ನೋಡಲು ಮರೆಯದಿರಿ ೨೦೧೮ ಜನವರಿ-೩೧ ರ ಪೂರ್ಣ ಚಂದ್ರಗ್ರಹಣ ! -ಪ್ರಜ್ವಲ್ ಶಾಸ್ತ್ರಿ,

 
೨೦೧೮ ರ ಜನವರಿ ೩೧ ರಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಕೆಂಪು ಛಾಯೆಯ ಚಂದ್ರ ಕರ್ನಾಟಕದೆಲ್ಲೆಡೆ ಗೋಚರಿಸುತ್ತದೆ. ಪ್ರಕೃತಿಯ ಈ ಚಿತ್ತಾಕರ್ಷಕ ಬೆಳಕು ನೆರಳಿನಾಟವನ್ನು ವೀಕ್ಷಿಸುವುದನ್ನು ಮರೆಯದಿರಿ! ಚಂದ್ರಗ್ರಹಣ ಎಂದರೇನು? ಹುಣ್ಣಿಮೆಯ ದಿನದಂದು ಮಾತ್ರ ಚಂದ್ರಗ್ರಹಣ ಸಂಭವಿಸುತ್ತದೆ. ಸೂರ್ಯನ ಬೆಳಕು ಚಂದ್ರನ ಮೇಲೆ ಬಿದ್ದು ಪ್ರತಿಫಲಿಸಿ ನಮಗೆ ಕಾಣುವುದನ್ನು ಕೆಲಕಾಲ ಭೂಮಿಯು ಅದೇ ನೇರದಲ್ಲಿ ಬಂದು ತಡೆಯುತ್ತದೆ. ಇದರಿಂದ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಈ ಸಂದರ್ಭದಲ್ಲಿ ಪೂರ್ಣಚಂದ್ರ ಕೆಲಕಾಲ ಕೆಂಪು ಛಾಯೆಯಿಂದ ಕೂಡಿರುತ್ತದೆ ಆದರೆ ಸಂಪೂರ್ಣ ಕಾಣೆಯಾಗುವುದಿಲ್ಲ. ಹುಣ್ಣಿಮೆಯ ದಿನದಂದು ಸೂರ್ಯನ ಬೆಳಕಿನಿಂದ ಹೊಳೆಯುವ ಚಂದ್ರನ ಮುಖ ಭೂಮಿಯಿಂದ ನೋಡುವ ನಮಗೆ ಅಭಿಮುಖವಾಗಿರುತ್ತದೆ ಹಾಗೂ ಸೂರ್ಯ ಭೂಮಿಯ ಆ ಭಾಗಕ್ಕೆ ಹಿಂಭಾಗದಲ್ಲಿರುತ್ತದೆ. ಆದ್ದರಿಂದ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಪ್ರತಿ ಹುಣ್ಣಿಮೆಯಲ್ಲಿ ಚಂದ್ರಗ್ರಹಣ ಸಂಭವಿಸುವುದಿಲ್ಲ ಏಕೆ? ಭೂಮಿಯ ಸುತ್ತಲೂ ಚಂದ್ರನು ಸುತ್ತುವ ಕಕ್ಷೆಯು, ಸೂರ್ಯನ ಸುತ್ತಲೂ ಭೂಮಿಯು ಸುತ್ತುವ ಕಕ್ಷೆಯು ಒಂದೇ ತಲದಲ್ಲಿರುವುದಿಲ್ಲ. ಆದರೆ ೫೦ (ಐದು ಡಿಗ್ರಿ)ಯಷ್ಟು ಓರೆಯಾಗಿರುತ್ತದೆ. ಆದ್ದರಿಂದ ಸಾಮಾನ್ಯವಾಗಿ ಹುಣ್ಣಿಮೆಯ ದಿನ ಚಂದ್ರನು ಭೂಮಿಯ ನೆರಳಿನ ಸ್ವಲ್ಪ ಮೇಲ್ಭಾಗ ಅಥವಾ ಕೆಳಭಾಗದಲ್ಲಿರುತ್ತದೆ ಹಾಗಾಗಿ ಪ್ರತಿ ಹುಣ್ಣಿಮೆಯಂದು ಗ್ರಹಣ ಸಂಭವಿಸುವುದಿಲ್ಲ.
