ಕತೆಗಳು ಏಕೆ ಕಾಡುತ್ತವೆ? -ಮಾರುತಿ. ಡಿ

ಸಾಹಿತ್ಯದ ವಿದ್ಯಾರ್ಥಿಯಾದ ನನಗೆ ಸದಾ ಈ ಪ್ರಶ್ನೆ ಕಾಡುತ್ತದೆ. ಬಹುಶಃ ಇದು ನನ್ನ ಒಬ್ಬನ ಸಮಸ್ಯೆಯಲ್ಲ ಎಂದು ಅನಿಸುತ್ತದೆ. ಪ್ರತಿಯೊಬ್ಬ ಮಾನವನಿಗೂ ಸಹ ಒಂದಲ್ಲ ಒಂದು ಕತೆ ಘಟನೆಯಾಗಿ, ಸಿನಿಮಾವಾಗಿ, ಜನಪದ ಮತ್ತು ಲಿಪಿ ಸಾಹಿತ್ಯವಾಗಿ ಆತನನ್ನು ಆವರಿಸಿರುವುದನ್ನು ಕಾಣಬಹುದು. ಇಂತಹ ಕತೆಗಳ ಮೂಲಕವೇ ಮಾನವನು ನಿತ್ಯ ಅನುಸಂಧಾನಕ್ಕೆ ಒಳಗಾಗಿದ್ದಾನೆ. ಕೈಗಾರಿಕಾ ಕ್ರಾಂತಿಯಿಂದ ’ಸಣ್ಣಕತೆ’ ಗಳು ಮುನ್ನೆಲೆಗೆ ಬಂದರೂ ಸಹ ಮನುಷ್ಯನ ವಿಕಾಸದಂತೆಯೇ ಕತೆಯ ವಿಕಾಸವನ್ನು ಗುರುತಿಸಬಹುದು. ಆತ ಭಾಷೆಯನ್ನು ಒಂದು ಮಾಧ್ಯಮವಾಗಿ ಕಟ್ಟಿಕೊಂಡ ನಂತರ ಆತನ ಸುಪ್ತ ಭಾವನೆಗಳು ಜಾಗೃತ ಪ್ರಜ್ಞೆಯಾಗಿ ಹೊರಬಂದಿರಬೇಕು. ಪಿನ್‌ಲ್ಯಾಂಡಿನ ಕಲೆವಾಲದಂತಹ ಜನಪದ ಮಹಾಕಾವ್ಯದಿಂದ ಹಿಡಿದು ಇಂಡಿಯಾದ ಜನಪದ ರಾಮಾಂiiಣ ಮತ್ತು ಮಹಾಭಾರತ ಆದಿಯಾಗಿ ಎಲ್ಲವೂ ಮೊದಲು ಕತೆಯಾಗಿ ಹೆಣೆದಿರಬೇಕು ಎನಿಸುತ್ತದೆ. ಏಕೆಂದರೆ ಮಾನವ ಭಾಷೆಯನ್ನು ಮೊದಲು ತನ್ನ ಭಾವನೆ ಹಂಚಿಕೊಳ್ಳಲು ಬಳಸಿ, ನಂತರ ಅದನ್ನು ಹಾಡಾಗಿ ಕಟ್ಟುವ ಕ್ರಿಯೆಗೆ ಒಳಗಾಗಿರಬೇಕು. 
