ತಾಂತ್ರಿಕತೆ ಮತ್ತು ಮನುಷ್ಯ

ತಾಂತ್ರಿಕತೆ ಎಂದರೆ ನನಗೆ ತುಂಬ ಹೆದರಿಕೆ. ಕೆಲಸ ಮಾಡಲು ಬೇಕಾದ ಯಾವುದೆ ತಂತ್ರಗಳನ್ನು ನಾನು ಕಲಿತದ್ದೇ ಕಡಿಮೆ. ಹಾಗೆ ನೋಡಿದರೆ ಕೈಯಲ್ಲಿ ಬಳಕೆ ಮಾಡುವಂತಹ ವಸ್ತುಗಳನ್ನು ಬಳಸುವ ತಂತ್ರ ನನ್ನ ಕೈಗೆ ಎಟಕಲೇ ಇಲ್ಲ. ಬರವಣಿಗೆಯಿಂದ  ಹಿಡಿದು ಕಂಪ್ಯೂಟಿಂಗ್ ತನಕ ನನ್ನ ಬಳಕೆ ಸೀಮಿತವಾದುದು. ಅಕ್ಷರಗಳು ಚನ್ನಾಗಿಲ್ಲ ಎಂದು ಶಾಲೆಯಲ್ಲಿ ಅನೇಕ ಸಲ ಶಿಕ್ಷಕರು ನನ್ನ ಕೈಗೆ ಹೊಡೆದದ್ದಿದೆ. ಅವರು ಎಷ್ಟೇ ಹೊಡೆದರು ಮುದ್ದಾದ ಅಕ್ಷರಗಳು ನನ್ನ ಕೈಯಿಂದ ಹೊರಡಲೇ ಇಲ್ಲ. ಆ! ನನ್ನ ಬರವಣಿಗೆ ಸ್ವಲ್ಪವಾದರು ಉತ್ತಮವಾದದ್ದು ಸುಗಂಧಿ ಎಂಬ 8ನೇ ಕ್ಲಾಸಿನ ಶಿಕ್ಷಕಿಯಿಂದ. ಆ ಶಿಕ್ಷಕಿ ನನ್ನನ್ನು ಕಾಪಿ ಬರೆಸುವುದಾಗಲೀ, ಅಕ್ಷರ ತಿದ್ದಿಸಿದ್ದಾಗಲಿ, ಇಂತಹ ಯಾವುದೇ ಅಭ್ಯಾಸ ಮಾಡಿಸಿದ್ದು ನನಗೆ ನೆನಪಿಲ್ಲ. ನನಗೆ ನೆನಪಿರುವುದು ಅವರು ನನ್ನನ್ನು ಶಾಲೆ ಆದ ಮೇಲೆ ಹತ್ತಿರ ಕೂಡಿಸಿ ಮಾತನಾಡಿಸಿದ್ದು, ನನ್ನ ಬಗ್ಗೆ ಕೇಳಿದ್ದು. ನನ್ನ ಹುರಿದುಂಬಿಸಿದ್ದು. ನೀನು ಸ್ವಲ್ಪ ಗಮನ ಕೊಟ್ಟರೆ ನಿನ್ನ ಅಕ್ಷರಗಳು ಎಷ್ಟು ಮುದ್ದಾಗಿರುತ್ತವೆ ನೋಡು ಎನ್ನುತ್ತಾ ನನ್ನ ಪುಸ್ತಕದಿಂದ ಕೆಲವು ಮುದ್ದಾದ ಅಕ್ಷರಗಳನ್ನು ತೋರಿಸಿದ್ದು. ನನಗೆ ಈ ಪ್ರಶ್ನೆ ಯಾವಾಗಲು ಕಾಡುತ್ತದೆ. ನನ್ನ ಅಕ್ಷರಗಳು ಓದುವ ಹಾಗೆ ಆದದ್ದು ತಿದ್ದಿ ತಿದ್ದಿ, ಮೇಲಿಂದ ಮೇಲೆ ಕಾಪಿ ಬರೆದಿದ್ದರಿಂದಲ್ಲ. ಸುಗಂಧಿ ಟೀಚರಿನ ಪ್ರೀತಿಯ ವಿಶ್ವಾಸದ ಮಾತಿನಿಂದ. ಇದು ತುಂಬಾ ಸರಳವಾಗಿ ಕಂಡರು ತುಂಬಾ ಕ್ಲಿಷ್ಟವಾದ ವಿಷಯ.

ನಾನು ತಾಂತ್ರಿಕತೆಯನ್ನು ಬೇಕು ಎಂದು ಕಲಿತದ್ದಿಲ್ಲ. ಹಟ ಹಿಡಿದು ಕೂತು ಅಭ್ಯಾಸ ಮಾಡಿ ಸಾಧನೆ ಮಾಡಿದ್ದು ಇಲ್ಲ.ನಾನು    ತಾಂತ್ರಿಕತೆಯನ್ನು    ಅಥವಾ    ತಂತ್ರಗಳನ್ನ ಅಳವಡಿಸಿಕೊಂಡಿದ್ದು ನನ್ನ ಜೀವನಕ್ಕೆ ಬೇಕೆಂದಾಗ, ಅದನ್ನು ದಿನನಿತ್ಯದ ಜೀವನದಲ್ಲಿ ಮಾಡುತ್ತಾ ಹೋದಾಗ. ಅನೇಕ ಉದಾಹರಣೆಗಳು ಹೀಗೆ ಕಲಿತಿದ್ದು ನಾನು ಕಾಣುತ್ತೇನೆ. ನಾನು ಚಿಕ್ಕದಿರುವಾಗ ಬಂಟವಾಳದಲ್ಲಿ, ಸ್ವಲ್ಪ ಸಮಯ ಮುಂಬೈಯಲ್ಲಿ,ನಂತರ ಮಂಗಳೂರಿನಲ್ಲಿ ಹೀಗೆ ಬೇರೆಬೇರೆ ಕಡೆಗೆ ಓದಿದವನು.ಬಂಟವಾಳದಲ್ಲಿ ತುಳು ಭಾಷೆಯಲ್ಲದೆ ಮುಂಬೈಯಲ್ಲಿ ಮರಾಠಿ,ಮಂಗಳೂರಿಗೆ ಹಿಂದುರಿಗಿದಾಗ ಕನ್ನಡ, ಕಾಲೇಜಿಗೆ ಸೇರಿದಾಗ ಇಂಗ್ಲೀಷ್ ಹೀಗೆ ಭಾಷೆ ಕಲಿತದ್ದು. ಹೀಗಾಗಿ ಯಾವುದೇ
ಭಾಷೆಯ ಮೇಲೆ ನನಗೆ ಹಿಡಿತವಿರಲಿಲ್ಲ. ಆಚೆಗೆ ಕನ್ನಡ ಇಂಗ್ಲೀಷ್, ಹಿಂದಿಯೂ ಬರುತ್ತಿರಲಿಲ್ಲ. ಈಚೆಗೆ ತುಳುವೂ ಸರಿಯಾಗಿ ಬರುತ್ತಿರಲಿಲ್ಲ. ಕನ್ನಡ ಮಾತನಾಡುವಾಗ ಅಲ್ಪಪ್ರಾಣ ಮಹಾಪ್ರಾಣ ನನ್ನನ್ನು ಕಾಡುತ್ತಿತ್ತು. ಆದುದರಿಂದ ಆತ್ಮವಿಶ್ವಾಸ ಕಡಿಮೆಯಾಗಿ ಸಭೆಗಳಲ್ಲಿ, ಕೂಟಗಳಲ್ಲಿ ಮಾತೆ ಆಡುತ್ತಿರಲಿಲ್ಲ.ಸಂತ    ಅಲೋಷಿಯಸ್    ಕಾಲೇಜಿನಲ್ಲಿ    ಪಿಯುಸಿ ಮಾಡುತ್ತಿರುವಾಗ ಕರ್ನಾಟಕದ ಶ್ರೇಷ್ಠ ಸಾಹಿತಿ ತೆಕ್ಕುಂಜೆ ಗೋಪಾಲಕೃಷ್ಣ ಭಟ್ ಕ್ರಿಶ್ಚನ್ ಶಾಲೆಯಲ್ಲಿ ಯಕ್ಷಗಾನ ಮಾಡುವ ಸವಾಲು ಎತ್ತಿಕೊಂಡು ನಮ್ಮನ್ನೆಲ್ಲ ಸೇರಿಸಿದರು. ನಾನು ಯಕ್ಷಗಾನದಲ್ಲಿ ಪಾತ್ರ ಮಾಡಲು ಶುರು ಮಾಡಿದ್ದು ಇಲ್ಲೆ. ಅಲ್ಪಪ್ರಾಣ ಮಹಾಪ್ರಾಣ ಹಾಗೂ ಭಾಷೆಯ ಮೊದಲ ಪಾಠ ಇಲ್ಲಾಗಿತು. ಯಕ್ಷಗಾನ ನನಗೆ ಹಿಡಿಸಿತು. ನನ್ನ ಭಾಷೆಯಿಂದಾಗಿ ಒಳ್ಳೆಯ ಪಾತ್ರಗಳು ಸಿಕ್ಕೋದು ತಪ್ಪಿಹೋಯಿತು. ಒಳ್ಳೆ ಒಳ್ಳೆ ಪಾತ್ರ ಸಿಗಲಿಕ್ಕೆ ನಾನು ಭಾಷೆ ಸುಧಾರಿಸಲು ಪ್ರಯತ್ನಪಟ್ಟೆ. ಹೀಗೆ ನನ್ನ ಭಾಷೆಯ ಸುಧಾರಣೆ ಹಾಗೂ ಅದರಿಂದಾಗಿ ಒಳ್ಳೊಳ್ಳೆ ಪಾತ್ರಗಳ ಅವಕಾಶ ಬೆಳೆಯುತ್ತಾ ಹೋಯಿತು. ನನ್ನ ಕನ್ನಡ ಭಾಷೆ ಸುಧಾರಣೆ ಆಗಿರುವುದೇ ಬಳಕೆಯ ಅನಿವಾರ್ಯತೆಯಿಂದ.ಹಳ್ಳಿಯಿಂದ ಬಂದ ಕೆಟ್ಟ ಇಂಗ್ಲೀಷಿನವರಾದ ನಾವು ತರಗತಿಯ ಕಡೆಯಲ್ಲಿ ಕೂತು ನಮ್ಮಷ್ಟಕ್ಕೆ ಮಜ ಮಾಡಿಕೊಳ್ಳುತ್ತಿದ್ದೆವು. ಮೊದಲ ಕ್ಲಾಸಿಗೆ ನನ್ನನ್ನ ಎಬ್ಬಿಸಿ ನನ್ನ ಇಂಗ್ಲೀಷ ಪ್ರೋಫೆಸರ ಸನ್ನಿತಾರಪ್ಪನ್ ಕೇಳಿದ ಪ್ರಶ್ನೆಗೆ ನನ್ನ ಉತ್ತರ ಇಡೀ ಕ್ಲಾಸೇ ನಗುವ ಹಾಗೆ ಮಾಡಿತ್ತು. ಸನ್ನಿ “ಗೆಟ್ ಔಟ್” ಎಂದಿದ್ದರು. ಅವಮಾನ ತಡೆಯದೆ ಹೊರಗೆ ಓಡಿದ್ದೆ.ಆದರೆ ಸನ್ನಿಯ ಶಕ್ತಿ ಅದ್ಭುತ.ಹಳ್ಳಿಯಿಂದ ಬರುವ ನಮ್ಮನ್ನೆಲ್ಲ ಕರೆದು ಯಾರಿಗೂ ಗೊತ್ತಾಗದ ಹಾಗೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್ ಮಾಡಿ ನಮ್ಮ ಇಂಗ್ಲೀಷನ್ನು ಬೇರೆ ಹುಡುಗರಿಗಿಂತ ಕಡಿಮೆ ಇಲ್ಲದ ಹಾಗೆ ಮಾಡಿದರು. ಆ ಸಂಬಂಧ ಎಷ್ಟು ಗಟ್ಟಿಯಾಗಿತ್ತು ಎಂದರೆ ಇಂದಿಗೂ ಹಾಗೆ ಉಳಿದಿದೆ.

