾಡಲು ಒಂದಕ್ಕಿಂತ ಹೆಚ್ಚು ದಿನಗಳು ಬೇಕಾಗುತ್ತವೆ. ಈ ಪ್ರಯೋಗಗಳನ್ನು ಸರಿಯಾದ ಕ್ರಮದಲ್ಲಿ ಮಾಡುವುದು ಅಗತ್ಯ.

ಚಿತ್ರ. ೧. The Agenda of the Apprentice Scientist. ಚಿತ್ರ ಕೃಪೆ: ಈಶಾನ್ ಮತ್ತು ಸಂಗೀತಾ ರಾಜ್.
 
ಈ ಪುಸ್ತಕದಲ್ಲಿ ನನ್ನನ್ನು ಗೊಂದಲಕ್ಕೆ ಈಡು ಮಾಡಿದ ಒಂದೇ ವಿಷಯವೆಂದರೆ ಅದರ ಪರಿವಿಡಿ. ಉದಾಹರಣೆಗೆ, ನಾನು ಈ ಮೊದಲೇ ಹೇಳಿದ ಹೊಗೆ ಉಂಗುರ ಪ್ರಯೋಗ ಎಲ್ಲಿದೆ ಎಂದು ಹುಡುಕಲು ’ಹೊಗೆ’ ಅಥವ ’ಉಂಗುರ ಎಂಬ ಎರಡು ಪದಗಳನ್ನು ಸುಳಿವು ಪದವಾಗಿಟ್ಟುಕೊಂಡು ಹುಡುಕಿದರೆ, ಆ ಪ್ರಯೋಗ ಎಲ್ಲಿದೆ ಎಂದು ನನಗೆ ಗೊತ್ತಾಗಲಿಲ್ಲ; ಏಕೆಂದರೆ ಈ ಪ್ರಯೋಗ ’ಧೂಪದ್ರವ್ಯ (Incense)’ ಎಂಬ ವಿಷಯದಡಿಯಲ್ಲಿತ್ತು. ವಿನೆಗರ್ ಮತ್ತು ಬೇಕಿಂಗ್ ಸೋಡಕ್ಕೆ ಸಂಬಂಧಪಟ್ಟ ಪ್ರಯೋಗ ಹುಡುಕಿದಾಗ, ಅದು ನನಗೆ ಬಲೂನ್ ವಿಷಯದಡಿಯಲ್ಲಿ ಸಿಕ್ಕಿತು. ಇನ್ನೊಂದು ಉದಾಹರಣೆ ಅಂದರೆ, ಈ ಪ್ರಖ್ಯಾತ ವೈನ್ ಗ್ಲಾಸ್ ಪ್ರಯೋಗ (Wine glass): ಈ ಪ್ರಯೋಗದಲ್ಲಿ ತೆಳುವಾಗಿ ವಿನೆಗರ್ ಹಚ್ಚಿದ ವೈನ್ ಗ್ಲಾಸಿನ ಅಂಚಿನ ಮೇಲೆ ನಿಮ್ಮ ಬೆರಳನ್ನು ನವಿರಾಗಿ ಚಲಿಸಿ ವೈನ್ ಗ್ಲಾಸ್ ಹಾಡುವಂತೆ ನೀವು ಮಾಡಬಹುದು. ಇದನ್ನು ನನಗೆ ನನ್ನ ಸ್ನೇಹಿತನಿಗೆ ತೋರಿಸಬೇಕಿತ್ತು. . ನಾನು ಪರಿವಿಡಿಯಲ್ಲಿ ಇಂಗ್ಲಿಷ್ ಅಕ್ಷರ ’W’ ಅಡಿಯಲ್ಲಿ ’Wine glass ಮತ್ತು ’V ಅಡಿಯಲ್ಲಿ  ’ Vinegar’ಗಾಗಿ ಹುಡುಕಿದೆ, ಆದರೆ ನನಗೆ ಅದು ಕೊನೆಗೂ ಸಿಕ್ಕಿದ್ದು ’P’ (Pitch) ಅಡಿಯಲ್ಲಿ. ಪರಿವಿಡಿಯಲ್ಲಿ ಪ್ರಯೋಗದ ಹೆಸರುಗಳನ್ನು ಕೊಟ್ಟಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು ಎಂದು ನನಗನ್ನಿಸುತ್ತದೆ.

