ನಾವೇಕೆ ಕಥೆಗಳನ್ನು ಹೇಳುತ್ತೇವೆ ? -ಮಾಲವಿಕಾ ರಾಜನಾರಾಯಣ್

 

ನನಗೆ ಒಂದು ಬಲು ಕೆಟ್ಟ ಅಭ್ಯಾಸ ಇದೆ. ನಾನು ಓದಲು ಪ್ರಾರಂಭಿಸುವ  ಎಷ್ಟೋ ಪುಸ್ತಕಗಳನ್ನು ಓದಿ ಪೂರ್ಣಗೊಳಿಸದೆ ಹಾಗೇಯೇ ಬಿಟ್ಟು ಬಿಡುತ್ತೇನೆ.  ಯುವಲ್  ನೋಹ ಹರಾರಿ ಬರೆದ  ಸೇಪಿಯನ್ಸ್: ಮಾನವಕುಲದ ಸಂಕ್ಷಿಪ್ತ  ಇತಿಹಾಸ (Sapiens: A Brief History of Humankind by Yuval Noah Harari ) ಅವುಗಳಲ್ಲಿ ಒಂದಾಗಿದೆ. ನಾನು ಇನ್ಯಾವಾಗಲಾದರೂ ಅದನ್ನು ಓದಿ ಮುಗಿಸುತ್ತೇನೆ, ಮತ್ತು ನಾನು ಹಾಗೆ  ಮಾಡಿದ ಮೇಲೆ ಇನ್ನೂ ಉತ್ತಮ ಲೇಖನ ಬರೆಯುತ್ತೇನೆ,. ಆದರೆ ಈಗ, ನಾನು ಇಷ್ಟನ್ನು ಮಾತ್ರ ಹೇಳಬಲ್ಲೆ.

ಶೈಕ್ಷಣಿಕ ಯೋಜನೆಗಳನ್ನು ತಯಾರಿಸುವ ಬಗ್ಗೆ  ಅನೇಕ ಸಭೆಗಳಲ್ಲಿ ಮತ್ತು ಚರ್ಚೆಗಳ ಲ್ಲಿ ಭಾಗವಹಿಸಿದ ನನಗೆ, ಈ ಪುಸ್ತಕವು ಶಾಲೆಯಲ್ಲಿ ಕಲಿಸುವ ಎಲ್ಲಾ ವಿಷಯಗಳಿಗೆ ಅಂತಹ ಪ್ರಮುಖ ಸಂಪನ್ಮೂಲವಾಗಿದೆ ಎಂದು ಅನಿಸುತ್ತದೆ. ನಾವು ಮನುಷ್ಯರು ಹೇಗೆ ಒಂದು ಪ್ರಜಾತಿಯಾಗಿ ವಿಕಸನಗೊಂಡಿದ್ದೇವೆ ಎಂಬುದರ ಬಗ್ಗೆ ಅದ್ಭುತ ಒಳನೋಟವನ್ನು ನೀಡುತ್ತದೆ. ಈ ಇತಿಹಾಸವನ್ನು ಚೆನ್ನಾಗಿ ಅರ್ಥ ಮಾಡಿಕೊಂಡರೆ ಅದು  ಬಹುಶಃ ನಮ್ಮ ಜೀವನ-ಆಯ್ಕೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮತ್ತು ನಮ್ಮ ಈ ಗ್ರಹದ ಬಗ್ಗೆ ಸಹಾನುಭೂತಿ ಬೆಳಸಿಕೊಳ‍್ಳುವಂತೆ ಮಾಡುತ್ತದೆ . ಏಕೆಂದರೆ  ಇವೆರಡೂ ಇಂದು ತುರ್ತಾಗಿ ಗಮನಿಸಬೇಕಾದ ವಿಷಯಗಳು ಅದರಲ್ಲೂ ನಾವು ಶಿಕ್ಷಣಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವಾಗ ಈ ತುರ್ತು ಇನ್ನೂ ಹೆಚ್ಚುತ್ತದೆ.