ಔಪಚಾರಿಕ ಶಿಕ್ಷಣಕ್ಕೆ ಒಳಗಾಗುವ ಮೊದಲು ಜನಪದ ಕತೆಗಳೇ ಶಿಕ್ಷಣದ ಜವಾಬ್ದಾರಿಯನ್ನು ನಿರ್ವಹಿಸಿದವು ಎಂದೇ ಹೇಳಬೇಕು. ಬದುಕಿನಲ್ಲಿ ತಾನು ಕಂಡುಕೊಂಡ ಆನುಭವದ ಸತ್ಯಗಳನ್ನೇ ಭಾಷಾ ಸೌಂದರ್ಯದ ಮೂಲಕ ಹೆಣೆದು ಅದರಲ್ಲಿ ಬದುಕಿಗೆ ಬೇಕಾದ ನೈತಿಕ ಮೌಲ್ಯಗಳು, ನಡಾವಳಿಗಳು, ಆತ್ಮವಿಶ್ವಾಸ, ತಾರ್ಕಿಕಚಿಂತನೆ, ಆಲೋಚನೆ ಇತ್ಯಾದಿ ಅಂಶಗಳನ್ನು ತುಂಬಿ ಅವುಗಳನ್ನು ಮರುಸೃಷ್ಟಿಮಾಡುತ್ತ ಸಾಗಿ ಬಂದಿರುವುದನ್ನು ಕಾಣಬಹುದು. ಅಗೋಚರ, ಅತಿಮಾನುಷ ಶಕ್ತಿಗಳನ್ನು ಕತೆಗಳಲ್ಲಿ ತರುವುದರ ಮೂಲಕ ಮಾನವನನ್ನು ನಿಯಂತ್ರಿಸುವ ಕಲೆಗಾರಿಕೆಯು ಅದರೊಳಗಿದೆ. ಇದಕ್ಕೆ ಲಿಪಿ ಸಾಹಿತ್ಯವು ಹೊರತಾದುದಲ್ಲ. ಇದಕ್ಕೆ ಉದಾಹರಣೆಯಾಗಿ ಪಂಚತಂತ್ರ ಕೃತಿಯನ್ನು ಗಮನಿಸಬಹುದು. ಜನಪದ ಕತೆಗಳು ಕೇವಲ ಮನರಂಜನೆಯನ್ನು ಕೊಡುವುದು ಮಾತ್ರವಲ್ಲ, ಅವುಗಳು ಆ ಪ್ರದೇಶದ ಸಂಸ್ಕೃತಿ, ಆ ಜನರ ಚರಿತ್ರೆಗಳನ್ನು, ಅವರ ಬದುಕಿನ ವಿನ್ಯಾಸವನ್ನು ಕುರಿತು ಮಾತನಾಡುತ್ತವೆ. ಆ ಕತೆಗಳು ಹಾಡಾಗಿ, ಲಾವಣಿಯಾಗಿ, ಐತಿಹ್ಯವಾಗಿ ಮತ್ತು ಮಹಾಕಾವ್ಯವಾಗಿ ರೂಪುಗೊಂಡು ಬದುಕಿನ ವಿವಿಧ ಆಯಾಮಗಳನ್ನು ಪರಿಚಯಿಸುತ್ತವೆ. 
ಎಂದೊ ಸೃಷ್ಟಿಯಾದ ಕತೆಗಳು ಇವತ್ತಿನ ನಮ್ಮ ಜಾಗತೀಕರಣದ ಬದುಕಿಗೆ ಆವಶ್ಯಕವೇ? ಎಂದು ಯೋಚಿಸಿದರೆ ಆ ಕತೆಗಳಲ್ಲಿ ಬರುವ ಪಾತ್ರಗಳ ವ್ಯಕ್ತಿತ್ವಗಳು ಇಂದು ಸಹ ನಮ್ಮ ಕಣ್ಣಮುಂದೆ ಇರುವುದನ್ನು ಗಮನಿಸಬಹುದು. ಆ ಪಾತ್ರಗಳು ನಮಗೆ ಗೆಳೆಯನಾಗಿ, ಗೆಳತಿಯಾಗಿ, ಅಣ್ಣನಾಗಿ, ತಮ್ಮನಾಗಿ, ತಂದೆಯಾಗಿ, ತಾಯಿಯಾಗಿ, ಪ್ರಿಯಕರನಾಗಿ, ಪ್ರೇಯಸಿಯಾಗಿ, ಗಂಡನಾಗಿ, ಹೆಂಡತಿಯಾಗಿ, ಶತ್ರುವಾಗಿ ಕೊನೆಗೆ ಗುರುವಾಗಿಯಾದರೂ ನಮ್ಮ ನಡುವೆ ಅನುಸಂಧಾನ ಮಾಡುತ್ತಲೇ ಇರುತ್ತವೆ. ಜೊತೆಗೆ ಸಮಾಜದಲ್ಲಿ ನಡೆಯುವ ಅತ್ಯಾಚಾರ, ಅನಾಚಾರ, ಕೊಲೆ ಸುಲಿಗೆ ಇತ್ಯಾದಿ ಅನಪೇಕ್ಷಿತ ಕೃತ್ಯಗಳನ್ನು ಖಂಡಿಸುತ್ತ, ವಿಡಂಬಿಸುತ್ತ ವ್ಯಂಗ್ಯವಾಡುತ್ತಿರುವುದನ್ನು ಕತೆಗಳಲ್ಲಿ ಗಮನಿಸಬಹುದು. 
