ನನ್ನ ಅಧ್ಯಾಪನ ವೃತ್ತಿಯ ಮೊದಲ ದಿನ

ಅದು ೧೯೯೯ನೇ ಇಸವಿ,ಅಕ್ಟೋಬರ್ ೨೦ನೆಯ ತಾರೀಕು. ನಾನು ಪ್ರಶಿಕ್ಷಕನೆಂಬ ನೆಲೆಯಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಮೊದಲ ದಿನ. ಯೋಗಾಯೋಗ ಎಂಬಂತೆ ನಾನು ಕಲಿತ ಕಾಲೇಜಿನಲ್ಲಿಯೇ ಅಂದರೆ ಬಿ ಎಡ್ ಮತ್ತು ಎಂ ಎಡ್ ವ್ಯಾಸಂಗ ಪೂರೈಸಿದ ಉಡುಪಿಯ ಡಾ ಟಿ ಎಂ ಎ ಪೈ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಉಪನ್ಯಾಸಕನಾಗಿ ನಿಯುಕ್ತನಾದೆ. ಹಿಂದೊಮ್ಮೆ ನಾನಲ್ಲಿ ವಿದ್ಯಾರ್ಥಿ.ಈಗ ನಾನಲ್ಲಿ ಅಧ್ಯಾಪಕ! ನಿಜ ಹೇಳ ಬೇಕೆಂದರೆ ಇದು ನನ್ನಲ್ಲಿ ಯಾವುದೇ ಬಗೆಯ ಪುಳಕವನ್ನುಂಟು ಮಾಡಲಿಲ್ಲ. ಬದಲಿಗೆ ಸಾಕಷ್ಟು ಆತಂಕ,ಉದ್ವೇಗ,ಭಯವನ್ನುಂಟು ಮಾಡಿತ್ತು.ಓರ್ವ ವಿದ್ಯಾರ್ಥಿಯಾಗಿ ಕಲಿಸಿದ ಅಧ್ಯಾಪಕರೊಡನೆ ಬೆರೆಯುವುದು ಬೇರೆ. ಅದೇ ಸಹೋದ್ಯೋಗಿಯಾಗಿ ಅವರೊಡನೆ ವರ್ತಿಸುವುದು ಬೇರೆ.ಮೇಲಾಗಿ ಶಿಕ್ಷಣ ಕ್ಷೇತ್ರದ ಅತಿರಥ-ಮಹಾರಥರ ಒಡ್ಡೋಲಗವೇ ಮೈವೆತ್ತಿದಂತಿದ್ದ ಆ ಕಾಲೇಜಿನಲ್ಲಿ ಅವರೆಲ್ಲರೊಂದಿಗೆ ನಾನು ಹೊಂದಿಕೊಂಡು ಹೋಗಬಲ್ಲೆನೇ ಎಂಬ ಆತಂಕ ನನ್ನನ್ನು ಕಾಡಿತ್ತು.ಅವರೆಲ್ಲರೂ ನನ್ನನ್ನು ಗುರುತಿಸಿ ಕರೆದು ಕೊಟ್ಟಂತಹ ಕೆಲಸ ಅದು!! ಪರೀಕ್ಷಾ ಫಲಿತಾಂಶ ಬರುವುದರೊಳಗೆ ನಾನಲ್ಲಿ ಉದ್ಯೋಗಸ್ಥನಾಗಿದ್ದೆ.ಬೇರೆ ಯಾವುದೇ ಉದ್ಯೋಗಕ್ಕೂ ನಾನು ಅರ್ಜಿ ಸಹ ಹಾಕಿರಲಿಲ್ಲ. ತಾನಾಗಿ ನನ್ನ ಪಾಲಿಗೆ ಒದಗಿ ಬಂದ ಸ್ವರ್ಣ ಸದೃಶ ಅವಕಾಶವದು.ಹಾಗಾಗಿ ನಾನೊಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿ ಅವರೆಲ್ಲರ ನಿರೀಕ್ಷೆಗೆ ಸ್ಪಂದಿಸಬಲ್ಲೆನೇ ಎಂಬ ಪ್ರಶ್ನೆ ಅಡಿಗಡಿಗೆ ನನ್ನನ್ನು ಕಾಡಿತ್ತು. ಎಂ ಎ ಮತ್ತು ಎಂ ಎಡ್ ಎಂಬ ಎರಡೆರಡು ಸ್ನಾತಕೋತ್ತರ ಪದವಿಗಳು,ನೆಟ್ ಪರೀಕ್ಷೆ ಪಾಸಾದ ಒಣ ಜಂಭ,ಕವಿತೆ ಬರೆವೆನೆಂಬ ಪ್ರತಿಷ್ಠೆಗಳು ಆ ಸಂದರ್ಭದಲ್ಲಿ ಯಾವುದೇ ಕೆಲಸಕ್ಕೆ ಬಾರದ ಸಂಗತಿಗಳಾದುವಲ್ಲ ಎಂಬುದು ಇವತ್ತಿಗೂ ನನ್ನನ್ನು ಕಾಡುವ ಸೋಜಿಗಗಳಲ್ಲೊಂದು.

ಅಂದು ಬೆಳಗ್ಗೆ ಹಿಂದೆಂದಿಗಿಂತ ಬೇಗ ಎದ್ದೆ. ನಾಳೆಯ ಬಗ್ಗೆ ಯೋಚಿಸುತ್ತಾ ಹಾಸಿಗೆಯಲ್ಲಿ ಉರುಳಾಡಿದ ನನಗೆ ನಿದ್ರೆಯೇ ಬಂದಿರಲಿಲ್ಲ. ಲಗುಬಗೆಯಿಂದ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿದೆ. ತಂದೆಯವರ ಭಾವಚಿತ್ರಕ್ಕೆ ಹೂವೇರಿಸಿ ನಮಸ್ಕರಿಸಿದೆ. ಕುಲದೇವರಾದ ಗುರು ನರಸಿಂಹನಿಗೆ ವಂದಿಸಿ, ಮನೆ ದೇವರಾದ ಯಕ್ಷೇಶ್ವರಿಯ ಸನ್ನಿಧಿಗೆ ತೆರಳಿ ಅಡ್ಡ ಬಿದ್ದೆ. ಪಕ್ಕದಲ್ಲೇ ಇದ್ದ ನಾಗಬನಕ್ಕೆ ಹೋಗಿ ನಾಗದೇವರಿಗೆ ಸಾಷ್ಟಾಂಗವೆರಗಿದೆ. ಬಳಿಕ ತಾಯಿಯವರಿಗೆ ನಮಿಸಿ ಅವರ ಆಶೀರ್ವಾದ ಪಡೆದೆ.ಬಳಿಕ ಕೋಟ ಎಂಬ ನನ್ನೂರಿನಿಂದ ಉಡುಪಿಯ ಕುಂಜಿಬೆಟ್ಟಿನಲ್ಲಿರುವ ನನ್ನದೇ ಕಾಲೇಜಿಗೆ ಬಸ್ ನಲ್ಲಿ ಹೊರಟೆ.ಬಸ್ ಹತ್ತಿ ಕುಳಿತು ಯಾವುದ್ಯಾವುದೋ ಯೋಚನಾ ಲಹರಿಯಲ್ಲಿದ್ದವನು ಇಳಿಯಬೇಕಾದ ಸ್ಟಾಪ್ ನಲ್ಲಿ ಇಳಿಯದೆ ಮುಂದಿನ ಸ್ಟಾಪ್ ನಲ್ಲಿ ಇಳಿದು ಪುನಃ ವಾಪಾಸ್ಸು ಬಂದು ಕಾಲೇಜಿನ ಮೆಟ್ಟಿಲು ಹತ್ತಿದೆ. ಹೋದವನೇ ಪ್ರಾಂಶುಪಾಲರಾದ ಡಾ ಮಹಾಬಲೇಶ್ವರ ರಾವ್ ಅವರ ಛೇಂಬರ್ ಬಳಿ ಅವರ ಭೇಟಿಗಾಗಿ ಕಾದು ನಿಂತೆ. ಅಲ್ಲಿ ಒಂದು ರೀತಿಯ ತಳಮಳದಲ್ಲಿ, ಒತ್ತಡದಲ್ಲಿ ನಿಂತ ನನ್ನನ್ನು ಒಂದಿಬ್ಬರು ವಿದ್ಯಾರ್ಥಿಗಳು ಗಮನಿಸಿ ಕಿಸಕ್ಕನೆ ನಕ್ಕು ಮುಂದೆ ಸಾಗಿದರು. ನಾನು ಹೊರಗೆ ಕಾಯುತ್ತಿದ್ದಾಗ್ಯೂ ಇನ್ನೊಬ್ಬ ವಿದ್ಯಾರ್ಥಿ ನನ್ನನ್ನು ಕಡೆಗಣಿಸಿ ನನಗಿಂತ ಮೊದಲು ಪ್ರಾಂಶುಪಾಲರ ಬಳಿ ಮಾತಾಡಿ ಬಂದು ನನ್ನೆಡೆಗೆ ದೇಶಾವರಿ ನಗೆ ಬೀರಿದ.ಈಗಲೇ ಹೀಗಾದರೆ ಮುಂದೆ ಹೇಗೆ ಎಂದು ನನ್ನೆದೆಯಲ್ಲಿ ಕುಟ್ಟವಲಕ್ಕಿ ಕುಟ್ಟಿದಂತಾಯಿತು. ಕೊನೆಗೂ ವಿಧಿಯಿಲ್ಲದೆ ಸಾವರಿಸಿಕೊಂಡು ಪ್ರಾಂಶುಪಾಲರನ್ನು ಭೇಟಿ ಮಾಡಿದೆ. ತುಂಬಾ ಹೆದರಿಕೆಯಲ್ಲಿದ್ದ ನನಗೆ ಹಿರಿಯಣ್ಣನಂತೆ ಅವರು ಧೈರ್ಯ ತುಂಬಿದರು. ವೃತ್ತಿಯ ಪ್ರಾರಂಭದಲ್ಲಿ ಇಂತಹ ಚಡಪಡಿಕೆಗಳು ತೀರ ಸಹಜ ಎಂದು ಬೆನ್ತಟ್ಟಿದರು.ಅವರಿಗೂ ಅಲ್ಲಿ ಅಭಿವಂದಿಸಿದೆ. ನಂತರ ಅವರು ನನ್ನ ಕೈ ಹಿಡಿದು ಅಧ್ಯಾಪಕರ ಕ್ಯಾಬಿನ್ ಗೆ ಕರೆದೊಯ್ದು ನನಗಾಗಿ ಮೀಸಲಿರಿಸಿದ್ದ ಸ್ಥಾನದಲ್ಲಿ ನನ್ನನ್ನು ಕೂರಿಸಿದರು. ತರುವಾಯ

ಅಲ್ಲಿದ್ದ ನನಗೆ ಕಲಿಸಿದ, ಇನ್ಮುಂದೆ ನನ್ನ ಸಹೋದ್ಯೋಗಿಗಳಾಗಲಿರುವ ಪ್ರಾಧ್ಯಾಪಕರಿಗೆ ಔಪಚಾರಿಕವಾಗಿ ನನ್ನನ್ನು ಪರಿಚಯಿಸಿದರು. ನಂತರ ಕಛೇರಿಗೆ ಕರೆದೊಯ್ದು ಬೋಧಕೇತರ ಸಿಬ್ಬಂದಿ ವರ್ಗದವರಿಗೂ ಪರಿಚಯಿಸಿದರು. ಎಲ್ಲರೂ ಮುಂಚಿನಿಂದಲೂ ನನಗೆ ಪರಿಚಿತರಾದುದರಿಂದ ನಗುನಗುತ್ತಲೇ ಅವರಿಗೆ ನಮಸ್ತೆ ಹೇಳಿ ಕೊಂಚ ಧೈರ್ಯ ತಂದುಕೊಂಡೆ.ಕೊನೆಗೆ ಅವರೇ ನನ್ನನ್ನು ಕನ್ನಡ ತರಗತಿಗೂ ಕರೆದೊಯ್ದು ವಿದ್ಯಾರ್ಥಿಗಳಿಗೂ ನನ್ನನ್ನು ಪರಿಚಯಿಸುತ್ತಾ ಇಂದಿನಿಂದ ಇವರೇ ನಿಮಗೆ ಕನ್ನಡ ಅಧ್ಯಾಪಕರೆಂದೂ, ಚೆನ್ನಾಗಿ ಸಹಕರಿಸಬೇಕೆಂದೂ, ವಿದ್ಯಾರ್ಥಿಯಾಗಿದ್ದಾಗ ತುಂಬಾ ಬುದ್ಧಿವಂತರಾಗಿದ್ದರೆಂದೂ, ಅಧ್ಯಾಪಕರಾಗಿಯೂ ಅಷ್ಟೇ ಚೆನ್ನಾಗಿ ಪಾಠ ಮಾಡುವ ಸಾಮರ್ಥ್ಯ ಅವರಿಗಿದೆಯೆಂದೂ ನನ್ನನ್ನು ಹುರಿದುಂಬಿಸಿ ತರಗತಿಯಿಂದ ನಿರ್ಗಮಿಸಿದರು. ಆಮೇಲೆ ತರಗತಿಯಲ್ಲಿ ಉಳಿದದ್ದು ನಾನು ಮತ್ತು ವಿದ್ಯಾರ್ಥಿಗಳು ಮಾತ್ರ. ನನಗಾಗ ತೀರ ಫಜೀತಿಯಾದದ್ದೆಂದರೆ ನನ್ನನ್ನು ಉಡಾಫೆಯಿಂದ ಪ್ರಾಂಶುಪಾಲರ ಛೇಂಬರ್ ಹೊರಗೆ ಕಿಚಾಯಿಸಿದ್ದ ಹುಡುಗರೂ ಅದೇ ತರಗತಿಯಲ್ಲಿದ್ದರು. ಅವರಿಗೂ ತೀವ್ರ ಮುಜುಗುರವಾಗಿ ಮುಖ ತಪ್ಪಿಸುತ್ತಿದ್ದರು. ಹತ್ತು ನಿಮಿಷ ಇಷ್ಟರಲ್ಲಾಗಲೇ ಕಳೆದಿತ್ತು. ಮುಜುಗುರದ ಸನ್ನಿವೇಶವನ್ನು ತಪ್ಪಿಸಿಕೊಳ್ಳಲು ಏನಾದರೂ ನಾನು ಮಾಡಲೇ ಬೇಕಿತ್ತು. ಮೊದಲಿಗೆ ನನ್ನದೇ ಪರಿಚಯವನ್ನು ತುಸು ವಿಸ್ತಾರವಾಗಿ ಮಾಡಿಕೊಂಡೆ.ಬಳಿಕ ಅವರೆಲ್ಲರ ಪರಿಚಯ ಮಾಡಿಕೊಂಡೆ. ನನ್ನ ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಂಡೆ. ಮುಂದೆ ಕನ್ನಡ ಶಿಕ್ಷಕರಾಗಲಿರುವ ಅವರ ಹೊಣೆಗಾರಿಕೆಯ ಬಗ್ಗೆ ಒಂದಿಷ್ಟು ಒದರಿ ಅವರ ತಲೆ ತಿಂದೆ.ಸಾಹಿತ್ಯಕವಾಗಿ ಅವರು ಓದಬೇಕಾದ ಕೃತಿಗಳ ಬಗ್ಗೆ ಹನುಮಂತನ ಬಾಲದಂತಹ ಪಟ್ಟಿ ನೀಡಿ ಅವರು ಸುಸ್ತು ಹೊಡೆಯುವಂತೆ ಮಾಡಿದೆ.ಸಮಯ ಇನ್ನೂ ಮಿಕ್ಕುಳಿದುದುರಿಂದ ನಾನು ಬರೆದ ಕವಿತೆಯೊಂದನ್ನು ಉಲಿದು ಚಪಲ ತೀರಿಸಿಕೊ ಳ್ಳುತ್ತಾ ಅವರಿಗೆ ಒಂದೇಸವನೆ ಬೋರು ಹೊಡೆಸಿದೆ. ಬಿ ಎಡ್ ಎಂದರೆ ಏನೋ, ಹೇಗೋ ಎಂಬ ಆತಂಕದಲ್ಲಿದ್ದ ಅವರಿಗೆ ಕೊಂಚ ಧೈರ್ಯ ತುಂಬುವವನಂತೆ ನಾಟಕವಾಡಿದೆ. ಅಂದು ನಾನು ಅಪ್ಪಿ ತಪ್ಪಿಯೂ ಪಾಠ ಮಾಡಲಿಲ್ಲ. ಹೀಗೆ ಏನೇನೋ ನೆಪ ಹೂಡಿ ಹೊತ್ತು ಕಳೆದು ಬೆಲ್ ಆದ ಕೂಡಲೇ ಬದುಕಿದೆಯಾ ಬಡ ಜೀವವೇ ಎಂದು ತರಗತಿಕೋಣೆಯಿಂದ ಕಾಲ್ಕಿತ್ತೆ. ತರಗತಿ ಮುಗಿಸಿ ಕ್ಯಾಬಿನ್ ಗೆ ಬಂದಾಗ ನನಗೊಂದು ಅಚ್ಚರಿ ಕಾದಿತ್ತು. ನನಗೆ ಕಿಚಾಯಿಸಿದ್ದ ತ್ರಿಮೂರ್ತಿಗಳು ಮೆಲ್ಲಗೆ ಬಳಿ ಬಂದು ಕ್ಷಮೆ ಯಾಚಿಸಿದರು. ನಾನು ಓರ್ವ ಶಿಕ್ಷಕ ಎಂಬ ಅರಿವೇ ಅವರಿಗೆ ಇರಲಿಲ್ಲ ಎಂದೂ,ಯಾರೋ ಅಡ್ಮಿಷನ್ ಗೆ ಬಂದವರಿರಬೇಕೆಂದೂ, ತರಗತಿಯಲ್ಲಿ ನನ್ನನ್ನು ನೋಡಿ ಕಸಿವಿಸಿಯಾಯಿತೆಂದೂ ಪುರಾಣ ಹೊಡೆಯಲು ಶುರುವಿಟ್ಟರು. ಜೊತೆಗೆ ಇನ್ನು ಮುಂದೆ ಹೀಗೆಲ್ಲಾ ಆಗದಂತೆ ನೋಡಿಕೊಳ್ಳುವುದಾಗಿ ಅಭಯವಿತ್ತರು. ಅವರ ಪಾಪಪ್ರಜ್ಞೆ ನನ್ನನ್ನು ತಟ್ಟಿ ಕಲಕಿತು. ಏನೂ ಆಗಿಲ್ಲ ಎಂಬಂತೆ ಅವರನ್ನು ಸಂತೈಸಿದೆ. ಮುಂದೆ ಅವರೆಲ್ಲರೂ ಕಿರಿಯ ಸ್ನೇಹಿತರಂತೆ ನನಗೆ ಹೊಂದಿಕೊಂಡರು.ಇಂಥದೊಂದು ಅವಿಸ್ಮರಣೀಯ ಅನುಭವದೊಂದಿಗೆ ನನ್ನ ವೃತ್ತಿಜೀವನದ ಮೊದಲ ದಿನ ಕಳೆಯಿತು.ಆ ದಿನದಿಂದ ತೊಡಗಿ ಒಂದೊಂದು ಹೆಜ್ಜೆಗೂ ಹೊಸ ಹೊಸ ಅನುಭವ ಪಡೆಯುತ್ತಾ ಕೇವಲ ಅದೊಂದೇ ಕಾಲೇಜಿನಲ್ಲಿಯೇ ೧೫ ವರ್ಷ,೪ ತಿಂಗಳು,೭ ದಿನಗಳಷ್ಟು ಸುದೀರ್ಘ ಅವಧಿಯಲ್ಲಿ ಪ್ರಶಿಕ್ಷಕನಾಗಿ ಕಾರ್ಯ ನಿರ್ವಹಿಸಿದೆ.೨೦೧೫ ಫೆಬ್ರವರಿ ೨೮ರಂದು ಭಾರವಾದ ಹೃದಯದೊಂದಿಗೆ ಆ ಸಂಸ್ಥೆಯಿಂದ ಬೀಳ್ಕೊಟ್ಟು ಬೆಂಗಳೂರಿನ ಅಜೀಂ ಪ್ರೇಮ್ ಜಿ ಫೌಂಡೆಶನ್ ನ ಕರ್ನಾಟಕ ರಾಜ್ಯ ಸಂಸ್ಥೆಯಲ್ಲಿ ಕನ್ನಡ ಸಂಪನ್ಮೂಲ ವ್ಯಕ್ತಿಯಾಗಿ ಸೇರ್ಪಡೆ ಗೊಂಡೆ.ಹದಿನೈದು ವರ್ಷ ನನಗೆ ಅನ್ನ ಕೊಟ್ಟ,ವಿದ್ಯಾದಾನ ಮಾಡಿದ, ಕೈ ಹಿಡಿದು ಮುನ್ನೆಡೆಸಿ ಮಾರ್ಗದರ್ಶಿಸಿದ, ಪ್ರಾಧ್ಯಾಪಕನಾಗಿ ಬೆಳೆಸಿ , ವಿದ್ಯಾರ್ಥಿ ಪ್ರೀತಿಯ ಸವಿಯುಣಿಸಿದ, ನನ್ನೊಳಗಿನ ಬರೆಹಗಾರನನ್ನು ಪ್ರಕಟಪಡಿಸಿದ, ಸಂಪನ್ಮೂಲ ವ್ಯಕ್ತಿಯಾಗಿ ಬೆಳೆಸಿದ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ,ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ಹಾಗೂ ಪರೀಕ್ಷಾ ಮಂಡಲಿಯ ಅಧ್ಯಕ್ಷನಾಗಿ, ಇಗ್ನೋ ದೂರ ಶಿಕ್ಷಣ ಕಾರ್ಯಕ್ರಮ ಸಂಚಾಲಕನಾಗಿ,ಜಿಲ್ಲಾ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷನಾಗಿ ,ಶಿಕ್ಷಕ ವಾರ್ಷಿಕಾಂಕದ ಅಧ್ಯಾಪಕ ಸಲಹಾಕಾರನಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿ ವೃತ್ತಿಪರ ವಿಕಾಸಕ್ಕೆ ತೋರುಗಂಬವಾದ ಮಾತೃ ಸಂಸ್ಥೆಗೆ ನಾನು ಆಜನ್ಮಪರ್ಯಂತ ಋಣಿಯಾಗಿರುತ್ತೇನೆ. ನನ್ನ ಪಾಲಿಗೆ ಅದೊಂದು ಸವಿ ನೆನಪಿನ ನವಿಲುಗರಿ.

- ರಾಘವೇಂದ್ರ ಹೇರಳೆ ಜಿ.

ಕರ್ನಾಟಕ ರಾಜ್ಯ ಸಂಸ್ಥೆ ,

ಅಜೀಂ ಪ್ರೇಮ್ ಜಿ ಫೌಂಡೆಶನ್, ಬೆಂಗಳೂರು.

18798 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು