ನಾನು ಎಲ್ಲಿಗೆ ಸೇರಿದವಳು ಎಂದು ನಿರ್ಧರಿಸುವವರು ಯಾರು?-ರಿತಿಕಾ ಚಾವ್ಲಾ

ಊಟದ ಗಂಟೆಯಾಯಿತು. ನನ್ನ ಪಾಟಿ ಚೀಲದಿಂದ ಊಟದ ಡಬ್ಬಿ ತೆಗೆದುಕೊಂಡು ತರಗತಿ ಕೋಣೆಯಿಂದ ಹೊರನಡೆದೆ. ಮೆಟ್ಟಲಿಳಿದು ಸಾಮಾನ್ಯವಾಗಿ ನಾನು ಊಟಕ್ಕೆ ಕುಳಿತುಕೊಳ್ಳುವ ಶೆಡ್ಡಿನ ಹತ್ತಿರ ಹೋಗಿ ಕುಳಿತುಕೊಂಡೆ. ಕಬ್ಬಿಣದ ಸರಳುಗಳ ನಡುವಿನಿಂದ ಆಚೆ ನೋಡುವಾಗ, ನನ್ನ ಕೆಲವು ಸಹಪಾಠಿಗಳು ಹೊರಗೆ ಮರದ ಕೆಳಗೆ ವೃತ್ತಾಕಾರವಾಗಿ ಕುಳಿತುಕೊಂಡಿರುವುದು, ಇನ್ನು ಕೆಲವರು ಮೈದಾನದಲ್ಲಿ ಆಟ ಆಡುತ್ತಿರುವುದು ಕಾಣಿಸುತ್ತದೆ.  ಊಟ ಮುಗಿಸಿ ನಾನು ಕೆಲಸದಾಕೆಯ ಪಕ್ಕ ಹೋಗಿ ಕುಳಿತುಕೊಂಡೆ. ಶಾಲೆಯಲ್ಲಿ ನನಗೆ ಇರುವ ಏಕೈಕ ಸ್ನೇಹಿತೆ ಅಂದರೆ ಇವರು ಮಾತ್ರ. ಅವರು ಕಚೇರಿಯಲ್ಲಿ ಕೆಲಸ ಮಾಡುತ್ತಾರೆ. ನನ್ನನ್ನು ಚುಡಾಯಿಸಲು ಅವರು ನನ್ನನ್ನು ಕರೆಯುವುದು ಶಕ್ತಿಮಾನ್ ಎಂದು. ಅವರು ಹಾಗೆ ಕರೆಯುವುದು ನನಗೆ ಇಷ್ಟ. ಶಾಲೆಯಲ್ಲಿ ಕಳೆಯುವ ಪ್ರತಿದಿನವೂ ಒಂದೇ ತೆರನಾಗಿರುತ್ತದೆ, ಏನೂ ವ್ಯತ್ಯಾಸ ಇಲ್ಲ, ಊಟದ ವೇಳೆ ಕೂಡ... ಪ್ರತಿ ಮಧ್ಯಾಹ್ನ ನಾನು ಪರಿಚಿತ ಮುಖಗಳನ್ನು ಹುಡುಕಿಕೊಂಡು ಹೊರಡುತ್ತೇನೆ. - ಸ್ನೇಹಾ*

ಶಾಲಾ ವಾರ್ಷಿಕೋತ್ಸವ ಸಮೀಪಿಸುತ್ತಿದೆ. ನನಗಂತೂ ತುಂಬಾ ಸಂತೋಷವಾಗುತ್ತಿದೆ. ವರ್ಷದ ಈ ಒಂದು ಸಂದರ್ಭದಲ್ಲಿ ಮಾತ್ರ ಇತರರಿಗೆ ನನ್ನ ಅವಶ್ಯಕತೆ ಇದೆ ಎಂದು ನನಗನ್ನಿಸುತ್ತದೆ. ನನಗೆ ನೃತ್ಯ ಮಾಡುವುದೆಂದರೆ ಇಷ್ಟ, ಅದನ್ನು ಚೆನ್ನಾಗಿ ಮಾಡುತ್ತೇನೆ ಕೂಡ. ಹಾಗಾಗಿ ಎಲ್ಲಾ ನೃತ್ಯತಂಡಗಳಿಗೂ ನಾನು ಬೇಕು. ವಾರ್ಷಿಕೋತ್ಸವದ ಈ ಸಂದರ್ಭ ಮಾತ್ರ ಇತರ ದಿನಗಳಿಗಿಂತ ಭಿನ್ನವಾಗಿರುತ್ತದೆ. ಇತರ ದಿನಗಳಲ್ಲಿ ತರಗತಿಯಲ್ಲಿ ಶಿಕ್ಷಕರು ಗುಂಪು ಚಟುವಟಿಕೆ ಮಾಡಲು ಹೇಳಿದಾಗ, ಶಿಕ್ಷಕರು ನಿರ್ದಿಷ್ಟವಾಗಿ ನನ್ನನ್ನು ಸೇರಿಸಿಕೊಳ್ಳಿ ಎಂದು ಹೇಳುವ ತನಕ ಯಾರೂ ನನ್ನನ್ನು ಅವರ ಗುಂಪಿನಲ್ಲಿ ಸೇರಿಸಿಕೊಳ್ಳುವುದಿಲ್ಲ. ಶಿಕ್ಷಕರೇ ಗುಂಪುಗಳನ್ನು ಮಾಡಿದ ಸಂದರ್ಭದಲ್ಲಿ ಕೂಡ, ಗುಂಪಿನ ಇತರರು ನನಗೆ ಚಿತ್ರಗಳನ್ನು ಸಂಗ್ರಹ ಮಾಡುವುದು, ಇನ್ನಿತರೆ ಅತ್ಯಂತ ಸುಲಭವಾದ ಕೆಲಸ ವಹಿಸುತ್ತಾರೆ. ನನಗೆ ಬರೆಯಲು ಮತ್ತು ನೆನಪಿಟ್ಟುಕೊಳ್ಳಲು ಸಮಸ್ಯೆ ಇದೆ ನಿಜ, ಆದರೆ ಅದನ್ನು ನಾನು ಉದ್ದೇಶಪೂರ್ವಕವಾಗಿ ಮಾಡುವುದಲ್ಲ. ನೃತ್ಯಕ್ಕೆ ನಾನು ಬೇಕಾಗುವ ಹಾಗೆ ತರಗತಿಯ ಇನ್ನಿತರ ಚಟುವಟಿಕೆಗಳಲ್ಲಿ ಕೂಡ ನನ್ನನ್ನು ಏಕೆ ಸೇರಿಸಿಕೊಳ್ಳುವುದಿಲ್ಲ? - ಸೊನಾಲ್*