ನಾನು ತುಳು ಚನ್ನಾಗಿ ಮಾತನಾಡಲು ಕಲಿತದ್ದು 1974ರಲ್ಲಿ ಉಳುವವನೆ ಹೊಲದೊಡೆಯ ಎಂಬ ಕಾನೂನು ಜಾರಿಗೊಂಡಾಗ. ನಾವು ಒಂದಷ್ಟು ಯುವಕರು ಸನ್ನಿ ಮಾಷ್ಟರರ ಮುಂದಾಳತ್ವದಲ್ಲಿ ರೈತರೊಂದಿಗೆ ಈ ಕಾನೂನು ಬಗ್ಗೆ  ಮಾತನಾಡಲು ಹಳ್ಳಿಗಳಿಗೆ ಹೋದೆವು. ನಾನು ಮತ್ತು ಶಶಿಧರ ಹಡಪ ಮಂಗಳೂರು ಮತ್ತು ಬಂಟವಾಳಕ್ಕೆ ಹೋದೆವು. ಅಲ್ಲಿ ರೈತರೊಂದಿಗೆ ಮಾತನಾಡುತ್ತಾ ತುಳು ಕಲಿತೆ. ಹೀಗೆ ನಾನು ಭಾಷೆಗಳನ್ನು ಕಲಿತಿರೋದೆ ಅದರ ಬಳಕೆ ಸಂದರ್ಭಗಳಲ್ಲಿ ಬಳಕೆ ಮಾಡುತ್ತಾ ಮಾಡುತ್ತಾ. ಇತ್ತೀಚೆಗೆ ನಮ್ಮ ಅಮ್ಮನ ಆರೋಗ್ಯ ತುಂಬಾ ಹದಗೆಟ್ಟಿತು. ಅವರನ್ನು ಆಸ್ಪತ್ರೆಯಲ್ಲಿ ಐಸಿಯುಗೆ ಹಾಕಿದೆವು. ಅದು ನಮಗೆಲ್ಲರಿಗು ಕಷ್ಟವಾಯಿತು. ಪ್ರತಿದಿನ ಸಂಜೆ ಸ್ವಲ್ಪಹೊತ್ತು ಮಾತ್ರ ನೋಡಲು ಅವಕಾಶ. ಇಷ್ಟು ಬಿಟ್ಟರೆ ಇಡಿ ದಿವಸ ಆ ಎಲ್ಲ ವೈದ್ಯಕೀಯ ಯಂತ್ರಗಳ ಮಧ್ಯೆ ಅವರಿರುತ್ತಿದ್ದರು. ಸ್ವಲ್ಪ ಸುಧಾರಿಸಿದ ಮೇಲೆ, “ನನ್ನನ್ನು ದಯವಿಟ್ಟು ಹೊರಗೆ ಕರಕೊಂಡುಹೋಗಿ” ಎನ್ನುತ್ತಿದ್ದರು. ಹಾಗೆ ಸ್ವಲ್ಪ ಚೆನ್ನಾಗಿ ಆದರು ಎನ್ನುವಾಗ ಅವರನ್ನು ಐಸಿಯುವಿನಿಂದ ಹೊರಗೆ ಕರೆತಂದೆವು. ಅವರ ಆರೋಗ್ಯ ಸುಧಾರಿಸುತ್ತ ಇತ್ತು. ಎರಡು ವಾರ ಕಳೆದಾಗ ಮತ್ತೆ ಆರೋಗ್ಯ ಕ್ಷೀಣಿಸುವುದಕ್ಕೆ ಪ್ರಾರಂಭಿಸಿತು. ಡಾಕ್ಟರ್ ಬಂದವರು ಪುನಃ ಐಸಿಯುಗೆ ಹಾಕುವಂತೆ ಹೇಳಿದರು. ನಮಗೆಲ್ಲರಿಗು ಚಿಂತೆ ಹತ್ತಿತು. ನಾನು ಇಂದು ಅವರ ಬಳಿ ಮಾತಾಡಿದೆ. ಅವರಂದರು,“ಪುನಃ ಅವರನ್ನು ಐಸಿಯುಗೆ ಕರಕೊಂಡು ಹೋಗಬೇಡಿ. ಅವರಿಗೆ ನಿಮ್ಮ ಸಾಮೀಪ್ಯ ಬೇಕು, ನಿಮ್ಮ ಜೊತೆಗೆ ಮಾತುಕತೆ ಬೇಕು.ನೀವು ಒತೆಗೆ ಇದ್ದೇವೆ ಅಂತ ಅವರಿಗೆ ಹೇಳಬೇಕು. ಮದ್ದು ಮಾತ್ರೆ ಮೆಷೀನ್ ಇವು ಹೆಚ್ಚು ಸಹಾಯ ಮಾಡೋಲ್ಲ. ನೀವು ಅವರಿಗೆ ಆತ್ಮವಿಶ್ವಾಸ ಕೊಡಬೇಕು. ಡಾಕ್ಟ್ರ ಹತ್ತಿರ ನಾವು ನೋಡಿಕೊಳ್ತೇವೆ ಹೇಳಿ. ಆಮೇಲೆ ಡಾಕ್ಟ್ರು ಶಿಫ್ಟ್‍ಗೆ ಬಂದಾಗ ನಾವು ಅವರನ್ನು ಕೇಳಿಕೊಂಡೆವು, “ಅಮ್ಮನನ್ನು ನಾವು ಇಲ್ಲಿ ರೂಮಲ್ಲಿ ನೋಡಿಕೊಳ್ತೇವೆ. ಐಸಿಯು ಬೇಡ. ನೀವು ಅವರನ್ನ ಹೇಗೆ ನೋಡಿಕೊಳ್ಬೇಕು ಹೇಳ್ತೀರಿ ಹಾಗೆ. ನಾವೆಲ್ಲರು ಅವರ ಜೊತೆಗೆ ಇರ್ತೀವಿ.” “ನಿಮ್ಮ ಇಷ್ಟ” ಡಾಕ್ಟ್ರ ಮಾತು.

