ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಸಮಾವೇಶನ : ಆರ್‌ಟಿಇ ಅದಕ್ಕೆ ದಾರಿ ಮಾಡಿಕೊಟ್ಟಿದೆಯೇ? - ಅರ್ಚನಾ ಮೆಹೆಂದಳೆ ಮತ್ತು ರಾಹುಲ್ ಮುಖೋಪಾಧ್ಯಾಯ

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ, ೨೦೦೯ (ಇನ್ನು ಮುಂದೆ ಆರ್‌ಟಿಇ ), ಇದುವರೆಗೂ ಹೆಚ್ಚು ಕಡಿಮೆ ಅಲ್ಪ ಜೀವಿತಾವಧಿಯನ್ನು ಹೊಂದಿದ್ದು, ಶಿಕ್ಷಣ ತಜ್ಞರ, ನೀತಿ ಸಂಯೋಜಕರ, ನಾಗರಿಕ ಸಮಾಜದ ಕಾರ್ಯಕರ್ತರ, ಖಾಸಗಿ ಮತ್ತು ಸರ್ಕಾರ ಶಾಲಾ ಸಂಸ್ಥೆ ಗಳ ಪ್ರತಿನಿಧಿಗಳ ಮತ್ತು ತಂದೆತಾಯಿಯರ  ಗುಂಪುಗಳಿಂದಲೂ ಹೊಗಳಿಕೆ ಮತ್ತು ಹೀಯಾಳಿಕೆ ಎರಡನ್ನೂ ಪಡೆದಿದೆ. ಕಾಯ್ದೆಯ ಕಲಂ ೧೨ (೧) (ಸಿ) ರಲ್ಲಿರುವ  ’ಶೇಕಡ ೨೫ರಷ್ಟು ಸ್ಥಳಾವಕಾಶ ದಲ್ಲಿ ಸಮಾಜದ ಕಡೆಗಣಿತ ವರ್ಗದ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಸೇರಿಸಕೊಳ್ಳಬೇಕೆಂಬ ಕಾನೂನು ಗಮನಾರ್ಹ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿರುವುದೇಅಲ್ಲದೆ ಮತ್ತು ಮಾಧ್ಯಮಗಳ ಗಮನ ವನ್ನೂ ಸೆಳೆದಿದೆ . ಇದರೊಂದಿಗೆ ಸಮಾಜದ ವಿವಿದ ವಿಭಾಗಗಳ ನಡುವೆ ಸಾಕಷ್ಟು ಅಂತರವನ್ನು ಹುಟ್ಟುಹಾಕಿದೆ. ಅಧಿಕಾರಿಗಳ ಮಟ್ಟದಲ್ಲಿ    ಈ ಕಾನೂನಿನ ಅವಕಾಶವನ್ನು , ಖಾಸಗಿ ಶಾಲೆಗಳೂ ಶಿಕ್ಷಣದ ಸಾರ್ವತ್ರೀಕರಣದ ರಾಷ್ಟ್ರೀಯಗುರಿಯನ್ನು ಸಾಧಿಸಲು ತಮ್ಮ ಕೊಡುಗೆಯನ್ನು ಸಲ್ಲಿಸಬೇಕು ಎಂಬ ತತ್ವದ ಮೇಲೆ.ಸಮಾಜದ ಕಡೆಗಣಿತ ವರ್ಗದ ಮಕ್ಕಳಿಗೂ ’ಗುಣಮಟ್ಟ ಶಿಕ್ಷಣ’ ವನ್ನು ಒದಗಿಸುತ್ತವೆ ಎಂದು ಪರಿಗಣಿಸಲಾದ ಖಾಸಗಿ ಶಾಲೆಗಳ ಪ್ರಯೋಜವು ದೊರಕುವಂತಾಗುತ್ತದೆ ಎಂದು ಸಮರ್ಥಿಸಿಕೊಳ್ಳಲಾಗುತ್ತಿದೆ,ಆದರೆ ಪ್ರಮುಖವಾಗಿ, ಖಾಸಗಿ ಶಾಲೆಗಳು ಈ ಅವಕಾಶದ ಸಿಂಧುತ್ವ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನೆ ಎತ್ತಿದ್ದಾರೆ. ಏಪ್ರಿಲ್, ೨೦೧೨ರಲ್ಲಿ ಸೊಸೈಟಿ ಫಾರ್ ಅನ್‌ಏಯ್ಡೆಡ್ ಸ್ಕೂಲ್ಸ್ ಆಫ್ ರಾಜಸ್ಥಾನ್ ಮತ್ತು ಯೂನಿಯನ್ ಆಫ್ ಇಂಡಿಯಾ೧ ನಡುವಿನ ಪ್ರಕರಣದಲ್ಲಿ ಈ ಕಲಂನ ಸಾಂವಿಧಾನಿಕ ಸಿಂಧುತ್ವವನ್ನು ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿಯಿತು ಹಾಗೂ ಅನುದಾನರಹಿತ ಮತ್ತು ಅಲ್ಪ ಸಂಖ್ಯಾತವಲ್ಲದ ಖಾಸಗಿ ಶಾಲೆಗಳು ಈ ಕಲಂ ಅನ್ನು ಜಾರಿಗೆ ತರಲು ನಿರ್ದೇಶಿಸಿತು. ತರುವಾಯ, ಮೇ ೨೦೧೪ರಲ್ಲಿ ಸರ್ವೋಚ್ಛ ನ್ಯಾಯಾಲಯದ ಸಂವಿಧಾನ ಪೀಠವು ಅಲ್ಪ ಸಂಖ್ಯಾತ ಶಾಲೆಗಳಿಗೆ೨ ಆರ್‌ಟಿಇ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ತಿಳಿಸಿತು. ಆದ್ದರಿಂದ, ಖಾಸಗಿ ಶಾಲೆಗಳಲ್ಲಿ ತಮ್ಮ ಗ್ರೇಡ್ ೧/ ಪ್ರಾಥಮಿಕ ಪೂರ್ವ ಮಕ್ಕಳಿಗಾಗಿ ಇರುವ ಶೇಕಡ ೨೫ರಷ್ಟು ಉಚಿತ ಮತ್ತು ಕಡ್ಡಾಯ ಶಿಕ್ಷಣ ವ್ಯವಸ್ಥೆ ಒದಗಿಸುವ ಕಾನೂನು ಅಲ್ಪ ಸಂಖ್ಯಾತ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ.

