ತರಗತಿಯ ಹೊರಗೂ ಸಶಕ್ತಗೊಳಿಸುವ ಸ್ಥಳಗಳ ಅಗತ್ಯತೆ

“ಮಗುವು ಒಂದು ಹೂ ತುಂಬಿಸಬಹುದಾದ ಹೂದಾನಿಯಲ್ಲ, ಅದು ಒಂದು ಹಚ್ಚಿ ಬೆಳಗಿಸಬಹುದಾದ ದೀಪ” ಎನ್ನುವುದು ಪುನರುಜ್ಜೀವನ ಕಾಲದ ಫ್ರೆಂಚ್ ವಿದ್ವಾಂಸರಾದ ಫ್ರಾಂಕಾಯ್ ರೆಬೆಲೈ ಅವರ ಅಭಿಪ್ರಾಯ. ಶಿಕ್ಷಣದ ನಿಜವಾದ ಉದ್ದೇಶ ಸಾಧ್ಯವಿರುವ ಎಲ್ಲಾ ವಿಧಗಳಲ್ಲೂ ಒಬ್ಬ ವ್ಯಕ್ತಿಯ ವಿಕಸನಕ್ಕೆ ಕಾರಣವಾಗುವುದು ಎಂದು ತದನಂತರದ ಶತ ಶತಮಾನಗಳಿಂದಲೂ ಅನೇಕ ಹೆಸರಾಂತ ಶಿಕ್ಷಣತಜ್ಞರು ಪ್ರತಿಪಾದಿಸುತ್ತಿದ್ದಾರೆ.  ಹೀಗಿದ್ದಾಗ್ಯೂ ನಾವು ನಮ್ಮ ಶಾಲೆಗಳಲ್ಲಿ “ಹೂದಾನಿಯನ್ನು ತುಂಬಿಸುವುದರಲ್ಲೇ” ಮಗ್ನರಾಗಿದ್ದು “ದೀಪ ಬೆಳಗಿಸುವುದು” ಎನ್ನುವುದು ನಮ್ಮ ಒಟ್ಟಾರೆ ಕಾರ್ಯಸೂಚಿಯಲ್ಲಿ ಸ್ಥಳವನ್ನೇ ಕಾಣುತ್ತಿಲ್ಲ ಏಕೆ? ಶಿಕ್ಷಣವೆನ್ನುವುದು ಮಾಹಿತಿಯ ವರ್ಗಾವಣೆ ಮಾತ್ರ, ಇಲ್ಲಿ ಒಬ್ಬರ ಜೀವನದ ಕೇಂದ್ರಬಿಂದುವೆಂದರೆ ಪರೀಕ್ಷೆಗಳಲ್ಲಿ ಚೆನ್ನಾಗಿ ಮಾಡುವುದು ಮಾತ್ರ ಎಂದು ಏಕೆ  ಬದಲಾಯಿಸಿಬಿಟ್ಟಿದ್ದೇವೆ?
 
ಒಂದು ಗಿಡದ ಬೆಳವಣಿಗೆಗೆ ಹೇಗೆ ಸರಿಯಾದ ಮಣ್ಣಿನ ಅವಶ್ಯಕತೆ ಇದೆಯೋ ಹಾಗೇ ಒಂದು ಮಗುವಿನ ವಿಕಸನಕ್ಕೆ ಸರಿಯಾದ ವಾತಾವರಣದ ಅಗತ್ಯವಿದೆ.  ಶಾಲೆಯಲ್ಲೇ ಆಗಲಿ, ಮನೆಯಲ್ಲೇ ಆಗಲಿ ಸರಿಯಾದ ವಾತಾವರಣವೆಂದರೆ ಮಗುವಿಗೆ ತನ್ನನ್ನು ತಾನು ಅರಿತುಕೊಳ್ಳಲು, ತನಗಿರುವ ಶಕ್ತಿಯನ್ನು ಗುರುತಿಸಿಕೊಳ್ಳಲು, ಆತ್ಮಬಲವನ್ನು ಗಳಿಸಿಕೊಳ್ಳಲು ಅವಕಾಶವನ್ನು ನೀಡುವಂತಹುದು.
ಹೀಗಿದ್ದರೂ, ನಮ್ಮಲ್ಲಿ ಕೊರತೆ, ಮತಿವಿಕಲ್ಪತೆ, ಭಯ, ಅಭದ್ರತೆಯನ್ನು ನಿವಾರಿಸಿ ಆತ್ಮವಿಶ್ವಾಸವನ್ನು ತುಂಬುವ, ನಮ್ಮಲ್ಲಿ ಸಹಾನುಭೂತಿಯನ್ನು, ಸ್ವತಂತ್ರವಾಗಿ ಆಲೋಚಿಸುವ ಮತ್ತು ಸೂಕ್ತ ಆಯ್ಕೆಗಳನ್ನು ಮಾಡುವ ಸಾಮಥ್ರ್ಯವನ್ನು ನೀಡಿ ನಮ್ಮನ್ನು ಪರಿಪೂರ್ಣ ವಯಸ್ಕವ್ಯಕ್ತಿಗಳನ್ನಾಗಿ ಮಾಡುವುದಕ್ಕೆ  ಮತ್ತು ಜೀವನವನ್ನು ಎದುರಿಸಲು ಸಜ್ಜುಗೊಳಿಸುವುದಕ್ಕೆ ಕಾರಣವಾದಂಥ ಸಂಸ್ಥೆ ಹೆಗ್ಗಳಿಕೆಯನ್ನು ನಮ್ಮ ಶಾಲಾ ಪರಿಸರಕ್ಕೆ ನಮ್ಮಲ್ಲಿ ಎಷ್ಟು ಜನರು ಪ್ರಾಮಾಣಿಕವಾಗಿ ಕೊಡಬಲ್ಲೆವು?