ಡಾಕ್ಟ್ರು ಮಾತು ಮುಂದುವರೆಸಿದರು,”ಅಲ್ಲಿ ಐಸಿಯುನಲ್ಲಿ ಮೆಡಿಕಲಿ ನಾವು ಸ್ವಲ್ಪ ಹೆಚ್ಚು ನೋಡಿಕೊಳ್ತೀವಿ. ಇಲ್ಲಿ ಸೋಶಿಯಲೀ ನೀವು ಹೆಚ್ಚುನೋಡಿಕೊಳ್ಳಾಕೆ ಆಗತ್ತೆ. ಎರಡು ಕಡೆಯು ಕೊಡೊ ಮೆಡಿಸಿನ್ ಒಂದೆ. ನೀವೆಲ್ಲರು ಜೊತೆಗಿದ್ದು ನೋಡಿಕೊಳ್ಳುವುದಕ್ಕೆ ನನ್ನ ಅಭ್ಯಂತರವಿಲ್ಲ.” ಅಮ್ಮನನ್ನು ನಾವೆ ರೂಮಲ್ಲಿ ನೋಡಿಕೊಂಡೆವು. ಅಮ್ಮ ಸಾಕಷ್ಟು ಉಷಾರಾದರು. ಮನೆಗೆ ಕರಕೊಂಡು ಹೋದ್ವಿ. ಈವತ್ತು ವಾಕರ್ ಜೊತೆಗೆ ನಡೆದಾಡುತ್ತಾರೆ. ಇಂದು ಹೇಳಿದ ಮಾತು ನನಗೆ ತುಂಬ ಮುಖ್ಯವಾಗತ್ತೆ. ಮಾನವ ಸಂಬಂಧ,ಮಾನವ ಪ್ರೀತಿ ಉಷಾರಿಲ್ಲದವರಿಗೆ ಎಲ್ಲಕ್ಕಿಂತ ಹೆಚ್ಚು ಮುಖ್ಯವಾಗತ್ತೆ. ಮೆಷೀನ್ ಅದನ್ನು ಬದಲಿಸುವುದಕ್ಕೆ ಆಗುವುದಿಲ್ಲ.ತಾಂತ್ರಿಕತೆಯ ಬಗ್ಗೆ ಮಾತಾಡುವಾಗ ನಾವು ಯಾವಾಗಲು ಮಾನವ ಸಂಬಂಧ ಮತ್ತು ಮಾನವ ಪ್ರೀತಿಯ ಶಕ್ತಿಯನ್ನು ಅಲ್ಲಗಳೆಯಬಾರದು.

ತಾಂತ್ರಿಕತೆ ನನ್ನನ್ನು ಇಂದಿಗೂ ಹೆದರಿಸಿದೆ. ಅನಿವಾರ್ಯವಾದಾಗ ಮಾತ್ರ ನಾನು ಅದನ್ನು ಬಳಕೆ ಮಾಡುತ್ತೇನೆ. ಅದರಿಂದ ಜೀವನಕ್ಕೆ ಒಳ್ಳೆಯದು ಆಗುತ್ತದೆ ಅಂದರೆ ಅದನ್ನ ಕರಗತ ಮಾಡಿಕೊಳ್ಳುತ್ತೇನೆ. ಮೋಬೈಲ್ ಬಳಸುವಾಗಾಗಲಿ, ಕಂಪ್ಯೂಟರ್ ಬಳಸುವಾಗಾಗಲೀ ಅಗತ್ಯವಿದ್ದಷ್ಟು ಬಳಸುವ ನೀತಿಯನ್ನು ಇಟ್ಟುಕೊಂಡವನು ನಾನು. ಯಾವುದೇ ಒಂದು ತಾಂತ್ರಿಕತೆಯನ್ನು ಅದಕ್ಕಾಗಿಯೇ ಕಲಿತಿದ್ದಿಲ್ಲ, ಅಭ್ಯಾಸ ಮಾಡಿದ್ದಿಲ್ಲ, ಕರಗತ ಮಾಡಿದ್ದಿಲ್ಲ. ಅಗತ್ಯಕ್ಕೆ ಬೇಕಾದಷ್ಟು ಬಳಸಿದ್ದೇನೆ. ಸರಳವಾಗಿ ಬಳಸಿದ್ದೇನೆ. ಸಹಜವಾಗಿ ಜೀವನದಲ್ಲಿ ಹಾಸುಹೊಕ್ಕಾಗಿರುವ ಹಾಗೆ ಮಾಡಿದ್ದೇನೆ. ಜೀವನವನ್ನು ಸುಗಮ ಮಾಡಲು ತಾಂತ್ರಿಕತೆ ಅಥವಾ ತಂತ್ರಜ್ಞಾನ ಎಂಬ ನೀತಿ ನನ್ನದು.

. ತಾಂತ್ರಿಕತೆ ಮತ್ತು ಮನುಷ್ಯ
-ಉಮಾಶಂಕರ ಪೆರಿಯೋಡಿ(ಬುತ್ತಿ ಜುಲೈ 2015 ರಿಂದ

 
 

18484 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು