ಪರೀಕ್ಷೆ

ಭಯಮುಕ್ತ ವಾತಾವರಣವು ಪರೀಕ್ಷೆಯನ್ನು ಪ್ರೀತಿಸುವಂತೆ ಮಾಡುತ್ತದೆ ಎನ್ನುವುದು ಶೈಕ್ಷಣಿಕ ವಲಯದಲ್ಲಿ ಆಗಾಗ್ಗೆ ಕೇಳಿಬರುವ ಮಾತು. ಜೀವನದಲ್ಲಿ ಉನ್ನತಿಗೇರಬೇಕಾದರೆ ಹಲವು ಪರೀಕ್ಷೆಗಳನ್ನು ಎದುರಿಸಬೇಕು ಎನ್ನುವುದು ಹಿರಿಯರ ಅಂಬೋಣ. ರೈತನೋರ್ವ ತನ್ನ ಮಗ ಚೆನ್ನಾಗಿ ಓದಿ, ಶ್ರಮವಹಿಸಿ ಒಳ್ಳೆಯ ಕೆಲಸ ಪಡೆಯಬೇಕು ಎಂದು ಆಶಿಸುತ್ತಾನೆ. ಸೈನಿಕನೋರ್ವ ಗಡಿಕಾಯುವಲ್ಲಿ ನಿಷ್ಠೆಯನ್ನು ಪ್ರದರ್ಶಿಸಿ ದೇಶ ಸೇವೆ ಮಾಡಬೇಕೆಂದು ಧುಮುಕುತ್ತಾನೆ... ಈ ಎಲ್ಲಾ ಹಂತಗಳಲ್ಲಿ ಸವಾಲುಗಳಿವೆ. ಇಂತಹ ಸವಾಲುಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳೂ ಹೌದು. ಆದರೆ ಇಂತಹ ಸವಾಲುಗಳನ್ನು ಹೇಗೆ ಎದುರಿಸಬೇಕು, ಯಾವ ರೀತಿಯಲ್ಲಿ ಪರಿಹರಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಹಲವು ಚರ್ಚೆಗಳಿವೆ. 
 
ಇಂತಹ ಸವಾಲುಗಳು ಮನುಷ್ಯ ತನ್ನನ್ನು ತಾನು ಕೆಲಸ ಕಾರ್ಯಗಳಿಗೆ ತೊಡಗಿಸಿಕೊಂಡಾಗ ಉಂಟಾಗಬಹುದಾದ ಅಡಚಣೆಗಳೇ ಆಗಿವೆ. ಉದಾಹರಣೆಗೆ ತಾನು ವಿದ್ಯೆಯನ್ನು ಕಲಿಯಬೇಕು ಹಾಗೂ ಕಲಿತ ವಿದ್ಯೆಯನ್ನು ಒಂದು ಹಂತದಲ್ಲಿ ಬಾಹ್ಯವಾಗಿ ಪ್ರಚುರಪಡಿಸಬೇಕು ಎಂದು ಬಯಸಿದಾಗ ಆತ ಪರೀಕ್ಷೆ ಎಂಬುದನ್ನು ಎದುರಿಸಲೇಬೇಕಾಗುತ್ತದೆ. ಹಾಗೆಯೇ, ವಾಹನ ಚಾಲನೆಯನ್ನು ಕಲಿತುಕೊಳ್ಳಬೇಕೆಂಬ ಮಹಾದಾಸೆಯಿಂದ ತರಬೇತಿ ಪಡೆದ ನಂತರ ಮೇಲಾಧಿಕಾರಿಗಳಿಗೆ ತನ್ನ ವಿದ್ವತ್ತನ್ನು ಪ್ರದರ್ಶಿಸಲೇಬೇಕಾಗುತ್ತದೆ. 
 
ತನ್ನ ಪರಿಣತಿಯನ್ನು ಹಂತ ಹಂತವಾಗಿ ತೋರ್ಪಡಿಸುವುದು ಪರೀಕ್ಷೆಯಾದರೆ, ಇನ್ನೂ ಪಕ್ವವಾಗದ ಮನಸ್ಸು ಮತ್ತು ಒತ್ತಡದಿಂದ ಪರೀಕ್ಷೆಯನ್ನು ಎದುರಿಸಬೇಕಾಗಿರುವುದು ಮನುಷ್ಯನ ವೈಯಕ್ತಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸಬಹುದು. ಸಮಯ, ಸಂದರ್ಭಗಳು ಪರೀಕ್ಷೆಯನ್ನು ಎದುರಿಸಲು ಬಹಳ ಮುಖ್ಯವಾಗುತ್ತವೆ. ಮುಕ್ತವಾಗಿ ಆಲೋಚಿಸಿ, ವಿವೇಚಿಸಿ ಪರೀಕ್ಷೆಯನ್ನು ಎದುರಿಸುವವರ ಸಂಖ್ಯೆ ಕಡಿಮೆ. ಬದಲಾಗಿ ದುಗುಡ, ಗೊಂದಲಗಳನ್ನು ಇಟ್ಟುಕೊಂಡೇ ಪರೀಕ್ಷೆಯನ್ನು ಎದುರಿಸುವವರು ಹಲವರು. 
 
ಬಾಲ್ಯದ ಜೀವನದಲ್ಲಿ ನಾವು ಶಾಲೆಯ ಪರೀಕ್ಷೆಗಳ ಜೊತೆಗೆ ಮನೆ, ಸಮಾಜದ ಪರೀಕ್ಷೆಗಳನ್ನೂ ಎದುರಿಸಬೇಕಾಗಿತ್ತು. ಆಗ ಅದು ಸವಾಲು ಎಂದು ಪರಿಗಣಿಸಿಯೇ ಇರಲಿಲ್ಲ. ಬದಲಾಗಿ ಹೊರೆಯಾಗಿರುತ್ತಿತ್ತು. ಇಂತಹ ಹೊರೆಯನ್ನು ಅದೃ?ದ ಮೂಲಕ ಪಾರಾಗಲು ಪ್ರಯತ್ನಿಸುತ್ತಿದ್ದೆವು. ಪ್ರಯತ್ನವನ್ನು ಕಡಿಮೆ ಪ್ರಮಾಣದಲ್ಲಿ ಮಾಡಿ, ಅದೃಷ್ಟದ ಮೊರೆ ಹೋಗುತ್ತಿದ್ದೆವು. ಇನ್ನೂ ಹೆಚ್ಚಾಗಿ ದೇವರನ್ನು ನಂಬುತ್ತಿದ್ದೆವು. ಪರೀಕ್ಷೆಯನ್ನು ಎದುರಿಸಲು ದೇವರು ಸದಾ ಗೆಳೆಯನಾಗಿರುತ್ತಿದ್ದ. ಪರೀಕ್ಷೆಗಳು ಕಳೆದು ಹೋದ ನಂತರ ದೇವರು ದೇವಲೋಕದಲ್ಲಿ. ನಾವು ರಜೆಯ ಮಜಾದತ್ತ ಸಾಗುತ್ತಿದ್ದೆವು. 
 
ಶಾಲಾ ದಿನಗಳಲ್ಲಿ ಶೈಕ್ಷಣಿಕವಾಗಿ ಬರೆಯುವ ಪರೀಕ್ಷೆಗಳು ಮಾತ್ರವೇ ಪರೀಕ್ಷೆಯಾಗಿರುತ್ತದೆಯೇ? ಮನೆ, ಸಮಾಜ, ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳು, ಅದರಿಂದ ಹೊರಬರುತ್ತಿರುವ ಪ್ರಕ್ರಿಯೆಯಲ್ಲಿ ಕಟ್ಟಿಕೊಳ್ಳುತ್ತಿರುವ ಅನುಭವಗಳು ಪರೀಕ್ಷೆಗಳನ್ನು ಹಾಗೆಯೇ ನೋಡುತ್ತಿಲ್ಲವೇ? ಅಥವಾ ಜೀವನದ ಪರೀಕ್ಷೆಗಳನ್ನು ಸ್ವ-ಆಸಕ್ತಿಯಿಂದ ಮಾಡಿ, ಶೈಕ್ಷಣಿಕವಾಗಿರುವುದನ್ನೆಲ್ಲಾ ಒತ್ತಾಯಕ್ಕೆ ಕಟ್ಟುಬಿದ್ದು ಮಾಡುತ್ತಿದ್ದೇವೆಯೇ? ಇಂತಹ ಪ್ರಶ್ನೆಗಳನ್ನು ನಾವು ಇಂದು ಹಾಕಿಕೊಳ್ಳುತ್ತಿದ್ದೇವೆ. ಆಗ ಪರೀಕ್ಷೆಗಳು ’ಬಾಲ್ಯಾವಸ್ಥೆ’ಯನ್ನು ಕಸಿದುಕೊಳ್ಳುತ್ತಿತ್ತು ಎಂಬುದು ನಮ್ಮ ಇಂದಿನ ನಂಬಿಕೆಯೂ ಆಗಿದೆ. ಈ ನಂಬಿಕೆಯಿಂದ ಆಚೆಗೆ ಹೊರಳಿ ವಿವೇಚಿಸಿದ್ದಲ್ಲಿ, ಪ್ರತಿ ಕ್ಷಣವೂ ಪರೀಕ್ಷೆಯಿಂದಲೇ ನಾವು ಬದುಕುತ್ತಿದ್ದೇವೆ. ನಾವು ಪರೀಕ್ಷೆಯೆಂಬ ಭಾವನೆಯಿಂದ ಮುಕ್ತವಾಗಿ, ಸಹಜವಾಗಿ ಸ್ವೀಕರಿಸುವ ಮತ್ತು ಧನಾತ್ಮಕವಾಗಿ ವಿವೇಚಿಸುವ ಪ್ರವೃತ್ತಿಯನ್ನು ಹೊಂದಿರುವುದು ಆವಶ್ಯಕ. 
 
- ಡಾ. ಶೌರೀಶ್ ಕುದ್ಕುಳಿ 
***
18624 ನೊಂದಾಯಿತ ಬಳಕೆದಾರರು
7274 ಸಂಪನ್ಮೂಲಗಳು