ಒಡನಾಡಿ

ಮಕ್ಕಳ ಜೀವನದಲ್ಲಿ ಸಾಹಿತ್ಯವು ಅಮೋಘ ಪಾತ್ರವನ್ನು ವಹಿಸುತ್ತದೆ.  ಸಾಹಿತ್ಯವನ್ನು ಓದುವುದರಲ್ಲಿ ಮಕ್ಕಳು ತಲ್ಲೀನರಾದಾಗ, ಅವರ ಕಲ್ಪನೆ ಗರಿಗೆದರುತ್ತದೆ, ನಿರೂಪಣೆಗಳ ಬೆನ್ನೇರಿ  ಅನ್ವೇಷಿಸಲು ಹೊರಡುತ್ತಾರೆ, ಪಾತ್ರಗಳೊಂದಿಗೆ ತಾದಾತ್ಮ್ಯ ಹೊಂದುತ್ತಾರೆ ,ನಿಜ ಜೀವನದ ಸಂದರ್ಭಗಳಲ್ಲಿ ಸಹಾನುಭೂತಿಯನ್ನು ಬೆಳೆಸಿಕೊಳ್ಳುತ್ತಾರೆ ಹಾಗು ನೀತಿ-ಅನೀತಿಗಳ ವಿವೇಚನೆಯನ್ನು  ಕಲಿಯುತ್ತಾರೆ. ಎಳೆಯ ವಯಸ್ಸಿನಿಂದಲೇ ಒಳ್ಳೆಯ ಸಾಹಿತ್ಯದ ಸಂಸರ್ಗ ಪಡೆದ ಮಕ್ಕಳು ಜೀವಮಾನವಿಡೀ ಓದುವ ಮತ್ತು ಬರೆಯುವ ಹವ್ಯಾಸ ಮೈಗೂಡಿಸಿಕೊಳ್ಳುತ್ತಾರೆ. ಶಿಕ್ಷಕರು ಪಠ್ಯಕ್ರಮದ ಒಂದು ಸಹಜ ಭಾಗವಾಗಿ ಸಾಹಿತ್ಯವನ್ನು ಬಳಸಿದಾಗ, ಅವರು ಸಾಮಾಜಿಕ ಮತ್ತು ವೈಯಕ್ತಿಕ ಪ್ರಾಮುಖ್ಯತೆ ಯ ಸಂಕೀರ್ಣ ಸಮಸ್ಯೆಗಳನ್ನು ಕುರಿತು ಓದುವ ,ಬರೆಯುವ, ಚರ್ಚಿಸುವ, ಪ್ರತಿಕ್ರಿಯಿಸುವ ಕೌಶಲಗಳನ್ನು  ಮಕ್ಕಳಲ್ಲಿ ಮೈಗೂಡಿಸುತ್ತಾರೆ. ಮಕ್ಕಳ ೋದುವ ಪ್ರವೃತ್ತಿಯನ್ನು ಪ್ರಚೋದಿಸಲು  ಈ ಸುಂದರ ಕಥೆಯನ್ನು ಇಲ್ಲಿ ಕೊಡಲಾಗಿದೆ.ನಾಯಿಗಿಂತ ಮಾನವನ ಆತ್ಮೀಯ  ಒಡನಾಡಿ ಬೇರೊಂದು ಪ್ರಾಣಿಯಿಲ್ಲ.