ಮಾನವರಲ್ಲಿ ಅರಿವಿನ ಕ್ರಾಂತಿಯ ಬಗ್ಗೆ ಮಾತನಾಡುವಾಗ, ಸೆಪಿಯನ್ಸ್ ಕೃತಿಯ  ಲೇಖಕನು ಎಲ್ಲಾ ಇತರ ಜೀವಿಗಳಿಂದ ಮಾನವ ಜಾತಿಯನ್ನು ಯಾವುದು ಬೇರ್ಪಡಿಸುತ್ತದೆ ಎಂದರೆ ದೊಡ್ಡ-ಪ್ರಮಾಣದ ಸಹಭಾಗಿತ್ವಕ್ಕಾಗಿ ಸಮುದಾಯವನ್ನು ಏಕೀಕರಿಸುವ ಸಾಧನವಾಗಿ  ಕಥೆಗಳು ಮತ್ತು ಪುರಾಣಗಳನ್ನು ಬಳಸುವ ನಮ್ಮ ಸಾಮರ್ಥ್ಯ ಎಂದು ವಿವರಿಸುತ್ತಾರೆ. ನಾವು ಕೇವಲ ವೈಯಕ್ತಿಕ ಸಂಪರ್ಕವನ್ನು ಅವಲಂಬಿಸಿ ಸೀಮಿತ ಕಾಡುಹರಟೆಯ ಮೂಲಕ ಮಾತ್ರ ಮಾತುಕತೆ ಸಂಪರ್ಕ  ಮಾಡಿದರೆ, ಮಾನವ ಜಾತಿಗಳು 150 ಕ್ಕಿಂತಲೂ ಹೆಚ್ಚಿನ ಜನರನ್ನು ಒಳಗೊಂಡ ಗುಂಪಿಗಿಂತ ದೊಡ್ಡ ಗುಂಪನ್ನು ರಚಿಸುವುದು ಸಾಧ್ಯವಾಗುತ್ತಿರಲಿಲ್ಲವೆಂದು ನಂಬಲಾಗಿದೆ. ಬಹುಸಂಖ್ಯಾತ  ಗುಂಪು ಮಾಡಲು, ವೈಯಕ್ತಿಕ ಸಂಪರ್ಕ ಮತ್ತು ಸೀಮಿತ ಮಾತುಕತೆ ಸಂಪರ್ಕಕ್ಕಿಂತ ಹೆಚ್ಚಾದದ್ದು ಅಗತ್ಯವಾಗುತ್ತದೆ. ಕಲ್ಪನಾ ಲೋಕ ಸೃಜಿಸುವ  ನಮ್ಮ ಸಾಮರ್ಥ್ಯ, ಪುರಾಣ ಪುಣ್ಕತೆಗಳನ್ನು ರಚಿಸುವ ಮತ್ತು ಕಥೆಗಳನ್ನು ಹೇಳುವ ಸಾಮರ್ಥ್ಯ ಕಲ್ಪಿತ ಸತ್ಯಗಳನ್ನು ಮತ್ತು ನಂಬಿಕೆ ವ್ಯವಸ್ಥೆಗಳನ್ನು ರಚಿಸುವಲ್ಲಿ ಪ್ರಬಲ ಅಂಶವಾಗಿದೆ, ಇದೇ ಮಹಾನ್ ನಾಗರಿಕತೆಗಳು ಮತ್ತು ಸಾಮ್ರಾಜ್ಯಗಳ ಹೆಗ್ಗುರುತು. ಇವೇ ಮಾನವ ಪ್ರಭೇದವು ತನ್ನ ಪಾಳೆಯಗಳನ್ನು ಹರಡಲು ಮತ್ತು ಇತರ ಅನೇಕ ಜೀವಿ ಜಾತಿಗಳ ಭೂಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲು, ಕೆಲವೊಮ್ಮೆ ಕೆಲವನ್ನು ನಾಮಾವಶೇಷ ಮಾಡಲು ಅವಕಾಶ ಮಾಡಿಕೊಟ್ಟಿರುವಂತಹುದು. ಇದಲ್ಲದೆ, ನಮ್ಮ ಮಿದುಳಿನ ಬೆಳವಣಿಗೆಯು ಆರ್ಕ್ಟಿಕ್ ನಿಂದ ಉಷ್ಣವಲಯದವರೆಗೆ ಹವಾಮಾನಕ್ಕೆ ತಕ್ಕಂತೆ ಹೊಂದಿಕೊಂಡು ಬಾಳಲು ಪರ್ವತಗಳನ್ನು ಹತ್ತಲು, ಮತ್ತು ಸಮುದ್ರಗಳಲ್ಲಿ ನೌಕಾಯಾನ ಮಾಡಲು ಪರಿಕಲ್ಪನೆಗಳನ್ನು ಆವಿಷ್ಕರಿಸುವ ಮತ್ತು ಉಪಕರಣಗಳನ್ನು ರಚಿಸುವ ನಮ್ಮ ಸಾಮರ್ಥ್ಯಕ್ಕೆ ಕಾರಣವಾಗಿದೆ. ಸಮುದಾಯಗಳು ವಿಸ್ತರಿಸಲ್ಪಟ್ಟಂತೆ ನಾವು  ವಿಚಾರಗಳನ್ನು ತಿಳಿಸಲು ಸಂಕೀರ್ಣ ಭಾಷಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿದ್ದೇವೆ ಮತ್ತು ಅವರ ಕಲ್ಪಿತ ವಾಸ್ತವತೆಗಳು ಮತ್ತು ಪುರಾಣಗಳನ್ನು ಮತ್ತಷ್ಟು ಹರಡಿದ್ದೇವೆ ಮತ್ತು  ಅದರ ಮೇಲೆ ನಿರ್ಮಿಸಿದ್ದೇವೆ.

