ಪುಟಾಣಿ ಮಕ್ಕಳ ಪೋಷಣೆ, ಶಿಕ್ಷಣ ಮತ್ತು ಶಿಕ್ಷಣದ ಹಕ್ಕು-ಡೋಲಶ್ರೀ ಮೈಸೂರ್

ಈ ಪ್ರಬಂಧವು ಪುಟಾಣಿ ಮಕ್ಕಳ ಪೋಷಣೆ ಮತ್ತು ಶಿಕ್ಷಣದ (ಇಸಿಸಿಇ) ಅಂಶಗಳ ಮೇಲೆ ವಿಶೇಷವಾಗಿ ಭಾರತದಲ್ಲಿನ ಪುಟಾಣಿ ಮಕ್ಕಳ ಶಿಕ್ಷಣದ ಬಗ್ಗೆ  ನೀತಿ ಮತ್ತು ನಿಯಮಗಳು ಹೇಗೆ ಬೆಳೆದವು ಎಂಬುದರ ವಿವರಣೆಯನ್ನು ನೀಡುತ್ತದೆ. ಅಲ್ಲದೇ, ಈ ಪ್ರಮುಖ ನೀತಿಯ ಉದ್ದೇಶದ ಬಗ್ಗೆ ನ್ಯಾಯಾಲಯಗಳು ಹೇಗೆ ಚಿಂತನ ಮಂಥನ ನಡೆಸಿವೆ ಎಂಬುದನ್ನು ಪರಿಶೋಧಿಸುವ ಪ್ರಯತ್ನವನ್ನು ಮಾಡುತ್ತದೆ. ಪುಟ್ಟ ಮಕ್ಕಳ ಶಿಕ್ಷಣ ಕುರಿತು ಸಂವಿಧಾನದಲ್ಲಿ ಏನು ಅವಕಾಶ ಕಲ್ಪಿಸಲಾಗಿದೆ ಎಂದು ಸಂಕ್ಷಿಪ್ತವಾಗಿ ಹೇಳುವುದರೊಂದಿಗೆ ಈ ಲೇಖನವು ಪ್ರಾರಂಭವಾಗಿ ಈ ವಿಷಯದ ಮೇಲಿನ ಕಾನೂನಿನ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳುವುದರತ್ತ ಮುಂದುವರೆಯುತ್ತದೆ.
 
ಸಂವಿಧಾನದಲ್ಲಿ ಪುಟ್ಟ ಮಕ್ಕಳ ಶಿಕ್ಷಣ ಕುರಿತ ಉಪಬಂಧಗಳು:
 
ಭಾರತದ ಸಂವಿಧಾನವು ಸಮಾಜ ಕಲ್ಯಾಣದ ಉದ್ದೇಶಗಳಾದ ಶಿಕ್ಷಣ ಮತ್ತು ಉದ್ಯೋಗವನ್ನು ರಾಜ್ಯದ ನೀತಿ ನಿರ್ದೇಶಕ ತತ್ವಗಳಲ್ಲಿ ಒಳಗೊಂಡಿದೆ. ಈ ನೀತಿ ನಿರ್ದೇಶಕ ತತ್ವಗಳು ಮೂಲಭೂತ ಹಕ್ಕುಗಳಂತಲ್ಲ, ಹೀಗಾಗಿ ರಾಜ್ಯದ ನೀತಿ ನಿರ್ದೇಶಕ ತತ್ವಗಳನ್ನು ಜಾರಿಗೊಳಿಸುವಂತೆ ಯಾವ ನ್ಯಾಯಾಲಯವೂ ಆದೇಶ ನೀಡಲು ಸಾಧ್ಯವಿಲ್ಲ ಅಥವಾ ನೀತಿ ನಿರ್ದೇಶಕ ತತ್ವಗಳ ಉಲ್ಲಂಘನೆಯನ್ನು ಒಳಗೊಂಡಿರುವ ವಿಷಯಗಳ ಬಗ್ಗೆ ಯಾವುದೇ ತೀರ್ಪನ್ನು ನೀಡುವುದು ಸಾಧ್ಯವಿಲ್ಲ. ೨  ಹೀಗಿದ್ದರೂ, ಕಾನೂನು ಮತ್ತು ನಿಯಮಗಳನ್ನು ರೂಪಿಸುವಾಗ ರಾಜ್ಯವು ನೀತಿನಿರ್ದೇಶಕ ತತ್ವಗಳನ್ನು ಮಾರ್ಗದರ್ಶಿಯನ್ನಾಗಿ ಉಪಯೋಗಿಸಿಕೊಂಡು ಅದಕ್ಕೆ ಪ್ರಾಮುಖ್ಯತೆಯನ್ನು ನೀಡುವಂತೆ ಅಪೇಕ್ಷಿಸಲಾಗಿದೆ.
 
ಮೂಲತಃ, ಭಾರತದ ಸಂವಿಧಾನ,೧೯೫೦  ಸಾರ್ವತ್ರಿಕ ಪಾಥಮಿಕ ಶಿಕ್ಷಣವನ್ನು ಜಾರಿಯನ್ನು ಒತ್ತಾಯಪಡಿಸಲಾಗದ ನೀತಿ ನಿರ್ದೇಶಕ ತತ್ವವನ್ನಾಗಿ ತನ್ನ (ಹಿಂದಿನ) ೪೫ನೇ ಅನುಚ್ಛೇದದಲ್ಲಿ ಒಳಗೊಂಡಿತ್ತು. ೩  ಮಕ್ಕಳು ತಮ್ಮ ಹದಿನಾಲ್ಕನೇ ವಯಸ್ಸಿಗೆ ಬರುವವರೆಗೂ ಎಲ್ಲಾ ಮಕ್ಕಳಿಗೂ ರಾಜ್ಯವು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡಬೇಕೆಂದು ಈ ರಾಜ್ಯದ ನೀತಿ ನಿರ್ದೇಶಕ ತತ್ವಗಳಲ್ಲಿ ಹೇಳಲಾಗಿದೆ.
 