ಲಿಪಿ ಸಾಹಿತ್ಯದ ಕತೆಗಳಲ್ಲಿ ಮಾಸ್ತಿಯವರ ’ಜಡೇ ನಂಜುಂಡೇಶ್ವರ ಕತೆ’ಯಲ್ಲಿ ಧಾರ್ಮಿಕ ವಿಡಂಬನೆಯನ್ನು ಸರಳವಾಗಿ ಚಿತ್ರಿಸಿದರೂ ಪರಿಣಾಮಕಾರಿಯಾಗಿದೆ. ಪವಾಡದ ಹಿನ್ನೆಲೆಯಲ್ಲಿ ದೀಕ್ಷಿತರು ಪ್ರಭುಗಳಿಗೆ ಹೇಳಿದ ಸುಳ್ಳನ್ನು ಉಳಿಸಿಕೊಳ್ಳಲು ಮನೆಯವರೆಲ್ಲರೂ ಒಂದಾಗುತ್ತಾರೆ. 
ನಂಜುಂಡೇಶ್ವರನಿಗೆ ಅಲಂಕಾರ ಮಾಡಿ ದೀಕ್ಷಿತರು ಪ್ರಭುಗಳಿಗೊಬ್ಬರಿಗೆ ಮೋಸ ಮಾಡುವುದಲ್ಲ, ಇಡೀ ಸಮಾಜಕ್ಕೆ ದ್ರೋಹ ಬಗೆಯುತ್ತಾರೆ. ಇದು ಸಾರ್ವಕಾಲಿಕವಾಗಿಯೂ ನಡೆಯುವ ವಾಸ್ತವದ ಅರಿವನ್ನು ಮೂಡಿಸುತ್ತದೆ. ತೇಜಸ್ವಿ ಅವರ ’ಅಬಚೂರಿನ ಪೋಸ್ಟಾಪೀಸ್’ನ ಅತ್ಯುತ್ತಮ ಕತೆ ’ತಬರನ ಕತೆ’. ಇದರ ನಾಯಕ ಪಡುಗರೆಯ ತಬರಶೆಟ್ಟಿ ಬ್ರಿಟಿಷರ ಕಾಲದಲ್ಲಿ ನೌಕರಿಗೆ ಸೇರಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಿವೃತ್ತನಾಗುತ್ತಾನೆ. ನಾಲ್ಕನೆಯ ದರ್ಜೆ ನೌಕರನಾಗಿ ವಿವಿಧ ಇಲಾಖೆಗಳಲ್ಲಿ ಸೇವೆ ಮಾಡಿದ ಈತನಿಗೆ ಪೆನ್ಷನ್ ಹಣ ದೊರಕಿರುವುದಿಲ್ಲ. ತನ್ನ ಹೆಂಡತಿಗೆ ಗ್ಯಾಂಗ್ರಿನ್ ಶುಶ್ರೂಷೆ ಮಾಡಿಸಲಾಗದೆ ಮತಿಭ್ರಷ್ಟನಾದ ತಬರನ ನೋವಿನ ಕತೆ ಇಲ್ಲಿ ಅನಾವರಣಗೊಂಡಿದೆ. ಅವನನ್ನು ಕಂಡಾಗ ಮಾನವನನ್ನು ಮಾನವೀಯತೆಯನ್ನು ಕರಕರ ಜಗಿದು ಅಗಿದು ಉಗಿಯುತ್ತಾ, ಇರುವ ಒಂದು ಸೈತಾನನ ವ್ಯೂಹ ಕಂಡಿತು ಎನ್ನುವಲ್ಲಿ ಅಧಿಕಾರಶಾಹಿಯ ಚಕ್ರವ್ಯೂಹದ ಭೀಕರ ಚಿತ್ರವನ್ನು ಈ ಕತೆಯಲ್ಲಿ ಕಾಣುತ್ತೇವೆ. ತಬರ ತನ್ನ ಹೆಂಡತಿಯನ್ನು ಉಳಿಸಿಕೊಳ್ಳದೆ ಹುಚ್ಚನಾಗಿ ಬ್ರಿಟಿಷರ ಆಳ್ವಿಕೆಯನ್ನು ಹೊಗಳುತ್ತಿರುತ್ತಾನೆ. ತೇಜಸ್ವಿ ಗ್ಯಾಂಗ್ರಿನ್ ಅನ್ನು ಕತೆಯಲ್ಲಿ ಪ್ರತಿಮೆಯಾಗಿ ಬಳಸಿಕೊಂಡಿದ್ದಾರೆ. ಈ ವ್ಯವಸ್ಥೆ ಗ್ಯಾಂಗ್ರಿನ್‌ನಂತೆ ಕತ್ತರಿಸಿ ಹಾಕಲಾರದಂಥ ಕ್ರೂರ ಖಾಯಿಲೆಯಾಗಿದೆ. ಅಲ್ಲದೆ ವಿಡಂಬನಾತ್ಮಕವಾಗಿ ಅಧಿಕಾರಶಾಹಿಯ ದರ್ಪದ ಕ್ರೂರತೆಯನ್ನು, ತಬರನ ತಡಕಾಟದ ಮೂಲಕ ವ್ಯವಸ್ಥೆಯ ಕ್ರೌರ್ಯವನ್ನು ವ್ಯಕ್ತಿತ್ವದ ವಿನಾಶವನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ. 
ನಿರಂಜನ ಅವರ ’ಕೊನೆಯ ಗಿರಾಕಿ’ ಕತೆಯ ನಾಯಕಿ ’ಕಾಣಿ’. ಈಕೆ ಮೂಕಿ. ಅವಳ ಹಸಿವಿನ ದೌರ್ಬಲ್ಯವನ್ನು ಬಳಸಿಕೊಂಡ ಸಮಾಜ ವೇಶ್ಯೆಯಾಗಿ ಹೀನಾಯವಾಗಿ ನಡೆಸಿಕೊಂಡಿದ್ದನ್ನು ಚಿತ್ರಿಸಿದ್ದಾರೆ. ಕೊನೆಗೆ ಹೆಣವಾಗಿ ಬಿದ್ದಿರುವ ಕಾಣಿಯ ದೇಹದ ಮೇಲೆ ಗಿಡುಗವೊಂದು ಹೊಂಚುಹಾಕುವುದು ಮಾನವೀಯತೆ ಇಲ್ಲದ ಸಮಾಜದ ಪ್ರತಿಮೆಯಾಗಿ ಚಿತ್ರಿಸಿದ್ದಾರೆ. ಹೀಗೆ ದೇವನೂರು ಅವರ ’ಅಮಾಸ’ ಕತೆಯಲ್ಲಿನ ಕುರಿಯಯ್ಯ, ಅಮಾಸ, ಕುಂ.ವೀರಭದ್ರಪ್ಪ ಅವರ ಠೊಣ್ಣಿ, ನೆಟ್ಕಲ್ಲು, ಬಂಡೆವಜ್ಜಿ ಪಾತ್ರಗಳು ಈಗಲೂ ಕಾಡುತ್ತವೆ!, ಮುಂದೆಯೂ ಕಾಡುತ್ತವೆ! 
 
 
18468 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು