ಅಭಿವೃದ್ಧಿ ಮತ್ತು ಶಿಕ್ಷಣ -ಶೌರೀಶ್ ಕುದ್ಕುಳಿ,

 ಬೆಂಗಳೂರು ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಶಿಕ್ಷಣದ ಪಾತ್ರ ಮಹತ್ತರವಾದದ್ದು. ಶಿಕ್ಷಣದ ಅರ್ಥ, ವ್ಯಾಪ್ತಿ, ಮಹತ್ವ ಇತ್ಯಾದಿಗಳನ್ನು ವ್ಯಾಖ್ಯಾನದ ರೂಪದಲ್ಲಿ ವಿವರಿಸುವ ಒಂದು ವರ್ಗ, ಅದನ್ನು ‘ಪರಿಕಲ್ಪನೆ’ಯ ರೂಪದಲ್ಲಿ ನೋಡುತ್ತಿರುವ ಬಗೆ ಇಂದು ಆಸಕ್ತಿದಾಯಕವಾಗಿದೆ. ಒಂದು ವಿಷಯ ವಸ್ತುವನ್ನು ಅಧ್ಯಯನ ಮಾಡಿ, ಅದರ ಆಳ ಮತ್ತು ಮಹತ್ವವನ್ನು ಅರಿಯುವ ಹಂತದಲ್ಲಿ ಉಂಟಾಗುವ ಜ್ಞಾನವನ್ನು ‘ಶಿಕ್ಷಣ’ ಎಂದು ವ್ಯಾಖ್ಯಾನಿಸುತ್ತಾರೆ. ಅಂದರೆ ಓರ್ವ ವ್ಯಕ್ತಿ ಈಗಾಗಲೇ ಲಭ್ಯವಿರುವ ಜ್ಞಾನಕೋಶಗಳನ್ನು ತಿಳಿಯುವ ಪ್ರಕ್ರಿಯೆಗೆ ಶಿಕ್ಷಣವನ್ನು ಪಡೆಯುತ್ತಿರುವುದಾಗಿ ಹೇಳುತ್ತಾರೆ. ವಿಷಯ ವಸ್ತುವೊಂದನ್ನು ಆಳವಾಗಿ ಅಭ್ಯಸಿಸಿ, ಅದರ ಮಹತ್ವ ಮತ್ತು ಅಂತಃಸತ್ವವನ್ನು ಒರೆಗೆ ಹಚ್ಚುವ ಕಾಯಕವನ್ನು ಕೆಲವು ವ್ಯಕ್ತಿಗಳು ನಡೆಸುತ್ತಾರೆ. ಅವರನ್ನು ಆಯಾ ವಿಷಯಗಳ ಸಂಶೋಧಕರೆಂದು ಗುರುತಿಸುತ್ತೇವೆ. ಅವರ ಸಂಶೋಧನೆಯ ಒಳನೋಟದಿಂದ ಕೆಲವು ನಿರ್ಧಾರಿತ ಹೇಳಿಕೆಗಳು ಹೊರಬರುತ್ತವೆ. ಆದರೆ ಅವರ ಹೇಳಿಕೆಗಳು, ಕೆಲವೊಂದು ಸಂದರ್ಭಗಳಲ್ಲಿ, ಹೊಸ ಆಲೋಚನೆಗಳಿಗೆ ಅವಕಾಶ ನೀಡುತ್ತದೆಯೋ ಅಥವಾ ಅದರಿಂದ ಸಾಮಾಜಿಕ ಅಭಿವೃದ್ಧಿಯಾಗುತ್ತದೆಯೋ ಎಂಬುದು ಮಾತ್ರ ಸ್ಪಷ್ಟವಾಗುತ್ತಿಲ್ಲ. ಸಾಮಾಜಿಕ ಅಭಿವೃದ್ಧಿಯನ್ನು ಪ್ರಜಾಪ್ರಭುತ್ವದ ತಳಹದಿಯಂತೆ, ಸಮಷ್ಟಿಗೆ ಉಪಯೋಗವಾಗುವಂತಹ ಚೌಕಟ್ಟಿನಲ್ಲಿ ಮಾತ್ರವೇ ಪರಿಗಣಿಸಿಲಾಗಿದೆ. ಶಿಕ್ಷಣ ತಜ್ಞರಿಂದ ಹೊರಟ ಇಂತಹ ನಿರ್ಧರಿತ ಹೇಳಿಕೆಗಳು ಸಂಶೋಧನೆಯ ಭಾಗವಾಗಿರಬಹುದಾದ ಅವಕಾಶಗಳೇ ಹೆಚ್ಚಾಗಿದೆ. ಸಮಾಜದ ವಿವಿಧ ಸ್ತರಗಳ ಚಿಂತನೆಗಳಿಗುಣವಾಗಿ ಅಥವಾ ಪೂರಕವಾಗಿ ಆ ಹೇಳಿಕೆಗಳಿಲ್ಲದಿದ್ದಲ್ಲಿ, ಸಂಶೊಧನೆಯೇ ಅಪ್ರಸ್ತುತವಾಗುವ ಸಂಭವವೇ ಹೆಚ್ಚು. ಜನತೆಯಲ್ಲಿ ತಿಳಿವಳಿಕೆಯ ಅರಿವನ್ನು ವೃದ್ಧಿಗೊಳಿಸುವ ಪ್ರಕ್ರಿಯೆಯು ನೈಜ ಶಿಕ್ಷಣದಿಂದ ಆಗಬೇಕಾಗಿರುತ್ತದೆ. ಅಂದರೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಔಪಚಾರಿಕ ಶಿಕ್ಷಣ ಒಂದು ಪೂರಕ ವಾತಾವರಣವನ್ನು ಒದಗಿಸಿಕೊಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನಮ್ಮ ಶಾಲೆಗಳು ತೊಡಗಿಸಿಕೊಂಡಿವೆಯೇ? ಎಂಬುದು ಮಾತ್ರ ವಿಶ್ಲೇಷಣೆಗೆ ಒಳಪಡಿಸಬೇಕಾದ ವಿಚಾರ.

ಶಿಕ್ಷಣವನ್ನು ಪಸರಿಸುವ ವಾಹಕಗಳ ‘ಅಭಿವೃದ್ಧಿ’ಯ ದೃಷ್ಟಿಕೋನವನ್ನೂ ಪರಿಗಣಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದು ಇದೆ. ಅಭಿವೃದ್ಧಿ ಒಂದು ವ್ಯವಸ್ಥೆಯ ಬದಲಾವಣೆಯಲ್ಲ; ಅದು ಪ್ರಗತಿ, ಬೆಳವಣಿಗೆ ಎಂಬಿತ್ಯಾದಿ ಪರಿಕಲ್ಪನೆಗಳಿಂದ ಗುರುತಿಸಲ್ಪಡುತ್ತಿದೆ. ಅಭಿವೃದ್ಧಿ ಎನ್ನುವುದು ವ್ಯವಸ್ಥೆಯ ಮುನ್ನಡೆಯಾಗಬೇಕಾಗುತ್ತದೆ. ಅದರಲ್ಲೂ ಧನಾತ್ಮಕವಾದ ಮುನ್ನಡೆ ಅಥವಾ ಬೆಳವಣಿಗೆ ಸಮಾಜದ ಅಭಿವೃದ್ಧಿಗೆ ಸಹಾಯಕವಾಗಬಲ್ಲುದು. ಈ ನಿಟ್ಟಿನಲ್ಲಿ ಚಿಂತಿಸುವುದಾದರೆ, ಮೂಲಭೂತ ಶಿಕ್ಷಣದ ಪರಿಕರಗಳು ಇಂದು ಓರ್ವ ವ್ಯಕ್ತಿಯಲ್ಲಿ ಶಿಕ್ಷಣದ ಜ್ಞಾನವನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿದೆ. ಈ ವ್ಯಕ್ತಿ ಸಮಾಜದ ಭಾಗವಾಗಿರುವುದರಿಂದ ಮತ್ತು ಸಮಾಜದ ಪ್ರತಿ ಘಟಕಗಳೂ ಆತನ ನಡವಳಿಕೆಯಿಂದ ನಿರ್ಧರಿತವಾಗುವುದರಿಂದ, ‘ನಮ್ಮ ಶಿಕ್ಷಣ’ವು ಸಮಾಜದ ಸರ್ವತೋಮುಖ ಅಭಿವೃದ್ಧಿಯ ಬಗೆಗೆ ಮುಖವಾಣಿಯಂತೆ ಕೆಲಸ ಮಾಡಬೇಕಾಗಿದೆ. ಅಂದರೆ ಶಿಕ್ಷಣವು ಔಪಚಾರಿಕತೆಯಿಂದ ಅನೌಪಚಾರಿಕತೆಯೆಡೆಗೆ ಸಾಗಬೇಕೆಂಬುದು ಇದರ ಅರ್ಥವಲ್ಲ. ಔಪಚಾರಿಕ ಶಿಕ್ಷಣವು ಸಮಾಜಮುಖಿ ಚಿಂತನೆಯ ದೃಷ್ಟಿಕೋನಗಳಿಗೂ ಮಹತ್ವವನ್ನು ನೀಡುವಂತಿರಬೇಕು. ಸಮಾಜದಿಂದಲೇ ಹುಟ್ಟಿ, ಸಮಾಜದಿಂದಲೇ ಬೆಳವಣಿಗೆ ಹೊಂದಿ, ಸಮಾಜದ ಕಡೆಗೇ ಸಾಗುವ ಶಿಕ್ಷಣವನ್ನು ನೀಡಿದಾಗಲೇ, ಓರ್ವ ವ್ಯಕ್ತಿಗೆ, ಆ ಸಮಾಜದ ಅಭಿವೃದ್ಧಿಯ ನೆಲೆಗಟ್ಟುಗಳು, ಸುಲಭವಾಗಿ ಅರ್ಥವಾಗುವ ಸಂಭವ ಜಾಸ್ತಿಯಾಗಿರುತ್ತದೆ. ಪ್ರಚಲಿತ ವ್ಯವಸ್ಥೆಯ ಬಗೆಗೆ, ಆತ ಸಂಪಾದಿಸಿದ ಜ್ಞಾನ ಮತ್ತು ಶಿಕ್ಷಣದ ಮಟ್ಟದಲ್ಲಿ ಕೊರತೆ ಕಂಡು ಬಂದಲ್ಲಿ, ಅದು ಆತ ಅಭಿವೃದ್ಧಿಯನ್ನು ಅರ್ಥೈಸಿ, ಅನುಷ್ಠಾನಗೊಳಿಸುವ ದೃಷ್ಟಿಕೋನವನ್ನು ವಿಭಿನ್ನವಾಗಿಸುತ್ತದೆ. ಇದು ಋಣಾತ್ಮಕವಾದ ಪರಿಣಾಮವನ್ನು ಸಮಾಜದಲ್ಲಿ ಬೀರುವ ಸಂಭವ ಜಾಸ್ತಿಯಾಗಿರುತ್ತದೆ. ಹಾಗಾಗಿ ಅಭಿವೃದ್ಧಿ ಮತ್ತು ಶಿಕ್ಷಣ ಒಟ್ಟೊಟ್ಟಿಗೆ ಸಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಸಂಶೋಧಕರು ಮುನ್ನಡೆಯಬೇಕಾಗಿದೆ..

19653 ನೊಂದಾಯಿತ ಬಳಕೆದಾರರು
7777 ಸಂಪನ್ಮೂಲಗಳು