 
ನಾವು ತರಗತಿಯೊಳಗಿನ ವಾತಾವರಣ ಮತ್ತು ತರಗತಿಯ ಹೊರಗೆ ನಡೆಯುವ ಸಂವಾದದ ಸ್ಥಳ ಇವೆರಡರ ಕಡೆಗೆ ಗಮನವನ್ನೇ ಹರಿಸಿಲ್ಲ ಮತ್ತು ಒಂದು ಮಗುವಿನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಇದರ ಪ್ರಭಾವವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.
 
ಒಂದು ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಆ ಮಗುವಿನ ಪೋಷಕರು ಮತ್ತು ಕಾಳಜಿವಹಿಸುವ ಇನ್ನಿತರರು ಆ ಮಗುವನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದರ ಪರಿಣಾಮವೂ ಇರುತ್ತದೆ.  ಪ್ರೀತಿ ಮತ್ತು ಬೆಂಬಲ ನೀಡುವ ವಾತಾವರಣವು ಯಾವುದೇ ಒಪ್ಪಿಕೊಳ್ಳುವಿಕೆಯ ಮತ್ತು ಪ್ರಶಂಸೆಯ ಚಿಂತೆ ಇಲ್ಲದೇ ಮಕ್ಕಳು ಸಹಜವಾಗಿ ಕಲಿಯುವಂತೆ ಮಾಡುತ್ತದೆ.  ಹೀಗಾಗಿ ಮಗುವಿನ ಭಾವನಾತ್ಮಕ ಪರಿಸರವು ಭೌತಿಕ ಪರಿಸರದಂತೆಯೇ ಪ್ರಮುಖವಾದದ್ದು. ಭೌತಿಕ ಪರಿಸರಕ್ಕೇ ಪರದಾಡ ಬೇಕಾಗಿರುವಂತಹ ನಮ್ಮ ದೇಶದಲ್ಲಿ, ಭಾವನಾತ್ಮಕ ಪರಿಸರವು ಬಹು ದೂರದ ಮಾತು.  ಹೀಗಿದ್ದರೂ ಪೋಷಣೆ ನೀಡುವ ಪರಸರಕ್ಕೆ, ಅಕ್ಕರೆ, ಅರ್ಥಮಾಡಿಕೊಳ್ಳುವುದು, ಸಹೃದಯತೆ ಮತ್ತು ಸೂಕ್ಷತೆಯಿಂದ ಮಕ್ಕಳೊಡನೆ ವ್ಯವಹರಿಸುವ ವಯಸ್ಕರನ್ನು ಹೊರತುಪಡಿಸಿ ಬೇರಿನ್ನಾವ ಸೌಕರ್ಯದ ಅವಶ್ಯಕತೆ ಇರುವುದಿಲ್ಲ.
 
ಮಗುವಿಗೆ ಪ್ರಜಾಸತ್ತಾತ್ಮಕ ವ್ಯಕ್ತಿಸ್ವಾತಂತ್ಯ್ರವನ್ನು ಪೋಷಿಸಲು ತರಗತಿಕೋಣೆಯೇ ಮೊದಲು ಸಂದರ್ಭವನ್ನು ಒದಗಿಸುತ್ತದೆ. ಇಲ್ಲಿ ಪ್ರತಿಯೊಬ್ಬರೂ ಗೌರವಿಸಲ್ಪಡುತ್ತಾರೆ ಮತ್ತು ಭಯರಹಿತ ವಾತಾವರಣದಲ್ಲಿ ತಮ್ಮದೇ ಆದ ವೇಗ ಅಥವಾ ಗತಿಯಲ್ಲಿ ಕಲಿಯುವ ಆನಂದದಾಯಕ ವಾತಾವರಣವಿರುತ್ತದೆ. ಮಕ್ಕಳು ಸಂತೋಷವಾಗಿ ಮತ್ತು ಮುಕ್ತವಾಗಿ ಇದ್ದಾಗ ಅತ್ಯುತ್ತಮವಾಗಿ ಕಲಿಯುತ್ತಾರೆ.  ಯಾವಾಗಲೂ ಅವರಿಗೆ ಅನಿಸಿದ್ದನ್ನೇ ಮಾಡುವ ಸ್ವಾತಂತ್ರ್ಯ ಎಂದಲ್ಲ, ಆದರೆ ಶೋಧಿಸಿನೋಡಲು, ಅರ್ಥ ಕಲ್ಪಿಸಿಕೊಳ್ಳಲು ಮತ್ತು ತಮಗನಿಸಿದ್ದನ್ನು ಹೇಳಲು ಮುಕ್ತತೆ ಇರುವಲ್ಲಿ ಅತ್ಯುತ್ತಮ ಕಲಿಕೆ ಸಾಧ್ಯವಾಗುತ್ತದೆ.  