ಜೀವ ಶಾಸ್ತ್ರದಲ್ಲಿ ಸಂಶೋಧನೆ-ಶಾಲಾ ವಿದ್ಯಾರ್ಥಿಗಳಿಗೆ ಸಲಹೆ

ಡಾ. ಸತೀಶ್ ಖುರಾನಾ, ಲ್ಯೂವೆನ್ ವಿಶ್ವವಿದ್ಯಾನಿಲಯ, ಬೆಲ್ಜಿಯಂ ನಲ್ಲಿ ಸಹ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಸಂದರ್ಶನದ ಆಯ್ದ ಭಾಗವನ್ನು ಇಲ್ಲಿ

ಲೇಖನ ರೂಪದಲ್ಲಿ ನೀಡಲಾಗಿದೆ. 

   

೧. ಪ್ರೌಢಶಾಲಾ ಶಿಕ್ಷಣ ಪೂರೈಸಿದ ನಂತರ ಯಾವುದೇ ವಿದ್ಯಾರ್ಥಿಯು ಜೀವಶಾಸ್ತ್ರದಲ್ಲಿ ಸಂಶೋಧಕನಾಗಿ  ಮುಂದುವರೆಯಲು ಯಾವ ಉನ್ನತ ಶಿಕ್ಷಣದ ಕೋರ್ಸನ್ನು ತೆಗೆದುಕೊಳ್ಳಬೇಕು?

ಜೀವಶಾಸ್ತ್ರದಲ್ಲಿ ಸಂಶೋಧಕನಾಗುವುದು ಒಂದು ದೀರ್ಘ ಪ್ರಕ್ರಿಯೆ. ಪ್ರೌಢಶಾಲಾ ಶಿಕ್ಷಣ ಪೂರೈಸಿದ ನಂತರ ಬ್ಯಾಚುಲರ್ ಡಿಗ್ರಿಯನ್ನು ಪಡೆದು ನಂತರ ಮಾಸ್ಟರ್ ಡಿಗ್ರಿಯನ್ನು ಪಡೆದು ಅನಂತರ ಯಾವುದಾದರೂ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಗಳಲ್ಲಿ ಪಿಹೆಚ್‌ಡಿ ವಿದ್ಯಾರ್ಥಿ ಸ್ಥಾನಕ್ಕೆ ಸೇರಿ ಕೊಳ್ಳಬೇಕು. ಯಾವುದೇ ಶಿಷ್ಯವೇತನ ಅಥವಾ ಸ್ಥಾನ ಸಿಗುವುದು ಕಷ್ಟ. ಜೊತೆಗೆ ನಿಮ್ಮ ನಿರ್ದಿಷ್ಟವಾದ ಆಸಕ್ತಿ ನಿಮ್ಮ ಪ್ರಯೋಗಾಲಯಗಳ ಆಯ್ಕೆಯನ್ನು ಸೀಮಿತಗೊಳಿಸುತ್ತದೆ. ಪಿಹೆಚ್‌ಡಿ ಹೊಂದಿದ ನಂತರ ನಿಮಗೆ ಪೂರ್ಣ ಪ್ರಮಾಣದ ಸಂಶೋಧನೆಗೆ ಬಾಗಿಲುಗಳು ತೆರೆದುಕೊಳ್ಳುತ್ತವೆ ಮಾಸ್ಟರ‍್ಸ್ ಡಿಗ್ರಿ ಆದ ನಂತರ ಸಾಕಷ್ಟು ಕೈಗಾರಿಕಾ ಸಂಶೋಧನೆಯಲ್ಲಿ ಹಲವಾರು ಅವಕಾಶಗಳು ಸಿಗುತ್ತವೆ. ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಂಶೋಧನೆ ಮುಂದುವರೆಸಬೇಕಾದರೆ ನೀವು ನಿಮ್ಮ ಕ್ಷೇತ್ರದಲ್ಲಿ ನಿಪುಣ ಅಥವಾ ತಜ್ಞ ಎಂದು ನಿರೂಪಿಸಲು ಪಿಹೆಚ್‌ಡಿ ಅತ್ಯವಶ್ಯಕ . ಪಿಹೆಚ್‌ಡಿ ಪದವಿ ಕೆಲವನ್ನು ಸುಲಭವನ್ನಾಗಿಸುತ್ತದೆ ಆದರೆ ಅದೂ ಮಾರ್ಗವನ್ನು ಸುಲಲಿತವಾಗಿಸಲಾರದು. ಶೈಕ್ಷಣಿಕ ಸಂಸ್ಥೆಗಳಲ್ಲಿ ಸ್ಥಾನಗಳು ಸೀಮಿತವಾಗಿರುವುದರಿಂದ ನೀವು ಒಬ್ಬ ಸ್ವತಂತ್ರ ಸಂಶೋಧಕನೆಂದು ಸದಾ ರುಜುವಾತು ಪಡಿಸುತ್ತಲೇ ಇರಬೇಕಾಗುತ್ತದೆ. 
 
೨. ಪದವಿ ವ್ಯಾಸಂಗದಲ್ಲಿ ಜೀವಶಾಸ್ತ್ರ ಕಲಿತ ಹಿನ್ನೆಲೆ ಇರದ ಯಾರಾದರೂ ಭೂಣಶಾಸ್ತ್ರ ಅಥವಾ ಆಕರ ಕೋಶ ಸಂಶೋಧನೆಯಲ್ಲಿ ಉನ್ನತ ವ್ಯಾಸಂಗ ಮಾಡಲು ಸಾಧ್ಯವೇ?
ಮಾಡಬಹುದು. ಆದರೆ ಸ್ವಲ್ಪ ಕಾಲ ನೀವು ವಿಜ್ಞಾನದ ಮೂಲಭೂತ ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಜೀವಶಾಸ್ತ್ರದ ಹಿನ್ನೆಲೆ ಇಲ್ಲದಿದ್ದರೆ ನಿಮಗೆ ಯಾವುದೇ ಸಂಸ್ಥೆ ಸಂಶೋಧನೆಯನ್ನು ಕೈಗೊಳ್ಳಲು ಅವಕಾಶ ಕೊಡುವುದಿಲ್ಲ. ಕೆಲವು ಸಂಸ್ಥೆಗಳು ಜೀವಶಾಸ್ತ್ರಕ್ಕೆ ಸಂಬಂಧಿಸಿದ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತವೆ. ಆದರೆ ಜೀವಶಾಸ್ತ್ರ ಹಿನ್ನೆಲೆ ಇಲ್ಲದವರಿಗೆ ಈ ಪರೀಕ್ಷೆಗಳು ಬಹಳ ಕಷ್ಟವೆನಿಸಬಹುದು. ಇದು ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಆದರೆ ನನ್ನ ಪ್ರಕಾರ, ಅವನಿಗೆ ಅಥವಾ ಅವಳಿಗೆ ಈ ಕೋರ್ಸನ್ನು ತಾನು ಏಕೆ ಆಯ್ಕೆ ಮಾಡಿದ್ದೇನೆ ಎನ್ನುವುದು ಬಹಳ ಮುಖ್ಯ. ಜೈವಿಕ ವ್ಯವಸ್ಥೆಗಳೂ ಸಹ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ತತ್ವಗಳ ಮೇಲೆ ಆಧರಿಸಿವೆ. ಆದ್ದರಿಂದ ಭ್ರೂಣ ಆಕರ ಕೋಶಗಳನ್ನು ಇನ್ನೊಂದು ನಿಟ್ಟಿನಿಂದ ಅರ್ಥ ಮಾಡಿಕೊಳ್ಳಬಹುದು. ಉದಾಹರಣೆಗೆ, ಇತ್ತೀಚಿನ ಯೋಜನೆಯೊಂದರಲ್ಲಿ ನಾವು ಸೂಕ್ಷ್ಮ ಪರಿಸರದಲ್ಲಿ ಯಾಂತ್ರಿಕ ಗುಣಧರ್ಮಗಳು ಆಕರ ಕೋಶಗಳ ಕಾರ್ಯ ವೈಖರಿಯನ್ನು ಹೇಗೆ ಬದಲಾಯಿಸುತ್ತವೆ ಎಂಬುದನ್ನು ತಿಳಿಯುವ ಪ್ರಯತ್ನದಲ್ಲಿದ್ದೇವೆ. ಈ ಯೋಜನೆಯಲ್ಲಿ ನಾವು ಇತರ ಪ್ರಯೋಗಾಲಯಗಳ ಸಹಯೋಗದೊಂದಿಗೆ ಹೆಚ್ಚು ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದೇವೆ. ಹಾಗೆಯೇ, ಜೀವಶಾಸ್ತ್ರದ ಗುಂಪಿನಲ್ಲಿ ಜೀವಶಾಸ್ತ್ರಜ್ಞರು ಮತ್ತು ಜೈವಿಕ ಎಂಜಿನಿಯರ್‌ಗಳು ಇದ್ದರೂ, ಗಣಿತಜ್ಞರು ಮತ್ತು ಕಂಪ್ಯೂಟರ್ ತಜ್ಞರ ಸಹಕಾರವೂ ಬೇಕಾಗುತ್ತದೆ.  
 
೩. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮೂಲಭೂತವಾಗಿ ೧) ಆಕರ ಕೋಶ ಸಂಶೋಧನೆ ಮತ್ತು ೨) ಭ್ರೂಣಶಾಸ್ತ್ರ ಕ್ಕೆ ಸಂಬಂಧಿಸಿದಂತೆ ಉತ್ತಮ, ಜನಪ್ರಿಯ ಪುಸ್ತಕಗಳೇನಾದರೂ ಇದ್ದರೆ ತಿಳಿಸುವಿರಾ?
 
ಈ ಎರಡೂ ವಿಷಯಗಳ ಬಗ್ಗೆ ಒಳ್ಳೆಯ ಪುಸ್ತಕಗಳಿವೆ. ಆಕರ ಕೋಶಗಳಿಗೆ ಸಂಬಂಧಿಸಿದಂತೆ ಹಾರ್ವರ್ಡ್ ಸ್ಟೆಮ್ ಸೆಲ್ ಇನ್ಸಟಿಟ್ಯೂಟ್ ಆನ್‌ಲೈನ್ ಸ್ಟೆಮ್ ಪುಸ್ತಕ (http://www.stembook.org ಬಿಡುಗಡೆ ಮಾಡಿದೆ. ಇದೊಂದು ಒಳ್ಳೆಯ ಪುಸ್ತಕ. ಲ್ಯಾಂಗ್‌ಮನ್‌ನ ಭ್ರೂಣಶಾಸ್ತ್ರ ಪುಸ್ತಕ ಬೆಳವಣಿಗೆ ಶಾಸ್ತ್ರದ ಮೂಲಭೂತ ಅಂಶಗಳನ್ನು ಹೊಂದಿದೆ. ದುರದೃಷ್ಟವಶಾತ್ ಭ್ರೂಣಶಾಸ್ತ್ರ ಮತ್ತು ಬೆಳವಣಿಗೆ ಶಾಸ್ತ್ರದ ಪುಸ್ತಕಗಳು ಒಂದು ಹಂತದಲ್ಲಿದ್ದು ಇದನ್ನು ಅರ್ಥ ಮಾಡಿಕೊಳ್ಳಲು ಜೀವಶಾಸ್ತ್ರದ ಹಿನ್ನೆಲೆ ಅಗತ್ಯವಾಗಿ ಬೇಕಾಗಿದೆ. 
 
೪. ಭಾರತದಲ್ಲಿ ಶಾಲಾ ವಿದ್ಯಾರ್ಥಿಗಳು ಭೇಟಿಕೊಡಬಹುದಾದ (ಶಾಲಾ ಮಕ್ಕಳ ಭೇಟಿಯನ್ನು ಸ್ವಾಗತಿಸುವ) ಸಂಶೋಧನಾ ಸಂಸ್ಥೆಗಳಿವೆಯೇ?
ನನಗೆ ತಿಳಿದ ಮಟ್ಟಿಗೆ ಸಾಕಷ್ಟು ಸಂಶೋಧನಾ ಸಂಸ್ಥೆಗಳು ಶಾಲಾ ಮಕ್ಕಳನ್ನು ಖಂಡಿತ ಸ್ವಾಗತಿಸುತ್ತವೆ. ಇದರಿಂದ ಸಂಶೋಧನಾ ಪ್ರಯೋಗಾಲಯಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವ ಬಗ್ಗೆ ಶಾಲಾ ಮಕ್ಕಳಿಗೆ ಮೊದಲ ಅನುಭವ ಆಗುವದು ನಿಜಕ್ಕೂ ಸಂತೋಷದಾಯಕ ವಿಷಯ. ಇಂತಹ ಕೆಲವು ಸ್ಥಳಗಳಲ್ಲಿ ನಾನು ನನ್ನ ಸಾಕು ತಾಯಿ ಎಂದುಕೊಂಡಿರುವ ರಾಷ್ಟ್ರೀಯ ರೋಗರಕ್ಷಾಶಾಸ್ತ್ರ ಇನ್ಸ್‌ಟಿಟ್ಯೂಟ್, ನವದೆಹಲಿ ಖಂಡಿತ ಒಂದು. ಐಐಟಿ ಮತ್ತು ಐಐಎಸ್‌ಇಆರ್ ಗಳು ಖಂಡಿತ ಉತ್ತಮ ಸಂಸ್ಥೆಗಳು. 
ಶಾಲೆಗಳು ಪ್ರಯೋಗಾಲಯಗಳಿಗೆ ಭೇಟಿಕೊಡುವಂತೆ, ವಿಜ್ಞಾನಿಗಳೂ ಸಹ ಶಾಲೆಗಳಿಗೆ ಭೇಟಿ ಕೊಡಬೇಕು. ಆರ್ಥಿಕವಾಗಿಯೂ ಇದು ಒಳ್ಳೆಯದು. ಹೆಚ್ಚು ಶಾಲೆಗಳು ದೊಡ್ಡ ನಗರಗಳಲ್ಲಿರುವ ಸಂಶೋಧನಾ ಸಂಸ್ಥೆಗಳಿಗೆ ಭೇಟಿಕೊಡುವುದು ಕಷ್ಟವಾಗುತ್ತದೆ. ನಮ್ಮ ದೇಶದಲ್ಲಿರುವ ಪ್ರತಿಯೊಬ್ಬ ವಿಜ್ಞಾನಿಯೂ ವರ್ಷಕ್ಕೆ ಒಂದು ದಿನ ಶಾಲೆಗೆ ಭೇಟಿಕೊಟ್ಟರೆ ಅದೊಂದು ಉತ್ತಮ ಆರಂಭವಾಗುತ್ತದೆ.
 
18450 ನೊಂದಾಯಿತ ಬಳಕೆದಾರರು
7211 ಸಂಪನ್ಮೂಲಗಳು