ತರಗತಿಗಳಲ್ಲಿ ಚಿಟ್ಟೆಗಳ ಪಾಠ

Resource Info

ಮೂಲ ಮಾಹಿತಿ

ಪ್ರಾಚೀನ ಕಾಲದಿಂದ ಹಿಡಿದು ಇಂದಿನ ಆಧುನಿಕತೆಯವರೆಗೆ ಚಿಟ್ಟೆಗಳು ಮಾನವ ಮನಸ್ಸಿನ ಮೇಲೆ ಅಪಾರ ಪ್ರಭಾವವನ್ನು ಬೀರಿವೆ. ಒಂದು ಕಡೆ, ಆಜ್‌ಟೆಕ್ ಕ್ಯಾಲೆಂಡರ್‌ನಲ್ಲಿ ಇವುಗಳು ಹಿತವಾಗಿ ಲಾಲಿ ಹಾಡಿ ಸೊಗಸಾದ ಕನಸುಗಳ ಮೂಲಕ ನಿಮ್ಮನ್ನು ಶಾಂತ ನಿದ್ದೆಗೆ ಒಯ್ಯುವ ರಕ್ಷಕ ದೇವತೆಗಳು. ಇನ್ನೊಂದೆಡೆ, ಚಿಟ್ಟೆಗಳು ವೈಜ್ಞಾನಿಕ ಮತ್ತು (ನ್ಯಾನೋ-) ತಂತ್ರಜ್ಞಾನ ಸಂಶೋಧನೆಗೆ ಮೂಲವಾಗಿ, ಬೆಳಕನ್ನು ಹೊರಸೂಸುವ ಡಯೋಡ್ ಅಥವಾ ವಿಷರಹಿತ ಬಣ್ಣಗಳ ತಯಾರಿಕೆಯಲ್ಲಿ ಸಹಕಾರಿಯಾಗಿವ. ಹೀಗೆ ಶತಮಾನಗಳಿಂದಲೂ, ಮಾನವನೊಂದಿಗೆ ಚಿಟ್ಟೆಗಳು ಅಕ್ಕರೆಯ ಸಂಬಂಧವನ್ನು ಹೊಂದಿವೆ. ಅವುಗಳ ಅಂದ ಮತ್ತು ಬಣ್ಣ ಕವಿಗಳಿಗೆ ಮತ್ತು ಚಿತ್ರ ಕಲಾವಿದರಿಗೆ ಸ್ಫೂರ್ತಿಯಾಗಿವೆ.

ಕಾಲಾವಧಿ: 
(ಇಡೀ ದಿನ)
ಪೀಠಿಕೆ: 

ಪ್ರಾಚೀನ ಕಾಲದಿಂದ ಹಿಡಿದು ಇಂದಿನ ಆಧುನಿಕತೆಯವರೆಗೆ ಚಿಟ್ಟೆಗಳು ಮಾನವ ಮನಸ್ಸಿನ ಮೇಲೆ ಅಪಾರ ಪ್ರಭಾವವನ್ನು ಬೀರಿವೆ. ಒಂದು ಕಡೆ, ಆಜ್‌ಟೆಕ್ ಕ್ಯಾಲೆಂಡರ್‌ನಲ್ಲಿ ಇವುಗಳು ಹಿತವಾಗಿ ಲಾಲಿ ಹಾಡಿ ಸೊಗಸಾದ ಕನಸುಗಳ ಮೂಲಕ ನಿಮ್ಮನ್ನು ಶಾಂತ ನಿದ್ದೆಗೆ ಒಯ್ಯುವ ರಕ್ಷಕ ದೇವತೆಗಳು. ಇನ್ನೊಂದೆಡೆ, ಚಿಟ್ಟೆಗಳು ವೈಜ್ಞಾನಿಕ ಮತ್ತು (ನ್ಯಾನೋ-) ತಂತ್ರಜ್ಞಾನ ಸಂಶೋಧನೆಗೆ ಮೂಲವಾಗಿ, ಬೆಳಕನ್ನು ಹೊರಸೂಸುವ ಡಯೋಡ್ ಅಥವಾ ವಿಷರಹಿತ ಬಣ್ಣಗಳ ತಯಾರಿಕೆಯಲ್ಲಿ ಸಹಕಾರಿಯಾಗಿವ. ಹೀಗೆ ಶತಮಾನಗಳಿಂದಲೂ, ಮಾನವನೊಂದಿಗೆ ಚಿಟ್ಟೆಗಳು ಅಕ್ಕರೆಯ ಸಂಬಂಧವನ್ನು ಹೊಂದಿವೆ. ಅವುಗಳ ಅಂದ ಮತ್ತು ಬಣ್ಣ ಕವಿಗಳಿಗೆ ಮತ್ತು ಚಿತ್ರ ಕಲಾವಿದರಿಗೆ ಸ್ಫೂರ್ತಿಯಾಗಿವೆ.

 

ಚಟುವಟಿಕೆ ಹಂತಗಳು: 

ಕ್ಷೇತ್ರ ಪ್ರವಾಸಗಳಿಂದ ನಾವು ಚಿಟ್ಟೆಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡಬಹುದು. ಕೆಲವು ಅಧ್ಯಯನಗಳನ್ನು ನಾವು ತರಗತಿಗಳಲ್ಲೇ ಮಾಡಬಹುದು.

೧.    ತರಗತಿಗಳಲ್ಲಿ ಚಿಟ್ಟೆಗಳ ಸಂರಕ್ಷಣಾಲಯ
ತರಗತಿಯೊಳಗೇ ಚಿಟ್ಟೆಗಳ ವೀಕ್ಷಣೆ ಮಾಡಿರಿ: ನೀವು ಸ್ವಲ್ಪ ಸಮಯ ವಿನಿಯೋಗಿದಸಿ ಪ್ರಯತ್ನಪಟ್ಟರೆ ಚಿಟ್ಟೆಗಳನ್ನು ನಿಮ್ಮ ತರಗತಿಗಳಿಗೇ ಆಹ್ವಾನಿಸಬಹುದು. ಇದೇನೂ ಕಷ್ಟವಲ್ಲ. ನೀವು ನಿಮ್ಮ ತರಗತಿಗಳಲ್ಲಿ ಗಿಡಗಳನ್ನು ಕುಂಡಗಳಲ್ಲಿ ಬೆಳೆಸಬೇಕಾಗುತ್ತದೆ. ಈ ಕೆಲಸದಲ್ಲಿ ವಿದ್ಯಾರ್ಥಿಗಳು ನಿಜಕ್ಕೂ ಉತ್ಸಾಹ ತೋರಬಲ್ಲರು  ಮತ್ತು ಅವುಗಳ ಪೋಷಣೆಯನ್ನು ಮಾಡಬಲ್ಲರು .    
ಹತ್ತಿರವೇ ಇರುವ ಯಾವುದಾದದರೂ ಗಿಡಗಳ ಸಸಿ ತೋಟಕ್ಕೆ  ಭೇಟಿ ಕೊಟ್ಟು ಅಗತ್ಯ ಸಾಮಗ್ರಿಗಳಾದ ಹೂ ಕುಂಡ, ಗೊಬ್ಬರ ಮತ್ತು ಸಸಿಗಳನ್ನು ಖರೀದಿಸಿ. ಕ್ಯಾಲಂಚೋಗಳು ಸಕ್ಯುಲೆಂಟ್ ಅಂದರೆ ನೀರಿನಿಂದ ಕೂಡಿದ ತಿರುಳಿನ ಎಲೆಗಳ  ಸಸ್ಯಗಳಾಗಿದ್ದು ಒಮ್ಮೆ ಅವುಗಳನ್ನು ಕುಂಡಗಳಲ್ಲಿ ನೆಟ್ಟರೆ ನಂತರ ಅಷ್ಟಾಗಿ ನೋಡಿಕೊಳ್ಳುವ ಅಗತ್ಯವಿರುವುದಿಲ್ಲ. ಅದಕ್ಕೆ ಕೇವಲ ಸೂರ್ಯನ ಬೆಳಕು, ಉಷ್ಣತೆ ಮತ್ತು ಆಗಾಗ್ಗೆ ನೀರಿನ ಅಗತ್ಯವಿದೆಯಷ್ಟೆ. ಸಾಮಾನ್ಯವಾಗಿ ಕಾಣಸಿಗುವ ರೆಡ್ ಪೈರಟ್‌ಗಳಿಗೆ ಕ್ಯಾಲಂಚೋ ಗಿಡಗಳೇ ಆಹಾರವಾಗಿದೆ. ಅವು ಬ್ರಯೋಫಿಲ್ಲಮ್‌ಗಳೂ ಆಗಿರುವುದರಿಂದ ಜೊತೆಜೊತೆಗೆ ನೀವು ವೆಜೆಟೇಟೀವ್ ಪ್ರೋಪಗೇಷನ್ (ಸಸ್ಯಗಳ ಅಂಗಗಳಿಂದಲೇ ಹೊಸ ಸಸ್ಯಗಳ ಉತ್ಪತ್ತಿ) ಬಗ್ಗೆಯೂ ತಿಳಿದುಕೊಳ್ಳಬಹುದು. ನೀವು ನರ್ಸರಿಗೆ ಹೋದಾಗ ನೀರಿಯಂ (ಕಣಗಿಲೆ) ಗಿಡದ ಆಯ್ಕೆಯನ್ನು ಮರೆಯಬೇಡಿ ಮತ್ತು ಅದನ್ನು ದೊಡ್ಡ ಕುಂಡದಲ್ಲಿ ನೆಡಿ. ಇದೂ ಸಹ ನಿಮ್ಮ ತರಗತಿಗೆ ಹೊಂದಿಕೊಳ್ಳುತ್ತದೆ. ಕಣಗಿಲೆ ಗಿಡವು ಟೈಗರ್ ಚಿಟ್ಟೆಗಳಾದ ಗ್ಲಾಸೀ ಬ್ಲೂ ಟೈಗರ್ ಮತ್ತು ಪ್ಲೇನ್ ಟೈಗರ್‌ಗಳನ್ನು ಆಕರ್ಷಿಸುತ್ತದೆ. ನಿಮಗೆ ಇನ್ನೂ ಹೆಚ್ಚು ಗಿಡಗಳ ಅವಶ್ಯಕತೆಯಿದ್ದಲ್ಲಿ ರಸ್ತೆಗಳ ಪಕ್ಕ ಮತ್ತು ಬಂಜರು ಭೂಮಿಯಲ್ಲಿ ಬೆಳೆಯುವ ಟ್ರೈಡಾಕ್ಸ್ ಪ್ರೊಕ್ಯುಂಬೆನ್ಸ್ (ಗಬ್ಬು ಸಣ್ಣ ಶಾವಂತಿ) ಮತ್ತು ಕ್ರೋಟಲೇರಿಯಾ (ಸೆಣಬಿನ ಪ್ರಭೇದ) ಗಿಡಗಳನ್ನು ಬೆಳೆಸಬಹುದು. ಇದರ ಜೊತೆಗೆ ಸ್ವಾಲೋಟೇಲ್‌ಗಳ ಅತ್ಯಂತ ಪ್ರೀತಿಯ ಆಹಾರವಾದ ಬ್ಯಾಸ್ಕೆಟ್‌ನಂತಹ ಹಣ್ಣುಗಳನ್ನು ಹೊಂದಿರುವ ಅರಿಸ್ಟೊಲೋಕಿಯಾ (ಈಶ್ವರೀಬಳ್ಳಿ) ಗಿಡಗಳನ್ನೂ ಬೆಳೆಸಬಹುದು. ಒಂದು ತಿಂಗಳ ಒಳಗೆ ಅತಿಥಿಗಳಾಗಿ ಚಿಟ್ಟೆ ಬರದಿದ್ದಲ್ಲಿ ನೀವು ನಿಮ್ಮ ವಿದ್ಯಾರ್ಥಿಗಳನ್ನು ಕರೆದುಕೊಂಡು ಕ್ಯಾಟರ್ಪಿಲ್ಲರಗಳ ಹುಡುಕಾಟವನ್ನು ಪ್ರಾರಂಭಿಸಬೇಕಾಗುತ್ತದೆ.

ಚಿತ್ರ ೧೪.ಕ್ಯಾಟರ್ಪಿಲ್ಲರ್ಗಳ ಸಾಮಾನ್ಯ ಆಹಾರ
ಎ. ಕ್ರೋಟಲೇರಿಯಾ (ಸೆಣಬಿನ ಪ್ರಭೇದ)
ಬಿ. ಕ್ಯಾಲೊಟ್ರಾಪಿಸ್ ಪ್ರಭೇದ (ಎಕ್ಕ)
ಸಿ. ನೀರಿಯಂ (ಕಣಗಿಲೆ)
ಡಿ. ಅರಿಸ್ಟೊಲೋಕಿಯಾ (ಈಶ್ವರೀಬಳ್ಳಿ)
ಇ. ಟ್ರೈಡಾಕ್ಸ್ ಪ್ರೊಕ್ಯುಂಬೆನ್ಸ್ (ಗಬ್ಬು ಸಣ್ಣ ಶಾವಂತಿ)

೨    ಕ್ಯಾಟರ್ಪಿಲ್ಲರ್‌ನ ಹುಡುಕಾಟ
ಚಿಟ್ಟೆಗಳ ಸಂರಕ್ಷಣೆಯನ್ನು ಮಳೆಗಾಲಕ್ಕಿಂತ ಒಂದೆರಡು ವಾರ ಮುಂಚೆ ಪ್ರಾರಂಭಿಸುವುದು ಸೂಕ್ತ. ಕ್ಯಾಟರ್ಪಿಲ್ಲರ್‌ಗಳ ಹುಡುಕಾಟವನ್ನು ನೀವು ಯಾವಾಗ ಆರಂಭಿಸಿದರೂ ಮಳೆಗಾಲದಲ್ಲಿ ಮಾತ್ರ ನೀವು ಖಚಿತವಾಗಿ ಅದನ್ನು ಕಾಣುತ್ತೀರಿ. ಎಲೆಗಳ ಕೆಳಗೆ ಕ್ಯಾಟರ್ಪಿಲ್ಲರ್ ಹುಡುಕುವುದನ್ನು ಮರೆಯಬೇಡಿ. ನಿಮ್ಮ ಶಾಲೆಯಲ್ಲಿ ಉದ್ಯಾನವೇನಾದರೂ ಇದ್ದರೆ ಅಲ್ಲೇ ನೀವು ಕ್ಯಾಟರ್ಪಿಲ್ಲರ್ ಹುಡುಕಬಹುದು. ಅದೃಷ್ಟವಿದ್ದರೆ ನಿಮಗೆ ಚಿಟ್ಟೆಯ ಮೊಟ್ಟೆಗಳೂ ಸಿಗಬಹುದು. ಎಕ್ಕ ಅಥವಾ ಕರಿಬೇವಿನ ಗಿಡದ ಮೇಲಿರುವ ಕ್ಯಾಟರ್ಪಿಲ್ಲರ್ ಹುಡುಕಿ ಏಕೆಂದರೆ ಇದು ತನ್ನ ಆಹಾರವನ್ನು ಕಣಗಿಲೆ ಗಿಡಕ್ಕೆ ಎಂದಿಗೂ ಬದಲಿಸುವುದಿಲ್ಲ.  

)ಚಿಟ್ಟೆಗಳಿಗಾಗಿ ಕ್ಯಾಟರ್ಪಿಲ್ಲರ್‌ಗಳ ಪಾಲನೆ (ಶಾಲೆಗಳಲ್ಲಿ ಇದು ಸಾಮಾನ್ಯವಾದರೂ ನಾನು ಅದನ್ನು ಸಮಗ್ರವಾಗಿಸಲು ಪ್ರಯತ್ನಿಸಿದ್ದೇನೆ)
I)    ನಾನು ಈ ಹಿಂದೆಯೇ ಹೇಳಿರುವ ಗಿಡಗಳಲ್ಲದೇ ಬೇರೆ ಗಿಡಗಳಿಂದ ನೀವು ಕ್ಯಾಟರ್ಪಿಲ್ಲರ್ ಸಂಗ್ರಹಿದ್ದರೆ ಈ    
    ರೀತಿ ಮಾಡಿ.

ಬೇಕಾಗುವ ಸಾಮಗ್ರಿ: ಕ್ಯಾಟರ್ಪಿಲ್ಲರ್‌ಗಳನ್ನು ಇರಿಸಲು ಗಾಳಿಯಾಡಲು ರಂಧ್ರಗಳಿರುವ ದೊಡ್ಡ್ಡ ಡಬ್ಬ. ಕ್ಯಾಟರ್ಪಿಲ್ಲರ್‌ಗಳನ್ನು ಹಿಡಿಯಲು/ ಮುಟ್ಟಲು ಪ್ಲಾಸ್ಟಿಕ್ ಚೀಲಗಳಿಂದ ಮಾಡಿದ ಗ್ಲವ್ಸ್. ಡಬ್ಬವನ್ನು ಶುಚಿ ಮಾಡಲು ಟಿಶ್ಯು ಪೇಪರ್. ತೂಗುವ ಯಂತ್ರ. ಪ್ರತಿದಿನ ಗಮನಿಸಿದ್ದನ್ನು ದಾಖಲಿಸಲು ಒಂದು ಕೋಷ್ಟಕ ಅಂಕಣ ಗಳಿರುವ ಹಾಳೆ

II)    ನಾನು ಹೇಳಿದ ಗಿಡಗಳಿಂದ ಅಥವಾ ಕಣಗಿಲೆ/ ಓಲಿಯಾಂಡರ್‌ಗಿಡಗಳನ್ನು ತಿನ್ನುವ ಕ್ಯಾಟರ್ಪಿಲ್ಲರ್‌ಗಳನ್ನು ನೀವು ತಂದಿದ್ದರೆ, ನಾನು ಮೇಲೆ ತಿಳಿಸಿರುವ ಯಾವುದೇ ಸಾಮಗ್ರಿಯ ಅವಶ್ಯಕತೆಯಿರುವುದಿಲ್ಲ.

ಇದರೊಂದಿಗೆ ನೀವು ಕೆಲವು ಗಣಿತದ ಪರಿಕಲ್ಪನೆಯನ್ನೂ  ಸಹ ಕಲಿಸಬಹುದು. ಕ್ಯಾಟರ್ಪಿಲ್ಲರನ್ನು ಡಬ್ಬದ ಒಳಗೆ ಅಥವಾ ಗಿಡದ ಮೇಲೆ ಇಡುವ ಮೊದಲು ಅದರ ತೂಕವನ್ನು ಬರೆದುಕೊಳ್ಳಿ. ಡಬ್ಬದಲ್ಲಿರುವ ಎಲೆಗಳ ತೂಕವನ್ನು ತೆಗೆದುಕೊಳ್ಳಿ ಅಂದರೆ ಅದು ದಿನಕ್ಕೆ ಎಷ್ಟು ಎಲೆ ತಿನ್ನುತ್ತದೆ ಎಂದು ತಿಳಿದುಕೊಳ್ಳಬಹುದು. ಎಲೆಗಳು ಬಹಳ ಹಗುರವಾಗಿರುವುದರಿಂದ ಅದನ್ನು ಹೇಗೆ ತೂಕ ಮಾಡಬೇಕು ಎನ್ನುವುದನ್ನು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ. ಅತ್ಯಾಧುನಿಕ ಎಲೆಕ್ಟ್ರಾನಿಕ್ ತೂಕ ಯಂತ್ರ ಇಲ್ಲದೆ  ಹೇಗೆ ಮಾಡಬಹುದು ಚರ್ಚಿಸಿ.
(ಸುಳಿವು: ಯಾವುದಾದರೂ ಭಾರವಿರುವ ವಸ್ತವಿನೊಂದಿಗೆ ಎಲೆಗಳ ತೂಕ ಮಾಡಿ ನಂತರ ಭಾರವಾದ ವಸ್ತುವಿನ ತೂಕವನ್ನು ಕಳೆದರೆ ಎಲೆಗಳ ತೂಕವನ್ನು ಕಂಡುಹಿಡಿಯಬಹುದು).
ಕ್ಯಾಟರ್ಪಿಲ್ಲರ್‌ನ ಬಣ್ಣ, ಉದ್ದ ಸೇರಿದಂತೆ ಎಷ್ಟು ಸಾಧ್ಯವೋ ಅಷ್ಟೂ ಗುಣಲಕ್ಷಣಗಳನ್ನು ಬರೆದಿಟ್ಟುಕೊಳ್ಳಿ. ಹೇಗೆ ಕ್ಯಾಟರ್ಪಿಲ್ಲರ್‌ಗಳು ಎಲೆಗಳನ್ನು ಅಗಿದು ತಿನ್ನುತ್ತವೆ ಎನ್ನುವುದನ್ನು ಗಮನಿಸಿ. ತಿನ್ನುವುದರ ಜೊತೆಜೊತೆಗೆ ಅದು ಹಿಕ್ಕೆಯನ್ನೂ ಹೊರಹಾಕುತ್ತವೆ. ನಿಮಗೆ ಆಸಕ್ತಿಯಿದ್ದಲ್ಲಿ ಆ ಹಿಕ್ಕೆಗಳನ್ನೂ ತೂಕಮಾಡಿ. ಇದರಿಂದ ನಿಮಗೆ ಕ್ಯಾಟರ್ಪಿಲ್ಲರ್‌ಗಳು ಎಷ್ಟು ಜೀರ್ಣಿಸಿಕೊಂಡಿವೆ ಮತ್ತು ಎಷ್ಟನ್ನು ಹೊರಹಾಕಿವೆ ಎನ್ನುವುದರ ಬಗ್ಗೆ ಸ್ವಲ್ಪ ಮಾಹಿತಿಯಾದರೂ ಸಿಗುತ್ತದೆ. ಇವೆಲ್ಲಾ ನಿಮಗೆ ಕ್ಯಾಟರ್ಪಿಲ್ಲರ್‌ನ ಆಹಾರದ ಅವಶ್ಯಕತೆಯ ಬಗ್ಗೆ ಸ್ಥೂಲ ಮಾಹಿತಿ ಕೊಡುತ್ತವೆ.

ಕ್ಯಾಟರ್ಪಿಲ್ಲರ್‌ಗಳು ಪೊರೆಹುಳುವಾಗುವ ಮುನ್ನ ಮೂರರಿಂದ ನಾಲ್ಕು ಬಾರಿ ಪೊರೆಯನ್ನು ಕಳಚುತ್ತದೆ. ಇದನ್ನು ಗುರುತು ಮಾಡಿಕೊಳ್ಳಿ. ಕಳಚಿದ ಪೊರೆಯನ್ನು ಸಂಗ್ರಹಿಸಿ ಕೆಲವು ರಾಸಾಯನಿಕ ಪರೀಕ್ಷೆಗಳನ್ನು ಮಾಡಿ- ಉದಾಹರಣೆಗೆ ಕಳಚಿದ ಪೊರೆಗಳಿಂದ ನೀವು ಸ್ಟಾರ್ಚ್ (ಪಿಷ್ಟ), ಶುಗರ್ (ಸಕ್ಕರೆ) ಮತ್ತು ಪ್ರೋಟೀನ್ (ಸಸಾರಜನಕ) ಪರೀಕ್ಷೆಗಳನ್ನು ಮಾಡಬಹುದು.

ಕ್ಯಾಟರ್ಪಿಲ್ಲರ್‌ನ ಹಿಕ್ಕೆಗಳಿಂದಲೂ ನೀವು ಇದೇ ರೀತಿಯ ಪರೀಕ್ಷೆಗಳನ್ನು ಮಾಡಬಹುದು. ಜೊತೆಗೆ ಕೆಲವು ಹಿಕ್ಕೆಗಳಿಂದ ನೀವು ಸಲ್ಫರ್ ಮತ್ತು ಕ್ಲೋರೀನ್ ಇವೆಯೇ ಎಂಬ ಪರೀಕ್ಷೆ ಯನ್ನೂ ಮಾಡಬಹುದು.

ಕ್ಯಾಟರ್ಪಿಲ್ಲರ್‌ನ ಬೆಳವಣಿಗೆ ಮತ್ತು ಅದರಲ್ಲಾಗುವ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಿ. ಅದು ತನ್ನ ಆಹಾರವನ್ನು ಕಡಿಮೆ ಮಾಡಿ ಜಡವಾಗುತ್ತಾ ಬಂದರೆ ಅದು ಪೊರೆಹುಳುವಾಗಲು ಸಿದ್ಧತೆ ನಡೆಸುತ್ತಿದೆ ಎನ್ನುವುದು ಖಚಿತ. ಅಕಸ್ಮಾತ್ ಕ್ಯಾಟರ್ಪಿಲ್ಲರ್ ಡಬ್ಬದಲ್ಲಿದ್ದರೆ ಪೊರೆಹುಳುವಿನ ಆಧಾರಕ್ಕೆ ಒಂದು ದಪ್ಪ ಕಡ್ಡಿಯನ್ನು ನಿಲ್ಲಿಸಿ. ಪೊರೆಹುಳುವಿನಲ್ಲಾಗುವ ಬದಲಾವಣೆಗಳನ್ನು ಗಮನಿಸುತ್ತಿರಿ.

ಈಗ ಹೊರಬರುವುದನ್ನು ಕಾಯುತ್ತಿರಿ. ಅದು ಟೈಗರ್ ಅಥವಾ ಕ್ರೋ ಪ್ರಭೇದವಾಗಿದ್ದರೆ ನೀವು ಕೇವಲ ಒಂದೆರಡು ವಾರವಷ್ಟೇ ಕಾಯಬೇಕಾಗುತ್ತದೆ.

ನೀವು ಈ ಚಟುವಟಿಕೆಯಿಂದ ಏನನ್ನು ಕಲಿಯುತ್ತೀರಿ?
ಅಳತೆ ಮತ್ತು ಅಳತೆಯ ಪ್ರಮಾಣಗಳ ಕುರಿತ ದತ್ತಾಂಶವನ್ನು ಉಪಯೋಗಿಸಿ

ರಾಸಾಯನಿಕ ವಿಶ್ಲೇಷಣೆ

ರೂಪಾಂತರ

ಕ್ಯಾಟರ್ಪಿಲ್ಲರ್‌ನಿಂದ ಹಿಡಿದು ಚಿಟ್ಟೆಯಾಗುವವರೆಗೆ ತನ್ನ ಉಳಿವಿಗಾಗಿ ಅದರ ಆಹಾರದಲ್ಲಾಗುವ ಬದಲಾವಣೆ ಮಹತ್ವಗಳ ಬಗ್ಗೆ ಚರ್ಚಿಸಿ.

೪) ಚಿಟ್ಟೆಗಳ ಹುಡುಕಾಟದಲ್ಲಿ
ನೀವು ಕ್ಯಾಟರ್ಪಿಲ್ಲರ್‌ನ ಹುಡುಕಾಟದ ಜೊತೆಯಲ್ಲೇ ಚಿಟ್ಟೆಗಳನ್ನು ಆಕರ್ಷಿಸುವತ್ತಲೂ ಗಮನ ಕೊಡಬಹುದು. ಚಿಟ್ಟೆಗಳು ಕೇವಲ ಹೂವಿನ ಮಕರಂದವನ್ನಷ್ಟೇ ಅಲ್ಲದೇ, ನಾವು ಈ ಹಿಂದೆ ಹೇಳಿದಂತೆ ಕೊಳೆತ ಪದಾರ್ಥವನ್ನು ತಿನ್ನುತ್ತವೆ. ನೀವು ಕೆಲವು ಸತ್ತ ಮೀನು, ಏಡಿ ಮತ್ತು ಸೀಗಡಿಗಳನ್ನು ಸ್ವಲ್ಪ ಬಿಸಿಲಿರುವ ಸ್ಥಳದಲ್ಲಿ ಇಟ್ಟರೆ- ನೀವು ನೋಡು ನೋಡುತ್ತಿದ್ದಂತೆಯೇ ಸಾಕಷ್ಟು ನಿಂಫಾಲಿಡ್‌ಗಳು ಅದರ ಭಕ್ಷಣೆಗೆ ತಯಾರಾಗುವುದನ್ನು ಕಾಣಬಹುದು. 

ಆಹಾರ ಸೇವಿಸುತ್ತಿರುವ ಚಿಟ್ಟೆಗಳನ್ನು ನೀವು ಸ್ವಲ್ಪ ದೂರದಿಂದ ಗಮನಿಸಿ. ನೀವು ಯಾವುದಾದರೂ ಕಾಡು ಪ್ರದೇಶ ಅಥವಾ ಬೆಟ್ಟ ಗುಡ್ಡಗಳತ್ತ ಹೋದರೆ ಅಲ್ಲಿ ರಾಜ, ನವಾಬ್, ಎರ್ಲ್, ಯೋಮನ್ ಮತ್ತು ಕೆಲವು ಪ್ಯಾಪ್ಲಿನಾಯ್ಡ್‌ಗಳು ಮಾಂಸದ ಸುತ್ತ ಹಾರಾಡುವುದನ್ನು ಕಾಣಬಹುದು. ಅದರ ರೆಕ್ಕೆಯ ಮೇಲೆ ಬೆಳಕು ಬೀಳುವಂತೆ ಹಲವು ಕೋನಗಳನ್ನು ಬದಲಾಯಿಸುತ್ತಾ ನೀವು ಅದನ್ನು ಗಮನಿಸಬೇಕು. ಬೆಳಕು ಬೀಳುತ್ತಿದ್ದಂತೆ ಅದರ ರೆಕ್ಕೆಯ ಬಣ್ಣಗಳು ಹೇಗೆ ತನ್ನ ಛಾಯೆಗಳನ್ನು ಬದಲಾಯಿಸುತ್ತದೆ ಎಂದು ನೀವು ನೋಡಬಹುದು. ನೀವು ಅದರ ಚಿತ್ರ ಮತ್ತು ಟಿಪ್ಪಣಿಗಳನ್ನು ಬರೆದುಕೊಂಡು, ನಂತರ ತರಗತಿಗಳಿಗೆ ಹೋಗಿ ಈ ಲೇಖನದಲ್ಲಿ ನೀಡಿರುವ ಉಲ್ಲೇಖಗಳ ಸಹಾಯದಿಂದ ನಿಮ್ಮ ವೀಕ್ಷಣೆಗಳನ್ನು ಇನ್ನೂ ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.

೫) ಸೂಕ್ಷ್ಮದರ್ಶಕದ ಮೂಲಕ  ಹುರುಪೆ (ಸ್ಕೇಲ್)ಗಳ ವೀಕ್ಷಣೆ
ಇದಕ್ಕಾಗಿ ನಿಮಗೆ ಸತ್ತ ಚಿಟ್ಟೆ ರೆಕ್ಕೆಯ ತುಣುಕೊಂದು ಬೇಕಾಗುತ್ತದೆ. ಅಕಸ್ಮಾತ್ ನಿಮಗೆ ಸತ್ತ ಚಿಟ್ಟೆ ದೊರೆಯದಿದ್ದರೆ, ಬಲೆಯ ಸಹಾಯದಿಂದ ಚಿಟ್ಟೆಯನ್ನು ಹಿಡಿದು, ನಿಧಾನವಾಗಿ ಬ್ರಷ್‌ನಿಂದ ಅದರ ರೆಕ್ಕೆಗಳ ಮೇಲೆ ಕೈಯಾಡಿಸಿ. ನಿಮ್ಮ ಕೈಗಳಿಂದ ಚಿಟ್ಟೆಯನ್ನು ಹಿಡಿಯಬೇಡಿ- ಇದರಿಂದ ನೀವು ಅದರ ರೆಕ್ಕೆಗಳಿಗೆ ತೊಂದರೆ ಮಾಡುತ್ತೀರಿ. ನಿಮ್ಮ ಕೆಲಸವಾದ ಮೇಲೆ ಚಿಟ್ಟೆಯನ್ನು ಬಿಟ್ಟುಬಿಡಿ.

ಒಂದು ಗಾಜಿನ ಸ್ಲೈಡ್ ಮೇಲೆ ಬ್ರಷನ್ನು ಆಡಿಸಿ ಅದರ ಮೇಲೆ ಒಂದು ಹನಿ ಗ್ಲಿಸೆರಿನ್ ಹಾಕಿ. ಅದರ ಮೇಲೆ ಕವರ್ ಸ್ಲಿಪ್ ಹಾಕಿ. ಕವರ್ ಸ್ಲಿಪ್‌ನಿಂದ ಹೊರಬರುವ ಹೆಚುವರಿ ಗ್ಲಿಸರಿನ್ನನ್ನು ಫಿಲ್ಟರ್ ಕಾಗದದಿಂದ ಒರೆಸಿಬಿಡಿ.

ಕಾಂಪೌಂಡ್ ಸೂಕ್ಷ್ಮದರ್ಶಕವನ್ನು ೧೦X ಗೆ ಹೊಂದಿಸಿ. ಅದರ ಪ್ಲಾಟ್‌ಫಾರ್ಮ್ ಮೇಲೆ ಈಗ ನೀವು ಸಿದ್ಧ ಪಡಿಸಿದ ಸ್ಲೈಡನ್ನು ಇಟ್ಟು ಫೋಕಸ್ ಮಾಡಿ. ಅದರಲ್ಲಿ ನಿಮಗೆ ಚಿಟ್ಟೆಯ ಸ್ಕೇಲ್‌ಗಳು ಕಾಣಿಸುತ್ತವೆ.

ಇನ್ನೂ ಹೆಚ್ಚು ಮ್ಯಾಗ್ನಿಫಿಕೇಷನ್‌ನಲ್ಲಿ ಸ್ಲೈಡನ್ನು ವೀಕ್ಷಿಸಿ. ಅದರ ಮೇಲೆ ಬೀಳುವ ಬೆಳಕನ್ನು ಬದಲಾಯಿಸುತ್ತಾ ನೀವು ಅದರೊಂದಿಗೆ ಆಟವಾಡಲೂಬಹುದು. ತರಗತಿಯ ಕಡೆಯಲ್ಲಿ ನೀವು ಅದರ ಹಾರಾಟಕ್ಕೆ ಮತ್ತು ಬಣ್ಣಕ್ಕೆ ರೆಕ್ಕೆಗಳ ಮೇಲಿರುವ ಸ್ಕೇಲ್‌ಗಳ ಪ್ರಾಮುಖ್ಯತೆ,  ಬಗ್ಗೆ ಚರ್ಚಿಸಿ. ಇದರೊಂದಿಗೆ ನೀವು ಬೆಳಕಿನ ತರಂಗಾಂತರ, ಬಣ್ಣ, ಪ್ರತಿಫಲನ ಮತ್ತು ವಕ್ರೀಕರಣದ ಬಗ್ಗೆಯೂ ಚರ್ಚಿಸಬಹುದು.

ಅಕಸ್ಮಾತ್ ನಿಮಗೇನಾದರೂ ಸತ್ತ ಚಿಟ್ಟೆಯ ರೆಕ್ಕೆಯೇನಾದರೂ ಸಿಕ್ಕಿದರೆ ನೀವು ಅದರ ಬಣ್ಣವನ್ನು ಈ ಕೆಳಗಿನ ಯಾವುದಾದರೂ ಚಟುವಟಿಕೆಯ ಮೂಲಕ ಗಮನಿಸಬಹುದು:
೧)    ಅದನ್ನು ಕೈಯಲ್ಲಿ ಹಿಡಿಯುವ ಬದಲು ಚಟುವಟಿಕೆ ೫ರಲ್ಲಿ ಹೇಳಿರುವಂತೆ ಮಾಡಬಹುದು. ಅದನ್ನು ಗಾಜಿನ ಸ್ಲೈಡ್ ಮೇಲೆ ಉದುರಿಸಿ, ಮೇಲ್ಕಂಡಂತೆ ಮಾಡಿ.
೨)    ನಂತರ ಅದನ್ನು ಬಿಸಿಲಿಗೆ ತೆಗೆದುಕೊಂಡು ಹೋಗಿ ಟಿಲ್ಟ್ ಮಾಡಿ. ನಿಮಗೆ ಬಣ್ಣದಲ್ಲೇನಾದರೂ ವ್ಯತ್ಯಾಸ ಕಾಣುತ್ತದೆಯೇ? ನಿಮಗೆ ವರ್ಣವೈವಿಧ್ಯತೆಯೇನಾದರೂ ಕಂಡುಬಂದಿತೇ?

ಸ್ಕೇಲ್‌ಗಳು ಮತ್ತು ಬಣ್ಣ
ಚಿಟ್ಟೆಯೊಂದನ್ನು ನೀವು ಮುಟ್ಟಿದಾಗ ನಿಮ್ಮ ಬೆರಳುಗಳಿಗೆ ಅಂಟಿಕೊಳ್ಳುವ ಧೂಳು ಬೇರೇನೂ ಅಲ್ಲ. ಅದೇ ಸ್ಕೇಲ್‌ಗಳು. ಚಟ್ಟೆಯ ರೆಕ್ಕೆಯ ಮೇಲಿರುವ ಈ ಸ್ಕೇಲ್‌ಗಳೇ ಅದರ ವಿನ್ಯಾಸ ಮತ್ತು ಬಣ್ಣಕ್ಕೆ ಕಾರಣವಾಗಿವೆ.