ಸೂರ್ಯ ಭೂಮಿ ಮತ್ತು ಚಂದ್ರ ಒಂದೇ ನೇರದಲ್ಲಿದ್ದಾಗ ಮಾತ್ರ ಚಂದ್ರಗ್ರಹಣ ಸಂಭವಿಸುತ್ತದೆ. ಪಾರ್ಶ್ವಗ್ರಹಣ ಮತ್ತು ಖಂಡಛಾಯಾ ಗ್ರಹಣ ಸಂಪೂರ್ಣ ಗ್ರಹಣದ ಮುಂಚೆ ಮತ್ತು ಆನಂತರ ಪಾರ್ಶ್ವಗ್ರಹಣವಾಗುತ್ತದೆ. ಆಗ ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ನೇರದಲ್ಲಿರುವುದಿಲ್ಲ. ಪಾರ್ಶ್ವಗ್ರಹಣದಲ್ಲಿ ಭೂಮಿಯ ಪೂರ್ಣಛಾಯೆಯ ನೆರಳು ಚಂದ್ರನ ಒಂದು ಭಾಗದ ಮೇಲೆ ಬಿದ್ದು, ಚಂದ್ರನ ಆ ಭಾಗ ಕತ್ತರಿಸಿದಂತೆ ಕಾಣುತ್ತದೆ. ಚಂದ್ರಗ್ರಹಣದ ಅವಧಿಯಲ್ಲಿ ಕೆಲವು ಭೂಭಾಗಗಳಿಗೆ ಪಾರ್ಶ್ವಚಂದ್ರಗ್ರಹಣ ಮಾತ್ರ ಗೋಚರಿಸುತ್ತದೆ. (ಕರ್ನಾಟಕದಲ್ಲಿ ೨೦೧೭ ರ ಆಗಸ್ಟ್ ೧೭ ರಂದು ಕಂಡಂತೆ). ಪಾರ್ಶ್ವಗ್ರಹಣದ ಮುನ್ನ ಮತ್ತು ನಂತರದಲ್ಲಿ ಚಂದ್ರ ಭೂಮಿಯ ಖಂಡಛಾಯಾ ಪ್ರದೇಶದಲ್ಲಿ ಚಲಿಸುವುದರಿಂದ ಖಂಡಛಾಯಾ ಗ್ರಹಣವಾಗುತ್ತದೆ. ಖಂಡಛಾಯೆಯು ಪೂರ್ಣಛಾಯೆಯನ್ನು ಸುತ್ತುವರಿದಿರುತ್ತದೆ. ಖಂಡಛಾಯಾ ಗ್ರಹಣದಲ್ಲಿ ಚಂದ್ರನು ಸ್ವಲ್ಪ ಮಸುಕಾಗಿದ್ದು, ಬರಿಗಣ್ಣಿನ ವೀಕ್ಷಣೆಯಿಂದ ಸುಲಭವಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ಗ್ರಹಣ ಹಿಡಿದ ಚಂದ್ರ ಕೆಂಪಗೇಕೆ ಕಾಣುತ್ತದೆ? ಸಂಪೂರ್ಣ ಚಂದ್ರಗ್ರಹಣದ ಸಮಯದಲ್ಲಿ ಸೂರ್ಯನ ನೇರ ಬೆಳಕಿನ ಕಿರಣಗಳು ಭೂಮಿಯಿಂದ ತಡೆಯಲ್ಪಟ್ಟು ಚಂದ್ರನನ್ನು ತಲುಪುವುದಿಲ್ಲ. ಭೂಮಿಯ ವಾತಾವರಣದ ಮೂಲಕ ಹಾದುಹೋಗುವ ಬೆಳಕು ವಾತಾವರಣದಲ್ಲಿ ವಕ್ರೀಭವನಗೊಂಡು ಅದು ಚಂದ್ರನಿಂದ ಪ್ರತಿಫಲಿಸುತ್ತದೆ. ಪ್ರತಿದಿನ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ನೀಲಿ ಬೆಳಕು ಚದುರಿಹೋಗಿ ಕೆಂಪು ಬೆಳಕು ಮಾತ್ರ ಕಾಣುವಂತೆ, ಅದೇ ರೀತಿ ಗ್ರಹಣದ ಸಮಯದಲ್ಲಿ ಕೆಂಪು ಬೆಳಕು ಚಂದ್ರನತ್ತ ವಕ್ರೀಭವಿಸಿ ಚಂದ್ರನಿಂದ ಪ್ರತಿಫಲಿಸುತ್ತದೆ. ಆದ್ದರಿಂದ ಗ್ರಹಣದ ಸಂದರ್ಭದಲ್ಲಿ ಚಂದ್ರ ತಾಮ್ರದ ಬಣ್ಣದಲ್ಲಿ ಅಂದರೆ ಕೆಂಪು ಛಾಯೆಯಲ್ಲಿ ಗೋಚರಿಸುತ್ತದೆ. ಈ ಸಂದರ್ಭದಲ್ಲಿ ಚಂದ್ರನ ನಿಖರ ಬಣ್ಣವು ಭೂವಾತಾವರಣದ ದೂಳಿನ ಕಣಗಳು ಮತ್ತು ನೀರಿನ ಹನಿಗಳ ಪರಿಮಾಣವನ್ನು ಅವಲಂಬಿಸಿರುತ್ತದೆ. ಗ್ರಹಣವಿಲ್ಲದ ದಿನ ಕೆಂಪುಛಾಯೆ ಕಾಣಿಸುವುದಿಲ್ಲ ಕಾರಣ ಚಂದ್ರ ಪ್ರತಿಫಲಿಸುವ ಸೂರ್ಯನ ನೇರ ಬೆಳಕು ಭೂಮಿಯ ವಾತಾವರಣದಿಂದ ವಕ್ರೀಭವನಗೊಂಡು ಚಂದ್ರನು ಪ್ರತಿಫಲಿಸುವ ಕೆಂಪಾದ ಬೆಳಕಿಗಿಂತ ಬಹಳಷ್ಟು ಹೆಚ್ಚಾಗಿರುತ್ತದೆ. 
ಜನವರಿ ೩೧, ೨೦೧೮ ರ ಚಂದ್ರಗ್ರಹಣ ವಿಶೇಷ ಏಕೆ?
ಚಂದ್ರಗ್ರಹಣವು ಸೂಪರ್‌ಮೂನ್ ದಿನದಂದು ಸಂಭವಿಸುತ್ತಿರುವುದು ಒಂದು ವಿಶೇಷ(ಅಂದರೆ ಭೂಮಿಯ ಸುತ್ತ ಸುತ್ತುವ ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಕನಿಷ್ಠ ದೂರವಿರುವ ದಿನ). ಸೂಪರ್ ಮೂನ್ ಸಾಮಾನ್ಯ ಚಂದ್ರನಿಗಿಂತ ೧೪% ಹೆಚ್ಚು ದೊಡ್ಡದಾಗಿ ಮತ್ತು ೩೦% ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. ಇನ್ನೊಂದು ವಿಶೇಷವೆಂದರೆ ಜನವರಿ ೩೧ ರ ಹುಣ್ಣಿಮೆಯನ್ನು ಬ್ಲೂಮೂನ್ ಎಂತಲೂ ಕರೆಯಲಾಗುತ್ತದೆ - ಹಾಗೆಂದರೆ ಒಂದೇ ಕ್ಯಾಲೆಂಡರ್ ತಿಂಗಳಿನಲ್ಲಿ ಎರಡು ಹುಣ್ಣಿಮೆಗಳು ಸಂಭವಿಸುವುದು. ೩ ಡಿಸೆಂಬರ್ ೨೦೧೭, ೧ ಜನವರಿ ೨೦೧೮ ರಲ್ಲಿ ಸೂಪರ್ ಮೂನ್‌ಗಳು ಸಂಭವಿಸಿದ್ದು, ೩೧ ಜನವರಿ ೨೦೧೮ ರಂದು ಸಂಭವಿಸುತ್ತಿರುವುದು ಮೂರನೆಯ ಸೂಪರ್ ಮೂನ್ ಆಗಿರುವುದು ಮತ್ತೊಂದು ವಿಶೇಷವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕದೆಲ್ಲೆಡೆ ಈ ಗ್ರಹಣವು ಸಂಜೆ ಚಂದ್ರೋದಯದ ಸಮಯದಲ್ಲಿ ಸಂಭವಿಸುವುದರಿಂದ ವೀಕ್ಷಿಸಲು ಅನುಕೂಲಕರ! ಚಂದ್ರೋದಯವಾಗುವಾಗಲೇ ಸಂಪೂರ್ಣ ಗ್ರಹಣವಾಗಿರುತ್ತದೆ! ಗ್ರಹಣದ ಮುನ್ನವೇ ವೀಕ್ಷಣೆಯ ಯೋಜನೆ ಮಾಡಿಕೊಳ್ಳುವುದು ಬಹಳ ಮುಖ್ಯ....