ಸರ್ವೋಚ್ಛ ನ್ಯಾಯಾಲಯವು  ತನ್ನ ತೀರ್ಪನ್ನು ಕೊಟ್ಟ ಬೆನ್ನಲ್ಲೇ ಕರ್ನಾಟಕವು ಆರ್‌ಟಿಇ ಕಾಯ್ದೆಗೆ ತನ್ನ ನಿಯಮಾವಳಿಯನ್ನು ರಚಿಸಿ ಅಧಿಸೂಚನೆಯನ್ನು ಮಾಡಿ, ಈ ಕಾನೂನು ಅವಕಾಶವನ್ನು ಜಾರಿಗೊಳಿಸಿದ ಮೊಟ್ಟಮೊದಲ ರಾಜ್ಯವಾಯಿತು. ಆದರೆ ಈ ಶೇಕಡ ೨೫ರಷ್ಟು ಅವಕಾಶ ದೊರಕಿಸಿ ಕೊಡುವ ಬಗ್ಗೆ ಸರ್ಕಾರ, ಖಾಸಗಿ ಶಾಲೆಗಳು ಮತ್ತು ನೇರ ಫಲಾನುಭವಿಗಳಾದ ಪೋಷಕರು, ಮಕ್ಕಳು ಮತ್ತು ಅವರ ಕುಟುಂಬಗಳ ನಡುವೆ ಸಂಧಾನ ಎರ್ಪಡಿಸುವ ಬಗ್ಗೆ  ಮತ್ತು ಇದರ ಅನುಷ್ಠಾನದಲ್ಲಿ ಎದುರಾಗುವ ಪ್ರಮುಖ ಸಮಸ್ಯೆಗಳೇನು ಎಂಬ ಬಗ್ಗೆ  ವ್ಯವಸ್ಥಿತ ಸಂಶೋಧನೆಯ ಕೊರತೆ ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು. ಆದ್ದರಿಂದ ನಾವು ಇದರ ಸುಸಂಬದ್ಧತೆ, ಆಯಾ ಸರ್ಕಾರಗಳು ಈ ಅವಕಾಶವನ್ನು ಜಾರಿಗೊಳಿಸಲು ಹಮ್ಮಿಕೊಂಡಿರುವ ಕಾರ್ಯವಿಧಾನ ಮತ್ತು ಈ ಕಲಂ ಮೂಲಕ ಶಾಲೆಗಳಲ್ಲಿ ಸಮಾವೇಶನವನ್ನು ಮಾಡಿಸಲು ನಿರತರಾದ ಪ್ರಮುಖ ಹಿತಾಸಕ್ತಿದಾರರ ಅನುಭವಗಳನ್ನು ತಿಳಿದುಕೊಳ್ಳಲು ೨೦೧೨-೧೩ನೇ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ಮತ್ತು ದೆಹಲಿಯಲ್ಲಿ ಪರಿಶೋಧನಾತ್ಮಕ ಅಧ್ಯಯನವನ್ನು ಕೈಗೆತ್ತಿಗೊಂಡೆವು.  ಈ ಅಧ್ಯಯನಕ್ಕಾಗಿ ದತ್ತಾಂಶ (ಡೇಟಾ)ವನ್ನು ನಾವು ಪ್ರಾಥಮಿಕವಾಗಿ ರಚನಾತ್ಮಕ ಪ್ರಶ್ನಾವಳಿ , ಶಾಲಾ ಮತ್ತು ತರಗತಿಗಳ ಹಂತದಲ್ಲಿ ವೀಕ್ಷಣಾ ಕ್ರಮಗಳು  ಮತ್ತು ಮುಖ್ಯ ಶಿಕ್ಷಕರು, ಶಿಕ್ಷಕರು, ಪೋಷಕರು, ಶಿಕ್ಷಣ ಅಧಿಕಾರಿಗಳು, ಮೇಲ್ವ್ವಿಚಾರಕ ಸಂಸ್ಥೆಗಳು, ಪೌರ ಸಮಾಜ ಕಾರ್ಯಕರ್ತರೊಂದಿಗೆ ಭಾಗಶಃ ಸಂದರ್ಶನಗಳ ಮೂಲಕ ಸಂಗ್ರಹಿಸಿದೆವು. ಈ ಲೇಖನದಲ್ಲಿ ಬೆಂಗಳೂರಿನಲ್ಲಿ ನಾವು ಕಂಡುಕೊಂಡ  ಅಂಶಗಳನ್ನು ಕೇಂದ್ರೀಕರಿಸಲಾಗಿದೆ.

ಕಾರ್ಯವಿಧಾನ

ಮಾಹಿತಿಲಭ್ಯತೆ: ಜನರಿಗೆ ಸುಲಭ ಲಭ್ಯವಾಗುವಂತೆ ಸುತ್ತೋಲೆ ಮತ್ತು ಅಧಿಸೂಚನೆಗಳನ್ನು ವೆಬ್ಸೈಟ್ ನಲ್ಲಿ ಪ್ರಕಟಿಸುವ ಕೆಲವೇಕೆಲವು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಯಾವ ಶಾಲೆಗಳಲ್ಲಿ  ಎಷ್ಟು ಸ್ಥಾನಗಳು ಲಭ್ಯವಿವೆ ಎಂಬ ಮಾಹಿತಿ ನಕ್ಷೆಯ ರೂಪದಲ್ಲಿ ಲಭ್ಯವಿಲ್ಲದೆ ಕೇವಲ ಪಟ್ಟಿ ಮಾತ್ರ ಇರುವುದರಿಂದ, ತಮ್ಮ ನೆರೆಹೊರೆಯಲ್ಲಿಯೇ ಸ್ಥಾನಗಳು ಲಭ್ಯವಿರುವ ಶಾಲೆಗಳ ಬಗ್ಗೆ ತಿಳಿದುಕೊಳ್ಳುವುದು ಬಲು ಕಷ್ಟ . ಆರ್‌ಟಿಇ ಸಂಬಂಧಿತ ದೂರುಗಳಿಗಾಗಿ ಟೋಲ್ ಫ್ರೀ ಸಹಾಯವಾಣಿ (೧-೮೦೦-೪೨೫-೧೧೦೦೪) ಸ್ಥಾಪನೆಯಾಗಿದ್ದರೂ, ವೆಬ್ಸೈಟ್‌ನಲ್ಲಿ ಅವುಗಳ ಬಗ್ಗೆ ಯಾವುದೇ ಮಾಹಿತಿ ಕಂಡುಬರಲಿಲ್ಲ.  
ಅರ್ಹತಾ ಅಗತ್ಯತೆ:  ’ಹಿಂದುಳಿದ ವರ್ಗ’ ವೆಂದು ಪರಿಗಣಿಸಿದವರ ಆದಾಯ ಪರಿಮಿತಿಯನ್ನು ೩.೫ ಲಕ್ಷಕ್ಕೆ ನಿಗದಿಯಾಗಿರುವುದು ಬಹಳ ಹೆಚ್ಚಾಗಿದೆಯೆಂದು ಪ್ರಶ್ನಿಸಿ ಬಡತನ ರೇಖೆಗಿಂತ ಕೆಳಗಿರುವ ಎರಡು ವಿದ್ಯಾರ್ಥಿಗಳೊಂದಿಗೆ ಕೆ. ನಾಗೇಶ್‌ರವರು ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಒಂದು ಲಕ್ಷಕ್ಕಿಂತ ಕಡಿಮೆ ಆದಾಯವಿರುವವರಿಗೆ ಆದ್ಯತೆ ನೀಡಲಾಗುವುದೆಂದು ಸರ್ಕಾರ ಆದೇಶ ಹೊರಡಿಸಿತು. ಆದರೆ ಬಡವರ್ಗಗಳಿಗೆ ಇದರ ಮೇಲೆ ವಿಶ್ವಾಸ ಹುಟ್ಟಲಿಲ್ಲ ಏಕೆಂದರೆ ಆರ್ಥಿಕವಾಗಿ ಉತ್ತಮವಾಗಿರುವ ಕುಟುಂಬಗಳು ಇದರ ಸಹಾಯವನ್ನು ಪಡೆದುಕೊಳ್ಳುತ್ತವೆ ಎಂಬ ಸಂಶಯದಿಂದ . ಹೀಗಾಗಿ ನಿಜಕ್ಕೂ ಇದರ ಅಗತ್ಯತೆ ಇರುವ ಕುಟುಂಬಗಳು ಇದರ ಪ್ರಯೋಜನ ಪಡೆದುಕೊಳ್ಳುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಅನಾನುಕೂಲತೆ ಹೊಂದಿರುವ ಮಕ್ಕಳ ವರ್ಗೀಕರಣದಲ್ಲಿ ಅನೇಕ ಬಗೆಯ ಅನಾನುಕೂಲತೆ ಯಿಂದ ಬಳಲುವ ಮಕ್ಕಳ ಸಮಸ್ಯೆಯನ್ನು ಬಗೆಹರಿಸಿರುವುದಿಲ್ಲ   ಮತ್ತು ಈಗಿರುವ ವಿಧಾನಗಳಲ್ಲಿ ಬಹುವಿಧದ  ಅನಾನುಕೂಲತೆ ಹೊಂದಿರುವ ಮಕ್ಕಳ ವಿವರu, ಆಯ್ಕೆ, ಮತು ಅವರಿಗೆ ಆದ್ಯತೆ ಗೆ ಏರ್ಪಾಟಿನ ಕೊರತೆ ಎದ್ದು ಕಾಣುತ್ತದೆ. ಆದರೆ ಗುರಿಯನ್ನು ಪರಿಣಾಮಕಾರಿಯಾಗಿ ತಲುಪಲು ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು ಪ್ರಮಾಣ ಪತ್ರವೊಂದನ್ನು ಹಾಜರು ಪಡಿಸ ಬೇಕೆಂದು ಅಗತ್ಯ ಪಡಿಸಲಾಗಿದೆ , ಕಡೆಗಣಿತ ವರ್ಗದ ನಿರ್ದಿಷ್ಟ ಉಪ ಗುಂಪುಗಳು ಅಂದರೆ ಅನಾಥರು, ವಲಸಿಗರು, ಬೀದಿ ಮಕ್ಕಳು ಇಂತಹ ಪ್ರಮಾಣವನ್ನು ಒದಗಿಸಲು ಸಾಧ್ಯವಿಲ್ಲ  ಎಂಬ ಸತ್ಯದ  ಕಡೆ ಗಮನ ಹರಿಸಿಲ್ಲ. ಇದರ ಪರಿಣಾಮವಾಗಿ, ಇಂತಹ ಉಪ ಗುಂಪುಗಳಿಗೆ ಸೇರಿದ ಮಕ್ಕಳು ಈ ಅವಕಾಶದ ಯಾವುದೇ ಪ್ರಯೋಜನವನ್ನು ಪಡೆದುಕೊಳ್ಳಲು ಆಗುತ್ತಿಲ್ಲ ಅಲ್ಲದೆ  ಅಧಿಕೃತ ದಾಖಲೆಗಳು ಇಂಥ  ಮಕ್ಕಳ ಪ್ರವೇಶವನ್ನು ದಾಖಲಿಸಿಕೊಂಡಿಲ್ಲ.
ಇಂತಹ ನಿಯಂತ್ರಣದಲ್ಲಿನ  ಕೊರತೆಗಳು ಭ್ರಷ್ಠಾಚಾರಕ್ಕೆ  ಸುಲಭ ಮಾರ್ಗವನ್ನು ಮಾಡಿಕೊಟ್ಟಿದೆ. ಇದರ ಪರಿಣಾಮವಾಗಿ ಅನುಕೂಲ ವಂಚಿತ ಜನರಿಗಾಗಿ ಸರ್ಕಾರ ಮಾಡಿದ ಎಲ್ಲ ಕಾರ್ಯಕ್ರಮಗಳಂತೆ ಇಲ್ಲೂ  ಈ ಸೀಟುಗಳನ್ನು ’ಗಣ್ಯರು ಕಬಳಿಸುತ್ತಾರೆ’
ಇದರ ಅನುಷ್ಠಾನವಾದ ಕಡಿಮೆ ಅವಧಿಯಲ್ಲಿಯೇ, ಶಾಲೆಗೆ ಸಲ್ಲಿಸಿರುವ ಶೇಕಡ ೪೦ರಷ್ಟು ಆದಾಯ ಪ್ರಮಾಣ ಪತ್ರಗಳು ನಕಲಿ ಎಂದು ಕರ್ನಾಟಕ ಪ್ರೈವೇಟ್ ಸ್ಕೂಲ್ಸ್ ಜಾಯಿಂಟ್ ಆಕ್ಷನ್ ಕಮಿಟಿ ಆರೋಪಿಸಿದೆ ಹಾಗೆಯೇ ಕರ್ನಾಟಕ ಲೋಕಾಯುಕ್ತ ಈ ನಕಲಿ ಆದಾಯ ಪ್ರಮಾಣ ಪತ್ರದ  ಜಾಲದ ಬಗ್ಗೆ ತನಿಖೆಗೆ ಆದೇಶ ಹೊರಡಿಸಿದೆ.
ಶಾಲಾ ಸಾಮೀಪ್ಯ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (ಎಮ್‌ಹೆಚ್‌ಆರ್‌ಡಿ) ಮಾರ್ಗಸೂಚಿಯಲ್ಲಿ ಖಾಸಗಿ ಶಾಲೆಗಳಿಗೆ ಸಾಮಾನ್ಯ ವರ್ಗದಲ್ಲಿ ಅರ್ಜಿ ಸಲ್ಲಿಸಿರುವ ಮಕ್ಕಳಿಗೆ ನೆರೆಹೊರೆ  ಎನ್ನುವುದರ ವ್ಯಾಖ್ಯಾನ ಕಟ್ಟುನಿಟ್ಟಾಗಿರದೆ ಸಡಿಲಗೊಳಿಸಿ  ಅರ್ಥ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಶೇಕಡ ೨೫ರಷ್ಟು ಅವಕಾಶದಲ್ಲಿ ಸೀಟು ಪಡೆಯುವ ಮಕ್ಕಳಿಗೆ ಈ ಶಾಲೆಯ ದೂರದ ಬಗ್ಗೆ ಕಟ್ಟುನಿಟ್ಟಾಗಿ ಶಿಫಾರಸು ನೀಡಲಾಗಿದೆ. ನಗರದ ಶ್ರೀಮಂತ ವರ್ಗ ವಾಸಿಸುವ ಭೂ ಸಾಮಾಜಿಕ ಸ್ಥಳಗಳಲ್ಲಿರುವ ಖಾಸಗಿ ಶಾಲೆಗಳು ಮತ್ತು ಹೆಚ್ಚು ಜನನಿಬಿಡವಲ್ಲದ ನಗರಗಳ ಹೊರಪ್ರದೇಶಗಳಲ್ಲಿರುವ ಶಾಲೆಗಳು ಜನವಸತಿಯಿಂದ ದೂರವೇ ಉಳಿಯುವುದರಿಂದ, ಅದೇ ಕಾರಣಕ್ಕೆ ಈ ೨೫ರಷ್ಟು ಸ್ಥಳಾವಕಾಶ ಒದಗಿಸುವ  ನಿಯಮದಿಂದ ಪಾರಾಗುತ್ತವೆ ಮತ್ತು ನಿಯಮಕ್ಕೆ ನಿಲುಕದೇ ಹೊರಗೇ ಉಳಿದು ಬಿಡುತ್ತವೆ.
ಶಾಲಾ ವರದಿಗಳು: ಈ ಕಾನೂನಿನ ನಿಯಮವನ್ನು ಅನುಷ್ಠಾನಗೊಳಿಸಿರುವ ಶಾಲೆಗಳು ಸರ್ಕಾರಕ್ಕೆ ಅರ್ಧ ವಾರ್ಷಿಕ ಪರಿಪಾಲನಾ ವರದಿಗಳನ್ನು ಸಲ್ಲಿಸುವ ಉತ್ತರದಾಯಿತ್ವವನ್ನು ನಿಭಾಯಿಸಬೇಕಾಗುತ್ತದೆ. ಆದರೆ ವರದಿಗಾಗಿ ಸರ್ಕಾರ ನಿಗದಿಗೊಳಿಸಿರುವ ಫಾರಂ ೩ರ ಸ್ವರೂಪದಲ್ಲಿಯೇ ತಾರತಮ್ಯ ಎದ್ದು ಕಾಣುತ್ತಿದೆ. ಇತರ ವಿಷಯಗಳ ಜೊತೆಗೆ, ಮಕ್ಕಳು ಶಾಲೆಯಲ್ಲಿ ತೋರಿಸುವ ಪ್ರಗತಿಯ ಬಗ್ಗೆ ( ಎ ನಿಂದ ಸಿ ತನಕ ಶ್ರೇಣಿಗಳಲ್ಲಿ  ಸೂಚಿಸಬೇಕಾಗುತ್ತದೆ) ಮಾಹಿತಿ, ಕಡಿಮೆ ಶ್ರೇಣಿಪಡೆದ ಮಕ್ಕಳಿಗೆ ವಿಶೇಷ ತರಬೇತಿಯನ್ನು ನೀಡಲು ಅವಕಾಶ, ನಪಾಸಾಗಿ ಅದೇ ತರಗತಿಗಳಲ್ಲಿ ಉಳಿಸಿಕೊಂಡ ಮಕ್ಕಳ ಸಂಖ್ಯೆ ಮತ್ತು ಹಾಗೆ ಉಳಿಸಿಕೊಂಡಿರಲು ಕಾರಣ (ಹಾಜರಾತಿ, ಕಲಿಕೆ ಪ್ರಗತಿ, ಅಥವಾ ಅವೆರಡೂ, ಅಥವಾ ಶಿಸ್ತು) ಮತ್ತು ಶಾಲೆಗಳು ಪೋಷಕರಿಗೆ ತಿಳಿಸಬೇಕಾದ ’ಮಕ್ಕಳ ಶಾಲಾ ಅಭ್ಯಾಸಗಳ’ ಬಗ್ಗೆ ಯಾವುದಾದರೂ ಗಂಭೀರ ಆರೋಪಗಳಿದ್ದಲ್ಲಿ ಅದರ ವಿವರಗಳನ್ನು ನೀಡಬೇಕಾಗುತ್ತದೆ.  ಇದು ’ಆರ್‌ಟಿಇ ಕೋಟಾ’ ದ ವಿದ್ಯಾರ್ಥಿಗಳ ಕಲಿಕೆ ಪ್ರಗತಿ ಸಾಮಾನ್ಯವಾಗಿ ಕಳಪೆಯಾಗಿರು ವ ಸಂಭವವಿದೆ  ಎಂಬ ಪೂರ್ವಭಾವನೆಯನ್ನು ಹೊಂದಿರುತ್ತದೆ ’ಆರ್‌ಟಿಇ ಕಾಯ್ದೆ’ಯ ಅನುಸಾರ ಮಕ್ಕಳನ್ನು ಅದೇ ತರಗತಿಗಳಲ್ಲಿಯೇ ಉಳಿಸಿಕೊಳ್ಳಲು ಸಾಧ್ಯವಿಲ್ಲ ಆದರೆ  ಈ ವರದಿ ಪ್ರಕಾರ  ಹಾಜರಾತಿ, ಕಲಿಕೆ ಪ್ರಗತಿ,  ಅಥವಾ ಶಿಸ್ತಿನ ಕಾರಣ ನೀಡಿ ಆ ಮಗುವನ್ನು ಉಳಿಸಿಕೊಳ್ಳಲು ಅವಕಾಶವಿದೆ ಎಂದಾಯಿತು. ಇಲ್ಲಿ ಕುತೂಹಲಕಾರಿಯಾದ ಅಂಶವೇನೆಂದರೆ, ಈ ಫಾರಂನಲ್ಲಿ ಮಕ್ಕಳ ’ಶಾಲಾ ಅಭ್ಯಾಸಗಳ’ ಬಗ್ಗೆ ಶಾಲೆಗಳು ತಂದೆತಾಯಿಯರಿಗೆ ದೂರನ್ನು ನೀಡಲು ಅನುಮತಿ ಇದೆಯೇ ಹೊರತು ತಂದೆತಾಯಿಗಳು  ಸಮಾವೇಶನ ವನ್ನು  ಶಾಲೆಗಳ ಚೆನ್ನಾಗಿ ಮಾಡುತ್ತಿವೆಯೇ ಇಲ್ಲವೇ ಎಂಬ ಬಗ್ಗೆ ಮರುಮಾಹಿತಿಯನ್ನು ಕೊಡಲು ಈ ಪರಿಪಾಲನಾ ವರದಿಯಲ್ಲಿ ಯಾವುದೇ ಅವಕಾಶ ಕಲ್ಪಿಸಿಲ್ಲ್ಲ. ಶಾಲೆಯ ಉತ್ತರದಾಯಿತ್ವ ಕ್ಕೆ (ಹಣಕಾಸು ವರದಿ ಮತ್ತು ಲೆಕ್ಕ ಪರಿಶೋಧನೆಯ ವರದಿಗಳ ಜೊತೆಗೆ) ಈ ಪರಿಪಾಲನಾ ವರದಿಸಲ್ಲಿಕೆ ಬಹು ಮುಖ್ಯ ಸಾಧನವಾಗಿರುವ ಕಾರಣ  ಅzನ್ನು ಮತ್ತೆ   ಗಂಭೀರವಾಗಿ ಪರಿಶೀಲನೆ ನಡೆಸಬೇಕಾದ   ಅಗತ್ಯವಿದೆ.  
ಶುಲ್ಕ ಮರುಪಾವತಿ ಮತ್ತು ದುಬಾರಿ  ಶುಲ್ಕದ ಪ್ರಶ್ನೆ:   ಈ ಎಲ್ಲ ಕುಂದುಕೊರತೆ ಗಳನ್ನು ಇನ್ನೊಂದು ಅಂಶ ಇನ್ನೂ ಹೆಚ್ಚಿಸುತ್ತದೆ .ಖಾಸಗಿ ಶಾಲೆಗಳಲ್ಲಿ ಒಂದು ಮಗುವಿನ ಬಗ್ಗೆ ಶಾಲೆಯು ನಿರ್ವಹಿಸುವ   ನಿಖರವಾದ ಖರ್ಚು ವೆಚ್ಚಗನ್ನು ಲೆಕ್ಕಹಾಕಲು   ಸರಿಯಾದ ಪಾರದರ್ಶಕ ವ್ಯವಸ್ಥೆ ಇಲ್ಲ  .ಇದರಿಂದಲೇ ಒಂದು ಮಗುವಿನ ಬಗ್ಗೆ ಶಾಲೆಯು ನಿರ್ವಹಿಸುವ   ನಿಖರವಾದ ಖರ್ಚು ಮತ್ತು ಸರ್ಕಾರ  ಮರುಪಾವತಿಮಾಡುವ  ಹಣದಲ್ಲಿ ವ್ಯತ್ಯಾಸಗಳು ಹುಟ್ಟಿಕೊಂಡಿವೆ. ಕಾಯ್ದೆಯಡಿ, ಶಾಲೆಗಳೇ ಎಲ್ಲಾ ಖರ್ಚು ವೆರ್ಚಗಳನ್ನು ನಿಭಾಯಿಸ ಬೇಕೆಂದು  ನಿರ್ದೇಶಿಸಿದ್ದರೂ ಹಲವಾರು ಶಾಲೆಗಳು ಉಚಿತ ಸೀಟು ಪಡೆದು ಪ್ರವೇಶ ಹೊಂದಿರುವ ವಿದ್ಯಾರ್ಥಿಗಳಿಂದಲೂ, ಲೇಖನ ಸಾಮಗ್ರಿ, ಕ್ರೀಡೆ, ಸಮವಸ್ತ್ರ ನಿರ್ವಹಣೆ ಮತ್ತು ಆಡಳಿತ ವೆಚ್ಛದ ಹೆಸರಿನಲ್ಲಿ ಶುಲ್ಕವನ್ನು ವಸೂಲು ಮಾಡುತ್ತಿರುವುದಾಗಿ ವರದಿಗಳಾಗಿದೆ. ಹಾಗೆಯೇ, ಪೋಷಕರೂ ಸಹ ಸಮವಸ್ತ್ರ ಖರೀದಿ, ಪಠ್ಯಪುಸ್ತಕ, ಪುಸ್ತಕ ಮತ್ತು ಟ್ಯೂಷನ್‌ಗಳ ಹೆಸರಿನಲ್ಲಿ ವರ್ಷವೊಂದರಲ್ಲಿ ಸರಿಸುಮಾರು ರೂ.೩೦೦ ರಿಂದ ರೂ.೧೫೦೦೦ ಅಧಿಕ ಖರ್ಚನ್ನು ಭರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಹಲವು ಶಾಲೆಗಳು ಶೇಕಡ ೫೦ರಷ್ಟು ಶುಲ್ಕವನ್ನು ತಂದೆತಾಯಿಗಳು ನೀಡಬೇಕು ಉಳಿದ ಅರ್ಧವನ್ನು ಸರ್ಕಾರ ನೀಡುತ್ತದೆ ಎಂದು ಹೇಳುತ್ತಿರುವುದಾಗಿ ಸಾಕಷ್ಟು ಪೋಷಕರು ಹೇಳಿರುತ್ತಾರೆ. ಹಲವು ಶಾಲೆಗಳು ಪೋಷಕರಿಂದ ಮುಂಚಿತವಾಗಿಯೇ ಶುಲ್ಕವನ್ನು ಪಡೆದು, ಸರ್ಕಾರ ಹಣ ಮರುಪಾವತಿಸಿದ ಕೂಡಲೇ ಹಿಂದಿರುಗಿಸುವುದಾಗಿಯೂ ಹೇಳಿರುವುದಿದೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಪ್ರಕಾರ ಮೊದಲ ಕಂತಿನಲ್ಲಿ  ತಾವು ನಿರೀಕ್ಷಿಸಿದ್ದಕ್ಕಿಂತಲೂ ತಮಗೆ ಅತಿ ಕಡಿಮೆ ಹಣ ಮರುಪಾವತಿಯಾಗಿರುವುದಾಗಿ ಹೇಳಿಕೆ ನೀಡಿತು. ಒಂದು ಮಗುವಿಗೆ ತಗಲುವ  ನಿಖgವಾದ ಖರ್ಚು ಕುರಿತು ಶಾಲೆಗಳು ಘೋಷಿಸುವಲ್ಲಿ ಮತ್ತು ಲೆಕ್ಕಹಾಕುವಲ್ಲಿ  ಪಾರದರ್ಶಕ ವ್ಯವಸ್ಥೆ ಇಲ್ಲದಿದ್ದಾಗ ಮತ್ತು ಸರ್ಕಾರಿ ಸಂಸ್ಥೆಗಳಿಂದ ಸ್ವತಂತ್ರ ಲೆಕ್ಕ ಪರಿಶೋಧನೆ ಇಲ್ಲದಿದ್ದಾಗ ಹೀಗೆಯೇ ಆಗುತ್ತದೆ.  
ಸರ್ಕಾರ ವೇ ಒಪ್ಪಿಕೊಂಡಂತೆ ತನ್ನದೇ ಪ್ರಾಥಮಿಕ ಪೂರ್ವ ಶಿಕ್ಷಣ ಪ್ರವೇಶಕ್ಕೆ ಶುಲ್ಕವನ್ನು ಮನಸ್ಸಿಗೆ ಬಂದಂತೆ  ನಿಗದಿ ಪಡಿಸಲಾಗಿದೆ. ಅಂದರೆ ೧ನೇ ತರಗತಿಯ  ಶುಲ್ಕದ ಅರ್ಧದಷ್ಟು ಎಂದು  ನಿಗದಿ ಪಡಿಸಲಾಗಿದೆ. ಶಿಕ್ಷಣ ಇಲಾಖೆ ಯಾವುದೇ ಶಿಶುವಿಹಾರ ಶಾಲೆಗಳನ್ನು ನಡೆಸದ ಕಾರಣ, ಮರುಪಾವತಿ ಮಾಡಬೇಕಾದ ಹಣದ ಬಗ್ಗೆ ಯಾವುದೇ ಆಧಾರ ಅಥವ ಮಾಹಿತಿ ಇರದಿರುವುದೂ ಸಹ ಇದಕ್ಕೆ ಕಾರಣವಾಗಿದೆ.  
ಶಾಲೆಗಳು ಸಮಾವೇಶಿಯಾಗುತ್ತಿವೆಯೇ?
ವಿವಿಧ ಸಾಮಾಜಿಕ ವಿಭಾಗಗಳಿಂದ  ಪ್ರವೇಶ:  ಶೇಕಡ ೨೫ರಷ್ಟು ಸೀಟುಗಳ ಅವಕಾಶದ ಅಡಿಯಲ್ಲಿ ೨೦೧೨-೧೩ ಮತ್ತು ೨೦೧೩-೧೪ರ ಅಂಕಿ ಅಂಶಗಳನ್ನು  ಪರಿಶೀಲಿಸಿದಾಗ, ಸಾಮಾಜಿಕ ವಿಭಾಗಗಳ ವರ್ಗದಲ್ಲಿ ಕ್ರಮವಾಗಿ ಅತಿ ಹೆಚ್ಚು ಪ್ರಮಾಣದಲ್ಲಿ ಪ್ರವೇಶವನ್ನು ಇತರ ಹಿಂದುಳಿದ ವರ್ಗದವರು  (೫೮,೬೯) ಪಡೆದಿರುತ್ತಾರೆ,ತದನಂತರ ಪರಿಶಿಷ್ಟ ಜಾತಿ (೩೯,೨೮) ಮತ್ತು ಪರಿಶಿಷ್ಟ ಪಂಗಡ (೩,೩) ತೋರಿಸಿದೆ. ಈ ಎರಡೂ ಶೈಕ್ಷಣಿಕ ವರ್ಷಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಕ್ಕಳನ್ನು ಮತ್ತು ಪರಿಶಿಷ್ಟ ಪಂಗಡದ ಮಕ್ಕಳನ್ನು ಹೊಂದಿರದ ಶಾಲೆಗಳ ಸಂಖ್ಯೆ ಕ್ರಮವಾಗಿ ಶೇಕಡ ೩೧ ಮತ್ತು ೨೫ರಷ್ಟು. ಇದಕ್ಕೆ ಸಂವಾದಿಯಾಗಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಮಕ್ಕಳ ದಾಖಲಾತಿ ಹೊಂದಿರದ ಶಾಲೆಗಳು ಶೇಕಡ ೮೬ ಮತ್ತು ೭೭ ಹಾಗೂ ಇತರ ಹಿಂದುಳಿದ ವರ್ಗಕ್ಕೆ ಸೇರಿದ ಮಕ್ಕಳ ದಾಖಲಾತಿಹೊಂದಿರದ ಶಾಲೆಗಳು ಅನುಕ್ರಮವಾಗಿ ಶೇಕಡ ೨೪ ಮತ್ತು ೭ರಷ್ಟಿತ್ತು. ೨೦೧೨-೧೩ ಮತ್ತು ೨೦೧೩-೧೪ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯಾವುದೇ ವಿದ್ಯಾರ್ಥಿ ದಾಖಲಾಗದ ಶಾಲೆಗಳು ಅನುಕ್ರಮವಾಗಿ ಶೇಕಡ ೨೮ ಮತ್ತು ೨೨ರಷ್ಟಿತ್ತು ೪.
ಸಾಮಾಜಿಕ ತಾರತಮ್ಯ: ಈ ಅಧ್ಯಯನದಲ್ಲಿ ತರಗತಿಗಳ ವೀಕ್ಷಣೆ ಮತ್ತು ಮುಖ್ಯ ಶಿಕ್ಷಕರ ಪ್ರತಿಕ್ರಿಯೆ ಮತ್ತು ಖಾಸಗಿ ಶಾಲಾ ಶಿಕ್ಷಕರ ಪ್ರತಿಕ್ರಿಯೆಗಳು ತಾರತಮ್ಯದ ಬಗ್ಗೆ ಯಾವುದೇ ತಕ್ಷಣದ ಆತಂಕದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ. ಸಾಮಾಜಿಕ ಸಂವೇದನೆಯನ್ನು ತಿಳಿಯದ ಮಕ್ಕಳ ಅತಿ ಚಿಕ್ಕ ವಯಸ್ಸು ಮತ್ತು ಕಿರಿಯ ತರಗತಿಯಲ್ಲಿರುವ ಮಕ್ಕಳ ಸಾಮಾಜಿಕ ಹೊಂದಾಣಿಕೆಯೇ ಇದಕ್ಕೆ ಕಾರಣ. ಶೇಕಡ ೨೫ರಷ್ಟು ಅವಕಾಶದಲ್ಲಿ ಸೇರಿದ ಮಕ್ಕಳ ಪೋಷಕರು ಉಳಿದ ಮಕ್ಕಳಿಗೂ ಅವರಿಗೂ ಯಾವುದೇ ಭಿನ್ನತೆ ಬರದ ರೀತಿಯಲ್ಲಿ ನೋಡಿಕೊಳ್ಳಲು ತಮ್ಮ ಮಕ್ಕಳಿಗೆ ಕಷ್ಟಪಟ್ಟು  ಹಣಕಾಸು ಮತ್ತು ವಸ್ತು ಸೌಕರ್ಯಗಳನ್ನು ನೀಡಬೇಕಾಗಿ ಬರುತ್ತಿದೆ  ಎಂಬುದನ್ನು ಕೆಲವು ಶಿಕ್ಷಕರು ಥಟ್ಟನೆ ತಿಳಿಸಿದರು. ಜೊತೆಜೊತೆಯಲ್ಲಿ , ಮಕ್ಕಳು ಮುಂದಿನ ತರಗತಿಗಳಿಗೆ ಹೋಗುತ್ತಿದ್ದಂತೆ  ತಮ್ಮ ನಿಕಟ ಸಹಪಾಠಿಗಳೊಡನೆ  ಒಡನಾಡುತ್ತಾ ಸಾಮಾಜಿಕ ವ್ಯತ್ಯಾಸಗಳನ್ನು ಗುರುತಿಸಲಾರಂಭಿಸಿದಾಗ ’ಹೊಂದಾಣಿಕೆ’ಯ ಸಮಸ್ಯೆಗಳು ಹೇಗೆ ಪ್ರಾರಂಭವಾಗುವ ಸಂಭವವಿದೆ ಎನ್ನುವುದರ ಬಗ್ಗೆ ಶಿಕ್ಷಕರು ಮುನ್ನೆಚ್ಛರಿಕೆ ನೀಡಿದರು. ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರು ಪದೇ ಪದೇ ಹೇಳುವ ಮಾತೆಂದರೆ  ತೀರ ಅನ್ಯ ವಾತಾವರಣವೆಂದು ಹೇಳುವ ಈ ಶಾಲೆಗಳ ವಾತಾವರಣದಲ್ಲಿ , ಶೇಕಡ ೨೫ರಷ್ಟು ಅವಕಾಶದಲ್ಲಿ ದಾಖಲಾದ ಮಕ್ಕಳ ಕುಟುಂಬಗಳಿಗೆ ಮುಂದೆ ಎಂಥ  ಅವಮಾನ ಮತ್ತು ಸ್ವಯಂ ಗೌರವದ ಕೊರತೆಯನ್ನು ಉಂಟಾಗಬಹುದು ಎನ್ನುವದಾಗಿತ್ತು. ಉದಾಹರಣೆಗೆ, ನಗರದ ಶ್ರೀಮಂತ ವರ್ಗದ ಮಕ್ಕಳನ್ನೇ ಹೆಚ್ಚಾಗಿ ಸೇರಿಸಿಕೊಳ್ಳುವಂತಹ ಬೆಂಗಳೂರಿನ ಒಂದು ಖಾಸಗಿ ಶಾಲೆಯ ಮುಖ್ಯ ಅಧ್ಯಾಪಕರ ಪ್ರಕಾರ  ಶಾಲೆಗಳಲ್ಲಿ ಹಣ ಪಾವತಿಸಿ ಬಳಸಬೇಕಾದ ಈಜು ಕೊಳ ಮತ್ತು ಕ್ಯಾಟೀನ್‌ಗಳಿವೆಯೆ ಎಂದಿಟ್ಟುಕೊಳ್ಳಿ ತನ್ನ ಜೊತೆಗಾರರು ಈ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸುತ್ತಿದ್ದರೆ, ಈ  ಮಗುವಿನ ಮಾನಸಿಕ ಪರಿಸ್ಥಿತಿ ಹೇಗಿರಬಹುದೆಂದು ನೀವೇ ಊಹಿಸಿಕೊಳ್ಳಿ?’ ಪರಿಸ್ಥಿತಿಯನ್ನು ನಿಭಾಯಿಸಲು ವಿದ್ಯಾರ್ಥಿಗಳ ಸಾಮರ್ಥ್ಯ, ಸಾಮಾಜಿಕ ತಾರತಮ್ಯದ ವಿಚಾರ ಮತ್ತು ತಂದೆ ಯಾರೆಂಬುದರ ಬಗ್ಗೆ  ಆಡಳಿತ ವರ್ಗದ ಹಲವರು ಬಹಳ ತೀಕ್ಷ್ಣವಾಗಿ ಆತಂಕ ವ್ಯಕ್ತ ಪಡಿಸಿದರು (ಬಾಕ್ಸ್ ೧ ನೋಡಿರಿ).
೪ಆರ್‌ಟಿಇ ಸೆಲ್‌ನಿಂದ ದೊರೆತ ದತ್ತಾಂಶ, ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ
ಬಾಕ್ಸ್ ೧: ಶಾಲಾ ಆಡಳಿತ ವರ್ಗದವರ ಪ್ರತಿಕ್ರಿಯೆ
’ಇದೆಷ್ಟು ಉಪಯುಕ್ತ ಎಂದು ನನಗೆ ಗೊತ್ತಾಗುತ್ತಿಲ್ಲ್ಲ. ನಮ್ಮ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳಾದ ಟೇಕ್ವಾಂಡೋ ಮತ್ತಿತರ ಕ್ರೀಡೆಗಳಿವೆ. ನಮ್ಮ ಶಾಲೆಯ ಸಾಕಷ್ಟು ಮಕ್ಕಳು ಈ ಕ್ರೀಡೆಗಳಲ್ಲಿ ಬಲು ಗಂಭೀರವಾಗಿ ಭಾಗವಹಿಸುತ್ತಿದ್ದಾರೆ. ಆರ್‌ಟಿಇ ಮಕ್ಕಳು ಈ ಚಟುವಟಿಕೆಗಳನ್ನು ಹೇಗೆ ನಿಭಾಯಿಸಲು ಸಾಧ್ಯ? ಅವರು ಇದನ್ನು ಮುಂದುವರೆಸಲು ಸಾಧ್ಯವೇ? ನಮ್ಮ ಮಕ್ಕಳು ನಮ್ಮ  ಶಾಲೆಯನ್ನು  ಪ್ರತಿನಿಧಿಸುತ್ತಾರೆ ಮತ್ತು ರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ - ಆರ್‌ಟಿಇ ಮಕ್ಕಳು ಇದನ್ನು ಅಷ್ಟೇ ಗಂಭೀರವಾಗಿ ತೆಗೆದುಕೊಂಡು ಭಾಗವಹಿಸಲು  ಸಾಧ್ಯವೇ?’
’ಇದರಿಂದ ನಮಗೇನೇನೂ ಉಪಯೋಗವಾಗುವಂತೆ ಕಾಣುತ್ತಿಲ್ಲ. ಅವರಿಂದ ನಮಗೇನೂ ಲಾಭವಿಲ್ಲ., ನಮ್ಮಿಂದ ಅವರಿಗೆ ಏನಾದರೂ ಲಾಭ ಆದರೂ ಆಗಬಹುದು .ಹಾಗಂತಾ ಖಂಡಿತಾ ಹೇಳಲಾರೆ .  
’ಆರ್‌ಟಿಇ ನಿಜಕ್ಕೂ ಒಳ್ಳೆಯದೇ. ಕಡೆ ಪಕ್ಷ ಈ ಮಕ್ಕಳು  ಸ್ವಲ್ಪವಾದರೂ ಕಲಿಯ ಬಹುದು ಇಲ್ಲದೇ ಹೋದರೆ ಇವರು ಮೊದಲಂತೆ ದೊಡ್ಡಿಯಲ್ಲಿ ಬೆಳೆಯಬೇಕಾಗುತ್ತಿತ್ತು’.
’ಈ ಮಕ್ಕಳಿಗೆ ಏನೂ ಗೊತ್ತಿಲ್ಲದಿರುವುದರಿಂದ ಮತ್ತು ಗಲೀಜಾಗಿರುವುದರಿಂದ ಇವರನ್ನು ಸುಧಾರಿಸುವುದು ನಿಜಕ್ಕೂ ಬಹಳ ಕಷ್ಟ’.