ಸಾಕಷ್ಟು ಅವಕಾಶಗಳನ್ನು ಮಗುವಿಗೆ ಒದಗಿಸದಿದ್ದಲ್ಲಿ ಮಕ್ಕಳ ಬೆಳವಣಿಗೆ, ಅದರಲ್ಲೂ ವಿಷಯ ಗ್ರಹಿಕೆ ವಲಯದಲ್ಲಿ ಅವರ ಬೆಳವಣಿಗೆ ಆಗುತ್ತದೆ ಎಂದು ಬಯಸುವುದು ಸಾಧ್ಯವಿಲ್ಲ. ನಾಟಕ, ಸಂಗೀತ, ನೃತ್ಯ, ಕಲೆ, ಕುಶಲ ಕಲೆಗಳು, ಮುಕ್ತತೆಯನ್ನು ಹೊಂದಿರುವ ಆಟಗಳ ಮೂಲಕ ವಿವಿಧ ಅವಕಾಶಗಳನ್ನು ಮಗುವಿಗೆ ಒದಗಿಸಬಹುದು ಮತ್ತು ಒಂದು ಮಗುವಿನ  ಬೆಳವಣಿಗೆಯಾಗಲು ಸಾಕಷ್ಟು ಅವಕಾಶಗಳನ್ನು ಕಲ್ಪಿಸುವಲ್ಲಿ ಇವು ಪರಿಣಾಮಕಾರಿ ವಿಧಾನಗಳು. ಮಕ್ಕಳ ಭಾವನಾತ್ಮಕ ಪ್ರಪಂಚಕ್ಕೆ ತಕ್ಕಂತೆ ಅವನ್ನು ಅಣಿಗೊಳಿಸುವುದೂ ಬಹಳ ಮುಖ್ಯ.  ಮಾತುಕತೆ, ನಡಿಗೆ, ಜೊತೆಯಲ್ಲಿ ಮಾಡುವ ಚಟುವಟಿಕೆ ಅಥವಾ ಆಡಬಹುದಾದ ಆಟಗಳ ಮೂಲಕ ಮಕ್ಕಳೊಂದಿಗೆ ಅರ್ಥಪೂರ್ಣವಾಗಿ ಸಮಯವನ್ನು ಕಳೆಯಬಹುದು. ನಾನು ಜ್ಞಾಪಿಸಿಕೊಳ್ಳಬಹುದಾದ ಒಂದು ಸರಳ ಪ್ರಕ್ರಿಯೆ ಎಂದರೆ “ಸಿಟ್ಟು, ದುಃಖ ಮತ್ತು ಸಂತೋಷ” ಎಂದು ನಾವು ಹೆಸರಿಸಿದ ವೃತ್ತದಲ್ಲಿ ಕುಳಿತು ಪರಸ್ಪರ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುವ ಚಟುವಟಿಕೆ.  ಇದು ನಮ್ಮ ತರಗತಿಯ ಒಳಗಿನ ಪರಸ್ಪರ ಒಡನಾಟಕ್ಕೆ ಅತ್ಯಂತ ಹೆಚ್ಚಿನ ಮೌಲ್ಯವನ್ನು ನೀಡಿತ್ತು.  ಚಟುವಟಿಕೆಯ ಹೆಸರೇ ಸೂಚಿಸುವಂತೆ, ನಾವು ಪ್ರತಿಯೊಬ್ಬರೂ – ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಾವು ಕೋಪಗೊಂಡ, ದುಃಖಿತರಾದ ಮತ್ತು ಸಂತೋಷವನ್ನು ಅನುಭವಿಸಿದ ವಿಷಯಗಳನ್ನು ಹಂಚಿಕೊಳ್ಳುತಿದ್ದೆವು. ಪ್ರಾರಂಭದಲ್ಲಿ ಹಿಂಜರಿದರೂ, ಮಕ್ಕಳು ತಮ್ಮ ಸಂತೋಷ, ದುಃಖ ಮತ್ತು ಹತಾಶೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದಕ್ಕೆ ಪರಸ್ಪರರಲ್ಲಿ ನಂಬಿಕೆಯನ್ನು ಬೆಳಸಿಕೊಂಡರು.  ಮುಕ್ತವಾಗಿ ಈ ರೀತಿ ಹೇಳಿಕೊಳ್ಳುವುದರಿಂದ ಪರಸ್ಪರರನ್ನು ಉತ್ತಮವಾಗಿ ಅರಿತುಕೊಳ್ಳಲು ಸಹಾಯಕವಾಯಿತು ಎನ್ನುವುದು ಇಲ್ಲಿ ತನ್ನಿಂದ ತಾನೇ ಸ್ಪಷ್ಟವಾಗುತ್ತದೆ.  ಇದು ಯಾವಾಗಲೂ ನಮಗೆ ತಿದ್ದಿಕೊಳ್ಳಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಅವಕಾಶವನ್ನು ಕೊಡುತಿತ್ತು. ಒಬ್ಬ ಶಿಕ್ಷಕನಾಗಿ, ಮಕ್ಕಳ ಒಳ ಪ್ರಪಂಚದ ಒಂದು ಸಣ್ಣ ನೋಟ ನನಗೆ ತಿಳಿಯುತಿತ್ತು ಮತ್ತು ಇದರಿಂದ ನಾನು ಅವರನ್ನು ಪರಿಣಾಮಕಾರಿಯಾಗಿ ತಲುಪಲು ನೆರವಾಗುತಿತ್ತು.
 
ನಾವು ತರಗತಿ ಪರಿಸರದ ಬಗ್ಗೆ ಪದೇ ಪದೇ ಮಾತನಾಡುತ್ತಿರುತ್ತೇವೆ ಆದ್ದರಿಂದ, ನಾನು ಇಲ್ಲಿ ತರಗತಿಯ ಹೊರಗಿನ ವಾತಾವರಣದ ಬಗ್ಗೆ ವಿಶೇಷವಾಗಿ ಗಮನ ಸೆಳೆಯಲು ಬಯಸುತ್ತೇನೆ.  ಈ ಸ್ಥಳಗಳೇ ಎಳೆಯ ಮನಸ್ಸನ್ನು ರೂಪಿಸುತ್ತವೆ ಆದ್ದರಿಂದ ಅವುಗಳನ್ನು ಇಲ್ಲಿ ಸೂಕ್ಷ್ಮಭಾವದಿಂದ ನಡೆಸಿಕೊಳ್ಳ ಬೇಕಾದ ಅತ್ಯಾವಶ್ಯಕತೆ ಇದೆ.
 
ನಾವು ಶಾಲಾ ಸಭೆಯ ಬಗ್ಗೆ ಮಾತನಾಡುವುದರಿಂದ ಪ್ರಾರಂಭಿಸೋಣ.  ಶಾಲಾ ಸಭೆಯನ್ನು ನಡೆಸುವ ವಿಧಾನವು ಶಾಲಾ ಸಂಸ್ಕೃತಿ ಯನ್ನು ಪ್ರತಿಬಿಂಬಿಸುತ್ತದೆ. ಈ ಸಮಯದಲ್ಲಿಯೇ ಸಂಪೂರ್ಣ ಶಾಲೆಯು ಸೇರುವುದರಿಂದ ಇಲ್ಲಿ ಎಳೆಯ ಮನಸ್ಸುಗಳನ್ನು ಚಿಂತನೆ, ಚರ್ಚೆ, ವಿವಿಧ ಕಲೆಗಳನ್ನು ಉಪಯೋಗಿಸಿ ಅಭಿವ್ಯಕ್ತಗೊಳಿಸುವುದನ್ನು ಜ್ಞಾನವನ್ನು ಹೆಚ್ಚಿಸಲು, ಪ್ರೇರೇಪಿಸಲು ಮತ್ತು ಸಶಕ್ತಗೊಳಿಸಲು ಸದುಪಯೋಗ ಪಡೆದುಕೊಳ್ಳುವ ವಿಪುಲ ಅವಕಾಶಗಳಿವೆ. ಹೀಗಿದ್ದರೂ ಅನೇಕ ಬಾರಿ ನಾವು ಈ ಪವಿತ್ರ ಕ್ಷೇತ್ರವನ್ನು ಒಬ್ಬರೊಡನೊಬ್ಬರು ಹಂಚಿಕೊಂಡು ಬೆಳೆಯುವ ಜಾಗವಾಗಿರಿಸದೆ ಮಕ್ಕಳು ಸ್ಪರ್ಧೆ ನಡೆಸಿ ಉತ್ತಮ ಸಾಧನೆ ತೋರಿಸತಕ್ಕ ಕ್ಷೇತ್ರವನ್ನಾಗಿ ಮಾಡಿಬಿಡುತ್ತೇವೆ. ಇದೇನು ಮಕ್ಕಳು ಸಾಲಾಗಿ ಸರಿಯಾಗಿ ನಿಲ್ಲುವರೇ ಅಥವಾ ಅವರು ಯಾವಾಗಲೂ ಬಹಳ ನೀಟಾದ ಸರಿಯಾದ ಸಮವಸ್ತ್ರ ಧರಿಸಿಬರುತ್ತಾರೆಯೇ ಎಂಬುದನ್ನು ತಪಾಸಣೆ ಮಾಡುವ ಜಾಗವೇ ಅಥವಾ ಕೇವಲ ಬಲು ಜಾಣ ಮಕ್ಕಳು ಮಾತ್ರವೇ ತಮ್ಮ ಸಾಧನೆ ತೋರುವ ಜಾಗವೇ ಅಥವಾ ಪ್ರತಿಮಗುವಿನಲ್ಲೂ ಇರುವ ವಿಶೇಷತೆಯನ್ನು ಹೊರತರುವ ವೇದಿಕೆಯೇ? ನನ್ನ ಜೀವನದ ಬಲು ಹೃದಯಸ್ಪರ್ಶಿ ಘಟನೆಯೆಂದರೆ ಒಂದು ಅಂಗ ವಿಕಲ ಮಗುವನ್ನು ಆ ದಿನದ ಸುದ್ದಿ ಸಮಾಚಾರವನ್ನು ಓದಲು ವೇದಿಕೆಯ ಮೇಲೆ ಸಹಾಯ ಮಾಡಿ ಹತ್ತಿಸಿದ್ದು ಅವಳು ಮುಗ್ಗರಿಸಿಬಿದ್ದು ಮೈಕ್ ಮುಂದೆ ಹೇಗೇಗೋ ನಿಂತು ಓದಿದಳು ಅವಳ ಗೊಗ್ಗರು ಧ್ವನಿಯ ಕೇಳಿಸಲು ಆಗದೇ ಇದ್ದಂತಹ ಅತ್ಯುತ್ತಮ ಎಂದು ಹೇಳಲಾಗದ ಸುದ್ದಿ ನಿರೂಪಣೆಯು ಅವಳಲ್ಲಿ ಆತ್ಮ ವಿಶ್ವಾಸತುಂಬಿದ ಮತ್ತು ಪ್ರೇಕ್ಷಕ ವರ್ಗದಲ್ಲಿ ಸಹಾನುಭೂತಿ ತುಂಬಿದ ಜೀವನ ಪರ್ಯಂತದ ಪಾಠವಾಗಿತ್ತು. 
ಶಾಲೆಯಲ್ಲಿನ ಸಾಂಸ್ಕøತಿಕ ಕಾರ್ಯಕ್ರಮಗಳಿಗೂ ಇದನ್ನು ಅನ್ವಯಿಸಿಕೊಳ್ಳಬಹುದು. ಒಬ್ಬ ಶಿಕ್ಷಕರು ತನ್ನ ಮಾನಸಿಕ ಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿಕೊಂಡು ತನ್ನ ಸರಿಯಾದ ನಿರ್ವಹಣೆಯ ಬಗ್ಗೆ ಗಮನಹರಿಸುವಾಗ ಉಂಟಾಗುವ ಹೆಚ್ಚಿನ ಒತ್ತಡ ಮಕ್ಕಳಿಗೂ ವರ್ಗಾವಣೆಯಾಗುತ್ತದೆ, ಇದಕ್ಕಿಂತಾ ಹೆಚ್ಚಾಗಿ ಇದು ಅವಳ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಗ್ರಹಿಸಲಾಗುವುದರಿಂದ ಈ ಒತ್ತಡ ಇನ್ನೂ ಹೆಚ್ಚು. ನಿರಾಕರಣೆಯಿಂದ ಘಾಸಿಗೊಂಡ ಮಕ್ಕಳನ್ನು ಎಷ್ಟು ಬಾರಿ ನೋಡಿಲ್ಲ? ಯೋಜನಾ ಕಾರ್ಯದಿಂದ ಒತ್ತಡಕ್ಕೆ ಒಳಗಾದವರನ್ನು ಹಾಗೂ ಚಿಂತಿಸಲು ಮತ್ತು ವ್ಯಕ್ತಪಡಿಸಲು, ಆಯ್ಕೆಮಾಡಿಕೊಳ್ಳಲು ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡದಿದ್ದಾಗ ಉಂಟಾಗುವ ಒತ್ತಡ ಮತ್ತು ಅದನ್ನು ಪ್ರದರ್ಶಿಸಲು ಇರವ ನಿರ್ಬಂಧ ಅವರನ್ನು ಹೈರಾಣು ಮಾಡುವುದನ್ನು ನಾವೆಷ್ಟು ಬಾರಿ ಕಂಡಿಲ್ಲ?
 
ಶಾಲೆಯಲ್ಲಿರುವ ಇನ್ನಿತರ ಸ್ಥಳಗಳಂತೆಯೇ, ಇಲ್ಲಿಯೂ ನಿರ್ದೇಶನವನ್ನು ಮಾತ್ರ ಪಾಲಿಸುವಂತೆ ನಿರೀಕ್ಷಿಸಲಾಗುತ್ತದೆಯಲ್ಲದೇ ಬೇರೆ ನಡೆಗಳನ್ನು ತೆಗೆದುಕೊಳ್ಳಲು ಅಲ್ಲ.  ಏಕೆಂದರೆ ಮಕ್ಕಳು ಗೊಂದಲವನ್ನು ಮಾತ್ರ ಸೃಷ್ಟಿಸಬಲ್ಲರು ಎನ್ನುವ ಒಂದು ತಪ್ಪುಕಲ್ಪನೆ ಇದರ ಹಿಂದಿರುತ್ತದೆ.  ವೇದಿಕೆಯ ಮೇಲೆ ಪ್ರದರ್ಶನ ನೀಡುವುದು ಸಮಯಾಂತರದಲ್ಲಿ ಮಕ್ಕಳಲ್ಲಿರುವ ನಾಚಿಕೆ, ಹಿಂಜರಿಕೆ ಮತ್ತು ಸಂಕೋಚವನ್ನು ನಿವಾರಿಸುತ್ತದೆ.  ಹೀಗಿದ್ದಾಗ್ಯೂ ದುರದೃಷ್ಟಕರವಾಗಿ, ಅತ್ಯುತ್ತಮ ಎಂದು ಪರಿಗಣಿಸಿರುವವರಿಗೆ ಮಾತ್ರ ಅವಕಾಶ ಸಿಗುತ್ತದೆ ಉಳಿದವರನ್ನು ಪ್ರದರ್ಶನ ಹಾಳುಗೆಡುವವರು ಎಂದು ಗುಂಪುಮಾಡಿ ಅವರನ್ನು ಇದರಿಂದ ದೂರ ಇಡಲಾಗುತ್ತದೆ. ತುಲನಾತ್ಮಕವಾಗಿ ಕಡಿಮೆ ಸಾಮಥ್ರ್ಯವನ್ನು ಹೊಂದಿರುವವರಿಗೆ ಅವಕಾಶಗಳನ್ನು ಕೊಡುವುದರಿಂದ  ಆವರ ಆತ್ಮವಿಶ್ವಾಸವು ಆಶ್ಚರ್ಯವೆನಿಸುವಂತೆ ಬಹಳ ವರ್ಧಿಸುತ್ತದೆ. ಸಶಕ್ತಗೊಳಿಸುವ ಪರಿಸರವನ್ನು ಒದಗಿಸುವ ದಿಶೆಯಲ್ಲಿ ಶಾಲೆ ತೆಗೆದುಕೊಳ್ಳ ಬಹುದಾದ ಒಂದು ಅತ್ಯುತ್ತಮ ಹೆಜ್ಜೆ ಎಂದರೆ ವಿದ್ಯಾರ್ಥಿಗಳು ಹೇಗೇ ಇರಲಿ ಅವರಿಗೆ ಪ್ರದರ್ಶನ ನೀಡಲು ಅವಕಾಶವನ್ನು ನೀಡುವುದಾಗಿದೆ. ಪಾಲ್ಗೊಳ್ಳುವುದರಲ್ಲಿ ಆಸ್ಥೆ ತೋರಬೇಕೆ ವಿನಹ ಉತ್ತಮ ಪ್ರದರ್ಶನವನ್ನು ನೀಡಲೇ ಬೇಕು ಎನ್ನುವುದರ ಮೇಲೆ ಅಲ್ಲ.  ಇದರಿಂದ ಎಲ್ಲೋ ಕೆಲವರಿಗೆ ಮಾತ್ರವಲ್ಲದೇ ಪ್ರತಿಯೊಬ್ಬರಿಗೂ ಲಾಭವಾಗುತ್ತದೆ.
 
ಪ್ರಚಂಡ ಕಲಿಕೆಯಾಗುವ ಇನ್ನೊಂದು ಸ್ಥಳವೆಂದರೆ ಆಟದ ಮೈದಾನ.  ಇಲ್ಲಿ ತಲ್ಲೀನತೆ, ಅಭ್ಯಾಸ, ಪಟ್ಟುಬಿಡದ ತಾಲೀಮು ಹಾಗೂ ತಂಡದಲ್ಲಿ ಒಂದಾಗಿ ಆಡುವ ಮನೋಭಾವ ಹೊಂದುವುದನ್ನು ಮಾತ್ರವಲ್ಲದೇ ಆರೋಗ್ಯಕರ ಸ್ಪರ್ಧಾ ಮನೋಭಾವವನ್ನೂ ಕಲಿಯುವರು. ಆರೋಗ್ಯಕರ ಸ್ಪರ್ಧೆ ಎನ್ನುವ ಪದ ಇಲ್ಲಿ ವಿರೋಧಾಭಾಸವಾಗಿ ಕಂಡು ಬಂದರೂ ಇಲ್ಲಿ ಪರಿಗಣಿಸಬೇಕಾದ ಒಂದು ಅಂಶವಿದೆ.  ಕ್ರೀಡಾ ವಲಯದಲ್ಲಿ ಭಾವಾವೇಶ ಹೆಚ್ಚಾಗಿರುವುದರಿಂದ ಮಕ್ಕಳನ್ನು ಸ್ಪರ್ಧೆ ಇಂದ ದೂರ ಇಡುವುದು ಸಾಧ್ಯವಿಲ್ಲ.   ಗೆಲ್ಲಲು ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಬೇಕು ಆದರೆ ಸೋಲುವ ಸಂದರ್ಭ ಬಂದಲ್ಲಿ ಗೌರವಯುತವಾಗಿ ಸೋಲನ್ನು ಒಪ್ಪಿಕೊಳ್ಳುವ ಮನೋಭಾವವನ್ನು ಬೆಳಸಿಕೊಳ್ಳಬೇಕು ಎನ್ನುವುದನ್ನು ಮಕ್ಕಳಿಗೆ ಕಲಿಸಬಹುದು; ಅಂದರೆ ಸಮರ್ಥ ಎದುರಾಳಿಯನ್ನು ಮೆಚ್ಚಿಕೊಳ್ಳುವುದು, ಆಟವನ್ನು ಆಟವಾಡುವುದಕ್ಕಾಗಿಯೇ ಮೆಚ್ಚಿಕೊಳ್ಳುವುದು ಮತ್ತು ಸಮರ್ಥರನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ಮೆಚ್ಚಿಕೊಳ್ಳುವುದು; ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವುದು, ತಮ್ಮ ಮತ್ತು ಇತರರ ಗೆಲುವನ್ನು ಆಚರಿಸುವುದು. ಕೊನೆಯದಾಗಿ ಕ್ರೀಡಾಪಟುತ್ವದ ಹುರುಪನ್ನು ಬೆಳಸಿಕೊಳ್ಳುವುದನ್ನು ಕಲಿಸಬೇಕು. ಏಕೆಂದರೆ ಆ ಮನೋಭಾವವಿಲ್ಲದ ಮನುಷ್ಯ ಜೀವನದಲ್ಲಿ ಅಪೂರ್ಣವಾಗುಳಿಯುತ್ತಾನೆ.
ನನ್ನ ಮನಸ್ಸಿನಲ್ಲಿ ಸದಾ ಹಚ್ಚ ಹಸಿರಾಗಿಯೇ ಉಳಿದಿರುವ ಒಂದು ಘಟನೆ ಬಗ್ಗೆ ನಾನು ಹೇಳಲೇ ಬೇಕು.  ಅದೊಂದು  ರಿಲೆ  ಓಟದ ಪಂದ್ಯ, ಇಲ್ಲಿ ಪ್ರತಿಯೊಬ್ಬ ಪಟುವೂ ಇನ್ನೊಬ್ಬರನ್ನು ಹಿಂದೆಹಾಕಲು ಓಡುತಿದ್ದರು.  ಪಂದ್ಯ ಅಂತಿಮ ಘಟ್ಟಕ್ಕೆಬಂದಿತ್ತು, ಇಲ್ಲಿ ಒಬ್ಬ ಹುಡುಗಿ ಇತರರಿಗಿಂತ ಬಹಳ ಮುಂದಿದ್ದಳು, ಖಂಡಿತವಾಗಿಯೂ ಅವಳೇ ಗೆಲ್ಲುವಂತಿತ್ತು.  ಪ್ರಚಂಡ ಕರತಾಡನದ ನಡುವೆ ಗೆಲುವಿನ ಗೆರೆಯನ್ನು ಮುಟ್ಟುವ ಕೆಲವು ಹೆಜ್ಜೆಗಳಿಗೆ ಮುಂಚೆ ಅವಳು ತಡೆದು ನಿಂತಿದ್ದು ಎಲ್ಲರ ಕುತೂಹಲವನ್ನು ಕೆರಳಿಸಿತ್ತು.  ಅವಳು ಉಳಿದ ಮೂರು ಜನರು ತಲುಪುವವರೆಗೂ ಕಾದಳು.  ಅವರು ಬಂದು ಸೇರಿದ ಅನಂತರ ಅವರೆಲ್ಲರೂ ಕೈ ಕೈ ಹಿಡಿದು ಮುಕ್ತಾಯದ ಗೆರೆಯವರೆಗೂ ಓಡಿದರು ಇದು ಕ್ರೀಡಾಂಗಣದಲ್ಲಿ ಎಂದೂ ಕಂಡು ಕೇಳರಿಯದ ವಿಷಯವಾಗಿತ್ತು ಆದರೆ ಆ ದಿನ ಒಬ್ಬ ಚಿಕ್ಕ ಹುಡುಗಿ ಆಟದ ನಿಯಮವನ್ನು ಅಪೂರ್ವವಾಗಿ ಬದಲಾಯಿಸಿದಳು.  ಇದು ಹಿಂದೆಂದೂ ಕಂಡಿಲ್ಲದ್ದು ಮತ್ತು ಕೇಳಿರದಂತಹದ್ದು!