 
ಇದಲ್ಲದೇ, ಭಾರತದ ಸಂವಿಧಾನದ ಅಡಿಯಲ್ಲಿರುವ ರಾಜ್ಯ ನೀತಿ ನಿರ್ದೇಶಕ ತತ್ವಗಳಲ್ಲಿ, ಹತ್ತು ವರ್ಷಗಳ ಅವಧಿಯ ಒಳಗೇ ಈ ಮೇಲೆ ಹೇಳಿರುವಂತಹಾ ಉದ್ದೇಶವನ್ನು ಸಾಧಿಸಬೇಕೆಂದು ಹೇಳಿರುವ ಏಕೈಕ ನೀತಿ ನಿರ್ದೇಶಕ ತತ್ವ ಇದಾಗಿದೆ.  ಈ ಸಂವಿಧಾನದ ಉಪಬಂಧದಲ್ಲಿ ಪುಟ್ಟ ಮಕ್ಕಳ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣದ ಎಂದು ಬೇರೆ ಬೇರೆ ಹೇಳಿಲ್ಲ; ಇದು ರಾಜ್ಯದಲ್ಲಿನ ಎಲ್ಲಾ ಮಕ್ಕಳಿಗೂ ಹದಿನಾಲ್ಕು ವರ್ಷದವರೆಗೂ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ನೀಡುವುದು ರಾಜ್ಯದ ಬಾಧ್ಯತೆ ಎಂದಷ್ಟೇ ವಿವರಿಸುತ್ತದೆ.
 
ಮೋಹಿನಿ ಜೈನ್೪ ಮತ್ತು ಉನ್ನಿಕೃಷ್ಣನ್೫ ಪ್ರಕರಣಗಳಲ್ಲಿ ಸರ್ವೋಚ್ಛ ನ್ಯಾಯಾಲಯವು ಹೀಗೆ ಹೇಳಿದೆ:
 
ಮೋಹಿನಿ ಜೈನ್ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ (೧೯೯೨) ಮತ್ತು ಉನ್ನಿಕೃಷ್ಣನ್ ಜೆ.ಪಿ ವಿರುದ್ಧ ಆಂಧ್ರ ಪ್ರದೇಶ ರಾಜ್ಯ ಸರ್ಕಾರ (೧೯೯೩) ಈ ಎರಡು ಪ್ರಕರಣಗಳಲ್ಲಿ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನಲ್ಲಿ ಶಿಕ್ಷಣ ಪಡೆಯಲು ಹಕ್ಕುಗಳನ್ನು ಘೋಷಿಸಿದೆ ಮತ್ತು ಸ್ಪಷ್ಟಪಡಿಸಿದೆ.  ಉನ್ನಿಕೃಷ್ಣನ್‌ರವರ ಪ್ರಕರಣದಲ್ಲಿ, ಸರ್ವೋಚ್ಛ ನ್ಯಾಯಾಲಯವು ಸಂವಿಧಾನದ ೨೧ನೇ ಪರಿಚ್ಛೇದದ ಅಡಿಯಲ್ಲಿ ಖಾತರಿ ನೀಡಲಾದ ಜೀವನದ ಮೂಲಭೂತ ಹಕ್ಕುಗಳ ಭಾಗವಾಗಿ ಶಿಕ್ಷಣದ ಹಕ್ಕನ್ನು ಘೋಷಿಸಿದೆ.  ಶಿಕ್ಷಣದ ಹಕ್ಕು ಎಲ್ಲಾ ನಾಗರಿಕರಿಗೂ ಎಲ್ಲಾ ಹಂತಗಳಲ್ಲೂ ಲಭ್ಯವಾಗಬೇಕು ಎನ್ನುವುದನ್ನು ನ್ಯಾಯಾಲಯವು ಎತ್ತಿ ಹಿಡಿದಿದೆ.  ರಾಜ್ಯವು ಶಿಕ್ಷಣವನ್ನು ಒದಗಿಸಬೇಕು ಎಂದು ನಾಗರಿಕರು ಈಗ ಬೇಡಿಕೆ ಇಡಬಹುದು. ಶಿಕ್ಷಣದ ಹಕ್ಕು ಜೀವನದ ಹಕ್ಕಿಗೆ ಸಹವರ್ತಿ ಎಂಬ ತತ್ವವನ್ನು ನ್ಯಾಯಾಲಯವು ಒತ್ತಿ ಹೇಳಿದೆ.  ಹೀಗಿದ್ದರೂ, ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ಮಕ್ಕಳ ಹದಿನಾಲ್ಕನೇ ವರ್ಷದವರೆಗೆ ಮಾತ್ರ ನೀಡಬೇಕೆಂಬ ನಿರ್ಬಂಧವನ್ನು ಹೇಳಿದೆ. ನ್ಯಾಯಾಲಯವು ಇದಕ್ಕೆ ಈ ರೀತಿಯ ಕಾರಣಗಳನ್ನು ನೀಡಿದೆ:
(೧) ಈ ಸಂವಿಧಾನಾತ್ಮಕ ನಿರ್ದೇಶಕಗಳು ಮಕ್ಕಳಿಗೆ ಮಾತ್ರ ಲಭ್ಯ
(೨) ಎಲ್ಲಾ ಹಂತಗಳಲ್ಲು ಉಚಿತವಾಗಿ ಶಿಕ್ಷಣದ ಹಕ್ಕನ್ನು ನೀಡಲು ರಾಜ್ಯಕ್ಕೆ ಆರ್ಥಿಕ ಸಾಮರ್ಥ್ಯವಿಲ್ಲ.
 