ಸ್ನೇಹಾ ಮತ್ತು ಸೊನಾಲ್ ಅವರ ಈ ಎರಡು ಕತೆಗಳು ಸತ್ಯ ಕತೆಗಳು. ಅವರಿಬ್ಬರು ಒಂದು ಸಮಾವೇಶಿ ಶಿಕ್ಷಣ ಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಎಂಟನೆ ತರಗತಿಯ ವಿದ್ಯಾರ್ಥಿಗಳು. ನಾನು ಇಲ್ಲಿ ಹೇಳುತ್ತಿರುವ ಸಮಾವೇಶಿ ಶಿಕ್ಷಣ ಸಂಸ್ಥೆ ಎಂದರೆ, ಈ ಸಂಸ್ಥೆಯಲ್ಲಿ ವಿವಿಧ ಸಾಮಾಜಿಕ, ಆರ್ಥಿಕ ಹಿನ್ನೆಲೆಯಿಂದ ಬಂದಿರುವ ವಿದ್ಯಾರ್ಥಿಗಳು ಮತ್ತು ನರ ಸಮಸ್ಯೆಯೂ ಸೇರಿದಂತೆ ವಿಶೇಷ ಅವಶ್ಯಕತೆಯುಳ್ಳ ಮಕ್ಕಳು ಒಟ್ಟಾಗಿ ಕಲಿಯುತ್ತಾರೆ. ಕಲಿಯುವುದರಲ್ಲಿ ಹಿಂದುಳಿದ ಅಥವಾ ಅಸಮರ್ಥತೆಯುಳ್ಳ ಮಕ್ಕಳಿಗೆ ಶಾಲೆ ಮತ್ತು ಶಿಕ್ಷಕರು ಪರಿಹಾರ ತರಗತಿಗಳು, ಗಣಿತ ಮತ್ತು ಇಂಗ್ಲಿಷಿನಲ್ಲಿ ಸಮಾನಾಂತರ ತರಗತಿಗಳು, ವಿಭಿನ್ನ  ಪಠ್ಯಕ್ರಮ, ವಿಭಿನ್ನ ಮೌಲ್ಯಮಾಪನ ವಿಧಾನ, ಇತ್ಯಾದಿಗಳ ಮೂಲಕ ಹೆಚ್ಚುವರಿ ಸಹಾಯವನ್ನು ಕೊಡುತ್ತಿರುತ್ತಾರೆ.

ಈ ಶಾಲೆಯಲ್ಲಿ ಕಲಿಯುತ್ತಿರುವ ವಿಶೇಷ ಅವಶ್ಯಕತೆಯುಳ್ಳ ಎಲ್ಲಾ ವಿದ್ಯಾರ್ಥಿಗಳ ಪರಿಚಯ, ಅವರಿಗೆ ತಾವು ಪಾಠ ಮಾಡುತ್ತಿರಲಿ ಇಲ್ಲದಿರಲಿ ಎಲ್ಲಾ ಶಿಕ್ಷಕರಿಗೆ ಮತ್ತು ಶಾಲಾ ಸಿಬ್ಬಂದಿಗೆ ಇದೆ. ಶಾಲೆಯಲ್ಲಿ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳನ್ನು ತಂದೆತಾಯಿಗಳೊಂದಿಗೆ ಚರ್ಚಿಸಲಾಗುತ್ತದೆ. ತಂದೆತಾಯಿಗಳು , ಶಿಕ್ಷಕರು, ಪ್ರಾಂಶುಪಾಲರು ಮತ್ತು ಕೆಲವೊಮ್ಮೆ ಶಾಲಾ ಸಮಾಲೋಚಕರ ಜೊತೆಗೆ ಪರಿಣಾಮಕಾರಿಯಾದ ಸಂಪರ್ಕ ಮಾತುಕತೆಯ ಬಂಧ ನಡೆಯುತ್ತಿರುತ್ತದೆ. ಇಷ್ಟಿದ್ದೂ ಶಾಲೆ, ಶಿಕ್ಷಕರು ಮತ್ತು ತಂದೆತಾಯಿಗಳನ್ನೂ ಮೀರಿದ ಮತ್ತು ಅವರು ಬದಲಾಯಿಸಲು ಸಾಧ್ಯವಾಗದಂತಹ ಪರಿಸ್ಥಿತಿಯೊಂದು ಸ್ನೇಹಾ ಮತ್ತು ಸೊನಾಲ್ ತರಹದ ಮಕ್ಕಳನ್ನು ಕಾಡುತ್ತಿರುತ್ತದೆ. ಈ ಪರಿಸ್ಥಿತಿಯು ಶಾಲೆಯಲ್ಲಿರುವ ’ಇತರೆ’ ಮಕ್ಕಳ ಕಾರಣದಿಂದಾಗಿ ಏರ್ಪಡುತ್ತದೆ.  
ಸ್ನೇಹಾಗೆ ಡೌನ್ ಸಿಂಡ್ರೋಮ್ ಇದೆ. ಹಾಗಾಗಿ ಅವಳ ’ವೈಕಲ್ಯತೆ’ ಇತರರಿಗೆ ’ಕಾಣಿಸು’ತ್ತದೆ. ಇದರ ಅರ್ಥ ಅವಳ ತರಗತಿಯಲ್ಲಿರುವ ಇತರ ವಿದ್ಯಾರ್ಥಿಗಳು ಅವಳನ್ನು ಸೇರಿಸಿಕೊಳ್ಳುವುದೇ ಇಲ್ಲವೆಂದಲ್ಲ. ಆರಂಭದಲ್ಲಿ, ಅವಳ ತರಗತಿಗೆ ಸೇರಿದ ಹೊಸ ಹುಡುಗಿಯೊಬ್ಬಳು ಸ್ನೇಹಾಳನ್ನು ಮಾತನಾಡಿಸುವ ಪ್ರಯತ್ನ ಮಾಡಿದಳು. ಆದರೆ ಸ್ನೇಹಾ ತುಂಬಾ ಸೂಕ್ಷ್ಮ ಮನಸ್ಸಿನವಳು ಎಂದು ಅನಿಸಿದ ಕೂಡಲೆ ಅವಳು ಸ್ನೇಹಾಳಿಂದ ದೂರವಾದಳು. ಅವಳ ತರಗತಿಯಲ್ಲಿರುವ ಇತರ ಮಕ್ಕಳ್ಳ್ಯಾರೂ  ಸ್ನೇಹಾಳನ್ನು ಚುಡಾಯಿಸುವುದಾಗಲಿ, ಅವಳಿಗೆ ತಂಟೆ ಮಾಡುವುದಾಗಲಿ ಮಾಡುವುದಾಗಲೀ ಇಲ್ಲವಾದರೂ, ಸ್ನೇಹಾ ಒಂದು ರೀತಿಯಲ್ಲಿ ಸ್ನೇಹಿತರಿಲ್ಲದೆ ಒಂಟಿಯಾಗಿರುತ್ತಾಳೆ. ಮಿಕ್ಕ ಮಕ್ಕಳದಕ್ಕಿಂತ ಅವಳ ಬದುಕೇ ಬೇರೆ.  ಇತರ ಮಕ್ಕಳು ಏರ್ಪಡಿಸುವ ’ರಾತ್ರಿಯಿಡಿ ಒಟ್ಟಿಗೆ ಉಳಿದುಕೊಳ್ಳುವ’ ಅಥವಾ ಹುಟ್ಟು ಹಬ್ಬದ ಸಂತೋಷಕೂಟಗಳಿಗೆ ಅವಳಿಗೆ ಆಹ್ವಾನ ಬರುವುದಿಲ್ಲ. ಇಡೀ ತರಗತಿಗೆ ಆಹ್ವಾನ ಕೊಡುವಂತಹ ಸಂದರ್ಭ ಬಂದಾಗ ಮಾತ್ರ ಸ್ನೇಹಾಳಿಗೆ ಕೂಡಾ ಆಹ್ವಾನ ಇರುತ್ತದೆಯೇ ಹೊರತು, ಕೆಲವೇ ವಿಶೇಷ ಸ್ನೇಹಿತರು ಜೊತೆಗೆ ಸೇರುವ ಸಂದರ್ಭದಲ್ಲಿ ಅವಳನ್ನು ಆಹ್ವಾನಿಸುವುದಿಲ್ಲ.
ಇನ್ನೊಂದೆಡೆ ಸೊನಾಲ್ ಪರಿಸ್ಥಿತಿ ಇದಕ್ಕಿಂತ ಸ್ವಲ್ಪ ಭಿನ್ನ. ಅವಳಿಗೆ ಸ್ನೇಹಿತರು ಇಲ್ಲವೆಂದಲ್ಲ. ಅವಳು ಉತ್ತಮ ನೃತ್ಯಗಾತಿ ಮತ್ತು ಶಾಲೆಯ ಎಲ್ಲ ಪೂರಕ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಇಷ್ಟಪಡುತ್ತಾಳೆ. ಆದರೆ ಶೈಕ್ಷಣಿಕ ಚಟುವಟಿಕೆಗಳಿಗೆ ಬಂದಾಗ ಮಾತ್ರ ತಾನು ಇತರರಿಗೆ ಸರಿಸಾಟಿ ಅಲ್ಲ ಎಂಬುದನ್ನು ಅವಳು ಮನಗಂಡಿದ್ದಾಳೆ. ಈ ಸೂಕ್ಷ್ಮವಾದ ತಾರತಮ್ಯ ಧೋರಣೆ ಅವಳಿಗೆ ನೋವುಂಟುಮಾಡುತ್ತದೆ. ಆದರೆ ಅವಳು ಈ ನೋವನ್ನು ತನ್ನ ಶಿಕ್ಷಕರಿಗಾಗಲಿ ಅಥವ ತನ್ನ ತಂದೆತಾಯಿಯರ ಬಳಿಯಾಗಲಿ ಹೇಳಿಕೊಂಡಿಲ್ಲ; ಅವರಿಗೆಲ್ಲಿ ಬೇಜಾರಾಗುತ್ತದೋ ಎಂಬ ಅಳುಕು ಅವಳಿಗೆ. ಸೊನಾಲ್ ಪೂರಕ ತರಗತಿಗಳಿಗೆ ಹಾeರಾಗುತ್ತಾಳೆ. ಇಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಕ್ಕಳಿರುತ್ತಾರೆ. ಇದರಿಂದಾಗಿ ಅವಳಿಗೆ ತನ್ನ ಇಂಗ್ಲಿಷ್ ಶಿಕ್ಷಕರ ಜೊತೆ ಹೆಚ್ಚಿನ ಬಾಂಧವ್ಯ ಇದೆ. ಆದರೆ ಅವಳು ತಾನು ಸಾಮಾನ್ಯ ತರಗತಿಯಲ್ಲಿ ಎಲ್ಲರೊಂದಿಗೆ ಬೆರೆಯಬೇಕೆಂದು ಹಂಬಲಿಸುತ್ತಾಳೆ.  
ಸೊನಾಲ್ ತರಹದ ವಿದ್ಯಾರ್ಥಿಗಳಿಗೆ ಸಮಾವೇಶಿ ಶಿಕ್ಷಣ ವ್ಯವಸ್ಥೆಯಲ್ಲಿ ಇರುವುದು ಕಷ್ಟವಾಗುತ್ತದೆ, ಅದಕ್ಕಿಂತ ಹೆಚ್ಚು ಕಷ್ಟ ತಮ್ಮ ವೈಕಲ್ಯತೆ ಎದ್ದು ಕಾಣುವ ಸ್ನೇಹಾ ತರಹದ ವಿದ್ಯಾರ್ಥಿಗಳಿಗಾಗುತ್ತಿರುತ್ತದೆ. ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳನ್ನು ಇವರನ್ನು ಎಲ್ಲರಂತೆ ಸಮಾನವಾಗಿ ಕಾಣುವುದರಿಂದಾಗಲಿ ಅಥವ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಲ್ಲರೊಂದಿಗೆ ಬೆರೆಯಲು ಸಿಗುವ ಅವಕಾಶದಿಂದಾಗಲಿ ಇವರು ಪ್ರತಿದಿನ ಅನುಭವಿಸುವ ಏಕಾಂಗಿತನ ಮರೆಯಾಗುವುದಿಲ್ಲ. ಬೇರೆ ವಿದ್ಯಾರ್ಥಿಗಳು ಇವರನ್ನು ಛೇಡಿಸಿದ, ಅಪಹಾಸ್ಯಗೈದ ಸಂದರ್ಭಗಳಲ್ಲಿ ಶಿಕ್ಷಕರು ಮಧ್ಯ ಪ್ರವೇಶಿಸಿ, ಆ ವಿದ್ಯಾರ್ಥಿಗಳಿಗೆ ಗದರಿ ಬುದ್ಧಿ ಹೇಳುತ್ತಾರೆ. ಒಂದು ತರಗತಿಯಲ್ಲಿನ ವಿದ್ಯಾರ್ಥಿಗಳ ನಡುವಿನ ವೈವಿಧ್ಯವನ್ನು ಎಲ್ಲರೂ ಗ್ರಹಿಸಬೇಕು ಮತ್ತು ಪರಸ್ಪರರ ಅವಶ್ಯಕತೆಯ ಬಗ್ಗೆ ಎಲ್ಲರೂ ಸಂವೇದನಾಶೀಲರಾಗಿರಬೇಕು ಎನ್ನುವ ಕಾರಣಕ್ಕಾಗಿ ಶಿಕ್ಷಕರು ಸರ್ಕಲ್ ಟೈಮ್ ರೀತಿಯ ಚಟುವಟಿಕೆಗಳನ್ನು ಮಾಡಿಸುತ್ತಾರೆ; ವಿಶೇಷ ಅವಶ್ಯಕತೆಯುಳ್ಳ ವಿದ್ಯಾರ್ಥಿ ಮತ್ತು ಅವರ ಸಹಪಾಠಿಯನ್ನು ಎದುರು ಬದುರು ಕೂರಿಸಿ, ಅವರಿಗೆ ಪರಸ್ಪರ ಮಾತನಾಡಿಸಲು ಅವಕಾಶ ಮಾಡಿಕೊಡುವುದೂ ಇದೆ. ಆದರೆ ಒಂದು ಹಂತದ ಮೇಲೆ, ಇತರ ವಿದ್ಯಾರ್ಥಿಗಳು ಕೂಡ ಇನ್ನೂ ಎಳೆಯ ಮಕ್ಕಳೇ ಆಗಿರುವುದರಿಂದ, ಅವರಿಗೆ ಹೆಚ್ಚು ಉಪದೇಶ ಮಾಡುವುದರಿಂದ ಒಳ್ಳೆಯದಾಗುವ ಬದಲು, ಅದು ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಎಷ್ಟರ ಮಟ್ಟಿಗೆ ಶಿಕ್ಷಕರು ಇಂತಹ ಸಂದರ್ಭದಲ್ಲಿ ಮಧ್ಯಪ್ರವೇಶಿಸಬಹುದು? ಈ ವಿದ್ಯಾರ್ಥಿಗಳ ಕಲಿಕಾ ವಾತಾವರಣವನ್ನು ಅವರು ಎಷ್ಟರ ಮಟ್ಟಿಗೆ ಬದಲಾಯಿಸಬಹುದು ಅಥವ ಹತೋಟಿಯಲ್ಲಿ ಇಡಬಹುದು? ವಿದ್ಯಾರ್ಥಿಗಳ ವರ್ತನೆಯ ಮೇಲೆ  ಅಷ್ಟರ ಮಟ್ಟಿಗೆ ಪ್ರಭಾವ ಬೀರಲು ನಿಜವಾಗಿಯೂ ಶಿಕ್ಷಕರಿಂದ ಸಾಧ್ಯವೇ? ಇದಕ್ಕೆ ಉತ್ತರ, ದೀರ್ಘಕಾಲೀನ ದೃಷ್ಟಿಯಿಂದ ಹೌದಾದರೂ, ತಕ್ಷಣಕ್ಕೆ ಅಲ್ಲ.
ಸಾಮಾನ್ಯವಾಗಿ ಪ್ರತಿ ವಿದ್ಯಾರ್ಥಿಗೂ ಒಬ್ಬ ಸ್ನೇಹಿತ/ತೆ ಅಂತ ಇರುವುದಿದೆ ಅಥವ ಅವರು ಒಂದು ಸ್ನೇಹಿತರ ತಂಡದ ಭಾಗವಾಗಿರುತ್ತಾರೆ. ಈ ಸ್ನೇಹಸಂಬಂಧಗಳು ವಿದ್ಯಾರ್ಥಿಗಳ ನಡುವೆ ಇರುವ ಒಂದು ಸಾಮಾನ್ಯ ಆಸಕ್ತಿಯ ಕಾರಣದಿಂದಾಗಿ ಮತ್ತು ತಮ್ಮ ಭಾವನೆಗಳನ್ನು, ಯೋಚನೆಗಳನ್ನು ಪರಸ್ಪರ ಹಂಚಿಕೊಳ್ಳಬೇಕಾದ ಒಂದು ಮೂಲಭೂತ ಅವಶ್ಯಕತೆಯ ಕಾರಣದಿಂದಾಗಿ ಏರ್ಪಟಿರುತ್ತವೆ. ಆದರೆ ವಿಶೇಷ ಅವಶ್ಯಕತೆಯುಳ್ಳ ಮಕ್ಕಳಲ್ಲಿ ಇದು ಕಂಡುಬರುವುದಿಲ್ಲ. ಹಿಂದೆ ಹೇಳಿದಂತೆ ವಿಶೇಷ ಅವಶ್ಯಕತೆಯುಳ್ಳ ಮಕ್ಕಳಿಗೆ ಶಾಲೆಯು ಪರ್ಯಾಯ ತರಗತಿಗಳ ರೂಪದಲ್ಲಿ ಹೆಚ್ಚಿನ ಬೆಂಬಲವನ್ನು ಕೊಡುತ್ತಿರುತ್ತದೆ. ಗಣಿತ ಅಥವ ಇಂಗ್ಲಿಷ್‌ನಲ್ಲಿ ಇತರ ಕಾರಣಗಳಿಗಾಗಿ ಕಡಿಮೆ ಅಂಕ ಪಡೆದುಕೊಂಡಿರುವ ಮಕ್ಕಳು ಕೂಡ ಈ ತರಗತಿಗಳಿಗೆ ಹಾಜರಾಗುತ್ತಿರುತ್ತಾರೆ. ಹೆಚ್ಚಿನ ವಿದ್ಯಾರ್ಥಿಗಳು ಈ ಪರ್ಯಾಯ ತರಗತಿಗಳು ತಮಗೆ ಸಹಕಾರಿಯಾಗಿವೆ ಎಂದರೂ, ಈ ತರಗತಿಗಳಿಗೆ ಹಾಜರಾಗಬೇಕಾದ ಅವಶ್ಯಕತೆ ಇಲ್ಲದ ವಿದ್ಯಾರ್ಥಿಗಳು ಅಲ್ಲಿಗೆ ಹೋಗುವುದನ್ನು ಇಷ್ಟಪಡುವುದಿಲ್ಲ.
ಸಮಾವೇಶಿ ಶಾಲಾ ವಾತಾವರಣದಲ್ಲಿ ಬೆಳೆದ ಮಕ್ಕಳು ಈ ಶಾಲೆ ಬಿಟ್ಟು ಹೋದ ನಂತರ, ಇಲ್ಲಿ ಅವರಿಗಾದ ಅನುಭವದ ಬಗ್ಗೆ ಕೇಳಿದಾಗ, ಇಂತಹ ಒಂದು ಶಾಲೆಯ ಮುಖ್ಯೋಪಾಧ್ಯಾಯರು ಹೇಳುವ ಪ್ರಕಾರ, ಈ ಶಾಲೆಯಲ್ಲಿ ಕಲಿತು ಹೋದ ’ಸಾಮಾನ್ಯ’ ವಿದ್ಯಾರ್ಥಿಗಳು, ಶಾಲೆಗೆ ಭೇಟಿ ಇತ್ತು ಇಂತಹ ಸಮಾವೇಶಿ ಶಿಕ್ಷಣದ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಶಾಲೆಗೆ ಕೃತಜ್ಞತೆ ಸಲ್ಲಿಸಿದ್ದಿದೆ. ಉದಾಹರಣೆಗೆ, ಅವರು ಓದಲು ಹೋದ ವಿಶ್ವವಿದ್ಯಾಲಯಗಳಲ್ಲಾಗಲಿ ಅಥವ ಕಾರ್ಯಕ್ಷೇತ್ರದಲ್ಲಾಗಲಿ ವೈವಿಧ್ಯತೆಯ ಅನುಭವ ಅವರಿಗೆ ಸಿಕ್ಕಾಗ, ಅವರು ಇತರರ ಬಗ್ಗೆ ಹೆಚ್ಚು ಸಂವೇದನಾಶೀಲರಾಗಿರಲು ಅವರು ಕಲಿತ ಸಮಾವೇಶಿ ಶಿಕ್ಷಣ ವಾತಾವರಣ ಅವರಿಗೆ ಸಹಾಯ ಮಾಡಿತು. ಆದರೆ ವಿಶೇಷ ಅವಶ್ಯಕತೆ ಇದ್ದ ಯಾವ ಮಕ್ಕಳೂ ಕೂಡ ತಮ್ಮ ಅನುಭವವನ್ನು ಹಂಚಿಕೊಳ್ಳಲಾಗಲಿ, ಈ ಶಾಲೆಯಲ್ಲಿ ನಾವು ಸಂತೋಷದಿಂದ ಸಮಯ ಕಳೆದೆವು ಎಂದು ಹೇಳಿಕೊಳ್ಳಲಾಗಲಿ ಶಾಲೆಗೆ ಭೇಟಿ ಇತ್ತ, ಅದರ ಬಗ್ಗೆ ಮಾತನಾಡಿದ ನಿದರ್ಶನಗಳಿಲ್ಲ. ಇತರ ವಿದ್ಯಾರ್ಥಿಗಳಂತೆ ಅವರು ಕೂಡ ಈ ಶಾಲೆಯಲ್ಲಿ ಸಂತೋಷವಾಗಿದ್ದರೇ? ಪ್ರತಿ ಮಗುವಿಗೆ ಕೂಡ ಇತರರಿಗಿಂತ ಭಿನ್ನವಾಗಿ ಶಾಲೆಯಲ್ಲಿ ತನ್ನದೇ ಆದ ಅನುಭವವೊಂದಿರುತ್ತದೆ, ನಿಜ. ಆದರೆ ಕೆಲವು ಅನುಭವಗಳನ್ನು ನಾವು ಸಾರ್ವತ್ರಿಕವಾಗಿ ಅನುಭವಿಸಿರುತ್ತೇವೆ ಮತ್ತು ಅವು ನಮ್ಮ ಜೀವನಪರ್ಯಂತ ನಮ್ಮ ಜೊತೆಗಿರುತ್ತವೆ. ಅದರಲ್ಲಿ ಮುಖ್ಯವಾಗುವುದು ಶಾಲಾ ಹಂತದಲ್ಲಿ ನಮಗೆ ದಕ್ಕಿದ ಸ್ನೇಹಿತರು.


ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವ ನನಗೆ ಅನಿಸುವುದೇನೆಂದರೆ, ಬದಲಾಗಬೇಕಾದದ್ದು, ನಾವು ಬದಲಾಯಿಸಬಹುದಾದದ್ದು ಬಹಳಷ್ಟಿದೆ. ಸಮಾವೇಶಿ ಶಾಲಾ ವಾತಾವರಣಕ್ಕೆ ಸಂಬಂಧಿಸಿದಂತೆ ನನ್ನ ಮನಸ್ಸಿನಲ್ಲಿ ಹಲವಾರು ದ್ವಂದ್ವಗಳಿವೆ. ಉದಾಹರಣೆಗೆ, ಒಂದು ವೇಳೆ ನಾನು ಈ ವಿಶೇಷ ಅವಶ್ಯಕತೆಯುಳ್ಳ ಮಕ್ಕಳ ಸಹಪಾಠಿಯಾಗಿದ್ದರೆ ಅಥವ ಅವರ ಶಿಕ್ಷಕಿಯಾಗಿದ್ದರೆ ನಾನು ಅವರ ಬಗ್ಗೆ ಹೆಚ್ಚು ಪರಾನುಭೂತಿಯಿಂದ ವರ್ತಿಸಬೇಕೇ ಅಥವ ಅವರನ್ನು ಬೇರೆ ’ಸಾಮಾನ್ಯ’ ವಿದ್ಯಾರ್ಥಿಗಳಂತೆ ನೋಡಬೇಕೇ? ಈ ವಿದ್ಯಾರ್ಥಿಗಳು ವಿಶೇಷ ಶಾಲೆಗಳಲ್ಲಿ ಇದ್ದರೆ ಅವರ ಕಲಿಕೆ ಮತ್ತು ಬೆಳವಣಿಗೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆಯೇ ಅಥವ ಅದು ತಾನು ಇತರರಂತಿಲ್ಲ ಎಂಬ ಭಾವನೆಯನ್ನು ಇನ್ನೂ ಹೆಚ್ಚು ಮಾಡುತ್ತದೆಯೇ?
ಈ ದೇಶದ ಪ್ರತಿಯೊಂದು ಮಗುವನ್ನೂ ನಾವು ತಲುಪಬೇಕಾದರೆ ಸಮಾವೇಶಿ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದು ನನಗೆ ಅರ್ಥ ಆಗುತ್ತದೆ. ನಾವು ನಮ್ಮ ಶಿಕ್ಷಕರನ್ನು ಸರಿಯಾಗಿ ತರಬೇತುಗೊಳಿಸಿದರೆ, ಶಾಲೆಗಳಲ್ಲಿ ಸಮಾವೇಶಿ ಶಿಕ್ಷಕರನ್ನು ನೇಮಿಸಿದರೆ, ಮಾನಸಿಕ ಪರಿವರ್ತನೆಯ ಪ್ರಕ್ರಿಯೆಯಲ್ಲಿ ತಂದೆ ತಾಯಿಯರನ್ನು ಮತ್ತು ಸಮುದಾಯವನ್ನು ತೊಡಗಿಸಿಗೊಂಡರೆ, ಮೌಲ್ಯಮಾಪನದ ನಮೂನೆಗಳನ್ನು ಬದಲಾಯಿಸಿದರೆ ಮತ್ತು ಪಠ್ಯಕ್ರಮ ಮತ್ತು ಶಿಕ್ಷಣದ ವಿಧಾನದಲ್ಲಿ ಮಾರ್ಪಾಡು ತಂದರೆ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಬಹುದು, ನಿಜ. ಆದರೆ ಉತ್ತರಿಸಲು ಕಷ್ಟವಾಗುವ ಪ್ರಶ್ನೆ ಎಂದರೆ: ವಿಶೇಷ ಅವಶ್ಯಕತೆಯುಳ್ಳ ವಿದ್ಯಾರ್ಥಿಗಳಿಗೆ, ಅವರ ವೈಕಲ್ಯತೆಯನ್ನು ಮೀರಿ ಶಾಲಾ ಅನುಭವವು ಅವರಿಗೂ ಎಲ್ಲರಂತೆ ಅಹ್ಲಾದಕರವಾಗಿ ಮಾಡಲು ಸಾಧ್ಯವೇ? ಹೊರಗುಳಿಯುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವೇ? ಇದೊಂದು ಸಂಕೀರ್ಣ ಪ್ರಶ್ನೆ ಮತ್ತು ಈ ಹಿಂದೆ ಹೇಳಿದಂತೆ, ಇದು ಸಾಧ್ಯವಾಗಬೇಕಾದರೆ ತಂದೆ ತಾಯಿ, ಶಿಕ್ಷಕರು, ಸಮಾಲೋಚಕರು, ಸಮಾವೇಶಿ ಶಿಕ್ಷಕರು, ಎಲ್ಲರೂ ಒಡಗೂಡಿ ಒಂದು ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ. ಇದಕ್ಕೆ ಪರಿಹಾರ ಕೆಲವೊಮ್ಮೆ ನಾವು ಇಡುವ ಸಣ್ಣ ಹೆಜ್ಜೆಗಳಲ್ಲಿ ಅಡಕವಾಗಿರುವ ಸಾಧ್ಯತೆ ಕೂಡ ಇದೆ. ಉದಾಹರಣೆಗೆ, ವಿದ್ಯಾರ್ಥಿಗಳು ಹಂಚಿಕೊಳ್ಳಬೇಕಾದ ಕೆಲಸಗಳನ್ನು ಅವರವರೇ ಹಂಚಿಕೊಳ್ಳಲು ಬಿಡದೆ, ಶಿಕ್ಷಕರು  ತಾವೇ ಹಂಚಿಕೆ ಮಾಡುವುದು ಅಥವ ಫಲಿತಾಂಶದೆಡೆಗಷ್ಟೇ ವಿದ್ಯಾರ್ಥಿಗಳು ಗಮನ ಹರಿಸದೆ, ಒಂದು ಕಾರ್ಯವನ್ನು ಒಟ್ಟುಗೂಡಿ ಮಾಡುವ ಪ್ರಕ್ರಿಯೆಯ ಮೌಲ್ಯದಕಡೆಗೆ ಅವರ ಆಸಕ್ತಿಯನ್ನು ಬೆಳೆಸುವುದು. ವಿಶೇಷ ಅವಶ್ಯಕತೆಯುಳ್ಳ ಮಕ್ಕಳನ್ನು ಅನುಕಂಪದಿಂದ ನೋಡುವುದಾಗಲಿ ಅಥವ ಅವರಿಂದ ದೂರ ಹೋಗುವುದನ್ನಾಗಲಿ ಮಾಡದೆ, ಅವರನ್ನು ಅವರು ಇರುವಂತೆಯೇ ಒಪ್ಪಿಕೊಳ್ಳುವ ಮನೋಭಾವವನ್ನು ಸಹಪಾಠಿಗಳಲ್ಲಿ ಬೆಳೆಸುವುದು, ಇತ್ಯಾದಿ. ಅಂಗವಿಕಲತೆ ಇರುವ ಮಕ್ಕಳಿಗೆ ತಮ್ಮ ಇತಿಮಿತಿಗಳ ಅರಿವು ಇದ್ದೇ ಇರುತ್ತದೆ. ಇಂಥ ಸಂದರ್ಭದಲ್ಲಿ ನಾವು ಅದನ್ನು ಮತ್ತೆ ಮತ್ತೆ ಅವರ ನೆನಪಿಗೆ ತರದೆ, ಅವರಲ್ಲಿ ಇರುವ ಶಕ್ತಿ ಸಾಮರ್ಥಗಳ ಬಗ್ಗೆ ಗೌರವದಿಂದ ನಡೆದುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಸಮಾಜದಲ್ಲಿ ಇಂತಹ ಬದಲಾವಣೆಯನ್ನು ತರಲು ನಾವು ಎಲ್ಲರ ಒಳಗೊಳ್ಳುವಿಕೆಯ ಅವಶ್ಯಕತೆಯ ಕುರಿತು ಸಾಮಾಜಿಕ ಅರಿವನ್ನು ಬೆಳೆಸಬೇಕಾಗಿದೆ.

ಒಂದಂತೂ ಸ್ಪಷ್ಟ - ನಮ್ಮ ವಿದ್ಯಾರ್ಥಿಗಳ ಮನೋಧೋರಣೆಯಲ್ಲಿ ಮತ್ತು ನಡವಳಿಕೆಯಲ್ಲಿ ಈ ಅಗತ್ಯ ಬದಲಾವಣೆಯನ್ನು ತರಲು ನಾವು ಕ್ರಮಿಸಬೇಕಾದ ಹಾದಿ ಬಹಳಷ್ಟಿದೆ. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾವೇಶದ ಕಲ್ಪನೆ ಇನ್ನೂ ದೂರದ ಕನಸು. ನಾವು ಇನ್ನೂ ಆ ಬದಲಾವಣೆಯ ಹೊಸ್ತಿಲಲ್ಲಿ ಇದ್ದೇವೆ ಅಷ್ಟೆ. ಈ ಬದಲಾವಣೆ ಮೊದಲು ಆಗಬೇಕಾಗಿರುವುದು ಶಿಕ್ಷಕರ, ಶಾಲೆಯ ಮತ್ತು ಇತರ ಸಂಸ್ಥೆಗಳ, ತಂದೆ ತಾಯಿಯರ, ಸಮವಯಸ್ಕರ ಮತ್ತು ಒಟ್ಟಂದದಲ್ಲಿ ಸಮುದಾಯದ ಗ್ರಹಿಕೆ ಮತ್ತು ದೃಷ್ಟಿಕೋನದಲ್ಲಿ. ಅಷ್ಟೇ ಅಲ್ಲದೆ ಈ ಬದಲಾವಣೆಯ ಹರಿವು ಕೆಳಗಿನಿಂದ ಮೇಲಕ್ಕೆ ಮತ್ತು ಮೇಲಿನಿಂದ ಕೆಳಕ್ಕೆ ಹರಿಯಬೇಕಾದ ಅವಶ್ಯಕತೆ ಇದೆ; ಮೇಲ್ಮಟ್ಟದಲ್ಲಿ ಶಿಕ್ಷಣದ ನೀತಿ ನಿಯಮಾವಳಿಗಳ ಬದಲಾವಣೆ  ಮತ್ತು ಕೆಳಹಂತದಲ್ಲಿ ಅದರ ಅನುಷ್ಟಾನದಲ್ಲಿ ಆಗಬೇಕಾದ ಬದಲಾವಣೆ. ನಾವಿಡುವ ಪ್ರತಿ ಹೆಜ್ಜೆಯಲ್ಲಿ ತಂದೆ ತಾಯಿಯರು, ಶಿಕ್ಷಕರು ಮತ್ತು ಇತರ ಹಿತಾಸಕ್ತಿದಾರರನ್ನು, ವಿಶೇಷ ಅವಶ್ಯಕತೆಯುಳ್ಳ ಮಕ್ಕಳು ಮತ್ತು ಅವರ ಸಹಪಾಠಿಗಳನ್ನು ನಾವು ಒಳಗೊಳ್ಳುವ ಗುರಿಯೆಡೆಗೆ ಜೊತೆಮಾಡಿಕೊಳ್ಳುವ ತನಕ ಸಮಾವೇಶವನ್ನು ಸಾಧಿಸುವುದು ದೊಡ್ಡ ಸವಾಲಾಗಿ ಉಳಿಯುತ್ತದೆ.
******
ರಿತಿಕಾ ಚಾವ್ಲಾ ಅವರು Iಟಿಜiಚಿ Sಛಿhooಟ ಐeಚಿಜeಡಿshiಠಿ Iಟಿsಣiಣuಣe ಎಂಬ ಸಂಸ್ಥೆಯ ಓಚಿಣioಟಿಚಿಟ ಈeಟಟoತಿshiಠಿ ಕಾರ್ಯಕ್ರಮದ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. ಈ ಸಂಸ್ಥೆಯು ಶಾಲಾ ನಾಯಕರು/ ಪ್ರಾಂಶುಪಾಲರು ಮತ್ತು ಮುಖ್ಯ ಶಿಕ್ಷಕರಿಗೆ ತರಬೇತಿ ನೀಡುವಲ್ಲಿ ತನ್ನ ಸೇವೆ ಸಲ್ಲಿಸುತ್ತಿದೆ. ಲೇಖಕರು ಇತ್ತೀಚಿಗಷ್ಟೆ ಅಜ಼ೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಿಂದ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಖಿeಚಿಛಿh ಜಿoಡಿ Iಟಿಜiಚಿ (ಖಿಈI) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮುಂಬೈಯ ಮುನ್ಸಿಪಲ್ ಶಾಲೆಯೊಂದರಲ್ಲಿ ಪಾಠ ಮಾಡಿದ್ದಷ್ಟೇ ಅಲ್ಲದೆ ಆ ಶಾಲಾ ಕಟ್ಟಡದ ದುರಸ್ತಿಗೆ ಕೂಡ ಕಾರಣರಾಗಿದ್ದರು. ಈ ಲೇಖನವು ಅವರ ಸ್ನಾತಕೋತ್ತರ ಅಧ್ಯಯನದ ಭಾಗವಾಗಿ ಕೈಗೊಂಡ ’Uಟಿಜeಡಿsಣಚಿಟಿಜiಟಿg ಖಿeಚಿಛಿheಡಿs’, Pಚಿಡಿeಟಿಣs’ ಚಿಟಿಜ Sಣuಜeಟಿಣs’ ಒiಟಿಜseಣs iಟಿ ಚಿಟಿಜ ಣoತಿಚಿಡಿಜs Iಟಿಛಿಟusive ಛಿಟಚಿssಡಿoom seಣಣiಟಿgs’ ಸಂಶೋಧನಾ ಬರಹದ ಭಾಗವಾಗಿದೆ. ಅವರ ಮಿಂಚಂಚೆ ವಿಳಾಸ: ಡಿiಣiಞಚಿ@iಟಿಜiಚಿsಛಿhooಟಟeಚಿಜeಡಿs.oಡಿg <mಚಿiಟಣo:ಡಿiಣiಞಚಿ@iಟಿಜiಚಿsಛಿhooಟಟeಚಿಜeಡಿs.oಡಿg>

 

19653 ನೊಂದಾಯಿತ ಬಳಕೆದಾರರು
7777 ಸಂಪನ್ಮೂಲಗಳು