ಕಥೆಯ ಮೋಡಿ ಎಂದರೆ  ಅದರ ಬಗೆಯನ್ನು ಸೆಳೆದು ಇಟ್ಟುಕೊಳ್ಳುವ ಗುಣ. ಈಗ ಸಹಸ್ರಮಾನಗಳವರೆಗೆ, ಕಥೆಗಳು ಅಮೂರ್ತವಾಗಿದ್ದುಕೊಂಡೇ ನಮಗೆ ಸ್ಫೂರ್ತಿ ನೀಡಿವೆ ಮತ್ತು ನಾವು ಜೀವಂತಿಕೆಯಿಂದ ನಳನಳಿಸುವಂತೆ ಮಾಡಿವೆ. ಇತರ ಹಲವು ಪ್ರಾಣಿ ಜಾತಿಗಳಲ್ಲಿ, ವರ್ತನೆಯ ಬದಲಾವಣೆಗಳು ಆಗ ಬೇಕಾದರೆ ಅವುಗಳ  ಡಿಎನ್ಎ ಯಲ್ಲಿ  (ಇದು ಬಹು ದೀರ್ಘಕಾಲ ನಡೆಯುವ ಕಾರ್ಯ) ಬದಲಾವಣೆಗಳು  ನಡೆಯ ಬೇಕು  ಆದರೆ ಮಾನವರ ವಿಷಯಕ್ಕೆ ಬಂದಾಗ, ಒಂದೇ ಒಂದು ಕಥೆ ವರ್ತನೆಯ ಬದಲಾವಣೆಯನ್ನು ಇನ್ನೂ ಹೆಚ್ಚು ತೀವ್ರವಾಗಿ ಆಗುವಂತೆ ಮಾಡಬಲ್ಲದು. ನಮ್ಮ ಮಕ್ಕಳು ಕಥೆಗಳಿಗಾಗಿ ಹಂಬಲಿಸುತ್ತವೆ ಮತ್ತು ನಮ್ಮ ಸಂಸ್ಕೃತಿಗಳು ಕಥಾ ನಿರೂಪಣೆಗಳೊಂದಿಗೆ ಪ್ರವರ್ಧಮಾನವಾಗಿ ಬೆಳೆಯುತ್ತವೆ. ನಾವು ಅಪ್ರಜ್ಞಾ ಪೂರ್ವಕವಾಗಿ ಪುರಾಣಗಳನ್ನು ಕಟ್ಟುವ  ಸಿದ್ಧಿ ಪಡೆದಿದ್ದೇವೆ ಏಕೆಂದರೆ ಈ ಗುಣವು ನಮ್ಮ ಡಿಎನ್ಎಯಲ್ಲಿಯೆ ಸುಪ್ತವಾಗಿದೆ . ಪ್ರಾಯೋಗಿಕ ಸಾಕ್ಷಿಗಳು ದೊರಕದೇ ಇರುವಾಗ, ಆ ಕಾರ್ಯ ಕಾರಣ ಕೊರತೆಯನ್ನು  ಕಥೆಗಳಿಂದ ತುಂಬಿಬಿಡುತ್ತೇವೆ. ಇತಿಹಾಸದ ಬಗ್ಗೆ ನಮ್ಮ ಗ್ರಹಿಕೆಗೆ ಸಂಬಂಧಿಸಿದ ವಿವಾದಾತ್ಮಕ ವಿಷಯಗಳು ಸಾಮಾನ್ಯವಾಗಿ  ಒಂದಕ್ಕೊಂದು ವಿರುದ್ಧ ನಿರೂಪಣೆಗಳಲ್ಲಿ ಸ್ಥಗಿತಗೊಂಡಿವೆ. ನಾವು ಒಂದು ಸಂಕೀರ್ಣವಾದ ನೇಯ್ದ ವಸ್ತ್ರವನ್ನು ಹೊಂದುತ್ತೇವೆ, ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಸತ್ಯಾಂಶವಿದ್ದರೂ, ನಮ್ಮ ಮನಸ್ಸು  ಸಂಪರ್ಕ ನಿಲುಕದ  ಭವಿಷ್ಯಕ್ಕಾಗಿ ಕಲ್ಪಿತ ಸತ್ಯಗಳನ್ನು ಹೆಣೆದುಬಿಟ್ಟಿರುತ್ತದೆ.

ನಾವು ನಿಜವಾಗಿಯೂ ಶಾಂತಿ ನೆಮ್ಮದಿಯನ್ನು ಕಂಡುಕೊಳ್ಳುವ ವಿಷಯವೆಂದರೆ ಒಂದು ಒಳ್ಳೆಯ ಕಥೆ ಕೇಳುವ ಮತ್ತು ಓದುವ ಮೂಲಕ . ಅದು ನಮ್ಮ ಅಸ್ತಿತ್ವವನ್ನು ಮಾತ್ರ ರೂಪಿಸಿರುವುದಿಲ್ಲ, ನಮ್ಮ ಜೀವನ ಶೈಲಿಯನ್ನು ಮತ್ತು ಜಗತ್ತನ್ನು ನಾವು ನೋಡುವ ಮತ್ತು ನಡೆಸಿಕೊಳ್ಳುವ ರೀತಿಯನ್ನೂ  ಬದಲಿಸುವ ಶಕ್ತಿ ಅದಕ್ಕೆ ಇದೆ. ಆದ್ದರಿಂದ, ಹೇಳಿ ನಾವು ಯಾವ ಕಥೆ ಹೇಳೋಣ?

ಮೂಲ: ಮಾಲವಿಕಾ ರಾಜನಾರಾಯಣ್   ' ಬಯಲು ' ಇ ಪತ್ರಿಕೆಗಾಗಿ ಈ ಲೇಖನವನ್ನು ಬರೆದ ಮಾಲವಿಕಾ ರಾಜನಾರಾಯಣ್, ಕರ್ನಾಟಕದ ಯಾದಗೀರ್ ನ, ಅಜೀಂ ಪ್ರೇಂಜಿ ಪ್ರತಿಷ್ಠಾನದಲ್ಲಿ ಫೆಲೋ.ಆಗಿ ಕೆಲಸ ಮಾಡುತ್ತಿದ್ದಾರೆ.

ಕನ್ನಡಾನುವಾದ : ಜೈಕುಮಾರ್ ಮರಿಯಪ್ಪ

 

19654 ನೊಂದಾಯಿತ ಬಳಕೆದಾರರು
7777 ಸಂಪನ್ಮೂಲಗಳು