ಜೀವಿಸುವ ಹಕ್ಕನ್ನು ಅರ್ಥಪೂರ್ಣವಾಗಿ ಅನುಭವಿಸಲು ಶಿಕ್ಷಣದ ಹಕ್ಕು ಅತ್ಯಾವಶ್ಯಕ ಎಂದು ಈ ತೀರ್ಪಿನಲ್ಲಿ ಒತ್ತಿ ಹೇಳಲಾಗಿದೆ.  ಹೀಗಿದ್ದರೂ, ಈ ಎರಡು ತೀರ್ಪುಗಳಲ್ಲಿ ಯಾವೊಂದರಲ್ಲೂ ಪುಟ್ಟ ಮಕ್ಕಳ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣದ ನಡುವೆ ವ್ಯತ್ಯಾಸವನ್ನು ಮಾಡಿಲ್ಲ.  ಪುಟ್ಟ ಮಕ್ಕಳ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣದ ನಡುವಿನ ವ್ಯತ್ಯಾಸ ನ್ಯಾಯಾಲಯಕ್ಕೆ ಯಾವುದೇ ಆತಂಕದ ವಿಷಯವಲ್ಲ. ಏಕೆಂದರೆ ಶಿಕ್ಷಣದ ಹಕ್ಕಿನ ಲಭ್ಯತೆ ಯನ್ನು ಹದಿನಾಲ್ಕು ವರ್ಷ ಪೂರ್ಣವಾಗುವುದರ ಒಳಗಿನ ಎಲ್ಲ ಮಕ್ಕಳಿಗೆ ಒದಗಿಸಲಾಗಿದೆ.  
 
ಶಿಕ್ಷಣದ ಮೂಲಭೂತ ಹಕ್ಕು ಮತ್ತು ಪುಟ್ಟ ಮಕ್ಕಳ ಶಿಕ್ಷಣ:
 
೨೦೦೨ರಲ್ಲಿ, ಭಾರತದ ಸಂಸತ್ತು ತನ್ನ ಸಂವಿಧಾನದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕನ್ನ್ಕು ಮೂಲಭೂತ ಹಕ್ಕು ಆಗಿ ತನ್ನ ೨೧ ಎ ಅನುಚ್ಛೇದದಲ್ಲಿ ಸೇರಿಸಿದೆ.೬  ಹೊಸದಾಗಿ ಸೇರಿಸಿರುವ ಈ ಹಕ್ಕನ್ನು ೬ರಿಂದ ೧೪ನೇ ವಯೋಮಾನದ ಒಳಗಿರುವ ಮಕ್ಕಳ ಪ್ರಾಥಮಿಕ ಶಿಕ್ಷಣಕ್ಕೆ ಮಾತ್ರ ನಿರ್ಬಂಧಗೊಳಿಸಿದೆ.  ಇದರ ಫಲವಾಗಿ, ೨೧ ಎ ಪರಿಚ್ಛೇದದ ಉಲ್ಲಂಘನೆಗೆ ಉಚ್ಚ ನ್ಯಾಯಾಲಯವಾಗಲೀ, ಸರ್ವೋಚ್ಚ ನ್ಯಾಯಾಲಯವಾಗಲೀ ಪರಿಹಾರವನ್ನು ಒದಗಿಸಬಹುದು.  ಹೀಗಿದ್ದರೂ, ಆರು ವರ್ಷದ ಒಳಗಿನ ಮಕ್ಕಳಿಗಾಗಿ ಇಸಿಸಿಇಯನ್ನು ಒಳಪಡಿಸಲು ತಿದ್ದುಪಡಿ ಮಾಡಿ ೪೫ನೇ ಪರಿಚ್ಛೇದವನ್ನು ಮಾರ್ಪಡಿಸಲಾಗಿದೆ.  ರಾಜ್ಯವು ಮಕ್ಕಳಿಗೆ ಎಳೆವಯಸ್ಸಿನಲ್ಲಿ ಪೋಷಣೆ ಮತ್ತು ಆರು ವರ್ಷದವರೆಗೆ ಶಿಕ್ಷಣವನ್ನು ಒದಗಿಸುವ ಪ್ರಯತ್ನ ಮಾಡಬೇಕು ಎಂದು ಪರಿಷ್ಕೃತ ೪೫ನೇ ಪರಿಚ್ಛೇದ ಹೇಳುತ್ತದೆ.  ಹೀಗಾಗಿ, ಪುಟ್ಟ ಮಕ್ಕಳ ಶಿಕ್ಷಣವನ್ನು ರಾಜ್ಯ ನೀತಿ ನಿರ್ದೇಶಕ ತತ್ವವನ್ನಾಗಿ ಸೇರಿಸುವುದರಿಂದ, ಪುಟ್ಟ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮ ಅಥವಾ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಯಾವುದೇ ವ್ಯಕ್ತಿಯು ನ್ಯಾಯಾಲಯಕ್ಕೆ ಹೋಗುವುದನ್ನು ತಿದ್ದುಪಡಿಯು ನಿಯಂತ್ರಿಸುತ್ತದೆ. ೭
 
ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ಜವಾಬ್ದಾರಿಯು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ್ದಾದರೆ ಐಸಿಡಿಎಸ್ ಮತ್ತು ಇಸಿಸಿಇಯನ್ನು ಜಾರಿಗೊಳಿಸುವ ಜವಾಬ್ದಾರಿಯು ಮಹಿಳೆ ಮತ್ತು ಶಿಶು ಅಭಿವೃದ್ಧಿ ಸಚಿವಾಲಯದ್ದಾಗಿದೆ.  ಶಿಕ್ಷಣದ ಹಕ್ಕನ್ನು ಅಳವಡಿಸುವಂತೆ ಪ್ರಸ್ತಾಪನೆಯನ್ನು ಮಾಡಿದ್ದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ. ಇದರ ಫಲವಾಗಿ, ಆರು ವರ್ಷದ ಒಳಗಿನ ಮಕ್ಕಳು, ಮಕ್ಕಳ ಶಿಕ್ಷಣದ ಹಕ್ಕಿನ ವ್ಯಾಪ್ತಿಯಿಂದ ಹೊರಗೆ ಉಳಿದರು.
 