ತರಗತಿ ಯಲ್ಲಿ ಒಂದೇ ಬಗೆಯ ವಿದ್ಯಾರ್ಥಿಗಳು: ಕೆಲವು ಶಾಲೆಗಳು, ತರಗತಿಗಳಲ್ಲಿ ಒಂದೇ ತರಹದ ವಿದ್ಯಾರ್ಥಿಗಳಿರುವಂತೆ ನೋಡಿಕೊಳ್ಳಲು ತಮ್ಮ ಶಾಲೆಗೆ  ಈಗಾಗಲೇ ಆಯ್ಕೆಯಾದ ಮತ್ತು ಪ್ರವೇಶ ದೊರಕಿಸಿ ಕೊಂಡಿರುವ ವಿದ್ಯಾರ್ಥಿ ಗಳಿಗೆ  ಆರ್‌ಟಿಇ ಅಡಿಯಲ್ಲಿ ’ವಿದ್ಯಾರ್ಥಿವೇತನ’ಕ್ಕೆ ’ಅರ್ಜಿ’ ಸಲ್ಲಿಸುವಂತೆ ಪ್ರೋತ್ಸಾಹಿಸಿದ್ದಾರೆ. ಇಂತಹ ಮಕ್ಕಳ ತಂದೆತಾಯಿಗಳನ್ನು  ಕರೆಯಿಸಿ ಮಾತನಾಡಿ ಆರ್ ಟಿ ಇ ಮೂಲಕ ಸೇರಿಕೊಳ್ಳಲು ಬೇಕಾದ ಅರ್ಹತೆ ಮತ್ತು ಪ್ರವೇಶದ ಅವಶ್ಯಕತೆಗಳನ್ನು ’ಪೂರೈಸಲು’ ಕೋರಿರುತ್ತಾರೆ. ಇಂತಹ ಶಾಲೆಗಳು ತಮ್ಮಲ್ಲಿರುವ ಸೀಟುಗಳ ಸಂಖ್ಯೆಯಷ್ಟೇ ಅರ್ಜಿಗಳು ಬಂದಿವೆ  ಎಂದು ಘೋಷಿಸಿರುತ್ತಾರೆ ಮತ್ತು ಆ ಮೂಲಕ ಈಗಾಗಲೇ ಮಾಡಿಕೊಂಡಿರುವ  ಪ್ರವೇಶಗಳು ಯಥಾಸ್ಥಿತಿಯಲ್ಲಿರುವಂತೆ ನೋಡಿಕೊಂಡಿರುತ್ತಾರೆ. ನಾವು ಇದರ ಅನುಷ್ಠಾನದ ಮೊದಲ ವರ್ಷದ ಅಧ್ಯಯನವನ್ನು ಮಾಡಿದ್ದೇವೆ ಎಂದು ತಿಳಿಸಿದಾಗ  ಮತ್ತು ಸಾಕಷ್ಟು ಆರ್‌ಟಿಇ ಅರ್ಜಿಗಳು ಬಂದಿರದ ಕಾರಣ ಮತ್ತು ನಮ್ಮ ಶಾಲೆಗಳು ಕಾನೂನಿನ ಬಾಧ್ಯತೆ ಪಾಲಿಸಿಲ್ಲ ಎಂದಾಗಬಾರದೆಂದು ತಾವು ಈ ವಿಧಾನ  ಅನುಸರಿಸಬೇಕಾಗಿ ಬಂತು ಎಂಬುದನ್ನು  ಇಂಥ ಕೆಲವು ಶಾಲೆಗಳು ಒಪ್ಪಿಕೊಂಡವು
ಸಮಾವೇಶನಕ್ಕೆ ಕ್ರಮಗಳು: ನಮ್ಮ ಅಧ್ಯಯನದ ಪ್ರಕಾರ ಸಮಾವೇಶನವನ್ನು ಯಾರ‍್ಯಾರನ್ನೋ ನಮ್ಮ ಶಾಲೆಗೆ ಸೇರಿಸಿಕೊಳ್ಳ ಬೇಕಾದ ಒಂದು ತಲೆನೋವು ಎಂಬಂತೆ ನೋಡಲಾಗುತ್ತಿದೆ  ಹಾಗೆಯೇ ಆರ್‌ಟಿಇ ನಿಯಮವನ್ನು ಅನ್ಯಥಾ ಅವರಿಗೆ ಕೈಗೆಟುಕದಂತಹ ಖಾಸಗಿ ಶಾಲೆಗಳಲ್ಲಿ ಸೇರಿಕೊಳ್ಳಲು ಬಡ ಮಕ್ಕಳಿಗೆ ಮಾಡುತ್ತಿರುವ ಸಹಾಯ  ಎಂದು ಪರಿಗಣಿಸಲಾಗುತ್ತಿದೆ. ಆದರೆ ಈ ಯಾವ ಶ್ರೀಮಂತ ಮಕ್ಕಳ ಖಾಸಗಿ ಶಾಲೆಗಳು ತಮ್ಮಲ್ಲಿ ಈಗಾಗಲೇ ಇರುವ ಏಕರೂಪದ ತರಗತಿ ಪದ್ಧತಿಗೆ ಸಾಮಾಜಿಕವಾಗಿ ವೈವಿಧ್ಯಮಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡರೆ ಬದಲಾವಣೆ ತರುವ ಸಾಮರ್ಥ್ಯ ವಿದೆ ಎಂಬುದು ಒಪ್ಪಿಗೆಯೇ ಆಗಿಲ್ಲ.  ನಿರೀಕ್ಷೆಯಂತೆ, ನಾವು ಸಮೀಕ್ಷೆ ನಡೆಸಿದ ಬಹಳಷ್ಟು ಶಾಲೆಗಳು ಕೆಲವು ಶಾಲೆಗಳು ಮಕ್ಕಳ ಸಮಾವೇಶನಕ್ಕೆ  ಅನುಕೂಲಕರ  ನಿರ್ದಿಷ್ಟ ಕ್ರಮಗಳನ್ನು ಕೈಗೊಂಡಿರಲಿಲ್ಲ  ಮತ್ತು ತೆಗೆದುಕೊಂಡಿದ್ದರೂ   ಸಮಗ್ರ ಮತ್ತು ಗಣನೀಯವಾದ ಕ್ರಮಗಳನ್ನು ತೆಗೆದುಕೊಳ್ಳದೇ ಅಲ್ಪ ಸ್ವಲ್ಪ ಅಥವಾ ನಾಮಕಾವಾಸ್ತೆ ಕ್ರಮಗಳನ್ನು ತೆಗೆದುಕೊಂಡಿದ್ದವು. ತೆಗೆದುಕೊಳ್ಳ ಬೇಕಾದ ಕೆಲವು ಸಮಗ್ರ ಮತ್ತು ಗಣನೀಯ ಕ್ರಮಗಳು ಹೀಗಿವೆ : ಶೇಕಡ ೨೫ರಷ್ಟು ಅವಕಾಶದಲ್ಲಿ ದಾಖಲಾದ ಮಕ್ಕಳ ಗುರುತನ್ನು ಗೌಪ್ಯವಾಗಿಡುವುದು,  ಶಾಲಾ ಸಮಯದ ನಂತರ ಈ ಮಕ್ಕಳಿಗೆ ಪೂರಕ ತರಗತಿಗಳನ್ನು ಒದಗಿಸುವುದು ಮತ್ತು ಈ ಮಕ್ಕಳ ಪೋಷಕರಿಗೆ ಪೌಷ್ಟಿಕಾಹಾರದ ಬಗ್ಗೆ ಕಾರ್ಯಾಗಾರಗಳ ಸಂಘಟನೆ. ಆದರೆ,
ಯಾವ ಶಿಕ್ಷಕರಿಗೂ, ಆರ್‌ಟಿಇಯ  ಸಂಬಂಧಪಟ್ಟ ನಿಯಮUಳು  ಗೊತ್ತಿರಲಿಲ್ಲ. ತರಗತಿಗಳಲ್ಲಿ ವಿವಿಧ ರೀತಿಯ ವಿದ್ಯಾರ್ಥಿಗಳು ಇರುವಾಗ ಅದನ್ನು ನಿಭಾಯಿಸುವ ಬಗ್ಗೆ ಸರ್ಕಾರ ಅಥವಾ ಶಾಲೆಯ ಆಡಳಿತ ವರ್ಗದಿಂದ  ಅವರು ತರಬೇತಿ ಪಡೆದಿರುವುದಿಲ್ಲ  ಅಥವಾ ಅಭಿಮುಖ ತರಬೇತಿ ಪಡೆದಿರುವುದಿಲ್ಲ . ಈ ಅವಕಾಶದಿಂದ ಶಾಲೆಗೆ ಪ್ರವೇಶ ಪಡೆದ ಮಕ್ಕಳ ಪೋಷಕರಿಗೂ ಅವರ ಅಧಿಕಾರಗಳ ಸ್ವರೂಪದ ಬಗ್ಗೆ ಸರಿಯಾದ ಮಾಹಿತಿಇರಲಿಲ್ಲ ಎದ್ದು ಕಾಣುತ್ತಿತ್ತು. ಪೋಷಕರು ಮತ್ತು ಶಿಕ್ಷಕರ ಸಂಘಗಳಲ್ಲಿ ಪೋಷಕರು ಅಷ್ಟೇನೂ ಭಾಗವಹಿಸುತ್ತಿರಲಿಲ್ಲವೆಂದು ಹಲವು ಶಾಲೆಗಳು ವರದಿ ಮಾಡಿದವು.

ಮೇಲ್ವಿಚಾರಣೆ : ಮಾಧ್ಯಮ ಪ್ರಚಾರ ಮತ್ತು ಸಾರ್ವಜನಿಕ ಸಂಸ್ಥೆಗಳು ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮಗಳಿಂದ, ಕೆಲವು ಪೋಷಕರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗಕ್ಕೆ ಶಾಲೆಗಳು ದಾಖಲಾತಿ ಅರ್ಜಿಗಳನ್ನು ನೀಡುತ್ತಿಲ್ಲ ಎಂದು ಮತ್ತು ಅಧಿಕ ಶುಲ್ಕವನ್ನು ತೆಗೆದುಕೊಳ್ಳುತ್ತಿದ್ದಾರೆಂದು  ದೂರನ್ನು ಸಲ್ಲಿಸಿದರು. ಆಯೋಗವು ಈ ವಿಚಾರಗಳನ್ನು ಇಲಾಖೆಯ ಗಮನಕ್ಕೆ ತರುವುದರ ಜೊತೆಗೆ ಬಹಿರಂಗ ಅಹವಾಲು ಕೇಳಿಕೆ ಮೂಲಕ ಶಿಫಾರಸುಗನ್ನು ಮಾಡಿ  ಬಗೆ ಹರಿಸುತ್ತದೆ. ಆದರೆ ಸಮಾವೇಶನವನ್ನು ಪ್ರೋತ್ಸಾಹಿಸಲು ಸರ್ಕಾರಕ್ಕೆ ಯಾವುದೇ ವಿಶಾಲ ಕಾರ್ಯ ನೀತಿ ಶಿಫಾರಸುಗಳನ್ನು ಮಾಡಿರುವುದಿಲ್ಲ.  

ಮುಕ್ತಾಯ / ಸಾರಾಂಶ
ಆರ್‌ಟಿಇ ಅನುಷ್ಠಾನ ಮತ್ತು ಶೇಕಡ ೨೫ರಷ್ಟು  ಅವಕಾಶ ದ ಅನ್ವಯ  ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಖಾಸಗಿ ಶಾಲೆಗಳ ಆಡಳಿತ ವರ್ಗದವರು  ಮಾಡುತ್ತಿರುವ  ವಾದವಿವಾದಗಳನ್ನು ಮೊದಲು ಅವರು  ತಮ್ಮ ಶಾಲೆಗಳನ್ನು ಈ ನಿಯಮಾನುಸಾರ ತೆರೆದಿರಿಸಿ, ಪ್ರವೇಶಗಳನ್ನು ಮಾಡಿಕೊಳ್ಳುವಂತೆ  ಮಾಡಲು ಸರಿದೂಗಿಸುತ್ತಿರುವುದರಿಂದ ಕಾನೂನು ತಜ್ಞರು ಉದ್ದೇಶಿಸಿದ ಸಮಾವೇಶನ ಸಾಧಿಸುವ ದೊಡ್ಡ ಗುರಿಯು ಇನ್ನೂ ದೂರದಲ್ಲಿಯೇ ಉಳಿದಿದೆ.  ಶಾಲೆಯ ಪ್ರವೇಶ ಮೊದಲ ಹೆಜ್ಜೆಯಾದರೂ,ಇದು  ಸಮಾವೇಶನಕ್ಕೆ  ಬದಲು ವ್ಯವಸ್ಥೆಯಾಗಲಾರದು  ಏಕೆಂದರೆ ಸಮಾವೇಶನ  ಸಾಧಿಸಲು  , ಶಾಲೆಗಳ ರಚನೆ ಮತ್ತು ಕಲಿಸುವ ವಿಧಾನಗಳಲ್ಲಿ  ಸಾಕಷ್ಟು ಬದಲಾವಣೆಗಳು ಆಗಬೇಕಾಗಿದೆ. ರಾಜ್ಯ ಸರ್ಕಾರ ಈ ಕಾನೂನು ಅವಕಾಶಗಳನ್ನು ಜಾರಿಗೆ ತರುವ ತಮ್ಮ ಕಾರ್ಯವಿಧಾನವನ್ನು , ಹೆಚ್ಚು ಸುಲಭವಾಗಿಸಬೇಕಾದ ಮತ್ತು ಬಲಪಡಿಸಬೇಕಾದ ಅವಶ್ಯಕತೆ ಇದೆ , ಹಾಗೆಯೇ ಅದು ಸುಲಭ ಗಮ್ಯ ಪಾರದರ್ಶಕ ಮತ್ತು ಪ್ರತಿ ಸ್ತರದಲ್ಲೂ ಸಾಮಾಜಿಕ ಪರಿಶೋಧನೆಗೆ ಮುಕ್ತವಾಗಿಸಬೇಕಾಗಿದೆ.

೧ ೨೦೧೨ ರ ೬ ಎಸ್‌ಸಿಸಿಐ ನೋಡಿರಿ
೨ ಪ್ರಮತಿ ಎಜುಕೇಷನಲ್ ಮತ್ತು ಕಲ್ಚರಲ್ ಟ್ರಸ್ಟ್ ಮತ್ತು ಇತರರು ವಿರುದ್ಧ ಭಾರತ ಸರ್ಕಾರ ಮತ್ತಿತರರು (ರಿಟ್ ಅರ್ಜಿ (ಸಿ) ೨೦೧೨ರ ನಂ ೪೧೬).
೩  ಈ ಅಧ್ಯಯನವನ್ನು ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯ ಮತ್ತು ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ಗಳು ಆಕ್ಸ್‌ಫಾಮ್‌ನ ಸೆಂಟರ್ ಫಾರ್ ಸೋಶಿಯಲ್ ಈಕ್ವಿಟಿ ಆಂಡ್ ಇನಕ್ಲೂಷನ್‌ನ ಸಹಯೋಗದೊಂದಿಗೆ ನಡೆಸಿದವು. ಸಂಪೂರ್ಣ ವರದಿಗಾಗಿ ನೋಡಿ:

http://www.oxfamindia.org/sites/default/files/wp-inclusion-of-marginalised-children-in-private-unaided-schools-190314-en.pdf

ಅರ್ಚನ ಮೆಹೆಂದಳೆಯವರು ಮುಂಬೈನ ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸ್ಕೂಲ್ ಆಫ್ ಎಜುಕೇಷನ್‌ನಲ್ಲಿ ಅಧ್ಯಾಪಕರಾಗಿದ್ದಾರೆ. ಅವರು ಮಕ್ಕಳ ಹಕ್ಕು, ಶಿಕ್ಷಣ ಮತ್ತು ಅಸಮರ್ಥತೆ  ಕುರಿತು ಕೆಲಸ ಮಾಡುತ್ತಿದ್ದಾರೆ. ಅವರನ್ನು ನೀವು  archana.mehendale@tiss.edu ನಲ್ಲಿ ಸಂಪರ್ಕಿಸಬಹುದು.
ರಾಹುಲ್ ಮುಖ್ಯೋಪಾಧ್ಯಾಯಅವರು ಬೆಂಗಳೂರಿನ ಅಜೀಂ ಪ್ರೇಂಜೀ ವಿಶ್ವವಿದ್ಯಾನಿಲಯದ ಸದಸ್ಯರಾಗಿದ್ದಾರೆ. ಅವರ ಆಸಕ್ತಿಯ ವಿಷಯಗಳು ಶಿಕ್ಷಣ ಸಮಾಜಶಾಸ್ತ್ರ, ಶಿಕ್ಷಣ ನೀತಿ ಮತ್ತು ಸೋಶಿಯಾಲಜಿ ಆಫ್ ಆರ್ಗನೈಸೇಷನ್. ಅವರನ್ನು ನೀವು rahul.mukhopadhyay@apu.edu.in ನಲ್ಲಿ ಸಂಪರ್ಕಿಸಬಹುದು.

 

18465 ನೊಂದಾಯಿತ ಬಳಕೆದಾರರು
7225 ಸಂಪನ್ಮೂಲಗಳು