ಫರ್ಡಿನಾಂಡೊ ಡಿ ಸಸೂರ ಮತ್ತು ನನ್ನ ಅಪ್ಪ

ಆವಾಗ ನಾನು ಪುಟ್ಟವನಿದ್ದೆ. ಆವಾಗಿನ ವಿಸ್ಮಯವೆ ಒಂದು ಬಗೆ. ಇಂದು ಅವನ್ನೆಲ್ಲ ನೆನಪಿಸಿಕೊಂಡು ಪಡುವ ವಿಸ್ಮಯವೆ ಇನ್ನೊಂದು ಬಗೆ. ಈ ವ್ಯತ್ಯಾಸಗಳ ಬಗೆಗು ವಿಸ್ಮಯಪಡುತ್ತ ನಾನು ಇದನ್ನು ಬರೆಯುತ್ತಿದ್ದೇನೆ. ಆಗ ನನ್ನಷ್ಟಕ್ಕೆ ನಾನು ಯಾವ ಕೆಲಸವನ್ನು ಮಾಡಲಾರದವನಿದ್ದೆ. ತಂದೆ ಏನಾದರು ಕೆಲಸಮಾಡುತ್ತಿದ್ದರೆ ಅವರನ್ನು ಹಿಂಬಾಲಿಸಿಕೊಂಡಿರುತ್ತಿದ್ದೆ. ನನ್ನ ಮನೆಯವರಿಗೆ ನಾನು ಪುಟ್ಟವನಾಗಿ ಕಾಣುತ್ತಿದ್ದರೆ, ಕೆಲಸದವರು ಮಾತ್ರ ನನ್ನನ್ನು ಬೆಳೆದು ದೊಡ್ಡವನಾದವನು ಎಂಬಂತೆ ಪರಿಗಣಿಸಿ ವರ್ತಿಸುತ್ತಿದ್ದರು. ಆ ದಿನ ಅಡಿಕೆ ಕೊಲಿನ ಹತ್ತು ಹಲವು ಕೆಲಸಗಳ ಮಧ್ಯೆ ಅಪ್ಪ ಬಿತ್ತನೆಗೆ ಬೀಜದ ಅಡಿಕೆ ಕೊನೆಗಳನ್ನು ಆಯ್ದು ತೆಗೆದಿರಿಸುತ್ತಿದ್ದರು.

ನಡುಕೊಲಿನ ಆ ಸಮಯ ಬಿಸಿಲು ಬೆಚ್ಚಗೆ ಇರುತ್ತಿತ್ತು. ಗಾಳಿಯಲ್ಲಿ ಮೈಕಚ್ಚುವ ಚಳಿ ಇರುತ್ತಿತ್ತು. ಸಂವೇದನಾತ್ಮಕವಾದ ಆ ಕಾಲದ ಸಂಗತಿಗಳೆಲ್ಲ ಕಿವಿಕಚ್ಚಿ ಹೇಳಿದಷ್ಟು ಸ್ಫುಟವಾಗಿ ನೆನಪಿನಲ್ಲಿ ಉಳಿದಿದೆ.ಕೊಲು ನಮ್ಮದೊಂದು ದೊಡ್ಡತಟ್ಟಿನ ತೋಟದಲ್ಲಿ ಆಗುತ್ತಿತ್ತು. ಆ ಸರಿಯಾದ ಆಯದ ಒಳ್ಬೆಯಲ್ಲಿ ಒಳ್ಳೆಕಟ್ಟು, ಒಳ್ಳೆ ಮಣ್ಣು, ಒಳ್ಳೆ ನೀರಾಶ್ರಯವಿತ್ತು. ಅಲ್ಲಿಯ ಅಡಿಕೆ ಮರಗಳು ವಿಶೇಷ ಎತ್ತರವಾಗಿ ಇದ್ದುವಲ್ಲದೆ ಕಾಂಡ ಬಲಿಷ್ಟವಾಗಿ ಕಬ್ಬಿಣದ ಹಾಗಿದ್ದವು. ಮರದಲ್ಲಿ ಸೋಗೆ ಅಗಲಗಲವಾಗಿ, ಒತ್ತೊತ್ತಾಗಿ ಹೆಚ್ಚಿಗೆ ಇರುತ್ತಿದ್ದವು. ಅಲ್ಲಿಯ ಅಡಿಕೆ ಮರಗಳ ಹಾಳೆ ವಿಶಾಲವಾಗಿ ಇರುತ್ತಿದ್ದವು. ಅಡಿಕೆ ಮರಗಳಿಗೆ ನೀರು ಚೇಪುವುದಕ್ಕೆ ಆ ತೋಟದ ಮರಗಳ ಹಾಳೆಯಿಂದಲೆ ಚಿಳ್ಳಿಮಾಡಿಕೊಳ್ಳುತ್ತಿದ್ದರು. ಕನಿಷ್ಟ ನಾಲ್ಕಾದರು ದೊಡ್ಡ ಕೊನೆಗಳು, ಮತ್ತು ಮುಂದಿನ ವರ್ಷಕ್ಕು ಅದೆ ರೀತಿ ಇರುವ ಸೂಚನೆಯಾಗಿ ಅದರ ಸಿಂಗಾರದ ಹಾಳೆಗಳು ಬಸುರ ಹೊಟ್ಟೆಯ ಹಾಗೆ ಉಬ್ಬಿಕೊಂಡಿರುತ್ತಿದ್ದವು. ಆ ತೋಟದ ಅಡಿಕೆಮರಗಳ ಸಲಿಕೆ ಮತ್ತು ಅಡ್ಡಗಳು ೨೦-೩೦ ವರ್ಷ ಮುಲಾಜಿಲ್ಲದೆ ಬಾಳಿಕೆ ಬರುತ್ತಿದ್ದವು. ಕೊನೆಗಳು ಒತ್ತೊತ್ತಾಗಿ ಅಡಿಕೆಕಾಯಿಗಳಿಂದ ಗಿಡಿದು ತುಂಬಿರುತ್ತಿದ್ದವು. ಅಪ್ಪ ಒಂದೊಂದು ಕೈಯಲ್ಲಿ ಮೂರುನಾಕು ಕೊನೆಗಳನ್ನು ಎತ್ತಿಕೊಂಡು ಒಂದೆಡೆ ಸೇರಿಸಿ ಹೊರೆಮಾಡುತ್ತಿದ್ದರು. ನಾನು ಅವರ ಹಿಂದೆಯೆ, ಒಂದು ಕೊನೆಯನ್ನು ಹಿಡಿದು ಎತ್ತಲಾರದೆ ಎಳೆದಾಡಿ ಗುಡ್ಡೆಗೆ ಸೇರಿಸುವ ಪ್ರಯತ್ನಮಾಡುತ್ತಿದ್ದೆ. ಆದರೆ ಅವರು ಬೀಜಕ್ಕೆಂದು ಗುರುತಿಸಿದ ಕೊನೆಯನ್ನು ಎಳೆದಾಡಬಾರದು ಅನ್ನುತ್ತಿದ್ದರು. ಅದರ ಸಿಪ್ಪೆ ಹರಿಯಬಾರದು, ಹಣ್ಣು ನಜ್ಜುಗುಜ್ಜಾಗಬಾರದು ಅನ್ನುತ್ತಿದ್ದರು. ನನಗೆ ಆ ಕೊನೆಯೆ ಬೀಜಕ್ಕೆ ಯಾಕೆ ಬೇಕು ಎಂಬ ಪ್ರಶ್ನೆಯಾಗುತ್ತಿತ್ತು. ಆಗವರು ಒಂದು ಕೊನೆಯಿಂದ ಒಂದೆರಡು ಹಣ್ಣಡಿಕೆಯನ್ನು ಆಯ್ದು, ಅದನ್ನು ಚೂರಿಯಿಂದ ಇಬ್ಬಾಗಮಾಡಿ, ’ನೋಡು’ ಅಂತ ಅದರ ಒಳಗನ್ನು ತೋರುತ್ತಿದ್ದರು. ಆಮೇಲೆ ನಾನು ತಿಳಿದುಕೊಂಡ ಹಾಗೆ, ಈಗ ನನಗೆ ನೆನಪಾಗುವ ಹಾಗೆ, ಅವರು ಇದು ಬೇಡ ಎಂದು ನಿರ್ಧರಿಸಿದ ಅಡಿಕೆ ಕೊನೆಯ ಕಾಯಿಗಳಿಗು, ಇದು ಒಳ್ಳೆಯದಿದೆ ಎಂದು ನಿರ್ಧರಿಸಿದ ಅಡಿಕೆ ಹೋಳುಗಳಿಗು ವ್ಯತ್ಯಾಸವಿರುತ್ತಿದ್ದವು. ಬೀಜಕ್ಕೆ ಆಗಬಹುದು ಎಂದುಕೊಂಡ ಅಡಿಕೆಯ ಬೊಂಡು ಸಣ್ಣಗೆ, ಸಿಪ್ಪೆ ತೆಳ್ಳಗೆ, ಒಳಗಿನ ಅಡಿಕೆ ಬೀಜದ ಗಾತ್ರ ದಪ್ಪಗೆ ಇರುತ್ತಿತ್ತು. ಬೊಂಡು ಕಿರಿದಾದ ಕಾರಣ ಆ ಕಾಯಿಗಳ ತೂಕ ಸಹಜವಾಗಿಯೆ ಹೆಚ್ಚಿಗಿರುತ್ತಿತ್ತು. ಇಂದು ಆ ಎಲ್ಲ ವೈಶಿಷ್ಟ್ಯಗಳು ತರತಮ ಜ್ಞಾನದ ಬಗೆಯಾಗಿ ಇದ್ದುದು ಅರಿವಾಗುತ್ತಿದೆ.

ನಾನು ಸ್ವಲ್ಪ ಬೆಳೆದುದೊಡ್ಡವನಾದ ಮೇಲೆ, ಚಪ್ಪರದ ಕೆಲಸಕ್ಕೆ ಒಂದು ಬಲಿತು ಗಟ್ಟಿಯಾದ ಸತ್ತ ಅಡಿಕೆ ಮರ ಬೇಕಿತ್ತು. ತೋಟದಿಂದ ಕಡಿಸಿಕೊಂಡು ತರುವಂತೆ ಅಪ್ಪ ನನ್ನನ್ನು ಕಳಿಸಿದರು. ಸತ್ತ ಎರಡು ಮರಗಳಲ್ಲಿ ಸ್ವಲ್ಪ ತೆಳ್ಳಗಿದ್ದುದನ್ನು ಬಿಟ್ಟು ದಪ್ಪಗೆ ಮೋಟಾಗಿದ್ದುದನ್ನು ಕಡಿಸಿ ತಂದೆ. ಆದಿನ ಬಹಳ ಕಿರಿಕಿರಿ ಅನುಭವಿಸುತ್ತಿದ್ದ ಅಪ್ಪ, ಆ ಮರ ಸಾಕಷ್ಟು ಬಲಿಯದೆ ಅಳ್ಬೆಯಾಗಿದ್ದುದನ್ನು ಕಂಡು ಬೈದಂತೆ ಹೇಳಿದ್ದರು. ’ಏನಾದರು ಕೆಲಸಮಾಡಬೇಕಿದ್ದರೆ ತರತಮದ ಪರಿವೆ ಇರಬೇಕು. ಎಲ್ಲವನ್ನೂ ಒಂದೆ ಸಮ ನೋಡುವುದಾದರೆ ಅದರಿಂದ ಏನು ಪ್ರಯೋಜನ’ ಎಂದು.

ಕೆಲಸಗಾರಿಕೆಯ ಮೊದಮೊದಲಿನ ಸಾಹಸದ ಸಂದರ್ಭದ ಅವರ ಮಾತುಗಳು ಮನಸ್ಸಿನಲ್ಲಿ ಊರಿಕೊಳ್ಳುತ್ತಿದ್ದವು. ಅಪ್ಪ ಬಹಳ ಸಲ ಅಸಮಾಧಾನ ಪಟ್ಟುಕೊಳ್ಳುತ್ತಿದ್ದುದು, ’ತರತಮದ ಪರಿವೆಯಿಲ್ಲದೆ ಕೆಲಸಮಾಡುತ್ತಿಯಾ’ ಎಂಬ ವಿಷಯಕ್ಕೆ ಇರುತ್ತಿತ್ತು. ಆದರೆ ಅವುಗಳ ಅನುಭವ ಗಾಢವಾದುದು ನನ್ನದೆ ಜವಾಬ್ದಾರಿ ಮೇಲೆ ಬದುಕನ್ನು ರೂಪಿಸಿಕೊಳ್ಳಲು ಪ್ರಾರಂಭಿಸಿದ ಮೇಲೆ. ನಾನು ವ್ಯವಸಾಯ ಪ್ರಾರಂಭಿಸಿದ ಮೇಲೆ ಪ್ರತಿಕ್ಷಣವೂ ತರತಮದ ಪರಿವೆಯ ಮಹತ್ವವನ್ನು ತೀವ್ರವಾಗಿ ಅನುಭವಿಸತೊಡಗಿದೆ.

ಈಗ ಅಪ್ಪ ಕಲಿಸಿದ ಇನ್ನೊಂದು ತರತಮದ ಪರಿವೆಯನ್ನು ಹೇಳಿಕೊಳ್ಳುತ್ತೇನೆ.

ತೋಟದಲ್ಲಿ ಚಿಕ್ಕಿನ ಗಿಡಗಳು ಫಲಕೊಡತೊಡಗಿದ್ದವು. ಅಪ್ಪ ದಿನಾ ಎನ್ನುವ ಹಾಗೆ ಅದರ ಸುತ್ತವೆ ಸುತ್ತಿಬರುತ್ತಿದ್ದರು. ನಾನು ಈ ಕಾಯಿಗಳು ಬಲಿತು ಯಾವಾಗ ಹಣ್ಣಾಗುವವು ಎಂದು ಯೋಚಿಸುತ್ತಿದ್ದೆ. ಅವು ದೊಡ್ಡಗಾಗುವುದನ್ನು ಗಮನಿಸುತ್ತಿದ್ದೆ. ಆದರೆ ತುಂಬ ಸಲ ಗಾತ್ರ ನೋಡಿ ಕುಯ್ದಿಟ್ಟ ಕಾಯಿಗಳು ಬಹಳ ದಿನ ಹಣ್ಣಾಗದೆ, ಮೆತ್ತಗಾದಾಗ ಸಪ್ಪಗೆ ರುಚಿಯಿಲ್ಲದೆ ಇರುವುದಾಗುತ್ತಿತ್ತು. ಅವುಗಳ ಒಳಗಿನ ಬೀಜ ಬಲಿತು ಕಪ್ಪುಗಟ್ಟಿರದೆ ಬೆಳ್ಳಗಿನ ಛಾಯೆಯಲ್ಲಿರುತ್ತಿದ್ದವು. ಆದರೆ ಅಪ್ಪ ಕುಯ್ದಿಟ್ಟ ಕಾಯಿಗಳು ಬೇಗನೆ ಹಣ್ಣಾಗುವುದು ಅಲ್ಲದೆ ಆಹಾ ಅನ್ನುವ? ಸಿಹಿಯಾಗಿ, ಸ್ವಾದತುಂಬಿರುತ್ತಿದ್ದವು.

ನನಗೆ ಚಿಕ್ಕಿನ ಕಾಯಿ ( ಸಪೋಟ)ಸರಿಯಾಗಿ ಬಲಿತುದನ್ನು ಹೇಗೆ ಕಾಣುವುದು ಎಂಬ ಪ್ರಶ್ನೆ ಬಗೆಹರಿಯದೆ ಉಳಿದಿತ್ತು. ಆಗ ಒಂದಿನ ಅಪ್ಪ ಬಲಿತ ಕಾಯಿಯ ಪರೀಕ್ಷೆಯನ್ನು ಹೇಳಿಕೊಟ್ಟರು. ಅದು ಗಾತ್ರಕ್ಕಿಂತ ಬೇರೆಯದೆ ಆದ ತರತಮದ ಪರಿಕಲ್ಪನೆಯನ್ನು ಮೂಡಿಸಿತು. ಚಿಕ್ಕಿನ ಕಾಯಿಯ ತುದಿಯ ಮುಳ್ಳು ಉದುರಿದೆಯೆ ನೋಡು ಹೇಳಿದರು, ಅದರ ತೊಟ್ಟಿನ ಬುಡ ಹಳ್ಳವಾಗಿದೆಯೆ ನೋಡು ಹೇಳಿದರು. ಎಳಸು ಮತ್ತು ಬಲಿತ ಕಾಯಿಯ ಮೈಯ್ಯನ್ನು ಉಜ್ಜಿ ಅದರ ಮೈಮೇಲಿನ ದೊರಗು ಉಸುಕು ನಯವಾಗಿದೆಯೆ ನೋಡು ಹೇಳಿದರು, ಉಜ್ಜಿದಾಗ ಕಾಣುವ ಬಣ್ಣದ ಕಂದು ತೆಳ್ಳಗಾಗಿದೆಯೆ ನೋಡು ಹೇಳಿದರು, ಅದರ ಮೈಯ್ಯನ್ನು ಗೀರಿ ಒಳಗಡೆಯ ಹಸಿರು ಬಲಿತ ಕಂದು ಬಣ್ಣಕ್ಕೆ ತಿರುಗಿದೆಯೆ ನೋಡು ಹೇಳಿದರು, ಗೀರಿನಿಂದ ಒಸರುವ ಹಾಲು ಗಟ್ಟಿಯಾಗಿದೆಯೆ ನೋಡು ಹೇಳಿದರು. ಬಲಿಯುತ್ತ ಸಾಗುವ ಕಾಯಿಯಲ್ಲಿ ಆಗುವ ವ್ಯತ್ಯಾಸಗಳ ಪ್ರಪಂಚವನ್ನು ಅವರು ನೋಡಿನೋಡಿಯೆ ತಿಳಿದಿದ್ದರು.
ಅಪ್ಪ ನೋಡಿ ಅನುಭವಿಸಿ ತಿಳಿದ ಜ್ಞಾನ ತರತಮದ ಪರಿವೆಯ ಮೂಲದಿಂದ ಬಂದಿದೆ. ಫರ್ಡಿನಾಂಡೊ ಡಿ ಸಸುರೊ ಭಾಷೆಯ ಬಗೆಗೆ ಹೇಳಿದ ವಿಷಯ ಇದೆ ಅಂತ ಈಚೆಗೆ ನಾನು ತಿಳಿದೆ. ಆತನಿಗೆ ಭಾಷೆ ಎಂದರೆ ತರತಮದಲ್ಲಿ ಹುಟ್ಟಿಕೊಳ್ಳುವ ಅರ್ಥ. ಭಾಷೆ ಎಂದರೆ ತರತಮದಲ್ಲಿ ಆಗುವ ಒಂದು ಸಂರಚನೆ ಅಥವ ವಿನ್ಯಾಸ. ಒಂದು ಸಂಸ್ಕೃತಿಯ ವಿಶ್ಲೇಷಣೆ ಎಂದರೆ ಅದರ ಭಾಷೆಯಲ್ಲಿ/ಪದಗಳಲ್ಲಿ ಕಟ್ಟಿಕೊಂಡ ತರತಮ ಜ್ಞಾನದ ವಿಶ್ಲೇಷಣೆ. ಆತನ ವಿಷಯಗಳನ್ನು ಓದುತ್ತ ನಾನು ಅಪ್ಪನನ್ನು ಬಹಳ ನೆನಪಿಸಿಕೊಂಡೆ. ಜೊತೆಗೆ ಅಪ್ಪನಂತವರು ಜ್ಞಾನ ಕಟ್ಟಿಕೊಳ್ಳುವ ಪ್ರಕ್ರಿಯೆಯ ಮೂಲ ಸ್ವರೂಪವನ್ನು ತಿಳಿಯುವಂತೆ ಮಾಡಿದ, ಭಾಷೆಎಂಬುದು ತರತಮ ಜ್ಞಾನದ ಫಲ ಎಂದ ಸಸೂರನ ಬಗೆಗೂ ಪ್ರೀತಿ ಅನುಭವಿಸತೊಡಗಿದೆ.