ಹೇಗೆ? ಎರಡು ವೈವಿಧ್ಯಮಯ ಅಂಶಗಳು ನಿಮಗೆ ಕಾಣುವ ಬಣ್ಣಕ್ಕೆ ಕಾರಣವಾಗಿದೆ- ಒಂದು ಕೇವಲ ’ಸಹಜ’ ಬಣ್ಣಕ್ಕೆ ಕಾರಣವಾದರೆ ಮತ್ತೊಂದು ಅದರ ’ವರ್ಣವೈವಿಧ್ಯತೆ’ಗೆ ಮೆರುಗಿಗೆ ಕಾರಣವಾಗಿದೆ.  ಸರಳ ಕ್ರಿಯೆಗಳಾದ ಬೆಳಕಿನ ಹೀರುವಿಕೆ ಮತ್ತು ಪ್ರತಿಫಲನದಿಂದ ಸಹಜ ಬಣ್ಣ ಉಂಟಾಗುತ್ತದೆ. ಚಿಟ್ಟೆಯ ರೆಕ್ಕೆಗಳಲ್ಲಿರುವ ಪಿಗ್ಮೆಂಟ್‌ಗಳು (ವರ್ಣದ್ರವ್ಯಗಳು) ಬಣ್ಣಗಳನ್ನು ಕೆಲವು ತರಂಗಾಂತರಗಳನ್ನು  ಮಾತ್ರ ಹೀರಿಕೊಂಡು ಉಳಿದುವನ್ನು ಪ್ರತಿಫಲಿಸುತ್ತವೆ. ಇದರಿಂದಲೇ ನಮಗೆ ಹಳದಿ, ಹಸಿರು, ಕೆಂಪು ಮುಂತಾದ ಬಣ್ಣಗಳು ಗೋಚರಿಸುತ್ತವೆ. ಬಹು ಪ್ರತಿಫಲನಗಳಿಂದ ಸ್ಕೇಲ್‌ಗಳ ಮೇಲೆ ಬೀಳುವ ಬೆಳಕಿಗೆ ಅಡೆತಡೆಯಿಂದ ’ವರ್ಣವೈವಿಧ್ಯತೆ’ ಉಂಟಾಗುತ್ತದೆ. ನೀವು ರೆಕ್ಕೆಗಳನ್ನು ಯಾವ ಕೋನದಿಂದ  ನೋಡುತ್ತಿರುವಿರಿ ಎನ್ನುವುದರ ಮೇಲೆ ಈ ವರ್ಣವೈವಿಧ್ಯತೆ ಅವಲಂಬಿತವಾಗಿರುತ್ತದೆ. ಜೊತೆಗೆ ರೆಕ್ಕೆಗಳ ಮೇಲೆ ಸ್ಕೇಲ್‌ಗಳ ಜೋಡಣೆಯ ಕ್ರಮವೂ ಬಣ್ಣಗಳಿಗೆ ಕಾರಣವಾಗಿರುವುದರಿಂದ ಅದನ್ನು ’ಸ್ಟ್ರಕ್ಚರಲ್’ ಬಣ್ಣಗಳೆಂದು ಕರೆಯುತ್ತಾರೆ. ಈ ಎರಡರ ಸಂಯೋಜನೆಯಿಂದಲೂ ಚಿಟ್ಟೆಯ ರೆಕ್ಕೆಗಳು ಬಣ್ಣಗಳನ್ನು ಪಡೆಯಬಹುದು. ಹಳದಿ ಬಣ್ಣವನ್ನು ಪ್ರತಿಫಲನಗೊಳಿಸುವ ಪಿಗ್ಮೆಂಟ್‌ಗಳೇನಾದರೂ ಇದ್ದರೆ ಅದರ ಫಲವಾಗಿ ಹೊರಬರುವ ಬಣ್ಣ ’ಸಹಜ”ವಾಗಿರುತ್ತದೆ ಅಂದರೆ ಮೆರುಗಿಲ್ಲದ ಸಾದಾ ಹಸಿರು ಬಣ್ಣವೇ ಆಗಿರುತ್ತದೆ.    

ಸ್ಟ್ರಕ್ಚರಲ್ ಬಣ್ಣಗಳು
ಪಿಗ್ಮೆಂಟ್‌ಗಳು ಲಭ್ಯವಿಲ್ಲದಿದ್ದರೂ ಸಹ ಬೆಳಕಿನ (ಆಪ್ಟಿಕಲ್) ಪರಿಣಾಮಗಳಾದ ವಕ್ರೀಕರಣ (ರಿಫ್ರಾಕ್ಷನ್), ವಿವರ್ತನೆ (ಡಿಫ್ರಾಕ್ಷನ್) ಅಥವಾ ಇಂಟರ್‌ಫೆರೆನ್ಸ್‌ಗಳಿಂದಲೂ ಸಹ ಅದ್ಭುತ ಬಣ್ಣಗಳು ಹೊರಹೊಮ್ಮುತ್ತವೆ. ಸಾಬೂನಿನ ಗುಳ್ಳೆ ಮತ್ತು ಸಿ.ಡಿ.ಯ ಹೊಳೆಯುವ ಭಾಗದಲ್ಲಿ ಪ್ರತಿಫಲನಗೊಳ್ಳುವ ಬಣ್ಣಗಳು ಇದಕ್ಕೆ ಉದಾಹರಣೆಯಾಗಿದೆ. ಈ ಬಣ್ಣಗಳು ಬೆಳಕು ಮತ್ತು ಭೌತಿಕ ರಚನೆಗಳ ಪರಸ್ಪರ ಕ್ರಿಯೆಗಳನ್ನು ಅವಲಂಬಿಸಿರುವುದರಿಂದ ಇವುಗಳನ್ನು ಸ್ಟ್ರಕ್ಚರಲ್ ಬಣ್ಣಗಳು ಎನ್ನುತ್ತಾರೆ.

ಚಿಟ್ಟೆಗಳಲ್ಲಿ ಸ್ಕೇಲ್‌ಗಳ ಜೋಡಣೆ   ವಿನ್ಯಾಸವೇ ಸ್ಟ್ರಕ್ಚರಲ್ ಬಣ್ಣಗಳಿಗೆ ಕಾರಣವಾಗಿದೆ. ಸ್ಕೇಲ್‌ಗಳ ರಚನೆ ಮತ್ತು ವಿನ್ಯಾಸ ಈ ಲೇಖನದ ವ್ಯಾಪ್ತಿಯ ಹೊರಗಿರುವುದರಿಂದ ಸರಳವಾಗಿ ಹೇಳುವುದಾದರೆ, ಸ್ಕೇಲ್‌ಗಳು ಗಾಳಿ ಸಂದು( ಏರ್ ಗ್ಯಾಪ್)ಗಳಿಂದ ಕೂಡಿದ್ದು, ಅತ್ಯಂತ ಕ್ರಮಬದ್ಧವಾದ ಶೈಲಿಯಲ್ಲಿ ಪದರಗಳಲ್ಲಿ ಜೋಡಣೆಯಾಗಿರುತ್ತವೆ. ಈ ವಿನ್ಯಾಸದಲ್ಲಿ ಇಂಟರ್‌ಫೆರೆನ್ಸ್ ಸುಲಭವಾಗಿ ಕಾರ್ಯನಿರ್ವಹಿಸುತ್ತದೆ. ಬೆಳಕಿನ ತರಂಗಗಳು ಒಂದು ಪದರದ ಸ್ಕೇಲ್‌ಗಳಿಗೆ ತಗುಲಿದಾಗ, ಕೆಲವು ಬೆಳಕಿನ ತರಂಗಗಳು ಪ್ರತಿಫಲನಗೊಂಡು, ಉಳಿದ ತರಂಗಗಳು ಮುಂದಿನ ಪದರಗಳತ್ತ ಸಾಗುತ್ತವೆ. ಇದರಿಂದ ಪ್ರತಿಯೊಂದು ಪದರದ ಸ್ಕೇಲ್‌ಗಳೂ ಪ್ರತಿಫಲನಗೊಳ್ಳುತ್ತಾ ಹೋಗುತ್ತದೆ. ಇದರಿಂದ ಬೆಳಕು ಹಲವಾರು ಬಾರಿ ಪ್ರತಿಫಲನಗೊಳ್ಳುತ್ತದೆ. ಬೆಳಕಿನ ಈ ತರಂಗಗಳು ಯಾವುದೇ ಪ್ರಾವಸ್ಥೆ (ಫೇಸ್) ಯಲ್ಲಿರದಿದ್ದರೂ; ಸ್ಕೇಲ್ ಮತ್ತು ಏರ್ ಗ್ಯಾಪ್‌ಗಳು ಬೇರೆ ಬೇರೆ ವಕ್ರೀಕರಣ ಸೂಚಿ (ರಿಫ್ರಾಕ್ಟೀವ್ ಇಂಡೆಕ್ಸ್)ಗಳನ್ನು ಹೊಂದಿವೆ; ಇದು ಪ್ರತಿಫಲನವನ್ನು ಬಲವರ್ಧಿಸಬಲ್ಲ ’ಕನ್ಸ್ಟ್ರಕ್‌ಟೀವ್ ಇಂಟರ್‌ಫೆರೆನ್ಸ್’ ಗೆ ಕಾರಣವಾಗಿದೆ. ಇದರ ಒಟ್ಟಾರೆ ಪರಿಣಾಮವೇ ವರ್ಣವೈವಿಧ್ಯತೆ. ರೆಕ್ಕೆಗಳಿಗೆ ಬೆಳಕು ಯಾವ ಕೋನದಲ್ಲಿ ಹೊಡೆಯುತ್ತದೆಯೋ ಅದು ಬದಲಾದಾಗಲೆಲ್ಲ , ಕನ್ಸ್ಟ್ರಕ್‌ಟೀವ್ ಇಂಟರ್‌ಫೆರೆನ್ಸ್ ಬದಲಾವಣೆಯಾಗುತ್ತದೆ- ಇದು ಹಲವಾರು ಬಣ್ಣಗಳಿಗೆ ಕಾರಣವಾಗುತ್ತದೆ.

ಮುಕ್ತಾಯ
ಚಿಟ್ಟೆಗಳು ಕೇವಲ ನಿಮ್ಮ ವಿಜ್ಞಾನದ ತರಗತಿಗಳಿಗಷ್ಟೇ ಸೀಮಿತವಾಗಿರಬೇಕಿಲ್ಲ. ಅವು ನಿಮ್ಮ ಯಾವುದೇ ಭಾಷೆ ಅಥವಾ ಕಲಾ ತರಗತಿಗೂ ಸರಿ ಹೊಂದುತ್ತವೆ. ಈ ಪದ್ಯವನ್ನು ನಿಮ್ಮ ಚಿಟ್ಟೆಗಳ ತರಗತಿ ಮುಗಿದ ನಂತರ ಎಲ್ಲರೊಂದಿಗೆ ಹಂಚಿಕೊಳ್ಳಿ.

ಕಣ್ಮನ   ಸೆಳೆಯುವ ಬಣ್ಣದ ರೆಕ್ಕೆಯ
ಬಡಿಯುತ ಸಾಗಿವೆ ಚಿಟ್ಟೆಗಳು

ಕಿತ್ತಳೆ ಬಣ್ಣವೋ ಬೆಳ್ಳಿಯ ನೀಲವೋ
ಹೊಂಬಣ್ಣದ ಕಡು ಹಳದಿಯ ಮೆರುಗೋ
ತೇಲುತ ಬರುತಿವೆ ಗಾಳಿಯಲಿ
ಬೆಡಗಿನ  ಬಣ್ಣದ  ಚಿಟ್ಟೆಗಳು

ವರುಷದ ಕಾಡಲಿ ಹರುಷದ ಹೊಲದಲಿ
ಮೇಯುವ ಹುಲ್ಲಿನಕಾವಲಲಿ
ಬೆಟ್ಟದ ತುದಿಯಲಿ   ಮರುಧರೆ ಮರಳಲಿ
ಎಲ್ಲೆಡೆ ಮನೆಮಾಡಿ ಬೆಳೆಯುತಲಿ

ಹಿಮಋತು ಹಿಮತರೆ ಕಡು ಚಳಿಯೊಡನೆ
ಸಾಗುವವು ಹಾರುತ ಬೆಚ್ಚನೆ ತಾಣದೆಡೆ

ಮರು ವಸಂತಕೆ ಬೆಡಗಿನ ರೆಕ್ಕೆಯ
ಬಡಿಯುತ ಬರುವವು ತೌರಿನೆಡೆ
ಕಣ್ಮನ   ಸೆಳೆಯುವ ಬಣ್ಣದ ರೆಕ್ಕೆಯ
ಅಂದದ ಚಂದದ ಚಿಟ್ಟೆಗಳು

ಭಾಷಾಂತರ ಪರಿಷ್ಕರಣೆ ಮತ್ತು ಪದ್ಯದ ಅನುವಾದ :ಜೈಕುಮಾರ್ ಮರಿಯಪ್ಪ.

ಮೂಲ: ಗೀತಾ ಅಯ್ಯರ್,ಶಿಕ್ಷಣ ಮತ್ತು ಪರಿಸರ ಎರಡೂ ಕ್ಷೇತ್ರಗಳಲ್ಲಿ ಸ್ವತಂತ್ರ ಸಲಹೆಗಾರರಾಗಿ ಗೀತಾ ಅಯ್ಯರ್ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಶಿಕ್ಷಣ, ಪರಿಸರ ಮತ್ತು ಪ್ರಾಕೃತಿಕ ಚರಿತ್ರೆಗಳ ಬಗ್ಗೆ ಸಾಕಷ್ಟು ಲೇಖನ ಬರೆದಿದ್ದಾರೆ. ನೀವು ಅವರನ್ನು brownfishowl@yahoo.co.uk  ನಲ್ಲಿ ಸಂಪರ್ಕಿಸಬಹುದು.

 

 

19218 ನೊಂದಾಯಿತ ಬಳಕೆದಾರರು
7452 ಸಂಪನ್ಮೂಲಗಳು