 
ಶಿಕ್ಷಕ ಮತ್ತು ಪೋಷಕರ ಸಭೆಗೆ ಹಾಜರಾಗುವ ಆಲೋಚನೆಗೇ ಹಿಂಜರಿಯುವ ಮಗುವನ್ನಾಗಲೀ ಅಥವಾ ತಂದೆತಾಯಿಗಳನ್ನಾಗಲೀ ಎಂದಾದರೂ ಕಂಡಿರುವಿರಾ? ಬುದ್ದಿವಂತ ಮಕ್ಕಳ ತಂದೆತಾಯಿಗಳಿಗೆ ಅದು ಸಂತೋಷಕ್ಕೆ ಹುರುಪು ತುಂಬಿದರೆ, ಶೈಕ್ಷಣಿಕವಾಗಿ ಅಂತಹಾ ಚುರುಕಿಲ್ಲದ, ಅಥವಾ ತಮ್ಮ ಹೋಂವರ್ಕನ್ನು ಮಾಡದ, ತಮ್ಮ ವಸ್ತುಗಳನ್ನು ಕಳೆದುಕೊಂಡುಬರುವ ಮಕ್ಕಳ ಪೋಷಕರಿಗೆ ಇದು ಯಮ ಯಾತನೆ. ಇಂತಹಾ ಸಭೆಯಲ್ಲಿ ಬಂಡಿಗಟ್ಟಳೆ ದೂರುಗಳನ್ನು ನಯ ನಾಜೂಕಿಲ್ಲದೆ ಎಲ್ಲರ ಎದುರಿಗೂ ಹೇಳಲಾಗುತ್ತದೆ.  ಇಂತಹಾ ಒಂದು ಸಭೆಯಲ್ಲಿ ಪ್ರತಿಯೊಬ್ಬ ಶಿಕ್ಷಕರೂ ತನ್ನ ಬಗ್ಗೆ ದೂರು ಹೇಳಿದ್ದರಿಂದಾಗಿ ನಿಯಂತ್ರಣಕ್ಕೇ ಸಿಗದಂತೆ ಅಳುತಿದ್ದ ಮಗುವಿನ ಮುಖ ನನಗಿನ್ನೂ ನೆನಪಿದೆ.  ಆ ಮಗುವಿನ ಸ್ವ-ಪ್ರತಿಷ್ಠೆ ಮತ್ತು ಆತ್ಮವಿಶ್ವಾಸಕ್ಕೆ ಆ ದಿನ ಈ ಎಲ್ಲರಿಂದ ಸಾಕಷ್ಟು ಧಕ್ಕೆಯಾಗಿತ್ತು ಎಂದು ನನಗೆ ಅನಿಸುತ್ತದೆ.  ಶಾಲೆಯಲ್ಲಿನ ಇಂತಹಾ ಸಭೆ ಸಂಧರ್ಭಗಳನ್ನು ಮಕ್ಕಳ ಆತ್ಮಗೌರವ, ಖಾಸಗೀತನ ಮತ್ತು ವಿಭಿನ್ನತೆಯನ್ನು ಗೌರವಿಸುವಂತೆ ರೂಪಿಸಬೇಕು. ಹಿಮ್ಮಾಹಿತಿಯನ್ನು ನೀಡುವಾಗ ಸೂಕ್ಷ್ಮತೆಯನ್ನು ಹೊಂದಿರಬೇಕಾದಂತಹ ಕಾಲವಿದು.  ಶಿಕ್ಷಕ ಮತ್ತು ಪೋಷಕರ ಸಭೆ, ಎಂದೆಂದೂ ಸಶಕ್ತಗೊಳಿಸಬೇಕಾದ ಅಥವಾ ಶಕ್ತಿಹೀನಗೊಳಿಸಬಹುದಾದ ಮತ್ತೊಂದು ಸ್ಥಳವಾಗಿದ್ದು ಅದನ್ನು ಯಾವ ರೀತಿ ಬಳಸಿಕೊಳ್ಳಲಾಗುವುದು ಎಂಬುದನ್ನು ಅವಲಂಬಿಸಿರುತ್ತದೆ.  ಯಾವ ಅಂಶಗಳನ್ನು ಹೊರತರಬೇಕೋ ಅದನ್ನು ಕಡೆಗಣಿಸದೇ ಮಗುವಿನಲ್ಲಿರುವ ಅತ್ಯುತ್ತಮ ಅಂಶವನ್ನು ಹೊರತರಲು ಯಾರಾದರೂ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇ ಆದರೆ, ಜೀವಿಸಲು ಸಾಧುವೆನಿಸಿದ ಕರುಣಾಪೂರಿತ ಪ್ರಪಂಚ ನಮ್ಮದಾಗುತ್ತದೆ!  ಮಗುವಿನಲ್ಲಿರುವ ಕೊರತೆಯನ್ನು ಎತ್ತಿ ತೋರಿಸದೇ ಆ ಮಗುವಿನಲ್ಲಿರುವ ಸಾಮಥ್ರ್ಯವನ್ನು ಎತ್ತಿ ತೋರಿಸಿದರೆ ಆ ಮಗುವಿನಲ್ಲಿ ಆತ್ಮವಿಶ್ವಾಸ ಹುಟ್ಟಿಕೊಳ್ಳುತ್ತದೆ.