ಸ್ವಿಝರ್ಲೆಂಡಿನ ಜಿನೀವಾದ ಫರ್ಡಿನಾಂಡೊ ಡಿ ಸಸೂರ ಯಾವುದೊ ದೇಶ, ಕಾಲದವನು. ನನ್ನ ಅಪ್ಪ ಹುಟ್ಟಿದ್ದ ೧೯೩೨ಕ್ಕೆ ಆತ ತೀರಿಕೊಂಡು ೧೭ ವರ್ಷಗಳು. ಬದುಕಿದ್ದರೆ ಆತ ೭೨-೭೩ರರ ಹಿರೀಕನಿರುತ್ತಿದ್ದ. ಅಪ್ಪನಿಗೆ ಆತ ಮುತ್ತಜ್ಜನ ಹಾಗೆ. ಆತ ದೊಡ್ಡ ಫ್ರೊಫೆಸರ್. ಆದರೆ ಏನನ್ನು ಬರೆದವನಲ್ಲ. ಸತತ ಬೋಧನೆಯಲ್ಲಿದ್ದವನು. ಆತನ ಬೋಧನೆ ಆತ ತನ್ನ ಕಾಣ್ಕೆಯನ್ನೆ ಮಾಡಿಕೊಂಡಿದ್ದ ’ಕೋರ್ಸಸ್ ಇನ್ ಲಿಂಗ್ವಿಸ್ಟಿಕ್ಸ್’ನ ಸುತ್ತ. ಆತನ ತಾತ್ವಿಕತೆಯ ಬರಹಗಳು ಆತನ ಪಾಠ ಮತ್ತು ನೋಟ್ಸ್‌ಗಳನ್ನು ಅವಲಂಬಿಸಿದ್ದು. ಆತನ ಶಿಷ್ಯರು ಬರೆದ ಪುಸ್ತಕದಿಂದ ನಮಗೆ ಲಭಿಸುತ್ತಿರುವುದು. ಅದು ಸಾಕ್ರೆಟಿಸ್ಸನಿಗೆ ಪ್ಲೇಟೊ ಇದ್ದ ರೀತಿಯಲ್ಲಿ. ಗುರು ಶಿಷ್ಯರ ಜ್ಞಾನಲೋಕದ ಭಿನ್ನತೆಯಲ್ಲಿ ಪ್ರೀತಿ ಸಾಧ್ಯಮಾಡಿದ ಕೊಡುಗೆ ಅದು.

ನಮ್ಮ ತೋಟದಲ್ಲಿ ಕೆಲಸಮಾಡುತ್ತಿದ್ದ ಆಳುಗಳು ಯಾಕಾಗಿ ನನ್ನನ್ನು ದೊಡ್ಡವನಂತೆ ಕಾಣುತ್ತಿದ್ದರು ಎಂಬುದು ಮನಸ್ಸಿಗೆ ಬರುತ್ತದೆ. ಮಗುವಿನ ಬಗೆಗಿನ ಪ್ರೀತಿ ಖಂಡಿತಕ್ಕು ಇತ್ತು. ಆದರೆ ಮೇಲ್ಜಾತಿಯ ಮಗುವನ್ನು ಒಳಗೊಳ್ಳುವುದಕ್ಕೆ ಆತನನ್ನು ದೊಡ್ಡವನಂತೆ ನೋಡುವ ಪರಿಸ್ಥಿತಿಯಲ್ಲಿ ಅವರಿದ್ದರು. ಅದರಲ್ಲಿ ಒಂದು ಅಸಹಜತೆ ಇದೆ. ಆದರೆ ಅಸಹಜ ಅನ್ನಿಸಬೇಕಿದ್ದ ವ್ಯತ್ಯಾಸವನ್ನು ಪ್ರೀತಿಯ ಗಾಢತೆ ಮರೆಯಿಸುತ್ತದೆ. ಪ್ರೀತಿ ಭಿನ್ನತೆಯನ್ನು ಒಳಗೊಳ್ಳುವುದಕ್ಕೆ ಅವಶ್ಯಕವಾಗುತ್ತದೆ. ಪರದೇಶೀ ಸಸೂರನನ್ನು, ಆತನ ಪೊದೆ ಮೀಸೆಯ ವಿಲಕ್ಷಣತೆಯನ್ನು ಸಹ್ಯಮಾಡುವ ಪ್ರೀತಿ ಮತ್ತು ಪ್ರೀತಿ ಭಿನ್ನತೆಯ ಮಧ್ಯೆ ಕಟ್ಟಿಕೊಡುವ ಅರ್ಥಸಂಬಂಧ ನನಗೆ ವಿಸ್ಮಯವನ್ನು ಹುಟ್ಟಿಸುತ್ತದೆ.

ಇಂಗ್ಲೀಷಿನಲ್ಲಿ discrimination ಕನ್ನಡದಲ್ಲಿ ತರತಮ, ಎರಡೂ ಪದಗಳೂ ಪರಸ್ಪರ ವಿರುದ್ಧವಾದ ಅರ್ಥಗಳನ್ನು ಒಳಗೊಳ್ಳುವ ಸೋಜಿಗದ ಪದಗಳು! ಅದನ್ನು ಯೋಚಿಸಿ ಆ ಪದಗಳ ಬಗೆಗೆ, ಪದಗಳಿಗೆ ಅರ್ಥಗಳನ್ನು ಕೊಟ್ಟುಕೊಳ್ಳುವ ಮನಸ್ಸಿನ ಬಗೆಗೆ ಸೋಜಿಗವಾಗುತ್ತದೆ. ಅದರ ಒಂದು ಅರ್ಥ ಹೊರಗಿಡುವುದು, ವ್ಯತ್ಯಾಸವನ್ನು ಒಪ್ಪಿಕೊಳ್ಳದಿರುವುದು, ತರತಮಮಾಡುವುದು ಎಂದಿದೆ. ಇನ್ನೊಂದು ಅರ್ಥ ವಿವೇಚನೆ, ಅರ್ಥೈಸುವುದು, ವಿವೇಕ ಎಂದೂ ಇದೆ! ವ್ಯತ್ಯಾಸವನ್ನು ಅರ್ಥೈಸುವ ವಿವೇಕದ ಮೂಲ ತರತಮದ ಪರಿವೆ. ಸಸೂರ ಕಾಣುವ ಅರ್ಥಗಳ ಮೂಲ ಮನಸ್ಸಿನ discrimination ನಲ್ಲಿದೆ.

ಅಪ್ಪ ತರತಮ ಜ್ಞಾನದ ಮಾತಾಡುತ್ತಿದ್ದರು. ಆದರೆ ಅವರು ಸಾಮಾಜಿಕ ತರತಮವನ್ನು ಅಸಹಜ ಎಂದು ನೋಡಲಿಲ್ಲ. ನಮ್ಮ ಮನೆಯ ಕೆಲಸದ ಆಳುಗಳನ್ನು ಅವರು ಒಪ್ಪಿಕೊಳ್ಳಲಾರದ ಮೇಲುಕೀಳಿನ ವ್ಯತ್ಯಾಸದಲ್ಲಿ ನೋಡುತ್ತಿದ್ದರು. ಆ ಕಾರಣದಿಂದ ನನ್ನ ಮತ್ತು ಅಪ್ಪನ ಮಧ್ಯೆ ತುಂಬಿಕೊಳ್ಳಲಾರದ ಕಂದಕ ಹುಟ್ಟಿಕೊಂಡಿತು. ಆ ಕಂದಕದ ಹಿಂಸೆಯನ್ನು ಇಬ್ಬರೂ ಅನುಭವಿಸಿದೆವು. ನಮ್ಮಿಬ್ಬರ ಮಧ್ಯೆಯ ಪ್ರೀತಿಯನ್ನು ಪರಸ್ಪರ ಅನುಭವಿಸಲಾಗದಂತೆ ಕಂದಕ ನಿಂತುಬಿಟ್ಟಿತ್ತು. ಭಿನ್ನತೆಯನ್ನು ಒಪ್ಪಿಕೊಳ್ಳಲಾಗದ್ದೆ ನಾವು ಹತ್ತಿರವಿದ್ದು ದೂರ ಎಂಬಂತೆ ಮಾಡಿತ್ತು. ನನ್ನ ವ್ಯಕ್ತಿತ್ವದ ಹಲವು ವಿಲಕ್ಷಣಗಳಿಗೆ ನಮ್ಮ ಕುಟುಂಬದೊಳಗೆ ನಾನು ಅನುಭವಿಸುತ್ತಿದ್ದ ಹಲವು ತಾರತಮ್ಯದ ಮೂಲಗಳಿರುವುದನ್ನು ನಾನು ಅರ್ಥೈಸಿಕೊಂಡಿದ್ದೇನೆ. ಅದನ್ನು ಮೀರಲಾಗದ ನನ್ನ ದೌರ್ಬಲ್ಯವನ್ನು ನಾನು ಕಾಣುತ್ತೇನೆ. ಅದನ್ನು ಮೀರಲಾಗದ ಪ್ರೀತಿಯ ಮಿತಿಯ ಅನುಭವ ನನಗಿದೆ. ಅಂತಿಮವಾಗಿ ನಮ್ಮ ಪ್ರೀತಿಯ ಮಿತಿ ನಮ್ಮ ವ್ಯಕ್ತಿತ್ವದ ಮಿತಿಯಾಗುವುದು, ಕಂದಕಗಳಿಗೆ ಕಾರಣವಾಗುವುದು ನಿಜ. ಪ್ರೀತಿಯ ಮಿತಿಗಳಿಗೆ ವ್ಯತ್ಯಾಸಗಳನ್ನು ಒಪ್ಪಿಕೊಳ್ಳಲಾಗದ ತರತಮವು ಕಾರಣವಾಗುವುದು ನಿಜ.

ಶಿವರಾಮ ಕಾರಂತರ ಕಾದಂಬರಿಗಳನ್ನು ನೋಡಿದರೆ ಅವರು ವ್ಯತ್ಯಾಸಗಳನ್ನು ಬಹಳ ಅರ್ಥವತ್ತಾಗಿ ಎದುರಿಸಿದವರು ಅನಿಸುತ್ತದೆ. ಅವರ ಒಂದು ಕಾದಂಬರಿ ಶನೀಶ್ವರನ ನೆರಳಲ್ಲಿ ಅನ್ನುವುದು. ನಿರೂಪಕರೂ ಆದ ಲೇಖಕರು ಕಾಡುಕೊಂಪೆಯ ಮುದುಕಿಯೊಬ್ಬರಲ್ಲಿ ಅಪ್ಪಟ ಜೀವನ ಶ್ರದ್ಧೆಯನ್ನು ಕಾಣುತ್ತಾರೆ. ನಾಸ್ತಿಕರಾದ ಕಾರಂತರಿಗೆ ಆ ಮುದುಕಮ್ಮನ ಬದುಕಿನ ಶ್ರದ್ಧೆಯ ಮೂಲವಾದ ದೇವರ ಮೇಲಿನ ನಂಬಿಕೆಯನ್ನು, ಆಸ್ತಿಕತೆಯನ್ನು ಗೌರವಿಸುವ ಹಾಗಾಗುತ್ತದೆ. ಅವರಿಗಾಗಿ ದೇವಸ್ಥಾನ ಒಂದರ ನಿರ್ಮಾಣಕ್ಕೆ ನೆರವಾಗುವುದರಲ್ಲಿ ಅರ್ಥವನ್ನು ಕಾಣುತ್ತಾರೆ. ಆ ಮೂಲಕ ಏಕಮುಖವಾಗಬಹುದಾದ ತಮ್ಮ ನಂಬಿಕೆಯನ್ನು ಕಾರಂತರು ಮೀರುವುದು, ಅದನ್ನು ಮೀರುವ ಅಗತ್ಯವನ್ನು ಕಾಣುವುದು ನಿಜಕ್ಕು ಸೋಜಿಗದ ವಿಷಯ.

- ರಾಮಕೃಷ್ಣ
***

18452 ನೊಂದಾಯಿತ ಬಳಕೆದಾರರು
7212 ಸಂಪನ್ಮೂಲಗಳು