ಒಡನಾಡಿ

ಉಣ್ಣುವ ಅನ್ನ, ಉಡುವ ಬಟ್ಟೆ, ವಿದ್ಯೆಗಾಗಿ ಹಾಗೂ ಮನರಂಜನೆಗಾಗಿ ಖರ್ಚು ಮಾಡುವ ಹಣದಲ್ಲಿ ಒಬ್ಬ ಪುಣ್ಯಾತ್ಮನ ಸಣ್ಣ ಪಾಲಿದೆ ಆದರೆ ಅವನು ಎಂದೂ ಕೇಳುವದಿಲ್ಲ,ಸಹಾಯ ಮಾಡಿದರೂ ಮಾಡದಂತೆ ಇರುತ್ತಾನೆ, ನಾವು ದೂರ ತಳ್ಳಿದರೂ ಮಗುವಿನಂತೆ ಮರಳಿ ಅಪ್ಪಿಕೊಳ್ಳುತ್ತಾನೆ, ನಿಮ್ಮ ಸೇವೆಗೆ ಸದಾ ಸಿದ್ದನೆಂದು ತನ್ನ ಭಾವನೆಗಳ ಮೂಲಕ ವಚನ ನೀಡುತ್ತಾನೆ. ಅವನ ಬಗ್ಗೆ ಹೇಳಲು ಹೋರಟರೆ ಅದು ಪೂರ್ಣಗೊಳ್ಳುವದಿಲ್ಲ,ಪೂರ್ಣಗೊಂಡರೂ ಮನಸ್ಸು ಒಪ್ಪುವದಿಲ್ಲ. ಹಗಲು-ರಾತ್ರಿ ಎನ್ನದೆ ನಮ್ಮನ್ನು ಹಾಗೂ ನಮ್ಮ ಆಸ್ತಿಯನ್ನು ಕಾಪಾಡಿದ್ದಾನೆ ಅದನ್ನು ಶ್ರದ್ದೆಯಿಂದ, ಪ್ರಾಮಾಣಿಕವಾಗಿ ನಿರ್ವಹಿಸಿದ್ದಾನೆ ಹಾಗೆ ಪ್ರೀತಿ, ವಿಶ್ವಾಸದಲ್ಲಿ ಸ್ವಲ್ಪವೂ ಕಡಿಮೆಯಾಗದಂತೆ ಎಚ್ಚರವಹಿಸಿದ್ದಾನೆ. ನನಗೆ ಎಷ್ಟೋ ಸಾರಿ ಅನಿಸಿರುವುದು ಇಂತಹ ವ್ಯಕ್ತಿಗಳಿಂದ ನಾನು ಸಾಕಷ್ಟು ಕಲಿಯುವುದು ಇದೆ ಎಂದು. ಇವತ್ತು ಅವನ ಅಗಲಿರುವಿಕೆ ನಮ್ಮನ್ನು ಸದಾ ಕಾಡುತ್ತಿರುತ್ತದೆ ಅವನ ಬಗ್ಗೆ ಬೇರೆಯವರ ಮುಂದೆ ಮಾತನಾಡದಿದ್ದರೆ ಏನೋ ಒಂದು ತರಹದ ಪಾಪ ಪ್ರಜ್ಞೆ ನನ್ನನ್ನು ಕಾಡಿದಂತೆ ಭಾಸವಾಗುತ್ತದೆ.