 
ಶ್ರೀ ಅರಬಿಂದೋರವರು ಹೇಳಿರುವಂತೆ, “ಮನಸ್ಸಿನ ಶಿಕ್ಷಣದಂತೆ ಹೃದಯದ ಶಿಕ್ಷಣದಲ್ಲೂ, ಮಗುವನ್ನು ತನ್ನ ಪರಿಪೂರ್ಣತೆಯೆಡೆಗೆ ಸಾಗುವಂತೆ ಸರಿಯಾದ ದಾರಿಗೆ ಹಚ್ಚುವ ಮತ್ತು ಅವರನ್ನು ಅದನ್ನೇ ಪಾಲಿಸಿಕೊಂಡು ಹೋಗುವಂತೆ ಪ್ರೇರೇಪಿಸುವ ಅತ್ಯುತ್ತಮ ವಿಧಾನವೆಂದರೆ ಗಮನಿಸುವುದು, ಸಲಹೆ ನೀಡುವುದು, ಸಹಾಯ ಮಾಡುವುದು ಆದರೆ ಹೀಗೆ ಮಾಡುವಾಗ ತಮ್ಮ ಹಸ್ತಕ್ಷೇಪವಾಗದಂತೆ ನೋಡಿಕೊಳ್ಳುವುದು ಒಳಿತು”. ನಿಜವಾಗಿ ಸಶಕ್ತಗೊಳಿಸುವ ಕಲಿಕಾ ಪರಿಸರವನ್ನು ರೂಪಿಸುವುದೆಂದರೆ ಶಾಲೆಯಲ್ಲಿರುವ ವಿವಿಧ ಸ್ಥಳಗಳು ಸಾಧ್ಯವಿರುವ ಎಲ್ಲಾ ವಿಧಗಳಲ್ಲಿಯೂ ಇಂತಹಾ ಪರಿಸರವನ್ನು ಒದಗಿಸಬೇಕು .
 
ಶ್ರೀಪರ್ಣಾ ತಮ್ಹಾಣೆಅವರು ಪ್ರಸ್ತುತ, ಬೆಂಗಳೂರಿನಲ್ಲಿರುವ ಅಜೀಂ ಪ್ರೇಂಜಿ ಫೌಂಡೇಶನ್‍ನಲ್ಲಿರುವ ವಿಶ್ವವಿದ್ಯಾನಿಲಯದ ಸಂಪನ್ಮೂಲ ವಿಭಾಗದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರ ಸಂಪರ್ಕಜಾಲ ತಾಣವಾದ www.teachersofindia.org ಗಾಗಿ ಡಿಜಿಟಲ್ ಮತ್ತು ನಾನ್-ಡಿಜಿಟಲ್ ಸಂಪನ್ಮೂಲಗಳನ್ನು ರೂಪಿಸುತ್ತಿದ್ದಾರೆ.  ಇವರು ಆಂಗ್ಲ ಮತ್ತು ಸಮಾಜ ಅಧ್ಯಯನ ವಿಷಯಗಳಲ್ಲಿ ಜೆ. ಕೃಷ್ಣಮೂರ್ತಿ ಫೌಂಡೇಶನ್‍ನಲ್ಲಿ 15 ವರ್ಷ ಶಿಕ್ಷಕರಾಗಿ ಸೇವೆಸಲ್ಲಿಸಿದ್ದಾರೆ.   ಪಠ್ಯಕ್ರಮ ಅಭಿವೃದ್ಧಿ ಮತ್ತು ಶಿಕ್ಷಕರ ಅಭಿವೃದ್ಧಿ ಮಾಡ್ಯೂಲ್‍ಗಳ ತಯಾರಿಕೆಯಲ್ಲೂ ಇವರನ್ನು ತೊಡಗಿಸಿಕೊಳ್ಳಲಾಗಿತ್ತು.  ಇವರು ಶಿಕ್ಷಕರ ಅಭಿವೃದ್ಧಿ ತರಬೇತಿ ಕಾರ್ಯಾಗಾರಗಳಿಗೆ ಸುಗಮಕಾರರಾಗಿ ಮತ್ತು ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರನ್ನು sriparna.tamhane@azimpremjifoundation.orgಇಲ್ಲಿ ಸಂಪರ್ಕಿಸಬಹುದು.
 
 
18921 ನೊಂದಾಯಿತ ಬಳಕೆದಾರರು
7393 ಸಂಪನ್ಮೂಲಗಳು