ಆಹಾರದ ಹಕ್ಕು ಪ್ರಕರಣ೮
ಪಿ.ಯು.ಸಿ.ಎಲ್. ವಿರುದ್ಧ ಭಾರತದ ಕೇಂದ್ರ ಸರ್ಕಾರ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ಹೊರಡಿಸಿರುವ ಕೆಲವು ಆದೇಶಗಳು ನಮ್ಮ ಈ ಚರ್ಚೆಗೆ ಸೂಕ್ತವೆನಿಸುತ್ತದೆ ಏಕೆಂದರೆ ಭಾರತದ ಅಂಗನವಾಡಿ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸುವುದಕ್ಕೆ ಇವು ಮಹತ್ವದ್ದಾಗಿದೆ.  ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ಸಂಸ್ಥೆಯು ಸಂವಿಧಾನದ ೨೧ ಎ ಪರಿಚ್ಛೇದದ ಅಡಿಯಲ್ಲಿನ ಜೀವನದ ಭರವಸೆಯ ಹಕ್ಕಿನ ಒಂದು ಭಾಗವಾಗಿ ಆಹಾರದ ಹಕ್ಕನ್ನು ಎತ್ತಿ ಹಿಡಿಯುವುದಕ್ಕಾಗಿ ಹೂಡಿದ ಮೂಕೊದ್ದಮೆ ಇದು. ಮೊಕೊದ್ದಮೆಯನ್ನು ಹೂಡಿದವರು, ಉಪವಾಸ ಮತ್ತು ಹಸಿವಿನಿಂದ  ಜನರನ್ನು ರಕ್ಷಿಸುವಂತೆ ಮತ್ತು ಆಹಾರ ಮತ್ತು ಪೌಷ್ಠಿಕತೆಯನ್ನು ಪಡೆಯವಂತೆ ಮಾಡಲು ನ್ಯಾಯಾಲಯವನ್ನು ಕೋರಿದರು.  ಮಧ್ಯಹ್ನದ ಬಿಸಿಯೂಟವನ್ನು ಸಾರ್ವತ್ರಿಕಗೊಳಿಸುವುದು, ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವುದನ್ನೂ ಸೇರಿದಂತೆ ಆಹಾರ ಭದ್ರತೆಗೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ಜಾರಿಗೆ ತರುವಂತೆ ನ್ಯಾಯಾಲಯವು ಅನೇಕ ಆದೇಶಗಳನ್ನು ನೀಡಿತು.  ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರ ಸಲ್ಲಿಸಿದ ವರದಿಗಳ ಮೂಲಕ ಈ ಆದೇಶಗಳ ಅನುಷ್ಠಾನದ ಮೇಲ್ವಿಚಾರಣೆಯನ್ನು ಮಾಡುವಂತೆ ನ್ಯಾಯಾಲಯವು ಒಂದು ಸಮಿತಿಯನ್ನು ನೇಮಕ ಮಾಡಿತು.
 
ಆರು ವರ್ಷದ ಒಳಗಿನ ಮಕ್ಕಳಿಗೆ ಆರೋಗ್ಯ, ಶಿಕ್ಷಣ ಮತ್ತು ಬೆಳವಣಿಯ ಅವಶ್ಯಕತೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿರುವುದರಿಂದ ಭಾರತದಲ್ಲಿ ಇಸಿಸಿಇಯನ್ನು ಅಳವಡಿಸಿಕೊಳ್ಳಲು ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ (ಐಸಿಡಿಎಸ್)ಮಹತ್ವದ್ದಾಗಿದೆ.  ಈ ಯೋಜನೆಗೆ ಸಂಬಂಧಿಸಿದಂತೆ, ಐಸಿಡಿಎಸ್‌ನ ಅಡಿಯಲ್ಲಿ ಅಂಗನವಾಡಿ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸುವಂತೆ ನಿರ್ದೇಶಿಸಿ ರಾಜ್ಯಕ್ಕೆ ನ್ಯಾಯಾಲಯವು ಒಂದು ಆದೇಶವನ್ನು ನೀಡಿತು.೯  ಅನಂತರ -ಆರಂಭಿಕ ಚುರುಕುಗೊಳಿಸುವ ಮತ್ತು ಶಿಕ್ಷಣದ ಮೂಲಕ ಶಾಲಾ ಪೂರ್ವ ಮಕ್ಕಳ ಮಾನಸಿಕ ಮತ್ತು ಸಮಾಜಿಕ ಬೆಳವಣಿಗೆಯ ಅಗತ್ಯತೆಗೆ ಬೇಕಾದ ನಿಬಂಧನೆಗಳನ್ನು ಒದಗಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಮತ್ತೊಂದು ಆದೇಶವನ್ನು ನೀಡಿತು. ೧೦ ನಮಗೆ ಕಂಡುಬಂದ್ದದ್ದೇನೆಂದರೆ ದುರಾದೃಷ್ಟಕರವಾಗಿ, ೨೦೧೩ರಲ್ಲೂ ಅಂಗನವಾಡಿಗಳು ಸಿಬ್ಬಂದಿಯ ಕೊರತೆಯನ್ನು ಹೊಂದಿವೆ ಅಥವಾ ಕಳಪೆ ಮೂಲ ಸೌಕರ್ಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ೧೧
 
ಶಿಕ್ಷಣ ಹಕ್ಕು ಕಾಯ್ದೆ ಮತ್ತು ಪುಟ್ಟ ಮಕ್ಕಳ ಶಿಕ್ಷಣ:
ಸಂವಿಧಾನದ ೨೧ ಎ ಅನುಚ್ಛೇದದ ಅಡಿಯಲ್ಲಿನ ಶಿಕ್ಷಣದ ಹಕ್ಕನ್ನು ಕಾನೂನು ನಿರ್ಧರಿಸಿರುವಂತೆ ಮಕ್ಕಳಿಗೆ
ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು (ಇಲ್ಲಿಂದ ಆರ್‌ಟಿಇ ಎನ್ನೋಣ) ಅನ್ವಯ ಜಾರಿಗೊಳಿಸಲಾಗುತ್ತದೆ. ಈ ಕಾನೂನು ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಅನ್ವಯಿಸುವುದಾದರೂ, ಪುಟಾಣಿ ಮಕ್ಕಳಿಗೆ ಪೋಷಣೆ ಮತ್ತು ಶಿಕ್ಷಣವನ್ನು ಒದಗಿಸುವುದು ರಾಜ್ಯ ಸರ್ಕಾರಗಳಿಗೆ ಬಿಟ್ಟಿರುವ ಆಯ್ಕೆಯಾಗಿದೆ (ವಿಭಾಗ ೧೧). ಇದರೊಂದಿಗೆ, ಯಾವ ಶಾಲೆಯು ಶಿಶುವಿಹಾರವನ್ನು ಹೊಂದಿದೆಯೋ ಆ ಶಾಲೆಗಳಲ್ಲಿ ಆರ್‌ಟಿಇ ಅಡಿಯಲ್ಲಿನ ಪ್ರವೇಶ ದಾಖಲಾತಿ ಮತ್ತು ಮೀಸಲು ಶಿಶುವಿಹಾರದಿಂದಲೇ ಪ್ರಾರಂಭವಾಗುತ್ತದೆ ಎಂದು ಆರ್‌ಟಿಇ ಕಡ್ಡಾಯಗೊಳಿಸಿದೆ (ವಿಭಾಗ ೧೨).  ಇದರ ಪರಿಣಾಮವಾಗಿ, ಪುಟಾಣಿ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವ ಎಲ್ಲಾ ಶಾಲೆಗಳ ಪುಟಾಣಿ ಮಕ್ಕಳ ಶಿಕ್ಷಣ, ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವ ಬಾಧ್ಯತೆಯ ಅಡಿಯಲ್ಲಿ ಬರುತ್ತವೆ.   ಆರ್‌ಟಿಇಯಲ್ಲಿ ನೀಡಿರುವ ಈ ಅವಕಾಶದ ಮೂಲಕ ಮಕ್ಕಳು ಇವುಗಳನ್ನು ಪಡೆಯಲು ಹಕ್ಕುದಾರರಾಗಿದ್ದಾರೆ. - (೧) ನೆರೆ-ಹೊರೆಯಲ್ಲಿರುವ ಸರ್ಕಾರಿ, ಖಾಸಗಿ ಅಥವಾ ಅನುದಾನಿತ ಶಾಲೆಗಳಲ್ಲಿ ಪ್ರವೇಶವನ್ನು ಪಡೆಯುವುದು ಮತ್ತು (೨) ಯಾವುದೇ 
 

ಮಗುವು ಸಮಾಜದಲ್ಲಿ ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಅನಾನುಕೂಲವನ್ನು ಹೊಂದಿರುವ ವಿಭಾಗಕ್ಕೆ ಸೇರಿದ್ದಲ್ಲಿ ಆ ಮಗುವಿಗೆ ಉಚಿತ ಮತ್ತು ಕಡ್ಡಾಯವಾಗಿ ಶಿಶುವಿಹಾರದ ಶಿಕ್ಷಣವನ್ನು ಒದಗಿಸಬೇಕು. 

 
ಆರ್‌ಟಿಇಯ ಸಂವಿಧಾನಾತ್ಮಕ ಸಿಂಧುತ್ವವನ್ನು ಆಕ್ಷೇಪಿಸಿ ಅನುದಾನರಹಿತ ಮತ್ತು ಅನುದಾನಿತ ಶಾಲೆಗಳ ಒಂದು ಗುಂಪು ರಾಜಾಸ್ಥಾನದ ಖಾಸಗೀ ಶಾಲೆಗಳ ಸಂಘಟನೆ (ಯುನೈಟೆಡ್ ಪ್ರೈವೇಟ್ ಸ್ಕೂಲ್ಸ್ ಆಫ್ ರಾಜಾಸ್ಥಾನ್) ವಿರುದ್ಧ ಭಾರತದ ಕೇಂದ್ರ ಸರ್ಕಾರ ಪ್ರಕರಣದಲ್ಲಿ ಅನುದಾನರಹಿತ ಮತ್ತು ಅನುದಾನಿತ ಶಾಲೆಗಳ ಗುಂಪು ಮೊಕದ್ದಮೆಯನ್ನು ಹೂಡಿತು. ೧೨   ೨೦೧೨ರಲ್ಲಿ ಫೌಂಡೇಷನ್, ಈ ಮೊಕದ್ದಮೆಯ ಮಧ್ಯಪ್ರವೇಶಿಸಿ ಆರ್‌ಟಿಇ ಸಿಂಧುತ್ವವನ್ನು ಉಳಿಸಬೇಕೆಂದು ವಾದಿಸಿತು.  ಮುಂದುವರಿದು, ಪುಟ್ಟ ಮಕ್ಕಳ ಶಿಕ್ಷಣ ಕುರಿತು (ಇಸಿಸಿಇ) ಮಾತನಾಡಿ ನ್ಯಾಯಾಲಯವು ಇಸಿಸಿಇಯನ್ನು ೨೧ ಎ ಪರಿಚ್ಛೇದದ ಅಡಿಯಲ್ಲಿನ ಶಿಕ್ಷಣದ ಹಕ್ಕು ವ್ಯಾಪ್ತಿಯಲ್ಲಿ ಬರುವಂತಹುದು ಎಂದು ಪರಿಗಣಿಸಬೇಕು ಎಂದು ಪ್ರಸ್ತಾವವನ್ನೂ ಸಲ್ಲಿಸಿತು. ಅಂದರೆ ಈ ಮೂಲಕ ಈ ಹಕ್ಕನ್ನು ಆರು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೂ ವಿಸ್ತರಿಸುವಂತೆ ಕೇಳಿಕೊಂಡಿತು.  ಈ ಸಲ್ಲಿಕೆಯು ಮೂರು ತತ್ವಗಳನ್ನು ಆಧರಿಸಿದ್ದಾಗಿತ್ತು, ಅವುಗಳೆಂದರೆ:
 
 (೧) ಉನ್ನಿಕೃಷ್ಣನ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿರುವಂತೆ ಹದಿನಾಲ್ಕು ವರ್ಷದ ಒಳಗಿರುವ ಎಲ್ಲಾ ಮಕ್ಕಳೂ ಶಿಕ್ಷಣದ ಹಕ್ಕನ್ನು ಪಡೆಯಲು ಅರ್ಹರು ಮತ್ತು ಈ ಹಕ್ಕನ್ನು ಜಾರಿಗೆ ತರಲು ರಾಜ್ಯದ ಮೇಲೆ ಒತ್ತಾಯ ತರಬಹುದು; 
(೨) ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಇಸಿಸಿಇಯ ಪಾತ್ರ ಪ್ರಮುಖವಾದದ್ದು ಎಂದು ಸಂಶೋಧನೆಯು ತೋರಿಸಿದೆ; ಮತ್ತು
 (೩) ಭಾರತದಲ್ಲಿನ ಪುಟಾಣಿ ಮಕ್ಕಳ ಶಿಕ್ಷಣದ ವಲಯವು ಹೆಚ್ಚು ಅನಿರ್ಬಂಧಿತವಾಗಿದೆ ಆದರೆ ಆರ್‌ಟಿಇ ಕಾಯ್ದೆಯು ಒಂದನೇ ತರಗತಿ ಮತ್ತು ಅದಕ್ಕೆ ಮೇಲ್ಪಟ್ಟ ತರಗತಿಗಳ ದಾಖಲಾತಿಗೆ ಕೆಲವು ನಿಯಮಗಳು ಮತ್ತು ಗುಣಮಟ್ಟವನ್ನು ಆದೇಶಿಸುತ್ತದೆ. ಹೀಗಿದ್ದರೂ, ಸಂಸತ್ತು ಪರಿಷ್ಕೃತ ಪರಿಚ್ಛೇದ ೪೫ರಲ್ಲಿ ಇಸಿಸಿಇಯನ್ನು ಸೇರಿಸಿದ್ದರೂ, ನ್ಯಾಯಾಲಯವು ಹಕ್ಕನ್ನು ವಿಸ್ತರಿಸುವ ವಿಷಯದಲ್ಲಿ ಮೌನವಾಗಿದೆ.
 
ಇಸಿಸಿಇ ಮತ್ತು ಕರ್ನಾಟಕದಲ್ಲಿನ ಶಾಲೆಯಿಂದ ಹೊರಗುಳಿದ ಮಕ್ಕಳ ದಾವೆ:
ಇಸಿಸಿಇಯ ಪ್ರಾಮುಖ್ಯತೆಯನ್ನು ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಮೊಕದ್ದಮೆಯಲ್ಲಿ ಕರ್ನಾಟಕದ ಉಚ್ಚ ನ್ಯಾಯಾಲಯದ ಮುಂದೆಯೂ ಇಡಲಾಯಿತು.೧೩  ಒಂದು ದಿನ ಪತ್ರಿಕೆಯಲ್ಲಿನ ವರದಿಯ ಆಧಾರದ ಮೇರೆಗೆ೧೫ ಶಾಲೆಯಿಂದ ಹೊರಗುಳಿದ ಮಕ್ಕಳ ವಿಷಯದ ಮೇಲೆ ಕರ್ನಾಟಕ ಉಚ್ಚ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಈ ಮೊಕದ್ದಮೆಯನ್ನು ಪರಿಗಣಿಸಿತು.೧೪ ೫೦,೦೦೦ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಶಿಕ್ಷಣದ ಮೂಲಭೂತ ಹಕ್ಕು ಎನ್ನುವುದರ ಅತಿ ದೊಡ್ಡ ಉಲ್ಲಂಘನೆ ಎಂದು ನ್ಯಾಯಾಲಯವು ಪರಿಗಣಿಸಿತು.  ಈ ಪ್ರಕರಣದಲ್ಲಿ, ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಪರಿಸ್ಥಿತಿಯನ್ನು ಸುಧಾರಿಸುವ ಪ್ರಯತ್ನವನ್ನು ಮಾಡುವುದಲ್ಲದೇ, ಕರ್ನಾಟಕದಲ್ಲಿ ಆರ್‌ಟಿಇಯ ಅನುಷ್ಠಾನದ ಮೇಲ್ವಿಚಾರಣೆ ಮಾಡಲು ಉನ್ನತ ಮಟ್ಟದ ಸಮಿತಿಯನ್ನು ನಿಯೋಜಿಸುವ ಮೂಲಕ ಶೈಕ್ಷಣಿಕ ಆಡಳಿತದ ವಲಯವನ್ನೂ ಪ್ರವೇಶಿಸಿತು.
 
 
ಈ ದಾವೆಯ ಪರಿಣಾಮವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಹೊಸ ವ್ಯಾಖ್ಯಾನ ಬಂದಿತು ಮತ್ತು ಹಾಜರಾತಿ ಅಧಿಕಾರಿಗಳ ಕಾರ್ಯವೂ ಸೇರಿದಂತೆ ಅನೇಕ ವಿಷಯಗಳಲ್ಲಿ ಬದಲಾವಣೆಯನ್ನು ತಂದಿತು.  ಆದಾಗ್ಯೂ, ಈ ಮೊಕದ್ದಮೆಯಲ್ಲಿ ಅಂಗನವಾಡಿ ವ್ಯವಸ್ಥೆಗೆ ಹೆಚ್ಚಿನ ಗಮನವನ್ನು ನೀಡದೇ ಇಸಿಸಿಇಯ ಬಗ್ಗೆಯೂ ಹೆಚ್ಚಿನ ಕಾಳಜಿಯನ್ನು ತೋರದೆ ಮಕ್ಕಳು ಮುಖ್ಯವಾಹಿನಿ ಶಾಲೆಗಳಿಗೆ ವರ್ಗವಾಗುವುದನ್ನು ಖಚಿತಪಡಿಸಿಕೊಳ್ಳುವಷ್ಟಕ್ಕೆ ಮಿತಗೊಂಡಿರುವುದು  ಗಮನಾರ್ಹ.  ಅಂಗನವಾಡಿಯಲ್ಲಿನ ಮೂಲಸೌಕರ್ಯಗಳು, ನಿರ್ದಿಷ್ಟವಾಗಿ ಹೇಳುವುದಾದರೆ ಶೌಚಾಲಯಗಳು ಹೆಚ್ಚಿನ ಚಾಲನೆಯನ್ನು ಪಡೆದ ವಿಷಯಗಳು. ೧೬ ವಿವಿಧ ಇಲಾಖೆಗಳ ನಡುವೆ ಉತ್ತಮ ಸಮನ್ವಯ ಅಗತ್ಯವಿದೆ ಎಂದು ನ್ಯಾಯಾಂಗವು ಹೆಚ್ಚಿನ ಒತ್ತನ್ನು ನೀಡಿತು, ಆದರೆ ಪುಟ್ಟ ಮಕ್ಕಳ ಶಿಕ್ಷಣದ ಮುಖ್ಯ ಉದ್ದೇಶವಾದ ಉತ್ತಮ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವುದು ಈ ದಾವೆಯ ವ್ಯಾಪ್ತಿಯಿಂದ ಹೊರಗುಳಿಯಿತು.
 