2010, ನನ್ನ ತಮ್ಮನಿಗೆ ಡೆಂಗ್ಯೂ ಜ್ವರ ಬಂದು ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿದ್ದ. ಅವನನ್ನು ನೋಡಿಕೊಳ್ಳಲು ನಾನು ಹೋಗಿದ್ದೆ.ಊರಲ್ಲಿ ಕುರಿಗಳನ್ನು ನೋಡಿಕೋಳ್ಳಲು ತಂದೆಯೊಬ್ಬರಿಂದ ಸಾಧ್ಯವಿರಲ್ಲಿಲ್ಲ ಹಿಗಾಗಿ ಬೇರೆಯವರಿಗೆ ಕುರಿಗಳನ್ನು ಪಾಲಿಗೆ (ಹುಟ್ಟುವ ಮರಿಗಳನ್ನು ಹಂಚಿಕೊಳ್ಳುವುದು) ಕೊಡಲಾಯಿತು. ಆ ಕುರಿಗಾರ ತಮ್ಮ ಊರಿನ ಕಡೆಗೆ ಕುರಿಗಳೊಂದಿಗೆ ಪ್ರಯಾಣ ಬೇಳೆಸಿದ ನಮ್ಮ ತಂದೆ ಭಾರವಾದ ಮನಸ್ಸಿನಿಂದ ಮನೆ ಕಡೆಗೆ ಹೆಜ್ಜೆ ಹಾಕಿದ. ಆದರೆ ನಿಜವಾದ ಅರ್ಥದಲ್ಲಿ ನೋವು ಸಂಕಟ ಅನುಭವಿಸಿದ್ದು ನಮ್ಮ ಬಾಳ್ಯಾ. ಅವನು ಆ ಕುರಿಗಾರರೊಂದಿಗೆ ಹೋಗಲಿಲ್ಲ ಬದಲಿಗೆ ಮೊದಲಿದ್ದ ಜಾಗವನ್ನು ಬಿಟ್ಟು ಕದಲಿಲ್ಲ. ಹಗಲು ರಾತ್ರಿ ಒಬ್ಬನೆ ಅರಚಾಡುತ್ತಿದ್ದ್ತ ದಿನಾಲು ನಮ್ಮ ತಂದೆ ಅದಕ್ಕೆ ಊಟ ಹಾಕಿ ಬರುತ್ತಿದ್ದರೂ ಅದರ ತೊಳಲಾಟ ಹಾಗೂ ಆತಂಕ ಕಡಿಮೆ ಆಗಿರಲ್ಲಿಲ್ಲ, ಇತ್ತ ಬೆಳಗಾವಿಯಿಂದ ಮನೆಗೆ ಬರುವಾಗ ದಾರಿಯಲ್ಲಿ ಸಿಕ್ಕ ನಮ್ಮ ಚಿಕ್ಕಪ್ಪ ನಡೆದ ಘಟನೆಯನ್ನು ವಿವರಿಸಿದ ಹಾಗೆ ದಾರಿಯಲ್ಲಿ ಸಿಕ್ಕ ಜನರು ಕೂಡ ಬಾಳ್ಯಾನ ತೊಳಲಾಟವನ್ನು ವಿವರಿಸಿದರು, ಆಗ ಸಮಯ 5 ಘಂಟೆ ನಾನು ಬಾಳ್ಯಾನನ್ನು ಮನೆಗೆ ಕರೆದುಕೊಂಡು ಬರುತ್ತೇನೆಂದು ತಂದೆಗೆ ಹೇಳಿದೆ. ಅವರು ಒಪ್ಪಲಿಲ್ಲ ಕಾರಣ ಅದು ಕುರಿ ಕಾಯುವ ನಾಯಿ ಊರಿಗೆ ಬರುವುದಿಲ್ಲ, ಬಂದರು ಇಲ್ಲಿ ಇರಲು ಸಾಧ್ಯವಿಲ್ಲ ನೀನು ಕರೆ ತರಲು ಹೋಗಬೇಡವೆಂದರು ಆದರೂ ನನ್ನ ಮನಸ್ಸು ತಡೆಯಲಿಲ್ಲ ಬಾಳ್ಯಾನನ್ನು ನೋಡಬೇಕೆನಿಸಿತು.ಸೂರ್ಯ ಮುಳುಗುವ ಸಮಯ. ಬಾಳ್ಯಾನನ್ನು ನೋಡಲು ಹೊಲದ ಕಡೆಗೆ ಹೆಜ್ಜೆ ಹಾಕಿದೆ. ಏನಾದರೂ ಮಾಡಿ ಬಾಳ್ಯಾನನ್ನು ಮನೆಗೆ ಕರೆತರಬೇಕು,ಅವನನ್ನು ಚೆನ್ನಾಗಿ ನೋಡಿಕೊಳ್ಳಬೇಕಿನಿಸಿತು. ಕಳ್ಳ ಕಾಕರಿಂದ ನಮ್ಮ ಜೀವವನ್ನು ಹಾಗೂ ನಮ್ಮ ಕುರಿಗಳನ್ನು ರಕ್ಷಿಸುವ ಮೂಲಕ ಇವತ್ತಿನ ಸಂತೋಷಕ್ಕೆ ಕಾರಣಿಭೂತನಾದ ಅವನನ್ನು ಪ್ರೀತಿಸಬೇಕೆನಿಸಿತು. ಹೀಗೆ ಮನಸ್ಸು 8 ವರ್ಷಗಳ ಹಿಂದೆ ಜಾರಿತು ಆ ದಿನ ನನ್ನ ತಂಗಿಯ ಸಿಮಂತನ ಕಾರ್ಯ. ಆ ಸುದ್ದಿಯನ್ನು ಮುಟ್ಟಿಸಲು 4 ಕಿಲೋಮೀಟರ ದೂರದಲ್ಲಿ ಕುರಿ ಮಂದೆಯೊಂದಿಗೆ ಇರುವ ಸಂಬಂಧಿಯ ಹತ್ತಿರ ಹೋದೆ, ಅಲ್ಲಿ ನಾಲ್ಕಾರು ನಾಯಿಮರಿಗಳು ಓಡಾಡುತ್ತಿದ್ದವು ಅದರಲ್ಲಿ ಒಂದು ಕಂದು ಬಣ್ಣದ ಮರಿ ನನ್ನ ಗಮನ ಸೆಳೆಯಿತು ನಾನು ಆ ತಾತನ ಒಪ್ಪಿಗೆ ಪಡೆದು ಆ ನಾಯಿಮರಿಯನ್ನು ನಮ್ಮ ಕುರಿಯ ಹಟ್ಟಿಯಲ್ಲಿ ತಂದು ಬಿಟ್ಟೆ. ಪ್ರತಿ ರವಿವಾರ ಬಾಳ್ಯಾನನ್ನು ನೋಡದೆ ಇರುತ್ತಿರಲಿಲ್ಲ, ಹುಲಿಯಂತೆ ಬೆಳೆದ ಬಾಳ್ಯಾನೋಡನೆ ಸಮಯ ಕಳೆಯುವುದೇ ಒಂದು ತರಹದ ಖುಷಿ. ಅವನ ಧೈರ್ಯ ಹಾಗೂ ಜಾಗೃತ ಮನಸ್ಸು ಒಬ್ಬ ಮನುಷ್ಯನನ್ನು ಮಿರಿಸುವಂತೆ ಇತ್ತು. ಅವನು ನಮ್ಮೊಡನೆ ಇರುವ ವರೆಗೂ ಕಳ್ಳ ಕಾಕರರ ಹಾಗೂ ತೋಳಗಳ ಬಯವಿರಲಿಲ್ಲ. ಅವನು ನಮಗೂ ಮತ್ತು ನಮ್ಮ ಆಸ್ತಿಗೂ ವಾರಸುದಾರನಂತೆ ಇದ್ದ.ಹೀಗೆ ಸಾಗುತ್ತಿರುವಾಗ ಅಷ್ಟರಲ್ಲಿ ನಮ್ಮ ಹೋಲ ಸಮಿಪಿಸಿತು, ನಮ್ಮ ಬಾಳ್ಯಾ ಒಬ್ಬಂಟಿಗನಾಗಿ ಅರಚಾಡುತ್ತಿದ್ದ ಆ ಸ್ಥಿತಿಯನ್ನು ದೂರದಿಂದ ಕಂಡ ನನ್ನ ಕಣ್ಣುಗಳು ತೇವವಾದವು. ಅದನ್ನು ತಾಳಿಕೊಳ್ಳದೆ ಬಾಳ್ಯಾ ಎಂದು ಜೋರಾಗಿ ಚೀರಿಕೊಂಡೆ. ನನ್ನ ಧ್ವನಿ ಕೇಳಿಸಿಕೊಂಡ ಬಾಳ್ಯಾ ಓಡೋಡಿ ಬಂದು ನನ್ನನ್ನು ತಬ್ಬಿಕೊಂಡ. ಮಗುವಿನಂತೆ ನೆಲದ ಮೇಲೆ ಬಿದ್ದು ಹೊರಳಾಡಿದ, ದೂರ ದೂರ ಓಡಿ ಹೋಗಿ ಮತ್ತೆ ನನ್ನನ್ನ ಜೋರಾಗಿ ತಬ್ಬಿಕೊಂಡ. ನಾನು ಅವನ ಮೈ ಸವರುತ್ತಾ ಎರಡು ಧಾರವಾಡ ಪೇಡಾ ತಿನ್ನಿಸಿದೆ. ನಿಧಾನವಾಗಿ ಕೊರಳಿಗೆ ಹಗ್ಗ ಕಟ್ಟಿ ಮನೆಗೆ ಕರೆದುಕೊಂಡು ಹೋಗಲು ಸಿದ್ದನಾದೆ. ಮರು ಮಾತನಾಡದೆ ಬಾಳ್ಯಾ ನನ್ನುನ್ನು ಹಿಂಬಾಲಿಸಿದ. ಊರ ಹತ್ತಿರ ಬಂದಾಗ ಮತ್ತೆರಡು ಪೇಡಾ ತಿನ್ನಿಸುತ್ತಾ ಮೈ ಸವರಿದೆ.ಮುಂದೆ ಮುಂದೆ ಸಾಗುತ್ತಾ ಊರನ್ನು ಪ್ರವೇಶಿದಾಗ ಒಮ್ಮಲೇ ಐದಾರೂ ನಾಯಿಗಳು ಬಾಳ್ಯಾನ ಮೇಲೆ ದಾಳಿ ಮಾಡಿದವು. ಹುಲಿಯಂತಿದ್ದ ನನ್ನ ಬಾಳ್ಯಾ ಕ್ಷಣಾರ್ಧದಲ್ಲಿ ಗಾಬರಿಗೊಂಡ. ರಕ್ಷಣೆಗಾಗಿ ನನ್ನ ಕಾಲಿನ ಅಡಿಯಲ್ಲಿ ತೂರಿಕೊಂಡ. ಸುತ್ತ ಮುತ್ತಲಿನ ಹತ್ತಳ್ಳಿಯ ಯಾವ ನಾಯಿ ಹಾಗೂ ವ್ಯಕ್ತಿಯು ಬಾಳ್ಯಾನ ಹತ್ತಿರ ಸುಳಿಯುತ್ತಿರಲಿಲ್ಲ, ಅಂತಹ ಬಾಳ್ಯಾ ಕ್ಷಣ ಮಾತ್ರದಲ್ಲಿ ತನ್ನ ಆತ್ಮ ಸ್ಥೈರ್ಯವನ್ನು ಕಳೆದುಕೊಂಡು ಕುಬ್ಜನಂತಾದ. ಆ ಸ್ಥಿತಿಯನ್ನು ಕಂಡು ನನಗೆ ತುಂಬಾ ನೋವಾಯಿತು. ಹರ ಸಾಹಸ ಮಾಡಿ ಹೇಗೋ ಮನೆ ತಲುಪಿದೆ. ಮನೆಯಲ್ಲಿರುವ ನನ್ನ ತಂದೆ ಹಾಗೂ ತಮ್ಮನನ್ನು ಕಂಡ ಬಾಳ್ಯಾ ಚಿಕ್ಕ ಮಗುವಿನಂತೆ ನೆಲದ ಮೇಲೆ ಹೊರಳಾಡತೊಡಗಿತು. ಎಲ್ಲರು ಮನೆಯಿಂದ ಹೊರಗೆ ಬಂದು ಬಾಳ್ಯಾನ ಗತಕಾಲದ ಜೀವನವನ್ನು ವರ್ಣಿಸತೊಡಗಿದರು. 
 
ರಾತ್ರಿ 9 ಘಂಟೆ. ನನ್ನ ತಾಯಿ ಅಕ್ಕಿ ಅನ್ನ ಹಾಗೂ ರೊಟ್ಟಿಯನ್ನು ಹಾಕಿದಳು. ಅದು ತಿನ್ನಲಿಲ್ಲ ಒಳಗಿನಿಂದ ನಮ್ಮ ತಂದೆ ಅದು ಕುರಿ ಕಾಯುವ ನಾಯಿ ಹಾಲು ಹಾಗೂ ಸಂಕಟಿ (ಜೋಳದ ಅನ್ನ) ಯನ್ನು ಮಾತ್ರ ತಿನ್ನುತ್ತದೆ ಎಂದ. ನಂತರ ನಾನು ಹಾಲು ಹಾಗೂ ಸಂಕಟಿಯನ್ನು ಹಾಕಿದಾಗ ತಿನ್ನಲು ಪ್ರಾರಂಭಿಸಿತು. ಇಡೀ ರಾತ್ರಿ ನಾಲ್ಕಾರು ಊರಿನ ನಾಯಿಗಳು ನಮ್ಮ ಮನೆ ಮುಂದೆ ಬಾಳ್ಯಾ ನನ್ನು ಕಂಡು ಬೊಗಳಲಾರಂಭಿಸಿದವು. ಇದಕ್ಕೆ ಪ್ರತಿಯುತ್ತರವೆಂಬಂತೆ ಬಾಳ್ಯಾನು ಅರಚಾಡಲು ಸುರು ಮಾಡಿದ. ಅದನ್ನು ಕಂಡ ಎಲ್ಲರೂ ನನ್ನನ್ನು ಬೈಯಲು ಸುರು ಮಾಡಿದರು “ಕುರಿ ಕಾಯುವ ನಾಯಿ ಊರಲ್ಲಿ ಇರುವದಿಲ್ಲ ಅದಕ್ಕೆ ಏನಾದರೂ ಆದರೆ ಅದರ ಪಾಪವನ್ನು ನೀನು ಕಟ್ಟಿಕೊಳ್ಳುತ್ತಿಯಾ” ಎಂಬ ಮಾತುಗಳು ಎಲ್ಲಡೆ ತೂರಿ ಬಂದವು.ಆಗ ನನಗೆ ಬಿ.ಇಡಿ ಕಾಲೇಜಿನಲ್ಲಿ ಓದಿದ ‘ಕಮಲಾ & ಅಮಲಾ’ ಎಂಬ ಎರಡು ಕಾಡಿನ ಹೆಣ್ಣು ಮಕ್ಕಳ ಕಥೆ ನೆನಪಾಗಲು ಪ್ರಾರಂಭವಾಯಿತು, ಆ ಮಕ್ಕಳು ನಾಡಿನ ವಾತಾವರಣಕ್ಕೆ ಹೊಂದಿಕೊಳ್ಳದೆ ಮರಣ ಹೊಂದಿದ ಸ್ಥಿತಿಯನ್ನು ನಮ್ಮ ಉಪನ್ಯಾಸಕರು ಕಣ್ಣಿಗೆ   ಕಟ್ಟಿದಂತೆ ಹೇಳಿದ್ದರು ಆ ಮಾತುಗಳು ಪದೆ ಪದೆ ನನ್ನ ಕಣ್ಣ ಮುಂದೆ ಬಂದು ನನ್ನನ್ನು ಹಿಂಸಿಸತೊಡಗಿದವು. ಬಾಳ್ಯಾನನ್ನು ಮನೆಗೆ ಕರೆದುಕೊಂಡು ಬಂದು ತಪ್ಪು ಮಾಡಿದೆನೆಂದು ಅನಿಸತೊಡಗಿತು. ಆ ಯಾತನೆಯಲ್ಲಿ ಇಡೀ ರಾತ್ರಿ ಕಳೆದು ಹೋಯಿತು.ಹಾಸಿಗೆಯಿಂದ ಎದ್ದು ಬಂದ ನನ್ನನ್ನು ಬಾಳ್ಯಾ ಸಪ್ಪೆ ಮೋರೆಯಿಂದ ನೋಡುತ್ತಿದ್ದ. ಆ ನೋಟದಲ್ಲಿ ಏನೋ ಒಂದು ತರಹದ ಅಸಹಾಯಕತೆ ಮನೆಮಾಡಿತ್ತು. ಆತ್ಮಸ್ಥೈರ್ಯ ಉಡುಗಿ ಹೋಗಿತ್ತು. ಆದರೂ ನನ್ನ ಮೇಲೆ ಹೇಳಿಕೊಳ್ಳಲಾಗದಂತಹ ಒಂದು ನಂಬಿಕೆ ಎದ್ದು ಕಾಣುತ್ತಿತ್ತು. ನಾನು ಅದನ್ನು ತಬ್ಬಿಕೊಂಡೆ, ಮೈ ಸವರಿದೆ ನನ್ನ ಹಾಗೆ ಮನೆಯಲ್ಲಿರುವ ಎಲ್ಲ ಮಕ್ಕಳೂ ಹಾಗೆ ಮಾಡಲು ಸುರು ಮಾಡಿದರು. ತಾವು ತಿನ್ನುವ ತಿನಿಸುಗಳನ್ನು ಬಾಳ್ಯಾಗೂ ಕೊಡಲು ಪ್ರಾರಂಭಿಸಿದರು. ದಿನ ಕಳೆದಂತೆ ಆತಂಕ ದೂರವಾಯಿತು. ಮನೆಯಲ್ಲಿರುವ ಮಕ್ಕಳ ಪ್ರೀತಿಗೆ ಮಾರು ಹೋದ ಬಾಳ್ಯಾಎಲ್ಲರನ್ನು ಪ್ರೀತಿಸತೊಡಗಿದ. ಊಹಿಸಲು ಅಸಾಧ್ಯವೆನ್ನುವ ರೀತಿಯಲ್ಲಿ ಬದಲಾದ. ಮೋದಲಿಗಿಂತಲೂ ದಪ್ಪನಾದ. ಸುತ್ತ ಮುತ್ತಲಿರುವ ನಮ್ಮ ಸಹೋದರಿಯರ ಮನೆಗೂ ಹೊಗಲು ಪ್ರಾರಂಭಿಸಿದ. ಈ ಬೆಳವಣಿಗೆಯನ್ನು ಕಂಡ ನನಗೆ ಪ್ರೀತಿ-ಆತ್ಮೀಯತೆ ಹಾಗೂ ಪ್ರಜ್ಞಾಪೂರ್ವಕ ಕಾಳಜಿ ಎಂತಹ ವ್ಯಕ್ತಿಯಲ್ಲಿಯೂ ಕೂಡ ಆತ್ಮಸ್ಥೈರ್ಯ ಮೈದಳೆಯುವಂತೆ ಮಾಡಬಹುದು ಆ ಮೂಲಕ ಹೊಸ ಬದುಕಿನ ಭರವಸೆಯನ್ನು ಮೂಡಿಸಬಹುದು ಎಂಬ ನಂಬಿಕೆ ಮೂಡಿಸಿತು.
***

ಲೇಖಕರು -- ಅಡಿವೆಪ್ಪ( ಬುತ್ತಿ-ಜೂನ್ 2015 ರಿಂದ)

18443 ನೊಂದಾಯಿತ ಬಳಕೆದಾರರು
7203 ಸಂಪನ್ಮೂಲಗಳು