ಕೊನೆಯದಾಗಿ ಹೇಳುವುದೆಂದರೆ, The Agenda of the Apprentice Scientist. ನಾನು ಇಷ್ಟರ ತನಕ ಓದಿದ ಅತ್ಯುತ್ತಮ ಪುಸ್ತಕಗಳಲ್ಲಿ ಒಂದು. ಇಲ್ಲಿರುವ ಪ್ರತಿಯೊಂದು ಪ್ರಯೋಗ ಕೂಡ ಮಾಡಿ ನೋಡಲೇ ಬೇಕಾಗಿರುವಂತಹುದು.
 

ಸಂಗೀತಾ: ವಿಜ್ಞಾನಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ’ಹೇಗಿದೆ ನೊಡೋಣ’ ಎಂದುಕೊಂಡು ಒಂದು ಸಣ್ಣ ಸಂಶಯದಿಂದ ತಿರುವಿ ಹಾಕುತ್ತೇವಲ್ಲ, ಹಾಗೆ ನಾನು ಈ ಪುಸ್ತಕವನ್ನು ತೆರೆದೆ. ಇದರ ಫ಼್ರೆಂಚ್ ಆವೃತ್ತಿಗೆ ಬರೆದ ಮುನ್ನುಡಿಯನ್ನು ಓದುವಷ್ಟರಲ್ಲಿ ಸ್ವಲ್ಪ ಧೈರ್ಯ ಬಂದು, ಭಾರತೀಯ ಆವೃತ್ತಿಗೆ ಬರೆದ ಮುನ್ನುಡಿಯನ್ನೂ ಓದಿ ಮುಗಿಸಿದೆ. ಅಷ್ಟರಲ್ಲಿ ನನ್ನ ಹಿಂಜರಿಕೆಯೆಲ್ಲಾ ಮಾಯವಾಗಿ, ಅದರ ಜಾಗದಲ್ಲಿ ಕುತೂಹಲ ಮತ್ತು ಮುಂದಕ್ಕೆ ಓದಬೇಕು ಎಂಬ ಆಸಕ್ತಿ ತುಂಬಿಕೊಂಡಿತು.

ಆದರೆ ಮೊದಲ ದಿನದ, ಅಂದರೆ ಜನವರಿ ೧ನೇ ತಾರೀಖಿನ ಪುಟ ತೆಗೆದು ಓದುವಷ್ಟರಲ್ಲಿ ನನ್ನನ್ನು ಮತ್ತೆ ಒಂದೇ ಏಟಿಗೆ ನನ್ನ ೮ನೇ ತರಗತಿಯ ವಿಜ್ಞಾನ ತರಗತಿಯಲ್ಲಿ ಕೂರಿಸಿದಂತಾಯಿತು. ವಿಜ್ಞಾನ ತರಗತಿಯಲ್ಲಿ ಕೊನೆಯ ಬೆಂಚಿನಲ್ಲಿ ಕುಳಿತಿರುತ್ತಿದ್ದ ನಾನು ಎಷ್ಟು ಸಾಧ್ಯವೋ ಅಷ್ಟು ನನ್ನ ವಿಜ್ಞಾನ ಶಿಕ್ಷಕರ ಕಣ್ಣಿಗೆ ಗೋಚರಿಸದಂತೆ ಇರಲು ಪ್ರಯತ್ನ ಪಡುತ್ತಿದ್ದೆ. ಅಂತಹ ನನಗೆ ಈ ಪುಸ್ತಕದ ಮೊದಲ ಪುಟದಲ್ಲಿರುವ ಚಿತ್ರದಲ್ಲಿ ಒಂದು ಪ್ರಯೋಗಶಾಲೆಯ ಮೇಲಂಗಿಯು ಹಿಮ-ಹಳಕಿನ ಚಿತ್ರ ಬಿಡಿಸುತ್ತಾ, ನಾನು ವಿಜ್ಞಾನಿ, ಕಲಾಕಾರ ಅಲ್ಲ, ಎಂದು ಹೇಳುವುದನ್ನು ಕಂಡು, ಅಯ್ಯೋ, ಜಗತ್ತನ್ನು ಅರ್ಥಮಾಡಿಕೊಳ್ಳಲು ಅದನ್ನು ವರ್ಗೀಕರಿಸಿ, ವ್ಯಾಖ್ಯಾನಿಸಿ ನೋಡುವ ಇನ್ನೊಂದು ಪುಸ್ತಕ ಇದು! ಎಂದು ಅನ್ನಿಸಲಾಗಿ, ನಿರಾಸಕ್ತಳಾಗಿ ಈ ಪುಸ್ತಕವನ್ನು ಮುಚ್ಚಿಟ್ಟು, ಅದರ ಇರವನ್ನೇ ಮರೆತುಬಿಟ್ಟೆ.

ಈ ಪುಸ್ತಕವು ನಾನು ತಲುಪಲಾಗದಷ್ಟು ಉತ್ತುಂಗದ ಪ್ರಯೋಗಶಾಲೆಯಲ್ಲಿದ್ದ ’ವಿಜ್ಞಾನ’ ಎಂಬ ಘನ ವಿಷಯವನ್ನು ಕೆಳಗಿಳಿಸಿ, ಅದನ್ನು ನನ್ನ ನಿತ್ಯದ ಅನುಭವದ ಭಾಗವಾಗಿ ಮಾಡಿ, ನನಗೆ ಕೈಗೆಟುಕುವಂತೆ ಮಾಡಿತು.

ಹಾಗೆ ನಾನು ಮರೆತು ಹೋದ ಪುಸ್ತಕ ಆಶ್ಚರ್ಯವೆನ್ನುವಂತೆ ಮತ್ತೆ ಮತ್ತೆ ನನ್ನ ಮುಂದೆ ಪ್ರತ್ಯಕ್ಷವಾಗತೊಡಗಿತು; ಕೆಲವೊಮ್ಮೆ ಊಟದ ಮೇಜಿನ ಮೇಲೆ, ಕೆಲವೊಮ್ಮೆ ಸೋಫಾದ ಮೇಲೆ. ನನ್ನ ಅಡುಗೆ ಮನೆಯ ಮೇಲಂತೂ ಅದರ ಧಾಳಿಗಳು ನಿರಂತರವಾಗತೊಡಗಿದವು; ಮೊಟ್ಟೆ, ಉಪ್ಪು, ವಿನೆಗರ್, ಬೆಂಕಿಕಡ್ಡಿಗಳು, ಮಂಜುಗಡ್ಡೆಗಳು, ಹೀಗೆ ಅದು ಎಗರಿಸುತ್ತಿದ್ದ ವಸ್ತುಗಳು ಲೆಕ್ಕವಿಲ್ಲದಷ್ಟು. ಅಷ್ಟಿಷ್ಟು ಜೀವ ಉಳಿಸಿಕೊಂಡಿದ್ದ ಹೂಕುಂಡಗಳು ಎರೆಹುಳುವಿನ ಹುಡುಕಾಟಕ್ಕೆ ನೆಲಕ್ಕುರುಳಿದ್ದವು; ಮೊಂಬತ್ತಿ, ಪ್ಲಾಸ್ಟಿಕ್ ದಾರ, ತಾಮ್ರದ ತಂತಿ, ಇವುಗಳ ಹುಡುಕಾಟದಲ್ಲಿ ಬಾಗಿಲಿಲ್ಲದ ನನ್ನ ಕಪಾಟುಗಳು ಕಕ್ಕಾಬಿಕ್ಕಿಯಾಗಿದ್ದವು. ಈ ಯಾವುದೇ ದಾಳಿಗೆ ಈ ಪುಸ್ತಕ ನೇರ ಕಾರಣ ಅಲ್ಲದಿದ್ದರೂ, ಅವು ಈಶಾನ್‌ನನ್ನು ಪ್ರಚೋದಿಸಿದ್ದು ಸುಳ್ಳಲ್ಲ.

ಇದರ ಜೊತೆಗೆ, ನನ್ನ ನೆನಪಿನ ಕೋಶದಿಂದ ಸಂಪೂರ್ಣವಾಗಿ ಅಳಿಸಿ ಹೋಗಿದ್ದ, ನನಗರ್ಥವಾಗದ ಜಡತ್ವ, ಪ್ರಸರಣ, ಸಾಂದ್ರತೆ, ಗುರುತ್ವಾಕರ್ಷಣೆ, ಇಲೆಕ್ಟ್ರಾನ್, ಘರ್ಷಣೆ, ಇತ್ಯಾದಿ, ದೊಡ್ಡ ದೊಡ್ಡ ಪದಗಳು ಮತ್ತೆ ನಮ್ಮ ಊಟದ ಹೊತ್ತಿನ, ದೂರ ಪ್ರಯಾಣದ ಸಂಭಾಷಣೆಯ ಭಾಗವಾಗತೊಡಗಿದವು.  

ನನ್ನ ಕುತೂಹಲ ಮತ್ತೆ ಗರಿಗೆದರಿತು ಮತ್ತು ನನಗೆ ಗೊತ್ತಾಗದಂತೆ ನಾನು ಈ ಸಂಭಾಷಣೆಗಳಲ್ಲಿ ಭಾಗಿಯಾಗತೊಡಗಿದೆ. ಕೈಗೊಂಡ ಪ್ರಯೋಗಗಳ ಫಲಿತಾಂಶ ಏನಾಗುತ್ತದೆ ಎಂಬುದನ್ನು ಅವರಷ್ಟೇ ಕಾತರದಿಂದ ಎದುರುನೋಡತೊಡಗಿದೆ.

ಚಿತ್ರ ೨. ಪುಸ್ತಕದ ಒಂದು ಪುಟ. ಚಿತ್ರಕೃಪೆ: ಈಶಾನ್ ಮತ್ತು ಸಂಗೀತಾ ರಾಜ್

ಹಸಿ ಮೊಟ್ಟೆ ಮತ್ತು ಬೇಯಿಸಿದ ಮೊಟ್ಟೆಯ ನಡುವಿನ ವ್ಯತ್ಯಾಸ ಹೇಳಲು ಸಾಧ್ಯವಾಗುವುದು ಒಂದು ಉತ್ತಮ ಕೌಶಲ ಎಂದು ನನಗನಿಸಿತು. ಬೇಯಿಸಿದ ಮೊಟ್ಟೆ ಗಿರಕಿ ಸುತ್ತುವುದು ಮತ್ತು ಹಸಿ ಮೊಟ್ಟೆ ಮಗುಚಿ ಬೀಳುವುದನ್ನು ನೋಡುವುದು ಮಜವೆನಿಸಿತು. ಮೊಟ್ಟೆಯೊಳಗಿರುವ ಲೋಳೆಯು ಮೊಟ್ಟೆಯ ಹೊರಗಿನ ಕವಚದಷ್ಟೆ ವೇಗವಾಗಿ ಸುತ್ತುವುದಿಲ್ಲ ಎಂಬುದು ತಿಳಿದಾಗ ನನಗೆ ’ದ್ರವ’ ಮತ್ತು ’ಘನ’ ವಸ್ತುಗಳ ನಡುವಿನ ವ್ಯತ್ಯಾಸ ಚೆನ್ನಾಗಿ ಅರ್ಥವಾಯಿತು. ದ್ರವ ವಸ್ತುಗಳು ಅವುಗಳು ಇರುವ ಪಾತ್ರೆಯ ಆಕಾರ ಪಡೆದುಕೊಳ್ಳುತ್ತವೆ ಎಂಬುದಷ್ಟೆ ನನಗೆ ನನ್ನ ಶಾಲಾ ಪಠ್ಯಪುಸ್ತಕಗಳಿಂದ ತಿಳಿದದ್ದು.

ನಾನು ಈ ಪುಸ್ತಕವನ್ನು ಮೊದಲು ಅರ್ಥಮಾಡಿಕೊಂಡಿದ್ದು ವಿಜ್ಞಾನ ಪ್ರಯೋಗಗಳ ಪುಸ್ತಕ ಎಂದು; ಆದರೆ ಅದು ಅದಕ್ಕಿಂತ ಹೆಚ್ಚಿನದು ಎಂಬುದನ್ನು ಸಾಬೀತು ಮಾಡಿತು. ಈ ಪುಸ್ತಕವು ನಾನು ತಲುಪಲಾಗದಷ್ಟು ಉತ್ತುಂಗದ ಪ್ರಯೋಗಶಾಲೆಯಲ್ಲಿ ಇದ್ದ ’ವಿಜ್ಞಾನ’ ಎಂಬ ಘನ ವಿಷಯವನ್ನು ಕೆಳಗಿಳಿಸಿ, ಅದನ್ನು ನನ್ನ ನಿತ್ಯದ ಅನುಭವದ ಭಾಗವಾಗಿ ಮಾಡಿ, ನನಗೆ ಕೈಗೆಟುಕುವಂತೆ ಮಾಡಿತು. ಒಂದು ಒಳ್ಳೆಯ ಕಥೆ ಅಥವಾ ಕವನವನ್ನು ನಾವು ಹೇಗೆ ನಮ್ಮ ಸಂತೋಷಕ್ಕಾಗಿ ಓದುತ್ತೇವೆಯೋ ಹಾಗೆ, ಇಲ್ಲಿರುವ ಪ್ರಯೋಗಗಳನ್ನು ಅಭ್ಯಾಸ ಮಾಡಿ, ತೇರ್ಗಡೆಯಾಗಬೇಕು ಎಂಬ ಒತ್ತಡವಿಲ್ಲದೆ, ವಿಜ್ಞಾನ ಜಗತ್ತಿನೊಂದಿಗೆ ನಮ್ಮ ಸಂತೋಷಕ್ಕಾಗಿ ತೊಡಗಿಸಿಕೊಳ್ಳುವ ಅವಕಾಶವನ್ನು ಈ ಪುಸ್ತಕವು ನನಗೆ ಕೊಟ್ಟಿತು.

------------
ಹನ್ನೆರಡು ವರ್ಷದ ಈಶಾನ್‌ಗೆ ವಿಜ್ಞಾನ ವಿಶೇಷ ಆಸಕ್ತಿಯ ಕ್ಷೇತ್ರ. ಈಶಾನ್ ಶಾಲೆಗೆ ಹೋಗುವುದಿಲ್ಲ. ಅವನ ಶಿಕ್ಷಣ ಮನೆಯಲ್ಲಿಯೇ ನಡೆಯುತ್ತದೆ.
ಈಶಾನ್ ತಾಯಿ ಸಂಗೀತಾ ಅವರು ಅಣ್ಣಾಸ್ವಾಮಿ ಮುದಲಿಯಾರ್ ಶಾಲೆಯಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡುತ್ತಿದ್ದು, ಅಲ್ಲಿ ಅವರು ಇಂಗ್ಲಿಷ್ ಭಾಷಾ ಬೋಧನೆ ಮಾಡುತ್ತಾರೆ.

 

18448 ನೊಂದಾಯಿತ ಬಳಕೆದಾರರು
7204 ಸಂಪನ್ಮೂಲಗಳು