ಮುಕ್ತಾಯದ ಅಭಿಪ್ರಾಯಗಳು:
ಭಾರತ ಸರ್ಕಾರ ಆರು ವರ್ಷದಿಂದ ಹದಿನಾಲ್ಕು ವರ್ಷದ ಮಕ್ಕಳ ಪ್ರಾಥಮಿಕ ಶಿಕ್ಷಣದ ವಿಷಯವನ್ನು ಯಶಸ್ವಿಯಾಗಿ ಕಾನೂನಿನ ಚೌಕಟ್ಟಿಗೆ ಒಳಪಡಿಸಿದರೂ, ಪುಟ್ಟ ಮಕ್ಕಳಿಗೆ (ಆರು ವರ್ಷದೊಳಗಿನ ಮಕ್ಕಳಿಗೆ) ಉತ್ತಮ ಗುಣಮಟ್ಟದ ಮತ್ತು ಏಕರೂಪದ ಶಿಕ್ಷಣ ವ್ಯವಸ್ಥೆ ಮಾಡುವುದರ ಬಗ್ಗೆ ಅಂತಹಾ ಪ್ರಯತ್ನಗಳನ್ನೇನು ಮಾಡಿರುವುದಿಲ್ಲ. ಭಾರತದಲ್ಲಿ ಪುಟಾಣಿ ಮಕ್ಕಳ ಶಿಕ್ಷಣ ವಲಯವು ಅನಿರ್ಬಂಧಿತವಾಗಿಯೇ ಉಳಿದಿದೆ.  ಅಂಗನವಾಡಿಗಳು ಅಥವಾ ಶಿಶುವಿಹಾರಗಳನ್ನು ಕ್ರಮಬದ್ಧಗೊಳಿಸಿ ಅವುಗಳ ಸ್ಥಾಪನೆ, ಕಾರ್ಯ ಅಥವಾ ನಿಯಂತ್ರಣಗಳ ಗುಣಮಟ್ಟವನ್ನು ಹೇರಲು ಯಾವುದೇ ರೀತಿಯ ಕಾನೂನು ಅಥವಾ ನಿಯಮಗಳಿಲ್ಲ.  ಇದಲ್ಲದೇ, ಅಂಗನವಾಡಿ ವ್ಯವಸ್ಥೆಗೆ ಮತ್ತು ಶಿಶುವಿಹಾರ ವ್ಯವಸ್ಥೆಗೆ ಸರ್ಕಾರದ ವಿಭಿನ್ನ ಸಚಿವಾಲಯಗಳು ಜವಾಬ್ದಾರರು.  ಉತ್ತಮ ಗುಣಮಟ್ಟದ ಪುಟಾಣಿ ಮಕ್ಕಳ ಶಿಕ್ಷಣವನ್ನು ಕಾರ್ಯರೂಪಕ್ಕೆ ತರಲು ಒಂದು ಹಕ್ಕನ್ನು ದೊರಕಿಸಿಕೊಳ್ಳ ಬೇಕಾದ ಅವಶ್ಯಕತೆ ಇಲ್ಲ.  ಆದರೂ ಪುಟಾಣಿ ಮಕ್ಕಳ ಶಿಕ್ಷಣ ಸಂಸ್ಥೆಗಳ ಮೇಲೆ ಸ್ಪಷ್ಟವಾದ ಕಾನೂನು ಅಥವಾ ನಿಯಮ ಇಲ್ಲದೇ ಹೋಗಿರುವುದರಿಂದ ಈ ವಿಷಯದ ಬಗ್ಗೆ ಏನೇ ತೀರ್ಪು ನೀಡಲು ನ್ಯಾಯಾಲಯಗಳು ಹಿಂಜರಿಯುತ್ತಿವೆ.  ಆದ್ದರಿಂದ, ಅಂಗನವಾಡಿಗಳು ಮತ್ತು ಶಿಶುವಿಹಾರಗಳ ಸ್ಥಾಪನೆಯ ವಿಧಾನವನ್ನು ವಿವರವಾಗಿ ಹೇಳುವ, ಏಕರೂಪದ ಗುಣಮಟ್ಟವನ್ನು ನಿಗದಿಸುವ ಮತ್ತು ಅವುಗಳ ಕಾರ್ಯವನ್ನು ಕ್ರಮಬದ್ಧಗೊಳಿಸುವ ಸಮಗ್ರ ನಿಯಮಾವಳಿಯ ರಚನೆಯ ಬಹು ಮುಖ್ಯ ಅಗತ್ಯತೆಯನ್ನು ನಿರ್ಲಕ್ಷ್ಯ ಮಾಡಬಾರದು.
 
ಡೋಲಶ್ರೀಯವರು ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಶಾಲೆಯ ನೀತಿಗಳು ಮತ್ತು ಆಡಳಿತ (School of Policy and Governance ) ವಿಭಾಗದಲ್ಲಿ ಗ್ರಾಜುಯೇಟ್ ಫೆಲೋ ಆಗಿ ಕಾರ್ಯ ನಿರ್ವಹಿಸುತಿದ್ದಾರೆ.  ಇವರು ಹಬ್ ಫಾರ್ ಎಜುಕೇಷನ್ ಲಾ ಅಂಡ್ ಪಾಲಿಸಿ (ಎಚ್‌ಇಎಲ್‌ಪಿ)ಯ ಸದಸ್ಯರು.  ಸರ್ವೋಚ್ಚ ನ್ಯಾಯಾಲಯದಲ್ಲಿದ್ದ ರಾಜಾಸ್ಥಾನದ ಅನುದಾನರಹಿತ ಖಾಸಗೀ ಶಾಲೆಗಳ ಸಂಘ ವಿರುದ್ಧ ಭಾರತದ ಕೇಂದ್ರ ಸರ್ಕಾರ, ಮತ್ತು ಸಧ್ಯದಲ್ಲಿ ನಡೆಯುತ್ತಿರುವ ಪ್ರಮತಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿಶ್ವಸ್ಥ ಮಂಡಳಿ ವಿರುದ್ಧ ಭಾರತದ ಕೇಂದ್ರ ಸರ್ಕಾರದ ಮೊಕದ್ದಮೆಯಲ್ಲಿ ಅಜೀಂ ಪ್ರೇಂಜಿ ಪ್ರತಿಷ್ಠಾನದ ಮಧ್ಯಸ್ಥಿಕೆಯಲ್ಲೂ ನೆರವು ನೀಡುತ್ತಿದ್ದಾರೆ.  ಇದರ ಜೊತೆಯಲ್ಲಿ, ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿರುವ ಶಾಲೆಯಿಂದ ಹೊರಗುಳಿದ ಮಕ್ಕಳ ದಾವೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.  ಕೆಲವು ಸಹೋದ್ಯೋಗಿಗಳೊಂದಿಗೆ, ಡೋಶ್ರೀಯವರು ಕರ್ನಾಟಕದಲ್ಲಿ ಆರ್‌ಟಿಇ ಕಾಯ್ದೆಯ ಅಡಿಯಲ್ಲಿನ ಕುಂದುಕೊರತೆಗಳ ಪರಿಹಾರ ವ್ಯವಸ್ಥೆಗಳ ಬಗ್ಗೆ ಅಧ್ಯಯನವನ್ನು ಕೈಗೊಂಡಿದ್ದಾರೆ.  ಇವರು ಬಿ.ಎ. ಎಲ್‌ಎಲ್.ಬಿಯನ್ನು ೨೦೧೦ರಲ್ಲಿ ಯೂನಿವರ್ಸಿಟಿ ಲಾ ಕಾಲೇಜ್, ಬೆಂಗಳೂರು ಇಲ್ಲಿ ಪೂರ್ಣಗೊಳಿಸಿದ್ದಾರೆ. ಇವರಿಗೆ ಶಿಕ್ಷಣದ ಹಕ್ಕು, ಸಾಮಾಜಿಕ ಆರ್ಥಿಕ ಹಕ್ಕು ಹಾಗೂ ಸಂವಿಧಾನಾತ್ಮಕ ಕಾನೂನು ವಿಷಯಗಳಲ್ಲಿ ಆಸಕ್ತಿಯಿದೆ.  ಇವರನ್ನುdolashree.mysoor@apu.edu.inಇಲ್ಲಿ ಸಂಪರ್ಕಿಸಬಹುದು.
 
_____________
 1 ಸಂವಿಧಾನದ ಅನುಚ್ಛೇಧ ೩೨ ಮತ್ತು ೨೨೬ ಅಡಿಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳು ಸಮಾನತೆ ಹಕ್ಕು, ಸ್ವಾತಂತ್ರ್ಯ ಅಥವಾ ಜೀವದ ಹಕ್ಕುಗಳಂತಹ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಬಹುದಾಗಿದೆ.
  2ಅನುಚ್ಛೇಧ ೩೭, ಭಾರತದ ಸಂವಿಧಾನ, ೧೯೫೦
 3 ಲೇಖನದ ಮುಂಬರುವ "ಶಿಕ್ಷಣ ಮತ್ತು ಇಅಅಇ ಕುರಿತು ಮೂಲಭೂತ ಹಕ್ಕು" ಎಂಬ ವಿಭಾಗವು ಸಂವಿಧಾನದ (ಎಂಬತ್ತು ಆರನೇ ತಿದ್ದುಪಡಿ) ಕಾಯಿದೆ, ೨೦೦೨ ಅಡಿಯಲ್ಲಿ ಅನುಚ್ಛೇದ ೪೫ಕ್ಕೆ ಮಾಡಿದ ಎಂದು ಪರಿಷ್ಕರಣೆ ಕುರಿತು ಹೇಳುತ್ತದೆ. 

[4]Mohini Jain v State of Karnataka, (1992) 3 SCC 666

[5]Unnikrishnan J. P. v State of Andhra Pradesh 1993 SCC (1) 645

[7] The Constitution (Eighty-Sixth Amendment) Act, 2002

[8] Article 37 of the Constitution prohibits any court from enforcing any directive principle of state policy.

[9] People’s Union for Civil Liberties v Union of India W. P. (c) 196 of 2001

[10] W.P. (c) 196/2001, Order dated 28/11/2012, available at: http://www.righttofoodindia.org/orders/nov28.html

[11] W.P. (c) 196/2001, Order dated 29/04/2004, available at: http://www.righttofoodindia.org/orders/apr2904.html

[12] “Poor Status of Anganwadis in Bangalore” CIVIC (2012), available at: http://civicspace.in/sites/default/files/attachments/public%20hearing%20on%20health%20english%20version.pdf.

Also see “Anganwadis for All – A Primer” Right to Food Campaign (2007) available at: http://www.righttofoodindia.org/data/icds06primer.pdf.  

 
18934 ನೊಂದಾಯಿತ ಬಳಕೆದಾರರು
7394 ಸಂಪನ್ಮೂಲಗಳು