 
ಉಪಕರಣಗಳು:
ವೀಕ್ಷಣೆಗೆ ವಿಶೇಷ ಉಪಕರಣಗಳೇನೂ ಬೇಕಾಗಿಲ್ಲ. ಬರಿಗಣ್ಣಿನಿಂದಲೇ ವೀಕ್ಷಿಸಿ ಆನಂದಿಸಬಹುದು. ಗ್ರಹಣದ ಮುನ್ನ, ಗ್ರಹಣದ ಸಂದರ್ಭದಲ್ಲಿ ಮತ್ತು ನಂತರದಲ್ಲಿ ಬರಿಗಣ್ಣಿನ ವೀಕ್ಷಣೆ ಏನೂ ಅಪಾಯವಿಲ್ಲ. ಸಾಧ್ಯವಿದ್ದಲ್ಲಿ ಗ್ರಹಣದ ವಿವಿಧ ಹಂತಗಳನ್ನು ವೀಕ್ಷಿಸಲು ಬೈನಾಕ್ಯುಲರ‍್ಸ್ ಅಥವಾ ದೂರದರ್ಶಕ ಬಳಸಬಹುದು. ಇದರಿಂದ ಗುಣಲಕ್ಷಣಗಳನ್ನು ಹೆಚ್ಚು ನಿಖರವಾಗಿ ಕಾಣಬಹುದು. ಸಂಪೂರ್ಣ ಗ್ರಹಣದ ಸಮಯ, ಒಟ್ಟಾರೆ ಗ್ರಹಣದ ಸಮಯವನ್ನು ಬರೆದುಕೊಳ್ಳಲು ಗಡಿಯಾರ, ಪೆನ್ನು, ಕಾಗದ ಮತ್ತು ಫೋಟೋತೆಗೆಯಲು ಕ್ಯಾಮೆರಾ ಇಟ್ಟುಕೊಳ್ಳಬಹುದು
ಹಂತ ೧: ಚಂದ್ರೋದಯದ ಸಮಯ, ನೀವಿರುವ ಸ್ಥಳದಲ್ಲಿ ಸಂಪೂರ್ಣ ಮತ್ತು ಪಾರ್ಶ್ವ ಗ್ರಹಣಗಳ ಸಮಯವನ್ನು ಮೊದಲೇ ತಿಳಿದುಕೊಳ್ಳಿ. ಚಂದ್ರೋದಯದ ಸಮಯವೆಂದರೆ ಚಂದ್ರ ದಿಗಂತವನ್ನು ದಾಟಿ ಮೇಲೆ ಬರುವ ಸಮಯ. ಇದನ್ನು ವಿವಿಧ ವೆಬ್‌ಸೈಟುಗಳಿಂದ ಪಡೆಯಬಹುದು. www.timeanddate .com ಕರ್ನಾಟಕದಲ್ಲಿ ೨೦೧೮ ರ ಜನವರಿ ೩೧ ರಂದು ಚಂದ್ರೋದಯದ ಸಮಯದ ವ್ಯಾಪ್ತಿ : ಪೂರ್ವದಲ್ಲಿ ೧೮.೧೩ ಗಂಟೆಯಿಂದ ಪಶ್ಚಿಮದಲ್ಲಿ (ಉದಾ: ಮುಳಬಾಗಿಲು) ೧೮.೨೮ ಗಂಟೆಯವರೆಗೆ(ಉದಾ: ಕಾರವಾರ) ಇರುತ್ತದೆ. ಹಂತ ೨: ೨೦೧೮ ರ ಜನವರಿ ೩೧ ಕ್ಕೆ ಮುನ್ನವೇ ವೀಕ್ಷಣೆಗೆ ಸೂಕ್ತ ಸ್ಥಳವನ್ನು ಗುರುತಿಸಿಕೊಳ್ಳಿ: * ದೊಡ್ಡ ದೊಡ್ಡ ಕಟ್ಟಡಗಳು. ಮರಗಳು, ಬೆಟ್ಟಗಳು ಅಡ್ಡವಿಲ್ಲದಂತೆ, ದಿಗಂತದಲ್ಲಿ ಚಂದ್ರೋದಯ ಸ್ಪಷ್ಟವಾಗಿ ಕಾಣುವಂತಹ ಸ್ಥಳವಾಗಿರಲಿ. ಎತ್ತರದ ಪ್ರದೇಶದಲ್ಲಿ ನಿಂತು ವೀಕ್ಷಿಸುವುದು ಒಳ್ಳೆಯದು(ಎತ್ತರದ ಕಟ್ಟಡ ಅಥವಾ ಬೆಟ್ಟದ ತುದಿ) * ಗ್ರಹಣ ವೀಕ್ಷಣೆಗೆ ಬಂದ ಜನರೆಲ್ಲ ಯಾವುದೇ ತೊಂದರೆಯಿಲ್ಲದೆ ವೀಕ್ಷಿಸುವಂತಹ ಸುರಕ್ಷಿತ ಪ್ರದೇಶವಾಗಿರಲಿ. * ವೀಕ್ಷಣೆಗೆ ಆಯ್ಕೆ ಮಾಡಿಕೊಂಡ ಸ್ಥಳ ಕತ್ತಲೆಯಿಂದ ಕೂಡಿದ್ದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ, ಕಾರಣ ಗ್ರಹಣದ ಚಂದ್ರ ಮಸುಕಾಗಿರುತ್ತದೆ. ನಗರ ಬೆಳಕಿನ ಮಾಲಿನ್ಯದಿಂದ ಹೊರಗಿರುವ ಪ್ರದೇಶಗಳು ವೀಕ್ಷಣೆಗೆ ಹೆಚ್ಚು ಪರಿಣಾಮಕಾರಿ. ಹಳ್ಳಿಗಳು ಮತ್ತುಜನವಸತಿ ಪ್ರದೇಶಗಳಲ್ಲಿ ಸ್ವಲ್ಪ ಸಮಯ ಬೀದಿ ದೀಪಗಳನ್ನು ಆರಿಸಲು ಕೋರಬಹುದು. ಹಂತ ೩: ಜನವರಿ ೧ ರ ಹುಣ್ಣಿಮೆಯಂದು ನಿಮ್ಮ ಗ್ರಹಣ ವೀಕ್ಷಣೆಯ ಸ್ಥಳವನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಚಂದ್ರ ಮತ್ತು ಜನವರಿ ೩೧ ರ ಚಂದ್ರಗ್ರಹಣಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳು: * ಭೂಮಿಯಿಂದ ಚಂದ್ರನ ದೂರ ೩೮೪,೪೦೦ ಕಿ.ಮೀ. ಆದ್ದರಿಂದ ಚಂದ್ರನಿಂದ ಬೆಳಕು ಭೂಮಿಗೆ ತಲುಪಲು ೧.೩ ಸೆಕೆಂಡುಗಳು ಬೇಕು. * ಪೆರಿಜೀ (ಭೂಮಿಯ ಸುತ್ತಲಿನ ಚಂದ್ರನ ಕಕ್ಷೆಯಲ್ಲಿ ಭೂಮಿ ಮತ್ತು ಚಂದ್ರನ ನಡುವಿನ ಕನಿಷ್ಠ ದೂರ) ಮತ್ತು ಅಪೊಜೀ (ಭೂಮಿಯ ಸುತ್ತಲಿನ ಚಂದ್ರನ ಕಕ್ಷೆಯಲ್ಲಿ ಭೂಮಿ ಮತ್ತು ಚಂದ್ರನ ನಡುವಿನ ಗರಿಷ್ಠ ದೂರ) ಗಳ ನಡುವಿನ ದೂರ ೫೦,೦೦೦ ಕಿ.ಮೀ. * ಸೂಪರ್ ಮೂನ್ ಸಾಮಾನ್ಯ ಚಂದ್ರನಿಗಿಂತ ೧೪% ಹೆಚ್ಚು ದೊಡ್ಡದಾಗಿ ಮತ್ತು ೩೦% ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. * ಭೂಮಿಯ ಸುತ್ತು ಚಂದ್ರನ ಪರಿಭ್ರಮಣ ವೇಗ ೧ ಕಿ.ಮೀ./ಸೆಕೆಂಡು. * ೩೧ ಜನವರಿ ೨೦೧೮ ರಂದು ಕರ್ನಾಟಕದಲ್ಲಿ ಸಂಪೂರ್ಣ ಸೂರ್ಯಗ್ರಹಣವು ೧೮.೫೯ ಗಂಟೆಗೆ ಸಂಭವಿಸುತ್ತದೆ. * ಕರ್ನಾಟಕದಲ್ಲಿ ೨೦೧೮ ರ ಜನವರಿ ೩೧ ರಂದು ಚಂದ್ರೋದಯದ ಸಮಯದ ವ್ಯಾಪ್ತಿ : ಪೂರ್ವದಲ್ಲಿ ೧೮.೧೩ ಗಂಟೆಯಿಂದ (ಉದಾ: ಮುಳಬಾಗಿಲು) ಪಶ್ಚಿಮದಲ್ಲಿ ೧೮.೨೮ಗಂಟೆಯವರೆಗೆ (ಉದಾ: ಕಾರವಾರ) ಇರುತ್ತದೆ. * ಕರ್ನಾಟಕದಲ್ಲಿ ೨೦೧೮ ರ ಜನವರಿ ೩೧ ರಂದು ಸಂಪೂರ್ಣ ಚಂದ್ರಗ್ರಹಣದ ಸಮಯದಲ್ಲಿ ಎತ್ತರದ(altitude) ವ್ಯಾಪ್ತಿಯು ಪೂರ್ವದಲ್ಲಿ (ಉದಾ: ಮುಳಬಾಗಿಲು) ೧೦೦ (೧೦ ಡಿಗ್ರಿಯಿಂದ) ಪಶ್ಚಿಮದಲ್ಲಿ (ಉದಾ: ಕಾರವಾರ) ೬.೫೦ (೬.೫ ಡಿಗ್ರಿಯವರೆಗೆ) ಇರುತ್ತದೆ. ಸೂರ್ಯನ ಬೆಳಕು ವಾತಾವರಣದಲ್ಲಿ ವಕ್ರೀಭವಿಸುತ್ತದೆ. ವಿಸ್ತೃತವಾದ ಹಾಗೂ ಖಚಿತ ಮಾಹಿತಿಗಾಗಿ ವೀಕ್ಷಿಸಬಹುದಾದ ವೆಬ್‌ಸೈಟ್‌ಗಳು :
 
ನೋಡಲು ಮರೆಯದಿರಿ ೨೦೧೮ ಜನವರಿ-೩೧ ರ ಪೂರ್ಣ ಚಂದ್ರಗ್ರಹಣ !
ಆಂಗ್ಲಮೂಲ : ಪ್ರಜ್ವಲ್ ಶಾಸ್ತ್ರಿ, ಹಿರಿಯ ವಿಜ್ಞಾನಿಗಳು, ಭಾರತೀಯ ಖಭೌತಶಾಸ್ತ್ರ ಸಂಸ್ಥೆ, ಬೆಂಗಳೂರು, ಮೊ: ೯೭೩೧೪೩೯೭೧೩, ಕನ್ನಡಕ್ಕೆ: ಜಿ.ವಿನುತ
ಕೃಪೆ : ಶಿಕ್ಷಣ ವಾರ್ತೆ ಸಂಪುಟ 18 ಸಂಚಿಕೆ 7 ಡಿಸೆಂಬರ್ 2017
18799 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು